ಹೊಸ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮ
ಒಂದು ಎಚ್ಚರಿಕೆ ಸೂಚಕವನ್ನು ನೋಡುವುದಾದರೂ ಅಥವಾ ಎಚ್ಚರಿಕೆ ಘಂಟೆಯನ್ನು ಕೇಳಿಸಿಕೊಳ್ಳುವುದಾದರೂ ಅದನ್ನು ಅಲಕ್ಷಿಸುವುದಾದರೆ ಪರಿಣಾಮಗಳು ವಿಪತ್ಕಾರಕವಾಗಿರುವವು. ಯೆಹೋವನು ಒದಗಿಸುವ ಆಧ್ಯಾತ್ಮಿಕ ಮಾರ್ಗದರ್ಶನಕ್ಕನುಸಾರ ಕ್ರಿಯೆಗೈಯುವುದು ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿದೆ. ಇದನ್ನು 2005ರ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮದಲ್ಲಿ ಎತ್ತಿತೋರಿಸಲಾಗುವುದು. ಅದರ ಮುಖ್ಯ ವಿಷಯವು, “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ” ಎಂದಾಗಿದೆ.—ಲೂಕ 8:18.
ಸಂದರ್ಶಕ ಭಾಷಣಕರ್ತನು ತನ್ನ ಮೊದಲನೆಯ ಭಾಷಣದಲ್ಲಿ, ದೈವಪ್ರೇರಿತನಾದ ಪೌಲನು ಇಬ್ರಿಯರಿಗೆ ಬರೆದ ಪತ್ರದಲ್ಲಿನ ಆರಂಭದ ಅಧ್ಯಾಯಗಳಲ್ಲಿ ಕಂಡುಬರುವ ಬುದ್ಧಿವಾದವು ಇಂದು ನಮಗೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ಪರಿಗಣಿಸುವನು. “ದೈವಿಕ ಉಪದೇಶಕ್ಕೆ ಎಡೆಬಿಡದೆ ಗಮನ ಕೊಡಿರಿ” ಎಂಬ ಸಮಾಪ್ತಿಯ ಭಾಷಣದಲ್ಲಿ, ಎಲ್ಲರೂ ಯೆಹೋವನಿಗೆ, ಆತನ ಕುಮಾರನಿಗೆ, ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ಕಿವಿಗೊಡುತ್ತಿದ್ದಾರೋ ಎಂದು ಪರಿಶೋಧಿಸಿಕೊಳ್ಳುವಂತೆ ಸಂದರ್ಶಕ ಭಾಷಣಕರ್ತನು ಸಹಾಯಮಾಡುವನು.—ಮತ್ತಾ. 24:45.
ಕಾರ್ಯಕ್ರಮದಲ್ಲಿನ ಅನೇಕ ಭಾಗಗಳು ವಿಶೇಷವಾಗಿ ಕುಟುಂಬಗಳಿಗೆ ಪ್ರಯೋಜನಕಾರಿಯಾಗಿರುವವು. “ಅಪಕರ್ಷಿತರಾಗದೇ ದೇವರ ವಾಕ್ಯಕ್ಕೆ ಕಿವಿಗೊಡುವ ಕುಟುಂಬಗಳು” ಎಂಬ ಭಾಗವು ಈ ಲೋಕದ ವಿಷಯಗಳು ನಮ್ಮ ಆಧ್ಯಾತ್ಮಿಕ ಬೆಳವಣಿಗೆಯನ್ನು ನಿಧಾನಗತಿಗಿಳಿಸುವುದನ್ನು ತಡೆಯಲು ನಮಗೆ ಸಹಾಯಮಾಡುವುದು. ಇದರಲ್ಲಿ ಆಧ್ಯಾತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನವನ್ನು ಕೊಡಲಿಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡಿದವರ ಇಂಟರ್ವ್ಯೂಗಳು ಸೇರಿಸಲ್ಪಟ್ಟಿರುವುದು. “ಎಲ್ಲವನ್ನೂ ದೇವರ ಘನತೆಗಾಗಿ ಮಾಡುತ್ತಾ ಇರಿ” ಎಂಬ ಭಾಗವು ಶಾಲೆಯಲ್ಲಿ, ಸಮಾನಸ್ಥರ ಮಧ್ಯೆ ಮತ್ತು ಶುಶ್ರೂಷೆಯಲ್ಲಿ ಸತ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಂಡ ಯುವ ಜನರ ಇಂಟರ್ವ್ಯೂಗಳನ್ನು ಹೊಂದಿರುವುದು. “ದೇವರಿಗೆ ಕಿವಿಗೊಟ್ಟು ಕಲಿಯುವ ಚಿಕ್ಕ ಮಕ್ಕಳು” ಎಂಬ ಭಾಗವು ಚಿಕ್ಕ ಮಕ್ಕಳ ಕಲಿಯುವ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡದಿರಲು ನಮಗೆ ಸಹಾಯಮಾಡುವುದು. ಚಿಕ್ಕ ಮಕ್ಕಳು ಮತ್ತು ಅವರ ಹೆತ್ತವರೊಂದಿಗೆ ಮಾಡಲ್ಪಡುವ ಇಂಟರ್ವ್ಯೂಗಳು ಮಕ್ಕಳನ್ನು ಶಿಶುಪ್ರಾಯದಿಂದಲೇ ಯೆಹೋವನ ಮಾರ್ಗಗಳಲ್ಲಿ ತರಬೇತುಗೊಳಿಸುವುದರಿಂದ ಬರುವ ಒಳಿತನ್ನು ನೋಡುವಂತೆ ನಮಗೆ ಸಹಾಯಮಾಡುವುದು.
ಸೈತಾನನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸು”ತ್ತಿರುವಾಗ, ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಅವರು ನಡೆಯಬೇಕಾದ ಮಾರ್ಗವನ್ನು ತೋರಿಸುತ್ತಿದ್ದಾನೆ. (ಪ್ರಕ. 12:9; ಯೆಶಾ. 30:21) ಆತನ ಬುದ್ಧಿವಾದವನ್ನು ಕಿವಿಗೊಟ್ಟು ಕೇಳುವುದು ಮತ್ತು ನಮ್ಮ ಜೀವಿತಗಳಲ್ಲಿ ಅದನ್ನು ವಿಧೇಯತೆಯಿಂದ ಅನ್ವಯಿಸುವುದು ನಮ್ಮನ್ನು ವಿವೇಕಪ್ರದರನ್ನಾಗಿ ಮಾಡುತ್ತದೆ, ನಮಗೆ ಸಂತೋಷವನ್ನು ತರುತ್ತದೆ ಮತ್ತು ನಿತ್ಯಜೀವಕ್ಕೆ ನಡೆಸುತ್ತದೆ.—ಜ್ಞಾನೋ. 8:32-35.