ಒಳ್ಳೇದನ್ನು ಮಾಡುವುದರಲ್ಲಿ ಆಸಕ್ತರಾಗಿರ್ರಿ!
1 ಇಸವಿ 2003ರ ಜ್ಞಾಪಕಾಚರಣೆಯ ಕಾಲಾವಧಿಯನ್ನು ಪ್ರವೇಶಿಸುವಾಗ, ನಾವು “ಒಳ್ಳೇದನ್ನೇ ಮಾಡುವದರಲ್ಲಿ ಆಸಕ್ತರಾಗಿ”ರಲು ನಮಗೆ ಅನೇಕಾನೇಕ ಕಾರಣಗಳಿವೆ. (1 ಪೇತ್ರ 3:13) ಇವುಗಳಲ್ಲಿ ಪ್ರಥಮವಾದದ್ದು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವಾಗಿದೆ. (ಮತ್ತಾ. 20:28; ಯೋಹಾ. 3:16) ಈ ವಿಷಯದಲ್ಲಿ ಅಪೊಸ್ತಲ ಪೇತ್ರನು ಬರೆದುದು: “ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ಬೆಳ್ಳಿ ಭಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ. ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ.” (1 ಪೇತ್ರ 1:18, 19) ಪ್ರೀತಿಯ ಈ ಅಸಾಧಾರಣ ಅಭಿವ್ಯಕ್ತಿಗಾಗಿರುವ ನಮ್ಮ ಗಣ್ಯತೆಯು, ಯೇಸು “ನಮ್ಮನ್ನು ಸಕಲ ಅಧರ್ಮದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಪರಿಶುದ್ಧಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು” ಎಂಬುದನ್ನು ಗ್ರಹಿಸಿಕೊಂಡು ಒಳ್ಳೇದನ್ನು ಮಾಡುವುದರಲ್ಲಿ ನಮ್ಮನ್ನು ನಿರತಗೊಳಿಸಿಕೊಳ್ಳಲು ಒತ್ತಾಯಿಸುತ್ತದೆ.—ತೀತ 2:14; 2 ಕೊರಿಂ. 5:14, 15.
2 ನಾವು ಯೆಹೋವನ ದೃಷ್ಟಿಯಲ್ಲಿ ಒಳ್ಳೇದಾಗಿರುವುದನ್ನು ಮಾಡುವಾಗ, ಆತನೊಂದಿಗೆ ಒಂದು ಒಳ್ಳೇ ಸಂಬಂಧದಲ್ಲಿ ಆನಂದಿಸುತ್ತೇವೆ ಮತ್ತು ಆತನ ಪ್ರೀತಿಯ ಕಾವಲು ಪರಾಮರಿಕೆಯ ಕೆಳಗೆ ಬರುತ್ತೇವೆ. ಪೇತ್ರನು ಇನ್ನೂ ಮುಂದೆ ಹೇಳಿದ್ದು: “ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು . . . ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ. ಯಾಕಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ.” (1 ಪೇತ್ರ 3:10-12) ಈ ಗೊಂದಲಾತ್ಮಕ ಸಮಯಗಳಲ್ಲಿ, ಆತನು ನಮ್ಮ ಮೇಲೆ ಗಮನವನ್ನಿಟ್ಟಿದ್ದಾನೆ ಮತ್ತು “ಕಣ್ಣುಗುಡ್ಡಿನಂತೆ ಕಾಪಾಡಿ” ನಮ್ಮ ಪರವಾಗಿ ಕ್ರಿಯೆಗೈಯಲು ಸಿದ್ಧನಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ಆಶೀರ್ವಾದದಾಯಕವಾಗಿದೆ.—ಧರ್ಮೋ. 32:10; 2 ಪೂರ್ವ. 16:9.
3 ಪೇತ್ರನು ಯಾರಿಗೆ ಬರೆಯುತ್ತಿದ್ದನೋ ಆ ಆದಿ ಕ್ರೈಸ್ತರು ಪರೀಕ್ಷೆಗಳನ್ನು ಎದುರಿಸಿದ ಹೊರತೂ ಉತ್ಸಾಹ ಹಾಗೂ ಹುರುಪಿನಿಂದ ತುಂಬಿದವರಾಗಿದ್ದರು, ಮತ್ತು ಸುವಾರ್ತೆಯನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಘೋಷಿಸಿದರು. (1 ಪೇತ್ರ 1:6; 4:12) ಇಂದು ದೇವಜನರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ನಾವು ನಿರ್ವಹಿಸಲು ಕಷ್ಟಕರವಾದ ‘ಕಠಿನಕಾಲಗಳಲ್ಲಿ’ ಜೀವಿಸುತ್ತಿರುವುದಾದರೂ, ಯೆಹೋವನ ಒಳ್ಳೇತನಕ್ಕಾಗಿರುವ ನಮ್ಮ ಗಣ್ಯತೆಯು ನಾವು ದೇವರ ಚಿತ್ತವನ್ನು ಆಸಕ್ತಿಯಿಂದ ಮಾಡುವಂತೆ ಪ್ರಚೋದಿಸುತ್ತದೆ. (2 ತಿಮೊ. 3:1; ಕೀರ್ತ. 145:7) ಜ್ಞಾಪಕಾಚರಣೆಯ ಕಾಲಾವಧಿಯಲ್ಲಿ ನಾವು ನಮ್ಮನ್ನೇ ನಿರತರಾಗಿಸಿಕೊಳ್ಳಲಿರುವ ಒಳ್ಳೇ ಕಾರ್ಯಗಳಲ್ಲಿ ಕೆಲವನ್ನು ಪರಿಗಣಿಸೋಣ.
4 ಇತರರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಿರಿ: ಪ್ರಾಯಶ್ಚಿತ್ತದ ಈ ಅಸಾಧಾರಣವಾದ ಕೊಡುಗೆಗಾಗಿ ನಾವು ನಮ್ಮ ಗಣ್ಯತೆಯನ್ನು ತೋರಿಸುವ ಒಂದು ವಿಧಾನವು, ಯೇಸುವಿನ ಮರಣದ ವಾರ್ಷಿಕ ಸಮಾರಂಭದಲ್ಲಿ ಹಾಜರಿರುವ ಮೂಲಕ. ಇದು ಈ ವರ್ಷ ಏಪ್ರಿಲ್ 16, ಬುಧವಾರದ ಸೂರ್ಯಾಸ್ತಮಾನದ ನಂತರ ಆಚರಿಸಲ್ಪಡಲಿರುವುದು. (ಲೂಕ 22:19, 20) ಕಳೆದ ವರ್ಷ, ಲೋಕವ್ಯಾಪಕವಾಗಿ 94,600 ಸಭೆಗಳು ವರದಿಸುತ್ತಾ, 1,55,97,746 ಮಂದಿಯ ಒಟ್ಟು ಹಾಜರಿಯನ್ನು ಕಂಡೆವು! ಇದು ಅದರ ಮುಂಚಿನ ವರ್ಷದ ಹಾಜರಿಗಿಂತ 2,20,000 ಹೆಚ್ಚಾಗಿತ್ತು.
5 ಈ ವರ್ಷ ಎಷ್ಟು ಮಂದಿ ಹಾಜರಾಗುವರು? ಇದು, ಇತರರು ನಮ್ಮೊಂದಿಗೆ ಜೊತೆಗೂಡುವಂತೆ ಅವರನ್ನು ಪ್ರೋತ್ಸಾಹಿಸುವ ನಮ್ಮ ಶ್ರದ್ಧಾತ್ಮಕ ಪ್ರಯತ್ನಗಳ ಮೇಲೆ ಆತುಕೊಂಡಿದೆ. ನೀವು ಆಮಂತ್ರಿಸ ಬಯಸುವ ಎಲ್ಲರ ಒಂದು ಪಟ್ಟಿಯನ್ನು ಮಾಡಿಕೊಳ್ಳಲು ಆರಂಭಿಸಿರಿ. ಆ ಪಟ್ಟಿಯಲ್ಲಿ ಮೊದಲಿಗರು ನಿಮ್ಮ ಸ್ವಂತ ಕುಟುಂಬದ ಸದಸ್ಯರಾಗಿರಬೇಕು. ನಿಮಗೆ ಒಬ್ಬ ಅವಿಶ್ವಾಸಿ ಸಂಗಾತಿಯಿರುವಲ್ಲಿ, ಅವನು ಅಥವಾ ಅವಳು ನಿಮ್ಮೊಂದಿಗೆ ಹಾಜರಾಗುವುದರ ನಿಮ್ಮ ಹಾರ್ದಿಕ ಬಯಕೆಯನ್ನು ವ್ಯಕ್ತಪಡಿಸಿರಿ. ತನ್ನ ಪತ್ನಿಗೆ ತನ್ನ ಹಾಜರಿಯು ಎಷ್ಟು ಅಮೂಲ್ಯವೆಂಬುದನ್ನು ಮನಗಂಡದ್ದರಿಂದ, ಕಳೆದ ವರ್ಷದ ಜ್ಞಾಪಕಾಚರಣೆಗೆ ಹಾಜರಾದೆ ಎಂದು ಒಬ್ಬ ಅವಿಶ್ವಾಸಿ ಗಂಡನು ಹೇಳಿದನು. ನಿಮ್ಮ ಪಟ್ಟಿಯಲ್ಲಿ ನಂತರ ಬರುವವರು ನಿಮ್ಮ ಸಂಬಂಧಿಕರು, ನೆರೆಯವರು, ಸಹಕರ್ಮಿಗಳು, ಅಥವಾ ಸಹಪಾಠಿಗಳು. ನಿಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸುವುದನ್ನು ಮರೆಯದಿರಿ.
6 ನಿಮ್ಮ ಪಟ್ಟಿಯನ್ನು ತಯಾರಿಸಿದ ನಂತರ, ಪ್ರತಿಯೊಬ್ಬರಿಗೂ ವೈಯಕ್ತಿಕವಾದ ಆಮಂತ್ರಣವನ್ನು ಕೊಡಲು ಸಮಯವನ್ನು ಶೆಡ್ಯೂಲ್ ಮಾಡಿರಿ. ಮುದ್ರಿತ ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ಉಪಯೋಗಿಸಿರಿ. ಆಚರಣೆಯು ಯಾವಾಗ ಮತ್ತು ಎಲ್ಲಿ ನಡೆಸಲ್ಪಡುತ್ತದೆ ಎಂಬುದನ್ನು ಜನರು ಜ್ಞಾಪಕದಲ್ಲಿಟ್ಟುಕೊಂಡಿರಲು ನೆರವಾಗುವಂತೆ, ಜ್ಞಾಪಕಾಚರಣೆಯ ಸಮಯ ಮತ್ತು ಸ್ಥಳವನ್ನು ಆಮಂತ್ರಣ ಪತ್ರದ ಕೆಳಬದಿಯಲ್ಲಿ ಟೈಪ್ ಮಾಡಿರಿ ಇಲ್ಲವಾದರೆ ನೀಟಾಗಿ ಬರೆಯಿರಿ. ಏಪ್ರಿಲ್ 16 ಹತ್ತಿರವಾದಂತೆ, ನಿಮ್ಮ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ವ್ಯಕ್ತಿಗತವಾಗಿಯೋ ಟೆಲಿಫೋನಿನ ಮೂಲಕವೋ ಒಂದು ಮರುಜ್ಞಾಪನವನ್ನು ಕೊಡಿರಿ. ಈ ಅತಿ ಪವಿತ್ರವಾದ ಸಂದರ್ಭಕ್ಕಾಗಿ ಹಾಜರಿರುವಂತೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸಹಾಯಮಾಡೋಣ.
7 ಜ್ಞಾಪಕಾಚರಣೆಗೆ ಹಾಜರಾಗುವವರಿಗೆ ನೆರವು ನೀಡಿರಿ: ಜ್ಞಾಪಕಾಚರಣೆಯ ರಾತ್ರಿಯು ಯಾವಾಗಲೂ ಭಾವಪ್ರಚೋದಕವಾದ ಸಂದರ್ಭವಾಗಿರುತ್ತದೆ. ಏಕೆಂದರೆ ಸಾಮಾನ್ಯವಾಗಿ ನಮ್ಮ ಕೂಟಗಳಿಗೆ ಹಾಜರಾಗದ ವ್ಯಕ್ತಿಗಳನ್ನು ಆಮಂತ್ರಿಸುವ ಒಂದು ಅವಕಾಶ ನಮಗೆ ಸಿಗುತ್ತದೆ. ಸ್ಥಳಿಕ ಪರಿಸ್ಥಿತಿಗಳಿಗನುಸಾರ, ಕಾಲಕ್ಕಿಂತ ಮುಂಚಿತವಾಗಿ ಬರಲು ಮತ್ತು ತಡವಾಗಿ ಹೋಗಲು ಏರ್ಪಾಡುಗಳನ್ನು ಮಾಡಿರಿ. ಹಾಜರಿಯಲ್ಲಿರುವ ಹೊಸಬರ ಪರಿಚಯಮಾಡಿಕೊಳ್ಳಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ವಾತ್ಸಲ್ಯಭಾವದವರೂ ಸತ್ಕಾರ ತೋರಿಸುವವರೂ ಆಗಿರ್ರಿ.—ರೋಮಾಪುರ 12:13.
8 ಜ್ಞಾಪಕಾಚರಣೆಗೆ ಹಾಜರಾಗುವ ಕೆಲವರು ಒಂದು ಮನೆ ಬೈಬಲ್ ಅಧ್ಯಯನದ ಮೂಲಕ ಹೆಚ್ಚಿನ ಆತ್ಮಿಕ ಪ್ರಗತಿಯನ್ನು ಮಾಡುವಂತೆ ಅವರಿಗೆ ಸಹಾಯಮಾಡಸಾಧ್ಯವಿದೆಯೋ? ಸದ್ಯಕ್ಕೆ ಯಾವುದೇ ಪುನರ್ಭೇಟಿಯು ಮಾಡಲ್ಪಟ್ಟಿರದಂಥ ವ್ಯಕ್ತಿಗಳಿಗೆ ನೆರವನ್ನು ನೀಡಲು ಅವರ ಹೆಸರು ಮತ್ತು ವಿಳಾಸಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಪ್ರೀತಿಯ ನೆರವಿನೊಂದಿಗೆ, ಇವರಲ್ಲಿ ಕೆಲವರು ಮುಂದಿನ ವರ್ಷದ ಜ್ಞಾಪಕಾಚರಣೆಗೆ ಮುಂಚಿತವಾಗಿ ಅಸ್ನಾತ ಪ್ರಚಾರಕರಾಗುವಷ್ಟು ಅರ್ಹರಾಗಬಹುದು. ಜ್ಞಾಪಕಾಚರಣೆಗೆ ಹಾಜರಾದವರನ್ನು ಪುನರ್ಭೇಟಿ ಮಾಡುವಾಗ, ಏಪ್ರಿಲ್ 27ರಂದಿರುವ ವಿಶೇಷ ಬಹಿರಂಗ ಭಾಷಣಕ್ಕಾಗಿ ಆಮಂತ್ರಣವನ್ನು ನೀಡಿರಿ.
9 ಈ ಬೇಸಗೆಯಲ್ಲಿ ನೀವು ಆಕ್ಸಿಲಿಯರಿ ಪಯನೀಯರಾಗಬಲ್ಲಿರೋ? ಪ್ರತಿ ವರ್ಷ, ವಿಶೇಷ ದೇವಪ್ರಭುತ್ವಾತ್ಮಕ ಚಟುವಟಿಕೆಯ ತಿಂಗಳುಗಳಲ್ಲಿ ನಮ್ಮನ್ನೇ ಶುಶ್ರೂಷೆಯಲ್ಲಿ ಪೂರ್ಣವಾಗಿ ನೀಡಿಕೊಳ್ಳುವಂತೆ ಯೆಹೋವನಿಗಾಗಿರುವ ನಮ್ಮ ಹುರುಪು ನಮ್ಮನ್ನು ಪ್ರಚೋದಿಸುತ್ತದೆ. ಜ್ಞಾಪಕಾಚರಣೆಯ ಕಾಲಾವಧಿಯಲ್ಲಿ ಸುವಾರ್ತೆಯನ್ನು ಹುರುಪಿನಿಂದ ಸಾರುವುದರಲ್ಲಿ ಇಡೀ ಸಭೆಯು ಮಾಡುವ ಒಗ್ಗಟ್ಟಿನ ಪ್ರಯತ್ನಗಳು ಹೆಚ್ಚಿನ ಪ್ರತಿಫಲವನ್ನು ತರಸಾಧ್ಯವಿದೆ.
10 ಕಳೆದ ಏಪ್ರಿಲ್ನಲ್ಲಿ ಒಂದು “ಅದ್ಭುತಕರವಾದ ತಿಂಗಳ”ನ್ನು ಅನುಭವಿಸಿದೆವೆಂದು 107 ಪ್ರಚಾರಕರು ಮತ್ತು 9 ರೆಗ್ಯುಲರ್ ಪಯನೀಯರರಿದ್ದ ಒಂದು ಸಭೆಯು ವರದಿಸಿತು. ಅಲ್ಲಿ ಎಲ್ಲಾ ಹಿರಿಯರು ಮತ್ತು ಶುಶ್ರೂಷಾ ಸೇವಕರನ್ನು ಜೊತೆಗೂಡುತ್ತಾ 53 ಮಂದಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಮಾಡಿದರು. ಆ ತಿಂಗಳಿನ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿ ಅಲ್ಲಿನ ಹಿರಿಯರು ಹೇಗೆ ಹುರಿದುಂಬಿಸಿದರು? ಇತರರು ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದನ್ನು ಕಾಲಕ್ಕೆ ಮುಂಚಿತಾಗಿಯೇ ಆರಂಭಿಸಿದರು. ಸಭೆಯಲ್ಲಿರುವ ಎಲ್ಲರಿಗೂ ಅನುಕೂಲಕರವಾಗಿರುವಂತೆ ಕ್ಷೇತ್ರ ಸೇವೆಗಾಗಿರುವ ಕೂಟಗಳು ದಿನದ ವಿವಿಧ ಸಮಯಗಳಲ್ಲಿ ನಡೆಸಲ್ಪಟ್ಟವು. ವಿಶೇಷವಾಗಿ ಅಸ್ವಸ್ಥರಿಗಾಗಿ ಟೆಲಿಫೋನ್ ಸಾಕ್ಷಿಕಾರ್ಯಕ್ಕೆ ಪ್ರಧಾನ ಒತ್ತು ನೀಡಲ್ಪಟ್ಟಿತು.
11 ಒಬ್ಬ 86 ವರ್ಷ ಪ್ರಾಯದ ಸಹೋದರಿಯು, ಅಸ್ವಸ್ಥತೆಯ ಕಾರಣ ನಡೆಯಲು ಸಾಧ್ಯವಿಲ್ಲದಿದ್ದರೂ ಆಕ್ಸಿಲಿಯರಿ ಪಯನೀಯರ್ ಸೇವೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಅವರು ಮುಂಜಾನೆ ಆರಂಭಿಸಿ, ತಮ್ಮ ಅಡುಗೆಮನೆಯ ಮೇಜಿನ ಬಳಿಯಲ್ಲಿ ಕುಳಿತುಕೊಂಡು ಎರಡು ತಾಸುಗಳ ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡಿ, ಸ್ವಲ್ಪ ವಿಶ್ರಾಂತಿ ಪಡೆದುಕೊಂಡ ಬಳಿಕ ಪುನಃ ಇದನ್ನು ಮುಂದುವರಿಸುತ್ತಿದ್ದರು. ಅವರು ಕರೆಮಾಡಿದ ವ್ಯಕ್ತಿಗಳಲ್ಲಿ ಒಬ್ಬಳು, ಕಳೆದ ಎರಡು ವರ್ಷಗಳಲ್ಲಿ ತನ್ನ ಗಂಡ ಮತ್ತು ಎರಡು ಹದಿಪ್ರಾಯದ ಗಂಡು ಮಕ್ಕಳನ್ನು ಮರಣದಲ್ಲಿ ಕಳೆದುಕೊಂಡಿದ್ದಳು ಮತ್ತು ಈ ರೀತಿಯ ದುಷ್ಟ ಸಂಗತಿಗಳನ್ನು ಸಂಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆಂಬುದನ್ನು ಅರಿಯದೇ ಇದ್ದಳು. ಒಂದು ಒಳ್ಳೇ ಸಾಕ್ಷಿ ಕೊಡಲ್ಪಟ್ಟಿತು ಮತ್ತು ಒಂದು ಬೈಬಲ್ ಅಧ್ಯಯನ ಆರಂಭಿಸಲ್ಪಟ್ಟಿತು. ಸಂಜೆ ಹೊತ್ತಿನಲ್ಲಿ ಮತ್ತು ಇತರ ಸಮಯಗಳಲ್ಲಿ ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡುವುದು, ಕಟ್ಟಡಗಳಲ್ಲಿ ಅಥವಾ ಸಂಪರ್ಕಿಸಲಸಾಧ್ಯವಾದ ಕ್ಷೇತ್ರಗಳಲ್ಲಿ ಜೀವಿಸುವ ಜನರನ್ನು ಸಂಪರ್ಕಿಸಲು ಒಂದು ಪರಿಣಾಮಕಾರಿ ವಿಧಾನವಾಗಿದೆ. ಮತ್ತು ದಿನದ ವೇಳೆಯಲ್ಲಿ ಮನೆಯಲ್ಲಿ ಸಿಗದಿದ್ದ ಜನರನ್ನು ಸಂಪರ್ಕಿಸಲು ಸಹ ಇದು ಪ್ರಚಾರಕರಿಗೆ ಸಾಧ್ಯಗೊಳಿಸುತ್ತದೆ.
12 ಹಿರಿಯರು ತಮ್ಮ ವರದಿಯನ್ನು ಹೀಗೆ ಹೇಳುವುದರ ಮೂಲಕ ಕೊನೆಗೊಳಿಸಿದರು: “ನಾವು ಎಷ್ಟು ಅದ್ಭುತಕರವಾದ ಸಂದರ್ಭದಲ್ಲಿ ಆನಂದಿಸಿದೆವು ಮತ್ತು ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೆ ಸಾಧ್ಯಗೊಳಿಸಿರುವ ಸುಯೋಗ ಹಾಗೂ ಆಶೀರ್ವಾದಗಳಿಗಾಗಿ ಕೃತಜ್ಞರಾಗಿದ್ದೇವೆ.” ಸುಯೋಜನೆಯ ಮೂಲಕ, ನಿಮ್ಮ ಸಭೆಯು ಕೂಡ ಈ ರೀತಿಯ ಆಶೀರ್ವಾದಗಳಲ್ಲಿ ಆನಂದಿಸಬಹುದು.
13 ಶುಶ್ರೂಷೆಯಲ್ಲಿ 100-ಪ್ರತಿಶತ ಪಾಲ್ಗೊಳ್ಳುವಿಕೆಗಾಗಿ ಪ್ರಯಾಸಪಡಿರಿ: ದೇವರಿಗಾಗಿರುವ ಮತ್ತು ನೆರೆಯನಿಗಾಗಿರುವ ನಮ್ಮ ಪ್ರೀತಿಯು ನಾವು ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಪ್ರತಿ ತಿಂಗಳು ಸಮಯವನ್ನು ಖರೀದಿಸಿಕೊಳ್ಳುವಂತೆ ನಮ್ಮನ್ನು ಪ್ರೇರಿಸುತ್ತದೆ. (ಮತ್ತಾ. 22:37-39) ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರು ಮತ್ತು ಅವರ ಸಹಾಯಕರು ತಮ್ಮ ಗುಂಪಿನಲ್ಲಿರುವವರು ಶುಶ್ರೂಷೆಯಲ್ಲಿ ಪಾಲಿಗರಾಗುವಂತೆ, ಅವರಿಗೆ ಪ್ರತಿ ತಿಂಗಳು ನೆರವು ನೀಡಲು ಪ್ರಯತ್ನಿಸಬೇಕು. ಇದನ್ನು ಮಾಡಲು ಒಂದು ಉತ್ತಮವಾದ ವಿಧಾನವು, ಗುಂಪಿನಲ್ಲಿರುವ ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಶುಶ್ರೂಷೆಯಲ್ಲಿ ಕೆಲಸ ಮಾಡಲು ಮುಂಚಿತವಾಗಿ ಏರ್ಪಾಡುಗಳನ್ನು ಮಾಡುವುದೇ. ಇದನ್ನು ಮಾಡಲು ತಿಂಗಳಂತ್ಯದ ತನಕ ಕಾಯುವ ಬದಲು, ಮುಂಚಿತವಾಗಿಯೇ ಆರಂಭಿಸಿರಿ. ಇದು ನೀವು ಪ್ರೀತಿಯ ನೆರವನ್ನು ನೀಡಲು ನಿಮಗೆ ಹೆಚ್ಚಿನ ಸಂದರ್ಭಗಳನ್ನು ಒದಗಿಸಿಕೊಡುವುದು.
14 ದುರ್ಬಲರಾಗಿರುವ ಮತ್ತು ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ತುಂಬ ಕಷ್ಟಕರವಾಗಿರುವ ಪ್ರಚಾರಕರು ನಿಮ್ಮ ಪುಸ್ತಕ ಅಧ್ಯಯನ ಗುಂಪಿನಲ್ಲಿದ್ದಾರೋ? ಕೆಲವರು ನರ್ಸಿಂಗ್ ಹೋಮ್ನಲ್ಲಿ ಸೇರಿಸಲ್ಪಟ್ಟಿರುವುದಾದರೆ ಅಥವಾ ತಮ್ಮ ಮನೆಗಳಿಗೆ ನಿರ್ಬಂಧಿಸಲ್ಪಟ್ಟಿರುವುದಾದರೆ, ಅವರು ಸಾಕ್ಷಿಕೊಡುವಂತೆ ಇರುವ ಸಂದರ್ಭಗಳು ಸೀಮಿತ ಎಂಬುದು ಅರ್ಥಮಾಡಿಕೊಳ್ಳಬಲ್ಲ ವಿಷಯವಾಗಿದೆ. ಆದರೆ ತಮ್ಮ ಸೀಮಿತ ಸನ್ನಿವೇಶಗಳಲ್ಲೂ ತಮ್ಮ ಬೆಳಕನ್ನು ಪ್ರಕಾಶಿಸಲಿಕ್ಕಾಗಿ ಅವರು ತೆಗೆದುಕೊಳ್ಳುವ ಪ್ರಯಾಸಗಳ ಮೂಲಕ, ಅವರ ಉತ್ತಮ ಕಾರ್ಯಗಳನ್ನು ನೋಡುವವರು ಸತ್ಯದಲ್ಲಿ ನಿಜಾಸಕ್ತಿಯನ್ನು ತೆಗೆದುಕೊಳ್ಳುವಂತೆ ಅವರು ಪ್ರಚೋದಿಸಬಹುದು. (ಮತ್ತಾ. 5:16) ಹೀಗೆ ಅಶಕ್ತರು ತಮ್ಮ ಕ್ಷೇತ್ರ ಸೇವಾ ಚಟುವಟಿಕೆಯಲ್ಲಿ 15 ನಿಮಿಷಗಳನ್ನು ವರದಿಸಬಹುದು ಎಂಬುದು ಅವರಿಗೆ ಗೊತ್ತಿದೆ ಎಂಬುದನ್ನು ಪುಸ್ತಕ ಅಧ್ಯಯನ ಮೇಲ್ವಿಚಾರಕರು ಖಚಿತಪಡಿಸಿಕೊಳ್ಳಬೇಕು. ಅವರು ಸಾಕ್ಷಿಕಾರ್ಯದಲ್ಲಿ ವ್ಯಯಿಸಿದಂಥ ಸಮಯವನ್ನು ವರದಿಸಲು ಸಾಧ್ಯವಾಗಿರುವುದು ಈ ಪ್ರಚಾರಕರನ್ನು ಪ್ರೋತ್ಸಾಹಿಸುತ್ತದೆ ಮತ್ತು ಅವರಿಗೆ ಆಹ್ಲಾದಕರ ಸಂತೃಪ್ತಿಯನ್ನು ತರುತ್ತದೆ. ಹಾಗೂ ದೇವಜನರ ಚಟುವಟಿಕೆಯ ಲೋಕವ್ಯಾಪಕ ವರದಿ ನಿಷ್ಕೃಷ್ಟವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯಮಾಡುತ್ತದೆ.
15 ಒಳ್ಳೇದನ್ನು ಮಾಡುವುದರಲ್ಲಿ ನಿರತರಾಗಿರುವ ಯುವಕರು! ಕ್ರೈಸ್ತ ಯುವ ಜನರು ತಮ್ಮ ಶಕ್ತಿಸಾಮರ್ಥ್ಯಗಳನ್ನು ಯೆಹೋವನ ಸೇವೆಯಲ್ಲಿ ವ್ಯಯಿಸುತ್ತಿರುವುದನ್ನು ನೋಡುವುದು ಎಷ್ಟು ಚೈತನ್ಯದಾಯಕವಾಗಿದೆ! (ಜ್ಞಾನೋ. 20:29) ನೀವು ಯುವ ಜನರಾಗಿರುವಲ್ಲಿ, ಚಟುವಟಿಕೆಯ ಈ ವಿಶೇಷ ತಿಂಗಳುಗಳಲ್ಲಿ ನೀವು ಯೆಹೋವನಿಗಾಗಿರುವ ನಿಮ್ಮ ಆಸಕ್ತಿಯನ್ನು ಹೇಗೆ ಪ್ರದರ್ಶಿಸಬಲ್ಲಿರಿ?
16 ನೀವು ಸಭೆಯಲ್ಲಿ ಇನ್ನೂ ಒಬ್ಬ ಅಸ್ನಾತ ಪ್ರಚಾರಕರಾಗಿರದಿದ್ದಲ್ಲಿ, ಆ ಸುಯೋಗವನ್ನು ತಲಪಲು ನೀವು ಪ್ರಯಾಸಪಡಬಲ್ಲಿರೋ? ಸ್ವತಃ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿರಿ: ‘ನನಗೆ ಬೈಬಲ್ ಸತ್ಯದ ಒಂದು ಪ್ರಾಥಮಿಕ ಜ್ಞಾನವಿದೆಯೋ? ರಾಜ್ಯ ಸೇವೆಯಲ್ಲಿ ಪಾಲ್ಗೊಳ್ಳುವ ಬಯಕೆ ನನ್ನಲ್ಲಿದೆಯೋ? ನಾನು ನನ್ನ ನಡತೆಯಲ್ಲಿ ಆದರ್ಶಪ್ರಾಯನಾಗಿದ್ದೇನೋ? ನನ್ನ ನಂಬಿಕೆಯನ್ನು ವೈಯಕ್ತಿಕವಾಗಿ ವ್ಯಕ್ತಪಡಿಸುವುದರೋಪಾದಿ ನಾನು ಇತರರ ಬಳಿ ಸುವಾರ್ತೆಯ ಕುರಿತು ಮಾತಾಡಲು ಶಕ್ತನಾಗಿದ್ದೇನೋ? ಹೀಗೆ ಮಾಡಲು ನನ್ನ ಹೃದಯದಿಂದ ಪ್ರಚೋದಿಸಲ್ಪಟ್ಟಿದ್ದೇನೋ?’ ನೀವು ಈ ಪ್ರಶ್ನೆಗಳಿಗೆ ಹೌದು ಎಂದು ಉತ್ತರಿಸುವುದಾದರೆ, ಒಬ್ಬ ಪ್ರಚಾರಕರಾಗಬೇಕೆಂಬ ನಿಮ್ಮ ಬಯಕೆಯ ಕುರಿತು ನಿಮ್ಮ ಹೆತ್ತವರೊಂದಿಗೆ ಮಾತಾಡಿರಿ. ಇತರ ವಿಷಯದಲ್ಲಿ ನಿಮ್ಮ ಹೆತ್ತವರು ಸೇವಾ ಕಮಿಟಿಯ ಒಬ್ಬ ಹಿರಿಯನನ್ನು ಸಂಪರ್ಕಿಸಬಹುದು.
17 ನೀವು ಈಗಾಗಲೇ ಸುವಾರ್ತೆಯ ಒಬ್ಬ ಪ್ರಚಾರಕರಾಗಿರುವಲ್ಲಿ, ನಿಮ್ಮ ಶಾಲಾ ಬಿಡುವಿನ ಸಮಯವನ್ನು ಸದುಪಯೋಗಿಸಿಕೊಳ್ಳುತ್ತಾ ಶುಶ್ರೂಷೆಯಲ್ಲಿ ಹೆಚ್ಚು ಪಾಲ್ಗೊಳ್ಳಬಲ್ಲಿರೋ? ಒಂದು ಒಳ್ಳೆಯ ವೇಳಾಪಟ್ಟಿ ಮತ್ತು ಹೆತ್ತವರು ಹಾಗೂ ಇತರರ ನೆರವಿನೊಂದಿಗೆ, ಅನೇಕ ಸ್ನಾತ ಯುವಕರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಶಕ್ತರಾಗಿದ್ದಾರೆ. ಅದು ಸಾಧ್ಯವಿಲ್ಲವಾದರೆ, ಕ್ಷೇತ್ರ ಸೇವೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ದೃಢಚಿತ್ತರಾಗಿರ್ರಿ. ನಿಮಗೆಂದು ಒಂದು ಗುರಿಯನ್ನು ಇಟ್ಟುಕೊಳ್ಳಿರಿ. ನಿರ್ದಿಷ್ಟ ತಾಸುಗಳನ್ನು ಮಾಡುವ ಗುರಿಯೊಂದಿಗೆ, ನಿಮ್ಮ ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಗೊಳಿಸುವುದಕ್ಕೆ ಸಂಬಂಧಿಸಿದ ಮತ್ತೊಂದು ಗುರಿಯನ್ನು ಇಟ್ಟುಕೊಳ್ಳಿರಿ. ಪ್ರಾಯಶಃ ಪ್ರತಿ ಮನೆಯಲ್ಲಿ ಒಂದು ಶಾಸ್ತ್ರವಚನವನ್ನು ತೋರಿಸಲು, ನಿಮ್ಮ ಪುನರ್ಭೇಟಿಗಳ ಗುಣಮಟ್ಟವನ್ನು ಹೆಚ್ಚಿಸಲು, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು, ಅಥವಾ ನಿಮ್ಮ ಶುಶ್ರೂಷೆಯ ವ್ಯಾಪ್ತಿಯನ್ನು ಟೆಲಿಫೋನ್ ಸಾಕ್ಷಿಕಾರ್ಯ ಅಥವಾ ಸೇವೆಯ ಬೇರೆ ಯಾವುದೇ ರೀತಿಯ ವೈಶಿಷ್ಟ್ಯವನ್ನು ಕೂಡಿಸುತ್ತಾ ಹೆಚ್ಚಿಸಲು ನೀವು ಪ್ರಯಾಸಪಡಸಾಧ್ಯವಿದೆ. ನಿಮ್ಮ ನೆರೆಯವ, ಸಹಪಾಠಿ, ಅಥವಾ ಸಂಬಂಧಿಕನೊಬ್ಬನು ಈ ವರ್ಷ ಜ್ಞಾಪಕಾಚರಣೆಗೆ ನಿಮ್ಮೊಂದಿಗೆ ಜೊತೆಗೂಡುವಂತೆ ಮಾಡುವ ಗುರಿಯ ಕುರಿತಾಗಿ ಏನು? ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ಪೂರ್ಣವಾದ ಪಾಲ್ಗೊಳ್ಳುವಿಕೆಯು ಪ್ರತಿಫಲದಾಯಕವಾಗಿರುವುದು ಮತ್ತು ಖಂಡಿತ ಸಭೆಯಲ್ಲಿರುವ ಇತರರನ್ನು ಪ್ರೋತ್ಸಾಹಿಸುವುದು.—1 ಥೆಸ. 5:11.
18 ಹೊಸಬರು ಪ್ರಗತಿಮಾಡುವಂತೆ ಸಹಾಯಮಾಡಿರಿ: ಭಾರತದಲ್ಲಿ ಕಳೆದ ಸೇವಾ ವರ್ಷದಲ್ಲಿ, ಪ್ರತಿ ತಿಂಗಳು ಸರಾಸರಿಯಾಗಿ 14,896 ಮನೆ ಬೈಬಲ್ ಅಧ್ಯಯನಗಳು ನಡೆಸಲ್ಪಟ್ಟವು. ಸಕಾಲದಲ್ಲಿ, ಈ ವಿದ್ಯಾರ್ಥಿಗಳಲ್ಲಿ ಅನೇಕರು ಸಮರ್ಪಣೆ ಮತ್ತು ದೀಕ್ಷಾಸ್ನಾನವೆಂಬ ಹಂತಕ್ಕೆ ಪ್ರಗತಿ ಮಾಡಬಹುದು. ಆದರೂ, ಆ ಗುರಿಯನ್ನು ಅವರು ತಲಪುವುದಕ್ಕೆ ಮುಂಚಿತವಾಗಿ, ಅವರು ಸುವಾರ್ತೆಯ ಪ್ರಚಾರಕರಾಗಿ ಅರ್ಹರಾಗಲು ನಾವು ಅವರಿಗೆ ಸಹಾಯಮಾಡಬೇಕಾಗಿದೆ. ಹೊಸಬರು ಯೇಸು ಕ್ರಿಸ್ತನ ಹಿಂಬಾಲಕರಾಗುವಂತೆ ಅವರಿಗೆ ಬೋಧಿಸುವುದರಲ್ಲಿ ಇದು ಒಂದು ಮುಖ್ಯ ಹೆಜ್ಜೆಯಾಗಿದೆ. (ಮತ್ತಾ. 9:9; ಲೂಕ 6:40) ನಿಮ್ಮ ಬೈಬಲ್ ವಿದ್ಯಾರ್ಥಿಯು ಆ ಹೆಜ್ಜೆಯನ್ನು ತೆಗೆದುಕೊಳ್ಳಲು ಸಿದ್ಧನಾಗಿದ್ದಾನೋ?
19 ನಿಮಗೆ ನಿಮ್ಮ ವಿದ್ಯಾರ್ಥಿಯ ಪ್ರಗತಿಯ ಕುರಿತು ಅನಿಶ್ಚಿತತೆ ಇರುವುದಾದರೆ, ನಿಮ್ಮ ಪುಸ್ತಕ ಅಧ್ಯಯನ ಮೇಲ್ವಿಚಾರಕನ ಅಥವಾ ಸೇವಾ ಮೇಲ್ವಿಚಾರಕನ ನೆರವನ್ನು ಕೋರಿರಿ. ಪ್ರಾಯಶಃ ಅವರು ನಿಮ್ಮ ಬೈಬಲ್ ಅಧ್ಯಯನಕ್ಕೆ ಬರುವಂತೆ ನೀವು ಆಮಂತ್ರಿಸಬಹುದು. ಈ ಸಹೋದರರ ಬಳಿ ವಿದ್ಯಾರ್ಥಿಯ ಆತ್ಮಿಕ ಪ್ರಗತಿಯನ್ನು ಅಂದಾಜುಮಾಡಬಲ್ಲ ಅಮೂಲ್ಯ ಅನುಭವವಿದೆ. ವಿದ್ಯಾರ್ಥಿಯು ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಹೋಗುವಂತೆ ಸಹಾಯಮಾಡಲು ಅವರಿಗೆ ಹೇಳಲಿಕ್ಕಿರುವ ಕೆಲವು ಸಲಹೆಗಳಿರಬಹುದು.
20 ನಿಮ್ಮ ವಿದ್ಯಾರ್ಥಿಯು ತಾನು ಒಬ್ಬ ಅಸ್ನಾತ ಪ್ರಚಾರಕನಾಗುವ ಬಯಕೆಯನ್ನು ವ್ಯಕ್ತಪಡಿಸುವುದಾದರೆ ಮತ್ತು ಅವನು ಅರ್ಹನಾಗಿದ್ದಾನೆ ಎಂದು ನಿಮಗನಿಸುವುದಾದರೆ, ಇದರ ವಿಷಯದಲ್ಲಿ ಅಧ್ಯಕ್ಷ ಮೇಲ್ವಿಚಾರಕನ ಬಳಿ ಮಾತಾಡಿರಿ. ಅವರು ನಿಮ್ಮನ್ನು ಮತ್ತು ನಿಮ್ಮ ವಿದ್ಯಾರ್ಥಿಯನ್ನು ಭೇಟಿಮಾಡಲು ಏರ್ಪಾಡು ಮಾಡುವರು. ಮತ್ತು ಆ ಹಿರಿಯರು ವಿದ್ಯಾರ್ಥಿಯು ಅರ್ಹನಾಗಿದ್ದಾನೋ ಎಂದು ಕಂಡುಹಿಡಿಯಲು, ನಮ್ಮ ಶುಶ್ರೂಷೆ ಪುಸ್ತಕದ 98-9 ಪುಟಗಳಲ್ಲಿರುವ ಮಾಹಿತಿಯನ್ನು ಉಪಯೋಗಿಸುವರು. (1988, ನವೆಂಬರ್ 15ರ ಕಾವಲಿನಬುರುಜುವಿನ ಪುಟ 17ನ್ನು ನೋಡಿರಿ.) ವಿದ್ಯಾರ್ಥಿಯು ಒಬ್ಬ ಪ್ರಚಾರಕನಾಗಲು ಒಪ್ಪಿಗೆಯನ್ನು ಪಡೆಯುವುದಾದರೆ, ನೀವು ಅವನ ತರಬೇತನ್ನು ಕೂಡಲೆ ಆರಂಭಿಸಬೇಕು. ಒಮ್ಮೆ ಅವನು ತನ್ನ ಕ್ಷೇತ್ರ ಸೇವಾ ವರದಿಯನ್ನು ಮಾಡುವಾಗ, ಅವನು ಒಬ್ಬ ಅಸ್ನಾತ ಪ್ರಚಾರಕನಾಗಿದ್ದಾನೆ ಎಂದು ಸಭೆಗೆ ತಿಳಿಸಲಾಗುವುದು. ಆಬಾಲವೃದ್ಧರಾಗಿರುವ ಸಾವಿರಾರು ಹೊಸ ಪ್ರಚಾರಕರು, ಚಟುವಟಿಕೆಯ ಈ ವಿಶೇಷ ತಿಂಗಳುಗಳಲ್ಲಿ ಈ ಪ್ರಮುಖ ಮೈಲಿಗಲ್ಲನ್ನು ತಲಪುವರು ಎಂಬುದು ನಮ್ಮ ಹಾರೈಕೆಯಾಗಿದೆ.
21 ಯೋಜನೆಯು ಹೆಚ್ಚಿನ ಒಳಿತನ್ನು ಸಾಧಿಸಲು ಸಹಾಯಮಾಡುತ್ತದೆ: ಮುಂಚಿತವಾದ ಯೋಜನೆಯು ಜ್ಞಾಪಕಾಚರಣೆಯ ಈ ಕಾಲಾವಧಿಯ ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ನಾವು ಯಶಸ್ಸನ್ನು ಪಡೆಯಲು ಒಂದು ಪ್ರಮುಖ ಪಾತ್ರವನ್ನು ವಹಿಸುವುದು. (ಜ್ಞಾನೋ. 21:5) ಹಿರಿಯರ ಗಮನವನ್ನು ಅವಶ್ಯಪಡಿಸುವಂಥ ಅನೇಕ ವಿಚಾರಗಳಿವೆ.
22 ಸಭೆಯು ಕ್ಷೇತ್ರ ಶುಶ್ರೂಷೆಯಲ್ಲಿ ಅತಿ ಹೆಚ್ಚನ್ನು ಸಾಧಿಸುವಂತಾಗಲು, ಹಿರಿಯರು ವಾರವಿಡೀ ಮತ್ತು ವಾರಾಂತ್ಯಗಳಲ್ಲಿ ಕ್ಷೇತ್ರ ಸೇವೆಗಾಗಿರುವ ಕೂಟಗಳನ್ನು ನಡೆಸಲು ಪ್ರಾಯೋಗಿಕ ಏರ್ಪಾಡುಗಳನ್ನು ಮಾಡಬೇಕು. ಈ ಏರ್ಪಾಡುಗಳನ್ನು ಮಾಡುವುದರಲ್ಲಿ ಸೇವಾ ಮೇಲ್ವಿಚಾರಕನು ಮುಂದಾಳುತ್ವ ವಹಿಸಬೇಕು. ಮುಂಜಾನೆಗಾಗಿ, ಮಧ್ಯಾಹ್ನಕ್ಕಾಗಿ, ಅಥವಾ ಸಾಯಂಕಾಲಕ್ಕಾಗಿ ಹೆಚ್ಚಿನ ಕೂಟಗಳನ್ನು ಏರ್ಪಡಿಸಸಾಧ್ಯವೋ? ಈ ಏರ್ಪಾಡುಗಳು ಸಭೆಗೆ ತಿಳಿಸಲ್ಪಡಬೇಕು. ಇದರ ಶೆಡ್ಯೂಲನ್ನು ಇನ್ಫಮೇಷನ್ ಬೋರ್ಡ್ ಮೇಲೆ ಹಾಕುವುದು ಸಹಾಯಕರವಾಗಿರಬಹುದು.
23 ಜ್ಞಾಪಕಾಚರಣೆಗಾಗಿರುವ ಏರ್ಪಾಡುಗಳು ಏಪ್ರಿಲ್ 16ಕ್ಕೆ ತುಂಬ ಮುಂಚಿತವಾಗಿಯೇ ಸ್ಥಾಪಿತವಾಗಿವೆ ಎಂಬುದನ್ನು ಹಿರಿಯರು ಖಚಿತಪಡಿಸಿಕೊಳ್ಳಬೇಕು. ಒಂದೇ ರಾಜ್ಯ ಸಭಾಗೃಹದಲ್ಲಿ ಕೂಡಿಬರಲಿರುವ ಇತರ ಸಭೆಗಳೊಂದಿಗೆ ಅದರ ಉಪಯೋಗದ ವಿಷಯದಲ್ಲಿ ಹೊಂದಾಣಿಕೆಗಳನ್ನು ಮಾಡುವುದು, ರಾಜ್ಯ ಸಭಾಗೃಹವನ್ನು ಶುಚಿಗೊಳಿಸುವುದು, ಅಟೆಂಡೆಂಟ್ ಮತ್ತು ಕುರುಹುಗಳನ್ನು ದಾಟಿಸುವವರನ್ನು ಆರಿಸಿಕೊಳ್ಳುವುದು, ಮತ್ತು ಕುರುಹುಗಳನ್ನು ಪಡೆದುಕೊಳ್ಳುವುದು ಎಂಬ ವಿಷಯಗಳು ಇದರಲ್ಲಿ ಒಳಗೂಡಿವೆ. ಸಭೆಗೆ ಜ್ಞಾಪಕಾಚರಣೆಯ ಸಮಯ ಮತ್ತು ಸ್ಥಳದ ಮಾಹಿತಿ ಮತ್ತು ವಾರದ ಕೂಟಗಳ ಏರ್ಪಾಡುಗಳಲ್ಲಿ ಬದಲಾವಣೆಯಿರುವುದಾದರೆ ಅದರ ಕುರಿತು ತಿಳಿಸಬೇಕು. ಈ ವಿಷಯಗಳಿಗೆ ಶ್ರದ್ಧಾತ್ಮಕ ಗಮನವನ್ನು ಕೊಡುವುದು, ಜ್ಞಾಪಕಾಚರಣೆಯು “ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆ”ಯಲು ಅನುಮತಿಸುವುದು.—1 ಕೊರಿಂ. 14:40.
24 ಕುಟುಂಬದ ತಲೆಗಳು ತಮ್ಮ ಕುಟುಂಬ ಅಧ್ಯಯನದ ಸ್ವಲ್ಪ ಸಮಯವನ್ನು, ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಏರ್ಪಡಿಸಲ್ಪಡುವ ಹೆಚ್ಚಿನ ಚಟುವಟಿಕೆಯಲ್ಲಿ ಕುಟುಂಬವು ಹೇಗೆ ಪಾಲ್ಗೊಳ್ಳಸಾಧ್ಯವಿದೆ ಎಂಬುದನ್ನು ಚರ್ಚಿಸಲಿಕ್ಕಾಗಿ ಉಪಯೋಗಿಸಿಕೊಳ್ಳಲು ಬಯಸಬಹುದು. ನಿಮ್ಮ ಇಡೀ ಕುಟುಂಬವು ಆಕ್ಸಿಲಿಯರಿ ಪಯನೀಯರ್ ಮಾಡಲು ಸಾಧ್ಯವಿದೆಯೋ? ಅಥವಾ ಕುಟುಂಬದ ಒಬ್ಬ ಅಥವಾ ಹೆಚ್ಚಿನ ಸದಸ್ಯರು ಹಾಗೆ ಮಾಡುವಂತೆ ಅವರಿಗೆ ಬೆಂಬಲಿಸ ಸಾಧ್ಯವಿದೆಯೋ? ಅದು ಸಾಧ್ಯವಿಲ್ಲದಿರುವುದಾದರೆ, ಶುಶ್ರೂಷೆಯಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುವ ನಿರ್ದಿಷ್ಟ ಗುರಿಗಳನ್ನು ಕುಟುಂಬವಾಗಿ ಇಡಿರಿ. ಸ್ವಲ್ಪ ಪ್ರೋತ್ಸಾಹ ಮತ್ತು ನೆರವಿನೊಂದಿಗೆ ಅಸ್ನಾತ ಪ್ರಚಾರಕನಾಗಲು ಅರ್ಹನಾಗಬಲ್ಲ ಒಬ್ಬ ಎಳೆಯ ವ್ಯಕ್ತಿ ಮನೆಯಲ್ಲಿದ್ದಾನೋ? ಈ ವರ್ಷ ಜ್ಞಾಪಕಾಚರಣೆಗಾಗಿ ನಿಮ್ಮ ಕುಟುಂಬವು ಎಷ್ಟು ಮಂದಿಯನ್ನು ಆಮಂತ್ರಿಸ ಸಾಧ್ಯವಿದೆ? ಸುಯೋಜನೆಯು ನಿಮ್ಮ ಕುಟುಂಬಕ್ಕೆ ಅನೇಕ ಆಶೀರ್ವಾದಗಳನ್ನೂ ಆನಂದಗಳನ್ನೂ ತರುವುದು.
25 ಉಳಿದಿರುವ ಸಮಯದ ಪೂರ್ಣ ಪ್ರಯೋಜನವನ್ನು ತೆಗೆದುಕೊಳ್ಳಿರಿ: ಪ್ರಥಮ ಶತಮಾನದ ಕ್ರೈಸ್ತರಿಗೆ ಬರೆಯುತ್ತಾ, ಅಪೊಸ್ತಲ ಪೇತ್ರನು ಯೆಹೂದ ವಿಷಯಗಳ ವ್ಯವಸ್ಥೆಯ ಅಂತ್ಯವು ಹತ್ತಿರವಾಗಿದ್ದರಿಂದ ಸಮಯದ ಜರೂರಿಯ ಕುರಿತು ಅವರಿಗೆ ಜ್ಞಾಪಿಸಿದನು. (1 ಪೇತ್ರ 4:7) ಇಂದು ಎಲ್ಲಾ ಪುರಾವೆಯೂ ಸದ್ಯದ ಲೋಕ ವಿಷಯಗಳ ವ್ಯವಸ್ಥೆಯ ಅಂತ್ಯವು ಹತ್ತಿರವಿದೆ ಎಂಬುದನ್ನು ಸೂಚಿಸುತ್ತದೆ. ದಿನದಿಂದ ದಿನಕ್ಕೆ ನಮ್ಮ ಜೀವನ ಧಾಟಿಯು ಆ ದೃಢಚಿತ್ತತೆಯನ್ನು ಪ್ರತಿಬಿಂಬಿಸಬೇಕು. ಯೆಹೋವನ ಅತ್ಯಾಸಕ್ತ ಸೇವಕರಾಗಿ, ನಾವು ಸುವಾರ್ತೆಯನ್ನು ಪ್ರಕಟಪಡಿಸುವುದರ ತುರ್ತು ಕೆಲಸದಲ್ಲಿ ಕೇಂದ್ರೀಕೃತರಾಗಿರಬೇಕು.—ತೀತ 2:13, 14.
26 ಆಸಕ್ತಿ ಮತ್ತು ಕ್ರಿಯೆಯನ್ನು ತೋರಿಸಲು ಇದೇ ಸಮಯವಾಗಿದೆ! ಯೆಹೋವನು ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ, ಮತ್ತು ಸಭೆಗಾಗಿ ಏನನ್ನು ಮಾಡಿದ್ದಾನೆ ಎಂಬುದನ್ನು ಧ್ಯಾನಿಸಿರಿ. ಆತನು ನಮಗಾಗಿ ಮಾಡಿರುವ ಮಹೋಪಕಾರಗಳಿಗೆ ಬದಲೇನು ಕೊಡಸಾಧ್ಯವಿಲ್ಲವಾದರೂ, ನಾವು ಯೆಹೋವನಿಗೆ ಪೂರ್ಣ ಪ್ರಾಣದ ಆರಾಧನೆಯನ್ನು ಕೊಡಬಲ್ಲೆವು. (ಕೀರ್ತ. 116:12-14) ನಮ್ಮ ಶ್ರದ್ಧಾಪೂರ್ವಕ ಪ್ರಯತ್ನಗಳು ಮೇಲಣಿಂದ ಬರುವ ಆಶೀರ್ವಾದಗಳೊಂದಿಗೆ ಸಫಲತೆಯನ್ನು ಪಡೆಯುವವು. (ಜ್ಞಾನೋ. 10:22) ನಾವೆಲ್ಲರೂ ಹೆಚ್ಚಿನ ಚಟುವಟಿಕೆಯ ಈ ವಿಶೇಷ ಸಮಯದಲ್ಲಿ “ಒಳ್ಳೇದನ್ನೇ ಮಾಡುವದರಲ್ಲಿ ಆಸಕ್ತರಾಗಿದ್ದರೆ,” ಆಗ “ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವದು.”—1 ಪೇತ್ರ 3:13; 4:11.
[ಪುಟ 3 ರಲ್ಲಿರುವ ಚೌಕ]
ಲೋಕವ್ಯಾಪಕ ಜ್ಞಾಪಕಾಚರಣೆಯ ಹಾಜರಿ
1999 1,40,88,751
2000 1,48,72,086
2001 1,53,74,986
2002 1,55,97,746
[ಪುಟ 4 ರಲ್ಲಿರುವ ಚೌಕ]
ನೀವು ಜ್ಞಾಪಕಾಚರಣೆಗೆ ಯಾರನ್ನು ಆಮಂತ್ರಿಸುವಿರಿ?
□ ನಿಮ್ಮ ಸ್ವಂತ ಕುಟುಂಬ ಮತ್ತು ಸಂಬಂಧಿಕರನ್ನು
□ ನೆರೆಯವರು ಮತ್ತು ಪರಿಚಯಸ್ಥರನ್ನು
□ ಸಹಕರ್ಮಿಗಳು ಮತ್ತು ಸಹಪಾಠಿಗಳನ್ನು
□ ಪುನರ್ಭೇಟಿಗಳು ಮತ್ತು ಬೈಬಲ್ ವಿದ್ಯಾರ್ಥಿಗಳನ್ನು
[ಪುಟ 5 ರಲ್ಲಿರುವ ಚೌಕ]
ಜ್ಞಾಪಕಾಚರಣೆಗೆ ಹಾಜರಾಗುವವರಿಗೆ ನೆರವು ನೀಡಿರಿ
□ಒಂದು ವಾತ್ಸಲ್ಯಭರಿತ ಸ್ವಾಗತವನ್ನು ನೀಡಿರಿ
□ ತಪ್ಪದೆ ಪುನರ್ಭೇಟಿಗಳನ್ನು ಮಾಡಿರಿ
□ ಅವರಿಗೆ ಒಂದು ಬೈಬಲ್ ಅಧ್ಯಯನವನ್ನು ನೀಡಿರಿ
□ ಅವರನ್ನು ವಿಶೇಷ ಬಹಿರಂಗ ಭಾಷಣಕ್ಕೆ ಆಮಂತ್ರಿಸಿರಿ
[ಪುಟ 6 ರಲ್ಲಿರುವ ಚೌಕ]
ಜ್ಞಾಪಕಾಚರಣೆಯ ಕಾಲಾವಧಿಗಾಗಿ ನಿಮ್ಮ ಗುರಿಗಳೇನು?
□ ನೀವು ಆಮಂತ್ರಿಸುವ ಯಾರಾದರೂ ಜ್ಞಾಪಕಾಚರಣೆಗೆ ಹಾಜರಾಗುವಂತೆ ಮಾಡಿರಿ
□ ಸುವಾರ್ತೆಯ ಪ್ರಚಾರಕನಾಗಿ ಅರ್ಹರಾಗಿರಿ
□ ಶುಶ್ರೂಷೆಯಲ್ಲಿ ನಿಶ್ಚಿತ ಎಣಿಕೆಯ ತಾಸುಗಳನ್ನು ವ್ಯಯಿಸಿರಿ
□ ಶುಶ್ರೂಷೆಯ ನಿರ್ದಿಷ್ಟವಾದೊಂದು ವೈಶಿಷ್ಟ್ಯದಲ್ಲಿ ಪ್ರಗತಿಮಾಡಿರಿ
□ ಒಬ್ಬ ಆಕ್ಸಿಲಿಯರಿ ಪಯನೀಯರಾಗಿ ಸೇವೆ ಮಾಡಿರಿ