ದೇವರ ಸ್ನೇಹಿತರಾಗಲು ಇತರರಿಗೆ ಸಹಾಯಮಾಡಿರಿ
1 ಇಂದು ಯೆಹೋವನ ಮಾರ್ಗಗಳನ್ನು ಸಕಲ ದೇಶಗಳ ಜನರಿಗೆ ಬೋಧಿಸಲಾಗುತ್ತಿದೆ. (ಯೆಶಾ. 2:2, 3) ಆದರೆ, ಆ ಜನರು ‘ತಾಳ್ಮೆಯಿಂದ ಫಲವನ್ನು ಕೊಡಬೇಕಾದರೆ’ ಅವರು ಯೆಹೋವನನ್ನು ಪ್ರೀತಿಸತಕ್ಕದ್ದು. (ಲೂಕ 8:15; ಮಾರ್ಕ 12:30) ಈ ಪ್ರೀತಿ ಇಲ್ಲದಿದ್ದರೆ ಅವರಿಗೆ ಅಹಿತಕರ ಪ್ರಭಾವಗಳನ್ನು ಎದುರಿಸಿ ನಿಲ್ಲಲು ಬಲವಾಗಲಿ, ಸರಿಯಾದದ್ದನ್ನು ಮಾಡಲು ಧೈರ್ಯವಾಗಲಿ ಇರುವುದಿಲ್ಲ. ಯೆಹೋವನೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ನಾವು ಅವರಿಗೆ ಸಹಾಯಮಾಡುವ ಒಂದು ವಿಧವು ಆತನ ಗುಣಗಳಿಗಾಗಿ ಅವರಲ್ಲಿ ಗಣ್ಯತೆಯನ್ನು ಹೆಚ್ಚಿಸುವುದೇ ಆಗಿದೆ. ಅವರು ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದಲ್ಲಿರುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಉತ್ತೇಜಿಸಿರಿ.
2 ನಿಮ್ಮ ಮಾದರಿ: ನಿಮ್ಮ ಕ್ರಿಯೆಗಳು ಬೈಬಲ್ ವಿದ್ಯಾರ್ಥಿಗಳ ಹೃದಯಗಳ ಮೇಲೆ ಬಲವಾದ ಪ್ರಭಾವವನ್ನು ಬೀರಸಾಧ್ಯವಿದೆ. ಯೆಹೋವನೊಂದಿಗಿನ ಮಿತ್ರತ್ವ ನಿಮಗೆಷ್ಟು ಅಮೂಲ್ಯವಾಗಿದೆ ಮತ್ತು ಅದು ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸಿದೆ ಎಂಬುದನ್ನು ಅವರು ಕಾಣುವಾಗ, ಅದೇ ರೀತಿಯ ವೈಯಕ್ತಿಕ ಸಂಬಂಧವನ್ನು ತಾವು ಕೂಡ ಬೆಳೆಸಿಕೊಳ್ಳುವಂತೆ ಪ್ರಚೋದಿಸಲ್ಪಡಸಾಧ್ಯವಿದೆ. (ಲೂಕ 6:40) ನಿಶ್ಚಯವಾಗಿಯೂ, ಅನೇಕವೇಳೆ ನಾವಾಡುವ ಮಾತಿಗಿಂತಲೂ ನಮ್ಮ ಮಾದರಿಯೂ ಇತರರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.
3 ಹೆತ್ತವರು ತಮ್ಮ ಮಕ್ಕಳಿಗೆ ಯೆಹೋವನನ್ನು ಪ್ರೀತಿಸುವಂತೆ ಕಲಿಸುವ ಅತಿ ಪ್ರಾಮುಖ್ಯ ವಿಧವು ಅವರ ಮಾದರಿಯ ಮೂಲಕವೇ. (ಧರ್ಮೋ. 6:4-9) ತಮ್ಮ ಮಕ್ಕಳನ್ನು ಸತ್ಯದಲ್ಲಿ ಬೆಳೆಸಲು ಬಯಸಿದ ಒಂದು ದಂಪತಿಯು ಯಶಸ್ವಿಕರ ಹೆತ್ತವರ ಬಳಿ ಸಲಹೆಯನ್ನು ಕೇಳಿದರು. ಗಂಡನು ಹೇಳಿದ್ದು, “ನಾನು ಮಾತನಾಡಿಸಿದ ಪ್ರತಿಯೊಬ್ಬರು, ಹೆತ್ತವರ ಮಾದರಿಯೇ ಪ್ರಾಮುಖ್ಯವೆಂದು ತಿಳಿಸಿದರು.” ಹೀಗಿರುವುದರಿಂದ, ಹೆತ್ತವರು ತಮ್ಮ ಇಡೀ ಜೀವನರೀತಿಯ ಮೂಲಕ, ‘[ಯೆಹೋವನ] ಸ್ನೇಹಿತರಾಗಿರುವುದರ’ ಅರ್ಥವೇನೆಂಬುದಕ್ಕೆ ಮಕ್ಕಳಿಗೆ ತಾವೇ ಒಂದು ಜೀವಂತ ಮಾದರಿಯಾಗಿರಸಾಧ್ಯವಿದೆ.—ಯಾಕೋ. 2:23.
4 ಹೃತ್ಪೂರ್ವಕ ಪ್ರಾರ್ಥನೆ: ಹೃದಯದಾಳದಿಂದ ಯೆಹೋವನಿಗೆ ಪ್ರಾರ್ಥಿಸಲು ಕಲಿಸುವ ಮೂಲಕವೂ ಆತನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವಂತೆ ನೀವು ಇತರರಿಗೆ ಸಹಾಯಮಾಡಸಾಧ್ಯವಿದೆ. ಯೇಸುವಿನ ಮಾದರಿ ಪ್ರಾರ್ಥನೆ ಹಾಗೂ ಬೈಬಲಿನಲ್ಲಿರುವ ಅನೇಕ ಶ್ರದ್ಧಾಪೂರ್ವಕ ಪ್ರಾರ್ಥನೆಗಳ ಕಡೆಗೆ ನೀವು ಅವರ ಗಮನವನ್ನು ಸೆಳೆಯಬಹುದು. (ಮತ್ತಾ. 6:9, 10) ನಿಮ್ಮ ಸ್ವಂತ ಪ್ರಾರ್ಥನೆಯ ಮೂಲಕ ನಿಮ್ಮ ಮಕ್ಕಳಿಗೆ ಮತ್ತು ಬೈಬಲ್ ವಿದ್ಯಾರ್ಥಿಗಳಿಗೆ ಪ್ರಾರ್ಥಿಸುವುದು ಹೇಗೆಂದು ಕಲಿಸಸಾಧ್ಯವಿದೆ. ಪ್ರಾರ್ಥನೆಯಲ್ಲಿನ ನಿಮ್ಮ ಹೃತ್ಪೂರ್ವಕ ಹೇಳಿಕೆಗಳನ್ನು ಕೇಳುವಾಗ, ಯೆಹೋವನೆಡೆಗೆ ನಿಮಗಿರುವ ಭಾವನೆಗಳನ್ನು ಅವರು ಗ್ರಹಿಸುವರು. ಪರೀಕ್ಷೆಗಳ ಸಮಯದಲ್ಲಿ “ಪಟ್ಟುಹಿಡಿದು ಪ್ರಾರ್ಥಿಸುವಂತೆ” ಅವರನ್ನು ಪ್ರೋತ್ಸಾಹಿಸಿರಿ. (ರೋಮಾ. 12:12, NW) ಅಗತ್ಯದ ಸಮಯದಲ್ಲಿ ಅವರಿಗೆ ಯೆಹೋವನ ಸಹಾಯದ ಅನುಭವವಾದಂತೆ, ಅವರು ಆತನಲ್ಲಿ ಭರವಸೆಯಿಡಲು ಪ್ರಾರಂಭಿಸುವರು ಮತ್ತು ಆತನನ್ನು ಒಬ್ಬ ನಿಜ ಸ್ನೇಹಿತನಂತೆ ಪ್ರೀತಿಸುವರು.—ಕೀರ್ತ. 34:8; ಫಿಲಿ. 4:6, 7.