ಬಡವರಿಗೆ ನಿರೀಕ್ಷೆಯನ್ನು ನೀಡಿರಿ
1 ಯೇಸುವಿಗೆ ಬಡವರಲ್ಲಿ ವಿಶೇಷ ಕಾಳಜಿ ಇತ್ತು. ಅವನು ಅನೇಕ ಸಂದರ್ಭಗಳಲ್ಲಿ ಜನರಿಗೆ ಅದ್ಭುತಕರವಾಗಿ ಭೌತಿಕ ನೆರವು ನೀಡಿದನು ಮತ್ತು ರೋಗಿಗಳನ್ನು ಗುಣಪಡಿಸಿದನು. ಆದರೂ, ಅವನ ಗಮನವೆಲ್ಲ “ಬಡವರಿಗೆ ಸುವಾರ್ತೆ” ಸಾರುವುದರ ಮೇಲೆ ಕೇಂದ್ರೀಕೃತವಾಗಿತ್ತು. (ಮತ್ತಾ. 11:4, 5) ಇಂದಿಗೂ ಕ್ರೈಸ್ತ ಶುಶ್ರೂಷೆಯು ಬಡವರಿಗೆ ಮತ್ತು ಇತರರಿಗೆ ಪ್ರಯೋಜನಕರವಾಗಿದೆ.—ಮತ್ತಾ. 24:14; 28:19, 20.
2 ನಿಜವಾದ ನಿರೀಕ್ಷೆ: ಬಡವರು ಚರ್ಚುಗಳಿಗೆ ಧಾರಾಳವಾಗಿ ಕಾಣಿಕೆ ಕೊಡುವುದಾದರೆ ಅವರು ಆರ್ಥಿಕವಾಗಿ ಏಳಿಗೆ ಹೊಂದುವರೆಂದು ಕ್ರೈಸ್ತಪ್ರಪಂಚದ ಮುಖಂಡರು ಅನೇಕವೇಳೆ ಭರವಸೆ ನೀಡುತ್ತಾರೆ. ಆದರೆ ದೇವರ ರಾಜ್ಯ ಮಾತ್ರವೇ ಬಡತನವನ್ನು ಕೊನೆಗಾಣಿಸಿ ಮಾನವಕುಲದ ಸಕಲ ಸಮಸ್ಯೆಗಳನ್ನು ಬಗೆಹರಿಸುವುದೆಂದು ಬೈಬಲ್ ಬೋಧಿಸುತ್ತದೆ. (ಕೀರ್ತ. 9:18; 145:16; ಯೆಶಾ. 65:21-23) ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂಬುದನ್ನು ಬಡವರಿಗೆ ತಿಳಿಸುವ ಮೂಲಕ ನಾವು ಅವರಿಗೆ ನಿರೀಕ್ಷೆಯನ್ನು ನೀಡುತ್ತೇವೆ. ಅಲ್ಲದೆ, ಅವರ ಆಧ್ಯಾತ್ಮಿಕ ಹಸಿವನ್ನು ತಣಿಸಲಿಕ್ಕಾಗಿ ನಾವು ನೆರವು ನೀಡುತ್ತೇವೆ.—ಮತ್ತಾ. 5:3.
3 ಯೇಸುವಿನ ಕಾಲದ ಫರಿಸಾಯರು ಬಡವರನ್ನು ತಿರಸ್ಕಾರದಿಂದ ನೋಡಿ ಅವರನ್ನು ತುಚ್ಛವಾಗಿ ಆಮ್ಹಏರೆಟ್ಸ್ ಅಥವಾ “ಜಮೀನಿನ ಜನರು” ಎಂದು ಕರೆಯುತ್ತಿದ್ದರು. ಆದರೆ, ಯೇಸು ಅವರ “ಜೀವ”ಗಳನ್ನು “ಅಮೂಲ್ಯ”ವಾಗಿ ಪರಿಗಣಿಸಿದನು. (ಕೀರ್ತ. 72:13, 14) ನಾವು ಅಂಥ ಬಡಜನರಿಗೆ ದಯೆ ಮತ್ತು ಅನುಕಂಪ ತೋರಿಸುವ ಮೂಲಕ ಅವರನ್ನು ‘ಕರುಣಿಸಿ’ ಯೇಸುವನ್ನು ಅನುಸರಿಸಸಾಧ್ಯವಿದೆ. (ಜ್ಞಾನೋ. 14:31) ಬಡ ನೆರೆಹೊರೆಗಳಲ್ಲಿ ಜೀವಿಸುತ್ತಿರುವವರ ಕುರಿತು ನಾವು ಎಂದಿಗೂ ಹೀನಾಯವಾಗಿ ಮಾತಾಡಲು ಬಯಸೆವು ಇಲ್ಲವೆ ಅವರಿಗೆ ಸಾಕ್ಷಿಕೊಡಲು ಬೇಸರಿಸೆವು. ರಾಜ್ಯದ ಸಂದೇಶವನ್ನು ಅಪ್ಪಿಕೊಳ್ಳುತ್ತಿರುವ ಅನೇಕ ಜನರು ದೀನ ಬಡವರೇ ಆಗಿದ್ದಾರೆ.
4 ಈಗಲೇ ನೆರವಾಗಿ: ನಮ್ಮ ಟೆರಿಟೊರಿಯಲ್ಲಿರುವ ಬಡವರಿಗೆ ಬೈಬಲ್ ಮೂಲತತ್ತ್ವಗಳನ್ನು ಕಲಿಸುವುದು, ಅವರು ತಮ್ಮ ಬಡತನದ ತೀವ್ರತೆಯನ್ನು ಈಗಲೇ ಕಡಿಮೆಗೊಳಿಸಲು ಸಹ ನೆರವಾಗುತ್ತದೆ. ಉದಾಹರಣೆಗೆ, ಬಡತನಕ್ಕೆ ತಳ್ಳುವ ಕುಡಿಕತನ, ಜೂಜಾಟ, ಸೋಮಾರಿತನ, ತಂಬಾಕು ಸೇವನೆ ಹಾಗೂ ಮತ್ತಿತರ ನಡವಳಿಕೆಗಳನ್ನು ಬೈಬಲ್ ಖಂಡಿಸುತ್ತದೆ. (ಜ್ಞಾನೋ. 6:10, 11; 23:21; 2 ಕೊರಿಂ. 7:1; ಎಫೆ. 5:5) ಆದರೆ, ನೌಕರರಲ್ಲಿರಬೇಕಾದ ಗುಣಗಳಾದ ಪ್ರಾಮಾಣಿಕತೆ ಮತ್ತು “ಮನಃಪೂರ್ವಕವಾಗಿ” ಕೆಲಸಮಾಡುವುದನ್ನು ಅದು ಉತ್ತೇಜಿಸುತ್ತದೆ. (ಕೊಲೊ. 3:22, 23; ಇಬ್ರಿ. 13:18) ವಾಸ್ತವವಾಗಿ, ಒಂದು ಸಮೀಕ್ಷೆಯಲ್ಲಿ ಹೆಚ್ಚಿನ ಮಾಲೀಕರು ಕೆಲಸಕ್ಕಾಗಿ ಅಭ್ಯರ್ಥಿಗಳನ್ನು ಆಯ್ಕೆಮಾಡುವಾಗ ಪ್ರಾಮಾಣಿಕತೆ ಮತ್ತು ನಿಯತ್ತಿನ ಗುಣಗಳನ್ನೇ ಮೆಚ್ಚಿಕೊಂಡರು.
5 ಯೆಹೋವನು ಬಡವರ ಕಷ್ಟಸಂಕಟಗಳ ಕುರಿತು ಖಂಡಿತವಾಗಿಯೂ ಚಿಂತಿಸುತ್ತಾನೆ. ಬೇಗನೆ ಯೇಸು ಕ್ರಿಸ್ತನು ‘ಮೊರೆಯಿಡುವ ಬಡವರನ್ನು’ ಉದ್ಧರಿಸುವನು. (ಕೀರ್ತ. 72:12) ಅಷ್ಟರವರೆಗೆ, ಬೈಬಲಿನಲ್ಲಿರುವ ನಿರೀಕ್ಷೆಯ ಸಂದೇಶದಿಂದ ಬಡವಬಲ್ಲಿದರನ್ನು ಸಂತೈಸುವ ಸದವಕಾಶ ನಮಗಿದೆ.