“ಭಕ್ತರೇ, ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ”
ಏಪ್ರಿಲ್ 4ರಂದು ಯೇಸುವಿನ ಮರಣವು ಸ್ಮರಿಸಲ್ಪಡಲಿರುವುದು
1 ವರ್ಷಗಳ ಹಿಂದೆ, ಯೂಕ್ರೇನ್ ಕಮ್ಯೂನಿಸ್ಟ್ ಆಡಳಿತದ ಕೆಳಗಿದ್ದಾಗ, ಅಧಿಕಾರಿಗಳು ವಿಶೇಷವಾಗಿ ಕರ್ತನ ಸಂಧ್ಯಾ ಭೋಜನದ ದಿನವು ಸಮೀಪಿಸುತ್ತಿದ್ದಂತೆ ನಮ್ಮ ಸಹೋದರರ ಕೂಟದ ಸ್ಥಳವನ್ನು ಪತ್ತೆಹಚ್ಚುವ ನಿರೀಕ್ಷೆಯೊಂದಿಗೆ ಅವರ ಮೇಲೆ ತೀವ್ರ ನಿಗಾ ಇಡುತ್ತಿದ್ದರು. ಇದು ಯಾವಾಗಲೂ ಒಂದು ಸಮಸ್ಯೆಯಾಗಿತ್ತು, ಏಕೆಂದರೆ ಅಧಿಕಾರಿಗಳಿಗೆ ಈ ಆಚರಣೆಯ ನಿರ್ದಿಷ್ಟ ತಾರೀಖು ತಿಳಿದಿರುತ್ತಿತ್ತು. ಸಹೋದರರು ಏನು ಮಾಡಸಾಧ್ಯವಿತ್ತು? ಒಬ್ಬ ಸಹೋದರಿಯ ಮನೆಯ ನೆಲಮಾಳಿಗೆ ನೀರಿನಿಂದ ತುಂಬಿತ್ತು. ಜನರು ಅಲ್ಲಿ ಕೂಡಿಬರುವರೆಂದು ಅಧಿಕಾರಿಗಳು ನಿರೀಕ್ಷಿಸದಿದ್ದುದರಿಂದ, ಸಹೋದರರು ಅಲ್ಲಿ ಮೊಣಕಾಲು ಮುಳುಗುವಷ್ಟು ಆಳವಾಗಿದ್ದ ನೀರಿನ ಮೇಲೆ ಒಂದು ಮರದ ವೇದಿಕೆಯನ್ನು ಕಟ್ಟಿದರು. ತಗ್ಗಿದ ಛಾವಣಿಯಡಿಯಲ್ಲಿ ಸಹೋದರರು ಮುದುಡಿ ಕುಳಿತುಕೊಳ್ಳಬೇಕಾಯಿತಾದರೂ, ಸಭೆಯು ಸಂತೋಷದಿಂದ ಜ್ಞಾಪಕವನ್ನು ಆಚರಿಸಿದಾಗ ಯಾರೊಬ್ಬರೂ ಅವರನ್ನು ತೊಂದರೆಪಡಿಸಲಿಲ್ಲ.
2 ಯೇಸುವಿನ ಮರಣವನ್ನು ಆಚರಿಸಬೇಕೆಂಬ ಆಜ್ಞೆಗೆ ವಿಧೇಯರಾಗುವುದರಲ್ಲಿ ನಮ್ಮ ಯೂಕ್ರೇನಿನ ಸಹೋದರರು ತೋರಿಸಿದ ದೃಢಸಂಕಲ್ಪವು ದೇವರಿಗಾಗಿರುವ ಅವರ ಪ್ರೀತಿಯ ಮಹಾನ್ ಅಭಿವ್ಯಕ್ತಿಯಾಗಿತ್ತು. (ಲೂಕ 22:19; 1 ಯೋಹಾ. 5:3) ನಮ್ಮ ಜೀವನದಲ್ಲಿ ನಾವು ಬಿಕ್ಕಟ್ಟುಗಳನ್ನು ಎದುರಿಸುವಾಗೆಲ್ಲಾ ಈ ರೀತಿಯ ಮಾದರಿಗಳಿಂದ ಪ್ರೋತ್ಸಾಹವನ್ನು ಪಡೆದುಕೊಂಡು, ಏಪ್ರಿಲ್ 4ರಂದು ಆಚರಿಸಲ್ಪಡುವ ಕರ್ತನ ಸಂಧ್ಯಾ ಭೋಜನಕ್ಕೆ ಹಾಜರಾಗಲು ದೃಢತೀರ್ಮಾನವನ್ನು ಮಾಡೋಣ. ಹೀಗೆ ಮಾಡುವುದರಿಂದ, “ಭಕ್ತರೇ, ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ” ಎಂದು ಹಾಡಿದ ಕೀರ್ತನೆಗಾರನ ರಸಭಾವಗಳಲ್ಲಿ ನಾವು ಪಾಲಿಗರಾಗುತ್ತೇವೆ ಎಂದು ನಾವು ತೋರಿಸಿಕೊಡುತ್ತೇವೆ.—ಕೀರ್ತ. 31:23.
3 ದೇವರಿಗಾಗಿರುವ ಪ್ರೀತಿಯಲ್ಲಿ ಬೆಳೆಯುವಂತೆ ಇತರರಿಗೆ ಸಹಾಯಮಾಡಿರಿ: ದೇವರಿಗಾಗಿರುವ ಪ್ರೀತಿಯು, ನಮ್ಮೊಂದಿಗೆ ಜ್ಞಾಪಕಾಚರಣೆಯನ್ನು ಆಚರಿಸಲು ಇತರರನ್ನು ಆಮಂತ್ರಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಫೆಬ್ರವರಿ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯು, ಜ್ಞಾಪಕಾಚರಣೆಗೆ ಆಮಂತ್ರಿಸಲು ನಾವು ಯೋಜಿಸುವವರ ಒಂದು ಪಟ್ಟಿಯನ್ನು ಮಾಡುವಂತೆ ನಮ್ಮಲ್ಲಿ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿತು. ನಿಮ್ಮ ಪಟ್ಟಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಆಮಂತ್ರಣವನ್ನು ನೀಡುವುದಕ್ಕಾಗಿ ನೀವು ಶ್ರದ್ಧೆಯಿಂದ ಕೆಲಸಮಾಡುತ್ತಿದ್ದೀರೋ? ಈ ಸಂದರ್ಭದ ಪ್ರಮುಖತೆಯ ಕುರಿತು ಅವರಿಗೆ ವಿವರಿಸಲು ಸಮಯವನ್ನು ತೆಗೆದುಕೊಳ್ಳಿ. ಜ್ಞಾಪಕಾಚರಣೆಯ ದಿನ ಮತ್ತು ಸಮಯದ ಕುರಿತು ಸ್ನೇಹಭಾವದ ಮರುಜ್ಞಾಪನೆ ಹಾಗೂ ಆವಶ್ಯಕವಾಗಿರುವುದಾದರೆ, ಅವರೊಂದಿಗೆ ಜ್ಞಾಪಕಾಚರಣೆಗೆ ಹೋಗುವ ನೀಡಿಕೆಯನ್ನು ಮಾಡುವುದು ಅವರನ್ನು ಹಾಜರಾಗುವಂತೆ ಪ್ರೋತ್ಸಾಹಿಸುವುದು.
4 ಜ್ಞಾಪಕಾಚರಣೆಗಾಗಿರುವ ಕೂಟದ ಸ್ಥಳದಲ್ಲಿ, ನಮ್ಮ ಆಮಂತ್ರಣವನ್ನು ಸ್ವೀಕರಿಸಿರುವವರನ್ನು ಸ್ವಾಗತಿಸಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡಿ, ಮತ್ತು ಅವರಿಗೆ ಹಾಯೆನಿಸುವಂತೆ ಮಾಡಿ. ಯೆಹೋವನಿಗಾಗಿರುವ ಅವರ ಪ್ರೀತಿಯಲ್ಲಿ ಬೆಳೆಯುವಂತೆ ನೀವು ಅವರಿಗೆ ಹೇಗೆ ಸಹಾಯಮಾಡಬಲ್ಲಿರಿ? ಅವರ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ನಿಮ್ಮನ್ನು ಲಭ್ಯಗೊಳಿಸಿರಿ. ಯೋಗ್ಯವಾಗಿರುವುದಾದರೆ, ಬೈಬಲ್ ಅಧ್ಯಯನದ ಪ್ರಸ್ತಾಪವನ್ನು ಮಾಡಲು ತಯಾರಾಗಿರಿ. ನಮ್ಮ ಸಾಪ್ತಾಹಿಕ ಕೂಟಗಳಿಗೆ ಹಾಜರಾಗುವಂತೆ ಅವರನ್ನು ಆಮಂತ್ರಿಸಿ. ವಿಶೇಷವಾಗಿ ಹಿರಿಯರು ಹಾಜರಿರುವ ಅಕ್ರಿಯ ಕ್ರೈಸ್ತರಿಗೆ ಗಮನಕೊಡಲು ಬಯಸುವರು. ಇಂಥವರನ್ನು ಭೇಟಿಮಾಡಲು ಏರ್ಪಾಡುಮಾಡತಕ್ಕದ್ದು ಮತ್ತು ಪ್ರಾಯಶಃ ಜ್ಞಾಪಕದ ಭಾಷಣದಲ್ಲಿ ನೀಡಲ್ಪಟ್ಟ ಕೆಲವು ಅಂಶಗಳನ್ನು ವಿಸ್ತರಿಸುತ್ತಾ ಅವರು ತಮ್ಮ ಚಟುವಟಿಕೆಯನ್ನು ಪುನಃ ಆರಂಭಿಸುವಂತೆ ಪ್ರೋತ್ಸಾಹಿಸತಕ್ಕದ್ದು.—ರೋಮಾ. 5:6-8.
5 ಯೆಹೋವನಿಗಾಗಿರುವ ನಮ್ಮ ಸ್ವಂತ ಪ್ರೀತಿಯನ್ನು ಗಾಢಗೊಳಿಸುವುದು: ಈಡಿನ ಕೊಡುಗೆಯ ಕುರಿತು ಗಂಭೀರವಾಗಿ ಆಲೋಚಿಸುವುದು, ಯೆಹೋವನಿಗಾಗಿರುವ ಮತ್ತು ಆತನ ಕುಮಾರನಿಗಾಗಿರುವ ನಮ್ಮ ಪ್ರೀತಿಯನ್ನು ಗಾಢಗೊಳಿಸುವುದು. (2 ಕೊರಿಂ. 5:14, 15) ಹಲವಾರು ವರ್ಷಗಳಿಂದ ಜ್ಞಾಪಕಾಚರಣೆಗೆ ಹಾಜರಾಗಿರುವ ಸಾಕ್ಷಿಯೊಬ್ಬಳು ಹೇಳಿದ್ದು: “ಜ್ಞಾಪಕಾಚರಣೆಯನ್ನು ನಾವು ಎದುರುನೋಡುತ್ತೇವೆ. ಪ್ರತಿ ವರ್ಷವೂ ಅದು ನಮಗೆ ಹೆಚ್ಚು ವಿಶೇಷವಾಗಿ ಪರಿಣಮಿಸುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಶವಸಂಸ್ಕಾರದ ಮನೆಯಲ್ಲಿ ನನ್ನ ಪ್ರೀತಿಯ ತಂದೆಯ ಶವವನ್ನು ನೋಡುತ್ತಾ ನಿಂತದ್ದನ್ನು ಮತ್ತು ವಿಮೋಚನಾ ಯಜ್ಞಕ್ಕೆ ನಿಜವಾದ ಹೃತ್ಪೂರ್ವಕ ಗಣ್ಯತೆಯನ್ನು ತೋರಿಸುವಂತಾದದ್ದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ಇದಕ್ಕೆ ಮೊದಲು ಅದು ಕೇವಲ ತಲೆಜ್ಞಾನದ ಒಂದು ವಿಚಾರವಾಗಿತ್ತು. ಓ, ಎಲ್ಲಾ ಶಾಸ್ತ್ರವಚನಗಳನ್ನು ಮತ್ತು ಅವುಗಳನ್ನು ಹೇಗೆ ವಿವರಿಸಬೇಕೆಂಬುದನ್ನು ನಾನು ತಿಳಿದಿದ್ದೆನು! ಆದರೆ ಮರಣದ ನಿರುತ್ಸಾಹಕರ ನೈಜ ಸ್ಥಿತಿಯನ್ನು ಅನುಭವಿಸಿದಾಗ, ಆ ಅಮೂಲ್ಯವಾದ ಪ್ರಾಯಶ್ಚಿತ್ತ ಯಜ್ಞದ ಮೂಲಕ ನಮಗೋಸ್ಕರ ಪೂರೈಸಲ್ಪಡುವ ವಿಷಯಗಳ ಕುರಿತು ನನ್ನ ಹೃದಯವು ಸಂಪೂರ್ಣವಾಗಿ ಆನಂದದಿಂದ ಹಿಗ್ಗಿತು.”—ಯೋಹಾ. 5:28, 29.
6 ಈ ವರ್ಷದ ಆಚರಣೆಯ ತಾರೀಖು ಸಮೀಪಿಸಿದಂತೆ, ಆ ಸಂದರ್ಭಕ್ಕಾಗಿ ನಿಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಲು ಸಮಯವನ್ನು ತೆಗೆದುಕೊಳ್ಳಿ. (2 ಪೂರ್ವ. 19:3) ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2004 ಮತ್ತು 2004 ಕ್ಯಾಲಂಡರ್ನಲ್ಲಿ ಸೂಚಿಸಲ್ಪಟ್ಟಿರುವ ವಿಶೇಷ ಜ್ಞಾಪಕದ ಬೈಬಲ್ ಓದುವಿಕೆಯ ಮೇಲೆ ಮನನಮಾಡಿರಿ. ಕೆಲವರು ತಮ್ಮ ಕುಟುಂಬ ಅಧ್ಯಯನದ ಸಮಯದಲ್ಲಿ, ಮಹಾನ್ ಪುರುಷ ಪುಸ್ತಕದ 112-16ನೇ ಅಧ್ಯಾಯಗಳನ್ನು ಮರುಪರಿಶೀಲಿಸಲು ಆನಂದಿಸುತ್ತಾರೆ. ಇತರರು, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೂಲಕ ಒದಗಿಸಲ್ಪಡುವ ಇತರ ಅಧ್ಯಯನ ಸಹಾಯಕಗಳನ್ನು ಉಪಯೋಗಿಸುತ್ತಾ ಹೆಚ್ಚಿನ ಸಂಶೋಧನೆಯನ್ನು ಮಾಡುತ್ತಾರೆ. (ಮತ್ತಾ. 24:45-47) ನಾವೆಲ್ಲರೂ ಈಡಿನ ಕೊಡುಗೆಯನ್ನು ನಮ್ಮ ಹೃತ್ಪೂರ್ವಕ ಪ್ರಾರ್ಥನೆಯ ಭಾಗವಾಗಿ ಮಾಡಬಲ್ಲೆವು. (ಕೀರ್ತ. 50:14, 23) ಹೌದು, ಈ ಜ್ಞಾಪಕದ ಸಮಯಾವಧಿಯಲ್ಲಿ, ಯೆಹೋವನು ನಮಗಾಗಿ ತೋರಿಸಿರುವ ಪ್ರೀತಿಯ ಕುರಿತು ಸದಾ ಧ್ಯಾನಿಸೋಣ ಮತ್ತು ಆತನಿಗಾಗಿರುವ ನಮ್ಮ ಪ್ರೀತಿಯನ್ನು ಪ್ರದರ್ಶಿಸಲು ಮಾರ್ಗಗಳಿಗಾಗಿ ಹುಡುಕೋಣ.—ಮಾರ್ಕ 12:30; 1 ಯೋಹಾ. 4:10.