ಬೋಧನಾ ಸಾಮರ್ಥ್ಯವನ್ನು ಉತ್ತಮಗೊಳಿಸಿ—ಮುಖ್ಯ ಅಂಶಗಳಿಗೆ ಒತ್ತು ಕೊಡುವ ಮೂಲಕ
1 “ನೀವು ಬೋಧಕರಾಗಿ” ಎಂದು ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದನು. (ಇಬ್ರಿ. 5:12) ಈ ಮಾತುಗಳು ನಮಗೂ ಅನ್ವಯಿಸುತ್ತವೆ. ಏಕೆಂದರೆ ಯೇಸು ಕೊಟ್ಟ ಅತಿ ದೊಡ್ಡ ನೇಮಕ ಅಂದರೆ ಬೋಧಿಸುವ ನೇಮಕವು ಮುಕ್ತಾಯ ಹಂತಕ್ಕೆ ತಲುಪಲಿರುವ ಸಮಯದಲ್ಲಿ ನಾವಿದ್ದೇವೆ. ತುಂಬ ಪರಿಣಾಮಕಾರಿಯಾಗಿ ಬೋಧಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? ನಾವು ಓದುವ ಇಲ್ಲವೆ ಬೋಧಿಸುವ ಇಡೀ ಮಾಹಿತಿಯ ಮುಖ್ಯ ಸಾರ ಏನೆಂದು ಗ್ರಹಿಸುವುದೇ. ಹಾಗಾಗಿ ಇಡೀ ಪ್ರಕಾಶನ ಅಥವಾ ಇಡೀ ಅಧ್ಯಾಯ ಅಥವಾ ಇಡೀ ಪ್ಯಾರದ ಮುಖ್ಯ ಅಂಶ ಏನೆಂದು ತಿಳಿಯಬೇಕು.
2 ಒಂದು ಪುಸ್ತಕದ ಶೀರ್ಷಿಕೆಯು ಆ ಇಡೀ ಪುಸ್ತಕದಲ್ಲಿರುವ ಮುಖ್ಯ ವಿಷಯ ಏನೆಂದು ಹೇಳುತ್ತದೆ. ಆದ್ದರಿಂದ ಪ್ರತಿ ಅಧ್ಯಾಯದ ಶೀರ್ಷಿಕೆಯು ಆ ಪುಸ್ತಕದ ಮುಖ್ಯ ಶೀರ್ಷಿಕೆಗೆ ಹೇಗೆ ಸಂಬಂಧಿಸಿದೆ ಎಂದು ಗ್ರಹಿಸುವಂತೆ ವಿದ್ಯಾರ್ಥಿಗೆ ಸಹಾಯ ಮಾಡಬೇಕು. ಸಾಮಾನ್ಯವಾಗಿ ಒಂದು ಅಧ್ಯಾಯದಲ್ಲಿ ಚರ್ಚಿಸಿರುವ ವಿಷಯವು ಪುಸ್ತಕದ ಮುಖ್ಯ ವಿಷಯಕ್ಕೆ ಸಂಬಂಧಿಸಿರುತ್ತದೆ. ಉದಾಹರಣೆಗೆ, ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿರುವ “ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು” ಮತ್ತು “ನಿಮ್ಮ ಕುಟುಂಬ ಜೀವನವನ್ನು ಸಂತೋಷವುಳ್ಳದ್ದಾಗಿ ಮಾಡುವ ವಿಧ” ಎಂಬ ಅಧ್ಯಾಯಗಳು ಆ ನಿರ್ದಿಷ್ಟ ವಿಷಯಗಳ ಬಗ್ಗೆ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆಂದು ವಿವರಿಸುತ್ತವೆ.
3 ಅದೇ ರೀತಿ ಒಂದು ಅಧ್ಯಾಯದಲ್ಲಿರುವ ಎಲ್ಲ ಉಪಶೀರ್ಷಿಕೆಗಳು ಆ ಇಡೀ ಅಧ್ಯಾಯದ ಮುಖ್ಯ ಅಂಶಗಳನ್ನು ಎತ್ತಿತೋರಿಸುತ್ತವೆ. ಮಾತ್ರವಲ್ಲ ಪ್ರತಿಯೊಂದು ಪ್ಯಾರಗಳಿಗೂ ಅಧ್ಯಾಯದ ಶೀರ್ಷಿಕೆಗೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಇರುತ್ತದೆ. ಆದ್ದರಿಂದ ಪ್ರತಿ ಪ್ಯಾರದಲ್ಲಿ ಆ ಅಧ್ಯಾಯದ ಮುಖ್ಯ ವಿಷಯಕ್ಕೆ ನಿಕಟವಾಗಿ ಸಂಬಂಧಿಸಿದ ನಿರ್ದಿಷ್ಟ ಅಂಶವನ್ನು ಕಂಡುಹಿಡಿಯಲು ಕಲಿತುಕೊಳ್ಳಿ. ಆ ಮುಖ್ಯ ಅಂಶವನ್ನು ನಿಮ್ಮ ವಿದ್ಯಾರ್ಥಿಯ ಮನಸ್ಸಿನಲ್ಲಿ ಅಚ್ಚೊತ್ತಿ.
4 ನೀವು ಚರ್ಚಿಸುತ್ತಿರುವ ಪ್ರಕಾಶನದಲ್ಲಿ ಪ್ಯಾರಗಳಿಗೆ ಪ್ರಶ್ನೆಗಳಿರುವುದಾದರೆ ಏನು ಮಾಡಬಹುದು? ಉತ್ತರವು ಕೆಲವೇ ಪದಗಳಲ್ಲಿ, ಕೆಲವೊಮ್ಮೆ ಒಂದೇ ಪದದಲ್ಲಿ ಇರುತ್ತದೆ. ಅದನ್ನು ಗುರುತಿಸಿ ಅಡಿಗೆರೆ ಹಾಕುವುದನ್ನು ನಿಮ್ಮ ವಿದ್ಯಾರ್ಥಿಗೆ ಕಲಿಸಿಕೊಡಿ. ಇದರಿಂದ ತುಂಬ ಪ್ರಯೋಜನಗಳಿವೆ. ವಿದ್ಯಾರ್ಥಿಯು ಉತ್ತರವನ್ನು ತಕ್ಷಣ ಗುರುತಿಸಲು ಆಗುತ್ತದೆ. ಹೆಚ್ಚಿನ ವಾಕ್ಯಗಳನ್ನು ಪುನಃ ಓದುವ ಅಗತ್ಯವಿರುವುದಿಲ್ಲ. ಸ್ವಂತ ಮಾತಿನಲ್ಲಿ ಉತ್ತರ ಹೇಳುವಂತೆ ವಿದ್ಯಾರ್ಥಿಯನ್ನು ಉತ್ತೇಜಿಸಿ. ವಿದ್ಯಾರ್ಥಿಯು ಪ್ಯಾರದಲ್ಲಿರುವ ಹೆಚ್ಚಿನ ವಾಕ್ಯಗಳಿಗೆ ಅಡಿಗೆರೆ ಹಾಕಿ ಅವನ್ನು ಉದ್ದ ಓದುತ್ತಾ ಉತ್ತರ ಹೇಳುವಲ್ಲಿ ಮುಖ್ಯ ಅಂಶ ಅವನ ಮನಸ್ಸಿಗೆ ಹೋಗುವುದಿಲ್ಲ. ಆದ್ದರಿಂದ ಕೆಲವೇ ಮುಖ್ಯ ಪದಗಳನ್ನು ಗುರುತಿಸಿ ಅವಕ್ಕೆ ಅಡಿಗೆರೆ ಹಾಕುವುದನ್ನು ವಿದ್ಯಾರ್ಥಿ ಕಲಿತರೆ ಆ ಪದಗಳನ್ನು ನೋಡಿದ ತಕ್ಷಣ ಮುಖ್ಯ ವಿಚಾರವು ಅವನ ಮನಸ್ಸಿಗೆ ಬರುತ್ತದೆ.
5 ಓರೆ ಅಕ್ಷರಗಳಲ್ಲಿ ಅಥವಾ ದಪ್ಪಕ್ಷರಗಳಲ್ಲಿ ಇರುವ ಪದ ಇಲ್ಲವೆ ವಾಕ್ಯಕ್ಕೆ ಕೂಡ ಬೋಧಕನು ಮತ್ತು ವಿದ್ಯಾರ್ಥಿ ಗಮನಕೊಡಬೇಕು. ಏಕೆಂದರೆ ಅದು ಪ್ಯಾರ ಅಥವಾ ವಚನದ ಮುಖ್ಯ ಅಂಶವನ್ನು ಎತ್ತಿತೋರಿಸುತ್ತದೆ. ಓರೆ ಅಕ್ಷರ ಅಥವಾ ದಪ್ಪಕ್ಷರಗಳನ್ನು ಬಳಸಿರುವ ಉದ್ದೇಶ ಏನೆಂದು ನಿಮ್ಮ ವಿದ್ಯಾರ್ಥಿಗೆ ಹೇಳಿಕೊಡಿ. ಇದು ಅವನು ತನ್ನ ನಂಬಿಕೆಯನ್ನು ಇತರರಿಗೆ ವಿವರಿಸುವಾಗ ಪ್ರಯೋಜನಕ್ಕೆ ಬರುವುದು.
6 ಮುಖ್ಯ ಅಂಶಗಳನ್ನು ಒತ್ತಿ ಹೇಳಲು ನೆರವಾಗುವ ಈ ಎಲ್ಲ ವಿಷಯಗಳು ಕಾವಲಿನಬುರುಜು ಅಧ್ಯಯನ ನಿರ್ವಾಹಕನಿಗೆ, ಸಭಾ ಬೈಬಲ್ ಅಧ್ಯಯನ ನಡೆಸುವವರಿಗೆ, ಮನೆ ಬೈಬಲ್ ಅಧ್ಯಯನ ನಡೆಸುವವರಿಗೆ ಮಾತ್ರವಲ್ಲ ಮಕ್ಕಳಿಗೆ ಬೋಧಿಸುವವರಿಗೆ ಕೂಡ ತುಂಬ ಪ್ರಯೋಜನಕರ. ನಾವು ‘ಶಿಷ್ಯರನ್ನಾಗಿ ಮಾಡಬೇಕು, ಬೋಧಿಸಬೇಕು’ ಎಂದು ಯೇಸು ಹೇಳಿದನು. (ಮತ್ತಾ. 28:19, 20) ಮುಖ್ಯ ಅಂಶಗಳಿಗೆ ಒತ್ತು ಕೊಡುವುದು ಹೇಗೆಂದು ಕಲಿಯುವುದರಿಂದ ಆ ನೇಮಕವನ್ನು ಪೂರೈಸಲು ನಮಗೆ ಸುಲಭವಾಗುತ್ತದೆ.