ಕೇಳಿ ತಿಳಿದುಕೊಳ್ಳಿ
1. ಜಿಲ್ಲಾ ಅಧಿವೇಶನಗಳಲ್ಲಿ ಕೇಳಿ ತಿಳಿದುಕೊಳ್ಳಲು ಯಾಕೆ ಹೆಚ್ಚಿನ ಶ್ರಮ ಅಗತ್ಯ?
1 2013ರ ಜಿಲ್ಲಾ ಅಧಿವೇಶನ ಹತ್ತಿರವಾಗುತ್ತಿದೆ. ಜಗತ್ತಿನಾದ್ಯಂತ ಇರುವ ಜನರ ಪ್ರಸಕ್ತ ಅಗತ್ಯಗಳಿಗೆ ತಕ್ಕಂತೆ ಈ ಅಧಿವೇಶನವನ್ನು ಸಿದ್ಧಪಡಿಸಲು ಬಹಳಷ್ಟು ಕೆಲಸ ಮಾಡಲಾಗಿದೆ. ಅಧಿವೇಶನದ ಮೂರು ದಿನವೂ ಹಾಜರಾಗಲು ತಯಾರಿ ಮಾಡಿದ್ದೀರಾ? ತುಂಬ ಜನ ಸಭೆ ಸೇರುವ ಅಧಿವೇಶನದಲ್ಲಿ ಅಪಕರ್ಷಣೆ ಇದ್ದೇ ಇರುತ್ತೆ. ಆದ್ದರಿಂದ ಏಕಾಗ್ರತೆಗಾಗಿ ನಾವೆಲ್ಲ ತುಂಬ ಪ್ರಯತ್ನ ಮಾಡಬೇಕು. ಸಭೆಯಲ್ಲಿ ನಡೆಯುವ ಕೂಟದ ಸಮಯಕ್ಕಿಂತ ಅಧಿವೇಶನದ ಸಮಯ ದೀರ್ಘವಿರುವ ಕಾರಣ ಗಮನಭಂಗ ಆಗದಂತೆ ನೋಡಿಕೊಳ್ಳಬೇಕು. ಅನೇಕರಿಗೆ ಪ್ರಯಾಣದ ಸುಸ್ತು ಸಹ ಇರುತ್ತೆ. ಹಾಗಾಗಿ ಕೇಳಿ ತಿಳಿದುಕೊಳ್ಳಲು ನಮಗೆ ಯಾವುದು ಸಹಾಯ ಮಾಡುತ್ತೆ?—ಧರ್ಮೋ. 31:12.
2. ಅಧಿವೇಶನಕ್ಕಾಗಿ ನಮ್ಮ ಹೃದಮನ ಸಿದ್ಧಪಡಿಸುವುದು ಹೇಗೆ?
2 ಅಧಿವೇಶನ ಆರಂಭವಾಗುವ ಮುನ್ನ: ನಮ್ಮ ಅಧಿಕೃತ ವೆಬ್‌ಸೈಟ್ www.jw.orgನಲ್ಲಿ ಅಧಿವೇಶನದ ಕಾರ್ಯಕ್ರಮ ಪಟ್ಟಿ, ಉಪನ್ಯಾಸಗಳ ಶೀರ್ಷಿಕೆಗಳನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಒಂದೆರಡು ಮುಖ್ಯ ವಚನಗಳನ್ನು ಕೊಡಲಾಗಿರುತ್ತೆ. ಇಂಟರ್‌ನೆಟ್ ಸೌಲಭ್ಯವಿರುವಲ್ಲಿ ಈ ವಿಷಯಗಳ ಬಗ್ಗೆ ಮುಂಚೆಯೇ ಓದಬಹುದು. ಇದು ನಾವು ಹೃದಮನ ಕೊಟ್ಟು ಕೇಳಲು ನೆರವಾಗುತ್ತೆ. (ಎಜ್ರ 7:10) ಅಧಿವೇಶನಕ್ಕಾಗಿ ಕುತೂಹಲ ಹೆಚ್ಚಿಸಲು ನಿಮ್ಮ ಕುಟುಂಬ ಆರಾಧನೆಯ ಸಂಜೆಯಲ್ಲಿ ಸಹ ಇದರ ಬಗ್ಗೆ ಚರ್ಚಿಸಬಹುದೇ?
3. ಶ್ರದ್ಧೆಯಿಂದ ಕೇಳಲು ನಮಗೆ ಯಾವುದು ಸಹಾಯ ಮಾಡುತ್ತೆ?
3 ಕಾರ್ಯಕ್ರಮ ನಡೆಯುವಾಗ: ಶೌಚಾಲಯಕ್ಕೆ ಹೋಗಬೇಕಾಗಿದ್ದರೆ ಕಾರ್ಯಕ್ರಮ ಶುರುವಾಗುವ ಮುಂಚೆಯೇ ಹೋಗಿ ಬರುವುದು ಒಳ್ಳೇದು. ಕಾರ್ಯಕ್ರಮ ನಡೆಯವಾಗ ಎದ್ದು ಹೋಗಬೇಡಿ. ನಿಮ್ಮ ಮೊಬೈಲ್ ಆಫ್ ಮಾಡಿ. ಆಗ ಮೆಸೆಜ್ ಅಥವಾ ಕರೆ ಬಂದರೆ ನಿಮಗೆ ಅಪಕರ್ಷಣೆ ಆಗಲ್ಲ, ಬೇರೆಯವರಿಗೆ ಮೆಸೆಜ್ ಮಾಡಬೇಕೆಂದು ನಿಮಗೂ ಅನಿಸುವುದಿಲ್ಲ. ಒಂದುವೇಳೆ ಫೋನ್ ಆನ್ ಇಡಲೇಬೇಕಾದ್ದಲ್ಲಿ ಬೇರೆಯವರಿಗೆ ಅಡಚಣೆ ಆಗದಂತೆ ಸೆಟ್ ಮಾಡಿ. ಇಲೆಕ್ಟ್ರಾನಿಕ್ ಟ್ಯಾಬ್ಲೆಟ್‌ಗಳನ್ನು ನೀವು ಉಪಯೋಗಿಸುತ್ತಿದ್ದರೆ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಕಾರ್ಯಕ್ರಮ ನಡೆಯುವಾಗ ಅದು ಇದು ತಿನ್ನುತ್ತಾ ಕುಡಿಯುತ್ತಾ ಇರಬೇಡಿ. (ಪ್ರಸಂ. 3:1) ಭಾಷಣ ನೀಡುವವರ ಮೇಲೆ ನಿಮ್ಮ ಕಣ್ಣು ನೆಟ್ಟಿರಲಿ. ವಚನಗಳನ್ನು ಓದುವಾಗ ಬೈಬಲ್‌ನಿಂದ ತೆರೆದು ನೋಡಿ. ಚುಟುಕಾಗಿ ಟಿಪ್ಪಣಿ ಬರೆದುಕೊಳ್ಳಿ.
4. ಮಕ್ಕಳೂ ಕೇಳಿ ಕಲಿಯುವಂತೆ ಹೆತ್ತವರು ಹೇಗೆ ಸಹಾಯ ಮಾಡಬಲ್ಲರು?
4 ನಮ್ಮ ಮಕ್ಕಳು ಸಹ ಕೇಳಿ ಕಲಿಯಬೇಕೆನ್ನುವುದೇ ನಮ್ಮ ಆಶೆ ಅಲ್ವಾ! ಜ್ಞಾನೋಕ್ತಿ 29:15ರಲ್ಲಿ ಹೇಳುತ್ತೆ: “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.” ಆದ್ದರಿಂದ ಹೆತ್ತವರು ತಮ್ಮ ಮಕ್ಕಳ ಜತೆಯಲ್ಲೇ ಕೂರಬೇಕು. ಕಾರ್ಯಕ್ರಮಕ್ಕೆ ಗಮನ ಕೊಡುತ್ತಿದ್ದಾರಾ ಅಥವಾ ಮಾತಾಡುತ್ತಿದ್ದಾರಾ, ಅಲ್ಲಿ-ಇಲ್ಲಿ ಓಡಾಡುತ್ತಿದ್ದಾರಾ, ಮೆಸೆಜ್ ಕಳಿಸುತ್ತಿದ್ದಾರಾ ಎಂದು ನಿಗಾ ಇಡಲು ಸಹಾಯವಾಗುತ್ತೆ. ಭಾಷಣದಲ್ಲಿ ಹೇಳುವುದನ್ನೆಲ್ಲ ಅರ್ಥ ಮಾಡಿಕೊಳ್ಳದಷ್ಟು ಚಿಕ್ಕ ವಯಸ್ಸು ನಿಮ್ಮ ಮಕ್ಕಳದ್ದಾಗಿದ್ದರೂ ತೂಕಡಿಸದೆ, ಗಲಾಟೆ ಮಾಡದೆ ಕೂರುವಂತೆ ಅವರಿಗೆ ತರಬೇತು ನೀಡಬಹುದು.
5. ಕಾರ್ಯಕ್ರಮವನ್ನು ಪುನರವಲೋಕನ ಮಾಡುವುದು ಯಾಕೆ ಒಳ್ಳೇದು ಮತ್ತು ನಾವಿದನ್ನು ಹೇಗೆ ಮಾಡಬಹುದು?
5 ಪ್ರತಿ ದಿನ ಕಾರ್ಯಕ್ರಮ ಮುಗಿದ ನಂತರ: ತುಂಬ ಹೊತ್ತು ಹೊರಗೆ ಸಮಯ ಕಳೆಯಬೇಡಿ. ಆದಷ್ಟು ಬೇಗ ನಿದ್ರೆ ಮಾಡಿ. ಆ ದಿನ ಕೇಳಿದ ವಿಷಯಗಳನ್ನು ಮತ್ತೆ ನೆನಪಿಸಿಕೊಳ್ಳುವುದರಿಂದ ತುಂಬ ದಿನ ಮನಸ್ಸಲ್ಲಿ ಉಳಿಯುತ್ತೆ. ಆದ್ದರಿಂದ ಸಂಜೆ ಇಡೀ ಕುಟುಂಬ ಕುಳಿತು ವಿಷಯಗಳನ್ನು ಚುಟುಕಾಗಿ ನೆನಪಿಸಿಕೊಳ್ಳಿ. ನಿಮ್ಮ ಸ್ನೇಹಿತರ ಜತೆ ಹೋಟೆಲ್‌ಗೆ ಊಟಕ್ಕೆ ಹೋದರೆ ನಿಮ್ಮ ಟಿಪ್ಪಣಿಯನ್ನು ತೆಗೆದುಕೊಂಡು ಹೋಗಿ. ನಿಮಗಿಷ್ಟವಾದ ಒಂದೆರಡು ಅಂಶಗಳನ್ನು ಅಲ್ಲಿ ಹಂಚಿಕೊಳ್ಳಬಹುದಲ್ಲವೇ? ಅಧಿವೇಶನದ ನಂತರ ಕುಟುಂಬ ಆರಾಧನಾ ಸಂಜೆಯಲ್ಲಿ ನೀವು ಕುಟುಂಬವಾಗಿ ಯಾವ ವಿಷಯಗಳನ್ನು ಅನ್ವಯಿಸಿಕೊಳ್ಳಬಹುದೆಂದು ಚರ್ಚಿಸಬಹುದು. ವಾರದಲ್ಲೊಂದು ದಿನ, ಹೊಸದಾಗಿ ಬಿಡುಗಡೆಯಾದ ಪ್ರಕಾಶನಗಳ ಕುರಿತು ಕಲಿಯಲು ಸಮಯ ಬದಿಗಿಡಬಹುದು.
6. ಅಧಿವೇಶನಕ್ಕೆ ನಾವು ಹಾಜರಾದರೆ ಮಾತ್ರ ಸಾಕಾ? ವಿವರಿಸಿ.
6 ದೊಡ್ಡ ಔತಣಕೂಟದಲ್ಲಿ ಸರಿಯಾಗಿ ಊಟ ಮಾಡಲಿಲ್ಲ ಅಂದರೆ ಅಥವಾ ಊಟ ಜೀರ್ಣವಾಗಲಿಲ್ಲ ಅಂದರೆ ಔತಣಕೂಟಕ್ಕೆ ಹೋಗಿ ಪ್ರಯೋಜನವೇ ಇರುವುದಿಲ್ಲ. ಅದೇ ರೀತಿ ಜಿಲ್ಲಾ ಅಧಿವೇಶನದಲ್ಲಿ ನಾವು ಉಣ್ಣುವ ಆಧ್ಯಾತ್ಮಿಕ ಔತಣ ಸಹ. ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಾಗುವ ಮೂಲಕ, ಕಿವಿಗೊಟ್ಟು ಕೇಳುವ ಮೂಲಕ ಮತ್ತು ಕಲಿತದ್ದನ್ನು ಜೀವನದಲ್ಲಿ ಅನ್ವಯಿಸುವ ಮೂಲಕ ಊಟವನ್ನು ಚೆನ್ನಾಗಿ ಸವಿಯೋಣ.