ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ಗಮನಿಸುವವರಾಗಿರುವ ಮೂಲಕ
1 ಯೆಹೋವ ದೇವರು ಮತ್ತು ಕ್ರಿಸ್ತ ಯೇಸು ಜನರ ನಿರ್ದಿಷ್ಟ ಆವಶ್ಯಕತೆಗಳನ್ನು ಗುರುತಿಸಿ, ಅವರಿಗೆ ನೆರವು ನೀಡುವುದರಲ್ಲಿ ಮೊದಲಿಗರಾಗಿದ್ದಾರೆ. (2 ಪೂರ್ವ. 16:9; ಮಾರ್ಕ 6:34) ನಮ್ಮ ಶುಶ್ರೂಷೆಯಲ್ಲಿ ನಾವು ಭೇಟಿಮಾಡುವ ವ್ಯಕ್ತಿಗಳ ಆಸಕ್ತಿ ಮತ್ತು ಚಿಂತೆಗಳನ್ನು ನಾವು ಗುರುತಿಸುವಾಗ, ನಮ್ಮ ಸುವಾರ್ತಾ ನಿರೂಪಣೆಯನ್ನು ಅದಕ್ಕೆ ತಕ್ಕ ಹಾಗೆ ನಮ್ಮಿಂದ ಹೊಂದಿಸಿಕೊಳ್ಳಸಾಧ್ಯವಾಗಬಹುದು.
2 ಸೂಕ್ಷ್ಮ ವಿವರಗಳಿಗೆ ಗಮನಕೊಡಿರಿ: ಯೇಸು ಗಮನಿಸುವವನಾಗಿದ್ದನು. (ಮಾರ್ಕ 12:41-43; ಲೂಕ 19:1-6) ಹಾಗೆಯೇ, ನಾವು ಮನೆಯವರ ಬಾಗಿಲನ್ನು ಸಮೀಪಿಸಿ ಅಲ್ಲಿ ಕಾಣಸಿಗುವ ಧಾರ್ಮಿಕ ಅಲಂಕಾರಗಳು, ವಾಹನಗಳ ಮೇಲೆ ಇರುವ ಸ್ಲೋಗನ್ಗಳು ಅಥವಾ ಅಂಗಳದಲ್ಲಿರುವ ಆಟದ ಸಾಮಾನುಗಳನ್ನು ಗಮನಿಸುವಾಗ, ಸುವಾರ್ತೆಯ ಪರಿಣಾಮಕಾರಿಯಾದ ಸಾಕ್ಷಿಯನ್ನು ನೀಡಲಿಕ್ಕಾಗಿ ಅವಕಾಶಗಳನ್ನು ಸೃಷ್ಟಿಸಲು ನಮಗೆ ಸಾಧ್ಯವಾಗಬಹುದು.
3 ಒಬ್ಬ ವ್ಯಕ್ತಿಯ ಮುಖಭಾವ ಮತ್ತು ವರ್ತನೆಯು ಅವನ ಭಾವನೆಗಳ ಕುರಿತು ಏನನ್ನಾದರೂ ಸೂಚಿಸಬಹುದು. (ಜ್ಞಾನೋ. 15:13) ಅವನು ಒಂದುವೇಳೆ ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಿರಬಹುದು ಅಥವಾ ಬೇರಾವುದೇ ದುಃಖಕರ ಸನ್ನಿವೇಶದಿಂದಾಗಿ ಅವನಿಗೆ ಸಾಂತ್ವನದ ಅಗತ್ಯವಿರಬಹುದು. ಅವನಿಗಾಗಿ ಸೂಕ್ತವಾದ ಶಾಸ್ತ್ರವಚನಗಳನ್ನು ನಾವು ಓದಿಹೇಳುವಾಗ ಅವನಿಗೆ ಸಂತೋಷವಾಗಬಹುದು. (ಜ್ಞಾನೋ. 16:24) ಮನೆಯವರು ಹೊರಗಡೆ ಹೋಗುವ ಅವಸರದಲ್ಲಿದ್ದಾರೊ ಅಥವಾ ಅಳುತ್ತಿರುವ ಮಗುವೊಂದನ್ನು ಎತ್ತಿಕೊಂಡಿದ್ದಾರೊ? ಹಾಗಿರುವಲ್ಲಿ, ಮತ್ತೊಂದು ಸಮಯದಲ್ಲಿ ಅವರನ್ನು ಭೇಟಿಯಾಗಲು ಏರ್ಪಡಿಸುವುದು ಉತ್ತಮ. ಹೀಗೆ, ‘ಪರರ ಸುಖದುಃಖಗಳಲ್ಲಿ ಸೇರುವ’ ಮೂಲಕ ನಾವು ಪರಿಗಣನೆಯನ್ನು ತೋರಿಸುವುದಾದರೆ, ಆ ವ್ಯಕ್ತಿಯು ನಾವು ಪುನಃ ಹಿಂದಿರುಗಿ ಹೋಗುವಾಗ ನಮಗೆ ಕಿವಿಗೊಡುವಂತೆ ಪ್ರೇರಿಸಲ್ಪಡಬಹುದು.—1 ಪೇತ್ರ 3:8.
4 ನಿಮ್ಮ ಹೇಳಿಕೆಗಳನ್ನು ಹೊಂದಿಸಿಕೊಳ್ಳಿರಿ: ಅಪೊಸ್ತಲ ಪೌಲನು ಅಥೇನೆ ಪಟ್ಟಣದಲ್ಲಿ, “ತಿಳಿಯದ ದೇವರಿಗೆ” ಒಂದು ಬಲಿಪೀಠವು ಪ್ರತಿಷ್ಠಾಪಿಸಲ್ಪಟ್ಟಿರುವುದನ್ನು ಗಮನಿಸಿದನು. ಇದು ಅವನು ಸುವಾರ್ತೆಯನ್ನು ಪ್ರಸ್ತುತಪಡಿಸಿದ ರೀತಿಯನ್ನು ಪ್ರಭಾವಿಸಿತು. ಅವನು ಹೇಳಿದ್ದು: “ನೀವು ಯಾವದನ್ನು ತಿಳಿಯದೆ ಪೂಜಿಸುತ್ತೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ.” ಪೌಲನ ಜಾಣ್ಮೆಯ ಸಮೀಪಿಸುವಿಕೆಯು, ಅಲ್ಲಿದ್ದ ಅನೇಕರು ರಾಜ್ಯದ ಸಂದೇಶವನ್ನು ಪರಿಗಣನೆಗೆ ತೆಗೆದುಕೊಂಡು ವಿಶ್ವಾಸಿಗಳಾಗುವಂತೆ ಪ್ರಚೋದಿಸಿತು.—ಅ. ಕೃ. 17:23, 34.
5 ಅದೇ ರೀತಿಯಲ್ಲಿ, ನಾವು ಗಮನಿಸುವವರಾಗಿರುವುದು ಒಬ್ಬ ವ್ಯಕ್ತಿಯ ಆಸಕ್ತಿಗಳೇನೆಂಬುದನ್ನು ವಿವೇಚಿಸಲು ಮತ್ತು ಅದಕ್ಕೆ ತಕ್ಕ ಹಾಗೆ ನಮ್ಮ ಪ್ರಸ್ತಾಪವನ್ನು ಹೊಂದಿಸಿಕೊಳ್ಳಲು ಸಹಾಯಮಾಡುತ್ತದೆ. ಮನೆಯವನು ತನ್ನ ಅನಿಸಿಕೆಗಳನ್ನು ತಿಳಿಸುವಂತೆ ಪ್ರೇರಿಸುವ ಪ್ರಶ್ನೆಗಳನ್ನು ಕೇಳಿರಿ. ಅವನ ಆಸಕ್ತಿಯನ್ನು ಹೆಚ್ಚಿಸಲು ಉಪಯೋಗಿಸಬಹುದಾದಂಥ ಶಾಸ್ತ್ರವಚನಗಳ ಕುರಿತು ಯೋಚಿಸಿರಿ. (ಜ್ಞಾನೋ. 20:5) ನಾವು ಗಮನಿಸುವವರಾಗಿರುವುದು ಮತ್ತು ಇತರರ ಕಡೆಗೆ ಯಥಾರ್ಥವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದು, ಸುವಾರ್ತೆಯನ್ನು ನಿಪುಣತೆಯಿಂದ ಸಾರುವಂತೆ ನಮಗೆ ಸಹಾಯಮಾಡುತ್ತದೆ.