ಕುಟುಂಬ ಕಾಲತಖ್ತೆ—ಸಭಾ ಕೂಟಗಳು
1 ನೀವು ಒಬ್ಬ ಕ್ರೈಸ್ತ ಹೆತ್ತವರಾಗಿರುವುದಾದರೆ, ನಿಮ್ಮ ಮಕ್ಕಳು ಯೆಹೋವನನ್ನು ಪ್ರೀತಿಸುವವರಾಗಿ ಮತ್ತು ಆತನ ಸೇವೆಮಾಡುವವರಾಗಿ ಬೆಳೆಯಬೇಕೆಂದು ಹಾಗೂ ಕೊನೆಗೆ ದೇವರ ವಾಗ್ದತ್ತ ನೂತನ ಲೋಕದಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಬಯಸುತ್ತೀರಿ. ಅವರು ತಮ್ಮ ಜೀವನದಲ್ಲಿ ಯೆಹೋವನ ಆರಾಧನೆಯನ್ನು ಪ್ರಥಮವಾಗಿಡುವಂತೆ ನೀವು ಅವರಿಗೆ ಹೇಗೆ ಸಹಾಯಮಾಡಬಲ್ಲಿರಿ? ಪ್ರಾಮುಖ್ಯ ವಿಧಾನವು ನಿಮ್ಮ ಮಾದರಿಯ ಮೂಲಕವೇ ಆಗಿದೆ. (ಜ್ಞಾನೋ. 20:7) ಒಬ್ಬ ಸಹೋದರಿಯು ತನ್ನ ಸಾಕ್ಷಿ ತಾಯಿಯ ಮಾದರಿಯನ್ನು ನೆನಪುಮಾಡಿಕೊಳ್ಳುತ್ತಾ ಹೇಳಿದ್ದು: “ನಾವು ಕೂಟಕ್ಕೆ ಹೋಗುತ್ತೇವೊ ಇಲ್ಲವೊ ಎಂಬ ಪ್ರಶ್ನೆಯೇ ಇರುತ್ತಿರಲಿಲ್ಲ.” ಇದು ಅವಳ ಮೇಲೆ ಬಾಳುವ ಪ್ರಭಾವವನ್ನು ಬೀರಿತು.
2 ಸಭಾ ಕೂಟಗಳ ಉದ್ದೇಶವನ್ನು ನಿಮ್ಮ ಕುಟುಂಬವು ಗಣ್ಯಮಾಡುತ್ತದೊ? ಇಂಥ ಕೂಟಗಳಲ್ಲಿ ನಮಗೆ ದೊರಕುವ ಸಲಹೆಗಳು ನಾವು ದೇವರ ಚಿತ್ತವನ್ನು ಮಾಡುತ್ತಾ ಮುಂದುವರಿಯುವಂತೆ ನಮ್ಮನ್ನು ಹುರಿದುಂಬಿಸುತ್ತವೆ ಮತ್ತು ಅಲ್ಲಿ ನಾವು ನಮ್ಮ ಸಹೋದರರೊಂದಿಗೆ ಆನಂದಿಸುವ ಸಾಹಚರ್ಯವು ಉತ್ತೇಜನದ ಒಂದು ಬೆಲೆಕಟ್ಟಲಾಗದ ಮೂಲವಾಗಿದೆ. (ಯೆಶಾ. 54:13; ರೋಮಾ. 1:11, 12) ಹಾಗಿದ್ದರೂ, ಇಂಥ ಕೂಟಗಳ ಮುಖ್ಯ ಉದ್ದೇಶವು, ಯೆಹೋವನನ್ನು “ಕೂಡಿದ ಸಭೆಗಳಲ್ಲಿ” ಕೊಂಡಾಡುವುದೇ ಆಗಿದೆ. (ಕೀರ್ತ. 26:12) ಯೆಹೋವನ ಮೇಲಣ ನಮ್ಮ ಪ್ರೀತಿಯನ್ನು ಪ್ರದರ್ಶಿಸಲು ಮತ್ತು ಆತನನ್ನು ಆರಾಧಿಸಲು ಇಂಥ ಕೂಟಗಳು ನಮಗೆ ಸದವಕಾಶಗಳನ್ನು ಒದಗಿಸುತ್ತವೆ.
3 “ಜಾಗರೂಕರಾಗಿ ನಡೆದುಕೊಳ್ಳಿರಿ”: ನಮ್ಮ ಕೂಟಗಳ ಪವಿತ್ರ ಉದ್ದೇಶಕ್ಕಾಗಿರುವ ಗಣ್ಯತೆಯು, ನಾವು ‘ಜಾಗರೂಕರಾಗಿ ನಡೆದುಕೊಳ್ಳುವಂತೆ’ ಪ್ರಚೋದಿಸುತ್ತದೆ. ಅಷ್ಟು ಪ್ರಾಮುಖ್ಯವಲ್ಲದ ವಿಷಯಗಳಿಗಾಗಿ ಕೂಟಗಳನ್ನು ತಪ್ಪಿಸುವ ಅಭ್ಯಾಸವನ್ನು ನಾವು ಕ್ರಮೇಣ ಬೆಳೆಸಿಕೊಳ್ಳುವುದರಿಂದ ಇದು ನಮ್ಮನ್ನು ತಡೆಯುತ್ತದೆ. (ಎಫೆ. 5:15, 16, NIBV; ಇಬ್ರಿ. 10:24, 25) ನಿಮ್ಮ ಕುಟುಂಬ ಕಾಲತಖ್ತೆಯನ್ನು ತಯಾರಿಸುವಾಗ, ಅದರಲ್ಲಿ ಮೊದಲು ಸಭಾ ಕೂಟಗಳ ಸಮಯಗಳನ್ನು ಗುರುತಿಸಿರಿ. ಅನಂತರ ಇತರ ಚಟುವಟಿಕೆಗಳು ಆ ಸಮಯದ ಮಧ್ಯೆಪ್ರವೇಶಿಸದಂತೆ ನೋಡಿಕೊಳ್ಳಿರಿ. ಕೂಟದ ಹಾಜರಿಯು ನಿಮ್ಮ ಕುಟುಂಬದ ಆದ್ಯತೆಯಾಗಿರುವಂತೆ ನೋಡಿಕೊಳ್ಳಿರಿ.
4 ಬಹಳಷ್ಟು ಅಡ್ಡಿತಡೆಗಳನ್ನು ಎದುರಿಸಿ ಕೂಟಗಳಿಗೆ ಮತ್ತು ಸಮ್ಮೇಳನಗಳಿಗೆ ಹಾಜರಾಗುವ ನಮ್ಮ ಸಹೋದರರ ಕುರಿತು ಓದುವಾಗ ನಾವು ಉತ್ತೇಜಿತರಾಗುವುದಿಲ್ಲವೆ? ಒಂದುವೇಳೆ ನಿಮ್ಮ ಸನ್ನಿವೇಶಗಳು ಅಷ್ಟು ಎದ್ದುಕಾಣುವಂಥವುಗಳಾಗಿ ಇಲ್ಲದಿರಬಹುದಾದರೂ, ಪ್ರಾಯಶಃ ನೀವು ಸಹ ಕೆಲವು ಪಂಥಾಹ್ವಾನಗಳನ್ನು ಎದುರಿಸುತ್ತಿರಬಹುದು. ದೇವಜನರಿಗೆ ಯೆಹೋವನನ್ನು ಆರಾಧಿಸುವುದನ್ನು ಸೈತಾನನು ಇನ್ನಷ್ಟು ಕಷ್ಟಕರವನ್ನಾಗಿ ಮಾಡುತ್ತಿದ್ದಾನೆ. ಹಾಗಿದ್ದರೂ, ತಪ್ಪದೆ ಸಭಾ ಕೂಟಗಳಿಗೆ ಹಾಜರಾಗಲಿಕ್ಕಾಗಿ ನಿಮ್ಮ ಕುಟುಂಬವು ಮಾಡುವ ಸತತ ಪ್ರಯತ್ನವನ್ನು ನಿಮ್ಮ ಮಕ್ಕಳು ಖಂಡಿತವಾಗಿಯೂ ಗಮನಿಸುತ್ತಾರೆ. ನಿಮ್ಮ ಈ ಪ್ರಯತ್ನದ ಮೂಲಕ ನೀವು ನಿಮ್ಮ ಮಕ್ಕಳಿಗೆ, ಎಂದಿಗೂ ಮರೆತುಹೋಗದಂಥ ಒಂದು ಆಧ್ಯಾತ್ಮಿಕ ಉಡುಗೊರೆಯನ್ನು ನೀಡುತ್ತಿದ್ದೀರಿ.