ನಮ್ಮ ಸಂಗ್ರಹಾಲಯ
ಬೈಬಲ್ ಸತ್ಯ ಕಂಡುಕೊಳ್ಳಲು ಅನೇಕರಿಗೆ ಸಹಾಯಮಾಡಿದ “ಯುರೇಕಾ ಡ್ರಾಮ”
“ಯುರೇಕಾ!” ಈ ಪದದ ಅರ್ಥ “ನನಗೆ ಸಿಕ್ಕಿತು!” 19ನೇ ಶತಮಾನದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಚಿನ್ನವಿದೆ ಎಂಬ ಸುದ್ದಿ ಕೇಳಿ ಜನರು ಅಲ್ಲಿಗೆ ನುಗ್ಗಿದರು. ಯಾರಿಗೆ ಚಿನ್ನ ಸಿಗುತ್ತಿತ್ತೊ ಅವನು ಜೋರಾಗಿ “ಯುರೇಕಾ” ಎಂದು ಕೂಗುತ್ತಿದ್ದನು. ಆದರೆ ಚಿನ್ನಕ್ಕಿಂತಲೂ ಎಷ್ಟೊ ಹೆಚ್ಚು ಮೌಲ್ಯವುಳ್ಳ ಬೈಬಲ್ ಸತ್ಯವನ್ನು ಚಾರ್ಲ್ಸ್ ಟೇಜ್ ರಸಲ್ ಮತ್ತವರ ಜೊತೆ ಬೈಬಲ್ ವಿದ್ಯಾರ್ಥಿಗಳು ಕಂಡುಕೊಂಡರು. ಈ ಸತ್ಯವನ್ನು ಇತರರಿಗೆ ಹಂಚುವ ತವಕ ಅವರಿಗಿತ್ತು.
1914ರ ಬೇಸಗೆಕಾಲದಷ್ಟಕ್ಕೆ ದೊಡ್ಡ ನಗರಗಳಲ್ಲಿ ಲಕ್ಷಗಟ್ಟಲೆ ಜನರು “ಫೋಟೋ-ಡ್ರಾಮ ಆಫ್ ಕ್ರಿಯೇಷನ್” ನೋಡಲು ಬಂದರು. ಇದು ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳ ಸಂಘ ತಯಾರಿಸಿದ ಎಂಟು ತಾಸು ಉದ್ದದ ಮಹಾಕೃತಿ ಆಗಿತ್ತು. ಇದರಲ್ಲಿ ದಂಗುಬಡಿಸುವಂಥ ಚಲಿಸುವ ಚಿತ್ರಗಳು, ವೈವಿಧ್ಯಮಯ ವರ್ಣರಂಜಿತ ಸ್ಲೈಡ್ಗಳು, ಮನಮೋಹಕ ಕಥಾನಿರೂಪಣೆ ಮತ್ತು ಅತ್ಯುತ್ತಮ ಶಾಸ್ತ್ರೀಯ ಸಂಗೀತವಿತ್ತು. ಈ ಬೈಬಲ್ ಆಧರಿತ ನಿರೂಪಣೆಯು ಸೃಷ್ಟಿಕಾರ್ಯದಿಂದ ಆರಂಭಿಸುತ್ತಾ ಮಾನವ ಇತಿಹಾಸದ ಚಿತ್ರಣ ನೀಡಿ ಯೇಸು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ವರೆಗೆ ಪ್ರೇಕ್ಷಕರನ್ನು ಕೊಂಡೊಯ್ಯಿತು.—ಪ್ರಕ. 20:4.a
ಆದರೆ ಚಿಕ್ಕ ಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದವರ ಕುರಿತೇನು? ಸತ್ಯಕ್ಕಾಗಿ ಹಸಿದಿರುವ ಯಾರಿಗೂ ಈ ಅವಕಾಶ ತಪ್ಪಿಹೋಗದಂತೆ 1914ರ ಆಗಸ್ಟ್ನಲ್ಲಿ ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳ ಸಂಘವು ಸುಲಭವಾಗಿ ಒಯ್ಯಲಾಗುವಂಥ ಆವೃತ್ತಿಯನ್ನು ಬಿಡುಗಡೆಮಾಡಿತು. “ಫೋಟೋ-ಡ್ರಾಮ”ದ ಈ ಆವೃತ್ತಿಯಲ್ಲಿ ಚಲಿಸುವಂಥ ಚಿತ್ರಗಳಿರಲಿಲ್ಲ. ಅದರ ಹೆಸರು “ಯುರೇಕಾ ಡ್ರಾಮ” ಎಂದಾಗಿತ್ತು. ಮೂರು ವಿಧದ ಆವೃತ್ತಿಗಳನ್ನು ಅನೇಕ ಭಾಷೆಗಳಲ್ಲಿ ತಯಾರಿಸಲಾಗಿತ್ತು. “ಯುರೇಕಾ-ಎಕ್ಸ್”ನಲ್ಲಿ ಕಥಾನಿರೂಪಣೆಯ ಧ್ವನಿಸುರುಳಿ ಮತ್ತು ಸಂಗೀತವಿತ್ತು. “ಯುರೇಕಾ-ವೈ”ನಲ್ಲಿ ಎಲ್ಲ ಧ್ವನಿಸುರುಳಿ ಹಾಗೂ ಸುಂದರವಾದ ವರ್ಣರಂಜಿತ ಸ್ಲೈಡ್ಗಳಿದ್ದವು. “ಯುರೇಕಾ ಫ್ಯಾಮಿಲಿ ಡ್ರಾಮ”ವನ್ನು ಮನೆಯಲ್ಲಿ ನೋಡಲಿಕ್ಕೆಂದೇ ತಯಾರಿಸಲಾಗಿತ್ತು. ಅದರಲ್ಲಿ ಆಯ್ದ ಭಾಗಗಳ ಕಥಾನಿರೂಪಣೆ ಮತ್ತು ಗೀತೆಗಳು ಇದ್ದವು. ದುಬಾರಿಯಲ್ಲದ ಫೋನೋಗ್ರಾಫ್ಗಳು ಮತ್ತು ಪ್ರಾಜೆಕ್ಟರ್ ಸಲಕರಣೆಗಳನ್ನು ಸಹ ಲಭ್ಯಗೊಳಿಸಲಾಯಿತು.
ವರ್ಣರಂಜಿತ ಸ್ಲೈಡ್ಗಳನ್ನು ತೋರಿಸಲಿಕ್ಕಾಗಿ ಇಂಥ ಪ್ರಾಜೆಕ್ಟರನ್ನು ಬಳಸಲಾಗುತ್ತಿತ್ತು
“ಯುರೇಕಾ ಡ್ರಾಮ”ವನ್ನು ದೊಡ್ಡ ಪರದೆ ಮೇಲೆ ತೋರಿಸಲಿಕ್ಕಾಗಿ ಫಿಲ್ಮ್ ಪ್ರಾಜೆಕ್ಟರ್ನ ಅಗತ್ಯವಿಲ್ಲದಿದ್ದ ಕಾರಣ ಬೈಬಲ್ ವಿದ್ಯಾರ್ಥಿಗಳು ಈ ಉಚಿತವಾದ ಚಿತ್ರ ಪ್ರದರ್ಶನವನ್ನು ಗ್ರಾಮಾಂತರ ಪ್ರದೇಶಗಳಲ್ಲೂ ಮಾಡಬಹುದಿತ್ತು. ಹೀಗೆ ರಾಜ್ಯ ಸಂದೇಶವನ್ನು ಹೊಸ ಹೊಸ ಸೇವಾಕ್ಷೇತ್ರಗಳಿಗೆ ತಲುಪಿಸಬಹುದಿತ್ತು. ಬರೀ ಧ್ವನಿಸುರುಳಿಯಿದ್ದ “ಯುರೇಕಾ-ಎಕ್ಸ್” ಅನ್ನು ಹಗಲಲ್ಲಾಗಲಿ ರಾತ್ರಿಯಲ್ಲಾಗಲಿ ನುಡಿಸಬಹುದಿತ್ತು. “ಯುರೇಕಾ-ವೈ”ಗಾಗಿದ್ದ ಸ್ಲೈಡ್ ಪ್ರಾಜೆಕ್ಟರನ್ನು ವಿದ್ಯುಚ್ಛಕ್ತಿಯಿಲ್ಲದೆ ಗ್ಯಾಸ್ಲೈಟ್ (ಕಾರ್ಬೈಡ್ ಲ್ಯಾಂಪ್) ಸಹಾಯದಿಂದ ಬಳಸಬಹುದಿತ್ತು. “ಈ ಚಿತ್ರಗಳನ್ನು ನಾವು ಹೆಚ್ಚುಕಡಿಮೆ ಯಾವ ಸ್ಥಳದಲ್ಲಾದರೂ ತೋರಿಸಬಹುದು” ಎಂದು ಫಿನಿಷ್ ಭಾಷೆಯ ಕಾವಲಿನಬುರುಜುವಿನಲ್ಲಿ ವರದಿಯಾಗಿತ್ತು. ಇದು ನೂರಕ್ಕೆ ನೂರು ಸತ್ಯವಾಗಿತ್ತು!
ದೊಡ್ಡ ದೊಡ್ಡ ಥಿಯೇಟರುಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಬದಲಿಗೆ ಬೈಬಲ್ ವಿದ್ಯಾರ್ಥಿಗಳು ಜಾಣ್ಮೆಯಿಂದ ಉಚಿತ ಸ್ಥಳಗಳನ್ನು ಕಂಡುಕೊಂಡರು. ಉದಾಹರಣೆಗೆ ಶಾಲಾ ಕೊಠಡಿಗಳು, ನ್ಯಾಯಾಲಯಗಳು, ರೈಲು ನಿಲ್ದಾಣಗಳು, ಒಮ್ಮೊಮ್ಮೆ ದೊಡ್ಡ ಬಂಗಲೆಗಳ ನಡುಮನೆಗಳಲ್ಲೂ ತೋರಿಸುತ್ತಿದ್ದರು. ಆದರೆ ಹೆಚ್ಚಾಗಿ ಈ ಪ್ರದರ್ಶನಗಳು ಕಟ್ಟಡದ ಹೊರಗೆ ನಡೆಯುತ್ತಿದ್ದವು. ಇದಕ್ಕಾಗಿ ಯಾವುದಾದರೊಂದು ಕಣಜದ ಬದಿಯಲ್ಲಿ “ಪರದೆ” ಅಂದರೆ ದೊಡ್ಡ ಬಿಳಿ ಬಟ್ಟೆಯನ್ನು ಕಟ್ಟಲಾಗುತ್ತಿತ್ತು. ಆ್ಯಂತೊನಿ ಹ್ಯಾಮ್ಬಕ್ ಎಂಬವರು ಬರೆದದ್ದು: “ರೈತರು ತಮ್ಮ ಹಣ್ಣುತೋಟಗಳಲ್ಲಿ ಒಂದು ಪುಟ್ಟ ‘ಸ್ಟೇಡಿಯಂ’ ಮಾಡುತ್ತಿದ್ದರು. ಅಂದರೆ ಜನರು ಕೂತು ಕಾರ್ಯಕ್ರಮವನ್ನು ಆನಂದಿಸಲಾಗುವಂತೆ ಮರದ ದಿಮ್ಮಿಗಳನ್ನು ಸಾಲಾಗಿ ಜೋಡಿಸುತ್ತಿದ್ದರು.” ಈ “ಯುರೇಕಾ” ತಂಡವು ಒಂದು “ಡ್ರಾಮ ಬಂಡಿ”ಯನ್ನು ಬಳಸುತ್ತಿತ್ತು. ಅದರಲ್ಲಿ ಸಲಕರಣೆ, ಗಂಟುಮೂಟೆ, ಶಿಬಿರಕಟ್ಟಲು ಹಾಗೂ ಅಡುಗೆಗಾಗಿ ಬೇಕಾದ ಸಾಮಾನುಗಳನ್ನು ಒಯ್ಯುತ್ತಿದ್ದರು.
“ಯುರೇಕಾ ಡ್ರಾಮ”ದ ಪ್ರೇಕ್ಷಕ ಹಾಗೂ ಶ್ರೋತೃ ವೃಂದದಲ್ಲಿ ಕೆಲವೊಮ್ಮೆ ಬೆರಳೆಣಿಕೆಯಷ್ಟು ಜನರಿದ್ದರೆ, ಇನ್ನೂ ಕೆಲವು ಕಡೆ ನೂರಾರು ಮಂದಿ ಇರುತ್ತಿದ್ದರು. 150 ನಿವಾಸಿಗಳ ಒಂದು ಅಮೆರಿಕನ್ ಪಟ್ಟಣದಲ್ಲಿ ಈ ಪ್ರದರ್ಶನ ಒಂದು ಶಾಲೆಯಲ್ಲಿ ನಡೆದಾಗ 400 ಜನರು ಹಾಜರಾದರು. ಇನ್ನೊಂದು ಕಡೆ ಕೆಲವರು “ಯುರೇಕಾ ಡ್ರಾಮ” ನೋಡಲೆಂದು 8 ಕಿ.ಮೀ. ದೂರ ನಡೆದರು. ಸ್ವೀಡನ್ನಲ್ಲಿ ಶಾರ್ಲಟ್ ಆಲ್ಬರ್ಗ್ ಎಂಬವರ ಮನೆಯಲ್ಲಿ ಆ ಧ್ವನಿಸುರುಳಿ ಕೇಳಲು ನೆರೆಹೊರೆಯವರು ಸೇರಿಬಂದಿದ್ದರು. ಆ ಧ್ವನಿಸುರುಳಿ ಅವರ “ಮನಸ್ಪರ್ಶಿಸಿತು.” ಆಸ್ಟ್ರೇಲಿಯದಲ್ಲಿ ದೂರದ ಗಣಿಗಾರಿಕೆಯ ನಗರವೊಂದರಲ್ಲಿ ಸುಮಾರು 1,500 ಮಂದಿ ಈ ಪ್ರದರ್ಶನಕ್ಕೆ ಹಾಜರಿದ್ದರು. ಹೈಸ್ಕೂಲುಗಳು ಮತ್ತು ಕಾಲೇಜುಗಳಲ್ಲಿ “ಪ್ರೊಫೆಸರರು ಮತ್ತು ವಿದ್ಯಾರ್ಥಿಗಳು ಚಿತ್ರಗಳನ್ನು ನೋಡಿ, ನಮ್ಮ ಅತ್ಯುದ್ಭುತ ಫೋನೋಗ್ರಾಫ್ ರೆಕಾರ್ಡುಗಳನ್ನು ಕೇಳಿ ಮೂಕವಿಸ್ಮಿತರಾದರು” ಎಂದು ಕಾವಲಿನಬುರುಜು ಪತ್ರಿಕೆ ವರದಿಸಿತು. ಚಲನಚಿತ್ರ ಮಂದಿರಗಳಿದ್ದ ಸ್ಥಳಗಳಲ್ಲೂ “ಯುರೇಕಾ ಡ್ರಾಮ” ಜನಮನ ಗೆದ್ದಿತು.
ಸತ್ಯದ ಬೀಜಗಳಿಗೆ ನೀರೆರೆಯುವುದು
“ತರಗತಿ ವಿಸ್ತರಣಾ ಕೆಲಸ”ದಲ್ಲಿ ಅಂದರೆ ಬೈಬಲ್ ವಿದ್ಯಾರ್ಥಿ ತರಗತಿಗಳು (ಅಥವಾ ಸಭೆಗಳು) ಭಾಷಣಕರ್ತರನ್ನು ಕ್ಷೇತ್ರಕ್ಕೆ ಕಳುಹಿಸಿ ಹೊಸ ಅಧ್ಯಯನ ತರಗತಿಗಳನ್ನು ಆರಂಭಿಸುವ ಕೆಲಸದಲ್ಲಿ “ಯುರೇಕಾ ಡ್ರಾಮ” ಉಪಯುಕ್ತ ಸಾಧನವಾಯಿತು. “ಯುರೇಕಾ ಡ್ರಾಮ”ವನ್ನು ಎಷ್ಟು ಮಂದಿ ನೋಡಿದರೆಂದು ನಿರ್ಧರಿಸುವುದು ಕಷ್ಟ. ಅನೇಕ “ಡ್ರಾಮ” ಉಪಕರಣಗಳು ನಿರಂತರ ಬಳಕೆಯಲ್ಲಿದ್ದವು. ಆದರೆ 1915ರಲ್ಲಿದ್ದ 86 “ಡ್ರಾಮ” ತಂಡಗಳಲ್ಲಿ ಬರೀ 14 ತಂಡಗಳು ನಿಯಮಿತವಾಗಿ ವರದಿಗಳನ್ನು ಕಳುಹಿಸುತ್ತಿದ್ದವು. ಆ ವರ್ಷಾಂತ್ಯದ ಚುಟುಕಾದ ವರದಿಯಲ್ಲಿ ಹಾಜರಾದವರ ಸಂಖ್ಯೆಗಳು ಅಪೂರ್ಣವಾಗಿರುವುದಕ್ಕಾಗಿ ಸಂಸ್ಥೆ ವಿಷಾದ ವ್ಯಕ್ತಪಡಿಸಿದರೂ 10 ಕೋಟಿಗಿಂತಲೂ ಹೆಚ್ಚು ಜನರು “ಡ್ರಾಮ” ನೋಡಿದ್ದಾರೆಂದು ತಿಳಿಸಿತು. 30,000 ಮಂದಿ ಬೈಬಲ್ ಸಾಹಿತ್ಯಕ್ಕಾಗಿ ವಿನಂತಿಸಿದ್ದರು.
ಈ “ಯುರೇಕಾ ಡ್ರಾಮ”ವು ಇತಿಹಾಸದ ಹಾದಿಯಲ್ಲಿ ತುಂಬ ಮಂದವಾದ ಹೆಜ್ಜೆಗುರುತನ್ನು ಬಿಟ್ಟುಹೋಗಿರಬಹುದು. ಆದರೆ ಆಸ್ಟ್ರೇಲಿಯದಿಂದ ಹಿಡಿದು ಅರ್ಜೆಂಟೀನ, ದಕ್ಷಿಣ ಆಫ್ರಿಕದಿಂದ ಹಿಡಿದು ಬ್ರಿಟಿಷ್ ದ್ವೀಪಗಳು, ಭಾರತ, ಕ್ಯಾರಿಬಿಯನ್ ದ್ವೀಪಗಳ ಕೋಟಿಗಟ್ಟಲೆ ಜನರು ಈ ಅಪೂರ್ವ ಪ್ರದರ್ಶನವನ್ನು ನೋಡಿದರು. ಅವರಲ್ಲಿ ಅನೇಕರು ಚಿನ್ನಕ್ಕಿಂತಲೂ ಹೆಚ್ಚು ಅಮೂಲ್ಯವಾದ ಬೈಬಲ್ ಸತ್ಯವನ್ನು ಕಂಡುಕೊಂಡರು. ಅವರು “ಯುರೇಕಾ!” ಎಂದು ಗಟ್ಟಿಯಾಗಿ ಉದ್ಗರಿಸಲು ಸಾಧ್ಯವಾಯಿತು.
a ಫೆಬ್ರವರಿ 15, 2014ರ ಕಾವಲಿನಬುರುಜುವಿನ ಪುಟ 30-32ರಲ್ಲಿ “ನಮ್ಮ ಸಂಗ್ರಹಾಲಯ—ನಂಬಿಕೆಕಟ್ಟುವ ಮಹಾಕೃತಿಗೆ ನೂರರ ಸಂಭ್ರಮ!” ಎಂಬ ಲೇಖನ ನೋಡಿ.