ಸಭಾ ಪುಸ್ತಕ ಅಧ್ಯಯನದ ಏರ್ಪಾಡು ನಮಗೆ ಹೇಗೆ ಸಹಾಯಮಾಡುತ್ತದೆ?
1. ನಮ್ಮ ವಾರದ ಐದು ಕೂಟಗಳು ನಮಗೆ ಹೇಗೆ ಸಹಾಯಮಾಡುತ್ತವೆ?
1 ನಮ್ಮ ವಾರದ ಎಲ್ಲ ಐದು ಕೂಟಗಳು, ನಡೆಸಲ್ಪಡುವ ವಿಧ ಮತ್ತು ಉದ್ದೇಶದಲ್ಲಿ ಭಿನ್ನವಾಗಿವೆ. ಆದರೂ, ಅವೆಲ್ಲವೂ ‘ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸಲಿಕ್ಕಾಗಿ ಮತ್ತು ಸತ್ಕಾರ್ಯಮಾಡಲಿಕ್ಕಾಗಿ ಒಬ್ಬರನ್ನೊಬ್ಬರು ಪ್ರೇರೇಪಿಸುವಂತೆ’ ನಮಗೆ ಸಹಾಯಮಾಡುವುದರಲ್ಲಿ ತುಂಬ ಪ್ರಾಮುಖ್ಯವಾಗಿವೆ. (ಇಬ್ರಿ. 10:24, 25) ಹಾಗಾದರೆ, ಸಭಾ ಪುಸ್ತಕ ಅಧ್ಯಯನದ ಏರ್ಪಾಡಿನ ಕೆಲವೊಂದು ಅಪೂರ್ವ ಹಾಗೂ ಪ್ರಯೋಜನಕರ ಅಂಶಗಳು ಯಾವುವು?
2. ಪುಸ್ತಕ ಅಧ್ಯಯನಕ್ಕೆ ಚಿಕ್ಕ ಗುಂಪಾಗಿ ಕೂಡಿಬರುವುದರ ಪ್ರಯೋಜನಗಳೇನು?
2 ಆಧ್ಯಾತ್ಮಿಕ ಪ್ರಗತಿಗೆ ನೆರವು: ಇತರ ಸಭಾ ಕೂಟಗಳಿಗೆ ಹಾಜರಾಗುವವರ ಸಂಖ್ಯೆಗಿಂತಲೂ ಪುಸ್ತಕ ಅಧ್ಯಯನಕ್ಕೆ ಹಾಜರಾಗುವವರ ಸಂಖ್ಯೆಯು ಸಾಮಾನ್ಯವಾಗಿ ಬಹಳ ಕಡಿಮೆಯಿರುತ್ತದೆ. ಇದರಿಂದ ಆಧ್ಯಾತ್ಮಿಕ ಬೆಂಬಲ ಕೊಡುವಂಥ ಸ್ನೇಹಗಳನ್ನು ಬೆಳೆಸಿಕೊಳ್ಳುವುದು ಬಲು ಸುಲಭ. (ಜ್ಞಾನೋ. 18:24) ಬಹುಶಃ, ನಿಮ್ಮ ಪುಸ್ತಕ ಅಧ್ಯಯನ ಗುಂಪಿನಲ್ಲಿರುವ ಪ್ರತಿಯೊಬ್ಬರನ್ನು ನಿಮ್ಮೊಂದಿಗೆ ಶುಶ್ರೂಷೆಯಲ್ಲಿ ಕೆಲಸ ಮಾಡುವಂತೆ ಕೇಳಿಕೊಳ್ಳುವ ಮೂಲಕ ಅವರೆಲ್ಲರ ಪರಿಚಯ ಮಾಡಿಕೊಳ್ಳಲು ನೀವು ಪ್ರಯತ್ನಿಸಿದ್ದೀರೋ? ಪುಸ್ತಕ ಅಧ್ಯಯನದ ಮೇಲ್ವಿಚಾರಕನು ತನ್ನ ಗುಂಪಿನಲ್ಲಿರುವ ಪ್ರತಿಯೊಬ್ಬರ ಅಸಾಧಾರಣ ಪರಿಸ್ಥಿತಿಗಳನ್ನು ತಿಳಿದುಕೊಳ್ಳಲು ಹಾಗೂ ಅವರಿಗೆ ವ್ಯಕ್ತಿಪರವಾಗಿ ಪ್ರೋತ್ಸಾಹವನ್ನು ಕೊಡಲು ಸಹ ಪುಸ್ತಕ ಅಧ್ಯಯನದ ಏರ್ಪಾಡು ಸಹಾಯಮಾಡುತ್ತದೆ.—ಜ್ಞಾನೋ. 27:23.
3. ಪುಸ್ತಕ ಅಧ್ಯಯನದ ಏರ್ಪಾಡು, ಉತ್ತರ ಕೊಡುವುದನ್ನು ಮತ್ತು ಬೈಬಲ್ ವಿದ್ಯಾರ್ಥಿಗಳು ಕೂಟಕ್ಕೆ ಹಾಜರಾಗುವುದನ್ನು ಹೇಗೆ ಉತ್ತೇಜಿಸುತ್ತದೆ?
3 ನಿಮ್ಮ ಬೈಬಲ್ ವಿದ್ಯಾರ್ಥಿಗಳನ್ನು ನಿಮ್ಮೊಂದಿಗೆ ಪುಸ್ತಕ ಅಧ್ಯಯನಕ್ಕೆ ಹಾಜರಾಗಲು ಆಮಂತ್ರಿಸಿದ್ದೀರೋ? ನಮ್ಮ ದೊಡ್ಡದಾದ ಕೂಟಗಳಿಗೆ ಹಾಜರಾಗಲು ಮುಜುಗರಪಡುವ ಆಸಕ್ತರು ಹೆಚ್ಚಾಗಿ ಖಾಸಗಿ ಮನೆಯಲ್ಲಿ ನಡೆಯುವ ಚಿಕ್ಕ ಕೂಟಕ್ಕೆ ಹಾಜರಾಗಲು ಹಿಂಜರಿಯದಿರಬಹುದು. ಅಲ್ಲಿನ ಸ್ನೇಹಮಯ ವಾತಾವರಣವು ಎಳೆಯರು ಮತ್ತು ಹೊಸಬರು ಯಾವುದೇ ಸಂಕೋಚವಿಲ್ಲದೆ ಉತ್ತರ ಕೊಡುವುದನ್ನು ಸುಲಭ ಮಾಡುತ್ತದೆ. ಅಲ್ಲದೆ, ಗುಂಪು ಚಿಕ್ಕದಾಗಿರುವುದರಿಂದ ಉತ್ತರ ಕೊಡಲು ನಮಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಮತ್ತು ಆ ಮೂಲಕ ಯೆಹೋವನನ್ನು ಸ್ತುತಿಸಲು ಸಾಧ್ಯವಾಗುತ್ತದೆ—ಕೀರ್ತ. 111:1.
4. ಪುಸ್ತಕ ಅಧ್ಯಯನದ ಏರ್ಪಾಡು ಯಾವೆಲ್ಲ ವಿಧಗಳಲ್ಲಿ ಅನುಕೂಲಕರವಾಗಿರಬಹುದು?
4 ಸಾಮಾನ್ಯವಾಗಿ ಪುಸ್ತಕ ಅಧ್ಯಯನಗಳು ಟೆರಿಟೊರಿಯಾದ್ಯಂತ ಪ್ರಚಾರಕರಿಗೆ ಅನುಕೂಲವಾದ ಸ್ಥಳಗಳಲ್ಲಿ ನಡೆಸಲ್ಪಡುತ್ತವೆ. ಎಲ್ಲರನ್ನು ಅವರವರಿಗೆ ಸಮೀಪವಾಗಿರುವ ಸ್ಥಳದಲ್ಲಿನ ಗುಂಪಿಗೆ ನೇಮಿಸಲು ಸಾಧ್ಯವಿಲ್ಲದಿರಬಹುದು. ಆದರೂ, ನೇಮಿತ ಪುಸ್ತಕ ಅಧ್ಯಯನಕ್ಕೆ ಹಾಜರಾಗಲು ತಗಲುವ ಪ್ರಯಾಣದ ಸಮಯವು, ಇತರ ಸಭಾ ಕೂಟಗಳಿಗೆ ಹಾಜರಾಗಲು ತಗಲುವ ಸಮಯಕ್ಕಿಂತ ಕಡಿಮೆಯಾಗಿರಬಹುದು. ಪುಸ್ತಕ ಅಧ್ಯಯನದ ಸ್ಥಳವು ಕ್ಷೇತ್ರ ಸೇವೆಯ ಕೂಟವನ್ನು ನಡೆಸಲಿಕ್ಕೂ ಅನುಕೂಲಕರವಾದ ಸ್ಥಳವಾಗಿರಬಹುದು.
5. ಶುಶ್ರೂಷೆಯಲ್ಲಿ, ನಮ್ಮ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಂದ ನಾವು ಹೇಗೆ ಸಹಾಯವನ್ನು ಪಡೆಯಬಹುದು?
5 ಶುಶ್ರೂಷೆಗೆ ನೆರವು: ಶುಶ್ರೂಷೆಯಲ್ಲಿ ಪ್ರತಿಯೊಬ್ಬರು ಕ್ರಮವಾಗಿಯೂ ಫಲಪ್ರಧವಾಗಿಯೂ ಹಾಗೂ ಸಂತೋಷದಿಂದ ಭಾಗವಹಿಸುವಂತೆ ನೋಡಿಕೊಳ್ಳುವುದರಲ್ಲಿ ಪುಸ್ತಕ ಅಧ್ಯಯನ ಮೇಲ್ವಿಚಾರಕನು ಆಸಕ್ತನಾಗಿರುತ್ತಾನೆ. ಆದುದರಿಂದ, ಗುಂಪಿನಲ್ಲಿರುವ ಪ್ರತಿಯೊಬ್ಬರೊಂದಿಗೆ ಕೆಲಸಮಾಡಲು ಮತ್ತು ಶುಶ್ರೂಷೆಯ ವಿವಿಧ ಕ್ಷೇತ್ರಗಳಲ್ಲಿ ಅವರಿಗೆ ವೈಯಕ್ತಿಕ ಸಹಾಯ ನೀಡಲು ಅವನು ಪ್ರಯತ್ನಿಸುತ್ತಾನೆ. ಪುನರ್ಭೇಟಿಗಳನ್ನು ಮಾಡುವ ಅಥವಾ ಇನ್ನಾವುದಾದರೂ ನಿರ್ದಿಷ್ಟ ಕ್ಷೇತ್ರದಲ್ಲಿ ನಿಮಗೆ ಕಷ್ಟವಾಗುವುದಾದರೆ, ನಿಮ್ಮ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಗೆ ತಿಳಿಸಿರಿ. ಬಹುಶಃ ಗುಂಪಿನಲ್ಲಿರುವ ಒಬ್ಬ ಅನುಭವಸ್ಥ ಪ್ರಚಾರಕನೊಂದಿಗೆ ನೀವು ಕೆಲಸ ಮಾಡುವಂತೆ ಅವನು ಏರ್ಪಡಿಸುವನು. ಪುಸ್ತಕ ಅಧ್ಯಯನ ಮೇಲ್ವಿಚಾರಕನು ಅಧ್ಯಯನವನ್ನು ನಡೆಸುವಾಗ, ಅವನ ಉತ್ತಮ ಬೋಧನಾ ವಿಧಾನಗಳಿಗೆ ಜಾಗರೂಕತೆಯಿಂದ ಗಮನ ಕೊಡಿರಿ. ಈ ಮೂಲಕ, ಬೈಬಲ್ ವಿದ್ಯಾರ್ಥಿಗಳಿಗೆ ಬೋಧಿಸುವ ನಿಮ್ಮ ಸಾಮರ್ಥ್ಯವು ಉತ್ತಮಗೊಳ್ಳುವುದು.—1 ಕೊರಿಂ. 4:17.
6. ಪುಸ್ತಕ ಅಧ್ಯಯನದ ಏರ್ಪಾಡಿನಿಂದ ಪೂರ್ಣ ಪ್ರಯೋಜನ ಪಡೆಯಲು ನಾವೇಕೆ ಪ್ರಯತ್ನಿಸಬೇಕು?
6 ಸಭಾ ಪುಸ್ತಕ ಅಧ್ಯಯನವು ಎಂತಹ ಒಂದು ಆಶೀರ್ವಾದವಾಗಿದೆ! ಯೆಹೋವನ ಈ ಪ್ರೀತಿಯ ಏರ್ಪಾಡು ನಾವು ಜೀವಿಸುತ್ತಿರುವ ಪಂಥಾಹ್ವಾನಕರ ಸಮಯದಲ್ಲಿ ಆಧ್ಯಾತ್ಮಿಕವಾಗಿ ಸ್ಥಿರವಾಗಿ ನಿಲ್ಲಲು ನಮಗೆ ಸಹಾಯಮಾಡುತ್ತದೆ.—ಕೀರ್ತ. 26:12.