‘ಅವನ ಹೆಜ್ಜೆಯ ಜಾಡನ್ನು’ ನಿಕಟವಾಗಿ ಅನುಸರಿಸಿರಿ
1. ನಾವು ಹೇಗೆ ಪರಿಣಾಮಕಾರಿಯಾದ ಶುಶ್ರೂಷಕರಾಗಬಲ್ಲೆವು?
1 ಯೇಸು ರಬ್ಬಿಗಳ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆಯಲಿಲ್ಲವಾದರೂ ಅವನು ಇತಿಹಾಸದಲ್ಲೇ ಅತ್ಯಂತ ಮಹಾನ್ ಶುಶ್ರೂಷಕನಾಗಿದ್ದನು. ಸಂತೋಷದ ವಿಷಯವೇನೆಂದರೆ ಯೇಸುವಿನ ಶುಶ್ರೂಷೆಯ ಕುರಿತಾದ ಲಿಖಿತ ದಾಖಲೆಯು ನಮ್ಮ ಪ್ರಯೋಜನಕ್ಕಾಗಿ ಸಂರಕ್ಷಿಸಲ್ಪಟ್ಟಿದೆ. ನಾವು ಪರಿಣಾಮಕಾರಿಯಾದ ಶುಶ್ರೂಷಕರಾಗಬೇಕಾದರೆ ‘ಅವನ ಹೆಜ್ಜೆಯ ಜಾಡನ್ನು’ ನಿಕಟವಾಗಿ ಅನುಸರಿಸಬೇಕು.—1 ಪೇತ್ರ 2:21.
2. ಜನರ ಕಡೆಗೆ ಕ್ರಿಸ್ತನಲ್ಲಿದ್ದಂಥ ಪ್ರೀತಿಯನ್ನು ಬೆಳೆಸಿಕೊಳ್ಳಲು ನಮಗೆ ಯಾವುದು ಸಹಾಯಮಾಡುವುದು?
2 ಜನರಿಗೆ ಪ್ರೀತಿಯನ್ನು ತೋರಿಸಿರಿ: ಜನರ ಕಡೆಗಿನ ಪ್ರೀತಿಭರಿತ ಕಾಳಜಿಯು ಯೇಸುವನ್ನು ಪ್ರಚೋದಿಸಿತು. (ಮಾರ್ಕ 6:30-34) ನಮ್ಮ ಟೆರಿಟೊರಿಯಲ್ಲಿರುವ ಅನೇಕರು “ವೇದನೆಪಡುತ್ತಾ” ಇದ್ದಾರೆ ಮತ್ತು ಸತ್ಯವು ಅವರಿಗೆ ಅತ್ಯಗತ್ಯವಾಗಿ ಬೇಕಾಗಿದೆ. (ರೋಮಾ. 8:22) ಅವರ ಶೋಚನೀಯ ಸ್ಥಿತಿಯ ಕುರಿತು ಮತ್ತು ಅವರ ಕಡೆಗಿನ ಯೆಹೋವನ ಪ್ರೀತಿಭರಿತ ಆಸಕ್ತಿಯ ಕುರಿತು ನಾವು ಆಲೋಚಿಸುವುದು ಸಾರುವುದರಲ್ಲಿ ಪಟ್ಟುಹಿಡಿಯುವಂತೆ ನಮ್ಮನ್ನು ಪ್ರಚೋದಿಸುವುದು. (2 ಪೇತ್ರ 3:9) ಮಾತ್ರವಲ್ಲದೆ, ನಾವು ಅವರ ವಿಷಯದಲ್ಲಿ ನಿಜವಾಗಿಯೂ ಚಿಂತಿಸುತ್ತೇವೆ ಎಂಬುದನ್ನು ಜನರು ಗ್ರಹಿಸುವುದಾದರೆ ಅವರು ನಮ್ಮ ಸಂದೇಶಕ್ಕೆ ಹೆಚ್ಚು ಸಿದ್ಧಮನಸ್ಸಿನಿಂದ ಪ್ರತಿಕ್ರಿಯೆ ತೋರಿಸುವರು.
3. ಯಾವೆಲ್ಲಾ ಸಂದರ್ಭಗಳಲ್ಲಿ ಯೇಸು ಇತರರಿಗೆ ಸಾರಿದನು?
3 ಪ್ರತಿಯೊಂದು ಸಂದರ್ಭದಲ್ಲೂ ಮಾತಾಡಿರಿ: ಯೇಸು ಇತರರಿಗೆ ಸುವಾರ್ತೆಯನ್ನು ಸಾರಲು ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿದನು. (ಮತ್ತಾ. 4:23; 9:9; ಯೋಹಾ. 4:7-10) ತದ್ರೀತಿಯಲ್ಲಿ ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುವಾಗ ಸತ್ಯದ ಕುರಿತು ಮಾತಾಡಲು ಯಾವಾಗಲೂ ಸಿದ್ಧರಾಗಿರಬೇಕು. ಕೆಲವರು ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಪ್ರಯಾಣಿಸುತ್ತಿರುವಾಗ, ಷಾಪಿಂಗ್ ಮಾಡುತ್ತಿರುವಾಗ ಇತ್ಯಾದಿ ಸಮಯಗಳಲ್ಲಿ ಸಾಕ್ಷಿಕೊಡುವಂತಾಗಲು ತಮ್ಮೊಂದಿಗೆ ಬೈಬಲ್ ಮತ್ತು ಸಾಹಿತ್ಯವನ್ನು ಇಟ್ಟುಕೊಂಡಿರುತ್ತಾರೆ.
4. ನಾವು ರಾಜ್ಯವನ್ನು ನಮ್ಮ ಸಾರುವಿಕೆಯ ಪ್ರಧಾನ ವಿಷಯವಾಗಿ ಹೇಗೆ ಮಾಡಬಲ್ಲೆವು?
4 ರಾಜ್ಯದ ಕಡೆಗೆ ಗಮನವನ್ನು ಕೇಂದ್ರೀಕರಿಸಿರಿ: ರಾಜ್ಯದ ಸುವಾರ್ತೆಯು ಯೇಸುವಿನ ಸಾರುವಿಕೆಯ ಪ್ರಧಾನ ವಿಷಯವಾಗಿತ್ತು. (ಲೂಕ 4:43) ನಾವು ನೇರವಾಗಿ ಅಥವಾ ನಮ್ಮ ಪ್ರಸ್ತಾವನೆಯ ಆರಂಭದಲ್ಲೇ ರಾಜ್ಯದ ಕುರಿತು ತಿಳಿಸಲಿಕ್ಕಿಲ್ಲವಾದರೂ ಅದರ ಜರೂರಿಯನ್ನು ಮನೆಯವನು ತಿಳಿದುಕೊಳ್ಳುವಂತೆ ಮಾಡುವುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ. ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದಕ್ಕೆ ಕೈತೋರಿಸುವ ಲೋಕದ ಕೆಟ್ಟ ಪರಿಸ್ಥಿತಿಗಳ ಕುರಿತು ತಿಳಿಸುವಾಗಲೂ ನಾವು ಮುಖ್ಯವಾಗಿ ‘ಶುಭದ ಸುವಾರ್ತೆಯನ್ನು ಸಾರುತ್ತೇವೆ.’—ರೋಮಾ. 10:15.
5. ನಮ್ಮ ಶುಶ್ರೂಷೆಯು ಪರಿಣಾಮಕಾರಿಯಾಗಿರಬೇಕಾದರೆ ಬೈಬಲ್ ಯಾವ ಪಾತ್ರವನ್ನು ವಹಿಸಬೇಕು?
5 ದೇವರ ವಾಕ್ಯದ ಮೇಲೆ ಅವಲಂಬಿಸಿರಿ: ಯೇಸು ತನ್ನ ಶುಶ್ರೂಷೆಯಾದ್ಯಂತ ಶಾಸ್ತ್ರಗ್ರಂಥದ ಮೇಲೆ ಅವಲಂಬಿಸಿದ್ದನು. ಅವನು ತನ್ನ ಸ್ವಂತ ಇಚ್ಛೆಯಿಂದ ಏನನ್ನೂ ಬೋಧಿಸಲಿಲ್ಲ. (ಯೋಹಾ. 7:16, 18) ಅವನು ದೇವರ ವಾಕ್ಯದಿಂದ ತನ್ನನ್ನು ಪೋಷಿಸಿಕೊಂಡು ಸೈತಾನನ ದಾಳಿಯನ್ನು ಎದುರಿಸಿದಾಗ ಅದನ್ನು ತನಗೇ ಅನ್ವಯಿಸಿಕೊಂಡನು. (ಮತ್ತಾ. 4:1-4) ನಾವು ಇತರರಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕಾದರೆ ಬೈಬಲನ್ನು ದಿನಾಲೂ ಓದಬೇಕು ಮತ್ತು ವೈಯಕ್ತಿಕ ಅನ್ವಯವನ್ನು ಮಾಡಬೇಕು. (ರೋಮಾ. 2:21) ಶುಶ್ರೂಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ನಾವು ಏನನ್ನು ಹೇಳುತ್ತೇವೋ ಅದಕ್ಕೆ ಶಾಸ್ತ್ರೀಯ ಆಧಾರವನ್ನು ಕೊಡಬೇಕು ಮತ್ತು ಸಾಧ್ಯವಿರುವಲ್ಲೆಲ್ಲಾ ನೇರವಾಗಿ ಬೈಬಲಿನಿಂದ ಓದಿ ತೋರಿಸಬೇಕು. ನಾವು ವೈಯಕ್ತಿಕ ಅಭಿಪ್ರಾಯಗಳನ್ನು ತಿಳಿಸುತ್ತಿಲ್ಲ, ಬದಲಿಗೆ ದೇವರ ಆಲೋಚನೆಗಳ ಮೇಲೆ ಆಧರಿಸಿ ಮಾತಾಡುತ್ತಿದ್ದೇವೆ ಎಂಬುದನ್ನು ಮನೆಯವನು ಗ್ರಹಿಸಬೇಕೆಂಬುದು ನಮ್ಮ ಬಯಕೆ.
6. ಯೇಸು ತನಗೆ ಕಿವಿಗೊಡುತ್ತಿದ್ದವರ ಹೃದಯಗಳನ್ನು ತಲಪಲು ಏನು ಮಾಡಿದನು?
6 ಬೋಧಿಸುವಾಗ ಹೃದಯವನ್ನು ತಲಪಿರಿ: “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ.” (ಯೋಹಾ. 7:46) ಯೇಸುವಿನ ಕುರಿತಾಗಿ ಈ ಮಾತನ್ನು ಓಲೇಕಾರರು ತಿಳಿಸಿದರು. ಯೇಸುವನ್ನು ಏಕೆ ಬಂಧಿಸಲಿಲ್ಲವೆಂದು ಮುಖ್ಯ ಯಾಜಕರೂ ಫರಿಸಾಯರೂ ಅವರನ್ನು ಕೇಳಿದಾಗ ಅವರು ಕೊಟ್ಟ ಉತ್ತರವು ಇದಾಗಿತ್ತು. ಕೇವಲ ವಾಸ್ತವಾಂಶಗಳನ್ನು ಪ್ರಸ್ತುತಪಡಿಸುವ ಬದಲಿಗೆ ತಾನು ಯಾರಿಗೆ ಉಪದೇಶಿಸಿದನೋ ಅವರ ಹೃದಯಗಳನ್ನು ತಲಪುವ ರೀತಿಯಲ್ಲಿ ಯೇಸು ಬೋಧಿಸಿದನು. (ಲೂಕ 24:32) ತನ್ನ ಮಾತುಗಳಿಗೆ ಜೀವತುಂಬಿಸುವ ಸಲುವಾಗಿ ಅವನು ನಿಜ ಜೀವನಕ್ಕೆ ಸಂಬಂಧಪಟ್ಟ ದೃಷ್ಟಾಂತಗಳನ್ನು ಉಪಯೋಗಿಸಿದನು. (ಮತ್ತಾ. 13:34) ಯೇಸು ತುಂಬ ಮಾಹಿತಿಯನ್ನು ಕೊಡುವ ಮೂಲಕ ತನಗೆ ಕಿವಿಗೊಡುತ್ತಿದ್ದವರನ್ನು ಮೂಕವಿಸ್ಮಿತಗೊಳಿಸಲಿಲ್ಲ. (ಯೋಹಾ. 16:12) ಅವನು ಜನರ ಗಮನವನ್ನು ತನ್ನ ಕಡೆಗೆ ಅಲ್ಲ, ಯೆಹೋವನ ಕಡೆಗೆ ಸೆಳೆದನು. ನಾವು ನಮ್ಮ ‘ಉಪದೇಶದ ವಿಷಯದಲ್ಲಿ [ಸದಾ] ಎಚ್ಚರಿಕೆಯಾಗಿರುವ’ ಮೂಲಕ ಮಾತ್ರವೇ ಯೇಸುವಿನಂತೆ ಒಳ್ಳೆಯ ಬೋಧಕರಾಗಬಲ್ಲೆವು.—1 ತಿಮೊ. 4:16.
7. ಯೇಸು ಶುಶ್ರೂಷೆಯಲ್ಲಿ ಯಾಕೆ ಪಟ್ಟುಹಿಡಿದನು?
7 ನಿರಾಸಕ್ತಿ ಮತ್ತು ವಿರೋಧದ ಹೊರತಾಗಿಯೂ ಪಟ್ಟುಹಿಡಿಯಿರಿ: ಯೇಸು ಮಹತ್ಕಾರ್ಯಗಳನ್ನು ಮಾಡಿದನಾದರೂ ಅನೇಕರು ಅವನಿಗೆ ಕಿವಿಗೊಡಲಿಲ್ಲ. (ಲೂಕ 10:13) ಯೇಸುವಿನ ಸ್ವಂತ ಕುಟುಂಬದವರು ಸಹ ಅವನಿಗೆ “ಹುಚ್ಚುಹಿಡಿದದೆ” ಎಂದು ನೆನಸಿದರು. (ಮಾರ್ಕ 3:21) ಆದರೂ ಯೇಸು ಪಟ್ಟುಹಿಡಿದು ಮುಂದುವರಿದನು. ಅವನು ಸಕಾರಾತ್ಮಕಭಾವವನ್ನು ಕಾಪಾಡಿಕೊಂಡನು; ಏಕೆಂದರೆ ಮನುಷ್ಯರನ್ನು ಬಿಡುಗಡೆಮಾಡಬಲ್ಲ ಸತ್ಯವು ತನ್ನಲ್ಲಿದೆ ಎಂಬ ದೃಢನಿಶ್ಚಯ ಅವನಿಗಿತ್ತು. (ಯೋಹಾ. 8:32) ಯೆಹೋವನ ಸಹಾಯದೊಂದಿಗೆ ನಾವು ಸಹ ಧೈರ್ಯಗೆಟ್ಟು ಹಿಂದೆಗೆಯದಿರುವ ದೃಢತೀರ್ಮಾನವನ್ನು ಮಾಡಿದ್ದೇವೆ.—2 ಕೊರಿಂ. 4:1.
8, 9. ಸುವಾರ್ತೆಗೋಸ್ಕರ ತ್ಯಾಗಗಳನ್ನು ಮಾಡುವ ವಿಷಯದಲ್ಲಿ ನಾವು ಹೇಗೆ ಯೇಸುವನ್ನು ಅನುಕರಿಸಸಾಧ್ಯವಿದೆ?
8 ಪೂರ್ಣವಾಗಿ ಪಾಲ್ಗೊಳ್ಳಲು ಅಗತ್ಯವಿರುವ ತ್ಯಾಗಗಳನ್ನು ಮಾಡಿರಿ: ಯೇಸು ಶುಶ್ರೂಷೆಗೋಸ್ಕರ ಆರಾಮದಾಯಕ ಜೀವನವನ್ನು ತ್ಯಾಗಮಾಡಿದನು. (ಮತ್ತಾ. 8:20) ಅವನು ಕೆಲವೊಮ್ಮೆ ಸಾಯಂಕಾಲ ಬಹಳ ಹೊತ್ತಿನ ವರೆಗೂ ಎಡೆಬಿಡದೆ ಸಾರಿದ್ದುಂಟು. (ಮಾರ್ಕ 6:35, 36) ತನ್ನ ಕೆಲಸವನ್ನು ಪೂರೈಸಲು ಸ್ವಲ್ಪ ಸಮಯ ಮಾತ್ರ ಇತ್ತು ಎಂಬುದು ಯೇಸುವಿಗೆ ತಿಳಿದಿತ್ತು. “ಸಮಯವು ಸಂಕೋಚವಾದದ್ದರಿಂದ” ಅಥವಾ ಕಡಿಮೆಯಿರುವುದರಿಂದ ನಾವು ಸಹ ಯೇಸುವಿನ ಅನುಕರಣೆಯಲ್ಲಿ ನಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳ ವಿಷಯದಲ್ಲಿ ವೈಯಕ್ತಿಕ ತ್ಯಾಗಗಳನ್ನು ಮಾಡಬೇಕು.—1 ಕೊರಿಂ. 7:29-31.
9 ಪ್ರಥಮ ಶತಮಾನದ ಕ್ರೈಸ್ತರು ಯೇಸುವಿನಿಂದ ಕಲಿತದ್ದರಿಂದ ಪರಿಣಾಮಕಾರಿಯಾದ ಶುಶ್ರೂಷಕರಾಗಿದ್ದರು. (ಅ. ಕೃ. 4:13) ನಾವು ಸಹ ಇತಿಹಾಸದಲ್ಲೇ ಅತ್ಯಂತ ಮಹಾನ್ ಶುಶ್ರೂಷಕನನ್ನು ಅನುಕರಿಸುವುದಾದರೆ ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ನೆರವೇರಿಸಬಲ್ಲೆವು.—2 ತಿಮೊ. 4:5.