ನಿಮ್ಮ ನಂಬಿಕೆಯು ನಿಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುತ್ತದೋ?
ಪಾರ್ಶ್ವವಾಯುವಿನಿಂದ ಕಷ್ಟಪಡುತ್ತಿದ್ದ ತನ್ನ ಆಳನ್ನು ಯೇಸು ಸ್ವಸ್ಥಗೊಳಿಸಬಲ್ಲನು ಎಂಬ ಭರವಸೆ ಶತಾಧಿಪತಿಗಿತ್ತು. ಆದರೂ, ತಾನು ಯೋಗ್ಯನಲ್ಲವೆಂಬ ಅನಿಸಿಕೆಯಿಂದಲೋ ಅಥವಾ ತಾನೊಬ್ಬ ಅನ್ಯನೆಂಬ ಕಾರಣದಿಂದಲೋ ಆ ಶತಾಧಿಪತಿಯು ಯೇಸುವನ್ನು ತನ್ನ ಮನೆಗೆ ಬರುವಂತೆ ಕರೆಕೊಡಲಿಲ್ಲ. ಅದರ ಬದಲು, ಯೆಹೂದ್ಯರ ಕೆಲವು ಹಿರಿಯರು ತನಗೋಸ್ಕರ ಯೇಸುವನ್ನು ಸಮೀಪಿಸಿ, “ಪ್ರಭುವೇ, ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವದು” ಎಂದು ವಿನಂತಿಸುವಂತೆ ಹೇಳಿಕಳುಹಿಸಿದನು. ತಾನು ದೂರದಿಂದಲೇ ವಾಸಿಮಾಡಶಕ್ತನು ಎಂಬುದನ್ನು ಶತಾಧಿಪತಿಯು ನಂಬಿದ್ದಾನೆಂಬುದನ್ನು ಗ್ರಹಿಸಿಕೊಂಡ ಯೇಸು, ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಗುಂಪಿಗೆ, “ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಅಂದನು.—ಮತ್ತಾಯ 8:5-10; ಲೂಕ 7:1-10.
ನಂಬಿಕೆಗೆ ಬೇಕಾಗಿರುವ ಅತ್ಯಾವಶ್ಯಕ ಅಂಶವೊಂದರ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಈ ಅನುಭವವು ನಮಗೆ ಸಹಾಯಮಾಡುತ್ತದೆ. ನಿಜವಾದ ನಂಬಿಕೆಯು ಕೇವಲ ನಂಬುವುದು ಮಾತ್ರವೇ ಆಗಿರುವುದಿಲ್ಲ, ಅದು ಕ್ರಿಯೆಯಲ್ಲಿ ವ್ಯಕ್ತಪಡಿಸಲ್ಪಡುತ್ತದೆ. ಬೈಬಲ್ ಬರಹಗಾರನಾದ ಯಾಕೋಬನು ವಿವರಿಸಿದ್ದು: “ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.” (ಯಾಕೋಬ 2:17) ನಾವು ಒಂದು ನಿಜ ಉದಾಹರಣೆಯನ್ನು ಪರಿಗಣಿಸುವಾಗ ಈ ಅಂಶವು ಇನ್ನೂ ಸ್ಪಷ್ಟವಾಗುತ್ತದೆ. ನಂಬಿಕೆಯಲ್ಲಿ ಕ್ರಿಯೆಗಳಿಲ್ಲದೆ ಹೋಗುವಾಗ ಏನು ಸಂಭವಿಸಬಲ್ಲದು ಎಂಬುದನ್ನು ಅದು ತೋರಿಸುವುದು.
ಸಾ.ಶ.ಪೂ. 1513ರಲ್ಲಿ, ಇಸ್ರಾಯೇಲ್ ಜನಾಂಗವು ನಿಯಮದೊಡಂಬಡಿಕೆಯ ಮೂಲಕ ಯೆಹೋವ ದೇವರೊಂದಿಗೆ ಒಂದು ಸಂಬಂಧದೊಳಕ್ಕೆ ತರಲ್ಪಟ್ಟಿತು. ಆ ಒಡಂಬಡಿಕೆಯ ಮಧ್ಯಸ್ಥಗಾರನಾಗಿದ್ದ ಮೋಶೆ ಇಸ್ರಾಯೇಲ್ ಪುತ್ರರಿಗೆ ದೇವರ ಮಾತನ್ನು ಹೀಗೆ ತಿಳಿಯಪಡಿಸಿದನು: ‘ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ನನಗೆ ಪರಿಶುದ್ಧಜನವಾಗಿರುವಿರಿ.’ (ವಿಮೋಚನಕಾಂಡ 19:3-6) ಹೌದು, ಇಸ್ರಾಯೇಲಿನ ಪರಿಶುದ್ಧತೆಯು ವಿಧೇಯತೆಯ ಮೇಲೆ ಅವಲಂಬಿಸಿತ್ತು.
ಅನೇಕ ಶತಮಾನಗಳು ಗತಿಸಿದ ತರುವಾಯ, ಯೆಹೂದ್ಯರು ಧರ್ಮಶಾಸ್ತ್ರದ ಮೂಲತತ್ತ್ವಗಳನ್ನು ಅನ್ವಯಿಸುವುದಕ್ಕಿಂತ ಅದರ ಅಧ್ಯಯನವನ್ನು ಮಾಡುವುದಕ್ಕೆ ಹೆಚ್ಚಿನ ಪ್ರಮುಖತೆಯನ್ನು ನೀಡಲಾರಂಭಿಸಿದರು. ಮೆಸ್ಸೀಯನಾದ ಯೇಸುವಿನ ಜೀವನ ಮತ್ತು ಸಮಯ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಆ್ಯಲ್ಫ್ರೆಡ್ ಎಡರ್ಶೈಮ್ ಬರೆದದ್ದು: “‘ಲೋಕದ ಮಹಾನ್ ವ್ಯಕ್ತಿಗಳು’ ಆಗಿದ್ದ [ರಬ್ಬಿಗಳು] ಕ್ರಿಯೆಗಳಿಗಿಂತ ಅಧ್ಯಯನವೇ ಹೆಚ್ಚು ಪ್ರಾಮುಖ್ಯ ಎಂದು ದೀರ್ಘಕಾಲದಿಂದಲೂ ನಂಬಿದ್ದರು.”
ದೇವರು ತಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಪುರಾತನ ಇಸ್ರಾಯೇಲ್ಯರು ಶ್ರದ್ಧಾಪೂರ್ವಕ ಅಧ್ಯಯನವನ್ನು ಮಾಡಬೇಕೆಂದು ಆಜ್ಞಾಪಿಸಲ್ಪಟ್ಟಿದ್ದರೆಂಬುದು ನಿಜವೇ. ದೇವರು ಅವರಿಗೆ ಹೇಳಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:6, 7) ಆದರೆ, ಧರ್ಮಶಾಸ್ತ್ರಕ್ಕನುಸಾರ ಕ್ರಿಯೆಗೈಯುವುದು ಅಥವಾ ಅದರಲ್ಲಿ ಸೂಚಿಸಲ್ಪಟ್ಟಿರುವ ಕ್ರಿಯೆಗಳನ್ನು ಮಾಡುವುದಕ್ಕಿಂತ ಅದರ ಅಧ್ಯಯನವು ಮುಖ್ಯವಾದದ್ದೆಂದು ಯೆಹೋವನು ಎಂದಾದರೂ ಅರ್ಥೈಸಿದನೋ? ನೋಡೋಣ.
ಪಾಂಡಿತ್ಯಪೂರ್ಣ ಅಧ್ಯಯನಗಳು
ಒಬ್ಬ ಇಸ್ರಾಯೇಲನಿಗೆ ಧರ್ಮಶಾಸ್ತ್ರದ ಅಧ್ಯಯನದ ಮೇಲೆ ಅತ್ಯಧಿಕ ಒತ್ತನ್ನು ಹಾಕುವುದು ನ್ಯಾಯಸಮ್ಮತವೆಂದು ತೋರಿರಬಹುದು. ಏಕೆಂದರೆ, ಒಂದು ಯೆಹೂದಿ ಸಂಪ್ರದಾಯಕ್ಕನುಸಾರ ದೇವರು ತಾನೇ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡುವುದರಲ್ಲಿ ಪ್ರತಿದಿನ ಮೂರು ತಾಸನ್ನು ಕಳೆದನಂತೆ. ‘ದೇವರೇ ಧರ್ಮಶಾಸ್ತ್ರವನ್ನು ಕ್ರಮವಾಗಿ ಅಧ್ಯಯನ ಮಾಡುವುದಾದರೆ, ಆತನ ಭೂಸೃಷ್ಟಿಜೀವಿಗಳು ಸಹ ಇದನ್ನೇ ಮಾಡುವುದರಲ್ಲಿ ತಲ್ಲೀನರಾಗಿರಬೇಕಲ್ಲವೇ?’ ಎಂದು ಕೆಲವು ಯೆಹೂದ್ಯರು ಏಕೆ ತರ್ಕಿಸಿದ್ದಿರಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ.
ಸಾ.ಶ. ಒಂದನೆಯ ಶತಮಾನದಷ್ಟಕ್ಕೆ ಈ ರಬ್ಬಿಗಳು ಧರ್ಮಶಾಸ್ತ್ರವನ್ನು ಪರಿಶೀಲಿಸಿ ಅರ್ಥನಿರೂಪಿಸುವುದರಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ, ಇದು ಅವರ ಯೋಚನಾಧಾಟಿಯನ್ನೇ ಸಂಪೂರ್ಣವಾಗಿ ತಿರುಚಿಬಿಟ್ಟಿತು. ಯೇಸು ಹೇಳಿದ್ದು: “ಶಾಸ್ತ್ರಿಗಳೂ ಫರಿಸಾಯರೂ . . . ಹೇಳುತ್ತಾರೇ ಹೊರತು ನಡೆಯುವದಿಲ್ಲ. ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು.” (ಮತ್ತಾಯ 23:2-4) ಆ ಧಾರ್ಮಿಕ ಮುಖಂಡರು ಅಸಂಖ್ಯಾತ ನಿಯಮ ನಿಬಂಧನೆಗಳನ್ನು ಸಾಮಾನ್ಯ ಜನರ ಮೇಲೆ ಹೇರುತ್ತಿದ್ದರು, ಆದರೆ ಕಪಟಿಗಳಾದ ಅವರು, ಅದೇ ನಿಯಮ ನಿಬಂಧನೆಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಸ್ವತಃ ಉಪಾಯಗಳನ್ನು ಕಂಡುಹಿಡಿದರು. ಮಾತ್ರವಲ್ಲದೆ, ಧರ್ಮಶಾಸ್ತ್ರದ ಪಾಂಡಿತ್ಯಪೂರ್ಣ ಅಧ್ಯಯನದ ಮೇಲೆ ಅತ್ಯಧಿಕ ಒತ್ತನ್ನು ಹಾಕುತ್ತಿದ್ದ ವ್ಯಕ್ತಿಗಳು, “ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು [“ಪ್ರಾಮುಖ್ಯವಾದದ್ದನ್ನು,” NW], ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ” ಬಿಟ್ಟುಬಿಟ್ಟರು.—ಮತ್ತಾಯ 23:16-24.
ತಮ್ಮ ಸ್ವಂತ ನೀತಿಯನ್ನು ಸ್ಥಾಪಿಸುವ ಹೋರಾಟದಲ್ಲಿ ಶಾಸ್ತ್ರಿಗಳು ಮತ್ತು ಫರಿಸಾಯರು, ತಾವು ಎತ್ತಿಹಿಡಿಯುತ್ತೇವೆಂದು ಹೇಳಿಕೊಳ್ಳುತ್ತಿದ್ದ ಆ ಧರ್ಮಶಾಸ್ತ್ರವನ್ನೇ ಅಲ್ಲಗಳೆಯುತ್ತಿದ್ದರು ಎಂಬುದು ಎಷ್ಟು ವಿಷಾದನೀಯ! ಧರ್ಮಶಾಸ್ತ್ರದಲ್ಲಿದ್ದ ಶಬ್ದಗಳು ಮತ್ತು ಅಲ್ಪಮಾತ್ರ ಅಂಶಗಳ ಮೇಲೆ ಅವರು ಶತಮಾನಗಳುದ್ದಕ್ಕೂ ಮಾಡಿದ ವಾದವಿವಾದಗಳು ಅವರನ್ನು ದೇವರ ಸಮೀಪಕ್ಕೆ ಕೊಂಡೊಯ್ಯಲಿಲ್ಲ. ಇದರ ಪರಿಣಾಮವು ಅಪೊಸ್ತಲ ಪೌಲನು ಯಾವುದನ್ನು ‘ಹರಟೆಮಾತು,’ ‘ವಿವಾದ’ ಮತ್ತು ‘ಸುಳ್ಳಾದ ಜ್ಞಾನೋಪದೇಶ’ ಎಂದು ಕರೆದನೋ ಅದರಂತೆಯೇ ಪಥಭ್ರಷ್ಟಗೊಳಿಸುವಂಥದ್ದಾಗಿತ್ತು. (1 ತಿಮೊಥೆಯ 6:20, 21) ವಿಷಯವು ಇಲ್ಲಿಗೇ ಕೊನೆಗೊಳ್ಳಲಿಲ್ಲ. ಮತ್ತೊಂದು ಗಂಭೀರವಾದ ಸಮಸ್ಯೆಯೂ ಇತ್ತು. ಅಂತ್ಯವಿಲ್ಲದ ಸಂಶೋಧನೆಯು ಅವರ ಮೇಲೆ ಬೀರಿದ ಪ್ರಭಾವವೇ ಅದಾಗಿತ್ತು. ಸರಿಯಾದ ರೀತಿಯಲ್ಲಿ ಕ್ರಿಯೆಗೈಯುವಂತೆ ಪ್ರಚೋದಿಸುವಂಥ ನಂಬಿಕೆಯನ್ನು ಅವರು ಬೆಳೆಸಿಕೊಳ್ಳಲಿಲ್ಲ.
ತಲೆಜ್ಞಾನವಿದ್ದರೂ ಹೃದಯದಲ್ಲಿ ನಂಬಿಕೆಯಿರಲಿಲ್ಲ
ಯೆಹೂದಿ ಧಾರ್ಮಿಕ ಮುಖಂಡರ ಮತ್ತು ದೇವರ ಯೋಚನಾಧಾಟಿಯಲ್ಲಿ ಎಷ್ಟೊಂದು ವ್ಯತ್ಯಾಸವಿತ್ತು! ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕೆ ತುಸು ಮುಂಚೆ ಮೋಶೆ ಅವರಿಗೆ ಹೇಳಿದ್ದು: “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ, ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸಿರಿ.” (ಧರ್ಮೋಪದೇಶಕಾಂಡ 32:46) ಇಸ್ರಾಯೇಲ್ಯರು ಕೇವಲ ಧರ್ಮಶಾಸ್ತ್ರದ ಪಂಡಿತರಾಗುವುದಲ್ಲ, ಬದಲಿಗೆ ಆ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರಾಗಿರಬೇಕಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಆದರೂ, ಇಸ್ರಾಯೇಲ್ ಜನಾಂಗವು ಅನೇಕ ಸಲ ಯೆಹೋವನೊಂದಿಗೆ ಅಪನಂಬಿಗಸ್ತಿಕೆಯಿಂದ ವರ್ತಿಸಿತು. ಸರಿಯಾದ ರೀತಿಯ ಕ್ರಿಯೆಗಳನ್ನು ಮಾಡುವ ಬದಲಿಗೆ, ಇಸ್ರಾಯೇಲ್ ಪುತ್ರರು ಯೆಹೋವನ “ಆಜ್ಞೆಯನ್ನು ಧಿಕ್ಕರಿಸಿ ಆತನನ್ನು ನಂಬದೆ ಆತನ ಮಾತನ್ನು ಅಲಕ್ಷ್ಯ”ಮಾಡಿದರು. (ಧರ್ಮೋಪದೇಶಕಾಂಡ 9:23; ನ್ಯಾಯಸ್ಥಾಪಕರು 2:15, 16; 2 ಪೂರ್ವಕಾಲವೃತ್ತಾಂತ 24:18, 19; ಯೆರೆಮೀಯ 25:4-7) ಕೊನೆಗೆ, ಯೆಹೂದ್ಯರು ತಮ್ಮ ಅಪನಂಬಿಗಸ್ತಿಕೆಯ ಉತ್ತುಂಗದಲ್ಲಿ ಯೇಸುವನ್ನು ಮೆಸ್ಸೀಯನಾಗಿ ಸ್ವೀಕರಿಸುವುದನ್ನೇ ತಳ್ಳಿಹಾಕಿದರು. (ಯೋಹಾನ 19:14-16) ಇದರ ಫಲಿತಾಂಶವಾಗಿ, ಯೆಹೋವ ದೇವರು ಇಸ್ರಾಯೇಲನ್ನು ತಳ್ಳಿಹಾಕಿ ಅನ್ಯಜನರ ಕಡೆಗೆ ತನ್ನ ಗಮನವನ್ನು ತಿರುಗಿಸಿದನು.—ಅ. ಕೃತ್ಯಗಳು 13:46.
ಆದುದರಿಂದ, ದೇವರನ್ನು ಆರಾಧಿಸಲಿಕ್ಕಾಗಿ ಹೃದಯದಲ್ಲಿ ನಂಬಿಕೆಯಿಲ್ಲದಿದ್ದರೂ ತಲೆಜ್ಞಾನವಿದ್ದರೆ ಸಾಕು ಎಂಬ ಉರ್ಲಿನಲ್ಲಿ ಸಿಕ್ಕಿಕೊಳ್ಳದಂತೆ ಜಾಗ್ರತೆ ವಹಿಸುವುದು ನಮಗೆ ತೀರ ಪ್ರಾಮುಖ್ಯವಾಗಿದೆ. ಇದನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಬೈಬಲನ್ನು ಅಧ್ಯಯನ ಮಾಡುವುದು ಕೇವಲ ನಮ್ಮ ತಲೆಯಲ್ಲಿ ಜ್ಞಾನವನ್ನು ತುಂಬಿಸಿಕೊಳ್ಳಲಿಕ್ಕಾಗಿ ಮಾತ್ರ ಆಗಿರುವುದಿಲ್ಲ. ನಿಷ್ಕೃಷ್ಟ ಜ್ಞಾನವು ನಮ್ಮ ಹೃದಯಗಳನ್ನು ತಲಪಬೇಕು ಮತ್ತು ನಮ್ಮ ಜೀವಿತಗಳ ಮೇಲೆ ಸಕ್ರಿಯ ಪ್ರಭಾವವನ್ನು ಬೀರಬೇಕು. ತರಕಾರಿಗಳನ್ನು ಹೇಗೆ ಬೆಳೆಸುವುದು ಎಂಬುದನ್ನು ಕಲಿತುಕೊಂಡ ಬಳಿಕ ಯಾವುದೇ ಬೀಜಗಳನ್ನು ಹಾಕದಿದ್ದರೆ ಅದರಿಂದ ಯಾವುದೇ ಪ್ರಯೋಜನ ಸಿಗುವುದೋ? ಒಂದು ತೋಟವನ್ನು ಬೆಳೆಸಿ ಹೇಗೆ ಕಾಪಾಡುವುದು ಎಂಬುದರ ಕುರಿತು ಸ್ವಲ್ಪ ಜ್ಞಾನವನ್ನು ನಾವು ಪಡೆದುಕೊಳ್ಳಬಹುದು ನಿಜ, ಆದರೆ ಇದರಿಂದ ನಮಗೆ ಯಾವುದೇ ಫಸಲು ಸಿಗಲಿಕ್ಕಿಲ್ಲ! ತದ್ರೀತಿಯಲ್ಲಿ, ಬೈಬಲಿನ ಅಧ್ಯಯನದ ಮೂಲಕ ದೇವರು ತಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವ ವ್ಯಕ್ತಿಗಳು, ಸತ್ಯದ ಬೀಜಗಳು ತಮ್ಮ ಹೃದಯವನ್ನು ತಲಪುವಂತೆ ಬಿಡಬೇಕು. ಹೀಗೆ ಮಾಡಿದಾಗ, ಆ ಬೀಜಗಳು ಮೊಳಕೆಯೊಡೆದು ಅವರನ್ನು ಕ್ರಿಯೆಗೈಯುವಂತೆ ಪ್ರಚೋದಿಸುವವು.—ಮತ್ತಾಯ 13:3-9, 19-23.
“ವಾಕ್ಯದ ಪ್ರಕಾರ ನಡೆಯುವವರಾಗಿರಿ”
“ಸಾರಿದ ವಾರ್ತೆಯು ನಂಬಿಕೆಗೆ ಆಧಾರ”ವಾಗಿದೆ ಎಂದು ಅಪೊಸ್ತಲ ಪೌಲನು ಹೇಳಿದನು. (ರೋಮಾಪುರ 10:17) ದೇವರ ವಾಕ್ಯವನ್ನು ಕೇಳಿಸಿಕೊಂಡು ಆತನ ಕುಮಾರನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಈ ಸ್ವಾಭಾವಿಕ ಪ್ರಕ್ರಿಯೆಯು, ನಮಗೆ ನಿತ್ಯಜೀವವನ್ನು ಪಡೆದುಕೊಳ್ಳುವ ಪ್ರತೀಕ್ಷೆಯನ್ನು ಕೊಡುತ್ತದೆ. ಹೌದು, ‘ನನಗೆ ದೇವರು ಮತ್ತು ಕ್ರಿಸ್ತನಲ್ಲಿ ನಂಬಿಕೆಯುಂಟು’ ಎಂದು ಹೇಳುವುದಕ್ಕಿಂತಲೂ ಹೆಚ್ಚಿನದ್ದು ಅವಶ್ಯವಾಗಿದೆ.
ತಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುವಂಥ ನಂಬಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಯೇಸು ತನ್ನ ಶಿಷ್ಯರಿಗೆ ಉತ್ತೇಜಿಸಿದಾಗ ಹೀಗೆ ಹೇಳಿದನು: “ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ.” (ಯೋಹಾನ 15:8) ತರುವಾಯ, ಯೇಸುವಿನ ಮಲತಮ್ಮನಾದ ಯಾಕೋಬನು, “ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ” ಆಗಿರಬೇಡಿ ಎಂದು ಬರೆದನು. (ಯಾಕೋಬ 1:22) ಆದರೆ, ಏನನ್ನು ಮಾಡಬೇಕೆಂಬುದನ್ನು ನಾವು ಹೇಗೆ ತಿಳಿದುಕೊಳ್ಳಸಾಧ್ಯವಿದೆ? ದೇವರನ್ನು ಮೆಚ್ಚಿಸಲಿಕ್ಕಾಗಿ ನಾವು ಏನನ್ನು ಮಾಡಬೇಕೆಂಬುದನ್ನು ಯೇಸು ಮಾತು ಮತ್ತು ಮಾದರಿಯ ಮೂಲಕ ತೋರಿಸಿಕೊಟ್ಟನು.
ಭೂಮಿಯ ಮೇಲಿದ್ದಾಗ, ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ಮತ್ತು ತನ್ನ ತಂದೆಯ ನಾಮವನ್ನು ಮಹಿಮೆಪಡಿಸಲಿಕ್ಕಾಗಿ ಯೇಸು ಶತಪ್ರಯತ್ನವನ್ನು ಮಾಡಿದನು. (ಯೋಹಾನ 17:4-8) ಯಾವ ವಿಧದಲ್ಲಿ? ಅಸ್ವಸ್ಥರನ್ನು ಮತ್ತು ಅಂಗವಿಕಲರನ್ನು ಸ್ವಸ್ಥಮಾಡಲಿಕ್ಕಾಗಿ ಯೇಸು ಮಾಡಿದ ಅದ್ಭುತಗಳಿಗೆ ಅನೇಕರು ಕೈತೋರಿಸಬಹುದು. ಆದರೆ ಪ್ರಧಾನ ವಿಧವು ಯಾವುದಾಗಿತ್ತು ಎಂಬುದನ್ನು ಮತ್ತಾಯನ ಸುವಾರ್ತಾ ಪುಸ್ತಕವು ಸ್ಪಷ್ಟವಾಗಿ ತೋರಿಸುತ್ತದೆ: “ಯೇಸು ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು ಅವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ” ಬಂದನು. ಗಮನಿಸಿ, ಯೇಸುವು ಅಕಸ್ಮಾತ್ತಾಗಿ ದಾರಿಯಲ್ಲಿ ಸಿಕ್ಕಿದ ಕೆಲವು ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಮಾತ್ರ ಸುವಾರ್ತೆಯ ಕುರಿತು ಮಾತಾಡಲಿಲ್ಲ. ಅವನು ಅತ್ಯುತ್ಸಾಹದಿಂದ ಪ್ರಚೋದಿಸಲ್ಪಟ್ಟು “ಗಲಿಲಾಯದಲ್ಲೆಲ್ಲಾ” ಇರುವ ಜನರನ್ನು ಸಂಪರ್ಕಿಸಲಿಕ್ಕಾಗಿ ಲಭ್ಯವಿದ್ದ ಎಲ್ಲಾ ವಿಧಾನಗಳನ್ನು ಉಪಯೋಗಿಸಿದನು.—ಮತ್ತಾಯ 4:23, 24; 9:35.
ತನ್ನ ಹಿಂಬಾಲಕರು ಸಹ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಯೇಸು ನಿರ್ದೇಶನವನ್ನಿತ್ತನು. ವಾಸ್ತವದಲ್ಲಿ, ಅವರು ಹಿಂಬಾಲಿಸಲು ಸಾಧ್ಯವಾಗುವಂತೆ ಅವನು ಒಂದು ಅತ್ಯುತ್ತಮ ಮಾದರಿಯನ್ನು ಒದಗಿಸಿದನು. (1 ಪೇತ್ರ 2:21) ಯೇಸು ತನ್ನ ನಂಬಿಗಸ್ತ ಶಿಷ್ಯರಿಗೆ ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”—ಮತ್ತಾಯ 28:19, 20.
ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವುದು ಒಂದು ನಿಜವಾದ ಪಂಥಾಹ್ವಾನವಾಗಿದೆ ಎಂಬುದು ಒಪ್ಪಿಕೊಳ್ಳತಕ್ಕ ಮಾತೇ. “ತೋಳಗಳ ನಡುವೆ ಕುರಿಮರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ ನೋಡಿರಿ” ಎಂದು ಸ್ವತಃ ಯೇಸುವೇ ಹೇಳಿದ್ದಾನೆ. (ಲೂಕ 10:3) ನಾವು ವಿರೋಧವನ್ನು ಎದುರಿಸುವಾಗ, ಅನಾವಶ್ಯಕವಾದ ತೊಂದರೆ ಅಥವಾ ಬಾಧೆಯನ್ನು ಅನುಭವಿಸುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಸ್ವಾಭಾವಿಕ ಪ್ರವೃತ್ತಿಯಾಗಿದೆ. ಯೇಸುವನ್ನು ಬಂಧಿಸಲಾದ ರಾತ್ರಿಯಲ್ಲಿ ಇದೇ ಸಂಭವಿಸಿತು. ಭಯಭೀತರಾದ ಯೇಸುವಿನ ಶಿಷ್ಯರು ಅವನನ್ನು ಬಿಟ್ಟು ಓಡಿಹೋದರು. ಅದೇ ರಾತ್ರಿ ಸ್ವಲ್ಪ ಸಮಯದ ತರುವಾಯ, ಪೇತ್ರನು ಯೇಸುವನ್ನು ಅರಿಯೆನೆಂದು ಮೂರು ಬಾರಿ ಅಲ್ಲಗಳೆದನು.—ಮತ್ತಾಯ 26:56, 69-75.
ಮಾತ್ರವಲ್ಲದೆ, ಅಪೊಸ್ತಲ ಪೌಲನು ಸಹ ಸುವಾರ್ತೆಯನ್ನು ಸಾರಲಿಕ್ಕಾಗಿ ಹೋರಾಡಿದನು ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವಾದೀತು. ಥೆಸಲೊನೀಕದಲ್ಲಿದ್ದ ಸಭೆಗೆ ಅವನು ಬರೆದದ್ದು: “ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು [“ಹೋರಾಟವನ್ನು,” NW] ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು” ತಿಳಿಸಿದೆವು.—1 ಥೆಸಲೊನೀಕ 2:1, 2.
ಪೌಲ ಮತ್ತು ಅವನ ಜೊತೆ ಅಪೊಸ್ತಲರು ದೇವರ ರಾಜ್ಯದ ಕುರಿತು ಇತರರೊಂದಿಗೆ ಮಾತಾಡುವ ವಿಷಯದಲ್ಲಿ ತಮಗಿದ್ದ ಯಾವುದೇ ಭಯವನ್ನು ಹೋಗಲಾಡಿಸಿದರು; ನೀವು ಸಹ ಹಾಗೆಯೇ ಮಾಡಬಲ್ಲಿರಿ. ಹೇಗೆ? ಪ್ರಪ್ರಥಮವಾಗಿ ಯೆಹೋವನ ಮೇಲೆ ಅವಲಂಬಿಸಿಕೊಳ್ಳುವ ಮೂಲಕವೇ. ನಾವು ಯೆಹೋವನಲ್ಲಿ ಪೂರ್ಣ ನಂಬಿಕೆಯನ್ನು ಇಡುವುದಾದರೆ, ಆ ನಂಬಿಕೆಯು ನಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುವುದು ಮತ್ತು ಆಗ ನಮ್ಮಿಂದ ಆತನ ಚಿತ್ತವನ್ನು ಮಾಡಲು ಸಾಧ್ಯವಿರುವುದು.—ಅ. ಕೃತ್ಯಗಳು 4:17-20; 5:18, 27-29.
ನಿಮ್ಮ ಕೆಲಸಕ್ಕೆ ಪ್ರತಿಫಲವುಂಟು
ಯೆಹೋವನನ್ನು ಸೇವಿಸಲಿಕ್ಕಾಗಿ ನಾವು ಎಷ್ಟು ಪ್ರಯತ್ನವನ್ನು ಹಾಕುತ್ತೇವೆ ಎಂಬುದು ಆತನಿಗೆ ತಿಳಿದಿದೆ. ಉದಾಹರಣೆಗೆ, ನಾವು ಯಾವಾಗ ಅಸ್ವಸ್ಥರಾಗಿದ್ದೇವೆ ಅಥವಾ ದಣಿದಿದ್ದೇವೆ ಎಂಬುದು ಆತನಿಗೆ ತಿಳಿದಿದೆ. ನಮ್ಮಲ್ಲಿರುವ ಅಭದ್ರ ಅನಿಸಿಕೆಗಳು ಮತ್ತು ಸಂದೇಹಗಳನ್ನು ಆತನು ಬಲ್ಲವನಾಗಿದ್ದಾನೆ. ಹಣಕಾಸಿನ ಒತ್ತಡಗಳು ನಮ್ಮನ್ನು ಚಿಂತೆಗೊಳಪಡಿಸುವಾಗ ಅಥವಾ ನಮ್ಮ ಆರೋಗ್ಯ ಇಲ್ಲವೆ ನಮ್ಮ ಭಾವನೆಗಳು ನಮ್ಮನ್ನು ಮನಗುಂದಿಸುವಾಗ, ಯೆಹೋವನು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾನೆ.—2 ಪೂರ್ವಕಾಲವೃತ್ತಾಂತ 16:9; 1 ಪೇತ್ರ 3:12.
ನಮ್ಮ ಅಪರಿಪೂರ್ಣತೆಗಳು ಮತ್ತು ಕಷ್ಟಗಳ ಹೊರತಾಗಿಯೂ ನಮ್ಮ ನಂಬಿಕೆಯು ನಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುವಾಗ ಯೆಹೋವನಿಗೆ ಎಷ್ಟು ಸಂತೋಷವಾಗುತ್ತಿರಬೇಕು! ಯೆಹೋವನು ತನ್ನ ನಂಬಿಗಸ್ತ ಸೇವಕರಿಗಾಗಿ ಹೊಂದಿರುವ ಕೋಮಲ ಪರಿಗಣನೆಯು ಒಂದು ಶೂನ್ಯ ಭಾವನೆಯಾಗಿರುವುದಿಲ್ಲ—ಅದರೊಂದಿಗೆ ಒಂದು ವಾಗ್ದಾನ ಸಹ ಕೊಡಲ್ಪಟ್ಟಿದೆ. ದೈವಪ್ರೇರಿತನಾದ ಅಪೊಸ್ತಲ ಪೌಲನು ಬರೆದದ್ದು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿಯ 6:10.
ಯೆಹೋವನ ಕುರಿತು, “ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು” ಮತ್ತು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ಬೈಬಲ್ ನೀಡುವ ವರ್ಣನೆಯಲ್ಲಿ ನೀವು ನಂಬಿಕೆಯಿಡಸಾಧ್ಯವಿದೆ. (ಧರ್ಮೋಪದೇಶಕಾಂಡ 32:4; ಇಬ್ರಿಯ 11:6) ಉದಾಹರಣೆಗೆ, ಯು.ಎಸ್.ಏ., ಕ್ಯಾಲಿಫೋರ್ನಿಯದಲ್ಲಿರುವ ಒಬ್ಬ ಸ್ತ್ರೀ ಜ್ಞಾಪಿಸಿಕೊಳ್ಳುವುದು: “ನನ್ನ ತಂದೆ ಕುಟುಂಬಸ್ಥರಾಗುವ ಮುಂಚೆ ಹತ್ತು ವರ್ಷ ಒಬ್ಬ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಮಾಡಿದ್ದರು. ಯೆಹೋವನು ಅವರಿಗೆ ಶುಶ್ರೂಷೆಯಲ್ಲಿ ಹೇಗೆ ನೆರವನ್ನು ನೀಡುತ್ತಿದ್ದನು ಎಂಬುದರ ಕುರಿತು ಅವರು ನನಗೆ ತಿಳಿಸುತ್ತಿದ್ದಾಗ ನಾನು ಕೇಳಿ ತುಂಬ ಸಂತೋಷಪಡುತ್ತಿದ್ದೆ. ಅನೇಕ ಸಲ ಅವರಿಗೆ ತಮ್ಮ ಜೇಬಿನಲ್ಲಿ ಉಳಿದಿದ್ದ ಹಣದಿಂದ ಶುಶ್ರೂಷೆಗೆ ಹೋಗಲಿಕ್ಕಾಗಿ ಪೆಟ್ರೋಲ್ ಹಾಕಲು ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಅವರು ಶುಶ್ರೂಷೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಆಶ್ಚರ್ಯಕರವಾಗಿ ಅನೇಕ ಸಲ ಬಾಗಿಲ ಬಳಿ ಅಡಿಗೆ ಸಾಮಾನುಗಳು ಕಾಯುತ್ತಿದ್ದವು.”
ಆರ್ಥಿಕ ಬೆಂಬಲವು ಮಾತ್ರವಲ್ಲದೆ, “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ” ಆಗಿರುವ ಯೆಹೋವನು ನಮಗೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ಸಹ ನೀಡುತ್ತಾನೆ. (2 ಕೊರಿಂಥ 1:3) “ಯೆಹೋವನ ಮೇಲೆ ಅವಲಂಬಿಸಿರುವುದು ಒಂದು ಹಾಯಾದ ಅನಿಸಿಕೆಯನ್ನು ಕೊಡುತ್ತದೆ. ಇದು ಆತನಲ್ಲಿ ಭರವಸೆಯನ್ನಿಡಲು ಮತ್ತು ಆತನು ನಿಮಗೆ ಹೇಗೆ ಸಹಾಯ ನೀಡುತ್ತಾನೆ ಎಂಬುದನ್ನು ನೋಡಲು ಅವಕಾಶವನ್ನು ಮಾಡಿಕೊಡುತ್ತದೆ” ಎಂದು, ಹಲವಾರು ವರ್ಷಗಳಿಂದ ಅನೇಕ ಪರೀಕ್ಷೆಗಳನ್ನು ಎದುರಿಸಿರುವ ಒಬ್ಬ ಸಾಕ್ಷಿಯು ಹೇಳುತ್ತಾಳೆ. ‘ಪ್ರಾರ್ಥನೆಯನ್ನು ಕೇಳುವವನನ್ನು’ ನೀವು ವಿನಮ್ರಭಾವದಿಂದ ಸಮೀಪಿಸಸಾಧ್ಯವಿದೆ, ಮತ್ತು ಆತನು ನಿಮ್ಮ ವೈಯಕ್ತಿಕ ಚಿಂತೆಗಳಿಗೆ ಗಮನಕೊಡುವನು ಎಂಬ ಖಾತ್ರಿಯನ್ನು ಹೊಂದಿರಸಾಧ್ಯವಿದೆ.—ಕೀರ್ತನೆ 65:2.
ಆಧ್ಯಾತ್ಮಿಕ ಕೊಯ್ಲಿನ ಕೆಲಸಗಾರರು ಪಡೆದುಕೊಳ್ಳುವ ಆಶೀರ್ವಾದಗಳು ಮತ್ತು ಪ್ರತಿಫಲಗಳೋ ಅನೇಕ. (ಮತ್ತಾಯ 9:37, 38) ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು ಅನೇಕರಿಗೆ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ತಂದಿದೆ, ಮತ್ತು ನಿಮ್ಮ ವಿಷಯದಲ್ಲೂ ಇದು ಸತ್ಯವಾಗಬಹುದು. ಆದರೂ, ಹೆಚ್ಚು ಪ್ರಾಮುಖ್ಯವಾಗಿ, ಇತರರಿಗೆ ಸಾಕ್ಷಿಕೊಡುವುದು ದೇವರೊಂದಿಗಿನ ಒಳ್ಳೇ ಸಂಬಂಧವನ್ನು ಬಲಪಡಿಸುವಂತೆ ನಮಗೆ ಸಹಾಯಮಾಡುತ್ತದೆ.—ಯಾಕೋಬ 2:23.
ಒಳ್ಳೆಯದನ್ನು ಮಾಡುತ್ತಾ ಇರಿ
ಒಂದುವೇಳೆ ಅಸ್ವಸ್ಥತೆಗಳೋ ವೃದ್ಧಾಪ್ಯವೋ ಒಬ್ಬನು ದೇವರ ಸೇವೆಯಲ್ಲಿ ತಾನು ಬಯಸಿದಷ್ಟನ್ನು ಮಾಡದಂತೆ ನಿರ್ಬಂಧಿಸುವುದಾದರೆ, ಇದರಿಂದ ಯೆಹೋವನು ಅಪ್ರಸನ್ನನಾಗುತ್ತಾನೆ ಎಂದು ದೇವರ ಸೇವಕನೊಬ್ಬನು ಯೋಚಿಸುವುದು ತೀರ ತಪ್ಪು. ಅನಾರೋಗ್ಯ, ಕುಟುಂಬದ ಜವಾಬ್ದಾರಿಗಳು ಅಥವಾ ಇತರ ಪರಿಸ್ಥಿತಿಗಳಿಂದಾಗಿ ಇತಿಮಿತಿಗಳಿಗೆ ಒಳಗಾಗಿರುವವರು ಸಹ ಇದನ್ನೇ ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಒಂದು ಅಸ್ವಸ್ಥತೆ ಅಥವಾ ಅಡಚಣೆಯು ತನ್ನನ್ನು ಕುಗ್ಗಿಸುತ್ತಿದೆ ಮತ್ತು ಅದು ತನ್ನನ್ನು “ಬಿಟ್ಟುಹೋಗಬೇಕೆಂದು” ಅಪೊಸ್ತಲ ಪೌಲನು “ಮೂರು ಸಾರಿ ಕರ್ತನನ್ನು ಬೇಡಿ”ಕೊಂಡದ್ದನ್ನು ನೆನಪಿಗೆ ತನ್ನಿರಿ. ಯೆಹೋವನ ಸೇವೆಯಲ್ಲಿ ಪೌಲನು ಹೆಚ್ಚನ್ನು ಸಾಧಿಸಲು ಸಾಧ್ಯವಾಗುವಂತೆ ಅವನನ್ನು ವಾಸಿಮಾಡುವ ಬದಲು, “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ [ನನ್ನ] ಬಲವು ಪೂರ್ಣಸಾಧಕವಾಗುತ್ತದೆ” ಎಂದು ದೇವರು ಉತ್ತರ ಕೊಟ್ಟಿದ್ದನು. (2 ಕೊರಿಂಥ 12:7-10) ಆದುದರಿಂದ, ನೀವು ಯಾವುದೇ ಪರಿಸ್ಥಿತಿಗಳನ್ನು ಎದುರಿಸುತ್ತಿರುವುದಾದರೂ ಆತನ ಅಭಿರುಚಿಗಳನ್ನು ಅಭಿವೃದ್ಧಿಗೊಳಿಸಲಿಕ್ಕಾಗಿ ನೀವು ಎಷ್ಟನ್ನು ಮಾಡುತ್ತಿದ್ದೀರೋ ಅದನ್ನು ನಿಮ್ಮ ಸ್ವರ್ಗೀಯ ತಂದೆಯು ಗಣ್ಯಮಾಡುತ್ತಾನೆ ಎಂಬ ಖಾತ್ರಿ ನಿಮಗಿರಲಿ.—ಇಬ್ರಿಯ 13:15, 16.
ನಮ್ಮ ಪ್ರೀತಿಯ ಸೃಷ್ಟಿಕರ್ತನು ನಮ್ಮಿಂದ ಕೊಡಲು ಸಾಧ್ಯವಿರುವುದಕ್ಕಿಂತ ಹೆಚ್ಚನ್ನು ಅಪೇಕ್ಷಿಸುವುದಿಲ್ಲ. ನಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುವಂಥ ನಂಬಿಕೆಯನ್ನು ಹೊಂದಿರುವಂತೆ ಮಾತ್ರ ಆತನು ಕೇಳುತ್ತಾನೆ.
[ಪುಟ 26ರಲ್ಲಿರುವ ಚಿತ್ರ]
ಧರ್ಮಶಾಸ್ತ್ರವನ್ನು ಅಧ್ಯಯನ ಮಾಡುವುದಷ್ಟೇ ಸಾಕಾಗಿತ್ತೋ?
[ಪುಟ 29ರಲ್ಲಿರುವ ಚಿತ್ರಗಳು]
ನಮ್ಮ ನಂಬಿಕೆಯು ಕ್ರಿಯೆಗಳಿಂದ ವ್ಯಕ್ತಪಡಿಸಲ್ಪಡಬೇಕು