ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಯೋವೇಲ
1. ನಾವು ಸುವಾರ್ತೆ ಸಾರುವಾಗ ಯೋವೇಲನಂಥ ವಿನೀತ ಸ್ವಭಾವವನ್ನು ಹೇಗೆ ತೋರಿಸಬಹುದು?
1 ಯಾರು ಈ ಪ್ರವಾದಿ ಯೋವೇಲ? ಇವನು “ಪೆತೂವೇಲನ ಮಗ.” (ಯೋವೇ. 1:1) ಈ ವಿನೀತ ಸ್ವಭಾವದ ಪ್ರವಾದಿ ತನ್ನ ಬಗ್ಗೆ ಹೇಳಿಕೊಂಡಿರುವುದು ಇಷ್ಟನ್ನೇ. ಯೆಹೋವನು ತನಗೆ ಕೊಟ್ಟ ಸಂದೇಶಕ್ಕೆ ಮಾತ್ರ ಅವನು ಪ್ರಾಮುಖ್ಯತೆ ಕೊಟ್ಟನೇ ಹೊರತು ತನ್ನ ಬಗ್ಗೆ ಅಲ್ಲ. ನಾವು ಸುವಾರ್ತೆ ಸಾರುವಾಗ ನಮಗೆ ಹೆಸರು ಬರಬೇಕೆಂದು ಶ್ರಮಿಸದೆ ಯೆಹೋವನ ಕಡೆಗೆ ಮತ್ತು ಬೈಬಲ್ನ ಕಡೆಗೆ ಜನರ ಗಮನ ಸೆಳೆಯಲು ಶ್ರಮಿಸಬೇಕು. (1 ಕೊರಿಂ. 9:16; 2 ಕೊರಿಂ. 3:5) ಅಲ್ಲದೆ ನಾವು ಸಾರುವ ಸಂದೇಶ ನಮಗೆ ಸಾರಲು ಬಲ ಕೊಡುತ್ತೆ. ಹುರುಪಿನಿಂದ ಸುವಾರ್ತೆ ಸಾರಲು ಯೋವೇಲನ ಪ್ರವಾದನೆ ಇಂದು ನಮಗೆ ಹೇಗೆ ಸಹಾಯ ಮಾಡುತ್ತದೆ?
2. ಹತ್ತಿರವಾಗುತ್ತಿರುವ ಯೆಹೋವನ ದಿನ ನಾವು ಏನು ಮಾಡಲು ಇಂಬು ಕೊಡುತ್ತೆ?
2 “ಯೆಹೋವನ ದಿನವು ಸಮೀಪಿಸಿತು.” (ಯೋವೇ. 1:15): ಸಾವಿರಾರು ವರ್ಷಗಳ ಹಿಂದೆ ಈ ಮಾತನ್ನು ಬರೆದಿರುವುದಾದರೂ, ಅದರ ನೆರವೇರಿಕೆಯ ಅಂತಿಮ ಕ್ಷಣದಲ್ಲಿ ನಾವು ಜೀವಿಸುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸ್ಥಿತಿ, ಸುವಾರ್ತೆ ಸಾರುವಾಗ ಜನರು ತೋರಿಸುವ ಅಸಡ್ಡೆ, ನಾವು ಎದುರಿಸುವ ಅಪಹಾಸ್ಯ ಇವೆಲ್ಲಾ ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೀವಿ ಮತ್ತು ದುಷ್ಟ ಲೋಕದ ಅಂತ್ಯ ತುಂಬ ಹತ್ತಿರವಿದೆ ಅಂತ ತೋರಿಸಿಕೊಡುತ್ತೆ. (2 ತಿಮೊ. 3:1-5; 2 ಪೇತ್ರ 3:3, 4) ಅಂತ್ಯ ಹತ್ತಿರವಿರುವುದರಿಂದ ನಮ್ಮ ಸುವಾರ್ತಾ ಕೆಲಸಕ್ಕೆ ನಾವು ಹಿಂದೆಂದೂ ಕೊಡದೇ ಇರುವಷ್ಟು ಹೆಚ್ಚು ಪ್ರಾಮುಖ್ಯತೆ, ಆದ್ಯತೆ ಕೊಡಬೇಕು.—2 ಪೇತ್ರ 3:11, 12.
3. ಮಹಾ ಸಂಕಟ ಹತ್ತಿರವಾಗುತ್ತಿರುವಾಗ ಸುವಾರ್ತೆ ಸಾರುವುದು ಯಾಕಷ್ಟು ಪ್ರಾಮುಖ್ಯ?
3 ‘ಯೆಹೋವನು ತನ್ನ ಜನರಿಗೆ ಆಶ್ರಯ ಆಗುವನು’ (ಯೋವೇ. 3:16): ಮಹಾ ಸಂಕಟದ ಸಮಯದಲ್ಲಿ ದೇವರು ತರುವ ನ್ಯಾಯತೀರ್ಪಿನಲ್ಲಿ ಇಲ್ಲಿ ತಿಳಿಸಿರುವ ಯೆಹೋವನ ಆಶ್ರಯ ನಮಗೆ ಲಭಿಸುವುದು. ಯೆಹೋವನು ತನ್ನ ನಿಷ್ಠಾವಂತ ಸೇವಕರನ್ನು ಕಾಪಾಡುವನು ಎಂಬ ವಿಷಯ ನಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತೆ. (ಪ್ರಕ. 7:9, 14) ನಾವು ಸಾರುವ ಸುವಾರ್ತೆ ಮತ್ತು ಯೆಹೋವನು ಬಲವನ್ನು ಒದಗಿಸುವ ಮತ್ತು ನಮ್ಮನ್ನು ಪೋಷಿಸುವ ಪರಿ, ನಮ್ಮ ನಂಬಿಕೆ ಮತ್ತು ಸಹನೆಯನ್ನು ಹೆಚ್ಚಿಸುತ್ತೆ. ಇದು ಮುಂದೆ ಬರಲಿರುವ ಮಹಾ ಸಂಕಟದಲ್ಲಿ ನಮಗೆ ಸಹಾಯಮಾಡುತ್ತೆ.
4. ನಾವು ಯಾಕೆ ಹರ್ಷದಿಂದ ಹಾಗೂ ಧೈರ್ಯದಿಂದ ಭವಿಷ್ಯವನ್ನು ಮುನ್ನೋಡಬೇಕು?
4 ಕೆಲವರ ಪ್ರಕಾರ ಯೋವೇಲನ ಪ್ರವಾದನೆ ಒಂದು ಆಶಾರಹಿತ ಪ್ರವಾದನೆಯಾದರೂ ದೇವಜನರಿಗೆ ಅದು ಬಿಡುಗಡೆಯ ಉಜ್ವಲ ನಿರೀಕ್ಷೆ ನೀಡುತ್ತೆ. (ಯೋವೇ. 2:32) ಆದ್ದರಿಂದ ಭವಿಷ್ಯತ್ತನ್ನು ಧೈರ್ಯದಿಂದ ಮುನ್ನೋಡೋಣ. ಯೋವೇಲ 2:23ರಲ್ಲಿ ಯೋವೇಲ ನುಡಿದಿರುವಂತೆ ‘ನಮ್ಮ ದೇವರಾದ ಯೆಹೋವನಲ್ಲಿ ಹರ್ಷಿಸುತ್ತಾ’ ಹುರುಪಿನಿಂದ ದೇವರ ಆಡಳಿತದ ಸುವಾರ್ತೆ ಸಾರೋಣ.