ಯಾವುದು ಸರಿ ಯಾವುದು ತಪ್ಪು? ಸರಿಯಾದ ದಾರೀಲಿ ಹೋದ್ರೆ ಒಳ್ಳೇದಾಗುತ್ತೆ
ಬೈಬಲಲ್ಲಿ ಇರೋದನ್ನ ಪಾಲಿಸಿದ್ರಿಂದ ಇವತ್ತು ಲಕ್ಷಾಂತರ ಜನ್ರು ಖುಷಿಯಾಗಿದ್ದಾರೆ. ಅವ್ರಿಗೆ ಯಾವ 4 ವಿಷ್ಯದಲ್ಲಿ ಬೈಬಲ್ ಸಹಾಯ ಮಾಡ್ತು ಅಂತ ನೀವೇ ನೋಡಿ:
1. ಮದುವೆ
ಸಂಸಾರದಲ್ಲಿ ಗಂಡ-ಹೆಂಡತಿ ಖುಷಿಯಾಗಿ ಇರಬೇಕಂದ್ರೆ ಏನಿರಬೇಕು ಅಂತ ಜನ್ರ ಹತ್ರ ಕೇಳಿದ್ರೆ ಒಬ್ಬೊಬ್ರು ಒಂದೊಂದ್ ತರ ಹೇಳ್ತಾರೆ.
ಆದ್ರೆ ಬೈಬಲ್ ಹೇಳೋದು: “ಏನೇ ಆದ್ರೂ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನನ್ನ ಪ್ರೀತಿಸೋ ತರಾನೇ ತನ್ನ ಹೆಂಡತಿಯನ್ನ ಪ್ರೀತಿಸಬೇಕು. ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವ ಕೊಡಬೇಕು.”—ಎಫೆಸ 5:33.
ಹಾಗಂದ್ರೆ ಏನು? ಮದುವೆ ಅನ್ನೋ ಬಂಧವನ್ನ ದೇವರೇ ಮಾಡಿರೋದ್ರಿಂದ ಗಂಡ-ಹೆಂಡತಿ ಖುಷಿಯಾಗಿರೋಕೆ ಏನು ಬೇಕು ಅಂತ ದೇವ್ರಿಗೆ ಚೆನ್ನಾಗಿ ಗೊತ್ತು. (ಮಾರ್ಕ 10:6-9) ಹಾಗಾಗಿ ಅವರು ದೇವರ ಮಾತನ್ನ ಕೇಳಬೇಕು. ಗಂಡ ಬರೀ ತನ್ನ ಬಗ್ಗೆನೇ ಯೋಚ್ನೆ ಮಾಡದೇ ತನ್ನ ಹೆಂಡತಿನ ಖುಷಿಪಡಿಸೋಕೆ ಏನು ಮಾಡಬೇಕು ಅಂತ ಯೋಚ್ನೆ ಮಾಡ್ಬೇಕು. ಹೆಂಡತಿನೂ ತನ್ನ ಗಂಡನ ಬಗ್ಗೆ ಅದೇ ತರ ಯೋಚ್ನೆ ಮಾಡ್ಬೇಕು. ಹೆಂಡತಿನ ಪ್ರೀತಿಸೋ ಗಂಡ ಅವಳನ್ನ ಚೆನ್ನಾಗಿ ನೋಡ್ಕೊಬೇಕು, ಅವಳ ಜೊತೆ ಮೃದುವಾಗಿ ನಡ್ಕೊಬೇಕು. ಹೆಂಡತಿ ಗಂಡನಿಗೆ ಗೌರವ ಕೊಡಬೇಕು. ಅದನ್ನ ಅವಳು ಮಾತಲ್ಲಿ, ನಡತೆಯಲ್ಲಿ ತೋರಿಸಬೇಕು.
ಇದನ್ನ ಪಾಲಿಸಿದವರು ಏನು ಹೇಳ್ತಾರೆ? ವಿಯೆಟ್ನಾಂನಲ್ಲಿರೋ ಜಾನ್a ಮತ್ತು ಲೈಲಾ ಅವ್ರಿಗೆ ‘ನಾವಿಬ್ರು ಯಾಕಾದ್ರೂ ಮದ್ವೆ ಆದ್ವೋ’ ಅಂತ ಅನಿಸಿಬಿಡ್ತು. ಅವ್ರ ಸಂಸಾರದಲ್ಲಿ ಖುಷಿನೇ ಇರ್ಲಿಲ್ಲ. ಜಾನ್ ತನ್ನ ಹೆಂಡತಿ ಜೊತೆ ತುಂಬ ಒರಟಾಗಿ ನಡ್ಕೊತಿದ್ರು. “ನಾನು ಎಷ್ಟೋ ಸಲ ಯಾರಿದ್ದಾರೆ, ಯಾರಿಲ್ಲ ಅನ್ನೋದನ್ನೂ ನೋಡದೇ ಏನೇನೋ ಹೇಳಿ ನನ್ನ ಹೆಂಡತಿ ಮನಸ್ಸನ್ನ ನೋಯಿಸಿಬಿಟ್ಟೆ” ಅಂತ ಜಾನ್ ಹೇಳ್ತಾರೆ. ಇದ್ರಿಂದ ಲೈಲಾಗೆ ಎಷ್ಟು ಬೇಜಾರಾಯ್ತಂದ್ರೆ ಡಿವೋರ್ಸ್ ತಗೊಬೇಕು ಅಂತ ಅನಿಸ್ತು. “ನನ್ನ ಗಂಡನ ಮೇಲಿದ್ದ ಗೌರವನೆಲ್ಲಾ ನಾನು ಕಳ್ಕೊಂಬಿಟ್ಟೆ” ಅಂತ ಲೈಲಾ ಹೇಳ್ತಾರೆ.
ಆದ್ರೆ ಆಮೇಲೆ ಜಾನ್ ಮತ್ತು ಲೈಲಾ ಬೈಬಲ್ ಕಲಿಯೋಕೆ ಶುರುಮಾಡಿದ್ರು. ಜಾನ್ ಎಫೆಸ 5:33ರಲ್ಲಿರೋ ಬುದ್ಧಿಮಾತನ್ನ ಪಾಲಿಸಿದ್ರು. “ನಾನು ನನ್ನ ಹೆಂಡತಿ ಜೊತೆ ಮೃದುವಾಗಿ ನಡ್ಕೊಬೇಕು, ಪ್ರೀತಿ ತೋರಿಸಬೇಕು, ಅವಳನ್ನ ಚೆನ್ನಾಗಿ ನೋಡ್ಕೊಬೇಕು ಅಂತ ಈ ವಚನ ಓದಿದ ಮೇಲೆ ಗೊತ್ತಾಯ್ತು. ಈಗ ಅವಳು ನನ್ನನ್ನ ತುಂಬ ಪ್ರೀತಿಸ್ತಾಳೆ, ನನಗೆ ಗೌರವ ಕೊಡ್ತಾಳೆ” ಅಂತ ಜಾನ್ ಹೇಳ್ತಾರೆ. “ನಾನೂ ಎಫೆಸ 5:33ರಲ್ಲಿ ಹೇಳಿರೋ ತರ ನನ್ನ ಗಂಡನಿಗೆ ಗೌರವ ಕೊಡೋಕೆ ಶುರುಮಾಡಿದೆ. ಈಗ ಅವರು ನನ್ನನ್ನ ತುಂಬ ಪ್ರೀತಿಸ್ತಾರೆ, ನನ್ನನ್ನ ಚೆನ್ನಾಗಿ ನೋಡ್ಕೊತಾರೆ. ನಾವಿಬ್ರು ಈಗ ಖುಷಿಖುಷಿಯಾಗಿ ಇದ್ದೀವಿ” ಅಂತ ಲೈಲಾ ಹೇಳ್ತಾರೆ.
ಸಂಸಾರ ಆನಂದ ಸಾಗರ ಆಗಬೇಕಾದ್ರೆ “ಯಶಸ್ವಿ ಕುಟುಂಬಗಳ 12 ಸೂತ್ರಗಳು” ಅನ್ನೋ 2018ರ ನಂ. 2 ಎಚ್ಚರ! ಪತ್ರಿಕೆಯನ್ನ ನೋಡಿ. ಇದು jw.orgನಲ್ಲಿದೆ.
2. ಜನ್ರ ಜೊತೆ ನಡ್ಕೊಳ್ಳೋ ರೀತಿ
ದೇಶ, ಜಾತಿ, ಧರ್ಮ, ಬಣ್ಣ ಅಂತ ಇವತ್ತು ಜನ ಭೇದಭಾವ ಮಾಡ್ತಾರೆ. ಸಲಿಂಗಿಗಳನ್ನ ಕೀಳಾಗಿ ನೋಡ್ತಾರೆ.
ಆದ್ರೆ ಬೈಬಲ್ ಹೇಳೋದು: “ಎಲ್ಲ ತರದ ಜನ್ರನ್ನ ಗೌರವಿಸಿ.”—1 ಪೇತ್ರ 2:17.
ಹಾಗಂದ್ರೆ ಏನು? ಇವನು ಈ ಜಾತಿಯವನು, ಇವನು ಈ ದೇಶದವನು, ಇವನು ಬಡವ, ಇವನು ಶ್ರೀಮಂತ ಅಂತ ಭೇದಭಾವ ಮಾಡೋದು, ಸಲಿಂಗಿಗಳನ್ನ ಕೀಳಾಗಿ ನೋಡೋದು ದೇವ್ರಿಗೆ ಒಂಚೂರೂ ಇಷ್ಟ ಇಲ್ಲ. ಅದಕ್ಕೇ ನಾವು ಎಲ್ಲಾ ತರದ ಜನ್ರನ್ನೂ ಗೌರವಿಸಬೇಕು ಅಂತ ಬೈಬಲ್ ಹೇಳುತ್ತೆ. (ಅಪೊಸ್ತಲರ ಕಾರ್ಯ 10:34) ಹಾಗಾಗಿ ಕೆಲವರು ನಂಬೋ ವಿಷ್ಯಗಳು, ಅವರು ನಡ್ಕೊಳ್ಳೋ ರೀತಿ ನಮಗೆ ಇಷ್ಟ ಆಗಿಲ್ಲಾಂದ್ರೂ ನಾವು ಅವ್ರ ಜೊತೆ ಪ್ರೀತಿ, ಗೌರವದಿಂದ ನಡ್ಕೊತೀವಿ.—ಮತ್ತಾಯ 7:12.
ಇದನ್ನ ಪಾಲಿಸಿದವರು ಏನು ಹೇಳ್ತಾರೆ? ಡ್ಯಾನಿಯೆಲ್ ಅವ್ರ ದೇಶದಲ್ಲಿ ಏಷ್ಯಾದವ್ರನ್ನ ಟೆರರಿಸ್ಟ್ಗಳ ತರ ನೋಡ್ತಿದ್ರು. ಹಾಗಾಗಿ ಡ್ಯಾನಿಯೆಲ್ಗೆ ಏಷ್ಯಾದವ್ರನ್ನ ಕಂಡ್ರೆ ಆಗ್ತಿರಲಿಲ್ಲ. ಎಲ್ರ ಮುಂದೆ ಅವಮಾನ ಮಾಡಿಬಿಡ್ತಿದ್ರು. “ನಾನು ಇದನ್ನ ದೇಶಪ್ರೇಮ ಅಂದ್ಕೊಂಡಿದ್ದೆ. ನಾನು ಮಾಡ್ತಿರೋದು ತಪ್ಪು ಅಂತ ನನ್ನ ಮನಸ್ಸು ಒಂದ್ಸಲನೂ ಹೇಳಲಿಲ್ಲ” ಅಂತ ಡ್ಯಾನಿಯೆಲ್ ಹೇಳ್ತಾರೆ.
ಆದ್ರೆ ಆಮೇಲೆ ಡ್ಯಾನಿಯೆಲ್ ಬೈಬಲ್ ಕಲಿಯೋಕೆ ಶುರುಮಾಡಿದ್ರು. “ಬೈಬಲ್ ನನ್ನ ಕಣ್ಣು ತೆರೆಸ್ತು. ನಾನು ಇಷ್ಟು ದಿನ ಮಾಡ್ತಾ ಇದ್ದಿದ್ದೆಲ್ಲ ತಪ್ಪು ಅಂತ ಮನವರಿಕೆ ಆಯ್ತು. ದೇವರೇ ಯಾರಿಗೂ ಭೇದಭಾವ ಮಾಡಲ್ಲ ಅಂದ್ಮೇಲೆ ನಾನೂ ಮಾಡಬಾರದು ಅಂತ ತಿಳ್ಕೊಂಡೆ. ಈಗ ನನಗೆ ಯಾರೇ ಸಿಕ್ಕಿದ್ರೂ ಅವ್ರ ಜೊತೆ ನಾನು ಪ್ರೀತಿಯಿಂದ ಮಾತಾಡ್ತೀನಿ. ಎಲ್ಲಾ ತರದ ಜನ್ರ ಜೊತೆನೂ ಬೆರೀತೀನಿ. ಈಗ ನನಗೆ ಲೋಕದ ಮೂಲೆಮೂಲೆಯಲ್ಲೂ ಫ್ರೆಂಡ್ಸ್ ಇದ್ದಾರೆ” ಅಂತ ಡ್ಯಾನಿಯೆಲ್ ಹೇಳ್ತಾರೆ.
jw.orgನಲ್ಲಿ “ಭೇದಭಾವ ಕಿತ್ತೆಸೆಯಲು ಸಾಧ್ಯನಾ?” ಅನ್ನೋ 2020ರ ನಂ.3 ಎಚ್ಚರ! ಪತ್ರಿಕೆಯನ್ನ ಓದಿ.
3. ದುಡ್ಡು
ಜೀವನದಲ್ಲಿ ಖುಷಿಯಾಗಿ ಇರೋಕೆ, ನಮ್ಮ ಭವಿಷ್ಯ ಚೆನ್ನಾಗಿರೋಕೆ ದುಡ್ಡು ಬೇಕೇ ಬೇಕು ಅಂತ ಅಂದ್ಕೊಂಡು ತುಂಬ ಜನ ಅದ್ರ ಹಿಂದೆ ಹೋಗ್ತಿದ್ದಾರೆ.
ಆದ್ರೆ ಬೈಬಲ್ ಹೇಳೋದು: “ಹಣ ಸಂರಕ್ಷಣೆ ಕೊಡೋ ತರ ವಿವೇಕನೂ ಸಂರಕ್ಷಣೆ ಕೊಡುತ್ತೆ. ಆದ್ರೆ ಹಣಕ್ಕಿಂತ ಜ್ಞಾನ, ವಿವೇಕ ಶ್ರೇಷ್ಠ. ಹೇಗಂದ್ರೆ ಅವು ಯಾರಲ್ಲಿ ಇರುತ್ತೋ ಅವ್ರ ಜೀವ ಉಳಿಯುತ್ತೆ.”—ಪ್ರಸಂಗಿ 7:12.
ಹಾಗಂದ್ರೆ ಏನು? ನಮಗೆ ದುಡ್ಡು ಬೇಕು. ಆದ್ರೆ ಅದ್ರಿಂದ ಸುಖ, ನೆಮ್ಮದಿನ ಕೊಂಡ್ಕೊಳ್ಳೋಕೆ ಆಗಲ್ಲ. (ಜ್ಞಾನೋಕ್ತಿ 18:11; 23:4, 5) ನಾವು ನಿಜವಾಗ್ಲೂ ಖುಷಿಯಾಗಿ ಇರಬೇಕಂದ್ರೆ, ಮುಂದೆ ನಮ್ಮ ಭವಿಷ್ಯ ಚೆನ್ನಾಗಿರಬೇಕಂದ್ರೆ ಬೈಬಲಲ್ಲಿ ದೇವರು ಕೊಟ್ಟಿರೋ ವಿವೇಕದ ಮಾತುಗಳನ್ನ ಪಾಲಿಸಬೇಕು.—1 ತಿಮೊತಿ 6:17-19.
ಇದನ್ನ ಪಾಲಿಸಿದವರು ಏನು ಹೇಳ್ತಾರೆ? ಇಂಡೋನೇಷ್ಯಾದಲ್ಲಿರೋ ಕಾರ್ಡೋ ಅವ್ರ ಅನುಭವ ನೋಡಿ. ಅವರು ದುಡ್ಡು ಮಾಡಬೇಕು ಅಂತ ಹಗಲೂ ರಾತ್ರಿ ಅದ್ರಲ್ಲೇ ಮುಳುಗಿರುತ್ತಿದ್ರು. ಅವರು ಹೇಳೋದು: “ಜನ ಸಾಮಾನ್ಯವಾಗಿ ಹೆಂಗಿರಬೇಕು ಅಂತ ಕನಸು ಕಾಣ್ತಾರೋ ನಾನು ಅದನ್ನೆಲ್ಲ ಅನುಭವಿಸಿದೆ. ನಾನು ನೋಡಬೇಕು ಅಂದ್ಕೊಂಡಿದ್ದ ಜಾಗಗಳಿಗೆಲ್ಲ ಹೋದೆ, ತುಂಬ ಬೆಲೆಬಾಳೋ ವಸ್ತುಗಳನ್ನ, ಕಾರ್ಗಳನ್ನ, ಮನೆಗಳನ್ನ ಕೊಂಡ್ಕೊಂಡೆ.” ಆದ್ರೆ ಇದ್ಯಾವುದೂ ಕೊನೇ ತನಕ ಉಳೀಲಿಲ್ಲ. “ನನಗ್ಯಾರೋ ಮೋಸ ಮಾಡಿ ದುಡ್ಡನ್ನೆಲ್ಲ ದೋಚ್ಕೊಂಡು ಹೋಗಿಬಿಟ್ರು. ಕಣ್ಮುಚ್ಚಿ ತೆಗೆಯೋಷ್ಟರಲ್ಲಿ ಪಾಪರ್ ಆಗ್ಬಿಟ್ಟೆ. ನಾನು ದುಡ್ಡು ದುಡ್ಡು ಅಂತ ತುಂಬ ವರ್ಷ ಕಷ್ಟಪಟ್ಟೆ. ಆದ್ರೆ ಅದನ್ನೆಲ್ಲ ಕಳ್ಕೊಂಡಾಗ ನಾನ್ ಏನೇನೂ ಅಲ್ಲ, ವೇಸ್ಟು ಅಂತ ಅನಿಸಿಬಿಡ್ತು, ತುಂಬ ಬೇಜಾರಾಯ್ತು” ಅಂತ ಕಾರ್ಡೋ ಹೇಳ್ತಾರೆ.
ಆದ್ರೆ ಆಮೇಲೆ ಕಾರ್ಡೋಗೆ ಬೈಬಲ್ ದುಡ್ಡಿನ ಬಗ್ಗೆ ಏನು ಹೇಳುತ್ತೆ ಅಂತ ಗೊತ್ತಾದಾಗ ಸಂತೋಷ ಆಯ್ತು. ಅವ್ರೀಗ ದುಡ್ಡಿನ ಹಿಂದೆ ಹೋಗದೇ ಹಾಸಿಗೆ ಇದ್ದಷ್ಟು ಕಾಲು ಚಾಚಿ, ಇರೋದ್ರಲ್ಲೇ ತೃಪ್ತಿಯಾಗಿದ್ದಾರೆ. “ನಾನೀಗ ನಿಜವಾಗ್ಲೂ ಶ್ರೀಮಂತ ಆಗಿದ್ದೀನಿ. ಯಾಕಂದ್ರೆ ನನ್ನ ಜೊತೆ ದೇವ್ರಿದ್ದಾನೆ, ಈಗ ನಾನು ತುಂಬ ಖುಷಿಯಾಗಿ ಇದ್ದೀನಿ, ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ” ಅಂತ ಕಾರ್ಡೋ ಹೇಳ್ತಾರೆ.
2021ರ ನಂ. 3 ಕಾವಲಿನಬುರುಜುವಿನಲ್ಲಿ “ಶಿಕ್ಷಣ ಮತ್ತು ಹಣ ಸುಭದ್ರ ಭವಿಷ್ಯ ಕೊಡುತ್ತಾ?” ಅನ್ನೋ ಲೇಖನ ನೋಡಿ. ಇದು jw.orgನಲ್ಲಿದೆ.
4. ಸೆಕ್ಸ್
ಈ ವಿಷ್ಯದಲ್ಲಿ ಯಾವುದು ಸರಿ ಯಾವುದು ತಪ್ಪು ಅಂತ ಒಬ್ಬೊಬ್ರು ಒಂದೊಂದ್ ತರ ಹೇಳ್ತಾರೆ.
ಆದ್ರೆ ಬೈಬಲ್ ಹೇಳೋದು: “ಲೈಂಗಿಕ ಅನೈತಿಕತೆಯಿಂದ ದೂರ ಇರಬೇಕು ಅನ್ನೋದೇ ದೇವರ ಇಷ್ಟ. ಎಲ್ರಿಗೂ ತಮ್ಮ ದೇಹವನ್ನ ಹತೋಟಿಯಲ್ಲಿ ಇಟ್ಕೊಳ್ಳೋದು ಹೇಗೆ ಅಂತ ಗೊತ್ತಿರಬೇಕು. ಆಗ ದೇಹ ಪವಿತ್ರವಾಗಿರುತ್ತೆ, ದೇವರ ಮೆಚ್ಚಿಗೆ ಸಿಗುತ್ತೆ. ದೇವರ ಬಗ್ಗೆ ಗೊತ್ತಿಲ್ಲದ ಲೋಕದ ಜನ್ರಲ್ಲಿ ಇರೋ ಹಾಗೆ ಹತೋಟಿಯಿಲ್ಲದ, ತೃಪ್ತಿನೇ ಇಲ್ಲದ ಕಾಮದಾಸೆ ನಿಮ್ಮಲ್ಲಿ ಇರಬಾರದು.”—1 ಥೆಸಲೊನೀಕ 4:3-5.
ಹಾಗಂದ್ರೆ ಏನು? ಲೈಂಗಿಕ ಸಂಬಂಧದ ವಿಷ್ಯದಲ್ಲಿ ಯಾವುದು ಸರಿ ಯಾವುದು ತಪ್ಪು ಅಂತ ಬೈಬಲ್ ಸ್ಪಷ್ಟವಾಗಿ ಹೇಳುತ್ತೆ. “ಲೈಂಗಿಕ ಅನೈತಿಕತೆ” ಅಂದ್ರೆ ಅದ್ರಲ್ಲಿ ವ್ಯಭಿಚಾರ, ವೇಶ್ಯಾವಾಟಿಕೆ, ಮದುವೆಗೆ ಮುಂಚೆನೇ ಸೆಕ್ಸ್ ಮಾಡೋದು, ಗಂಡು-ಗಂಡಿನ ಜೊತೆ ಅಥವಾ ಹೆಣ್ಣು-ಹೆಣ್ಣಿನ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋದು, ಮನುಷ್ಯರು ಪ್ರಾಣಿಗಳ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋದು ಸೇರಿದೆ. (1 ಕೊರಿಂಥ 6:9, 10) ಲೈಂಗಿಕ ಸಂಬಂಧ ಅನ್ನೋದು ದೇವರು ಕೊಟ್ಟಿರೋ ಗಿಫ್ಟ್. ಅದು ಮದುವೆ ಆಗಿರೋ ಗಂಡು-ಹೆಣ್ಣಿನ ಮಧ್ಯ ಮಾತ್ರ ಇರಬೇಕು ಅಂತ ದೇವರು ಇಷ್ಟಪಡ್ತಾನೆ.—ಜ್ಞಾನೋಕ್ತಿ 5:18, 19.
ಇದನ್ನ ಪಾಲಿಸಿದವರು ಏನು ಹೇಳ್ತಾರೆ? ಆಸ್ಟ್ರೇಲಿಯದಲ್ಲಿರೋ ಕ್ರಿಸ್ಟಿ ಅನ್ನೋ ಸಹೋದರಿ “ನಾನು ಮದುವೆಗೆ ಮುಂಚೆನೇ ನನ್ನ ಬಾಯ್ಫ್ರೆಂಡ್ ಜೊತೆ ಸೆಕ್ಸ್ ಮಾಡಿದ್ರೆ ಅವನು ನನ್ನ ಇನ್ನೂ ಇಷ್ಟಪಡ್ತಾನೆ, ನನ್ನನ್ನ ಚೆನ್ನಾಗಿ ನೋಡ್ಕೊಳ್ತಾನೆ ಅಂತ ಅಂದ್ಕೊಂಡಿದ್ದೆ. ಆದ್ರೆ ನಾನು ಅಂದ್ಕೊಂಡ ಹಾಗೆ ಆಗಲಿಲ್ಲ. ಅವನಿಗೆ ನನ್ನ ಮೇಲೆ ಪ್ರೀತಿ ಕಮ್ಮಿ ಆಗೋಯ್ತು. ನನ್ನ ಜೀವನ ಇಲ್ಲಿಗೇ ಮುಗಿತು ಅಂದ್ಕೊಂಡೆ” ಅಂತ ಹೇಳ್ತಾರೆ.
ಆದ್ರೆ ಆಮೇಲೆ ಕ್ರಿಸ್ಟಿ ಸೆಕ್ಸ್ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳ್ಕೊಂಡ್ರು. ಬೈಬಲಲ್ಲಿರೋ ಬುದ್ಧಿಮಾತನ್ನ ಪಾಲಿಸಿದ್ರು. ಆಗ ಅವ್ರಿಗೆ ಹೇಗನಿಸ್ತು? “ನಾವು ತಪ್ಪು ದಾರಿ ಹಿಡಿದು ಮುಂದೆ ಕಷ್ಟ ಅನುಭವಿಸಬಾರದು ಅಂತಾನೇ ದೇವರು ಸೆಕ್ಸ್ ಬಗ್ಗೆ ನಿಯಮಗಳನ್ನ ಕೊಟ್ಟಿದ್ದಾನೆ ಅಂತ ನಾನು ಅರ್ಥ ಮಾಡ್ಕೊಂಡೆ. ಹಾಗಾಗಿ ದೇವರು ಹೇಳೋ ತರಾನೇ ನಡ್ಕೊಂಡೆ. ಈಗ ನನಗೆ ಮದುವೆ ಆಗಿದೆ, ಖುಷಿಯಾಗಿ ಇದ್ದೀನಿ, ನನ್ನ ಗಂಡನೂ ನನ್ನನ್ನ ತುಂಬ ಪ್ರೀತಿಸ್ತಾರೆ. ಬೈಬಲ್ ಹೇಳೋ ಮಾತನ್ನ ನಾನು ಕೇಳದೇ ಇದ್ದಿದ್ರೆ ಅದೆಷ್ಟು ತೊಂದ್ರೆಯಲ್ಲಿ ಸಿಕ್ಕಾಕೊಳ್ತಿದ್ನೋ ಏನೋ!” ಅಂತ ಕ್ರಿಸ್ಟಿ ಹೇಳ್ತಾರೆ.
ಇದ್ರ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಳ್ಳೋಕೆ jw.orgನಲ್ಲಿ “ಮದ್ವೆ ಮಾಡ್ಕೊಳ್ದೆ ಒಟ್ಟಿಗೆ ಜೀವನ ಮಾಡೋದರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ಓದಿ.
ಯಾವುದು ಸರಿ ಯಾವುದು ತಪ್ಪು ಅಂತ ತಿಳ್ಕೊಳ್ಳೋಕೆ ನಮ್ಮನ್ನ ಸೃಷ್ಟಿ ಮಾಡಿರೋ ದೇವರು ಸಹಾಯ ಮಾಡ್ತಾನೆ. ಆತನು ಕೊಡೋ ನಿಯಮಗಳನ್ನ ಪಾಲಿಸೋಕೆ ಈಗ ಸ್ವಲ್ಪ ಕಷ್ಟ ಆಗಬಹುದು. ಆದ್ರೆ ಅದನ್ನ ಪಾಲಿಸಿದ್ರೆ ಜೀವನಪೂರ್ತಿ ಖುಷಿಯಾಗಿ ಇರ್ತೀವಿ.
a ಕೆಲವ್ರ ಹೆಸ್ರು ಬದಲಾಗಿದೆ.