ಎಲ್ಲ ಮನುಷ್ಯರು ರಕ್ಷಿಸಲ್ಪಡುವರು
1. ದೇವರ ಮುಂದೆ ನಮಗಿರುವ ನಿಲುವು ಯಾವುದರ ಮೇಲೆ ಅವಲಂಬಿಸಿದೆ?
1 ದೇವರ ಅಪಾತ್ರ ಕೃಪೆಯು ರಕ್ಷಣೆಗೆ ನಡೆಸುವ ಮಾರ್ಗವನ್ನು ತೆರೆದಿದೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಚಿತ್ತವಾಗಿದೆ. (1 ತಿಮೊ. 2:3, 4) ದೇವರ ಮುಂದೆ ನಮಗಿರುವ ನಿಲುವು ನಮ್ಮ ಭಾಷೆ, ಆರ್ಥಿಕ ಬಲ, ಸಾಮರ್ಥ್ಯಗಳು ಅಥವಾ ಹೊರತೋರಿಕೆಯ ಮೇಲೆ ಅವಲಂಬಿಸದೆ ಕ್ರಿಸ್ತನ ವಿಮೋಚನಾ ಯಜ್ಞದಲ್ಲಿ ನಂಬಿಕೆಯನ್ನಿಡುವುದರ ಮೇಲೆ ಅವಲಂಬಿಸಿದೆ. (ಯೋಹಾ. 3:16, 36) ಯೆಹೋವನ ಜೊತೆಕೆಲಸಗಾರರಾಗಿರುವ ನಾವು, ನಮ್ಮಲ್ಲಿರುವ ಯಾವುದೇ ಪಕ್ಷಪಾತದ ಭಾವನೆಯನ್ನು ಕಿತ್ತೆಸೆಯಬೇಕು. ಏಕೆಂದರೆ ಇಂಥ ಭಾವನೆಯು ಯೆಹೋವನು ಸ್ವೀಕರಿಸಲು ಸಿದ್ಧನಾಗಿರುವ ಜನರನ್ನು ನಾವು ತಿರಸ್ಕರಿಸುವಂತೆ ಮಾಡಬಹುದು.
2, 3. ಜನರ ಹೊರತೋರಿಕೆಯನ್ನು ನೋಡಿ ನಾವು ಮೊದಲೇ ತೀರ್ಮಾನ ಮಾಡದಂತೆ ಯಾವುದು ಸಹಾಯ ಮಾಡಬಲ್ಲದು?
2 ಮೊದಲೇ ತೀರ್ಮಾನ ಮಾಡದಿರ್ರಿ: ಯೆಹೋವನು ಯಾವುದೇ ದ್ವೇಷ ಇಲ್ಲವೇ ಪಕ್ಷಪಾತವಿಲ್ಲದೆ, ಜನರು ಆಂತರ್ಯದಲ್ಲಿ ಏನಾಗಿದ್ದಾರೆಂಬುದನ್ನು ನೋಡುತ್ತಾನೆ. (1 ಸಮು. 16:7) ಅಲ್ಲದೆ, ಅವರು ಮುಂದೆ ಏನಾಗಬಲ್ಲರು ಎಂಬುದನ್ನು ಸಹ ಆತನು ನೋಡುತ್ತಾನೆ. ಹೀಗಿರುವುದರಿಂದ, ತನ್ನನ್ನು ಸಂತೋಷಪಡಿಸಲು ಬಯಸುವವರನ್ನು ಆತನು ಇಷ್ಟವಸ್ತುಗಳಾಗಿ ವೀಕ್ಷಿಸುತ್ತಾನೆ. (ಹಗ್ಗಾ. 2:7) ನಾವು ಸಹ ಅವರನ್ನು ಅದೇ ರೀತಿಯಲ್ಲಿ ವೀಕ್ಷಿಸುತ್ತೇವೊ?
3 ಶುಶ್ರೂಷೆಯಲ್ಲಿ ಭೇಟಿಯಾಗುವ ಕೆಲವರ ಹೊರತೋರಿಕೆಯು ನಮ್ಮನ್ನು ದಿಗಿಲುಗೊಳಿಸಬಹುದು. ಅವರು ಹರಕುಪರಕಾದ ಅಥವಾ ಅಸಭ್ಯ ಬಟ್ಟೆಗಳನ್ನು ತೊಟ್ಟಿರಬಹುದು ಇಲ್ಲವೇ ಗಡ್ಡ ಬಿಟ್ಟಿರಬಹುದು ಯಾ ತುಂಬ ಬಡತನದಲ್ಲಿರಬಹುದು. ಕೆಲವರಿಗೆ ಮನೆ ಸಹ ಇರಲಿಕ್ಕಿಲ್ಲ. ಇತರರು ನಮ್ಮೊಂದಿಗೆ ಒರಟಾಗಿ ವರ್ತಿಸಬಹುದು. ಇಂಥ ಜನರು ಎಂದಿಗೂ ಯೆಹೋವನ ಆರಾಧಕರಾಗಿರಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬರುವ ಬದಲು, ನಮಗೆ ಸಕಾರಾತ್ಮಕ ಮನೋಭಾವವಿರಬೇಕು. ಏಕೆಂದರೆ “ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದವರೂ” ಆಗಿದ್ದೆವಲ್ಲಾ. (ತೀತ 3:3) ಇದನ್ನು ಅರಿತವರಾಗಿ ನಾವು ಎಲ್ಲರಿಗೆ ಅಂದರೆ, ಹೊರತೋರಿಕೆಯಲ್ಲಿ ಅಯೋಗ್ಯರಂತೆ ತೋರುವ ಜನರಿಗೂ ಸುವಾರ್ತೆ ಸಾರಲು ಆತುರದಿಂದಿರುವೆವು.
4, 5. ಯೇಸುವಿನ ಹಾಗೂ ಪೌಲನ ಮಾದರಿಗಳಿಂದ ನಾವೇನು ಕಲಿಯುತ್ತೇವೆ?
4 ನಮ್ಮ ನಿಷ್ಪಕ್ಷಪಾತಿ ದೇವರನ್ನು ಅನುಸರಿಸಿರಿ: ಸುಧಾರಿಸಲು ಸಾಧ್ಯವೇ ಇಲ್ಲವೆಂದು ಇತರರಿಂದ ಬಿಟ್ಟುಬಿಡಲ್ಪಟ್ಟ ಜನರಿಗೆ ಸಹಾಯ ಮಾಡಲು ಯೇಸು ಕ್ರಿಸ್ತನು ಸಮಯ ತೆಗೆದುಕೊಂಡನು. (ಲೂಕ 8:26-39) ಕೆಟ್ಟ ಕೃತ್ಯಗಳನ್ನು ಅವನೆಂದಿಗೂ ಸಮ್ಮತಿಸದಿದ್ದರೂ ಜನರು ತಪ್ಪಾದ ಜೀವನಶೈಲಿಗೆ ಸಿಕ್ಕಿಬೀಳಬಲ್ಲರೆಂಬ ವಿಷಯವು ಅವನಿಗೆ ತಿಳಿದಿತ್ತು. (ಲೂಕ 7:37, 38, 44-48) ಹೀಗೆ ಅವರನ್ನು ಅರ್ಥಮಾಡಿಕೊಂಡು, ಅವರು “ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರ”ಪಟ್ಟನು. (ಮಾರ್ಕ 6:34) ಅವನ ಮಾದರಿಯನ್ನು ನಾವು ಹೆಚ್ಚು ಪೂರ್ಣವಾಗಿ ಅನುಸರಿಸಬಲ್ಲೆವೊ?
5 ಅಪೊಸ್ತಲ ಪೌಲನಿಗೆ ಕಲ್ಲೆಸೆಯಲಾಯಿತು, ಹೊಡೆಯಲಾಯಿತು ಮತ್ತು ಅವನನ್ನು ಸೆರೆಮನೆಗೆ ಹಾಕಲಾಯಿತು. (ಅ. ಕೃ. 14:19; 16:22, 23) ಇಂಥ ಕಠೋರ ಅನುಭವಗಳು ಅವನು ಕಹಿಭಾವನೆ ತಾಳುವಂತೆ ಮಾಡಿತೊ? ತಾನು ನಿರ್ದಿಷ್ಟ ಜನಾಂಗ ಹಾಗೂ ಕುಲದ ಜನರೊಂದಿಗೆ ಸಮಯ ವ್ಯರ್ಥಮಾಡುತ್ತಿದ್ದೇನೆಂದು ನೆನಸುವಂತೆ ಮಾಡಿತೊ? ಖಂಡಿತವಾಗಿಯೂ ಇಲ್ಲ. “ಎಲ್ಲಾ ಮನುಷ್ಯರ”ಲ್ಲಿಯೂ ಕೆಲವು ಪ್ರಾಮಾಣಿಕ ಜನರು ಇರುತ್ತಾರೆಂದು ಅವನಿಗೆ ತಿಳಿದಿತ್ತು ಹಾಗೂ ಅವರನ್ನು ಹುಡುಕಲು ಅವನು ದೃಢನಿಶ್ಚಿತನಾಗಿದ್ದನು. ನಮ್ಮ ಟೆರಿಟೊರಿಯಲ್ಲಿರುವ ವಿಭಿನ್ನ ಹಿನ್ನೆಲೆ ಹಾಗೂ ಸಂಸ್ಕೃತಿಗಳ ಜನರನ್ನು ನಾವು ಹೀಗೆಯೇ ವೀಕ್ಷಿಸುತ್ತೇವೊ?
6. ನಮ್ಮ ನಿಷ್ಪಕ್ಷಪಾತಿ ದೇವರನ್ನು ನಾವು ಹೇಗೆ ಅನುಸರಿಸಬಲ್ಲೆವು?
6 ನಮ್ಮ ನಿಷ್ಪಕ್ಷಪಾತಿ ದೇವರನ್ನು ಅನುಸರಿಸುತ್ತಾ, ಆತನ ಅಪಾತ್ರ ಕೃಪೆಯಿಂದ ಪ್ರಯೋಜನ ಪಡೆಯುವಂತೆ ಎಲ್ಲರನ್ನು ಆಮಂತ್ರಿಸೋಣ.—ಅ. ಕೃ. 10:34, 35.