ಚೆನ್ನಾಗಿ ಕಿವಿಗೊಡುವವರಾಗಿರಿ
1 ಗಮನಕೊಟ್ಟು ಕೇಳಲು ನಮಗೆ ಆತ್ಮನಿಯಂತ್ರಣದ ಆವಶ್ಯಕತೆಯಿದೆ. ಕಿವಿಗೊಡುತ್ತಿರುವವನಿಗೆ, ತಾನು ಕೇಳಿಸಿಕೊಳ್ಳುತ್ತಿರುವ ವಿಷಯಗಳಿಂದ ಕಲಿತು ಪ್ರಯೋಜನ ಪಡೆದುಕೊಳ್ಳಬೇಕು ಅನ್ನುವ ಬಯಕೆಯು ಸಹ ಇರಬೇಕು. ಆದುದರಿಂದ, “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ” ಎಂದು ಯೇಸು ಒತ್ತಿಹೇಳಿದನು.—ಲೂಕ 8:18.
2 ನಾವು ಸಭಾ ಕೂಟಗಳು, ಸಮ್ಮೇಳನಗಳು ಹಾಗೂ ಅಧಿವೇಶನಗಳಿಗೆ ಹಾಜರಾಗುವಾಗ ಇದು ವಿಶೇಷವಾಗಿ ಅನ್ವಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ತುಂಬ ಜಾಗರೂಕತೆಯಿಂದ ಕಿವಿಗೊಡಬೇಕು. (ಇಬ್ರಿ. 2:1) ಈ ಕ್ರೈಸ್ತ ಕೂಟಗಳಲ್ಲಿ ನೀವು ಚೆನ್ನಾಗಿ ಕಿವಿಗೊಡುವವರಾಗಿರಲು ಬೇಕಾಗಿರುವ ಕೆಲವು ಅಂಶಗಳು ಇಲ್ಲಿ ಕೊಡಲ್ಪಟ್ಟಿವೆ.
◼ ಕೂಟಗಳ ಮೌಲ್ಯವನ್ನು ಗಣ್ಯಮಾಡಿರಿ. ‘ನಂಬಿಗಸ್ತ ಮನೆವಾರ್ತೆಯವನ’ ಮೂಲಕವಾಗಿ ‘ಯೆಹೋವನಿಂದ ಶಿಕ್ಷಿತರಾಗಲು’, ಬೇಕಾದ ಸಹಾಯವನ್ನು ಈ ಕೂಟಗಳು ದೊಡ್ಡ ಪ್ರಮಾಣದಲ್ಲಿ ನೀಡುತ್ತವೆ.—ಲೂಕ 12:42; ಯೆಶಾ. 54:13.
◼ ಮುಂಚಿತವಾಗಿಯೇ ತಯಾರಿಸಿರಿ. ಚರ್ಚಿಸಲ್ಪಡಲಿರುವ ವಿಷಯಗಳನ್ನು ಪರಿಶೀಲಿಸಿ ನೋಡಿ. ಮತ್ತು ಬೈಬಲನ್ನು ಹಾಗೂ ಅಭ್ಯಾಸಿಸಲ್ಪಡುವ ಪ್ರಕಾಶನಗಳ ನಿಮ್ಮ ಸ್ವಂತ ಪ್ರತಿಯನ್ನು ನಿಮ್ಮೊಂದಿಗೆ ತರಲು ಮರೆಯಬೇಡಿ.
◼ ಕೂಟಗಳು ನಡೆಯುತ್ತಿರುವಾಗ, ನಿಮ್ಮ ಗಮನವನ್ನು ಕೇಂದ್ರೀಕರಿಸಲು ವಿಶೇಷ ಪ್ರಯತ್ನವನ್ನು ಮಾಡಿ. ನಿಮ್ಮ ಪಕ್ಕದಲ್ಲಿ ಕುಳಿತುಕೊಂಡಿರುವವರ ಸಂಗಡ ಮಾತಾಡುವುದನ್ನೋ ಅಥವಾ ಸಭಿಕರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುವುದನ್ನೋ ಮಾಡಬೇಡಿ. ಕೂಟದ ನಂತರ ಏನು ಮಾಡಬೇಕು ಎಂಬುದರ ಬಗ್ಗೆ ಅಥವಾ ಬೇರೆ ವೈಯಕ್ತಿಕ ವಿಷಯಗಳ ಕುರಿತು ಯೋಚಿಸುವುದರ ಮೂಲಕ ನಿಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಬಿಡಬೇಡಿ.
◼ ಚರ್ಚಿಸಲ್ಪಡುವ ವಿಷಯಗಳನ್ನು ಆಲೋಚಿಸಿ ನೋಡಿ. ಸ್ವತಃ ಹೀಗೆ ಕೇಳಿಕೊಳ್ಳಿ: ‘ಇದು ನನಗೆ ಹೇಗೆ ಅನ್ವಯವಾಗುತ್ತದೆ? ಇದನ್ನು ನನ್ನ ಜೀವಿತದಲ್ಲಿ ನಾನು ಯಾವಾಗ ಅನ್ವಯಿಸಿಕೊಳ್ಳಲಿದ್ದೇನೆ?’
◼ ಮುಖ್ಯವಾದ ಅಂಶಗಳು ಹಾಗೂ ಶಾಸ್ತ್ರವಚನಗಳನ್ನು ಸಂಕ್ಷಿಪ್ತವಾಗಿ ಬರೆದುಕೊಳ್ಳಿ. ಇದು, ಚರ್ಚಿಸಲ್ಪಡುತ್ತಿರುವ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಹಾಗೂ ಪ್ರಾಮುಖ್ಯವಾದ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಂಡು ಮುಂದೆ ಉಪಯೋಗಿಸುವಂತೆ ಸಹಾಯಮಾಡುತ್ತದೆ.
3 ನಿಮ್ಮ ಮಕ್ಕಳಿಗೆ ಸಹ ಚೆನ್ನಾಗಿ ಕಿವಿಗೊಡಲು ಕಲಿಸಿ: ಮಕ್ಕಳಿಗೆ ಆತ್ಮಿಕ ಬೋಧನೆಯ ಅಗತ್ಯವಿದೆ. (ಧರ್ಮೋ. 31:12) ಪುರಾತನ ಕಾಲಗಳಲ್ಲಿ ದೇವಜನರ ನಡುವೆ ಇದ್ದ “ಗ್ರಹಿಸಶಕ್ತರಾದವರೆಲ್ಲರೂ,” ಧರ್ಮಶಾಸ್ತ್ರವು ಓದಲ್ಪಡುವಾಗ ಗಮನಕೊಡಬೇಕಿತ್ತು. (ನೆಹೆ. 8:1-3) ಹೆತ್ತವರು ಕೂಟಗಳಲ್ಲಿ ಚರ್ಚಿಸಲ್ಪಡುವ ವಿಷಯಗಳಿಗೆ ಚೆನ್ನಾಗಿ ಕಿವಿಗೊಡುವುದಾದರೆ, ಮಕ್ಕಳು ಸಹ ಇದನ್ನೇ ಮಾಡುವರು. ಮಕ್ಕಳನ್ನು ವಿನೋದಮಗ್ನರಾಗಿ ಇಡುವುದಕ್ಕೋಸ್ಕರ, ಬೊಂಬೆಗಳನ್ನೋ ಬಣ್ಣಹಚ್ಚುವ ಪುಸ್ತಕಗಳನ್ನೋ ತರುವುದು ವಿವೇಕಯುತವಾದದ್ದಲ್ಲ. ಅನೇಕ ಸಲ ಶೌಚಾಲಯಕ್ಕೆ ಹೋಗಿಬರುವುದು ಕೂಡ ಅವರು ಸರಿಯಾಗಿ ಗಮನಹರಿಸದಂತೆ ಮಾಡುವುದು. “ಮೂರ್ಖತನವು ಹುಡುಗನ ಮನಸ್ಸಿಗೆ” ಸಹಜವಾಗಿರುವುದರಿಂದ, ಮಕ್ಕಳು ನಿಶ್ಶಬ್ದವಾಗಿ ಕುಳಿತುಕೊಂಡು ಕೂಟಗಳಿಗೆ ಕಿವಿಗೊಡುತ್ತಾರೋ ಎಂಬುದನ್ನು ಗಮನಿಸಲು ಹೆತ್ತವರು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಬೇಕು.—ಜ್ಞಾನೋ. 22:15.
4 ಚೆನ್ನಾಗಿ ಕಿವಿಗೊಡುವವರಾಗಿರುವ ಮೂಲಕ, ನಾವು ನಿಜವಾಗಿಯೂ ವಿವೇಕಿಗಳಾಗಿ “ಹೆಚ್ಚಾದ ಪಾಂಡಿತ್ಯವನ್ನು” ಪಡೆದುಕೊಳ್ಳಲು ಹಾತೊರೆಯುತ್ತೇವೆ ಎಂಬುದನ್ನು ರುಜುಪಡಿಸುತ್ತೇವೆ.—ಜ್ಞಾನೋ. 1:5.