ಯಾವಾಗ ಬೈಬಲನ್ನು ತೆರೆದು ಓದಬೇಕು ಮತ್ತು ಪತ್ರಿಕೆಗಳನ್ನು ಹೇಗೆ ನೀಡಬೇಕು?
ಲಕ್ಷಾಂತರ ಜನರ ಜೀವಿತಗಳನ್ನು ಬೈಬಲ್ ಆಳವಾಗಿ ಪ್ರಭಾವಿಸಿದೆ. ಬೈಬಲ್ ದೇವರ ವಾಕ್ಯವಾಗಿರುವುದರಿಂದ, ನಾವು ಹೇಳುವ ಯಾವುದೇ ವಿಚಾರಗಳಿಗಿಂತ ಬೈಬಲ್ ಹೇಳುವ ವಿಚಾರಗಳು ಜನರನ್ನು ಹೆಚ್ಚು ಪ್ರಚೋದಿಸುತ್ತವೆ. (ಇಬ್ರಿ. 4:12) ನಾವು ತಿಳಿಸುವ ಸಂದೇಶವು ನಮ್ಮ ಸ್ವಂತದ್ದಲ್ಲ, ಬದಲಿಗೆ ದೇವರ ವಾಕ್ಯದ ಮೇಲೆ ಆಧಾರಿತವಾಗಿದೆ ಎಂಬುದನ್ನು ಜನರು ಮನಗಾಣಬೇಕೆಂಬುದೇ ನಮ್ಮ ಬಯಕೆಯಾಗಿದೆ. ಕೆಲವರು ಕ್ರೈಸ್ತರನ್ನು ಗೌರವಿಸದಿದ್ದರೂ ಬೈಬಲನ್ನು ತುಂಬಾ ಗೌರವಿಸುತ್ತಾರೆ. ಆದುದರಿಂದ ಯಾರು ಕೇಳುತ್ತಾರೋ ಅಂಥವರಿಗೆ ನೇರವಾಗಿ ಬೈಬಲ್ನಿಂದಲೇ ಓದಿ ಹೇಳುತ್ತೇವೆ.
ಆದರೆ ನಾವು ಸಾರುತ್ತಿರುವ ಟೆರಿಟೊರಿಯಲ್ಲಿ ಬೈಬಲಿನ ಸಂದೇಶವನ್ನೇ ವಿರೋಧಿಸುವಂಥ ಮತ್ತು ನಮ್ಮ ಸಾರ್ವಜನಿಕ ಶುಶ್ರೂಷೆಗೆ ಅಡ್ಡಿತರುವಂಥ ಕೆಲವು ಜನರಿರುವುದಾದರೆ ಆಗೇನು? ಅಂಥ ಸಂದರ್ಭಗಳಲ್ಲಿ, ಮನೆಯವನು ನಿಜವಾಗಿಯೂ ಬೈಬಲ್ ಸಂದೇಶವನ್ನು ಕೇಳಲು ಆಸಕ್ತನಾಗಿದ್ದಾನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಮೊದಲೇ ಬೈಬಲನ್ನು ತೆರೆದು ಓದುವುದಾದರೆ, ಅದು ನಮ್ಮ ಸಂದೇಶವನ್ನು ಕೇಳದಂತೆ ಅವನನ್ನು ತಡೆಯಸಾಧ್ಯವಿದೆ. (ಮತ್ತಾ. 10:11) ಬೈಬಲನ್ನು ನೋಡಿದ ತಕ್ಷಣ ಅವನಿಗೆ ನಮ್ಮ ಬಗ್ಗೆ ತಪ್ಪಭಿಪ್ರಾಯ ಉಂಟಾಗುತ್ತದೆ. ಅಂಥ ಸನ್ನಿವೇಶಗಳಲ್ಲಿ ನಾವು ಅಪೊಸ್ತಲ ಪೌಲನ ಮಾದರಿಯನ್ನು ಅನುಸರಿಸಸಾಧ್ಯವಿದೆ. ಪೌಲನು ಅಥೇನೆಯ ಅರಿಯೋಪಾಗದಲ್ಲಿ ಗ್ರೀಕರೊಂದಿಗೆ ಮಾತಾಡುತ್ತಿದ್ದಾಗ ಶಾಸ್ತ್ರವನ್ನು ಉಲ್ಲೇಖಿಸುತ್ತಾ ತನ್ನ ಸಂಭಾಷಣೆಯನ್ನು ಪ್ರಾರಂಭಿಸಲಿಲ್ಲ. ಬದಲಿಗೆ ಅವರು ಈಗಾಗಲೇ ತಿಳಿದಿದ್ದ ಮತ್ತು ಒಪ್ಪುವಂಥ ವಿಚಾರಗಳ ಕುರಿತು ಮಾತನಾಡಲು ಪ್ರಾರಂಭಿಸಿದನು. ಅನಂತರ ತರ್ಕಬದ್ಧವಾಗಿ, ಸೃಷ್ಟಿಕರ್ತನು ಹಾಗೂ ಆತನ ಉದ್ದೇಶಗಳ ಕಡೆಗೆ ತನ್ನ ಸಂಭಾಷಣೆಯನ್ನು ಕೊಂಡೊಯ್ದನು.—ಅ. ಕೃ. 17:22-31.
ತದ್ರೀತಿ, ಮನೆಯವನಿಗೆ ಇಷ್ಟವಾಗಬಹುದಾದ ಯಾವುದಾದರೊಂದು ವಿಷಯದ ಕುರಿತು ಸಂಭಾಷಣೆ ಆರಂಭಿಸಲು ಪ್ರಯತ್ನಿಸಿರಿ. ಒಮ್ಮೆ ಸಂಭಾಷಣೆ ಪ್ರಾರಂಭವಾದ ಮೇಲೆ ಅದನ್ನು ಜಾಣ್ಮೆಯಿಂದ ರಾಜ್ಯ ಸಂದೇಶಕ್ಕೆ ತಿರುಗಿಸಿರಿ. ‘ದೇವರು,’ ‘ಸೃಷ್ಟಿಕರ್ತ’ ಎಂಬ ಪದಗಳನ್ನು ಅಥವಾ ನಿಮ್ಮ ಸಂದೇಶವು ಆಧ್ಯಾತ್ಮಿಕ ವಿಷಯದ ಕುರಿತಾಗಿದೆ ಎಂಬುದನ್ನು ಸೂಚಿಸುವ ಬೇರೆ ಯಾವುದೇ ಅಭಿವ್ಯಕ್ತಿಗಳನ್ನು ನೀವು ಉಪಯೋಗಿಸಿದ ಕೂಡಲೆ, ಅದಕ್ಕೆ ಮನೆಯವನು ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಗಮನಿಸಿರಿ. ಒಂದು ವೇಳೆ ಆ ವ್ಯಕ್ತಿಯು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತನಾಗಿ ಕಂಡುಬರುವುದಾದರೆ, ಚರ್ಚಿಸುತ್ತಿರುವ ವಿಷಯದ ಕುರಿತು ಬೈಬಲ್ನಿಂದ ಒಂದು ವಚನವನ್ನು ಓದಲೋ ಎಂದು ನೀವು ಕೇಳಬಹುದು. “ಬೈಬಲ್” ಎಂಬ ಪದವನ್ನು ಉಪಯೋಗಿಸುವುದು ನಮ್ಮ ವಿಚಾರವನ್ನು ಕೇಳದಂತೆ ಅವರಲ್ಲಿ ಒಂದು ಮಾನಸಿಕ ತಡೆ ಉಂಟುಮಾಡುವುದೆಂದು ನಿಮಗೆ ಅನಿಸುವಲ್ಲಿ “ಪವಿತ್ರ ಶಾಸ್ತ್ರ” ಅಥವಾ “ಪುರಾತನ ಗ್ರಂಥ” ಎಂಬಂಥ ಪದಗಳನ್ನು ಬಳಸಬಹುದು. ಅಥವಾ ನೀವು ಕೇವಲ ವಚನದ ತಾತ್ಪರ್ಯವನ್ನು ವಿವರಿಸಬಹುದು. ಏನನ್ನು ಹೇಳಬಾರದು ಎಂಬುದನ್ನು ಆಲೋಚಿಸಿ ತಿಳಿದುಕೊಳ್ಳುವುದು ಜಾಣ್ಮೆಯಲ್ಲಿ ಸೇರಿದೆ. (ಯೋಹಾ. 16:12) ಆದರೆ ಅದೇ ಸಮಯದಲ್ಲಿ, ವ್ಯಕ್ತಿಗೆ ಬೈಬಲಿನ ಕಡೆಗೆ ಗೌರವವಿದೆ ಮತ್ತು ಅವನು ನಮ್ಮ ಸಂದೇಶವನ್ನು ಕೇಳಲು ಬಯಸುತ್ತಾನಾದರೆ ಬೈಬಲನ್ನು ತೆರೆದು ಓದಲು ನಾವು ಹಿಂಜರಿಯಬಾರದು.—ಯೋಹಾ. 10:27.
ಸಾಹಿತ್ಯಗಳನ್ನು ನೀಡುವುದರ ಕುರಿತೇನು? ದೀರ್ಘಕಾಲದಿಂದಲೂ, ನಮ್ಮ ಬೈಬಲಾಧಾರಿತ ಸಾಹಿತ್ಯವು ರಾಜ್ಯದ ಕುರಿತ ಜ್ಞಾನವನ್ನು ನೀಡುವುದರಲ್ಲಿ ಮತ್ತು ಆಸಕ್ತಿಯನ್ನು ಹುಟ್ಟಿಸಿ ಬೆಳೆಸುವುದರಲ್ಲಿ ಪರಿಣಾಮಕಾರಿಯಾಗಿದೆ. ಆದರೆ ಸಾಹಿತ್ಯ ನೀಡುವಾಗಲೂ ವಿವೇಚನೆಯುಳ್ಳವರಾಗಿರುವುದು ಅಗತ್ಯ. ಏಕೆಂದರೆ, ನಾವು ಮತಾಂತರ ಮಾಡಲಿಕ್ಕಾಗಿ ಸಾಹಿತ್ಯಗಳನ್ನು ನೀಡುತ್ತೇವೆಂದು ಕೆಲವು ಜನರು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು. ಯಾರು ನಿಜವಾಗಿಯೂ ಓದಲು ಇಷ್ಟಪಡುತ್ತಾರೋ ಮತ್ತು ಅವುಗಳಿಂದ ಪ್ರಯೋಜನ ಪಡೆಯಲು ಬಯಸುತ್ತಾರೋ ಅಂಥವರಿಗೆ ನಾವು ನಮ್ಮ ಸಾಹಿತ್ಯಗಳನ್ನು ಕೊಡಲು ಬಯಸುತ್ತೇವೆ. ಆದ್ದರಿಂದ, ಶುಶ್ರೂಷೆಯಲ್ಲಿ ಬೈಬಲ್ ಮತ್ತು ನಮ್ಮ ಸಾಹಿತ್ಯಗಳ ಅತ್ಯುತ್ತಮ ಉಪಯೋಗವನ್ನು ಮಾಡಲಿಕ್ಕಾಗಿ ನಾವು ಮನೆಯವನ ಮನಃಸ್ಥಿತಿ ಹೇಗಿದೆಯೆಂಬುದನ್ನು ಅರಿತುಕೊಳ್ಳುವುದು ಅವಶ್ಯಕ.—ಜ್ಞಾನೋ. 1:5, 7ಬಿ.