ಪ್ರಗತಿಪರ ಶುಶ್ರೂಷಕರಾಗಿರಿ
1 ತನ್ನ ಸೇವಕರು ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವಾಗ ನಮ್ಮ ಸ್ವರ್ಗೀಯ ತಂದೆಯು ಸಂತೋಷಿಸುತ್ತಾನೆ. ಈ ಪ್ರಗತಿಯಲ್ಲಿ ಸುವಾರ್ತೆಯ ಪ್ರೌಢ ಮತ್ತು ಪರಿಣಾಮಕಾರಿ ಶುಶ್ರೂಷಕರಾಗುವುದೂ ಸೇರಿದೆ. ಮೇಲ್ವಿಚಾರಕನಾದ ತಿಮೊಥೆಯನು ತನ್ನ ಅಭಿವೃದ್ಧಿಯು ಪ್ರಸಿದ್ಧವಾಗುವಂತೆ ವೇದಪಾರಾಯಣ ಮಾಡುವುದರಲ್ಲಿಯೂ ಉಪದೇಶ ಮಾಡುವುದರಲ್ಲಿಯೂ ಆಸಕ್ತನಾಗಿರಬೇಕೆಂದು ಪೌಲನು ಅವನನ್ನು ಉತ್ತೇಜಿಸಿದನು. (1 ತಿಮೊ. 4:13-15) ನಮ್ಮ ಮಧ್ಯೆಯಿರುವ ಅನುಭವಿ ಪ್ರಚಾರಕರನ್ನು ಸೇರಿಸಿ ನಾವೆಲ್ಲರು ನಮ್ಮ ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು.
2 ವೈಯಕ್ತಿಕ ಗುರಿಗಳನ್ನು ಇಡಿರಿ: ಪ್ರಗತಿಯನ್ನು ಮಾಡಬೇಕಾದರೆ ವೈಯಕ್ತಿಕ ಗುರಿಗಳನ್ನಿಡುವ ಅಗತ್ಯವಿದೆ. ನಾವು ನಮಗೋಸ್ಕರ ಇಡಬಹುದಾದ ಕೆಲವು ಗುರಿಗಳು ಯಾವುವು? ನಮ್ಮ ಆಧ್ಯಾತ್ಮಿಕ ಕತ್ತಿಯಾದ ಬೈಬಲನ್ನು ಇನ್ನಷ್ಟು ಕುಶಲತೆಯಿಂದ ಉಪಯೋಗಿಸಲು ನಾವು ಪ್ರಯತ್ನಿಸಬಹುದು. (ಎಫೆ. 6:17) ಒಂದುವೇಳೆ ಬೀದಿ ಸಾಕ್ಷಿಕಾರ್ಯ, ಟೆಲಿಫೋನ್ ಸಾಕ್ಷಿಕಾರ್ಯ ಅಥವಾ ವ್ಯಾಪಾರ ಕ್ಷೇತ್ರದಲ್ಲಿನ ಸಾಕ್ಷಿಕಾರ್ಯ ಮುಂತಾದ ಶುಶ್ರೂಷೆಯ ಯಾವುದಾದರೊಂದು ವೈಶಿಷ್ಟ್ಯದಲ್ಲಿ ನಾವು ಪ್ರಗತಿಮಾಡುವ ಅಗತ್ಯವಿರಬಹುದು. ಒಂದುವೇಳೆ ಪುನರ್ಭೇಟಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನಾವು ಪ್ರಯತ್ನಿಸಸಾಧ್ಯವಿದೆ. ನಾವು ಇಡಬಹುದಾದ ಇನ್ನೊಂದು ಅತ್ಯುತ್ತಮ ಗುರಿಯು ಬೈಬಲ್ ಅಧ್ಯಯನಗಳನ್ನು ಆರಂಭಿಸಿ ನಡೆಸುವುದರಲ್ಲಿನ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಗೊಳಿಸುವುದೇ ಆಗಿದೆ.
3 ಸಹಾಯಕಗಳು: ಶುಶ್ರೂಷಕರಾಗಿ ನಾವು ಪ್ರಗತಿಮಾಡುವಂತೆ ಸಹಾಯಮಾಡಲು ಸಭಾ ಕೂಟಗಳು, ಮುಖ್ಯವಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟವು ರಚಿಸಲ್ಪಟ್ಟಿವೆ. ಈ ಕೂಟಗಳಿಗೆ ತಯಾರಿಸಿ, ಹಾಜರಾಗಿ, ಕೊಡಲ್ಪಡುವ ಸಲಹೆಗಳನ್ನು ಅನ್ವಯಿಸಲು ನಾವು ಎಷ್ಟು ಹೆಚ್ಚು ಪ್ರಯತ್ನಿಸುತ್ತೇವೋ ಅಷ್ಟು ಹೆಚ್ಚು ಪ್ರಯೋಜನಗಳನ್ನು ಖಂಡಿತವಾಗಿಯೂ ಪಡೆಯುವೆವು.—2 ಕೊರಿಂ. 9:6.
4 ಮಾತ್ರವಲ್ಲದೆ, ಪ್ರಗತಿಮಾಡುವಂತೆ ನಾವು ಒಬ್ಬರು ಇನ್ನೊಬ್ಬರಿಗೆ ಸಹಾಯಮಾಡುವ ಅಗತ್ಯವೂ ಇದೆ. (ಜ್ಞಾನೋ. 27:17) ಶುಶ್ರೂಷೆಯಲ್ಲಿ ನಾವು ಯಾರೊಂದಿಗೆ ಕೆಲಸಮಾಡುತ್ತೇವೊ ಅವರ ನಿರೂಪಣೆಯನ್ನು ಕಿವಿಗೊಟ್ಟು ಕೇಳುವುದು ಪ್ರಗತಿಮಾಡುವಂತೆ ನಮಗೆ ಸಹಾಯಮಾಡುವುದು. ಇದಕ್ಕೆ ಕೂಡಿಕೆಯಾಗಿ ನಮ್ಮ ಪುಸ್ತಕ ಅಧ್ಯಯನದ ಮೇಲ್ವಿಚಾರಕನು ನಮಗೆ ವೈಯಕ್ತಿಕ ನೆರವನ್ನು ನೀಡಲು ಏರ್ಪಾಡನ್ನು ಮಾಡಬಹುದು. ನಾವು ಶುಶ್ರೂಷೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಹೆಚ್ಚಿನ ಆನಂದವನ್ನು ಪಡೆದುಕೊಳ್ಳುವಂತಾಗಲು ಒಬ್ಬ ಅನುಭವಿ ಪಯನೀಯರ್ ಅಥವಾ ಪ್ರಚಾರಕನು ಸಹಾಯಮಾಡುವುದಾದರೆ ಅದು ಎಂಥ ಆಶೀರ್ವಾದವಾಗಿದೆ! ನಮ್ಮ ಪುಸ್ತಕ ಅಧ್ಯಯನದ ಗುಂಪಿನಲ್ಲಿ ಒಬ್ಬ ಹೊಸ ಪ್ರಚಾರಕನಿದ್ದಾನೊ? ಒಂದುವೇಳೆ ನಮ್ಮೊಂದಿಗೆ ಕ್ಷೇತ್ರದಲ್ಲಿ ಕೆಲಸಮಾಡುವಂತೆ ಅವನನ್ನು ಆಮಂತ್ರಿಸಲು ನಾವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಸಾಧ್ಯವಿದೆ.
5 ಇಂದು ಮಾಡಲಾಗುತ್ತಿರುವ ಅತಿ ಪ್ರಾಮುಖ್ಯ ಕೆಲಸವು ಕ್ರೈಸ್ತ ಶುಶ್ರೂಷೆಯೇ ಆಗಿದೆ. ನಾವು ಯೆಹೋವನಿಗೆ ನಮ್ಮ “ಸ್ತೋತ್ರಯಜ್ಞವನ್ನು” ಸಲ್ಲಿಸುತ್ತಿರುವಾಗ ನಮ್ಮಿಂದಾದಷ್ಟು ಉತ್ತಮವಾದದ್ದನ್ನು ಕೊಡಲು ಬಯಸುತ್ತೇವೆ. (ಇಬ್ರಿ. 13:15) ಶುಶ್ರೂಷೆಯಲ್ಲಿ ಪ್ರಗತಿಪರರಾಗಿರಲು ನಾವು ಪ್ರಯತ್ನಿಸುವುದಾದರೆ, ‘ಅವಮಾನಕ್ಕೆ ಗುರಿಯಾಗದ ಕೆಲಸದವರೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವರೂ’ ಆಗಿರುವೆವು.—2 ತಿಮೊ. 2:15.