ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅಧ್ಯಯನ ರೂಢಿ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ತರಬೇತಿ ಕೊಡಿ
ಏಕೆ ಪ್ರಾಮುಖ್ಯ: ಬೈಬಲ್ ವಿದ್ಯಾರ್ಥಿಗಳು ಆಧ್ಯಾತ್ಮಿಕವಾಗಿ ಪ್ರೌಢರಾಗಬೇಕೆಂದರೆ, ದೇವರ ವಾಕ್ಯದ ಪ್ರಾಥಮಿಕ ಬೋಧನೆಗಳನ್ನು ಮಾತ್ರ ತಿಳಿದುಕೊಂಡರೆ ಸಾಲದು. ಆಳವಾದ ವಿಷಯಗಳನ್ನೂ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. (ಇಬ್ರಿ. 5:12–6:1) ಇದಕ್ಕಾಗಿ ತುಂಬ ಪ್ರಯತ್ನ ಅಗತ್ಯ. ಓದುತ್ತಿರುವ ಹೊಸ ವಿಷಯವನ್ನು ಈಗಾಗಲೇ ತಿಳಿದಿರುವ ವಿಷಯಕ್ಕೆ ಹೋಲಿಸಲು, ಆ ವಿಷಯದಿಂದ ವೈಯಕ್ತಿಕವಾಗಿ ತಮಗೇನು ಪ್ರಯೋಜನ ಇದೆ ಎಂದು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಕಲಿಯಬೇಕು. (ಜ್ಞಾನೋ. 2:1-6) ಅವರು ಸಂಶೋಧನೆ ಮಾಡಲು ಕಲಿತರೆ ಬೇರೆಯವರು ಕೇಳುವ ಬೈಬಲ್ ಪ್ರಶ್ನೆಗಳಿಗೆ ನಮ್ಮ ಪ್ರಕಾಶನಗಳನ್ನು ಬಳಸಿ ಉತ್ತರ ಕೊಡಲು ಸಾಧ್ಯವಾಗುತ್ತದೆ. ಕಲಿತ ವಿಷಯಗಳನ್ನು ತಮ್ಮಿಂದಾದಷ್ಟು ಅನ್ವಯಿಸಿಕೊಳ್ಳಲು ಪ್ರಯತ್ನಿಸಿದರೆ ಯಾವುದೇ ಕಷ್ಟ-ಸಂಕಟಗಳು ಬಂದರೂ ಅವುಗಳನ್ನು ಎದುರಿಸಲು ಅವರು ತಯಾರಾಗುತ್ತಾರೆ.—ಲೂಕ 6:47, 48.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ಉಪಶೀರ್ಷಿಕೆ ಅಥವಾ ಒಂದು ಅಧ್ಯಾಯವನ್ನು ಮುಗಿಸಿದ ನಂತರ ನಿಮ್ಮ ವಿದ್ಯಾರ್ಥಿ ಕಲಿತ ವಿಷಯಗಳನ್ನು ಕೆಲವೊಂದು ವಾಕ್ಯಗಳಲ್ಲಿ ಸಾರಾಂಶಿಸುವಂತೆ ಹೇಳಿ. ನಿಮಗೆ ಬೈಬಲ್ ಅಧ್ಯಯನ ಇರದಿದ್ದಲ್ಲಿ ನೀವೇ ಬೈಬಲಿನ ಒಂದು ಭಾಗ ಅಥವಾ ಕಾವಲಿನಬುರುಜು ಪತ್ರಿಕೆಯ ಒಂದು ಪ್ಯಾರಗ್ರಾಫನ್ನು ಓದಿ, ಅದನ್ನು ಸಾರಾಂಶಿಸುವ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡಿದರೆ ಓದಿದ್ದನ್ನು ಗ್ರಹಿಸುವ ಸಾಮರ್ಥ್ಯ ಹೆಚ್ಚುತ್ತದೆ.