ಯೆಹೋವನ ನಾಮ ಹಾಗೂ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ
1 “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ; ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ. . . . ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ.” (ಕೀರ್ತ. 105:1, 3) ಈ ಮಾತುಗಳನ್ನು ಬರೆದ ಕೀರ್ತನೆಗಾರನು ಯೆಹೋವನ ಹಾಗೂ ಆತನ ‘ಕೃತ್ಯಗಳ’ ಕುರಿತು ಇತರರಿಗೆ ಹೇಳುವುದರಲ್ಲಿ ವೈಯಕ್ತಿಕವಾಗಿ ಹೆಚ್ಚು ಆನಂದವನ್ನು ಕಂಡುಕೊಂಡನು. ಯಾವ ಕೃತ್ಯಗಳು? ನಿಸ್ಸಂದೇಹವಾಗಿ, ಅವು ದೇವರ ಮಹಿಮೆಯುಳ್ಳ ರಾಜತ್ವ ಹಾಗೂ ‘ಆತನಿಂದ ಕೊಡಲ್ಪಡುವ ರಕ್ಷಣೆಯೊಂದಿಗೆ’ ಸಂಬಂಧಪಟ್ಟ ವಿಷಯಗಳಾಗಿವೆ.—ಕೀರ್ತ. 96:2, 3; 145:11, 12.
2 ಇಸವಿ 2001ರ ಜ್ಞಾಪಕಾಚರಣೆಯ ಸಮಯಾವಧಿಯನ್ನು ನಾವು ಸಮೀಪಿಸುತ್ತಿರುವುದರಿಂದ ನಮಗಾಗಿ ಯೆಹೋವನು ಮಾಡಿರುವ ಕೃತ್ಯಗಳಿಗಾಗಿ ಹರ್ಷಿಸಲು ಅನೇಕ ಕಾರಣಗಳಿವೆ. ಅದು ಹೇಗೆ? ಕಿಂಚಿತ್ತೂ ಸಂದೇಹವಿಲ್ಲದೆ, ಕರ್ತನ ಸಂಧ್ಯಾ ಭೋಜನವೇ ಎಲ್ಲ ನಿಜ ಕ್ರೈಸ್ತರ ಅತಿ ದೊಡ್ಡ ವಾರ್ಷಿಕ ಆಚರಣೆಯಾಗಿದೆ. ಇದಕ್ಕಿರುವ ಪ್ರಾಮುಖ್ಯತೆ, ಉದ್ದೇಶ ಮತ್ತು ಕಾರ್ಯವಿಧಾನವು ಬೇರಾವುದೇ ಸಂದರ್ಭಕ್ಕೆ ಇಲ್ಲ. ಈ ಸಂದರ್ಭವು, ಯೆಹೋವ ಮತ್ತು ಯೇಸು ನಮ್ಮ ರಕ್ಷಣೆಗೋಸ್ಕರ ಬೇಕಾಗಿದ್ದ ಮಾಧ್ಯಮವನ್ನು ಒದಗಿಸಲು ಏನೆಲ್ಲವನ್ನೂ ಮಾಡಿದ್ದಾರೊ ಅದನ್ನು ಜ್ಞಾಪಿಸಿಕೊಳ್ಳಲು ಸಹಾಯಮಾಡುವುದು. ಆದುದರಿಂದ ಜ್ಞಾಪಕಾಚರಣೆಯ ಸಮಯದಲ್ಲಿ ‘ರಕ್ಷಣೆಯ ಸುವಾರ್ತೆಯನ್ನು’ ನಾವು ಪ್ರಕಟಪಡಿಸುತ್ತಿರುವಾಗ ಭರದಿಂದ ಕೂಡಿದ ಚಟುವಟಿಕೆಯನ್ನು ನಾವು ಸ್ವಾಭಾವಿಕವಾಗಿಯೇ ನಿರೀಕ್ಷಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.
3 ನೀವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಿರೋ? ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ 3,287 ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಮೂಲಕ ಒಂದು ಹೊಸ ದಾಖಲೆಯನ್ನು ಮಾಡಿದ್ದಾರೆ. ಈ ವರ್ಷ ನಾವು ಕ್ಷೇತ್ರಸೇವೆಯಲ್ಲಿ ನಮ್ಮ ಚಟುವಟಿಕೆಯನ್ನು ಹೆಚ್ಚಿಸುವುದರ ಮೂಲಕ ಮಾರ್ಚ್ ಹಾಗೂ ಏಪ್ರಿಲ್ ತಿಂಗಳನ್ನು ವಿಶೇಷ ತಿಂಗಳುಗಳಾಗಿ ಮಾಡಸಾಧ್ಯವಿದೆಯೋ? ಮಾರ್ಚ್ ತಿಂಗಳಿನಲ್ಲಿ ಐದು ಶನಿವಾರಗಳಿವೆ ಹಾಗೂ ಏಪ್ರಿಲ್ನಲ್ಲಿ ಐದು ಭಾನುವಾರಗಳಿವೆ. ವಾರಾಂತ್ಯಗಳಂದು ಇಡೀ ದಿನ ಸೇವೆಯನ್ನು ಯೋಜಿಸುವ ಮೂಲಕ ಆಕ್ಸಿಲಿಯರಿ ಪಯನೀಯರ್ ಸೇವೆಯು ತಮಗೆ ಎಟುಕುವಷ್ಟರಲ್ಲೇ ಇದೆ ಎಂಬುದನ್ನು ಪೂರ್ಣಸಮಯದ ಕೆಲಸಮಾಡುವ ಅನೇಕ ಪ್ರಚಾರಕರು ಕಂಡುಕೊಂಡಿದ್ದಾರೆ. ಒಂದು ತಿಂಗಳಿನ 50 ತಾಸುಗಳ ಅವಶ್ಯಕತೆಯನ್ನು ಮುಟ್ಟಲು, ಒಬ್ಬ ಆಕ್ಸಿಲಿಯರಿ ಪಯನೀಯರ್ ಪ್ರತಿವಾರ ಸರಾಸರಿಯಾಗಿ 12 ತಾಸುಗಳನ್ನು ಬದಿಗಿಡಬೇಕು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಶೆಡ್ಯೂಲ್ಗಳನ್ನು ಜಾಗರೂಕತೆಯಿಂದ ಗಮನಿಸಿ. ನಿಮ್ಮ ಪರಿಸ್ಥಿತಿಗಳಿಗನುಸಾರ ಯಾವುದಾದರೊಂದು ಶೆಡ್ಯೂಲ್ ಸರಿಹೊಂದುವುದೋ? ಇಲ್ಲದಿದ್ದಲ್ಲಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ನಿಮ್ಮ ಸ್ವಂತ ಶೆಡ್ಯೂಲನ್ನು ತಯಾರಿಸಿಕೊಳ್ಳಬಹುದು.
4 ಹೆಚ್ಚಿನ ಸೇವಾ ಚಟುವಟಿಕೆಗಾಗಿ ಹಿರಿಯರು ಹುರುಪನ್ನು ಹೆಚ್ಚಿಸಲು ಹಾಗೂ ಬೆಂಬಲವನ್ನು ಕೊಡಲು ಈಗಲೇ ಪ್ರಾರಂಭಿಸಬೇಕು. ಕಳೆದ ವರ್ಷ ಎಲ್ಲ ಹಿರಿಯರು ಹಾಗೂ ಶುಶ್ರೂಷಾ ಸೇವಕರು ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಿದ ಒಂದು ಸಭೆಯ 121 ಪ್ರಚಾರಕರಲ್ಲಿ 64 ಮಂದಿ ಪಯನೀಯರರಾಗಿ ವರದಿಸಿದರು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಆರು ಮಂದಿ ಅಸ್ನಾನಿತ ಪ್ರಚಾರಕರಾದದ್ದನ್ನು ನೋಡಿ ಸಭೆಯಲ್ಲಿರುವ ಎಲ್ಲರೂ ಹರ್ಷಿಸಿದರು. ವಾಸ್ತವದಲ್ಲಿ, ಮಕ್ಕಳು ಹಾಗೂ ಹೊಸಬರು ತಾವು ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸಲು ಅರ್ಹರಾಗಿದ್ದೇವೋ ಎಂಬುದನ್ನು ಹಿರಿಯರ ಬಳಿ ಕೇಳಿಕೊಳ್ಳಲು ಇದಕ್ಕಿಂತ ಸೂಕ್ತವಾದ ಸಮಯ ಬೇರೊಂದಿಲ್ಲ.
5 ಹೆಚ್ಚಿನ ಪ್ರಯತ್ನ ಆಶೀರ್ವಾದಗಳನ್ನು ತರುತ್ತದೆ: ವಿಶೇಷ ಗುರಿಗಳನ್ನು ಇಟ್ಟುಕೊಳ್ಳುವ ಹಾಗೂ ಹೆಚ್ಚಿನ ಪ್ರಯತ್ನಗಳನ್ನು ಮಾಡುವ ಸಭೆಗಳು ಹೇರಳವಾದ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತವೆ. ಹೆಚ್ಚಾಗಿ ಸಾಕ್ಷಿ ನೀಡಲ್ಪಟ್ಟಿರದ ಟೆರಿಟೊರಿಗಳನ್ನು ಮಾಡಿಮುಗಿಸಲು, ಬೇರೆ ರೀತಿಯ ಸಾಕ್ಷಿಕಾರ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಇಲ್ಲವೇ ಟೆಲಿಫೋನ್ ಸಾಕ್ಷಿಕಾರ್ಯವನ್ನು ಎತ್ತಿತೋರಿಸಲು ಕೆಲವು ಸಭೆಗಳು ನಿರ್ದಿಷ್ಟವಾಗಿ ಮಹತ್ವವನ್ನು ಕೊಡಬಹುದು. ಮತ್ತು ಇದು, ಅಂದರೆ ಟೆಲಿಫೋನ್ ಸಾಕ್ಷಿಕಾರ್ಯವು ಮನೆಯಲ್ಲಿ ಸಿಗದವರ ಹಾಗೂ ಭೇಟಿಮಾಡಲು ಸಾಧ್ಯವಾಗದಿರುವ ಸ್ಥಳಗಳಲ್ಲಿ ವಾಸಿಸುವವರನ್ನು ಸಂಪರ್ಕಿಸಲು ಒಂದು ಪರಿಣಾಮಕಾರಿಯಾದ ವಿಧಾನವಾಗಿದೆ.
6 ಅನಾರೋಗ್ಯ ಇಲ್ಲವೇ ವೃದ್ಧಾಪ್ಯವು, ತನ್ನಿಂದ ಸಾಧ್ಯವಿರುವಷ್ಟು ಸೇವೆಯನ್ನು ಮಾಡುವುದರಿಂದ ಒಬ್ಬ ವ್ಯಕ್ತಿಯನ್ನು ತಡೆಯಬೇಕೋ? ಎಲ್ಲರ ವಿಷಯದಲ್ಲಿ ಹಾಗಿರಬೇಕೆಂದೇನಿಲ್ಲ. ಉದಾಹರಣೆಗೆ, ಕ್ಯಾನ್ಸರ್ ರೋಗದಿಂದ ಬಾಧಿತರಾಗಿರುವ 86 ವರ್ಷ ಪ್ರಾಯದ ಒಬ್ಬ ಸಹೋದರಿಯು, ತಮ್ಮ ಕಾಲುಗಳಲ್ಲಿ ಊತವಿದ್ದರೂ ಕೂಡ ಕಳೆದ ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದರು. ಅವರು ಸೇವೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಟೆಲಿಫೋನ್ ಸಾಕ್ಷಿಕಾರ್ಯವು ಸಾಧ್ಯಮಾಡಿತು. ಇದರಿಂದ ಯೆಹೋವನಿಗೆ ಅವರು ಸಲ್ಲಿಸಿದ ಸ್ತುತಿಯು ಹೆಚ್ಚಿತು. ಇದು ಸ್ವತಃ ಅವರ ಮೇಲೆ ಹಾಗೂ ಸಭೆಯ ಮೇಲೆ ಒಂದು ಪ್ರೋತ್ಸಾಹದಾಯಕವಾದ ಪರಿಣಾಮವನ್ನು ಬೀರಿತು.
7 ಜ್ಞಾಪಕಾಚರಣೆಗಾಗಿ ಚೆನ್ನಾಗಿ ತಯಾರಿಸಿರಿ: ಈ ವರ್ಷ ಜ್ಞಾಪಕಾಚರಣೆಯು ಏಪ್ರಿಲ್ 8ರಂದು ಆಚರಿಸಲ್ಪಡಲಿದೆ. ಇದು ಭಾನುವಾರವಾಗಿರುವ ಕಾರಣ, ಅನೇಕರು ಹಾಜರಾಗಲು ಸುಲಭವಾಗಿರುವುದು. ಇದರಲ್ಲಿ ನಮ್ಮ ಭಾಗವನ್ನು ಮಾಡುವ ಮೂಲಕ ಇದುವರೆಗೂ ಮುಟ್ಟದಿದ್ದ ಸಂಖ್ಯೆಯನ್ನು ನಾವು ಮುಟ್ಟಬಹುದು. ನಮ್ಮ ಭಾಗವು ಏನಾಗಿದೆ? ಅದು (1) ಸ್ವತಃ ನಾವು ಆಚರಣೆಗೆ ಹಾಜರಾಗುವುದು (2) ಇತರರೂ ಜ್ಞಾಪಕಾಚರಣೆಗೆ ನಮ್ಮೊಂದಿಗೆ ಹಾಜರಾಗುವಂತೆ ಆಮಂತ್ರಿಸುವುದೇ ಆಗಿದೆ. ಆದರೆ, ನಾವು ಯಾರನ್ನು ಆಮಂತ್ರಿಸಬೇಕು?
8 ಸತ್ಯದಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸಿದವರ ಹೆಸರುಗಳನ್ನು ನಿಮ್ಮ ವೈಯಕ್ತಿಕ ಕ್ಷೇತ್ರ ಸೇವಾ ವರದಿಗಳಲ್ಲಿ ಹುಡುಕಿರಿ. ಬಹುಶಃ, ನೀವು ಅವರನ್ನು ಕ್ರಮವಾಗಿ ಭೇಟಿ ಮಾಡದೆ ಇದ್ದಿರಬಹುದು. ಅಂಥವರನ್ನು ಜ್ಞಾಪಕಾಚರಣೆಯ ಎರಡು ಅಥವಾ ಮೂರು ವಾರಗಳ ಮುಂಚೆಯೇ ಜ್ಞಾಪಕಾಚರಣೆಯ ಕರಪತ್ರದೊಂದಿಗೆ ಭೇಟಿಮಾಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ನಿಮ್ಮ ಪರಿಸ್ಥಿತಿ ಅನುಮತಿಸುವಲ್ಲಿ, ಹಾಜರಾಗಲು ಬಯಸುವವರಿಗೆ ವಾಹನ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಹೇಳಿ.
9 ಕೆಲವು ಸಭೆಗಳಲ್ಲಿ ಮುದ್ರಿಸಲ್ಪಡುವ ಜ್ಞಾಪಕಾಚರಣೆಯ ಎಲ್ಲಾ ಕರಪತ್ರಗಳು ಉಪಯೋಗಿಸಲ್ಪಡುವುದಿಲ್ಲ. ಈ ಕರಪತ್ರಗಳು ವಿತರಿಸಲ್ಪಡುವಂತೆ ಅವು ಸಾಕಷ್ಟು ಸಮಯಕ್ಕೆ ಮುಂಚಿತವಾಗಿ ಲಭ್ಯವಿರುವಂತೆ ಸಭೆಯ ಸೆಕ್ರಟರಿಗಳು ಖಚಿತಪಡಿಸಿಕೊಳ್ಳಬೇಕು. ನೀವು ಜ್ಞಾಪಕಾಚರಣೆಯ ಸಮಯ ಹಾಗೂ ಸ್ಥಳವನ್ನು ಕರಪತ್ರದ ಕೆಳಭಾಗದಲ್ಲಿ ಟೈಪ್ ಮಾಡಬಹುದು ಅಥವಾ ನೀಟಾಗಿ ಮುದ್ರಿಸಬಹುದು. ಒಂದುವೇಳೆ ಜ್ಞಾಪಕಾಚರಣೆಯು ನಿಮ್ಮ ಸ್ವಂತ ರಾಜ್ಯ ಸಭಾಗೃಹದಲ್ಲಿ ನಡೆಯುವುದಾದರೆ, ಸಭಾಗೃಹದ ವಿಳಾಸವನ್ನು ಸೂಚಿಸುವಂಥ ಒಂದು ಹಸ್ತಪ್ರತಿಯೊಂದಿಗೆ ಕೊಡಬಹುದು. ನಿಮ್ಮ ಮರುಜ್ಞಾಪನಕ್ಕಾಗಿ ಹೇಳುವುದೇನೆಂದರೆ, ಆದಷ್ಟು ಎಲ್ಲ ಸಂದರ್ಭಗಳಲ್ಲಿ ಜ್ಞಾಪಕಾಚರಣೆಯ ಕರಪತ್ರಗಳು ವೈಯಕ್ತಿಕವಾಗಿ ಮನೆಯವನ ಕೈಯಲ್ಲೇ ಕೊಡಲ್ಪಡಬೇಕು.
10 ನಿಷ್ಕ್ರಿಯರಾಗಿರುವವರನ್ನು ಜ್ಞಾಪಿಸಿಕೊಳ್ಳಿ: ಒಬ್ಬ ಬೈಬಲ್ ವಿದ್ಯಾರ್ಥಿಯು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುತ್ತಾ ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕವಾಗಿ ಸಂಕೇತಿಸುವುದನ್ನು ನೋಡುವುದು ಹರ್ಷೋಲ್ಲಾಸದ ವಿಷಯವಾಗಿದೆ. ಆದರೂ, ಪ್ರತಿವರ್ಷ ಕೆಲವರು ನಮ್ಮೊಂದಿಗೆ ಸಹವಾಸಿಸುವುದನ್ನು ಬಿಟ್ಟುಬಿಡುತ್ತಾರೆ ಮತ್ತು ಯೆಹೋವನ ನಾಮ ಹಾಗೂ ಆತನ ಕೃತ್ಯಗಳನ್ನು ಇತರರಿಗೆ ತಿಳಿಸುವುದನ್ನು ನಿಲ್ಲಿಸಿಬಿಡುತ್ತಾರೆ. ಇದರ ಕುರಿತು ಚಿಂತಿಸುವುದಕ್ಕೆ ನಮಗೆ ಸಕಾರಣವಿದೆ. ಅಕ್ರಿಯರಾಗಿರುವ ಅನೇಕರು ಸತ್ಯವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿಲ್ಲವಾದರೂ ನಿರುತ್ಸಾಹ, ವೈಯಕ್ತಿಕ ಸಮಸ್ಯೆಗಳು ಇಲ್ಲವೇ ಜೀವನದ ಇನ್ನಿತರ ಚಿಂತೆಗಳಿಂದಾಗಿ ಅವರು ಸಾರುವುದನ್ನು ನಿಲ್ಲಿಸಿರಬಹುದು. (ಮತ್ತಾ. 13:20-22) ಆತ್ಮಿಕವಾಗಿ ದುರ್ಬಲಗೊಂಡ ಸ್ಥಿತಿಯಲ್ಲಿರುವವರು ಸೈತಾನನ ವ್ಯವಸ್ಥೆಯಿಂದ ಕಬಳಿಸಲ್ಪಡುವ ಮುಂಚೆ ಸಭೆಗೆ ಹಿಂದಿರುಗುವಂತೆ ಸಹಾಯವು ನೀಡಲ್ಪಡಬೇಕು. (1 ಪೇತ್ರ 5:8) ಈ ವರ್ಷದ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ, ಅರ್ಹರಾಗಿರುವ ಎಲ್ಲ ಅಕ್ರಿಯರು ಪುನಃ ಒಮ್ಮೆ ಸುವಾರ್ತೆಯನ್ನು ಸಾರುವುದರಲ್ಲಿ ಒಳಗೂಡುವಂತೆ ಸಹಾಯಮಾಡಲು ನಾವು ವಿಶೇಷವಾದ ಪ್ರಯತ್ನವನ್ನು ಮಾಡುವೆವು.
11 ಯಾವುದೇ ಒಂದು ಪುಸ್ತಕಭ್ಯಾಸದ ಗುಂಪಿನಲ್ಲಿ ಅಕ್ರಿಯ ವ್ಯಕ್ತಿಗಳಿರುವುದಾದರೆ ಅವರ ಕುರಿತು ಸಭೆಯ ಸೆಕ್ರಟರಿ ಆ ಗುಂಪಿನ ಚಾಲಕನಿಗೆ ತಿಳಿಸಬೇಕು. ಸಭೆಯ ಸರ್ವಿಸ್ ಕಮಿಟಿಯವರು ಎಲ್ಲ ಅಕ್ರಿಯರ ಮೇಲೆ ಕುರಿಪಾಲನಾ ಭೇಟಿಗಳನ್ನು ಮಾಡಲಿಕ್ಕಾಗಿ ಏರ್ಪಾಡುಗಳನ್ನು ಮಾಡುವುದರಲ್ಲಿ ಮುಂದಾಳತ್ವವನ್ನು ವಹಿಸುವರು. ಅಂತಹ ಒಬ್ಬ ವ್ಯಕ್ತಿ ವೈಯಕ್ತಿಕ ಬೈಬಲ್ ಅಭ್ಯಾಸದ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ನಿರ್ಧರಿಸಲಾಗಿರುವುದಾದರೆ, ಅದನ್ನು ನಡೆಸುವುದಕ್ಕೆ ಯಾರು ಹೆಚ್ಚು ಅರ್ಹರಾಗಿರುವರು ಎಂಬುದನ್ನು ಸರ್ವಿಸ್ ಕಮಿಟಿಯು ನಿರ್ಧರಿಸುವುದು. ಈ ಅಭ್ಯಾಸವು ದೀರ್ಘಕಾಲದ ವರೆಗೆ ನಡೆಸಲ್ಪಡುವ ಅಗತ್ಯವಿರದಿದ್ದರೂ ಅದನ್ನು ನಡೆಸಲು ನೇಮಿಸಲ್ಪಟ್ಟ ಸಹೋದರನು ತಾಸು, ಪುನರ್ಭೇಟಿ ಹಾಗೂ ಬೈಬಲ್ ಅಭ್ಯಾಸವನ್ನು ವರದಿಸಬಹುದು.
12 ಕಳೆದ ಏಪ್ರಿಲ್ ತಿಂಗಳಿನಲ್ಲಿ ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಒಳಗೂಡಿದ್ದ ಒಬ್ಬ ಸಹೋದರಿಯು, ಬೀದಿಯಲ್ಲಿ ಹೋಗುತ್ತಿದ್ದ ಒಬ್ಬ ಯುವಕನಿಗೆ ಪತ್ರಿಕೆಗಳನ್ನು ನೀಡಿದರು. ಆಗ ಆ ಯುವಕನು, ತನ್ನ ಹೆಂಡತಿ ಒಬ್ಬ ಅಕ್ರಿಯ ಸಾಕ್ಷಿಯಾಗಿದ್ದಳು ಎಂಬುದನ್ನು ತಿಳಿಸಿದನು. ರಾಜ್ಯ ಸಭಾಗೃಹ ಎಲ್ಲಿದೆ ಎಂಬುದನ್ನು ಕೇಳಿದ ನಂತರ, ತನ್ನನ್ನು ಹಾಗೂ ತನ್ನ ಹೆಂಡತಿಯನ್ನು ಭೇಟಿಮಾಡಲು ಆ ಸಹೋದರಿಗೆ ಆಮಂತ್ರಣವನ್ನು ನೀಡಿದ. ಇದರ ಪರಿಣಾಮವಾಗಿ, ಈ ದಂಪತಿ ಮುಂದಿನ ಕೂಟಕ್ಕೆ ಹಾಜರಾದರು ಮತ್ತು ಒಂದು ಬೈಬಲ್ ಅಭ್ಯಾಸಕ್ಕೆ ಒಪ್ಪಿಕೊಂಡರು.
13 ಹೆಚ್ಚಿನ ಚಟುವಟಿಕೆಗಾಗಿ ತಯಾರಾಗಿರಿ! ಯೆಹೋವನ ನಾಮ ಹಾಗೂ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಬೇಕೆಂದು ಘೋಷಿಸಿದ ಕೀರ್ತನೆಗಾರನು ಹೀಗೆ ಕೂಡಿಸಿ ಹೇಳಿದನು: “ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ. ಆತನ ಪರಿಶುದ್ಧನಾಮದಲ್ಲಿ ಹಿಗ್ಗಿರಿ.” (ಕೀರ್ತ. 105:2, 3) ಸೇವೆಯಲ್ಲಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸುತ್ತಾ, ಈ ಜ್ಞಾಪಕಾಚರಣೆಯ ಸಮಯವನ್ನು ಹಿಂದೆಂದಿಗಿಂತಲೂ ಗಮನಾರ್ಹವಾದದ್ದಾಗಿ ಮಾಡುವ ಮೂಲಕ ಯೆಹೋವನ ಮಹಾ ನಾಮ ಹಾಗೂ ಆತನ ‘ಅದ್ಭುತಕೃತ್ಯಗಳಿಗಾಗಿ’ ನಾವು ನಮ್ಮ ಆಸಕ್ತಿಯನ್ನು ತೋರಿಸೋಣ.
ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಪ್ರತಿವಾರ 12 ತಾಸುಗಳನ್ನು ಶೆಡ್ಯೂಲ್ ಮಾಡುವ ವಿವಿಧ ರೀತಿಗಳು
[ಪುಟ 4 ರಲ್ಲಿರುವ ಚೌಕ]
ದಿನ ತಾಸುಗಳು
ಸೋಮವಾರ 1 2 – –
ಮಂಗಳವಾರ 1 – 3 –
ಬುಧವಾರ 1 2 – 5
ಗುರುವಾರ 1 – 3 –
ಶುಕ್ರವಾರ 1 2 – –
ಶನಿವಾರ 5 4 3 5
ಭಾನುವಾರ 2 2 3 2
ಒಟ್ಟು: 12 12 12 12
ಇಲ್ಲಿರುವ ಶೆಡ್ಯೂಲ್ಗಳಲ್ಲಿ ಒಂದು ನಿಮಗೆ ಉಪಯುಕ್ತವಾಗಿರುವುದೋ?
ಇಲ್ಲದಿದ್ದಲ್ಲಿ, ನಿಮ್ಮ ಸ್ವಂತ ಶೆಡ್ಯೂಲನ್ನು ಯಾಕೆ ತಯಾರಿಸಬಾರದು?