‘ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ’ ಹಾಗೂ ‘ಚರ್ಚೆಗಾಗಿ ಬೈಬಲ್ ವಿಷಯಗಳು’ ಪುಸ್ತಿಕೆಗಳನ್ನು ಉಪಯೋಗಿಸುತ್ತಿದ್ದೀರೋ?
1. ಅಪೊಸ್ತಲ ಪೌಲ ಮತ್ತು ಯೇಸು ಇತರರಿಗೆ ಹೇಗೆ ಬೋಧಿಸಿದರು?
1 ಅಪೊಸ್ತಲ ಪೌಲನು ‘ಶಾಸ್ತ್ರಾಧಾರದಿಂದ ವಾದಿಸಿದನು’ ಅಂದರೆ ತರ್ಕಿಸಿದನು. (ಅ. ಕೃ. 17:2, 3; 18:19) ಹೀಗೆ ಮಾಡುವಾಗ ಅವನು ಯೇಸುವನ್ನು ಅನುಕರಿಸಿದನು. ಯೇಸು ಕೂಡ ಶಾಸ್ತ್ರವಚನಗಳನ್ನು ಉಲ್ಲೇಖಿಸಿದನು ಮತ್ತು ತನ್ನ ಕೇಳುಗರು ದೇವರ ಉದ್ದೇಶವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ದೃಷ್ಟಾಂತಗಳನ್ನು ಬಳಸಿದನು. (ಮತ್ತಾ. 12:1-12) ಅದೇರೀತಿ ನಾವು ಶಾಸ್ತ್ರಾಧಾರದಿಂದ ತರ್ಕಬದ್ಧವಾಗಿ ಮಾತಾಡುವಂತೆ, ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಹಾಗೂ ಚರ್ಚೆಗಾಗಿ ಬೈಬಲ್ ವಿಷಯಗಳು ಎಂಬ ಪುಸ್ತಿಕೆಗಳು ತಯಾರಿಸಲ್ಪಟ್ಟಿವೆ.
2. ಪರಿಣಾಮಕಾರಿ ಪೀಠಿಕೆಗಳನ್ನು ತಯಾರಿಸಲಿಕ್ಕಾಗಿ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯನ್ನು ಹೇಗೆ ಬಳಸಬಹುದು?
2 ಪರಿಣಾಮಕಾರಿ ನಿರೂಪಣೆಗಳನ್ನು ತಯಾರಿಸುವುದು: ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 2-7ರಲ್ಲಿ ಆಸಕ್ತಿ ಹುಟ್ಟಿಸುವ ಪೀಠಿಕೆಗಳನ್ನು ಕೊಡಲಾಗಿದೆ. ನೀವು ಟೆರಿಟೊರಿಯನ್ನು ಆಗಾಗ್ಗೆ ಆವರಿಸುತ್ತಿರುವಲ್ಲಿ, ಈ ಪೀಠಿಕೆಗಳನ್ನು ಕಲಿತು, ಬಳಸುವುದು ನಿಮ್ಮ ಶುಶ್ರೂಷೆಗೆ ವೈವಿಧ್ಯವನ್ನು ಕೂಡಿಸುತ್ತದೆ. ಮಾತ್ರವಲ್ಲ, ಸಂಭಾಷಣೆಯನ್ನು ಆರಂಭಿಸುವುದರಲ್ಲಿ ಪರಿಣಾಮಕಾರಿಗಳೂ ಹೊಂದಿಸಿಕೊಳ್ಳುವವರೂ ಆಗುವೆವು. ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡುತ್ತಿರುವಾಗ ಅಥವಾ ಬಿಗಿ ಭದ್ರತೆಯ ಕಟ್ಟಡಗಳಲ್ಲಿ ಇಂಟರ್ಕಾಮ್ನ ಮೂಲಕ ಮಾತಾಡುತ್ತಿರುವಾಗ ಪುಸ್ತಿಕೆಯಲ್ಲಿರುವ ಪೀಠಿಕೆಗಳನ್ನು ಉಪಯೋಗಿಸಬಹುದು.
3. ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 7-13ರಲ್ಲಿರುವ ಯಾವ ಮಾಹಿತಿ ಶುಶ್ರೂಷೆಯಲ್ಲಿ ನಮಗೆ ಸಹಾಯಕರ?
3 ಸಂಭಾಷಣಾ ತಡೆಗಟ್ಟುಗಳನ್ನು ಜಯಿಸಿರಿ: ನಿಮ್ಮ ಟೆರಿಟೊರಿಯಲ್ಲಿ ಯಾವ ಸಂಭಾಷಣಾ ತಡೆಗಟ್ಟುಗಳು ಎದುರಾಗಬಹುದೆಂದು ಮುಂದಾಗಿ ಯೋಚಿಸಿ. ಅಂಥ ತಡೆಗಟ್ಟುಗಳಿಗೆ ಉತ್ತರ ಕೊಡಲು ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 7-13ರಲ್ಲಿರುವ ಮಾಹಿತಿಯನ್ನು ಸೇವೆಗೆ ಹೊರಡುವ ಮುಂಚೆ ಕೆಲವು ನಿಮಿಷ ಪರಿಗಣಿಸಿರಿ. ಬೌದ್ಧರು, ಹಿಂದೂಗಳು, ಯೆಹೂದ್ಯರು ಅಥವಾ ಮುಸ್ಲಿಮರು ನಿಮ್ಮ ಟೆರಿಟೊರಿಯಲ್ಲಿದ್ದಾರೋ? ಹಾಗಿರುವಲ್ಲಿ ಪುಟ 13-16ರಲ್ಲಿರುವ ಮಾಹಿತಿ ನಿಮಗೆ ಸಹಾಯಕರ.
4. ಒಂದು ಪ್ರಶ್ನೆ ಅಥವಾ ಚರ್ಚಾಸ್ಪದ ವಿಷಯ ಏಳುವಲ್ಲಿ ಬೈಬಲ್ ವಿಷಯಗಳು ಪುಸ್ತಿಕೆಯನ್ನು ನಾವು ಹೇಗೆ ಉಪಯೋಗಿಸಬಹುದು?
4 ಪ್ರಶ್ನೆಗಳನ್ನು ಉತ್ತರಿಸುವುದು: ಒಂದು ಪ್ರಶ್ನೆ ಅಥವಾ ಚರ್ಚಾಸ್ಪದ ವಿಷಯ ಏಳುವಲ್ಲಿ ಚರ್ಚೆಗಾಗಿ ಬೈಬಲ್ ವಿಷಯಗಳು ಪುಸ್ತಿಕೆ ನಿಮಗೆ ನೆರವಾಗಬಲ್ಲದು. ಆ ಕುರಿತು ಆಸಕ್ತಿಕರ ವಿಷಯವನ್ನು ತೋರಿಸುತ್ತೇನೆಂದು ನೀವು ಮನೆಯವರಿಗೆ ಹೇಳಿ, ಬೈಬಲ್ ವಿಷಯಗಳು ಪುಸ್ತಿಕೆ ಹೊರತೆಗೆಯಿರಿ. ಶೀರ್ಷಿಕೆಗಳು ವರ್ಣಮಾಲೆಯ ಕ್ರಮದಲ್ಲಿ ಇರುವುದರಿಂದ, ನಿಮಗೆ ಬೇಕಾಗಿರುವ ಮುಖ್ಯ ವಿಷಯವನ್ನು ತೆರೆದು ಮಾಹಿತಿಯನ್ನು ತಿಳಿಸಿರಿ. ಸೂಕ್ತ ವಿಷಯವನ್ನು ಕಂಡುಕೊಂಡ ಬಳಿಕ ನೇರವಾಗಿ ವಚನಗಳನ್ನು ನಿಮ್ಮ ಬೈಬಲಿನಿಂದ ಅಥವಾ ಮನೆಯವರ ಬಳಿ ಬೈಬಲ್ ಇರುವುದಾದರೆ ಅದರಿಂದಲೇ ಓದಿರಿ.
5. ಬೈಬಲ್ ವಿಷಯಗಳು ಪುಸ್ತಿಕೆಯನ್ನು ಬಳಸುವ ಉಪಯುಕ್ತ ವಿಧಾನಗಳು ಯಾವುವು?
5 ಇತರ ಉಪಯೋಗಗಳು: ‘ನೀವು ಏಕೆ ಹಬ್ಬ, ಆಚರಣೆಗಳನ್ನು ಮಾಡುವುದಿಲ್ಲ?’ ಎಂಬಂಥ ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾಗಿ ಕೆಲವರು ಬೈಬಲ್ ವಿಷಯಗಳು ಪುಸ್ತಿಕೆಯನ್ನು ಕೆಲಸದ ಸ್ಥಳದಲ್ಲಿಡುತ್ತಾರೆ ಅಥವಾ ಶಾಲೆಗೆ ಒಯ್ಯುತ್ತಾರೆ. ಅಸ್ವಸ್ಥರಾಗಿರುವ ಅಥವಾ ತೀರಿಹೋಗಿರುವ ಪ್ರಿಯರಿಗಾಗಿ ದುಃಖಿಸುತ್ತಿರುವ ಯಾರನ್ನಾದರೂ ನೀವು ಭೇಟಿಮಾಡಲಿಕ್ಕಿದ್ದೀರೋ? ಹಾಗಿರುವಲ್ಲಿ “ಪುನರುತ್ಥಾನ” ಅಥವಾ “ಮರಣ” ಎಂಬ ಶೀರ್ಷಿಕೆಯ ಕೆಳಗಿರುವ ಮಾಹಿತಿಯು ನೀವು ಬೈಬಲಿನಿಂದ ಸಾಂತ್ವನ ನೀಡಲು ಸಹಾಯಮಾಡುವುದು. ಭಾಷಣಗಳನ್ನು ತಯಾರಿಸುವವರಿಗೆ ಮತ್ತು ಕ್ಷೇತ್ರ ಸೇವೆಯ ಕೂಟಗಳನ್ನು ನಡೆಸುವವರಿಗೆ ನೆರವಾಗುವ ಮಾಹಿತಿಯೂ ಇದರಲ್ಲಿದೆ.
6. ಸಾರುವಾಗ ನಮ್ಮ ಗುರಿಯೇನು?
6 ಸಾರುವಾಗ ನಮ್ಮ ಗುರಿ ವಾದವಿವಾದಗಳನ್ನು ಗೆಲ್ಲುವುದಲ್ಲ, ಬರೇ ವಿಷಯವನ್ನು ತಿಳಿಯಪಡಿಸುವುದೂ ಅಲ್ಲ. ಜಾಣ್ಮೆಯಿಂದ ಬೈಬಲಾಧಾರಿತವಾಗಿ ತರ್ಕಬದ್ಧವಾಗಿ ಮಾತಾಡುವುದೇ ನಮ್ಮ ಅಪೇಕ್ಷೆ. ನಾವು, ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಹಾಗೂ ಚರ್ಚೆಗಾಗಿ ಬೈಬಲ್ ವಿಷಯಗಳು ಪುಸ್ತಿಕೆಗಳನ್ನು ಸದುಪಯೋಗಿಸುವಲ್ಲಿ, ನಮ್ಮ ಉಪದೇಶದ ವಿಷಯದಲ್ಲಿ ಎಚ್ಚರಿಕೆಯಿಂದ ಇದ್ದೇವೆಂದು ತೋರಿಸಿಕೊಡುತ್ತೇವೆ.—1 ತಿಮೊ. 4:16.