ಸಮಯೋಚಿತ ಜಾಣ್ಮೆಯೊಂದಿಗೆ ಸುವಾರ್ತೆಯನ್ನು ಪ್ರಸ್ತುತಪಡಿಸುವುದು
1 ಅನೇಕ ರಾಜ್ಯಗಳಲ್ಲಿ ಕೋಮುವಾದದ ಬಿಗಿತವು ಹೆಚ್ಚುತ್ತಿರುವ ಈ ಸಮಯದಲ್ಲಿ, ಇತರ ಧರ್ಮಗಳ ಕುರಿತಾಗಿ ಮಾತಾಡುವಾಗ ಜನರು ತುಂಬ ಸೂಕ್ಷ್ಮಮತಿಗಳಾಗುತ್ತಿರುವುದನ್ನು ನಾವು ಗಮನಿಸಿರಬಹುದು. ಇವು ‘ಕಡೇ ದಿವಸಗಳು’ ಆಗಿವೆ ಮತ್ತು ಪೌಲನು ಅವುಗಳನ್ನು ವಿವರಿಸುತ್ತಾ ಜನರು “ಸಮಾಧಾನವಾಗದವರೂ . . . ದಮೆಯಿಲ್ಲದವರೂ ಉಗ್ರತೆಯುಳ್ಳವರೂ ದುಡುಕಿನವರೂ” ಆಗಿರುವರು ಎಂದು ಹೇಳಿದನು. (2 ತಿಮೊ. 3:1-4) ಆದುದರಿಂದ, ಈ ಕಾಲಗಳು ಯೆಹೋವನ ಜನರು ಸುವಾರ್ತೆಯನ್ನು ಸಾರುವಾಗ ಸಮಯೋಚಿತ ಜಾಣ್ಮೆಯನ್ನು ತೋರಿಸುವುದನ್ನು ಕೇಳಿಕೊಳ್ಳುತ್ತವೆ ಎಂಬುದು ವ್ಯಕ್ತವಾಗುತ್ತದೆ.
2 ಸಮಯೋಚಿತ ಜಾಣ್ಮೆ ಎಂದರೇನು? ಒಂದು ಶಬ್ದಕೋಶದ ವಿವರಣೆಯು ಇದಾಗಿದೆ: “ಒಂದು ಕಷ್ಟಕರವಾದ ಅಥವಾ ನಾಜೂಕಾದ ಪರಿಸ್ಥಿತಿಯಲ್ಲಿ ಇತರರೊಂದಿಗೆ ಒಳ್ಳೆಯ ಸಂಬಂಧಗಳನ್ನು ಇಟ್ಟುಕೊಳ್ಳಲಿಕ್ಕಾಗಿ ಇಲ್ಲವೆ ಅವರ ಮನನೋಯಿಸುವುದರಿಂದ ದೂರವಿರಲಿಕ್ಕಾಗಿ ಏನು ಮಾಡಬೇಕು ಅಥವಾ ಏನು ಹೇಳಬೇಕು ಎಂಬುದರ ಕುರಿತಾದ ತೀಕ್ಷ್ಣವಾದ ಪರಿಜ್ಞಾನ.” ಖಂಡಿತವಾಗಿಯೂ ಕ್ರೈಸ್ತರಾಗಿ ನಾವು ಎಲ್ಲ ಸಮುದಾಯಗಳ ಜನರೊಟ್ಟಿಗೆ ಒಳ್ಳೆಯ ಸಂಬಂಧಗಳನ್ನಿಟ್ಟುಕೊಳ್ಳಲು ಮತ್ತು ಅನಾವಶ್ಯಕವಾಗಿ ಮನನೋಯಿಸುವುದರಿಂದ ದೂರವಿರಲು ಬಯಸುತ್ತೇವೆ. ಆದುದರಿಂದ, ‘ಸಾಧ್ಯವಾದರೆ ನಮ್ಮಿಂದಾಗುವ ಮಟ್ಟಿಗೆ ನಾವು ಎಲ್ಲರ ಸಂಗಡ ಸಮಾಧಾನದಿಂದಿರುವೆವು.’—ರೋಮಾ. 12:18.
3 ಪೌಲನು ಸಮಯೋಚಿತ ಜಾಣ್ಮೆಯುಳ್ಳ ಒಬ್ಬ ಕ್ರೈಸ್ತ ಸಾಕ್ಷಿಯಾಗಿರುವ ವಿಷಯದಲ್ಲಿ ಉತ್ತಮ ಮಾದರಿಯಾಗಿದ್ದಾನೆ. ಅವನು ಅಥೇನೆಯವರೊಂದಿಗೆ ಮಾತಾಡಿದಾಗ, ಅವರ ವಿಗ್ರಹಾರಾಧನೆ ಮತ್ತು ಅನೇಕ ಸುಳ್ಳು ದೇವರುಗಳ ಆರಾಧನೆಗಾಗಿ—ಇಂತಹ ವಿಷಯಗಳು ಅವನ ಮನಸ್ಸನ್ನು ಕುದಿಸಿದರೂ—ಅವರನ್ನು ತುಚ್ಛೀಕರಿಸಲಿಲ್ಲ ಇಲ್ಲವೆ ಖಂಡಿಸಲಿಲ್ಲ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. (ಅ. ಕೃ. 17:16) ಅನೇಕ ದೇವರುಗಳ ಆರಾಧನೆಯಲ್ಲಿ ಅವರಿಗಿದ್ದ ಆಸಕ್ತಿಯನ್ನು ಪೌಲನು ಸಮಯೋಚಿತ ಜಾಣ್ಮೆಯಿಂದ ಅಥೇನೆ ಜನರಿಗೆ ಕೊಟ್ಟ ಭಾಷಣಕ್ಕೆ ಉತ್ತಮವಾದ ಪೀಠಿಕೆಯಾಗಿ ಉಪಯೋಗಿಸಿದನು.—ಅ. ಕೃ. 17:22-31.
4 ನಾವು ಕೂಡ ತಮ್ಮ ಸ್ವಂತ ಧಾರ್ಮಿಕ ಸಮುದಾಯದ ಕುರಿತು ಬಲವಾದ ಅನಿಸಿಕೆಗಳಿರುವ ಮತ್ತು ಅವುಗಳನ್ನು ವ್ಯಕ್ತಪಡಿಸುವಂಥ ಜನರನ್ನು ಸಂಧಿಸುವೆವು. ನಾವೇನು ಮಾಡಬೇಕು? ನಾವು ಸಮಯೋಚಿತ ಜಾಣ್ಮೆಯಿಂದ ವರ್ತಿಸಬೇಕು. ನಾವು ಒತ್ತಾಯಿಸುವವರು, ಕಲಹಪ್ರಿಯರು ಅಥವಾ ಟೀಕಿಸುವವರು ಆಗಿರಬಾರದು. ಬದಲಿಗೆ, ಸಾಧ್ಯವಿರುವುದಾದರೆ ನಾವು ಪರಸ್ಪರ ಒಪ್ಪುವ ಅಂಶಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಮತ್ತು ಅವುಗಳ ಚರ್ಚೆಯನ್ನೇ ಮುಂದುವರಿಸಿಕೊಂಡು ಹೋಗಬೇಕು. ನಮ್ಮ ಸಂದೇಶವನ್ನು ಅಂಗೀಕರಿಸದಂಥ ಒಬ್ಬ ವ್ಯಕ್ತಿಯು ಎಬ್ಬಿಸುವ ಪ್ರತಿಯೊಂದು ಆಕ್ಷೇಪಣೆಗೆ ಪ್ರತ್ಯುತ್ತರಿಸುವ ಅಥವಾ ಸವಾಲೊಡ್ಡುವ ಜರೂರಿ ಇಲ್ಲ.
5 ಒಬ್ಬ ಒಳ್ಳೆಯ ಕೇಳುಗರಾಗಿರಿ: ಸಮಯೋಚಿತ ಜಾಣ್ಮೆಯಲ್ಲಿ ಇದು ಕೂಡ ಒಳಗೂಡಿದೆ. ಇಡೀ ಹೊತ್ತು ನಾವು ಮಾತಾಡುತ್ತಾ ಇರುವುದು ಹೆಚ್ಚು ಸುಲಭಕರವಾದದ್ದಾಗಿದೆ ಎಂದು ನಾವು ಕಂಡುಕೊಳ್ಳಬಹುದು, ಆದರೆ ತನ್ನ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ತಿಳಿಸುವಂತೆ ಮನೆಯವನನ್ನು ಪ್ರೋತ್ಸಾಹಿಸುವ ಮೂಲಕ, ಅವನು ಏನು ಯೋಚಿಸುತ್ತಿದ್ದಾನೆ ಎಂಬುದನ್ನು ನಾವು ತಿಳಿದುಕೊಳ್ಳುವೆವು. ಪ್ರಶ್ನೆಗಳು ಸಹಾಯಕರವಾಗಿವೆ, ಆದರೆ ಅವು ಮನೆಯವನನ್ನು ಮುಜುಗರಗೊಳಿಸದಂತೆ ನಾವು ಎಚ್ಚರ ವಹಿಸಬೇಕು. ಬದಲಿಗೆ, ಅವನ ಅನಿಸಿಕೆಗಳನ್ನು ಹೊರತರಲಿಕ್ಕಾಗಿ ಮತ್ತು ಮಾತಾಡುವಂತೆ ಅವನನ್ನು ಪ್ರೋತ್ಸಾಹಿಸುವುದಕ್ಕಾಗಿ ಅವುಗಳನ್ನು ಉಪಯೋಗಿಸಬೇಕು.
6 ನಮ್ಮ ಮಾತುಗಳು ಮತ್ತು ಮುಖಭಾವವು ಎಲ್ಲರ ಕಡೆಗಿನ ವೈಯಕ್ತಿಕ ಆಸಕ್ತಿ, ದಯೆ ಮತ್ತು ಸ್ನೇಹಭಾವವನ್ನು ವ್ಯಕ್ತಪಡಿಸುವುದಾದರೆ, ಅಧಿಕಾಂಶ ಜನರು ಇದನ್ನು ಗಮನಿಸುವರು ಮತ್ತು ಅನೇಕವೇಳೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವರು. ಪೌಲನ ಬುದ್ಧಿವಾದವನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”—ಕೊಲೊ. 4:6.