ಆಡಳಿತ ಮಂಡಲಿಯ ಪತ್ರ
ಆತ್ಮೀಯ ಸಹೋದರ ಸಹೋದರಿಯರೇ,
ನಮ್ಮೆಲ್ಲರ ತಂದೆಯಾದ ಯೆಹೋವ ದೇವರು ಪ್ರೀತಿಯ ಸಾಕಾರಮೂರ್ತಿ. ಅದಕ್ಕೆ ಬೈಬಲ್‌ನಲ್ಲಿ ‘ದೇವರು ಪ್ರೀತಿಯಾಗಿದ್ದಾರೆ’ ಅಥವಾ “ದೇವರು ಪ್ರೀತಿಸ್ವರೂಪಿ” ಅಂತ ಹೇಳುತ್ತೆ. (1 ಯೋಹಾ. 4:8) ಇಷ್ಟಕ್ಕೂ ದೇವರು ಸರ್ವಶಕ್ತ. ಹಾಗಿದ್ದರೂ “ಶಕ್ತಿಸ್ವರೂಪಿ” ಅಂತ ಬೈಬಲ್‌ನಲ್ಲಿ ಎಲ್ಲೂ ಹೇಳಿಲ್ಲ. ಯಾಕೆಂದರೆ ಅವರು ಏನೇ ಮಾಡಿದರೂ ಪ್ರೀತಿಯ ಆಧಾರದಲ್ಲೇ ಮಾಡುತ್ತಾರೆ. ಇದೇ ತಾನೇ ನಮ್ಮನ್ನು ಅವರ ಕಡೆಗೆ ಸೆಳೆದಿದ್ದು.
ಆದರೆ ತನ್ನನ್ನು ಆರಾಧನೆ ಮಾಡಿ ಅಂತ ಯೆಹೋವ ದೇವರು ಯಾರನ್ನೂ ಬಲವಂತ ಮಾಡಲ್ಲ. ಅವರು ನಿರಂಕುಶ ಪ್ರಭುವಲ್ಲ. ನಾವು ಪ್ರೀತಿಯಿಂದ ಮನಸಾರೆ ಆರಾಧನೆ ಮಾಡಬೇಕೆನ್ನುವುದು ಯೆಹೋವ ದೇವರ ಆಸೆ. ನಾವು ಈ ರೀತಿ ಪ್ರೀತಿಯಿಂದ ಆರಾಧನೆ ಮಾಡುವಾಗ ನಮಗೆ ದೇವರ ಆಡಳಿತ ಬೇಕು ಮತ್ತು ಅವರು ನಮ್ಮನ್ನು ಪ್ರೀತಿ ನೀತಿಯಿಂದಲೇ ಆಳುತ್ತಾರೆ ಅನ್ನೋ ಭರವಸೆ ಇದೆ ಅಂತ ರುಜುಪಡಿಸುತ್ತೇವೆ. ದೇವರು ಪ್ರೀತಿ-ನೀತಿಯ ಆಧಾರದಲ್ಲೇ ಆಡಳಿತ ಮಾಡುತ್ತಾರೆಂದು ಮಾನವಕುಲ ಹುಟ್ಟಿದಾಗಲೇ ಸಾಬೀತಾಗಿದೆ.
ತನಗೆ ವಿಧೇಯರಾಗಲೇ ಬೇಕು ಅಂತ ಆದಾಮ ಹವ್ವರನ್ನು ದೇವರು ಬಲವಂತ ಮಾಡಲಿಲ್ಲ. ವಿಧೇಯತೆ ತೋರಿಸಬೇಕಾ ಬೇಡ್ವಾ ಅನ್ನೋ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಅವರಿಗೆ ಕೊಟ್ಟರು. ಅವರಿಗೆ ಯೆಹೋವ ದೇವರ ಮೇಲೆ ನಿಜವಾಗ್ಲೂ ಪ್ರೀತಿ, ಗೌರವ ಇದ್ದಿದ್ದರೆ ದೇವರ ಮಾತನ್ನು ಕೇಳುತ್ತಿದ್ದರು. ಸೈತಾನನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರಲಿಲ್ಲ.
ಇದೆಲ್ಲ ನಡೆದು ಕೆಲಕಾಲದ ನಂತರ ಇಸ್ರಾಯೇಲ್ಯರ ಜೊತೆ ಮೋಶೆ ಕೊನೆಯದಾಗಿ ಮಾತಾಡುವಾಗ “ನೋಡಿರಿ; ನಾನು ಜೀವಶುಭಗಳನ್ನೂ ಮರಣಾಶುಭಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ” ಅಂತ ಹೇಳಿದರು. (ಧರ್ಮೋ. 30:15) ಇನ್ನೊಂದು ಮಾತಿನಲ್ಲಿ ‘ಯಾವ ರೀತಿ ಬದುಕಬೇಕು ಅಂತ ತೀರ್ಮಾನ ಮಾಡೋ ಸ್ವಾತಂತ್ರ್ಯ ನಿಮಗಿದೆ’ ಅಂತ ಅವರು ಜನರಿಗೆ ಹೇಳುತ್ತಿದ್ದರು. ಅದೇ ರೀತಿ ಯೆಹೋಶುವ ಕೂಡ ಇಸ್ರಾಯೇಲ್ಯರಿಗೆ “ಯೆಹೋವನನ್ನು ಸೇವಿಸುವದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿ” ಎಂದಿದ್ದರು. ಅದಕ್ಕೆ ಜನರು “ಯೆಹೋವನ ಸೇವೆಯನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುವದು ನಮಗೆ ದೂರವಾಗಿರಲಿ” ಅಂದರು. (ಯೆಹೋ. 24:15, 16) ನಾವೂ ಅವರ ಮಾತನ್ನು ಪ್ರತಿಧ್ವನಿಸುತ್ತೇವೆ ಅಲ್ವಾ. ಯಾಕೆಂದ್ರೆ ನಾವು ಯೆಹೋವ ದೇವರನ್ನು ಪ್ರೀತಿಸುತ್ತೇವೆ. ದೇವರನ್ನು ಬಿಟ್ಟು ಹೋಗುವುದು ನಮಗೂ ದೂರದ ಮಾತು.
ಆಯ್ಕೆ ಮಾಡುವ ಸ್ವಾತಂತ್ರ್ಯ ಅಂದರೇನು ಅಂತ ಕ್ರೈಸ್ತರಾದ ನಮಗೆ ತಿಳಿದಿದೆ. ಸಭಾ ಹಿರಿಯರಿಗೆ ಒಬ್ಬರನ್ನು ತಿದ್ದುವ, ಶಿಕ್ಷಿಸುವ ಅಧಿಕಾರ ಇರೋದಾದರೂ ಇತರರನ್ನು ಅಂಕೆಯಲ್ಲಿಡಲು ಯತ್ನಿಸುವುದಿಲ್ಲ. ತಾವು ಹೇಳಿದಂತೆ ಅವರ ಬದುಕು ಇರಬೇಕು, ತಾವು ನಂಬುವುದನ್ನೇ ಅವರೂ ನಂಬಬೇಕು ಅಂತ ಒತ್ತಡ ಹೇರಲ್ಲ. “ನಾವು ನಿಮ್ಮ ನಂಬಿಕೆಯ ಒಡೆಯರೆಂದಲ್ಲ, ಬದಲಾಗಿ ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮ ಜೊತೆ ಕೆಲಸದವರಾಗಿದ್ದೇವೆ; ನೀವು ನಿಂತಿರುವುದು ನಿಮ್ಮ ನಂಬಿಕೆಯಿಂದಲೇ” ಎಂದು ಅಪೊಸ್ತಲ ಪೌಲ ಹೇಳಿದ್ದಾರಲ್ಲ.—2 ಕೊರಿಂ. 1:24.
ಒಂದು ಕೆಲಸವನ್ನು ಒತ್ತಾಯದಿಂದ ಮಾಡದೆ ಮನಸಾರೆ ಮಾಡಿದರೆ ಸಿಗುವ ತೃಪ್ತಿ ಅಪಾರ. ನಾವು ಪ್ರೀತಿಯಿಂದ ಪ್ರೇರಿತರಾಗಿ ಒಳ್ಳೇ ಕಾರ್ಯವನ್ನು ಮಾಡಬೇಕು ಎಂದೇ ದೇವರು ಇಷ್ಟಪಡುತ್ತಾರೆ. ಅದರ ಪ್ರಾಮುಖ್ಯತೆಯನ್ನು ಪೌಲ ಹೀಗೆ ಹೇಳುತ್ತಾರೆ: “ಇತರರಿಗೆ ಉಣಿಸುವುದಕ್ಕಾಗಿ ನನ್ನ ಆಸ್ತಿಯನ್ನೆಲ್ಲ ಕೊಡುವುದಾದರೂ ಹೊಗಳಿಕೊಳ್ಳುವುದಕ್ಕಾಗಿ ನನ್ನ ದೇಹವನ್ನೇ ಒಪ್ಪಿಸಿಕೊಡುವುದಾದರೂ ಪ್ರೀತಿಯಿಲ್ಲದವನಾಗಿದ್ದರೆ ನನಗೆ ಯಾವ ಲಾಭವೂ ಇಲ್ಲ.”—1 ಕೊರಿಂ. 13:3.
ಲಕ್ಷಲಕ್ಷ ಸಹೋದರ ಸಹೋದರಿಯರು ತಮ್ಮ ಹೃದಯದಲ್ಲಿ ತುಂಬಿರುವ ಪ್ರೀತಿಯಿಂದ ಆರಾಧಿಸುವುದನ್ನು ನೋಡುವಾಗ ಯೆಹೋವ ದೇವರಿಗೆ ಸಂತೋಷವಾಗುತ್ತೆ, ಮಹಿಮೆ ತರುತ್ತೆ.
ಹಾಗೇ ದೇವರು ತನ್ನೆಲ್ಲ ಸೇವಕರನ್ನು ತುಂಬ ತುಂಬ ಪ್ರೀತಿಸುತ್ತಾರೆ. ಈ ಜಗತ್ತು, ಅದು ಕೊಡುವ ಸುಖಸಂತೋಷವನ್ನು ಬಿಟ್ಟು ಯೆಹೋವ ದೇವರನ್ನು ಪ್ರೀತಿಸುವ ಎಲ್ಲ ಮಕ್ಕಳನ್ನು ಹದಿವಯಸ್ಕರನ್ನು ಸಹ ದೇವರು ತುಂಬ ಪ್ರೀತಿಸುತ್ತಾರೆ. ಅದೇರೀತಿ ನಾವು ಸಹ ನಿಮ್ಮನ್ನು ತುಂಬ ಪ್ರೀತಿಸುತ್ತೇವೆ.—ಲೂಕ 12:42, 43.
ಯೆಹೋವ ದೇವರ ಮೇಲೆ ಪ್ರೀತಿಯಿದ್ದ ಕಾರಣ ನೀವು ಕಳೆದ ವರ್ಷ 174,86,97,447 ತಾಸುಗಳನ್ನು ಸುವಾರ್ತೆ ಸಾರುವುದರಲ್ಲಿ ವ್ಯಯಿಸಿದ್ದೀರಿ. ಅದೇ ಪ್ರೀತಿಯಿಂದ ಪ್ರೇರಿತರಾದ ನೀವು ಅಂದರೆ 77,82,346 ಮಂದಿ ಸೇವೆಯಲ್ಲಿ ಪಾಲ್ಗೊಂಡಿರಿ. ನಮ್ಮ ಹೃದಯಕ್ಕೆ ಅತ್ಯಾನಂದ ತಂದ ಇನ್ನೊಂದು ಸಂಗತಿ ಮಕ್ಕಳು ಸೇರಿದಂತೆ 2,68,777 ಮಂದಿ ಯೆಹೋವನಿಗೆ ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದದ್ದು. ಅಂದರೆ ಪ್ರತಿವಾರ 5,168 ಜನರು ದೀಕ್ಷಾಸ್ನಾನ ಪಡೆದಂತೆ. ಇದನ್ನು ಕೇಳುವಾಗ ಸಂತೋಷವಾಗುವುದಿಲ್ಲವೆ!
ಈ ಕಡೇ ದಿವಸಗಳಲ್ಲಿ ದೇವಜನರು ಅನೇಕ ಸಮಸ್ಯೆ, ಸವಾಲು, ಹಿಂಸೆ, ಅನಾರೋಗ್ಯ, ವೃದ್ಧಾಪ್ಯದಂಥ ಕಷ್ಟಗಳನ್ನು ಅನುಭವಿಸುವುದು ಅನಿವಾರ್ಯ. ಆದರೆ ಇವುಗಳಿಂದಾಗಿ ನಾವ್ಯಾರೂ ‘ಹಿಂಜರಿಯಬಾರದು’ ಅಥವಾ ‘ಬಿಟ್ಟುಬಿಡಬಾರದು.’ ನಮ್ಮ ಪ್ರೀತಿ ಸದಾ ನಿಮ್ಮೊಂದಿಗಿರುವುದು.—ಇಬ್ರಿ. 10:39; 2 ಕೊರಿಂ. 4:16.
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ