ಹೊಸ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮ
ನಮ್ಮ 2009ರ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮದ ಮುಖ್ಯವಿಷಯವು, ಕೊಲೊಸ್ಸೆ 4:17ರಲ್ಲಿ ಆಧಾರಿತವಾದ ‘ಶುಶ್ರೂಷೆಯನ್ನು ಪೂರೈಸಲು ಎಚ್ಚರವಾಗಿರಿ’ ಎಂದಾಗಿದೆ. ಕ್ರೈಸ್ತರಾದ ನಾವು ಆ ಬುದ್ಧಿವಾದವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಯೇಸು ಮಾಡಿದಂತೆ ನಮ್ಮ ಶುಶ್ರೂಷೆಯನ್ನು ನಂಬಿಗಸ್ತಿಕೆಯಿಂದ ಕೊನೆಗೊಳಿಸುವುದೇ ನಮ್ಮ ಗುರಿಯೂ ಆಗಿರುತ್ತದೆ. (ಯೋಹಾ 17:14) ಅಪೊಸ್ತಲ ಪೌಲನು ಸಹ ಈ ವಿಷಯದಲ್ಲಿ ನಮಗೆ ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾನೆ. ಶುಶ್ರೂಷೆಯೆಂಬ ಓಟವನ್ನು ಕೊನೆಮುಟ್ಟಿಸಲು ಅವನು ದೃಢಸಂಕಲ್ಪವನ್ನು ಮಾಡಿದ್ದನು. —ಅ. ಕೃ.20:24.
ವಿಭಿನ್ನ ಪ್ರಚಾರಕರು ತಮ್ಮ ಶುಶ್ರೂಷೆಯಲ್ಲಿ ಸವಾಲುಗಳನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಸರ್ಕಿಟ್ ಮೇಲ್ವಿಚಾರಕರು ತಮಗಿರುವ ಭಾಗದಲ್ಲಿ ತಿಳಿಸುವರು. ಅನಂತರ ಕೊಡಲಾಗುವ “ನೀವು ನೆಟ್ಟಿರುವುದನ್ನು ಬೆಳೆಸಿರಿ” ಎಂಬ ಭಾಷಣವು, ‘ನಿತ್ಯಜೀವಕ್ಕಾಗಿ ಯೋಗ್ಯ ಮನೋಭಾವವುಳ್ಳ’ ಜನರಿಗೆ ನಾವು ನಿಜವಾಗಿ ಹೇಗೆ ಸಹಾಯ ಮಾಡಬಲ್ಲೆವೆಂಬುದನ್ನು ಎತ್ತಿಹೇಳುವುದು. (ಅ. ಕೃ. 13:48) ಸಂದರ್ಶಕ ಭಾಷಣಕಾರರು “ನಾವು ನಮ್ಮನ್ನು ಶುಶ್ರೂಷಕರಾಗಿ ತೋರಿಸಿಕೊಡುವ ವಿಧ” ಎಂಬ ಭಾಷಣದಲ್ಲಿ ಮೊದಲಾಗಿ 2 ಕೊರಿಂಥ 6:1-10ನ್ನು ವಚನ ವಚನವಾಗಿ ಚರ್ಚಿಸುವರು. ಮಧ್ಯಾಹ್ನದ ಮೇಲೆ ಅವರು “ನಿಮ್ಮ ಶುಶ್ರೂಷೆಯನ್ನು ಅತಿ ಬೆಲೆಯುಳ್ಳದ್ದಾಗಿ ಪರಿಗಣಿಸಿರಿ” ಎಂಬ ಮುಖ್ಯವಿಷಯದ ಮೇಲೆ ಸಭಿಕರಿಗೆ ಭಾಷಣ ನೀಡುವರು. “ಶುಶ್ರೂಷೆಯಲ್ಲಿ ಆಬಾಲವೃದ್ಧರು ಆನಂದಿಸುತ್ತಾರೆ” ಮತ್ತು “ಶುಶ್ರೂಷೆಯನ್ನು ಪೂರೈಸುವ ಯುವಜನರು” ಎಂಬ ಭಾಷಣಗಳಿಂದಲೂ ನೀವು ಪ್ರೋತ್ಸಾಹವನ್ನು ಪಡಕೊಳ್ಳುವಿರಿ ಎಂಬುದಕ್ಕೆ ಸಂದೇಹವಿಲ್ಲ. ಮುಂದೆ ಬರಲಿರುವ ಸರ್ಕಿಟ್ ಸಮ್ಮೇಳನದಲ್ಲಿ ಅಥವಾ ವಿಶೇಷ ಸಮ್ಮೇಳನ ದಿನದಲ್ಲಿ ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸ ಬಯಸುವವರು ಆದಷ್ಟು ಬೇಗನೇ ಅಧ್ಯಕ್ಷ ಮೇಲ್ವಿಚಾರಕರಿಗೆ ಅದನ್ನು ತಿಳಿಸಬೇಕು. ನಮ್ಮ ಎಲ್ಲಾ ಸಮ್ಮೇಳನ ಮತ್ತು ಅಧಿವೇಶನಗಳ ಒಂದು ಪ್ರಮುಖ ಭಾಗವು ಕಾವಲಿನಬುರುಜು ಚರ್ಚೆಯೇ. ವಿಶೇಷ ಸಮ್ಮೇಳನ ದಿನದ ವಾರದಲ್ಲಿ ಅಧ್ಯಯನ ಮಾಡಲಾಗುವ ಪತ್ರಿಕೆಯ ಪ್ರತಿಯನ್ನು ನಿಮ್ಮ ಸಂಗಡ ತನ್ನಿರಿ.
ನಾವು ಶುಶ್ರೂಷೆಯನ್ನು ಪೂರೈಸುವುದಕ್ಕೆ ಎಚ್ಚರದಿಂದಿರುವ ಮೂಲಕ, ಇತರ ಯಾವುವೇ ಅಭಿರುಚಿಗಳು ಹಾಗೂ ಚಟುವಟಿಕೆಗಳು ಯೆಹೋವನು ನಮಗೆ ವಹಿಸಿಕೊಟ್ಟಿರುವ ಕೆಲಸದಿಂದ ನಮ್ಮ ಸಮಯವನ್ನು ದೋಚದಂತೆ ನಿಶ್ಚಿತಪಡಿಸುವೆವು. ಈ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದ ಮೂಲಕ ಒದಗಿಸಲಾಗುವ ಶಾಸ್ತ್ರೀಯ ಪ್ರೋತ್ಸಾಹವು, ಶುಶ್ರೂಷೆಯನ್ನು ಪೂರ್ಣವಾಗಿ ಪೂರೈಸಲು ನಾವೇನನ್ನು ಮಾಡುವ ಅಗತ್ಯವಿದೆ ಎಂಬುದನ್ನು ಪರ್ಯಾಲೋಚಿಸಲು ನಮಗೆಲ್ಲರಿಗೆ ಸಹಾಯವನ್ನು ನೀಡತಕ್ಕದ್ದು.