ಶಾಫಾನ ಮತ್ತು ಅವನ ಕುಟುಂಬದ ಪರಿಚಯ ನಿಮಗಿದೆಯೊ?
ನಿಮ್ಮ ಬೈಬಲನ್ನು ಓದುವಾಗ, ಶಾಫಾನ ಮತ್ತು ಅವನ ವರ್ಚಸ್ಸುಳ್ಳ ಕುಟುಂಬ ಸದಸ್ಯರಲ್ಲಿ ಕೆಲವರಿಗೆ ಸೂಚಿಸಿ ಮಾತಾಡಲ್ಪಟ್ಟಿರುವುದನ್ನು ನೀವು ಎಂದಾದರೂ ಗಮನಿಸಿದ್ದೀರೊ? ಅವರು ಯಾರಾಗಿದ್ದರು? ಅವರೇನು ಮಾಡಿದರು? ಮತ್ತು ಅವರಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?
ಸುಮಾರು ಸಾ.ಶ.ಪೂ. 642ರಲ್ಲಿ ಸತ್ಯಾರಾಧನೆಯ ಪುನಸ್ಸ್ಥಾಪನೆಯ ಸಂಬಂಧದಲ್ಲಿ, ಬೈಬಲ್ ನಮಗೆ “ಅಚೆಲ್ಯನ ಮಗನೂ ಮೆಷುಲ್ಲಾಮನ ಮೊಮ್ಮಗನೂ ಆದ ಶಾಫಾನ”ನನ್ನು ಪರಿಚಯಪಡಿಸುತ್ತದೆ. (2 ಅರಸುಗಳು 22:3) ಸಾ.ಶ.ಪೂ. 642ರಿಂದ ಹಿಡಿದು 36 ವರ್ಷಗಳ ವರೆಗೆ, ಅಂದರೆ ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಾಶನದ ವರೆಗೆ, ನಮಗೆ ಅವನ ನಾಲ್ಕು ಮಂದಿ ಪುತ್ರರಾದ ಅಹೀಕಾಮ್, ಎಲ್ಲಾಸ, ಗೆಮರ್ಯ, ಮತ್ತು ಯಾಜನ್ಯ ಹಾಗೂ ಅವನ ಇಬ್ಬರು ಮೊಮ್ಮಕ್ಕಳಾದ, ಮೀಕಾಯ ಮತ್ತು ಗೆದಲ್ಯನನ್ನು ಪರಿಚಯಿಸಲಾಗುತ್ತದೆ. (ತಖ್ತೆಯನ್ನು ನೋಡಿ.) “[ಯೆಹೂದದ ರಾಜ್ಯದಲ್ಲಿನ] ಅಧಿಕಾರಿ ವರ್ಗದಲ್ಲಿ ಶಾಫಾನನ ಕುಟುಂಬವು ಪ್ರಧಾನವಾಗಿತ್ತು ಮತ್ತು ಯೋಷೀಯನ ಕಾಲದಿಂದ ಹಿಡಿದು, ಬಾಬೆಲಿನ ಸೆರೆವಾಸದ ವರೆಗೆ ರಾಜನ ಬರಹಗಾರರ ಸ್ಥಾನದಲ್ಲಿತ್ತು” ಎಂದು ಎನ್ಸೈಕ್ಲಪೀಡೀಯ ಜೂಡೈಕಾ ವಿವರಿಸುತ್ತದೆ. ಶಾಫಾನ ಮತ್ತು ಅವನ ಕುಟುಂಬದ ಬಗ್ಗೆ ಬೈಬಲ್ ತಿಳಿಸುವಂಥ ವಿಷಯಗಳನ್ನು ಪುನರ್ವಿಮರ್ಶಿಸುವುದು, ಅವರು ಪ್ರವಾದಿಯಾದ ಯೆರೆಮೀಯನನ್ನು ಮತ್ತು ಯೆಹೋವನ ಸತ್ಯಾರಾಧನೆಯನ್ನು ಹೇಗೆ ಬೆಂಬಲಿಸಿದರೆಂಬುದನ್ನು ಗ್ರಹಿಸಲು ನಮಗೆ ಸಹಾಯಮಾಡುತ್ತದೆ.
ಶಾಫಾನನು ಸತ್ಯಾರಾಧನೆಯನ್ನು ಬೆಂಬಲಿಸುತ್ತಾನೆ
ಸಾ.ಶ.ಪೂ. 642ರಲ್ಲಿ, ರಾಜನಾದ ಯೋಷೀಯನು 25 ವರ್ಷದವನಾಗಿದ್ದಾಗ, ಶಾಫಾನನು ರಾಜನ ಕಾರ್ಯದರ್ಶಿಯೂ ಲೇಖಕನೂ ಆಗಿ ಸೇವೆಸಲ್ಲಿಸುವುದನ್ನು ತಿಳಿಸಲಾಗಿದೆ. (ಯೆರೆಮೀಯ 36:10) ಅದರಲ್ಲಿ ಏನು ಒಳಗೂಡಿತ್ತು? ಈ ಮೇಲೆ ತಿಳಿಸಲ್ಪಟ್ಟಿರುವ ಪರಾಮರ್ಶೆ ಕೃತಿಯು ತಿಳಿಸುವುದೇನೆಂದರೆ, ರಾಜನ ಬರಹಗಾರನು ಮತ್ತು ಕಾರ್ಯದರ್ಶಿಯು, ರಾಜನ ಆಪ್ತ ಸಲಹೆಗಾರನಾಗಿರುತ್ತಿದ್ದನು, ಹಣಕಾಸಿನ ವ್ಯವಹಾರಗಳ ಉಸ್ತುವಾರಿಯುಳ್ಳವನಾಗಿದ್ದನು, ರಾಯಭಾರ ತಂತ್ರದಲ್ಲಿ ಕುಶಲಿಗನು, ಮತ್ತು ವಿದೇಶಾಂಗ ವ್ಯವಹಾರಗಳು, ಅಂತಾರಾಷ್ಟ್ರೀಯ ಕಾನೂನು ಮತ್ತು ವ್ಯಾಪಾರ ಒಪ್ಪಂದಗಳ ಬಗ್ಗೆ ತಿಳಿವಳಿಕೆಯುಳ್ಳವನು ಆಗಿರುತ್ತಿದ್ದನು. ಹೀಗೆ, ರಾಜನ ಕಾರ್ಯದರ್ಶಿಯೋಪಾದಿ ಶಾಫಾನನು ಆ ರಾಜ್ಯದಲ್ಲೇ ತುಂಬ ವರ್ಚಸ್ಸುಳ್ಳ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು.
ಹತ್ತು ವರ್ಷಗಳ ಮುಂಚೆ, ಎಳೆಯ ಯೋಷೀಯನು ‘ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕಲಾರಂಭಿಸಿದನು.’ ಶಾಫಾನನು ಯೋಷೀಯನಿಗಿಂತಲೂ ಹೆಚ್ಚು ಪ್ರಾಯದವನಾಗಿದ್ದನೆಂದು ವ್ಯಕ್ತವಾಗುತ್ತದೆ, ಮತ್ತು ಈ ಕಾರಣದಿಂದ ಅವನು ಒಬ್ಬ ಒಳ್ಳೆಯ ಆತ್ಮಿಕ ಸಲಹೆಗಾರನೂ, ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ಯೋಷೀಯನ ಮೊದಲನೆಯ ಕಾರ್ಯಾಚರಣೆಯ ಬೆಂಬಲಿಗನೂ ಆಗಿರಸಾಧ್ಯವಿತ್ತು.a—2 ಪೂರ್ವಕಾಲವೃತ್ತಾಂತ 34:1-8.
ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲಿ, “ಧರ್ಮೋಪದೇಶಗ್ರಂಥವು” ಸಿಕ್ಕಿತು ಮತ್ತು ಶಾಫಾನನು “ಅದನ್ನು ಅರಸನ ಮುಂದೆ ಓದಿದನು.” ಅದರಲ್ಲಿದ್ದ ವಿಷಯಗಳನ್ನು ಕೇಳಿ ಯೋಷೀಯನಿಗೆ ಆಘಾತವಾಯಿತು. ಆ ಪುಸ್ತಕದ ಬಗ್ಗೆ ವಿಚಾರಿಸಲು ಅವನು ಹುಲ್ದ ಎಂಬ ಪ್ರವಾದಿನಿಯ ಬಳಿಗೆ, ವಿಶ್ವಾಸಾರ್ಹ ವ್ಯಕ್ತಿಗಳ ಒಂದು ಪ್ರತಿನಿಧಿ ತಂಡವನ್ನು ಕಳುಹಿಸಿದನು. ಶಾಫಾನ ಮತ್ತು ಅವನ ಮಗನಾದ ಅಹೀಕಾಮನನ್ನು ಆ ಪ್ರತಿನಿಧಿ ತಂಡದಲ್ಲಿ ಸೇರಿಸುವ ಮೂಲಕ ರಾಜನು, ಅವರಲ್ಲಿ ತನಗಿದ್ದ ಭರವಸೆಯನ್ನು ತೋರಿಸಿದನು.—2 ಅರಸುಗಳು 22:8-14; 2 ಪೂರ್ವಕಾಲವೃತ್ತಾಂತ 34:14-22.
ಶಾಫಾನನು ಸ್ವತಃ ಏನು ಮಾಡಿದನೆಂಬುದರ ಬಗ್ಗೆ ಶಾಸ್ತ್ರಗಳಲ್ಲಿ ಈ ಒಂದೇ ಉಲ್ಲೇಖವಿದೆ. ಬೈಬಲಿನ ಇತರ ವಚನಗಳಲ್ಲಿ, ಅವನನ್ನು ಕೇವಲ ಒಬ್ಬ ತಂದೆಯೋಪಾದಿ ಇಲ್ಲವೆ ಅಜ್ಜನೋಪಾದಿ ಸೂಚಿಸಿ ಮಾತಾಡಲಾಗಿದೆ. ಶಾಫಾನನ ಸಂತತಿಯು, ಪ್ರವಾದಿಯಾದ ಯೆರೆಮೀಯನೊಂದಿಗೆ ನಿಕಟ ಸಂಪರ್ಕದಲ್ಲಿತ್ತು.
ಅಹೀಕಾಮ್ ಮತ್ತು ಗೆದಲ್ಯ
ನಾವೀಗಾಗಲೇ ನೋಡಿರುವಂತೆ, ಶಾಫಾನನ ಮಗನಾದ ಅಹೀಕಾಮನ ಬಗ್ಗೆ ಮೊದಲ ಬಾರಿ, ಹುಲ್ದ ಎಂಬ ಪ್ರವಾದಿನಿಯ ಬಳಿಗೆ ಕಳುಹಿಸಲ್ಪಟ್ಟ ಪ್ರತಿನಿಧಿ ತಂಡದ ಸಂಬಂಧದಲ್ಲಿ ತಿಳಿಸಲಾಗಿದೆ. ಒಂದು ಪರಾಮರ್ಶೆ ಕೃತಿಯು ಹೇಳುವುದು: “ಅಹೀಕಾಮನ ಅಧಿಕಾರವೇನಾಗಿತ್ತೆಂಬುದು ಹೀಬ್ರು ಬೈಬಲಿನಲ್ಲಿ ಕೊಡಲ್ಪಟ್ಟಿರದಿದ್ದರೂ, ಅವನಿಗೆ ಉಚ್ಚ ಪದವಿಯಿತ್ತೆಂಬುದು ವ್ಯಕ್ತವಾಗುತ್ತದೆ.”
ಆ ಘಟನೆಯ ನಂತರ ಸುಮಾರು 15 ವರ್ಷಗಳ ಬಳಿಕ, ಯೆರೆಮೀಯನ ಜೀವವು ಅಪಾಯದಲ್ಲಿತ್ತು. ಯೆರೂಸಲೇಮನ್ನು ನಾಶಮಾಡುವುದರ ಬಗ್ಗೆ ಯೆಹೋವನಿಗಿರುವ ಉದ್ದೇಶದ ಕುರಿತಾಗಿ ಅವನು ಜನರನ್ನು ಎಚ್ಚರಿಸಿದಾಗ, “ಯಾಜಕರೂ ಪ್ರವಾದಿಗಳೂ ಎಲ್ಲಾ ಜನರೂ ಅವನನ್ನು ಹಿಡಿದು ನಿನಗೆ ಮರಣವೇ ಆಗಬೇಕು” ಎಂದು ಹೇಳಿದರು. ಆಗ ಏನಾಯಿತು? ವೃತ್ತಾಂತವು ಮುಂದುವರಿಯುವುದು: “ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸದ ಹಾಗೆ ಶಾಫಾನನ ಮಗನಾದ ಅಹೀಕಾಮನ ಸಹಾಯವು ಅವನಿಗೆ ಒದಗಿತು.” (ಯೆರೆಮೀಯ 26:1-24) ಇದೇನನ್ನು ತೋರಿಸುತ್ತದೆ? ದಿ ಆ್ಯಂಕರ್ ಬೈಬಲ್ ಡಿಕ್ಷನೆರಿ ತಿಳಿಸುವುದು: “ಇದು ಅಹೀಕಾಮನಿಗಿದ್ದ ಪ್ರಭಾವವನ್ನು ತೋರಿಸುತ್ತದೆ ಮಾತ್ರವಲ್ಲ, ಶಾಫಾನನ ಇತರ ಕುಟುಂಬ ಸದಸ್ಯರಂತೆ ಅವನು ಸಹ ಯೆರೆಮೀಯನ ಕಡೆಗೆ ದಯಾಪರನಾಗಿದ್ದನೆಂಬುದನ್ನು ಸೂಚಿಸುತ್ತದೆ.”
ಸುಮಾರು 20 ವರ್ಷಗಳ ಬಳಿಕ, ಅಂದರೆ ಬಾಬೆಲಿನವರು ಸಾ.ಶ.ಪೂ. 607ರಲ್ಲಿ ಯೆರೂಸಲೇಮನ್ನು ನಾಶಮಾಡಿ, ಹೆಚ್ಚಿನ ಜನರನ್ನು ಸೆರೆಯಾಳುಗಳಾಗಿ ಕೊಂಡೊಯ್ದ ಬಳಿಕ, ಶಾಫಾನನ ಮೊಮ್ಮಗನೂ ಅಹೀಕಾಮನ ಮಗನೂ ಆಗಿದ್ದ ಗೆದಲ್ಯನು, ಉಳಿದಿದ್ದ ಯೆಹೂದ್ಯರ ಮೇಲೆ ಅಧಿಪತಿಯಾಗಿ ನೇಮಿಸಲ್ಪಟ್ಟನು. ಶಾಫಾನನ ಇತರ ಕುಟುಂಬ ಸದಸ್ಯರಂತೆ ಇವನೂ ಯೆರೆಮೀಯನ ಬಗ್ಗೆ ಕಾಳಜಿವಹಿಸಿದನೊ? ಬೈಬಲ್ ದಾಖಲೆಯಲ್ಲಿ ಹೀಗೆ ಓದುತ್ತೇವೆ: “ಆಗ ಯೆರೆಮೀಯನು ಅಹೀಕಾಮನ ಮಗನಾದ ಗೆದಲ್ಯನು ಇದ್ದ ಮಿಚ್ಪಕ್ಕೆ ಹೋಗಿ . . . ಅವನ ಸಂಗಡ ವಾಸಿಸಿದನು.” ಕೆಲವೇ ತಿಂಗಳೊಳಗೆ ಗೆದಲ್ಯನ ಹತ್ಯೆಯಾಯಿತು, ಮತ್ತು ಉಳಿದಿದ್ದ ಯೆಹೂದ್ಯರು ಐಗುಪ್ತಕ್ಕೆ ಸ್ಥಳಾಂತರಿಸಿದಾಗ, ಯೆರೆಮೀಯನನ್ನು ತಮ್ಮೊಂದಿಗೆ ಕರೆದೊಯ್ದರು.—ಯೆರೆಮೀಯ 40:5-7; 41:1, 2; 43:4-7.
ಗೆಮರ್ಯ ಮತ್ತು ಮೀಕಾಯ
ಶಾಫಾನನ ಮಗನಾದ ಗೆಮರ್ಯ ಮತ್ತು ಮೊಮ್ಮಗನಾದ ಮೀಕಾಯರು, ಯೆರೆಮೀಯ ಅಧ್ಯಾಯ 36ರಲ್ಲಿ ವರ್ಣಿಸಲ್ಪಟ್ಟಿರುವ ಘಟನೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಆ ಸಮಯವು, ಸಾ.ಶ.ಪೂ. 624, ಅಂದರೆ ರಾಜ ಯೆಹೋಯಾಕೀಮನ ಐದನೆಯ ವರ್ಷವಾಗಿತ್ತು. ಯೆರೆಮೀಯನ ಕಾರ್ಯದರ್ಶಿಯಾಗಿದ್ದ ಬಾರೂಕನು, ಯೆಹೋವನ ಆಲಯದಲ್ಲಿ “ಶಾಫಾನನ ಮಗನಾಗಿರುವ ಗೆಮರ್ಯನ ಕೋಣೆಯಲ್ಲಿ” ಯೆರೆಮೀಯನ ಮಾತುಗಳನ್ನು ಸುರಳಿಯಿಂದ ಗಟ್ಟಿಯಾಗಿ ಓದಿಹೇಳಿದನು. ಅಂತೆಯೇ, ‘ಶಾಫಾನನ ಮೊಮ್ಮಗನೂ ಗೆಮರ್ಯನ ಮಗನೂ ಆದ ಮೀಕಾಯನು ಸುರಳಿಯಲ್ಲಿನ ಯೆಹೋವನ ಮಾತುಗಳನ್ನೆಲ್ಲಾ ಕೇಳಿದನು.’—ಯೆರೆಮೀಯ 36:9-12.
ಮೀಕಾಯನು ತನ್ನ ತಂದೆಗೂ ಬೇರೆಲ್ಲ ಪ್ರಧಾನರಿಗೂ ಈ ಸುರಳಿಯ ಬಗ್ಗೆ ತಿಳಿಸಿದನು ಮತ್ತು ಅವರೆಲ್ಲರೂ ಅದರಲ್ಲಿರುವ ವಿಷಯವನ್ನು ಕೇಳಲು ಬಯಸಿದರು. ಅವರು ಹೇಗೆ ಪ್ರತಿಕ್ರಿಯಿಸಿದರು? “ಅವರು ಆ ಮಾತುಗಳನ್ನೆಲ್ಲಾ ಕೇಳಿ ಬೆಬ್ಬರಬಿದ್ದು ಒಬ್ಬರನ್ನೊಬ್ಬರು ನೋಡುತ್ತಾ ನಾವು ಈ ಮಾತುಗಳನ್ನೆಲ್ಲಾ ಅರಸನಿಗೆ ತಿಳಿಸಲೇ ಬೇಕು ಎಂದು ಬಾರೂಕನಿಗೆ ಹೇಳಿದರು.” ಆದರೆ ಅರಸನೊಂದಿಗೆ ಮಾತಾಡುವ ಮುಂಚೆ ಅವರು ಬಾರೂಕನಿಗೆ ಈ ಸಲಹೆಯನ್ನು ಕೊಟ್ಟರು: “ಹೊರಡು, ನೀನೂ ಯೆರೆಮೀಯನೂ ಅಡಗಿಕೊಳ್ಳಿರಿ, ನೀವೆಲ್ಲಿದ್ದೀರೆಂಬದು ಯಾರಿಗೂ ಗೊತ್ತಾಗಬಾರದು.”—ಯೆರೆಮೀಯ 36:12-19.
ಅವರು ನಿರೀಕ್ಷಿಸಿದಂತೆಯೇ, ರಾಜನು ಆ ಸುರಳಿಯಲ್ಲಿದ್ದ ಸಂದೇಶವನ್ನು ತಿರಸ್ಕರಿಸಿದನು ಮತ್ತು ಅದರ ಒಂದೊಂದು ತುಂಡನ್ನೂ ಸುಟ್ಟುಹಾಕಿದನು. ಶಾಫಾನನ ಮಗನಾದ ಗೆಮರ್ಯನೂ ಸೇರಿ ಕೆಲವು ಮಂದಿ ಪ್ರಧಾನರು, “ದಯಮಾಡಿ ಸುರಳಿಯನ್ನು ಸುಡಬಾರದೆಂದು ಅರಸನಿಗೆ ವಿಜ್ಞಾಪನೆಮಾಡಿದರೂ, ಅವನು ಅವರ ಮಾತನ್ನು ಕೇಳಲಿಲ್ಲ.” (ಯೆರೆಮೀಯ 36:21-25) ಯೆರೆಮೀಯ—ಅಗೆತಶಾಸ್ತ್ರದ ಸಂಗಾತಿ (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುವುದು: “ರಾಜನಾದ ಯೆಹೋಯಾಕೀಮನ ಆಸ್ಥಾನದಲ್ಲಿ ಗೆಮರ್ಯನು ಯೆರೆಮೀಯನ ಒಬ್ಬ ಕಟ್ಟಾ ಬೆಂಬಲಿಗನಾಗಿದ್ದನು.”
ಎಲ್ಲಾಸ ಮತ್ತು ಯಾಜನ್ಯ
ಸಾ.ಶ.ಪೂ. 617ರಲ್ಲಿ ಬಾಬೆಲ್ ಯೆಹೂದ ರಾಜ್ಯವನ್ನು ವಶಪಡಿಸಿಕೊಂಡಿತು. ಪ್ರವಾದಿಯಾದ ಯೆಹೆಜ್ಕೇಲನನ್ನು ಸೇರಿಸಿ ಸಾವಿರಾರು ಮಂದಿ ಯೆಹೂದ್ಯರು, ‘ಎಲ್ಲಾ ಪ್ರಭುಗಳೂ ಭಟರೂ ಕಮ್ಮಾರರು ಮೊದಲಾದ ಕೈಗಾರಿಕೆಯವರೂ’ ಸೆರೆಗೊಯ್ಯಲ್ಪಟ್ಟರು. ಮತ್ತನ್ಯನು ಹೊಸ ಸಾಮಂತ ರಾಜನಾದನು. ಅವನ ಹೆಸರನ್ನು ಬಾಬೆಲಿನವರು ಚಿದ್ಕೀಯ ಎಂದು ಬದಲಾಯಿಸಿದರು. (2 ಅರಸುಗಳು 24:12-17) ಅನಂತರ ಚಿದ್ಕೀಯನು ಬಾಬೆಲಿಗೆ ಒಂದು ಪ್ರತಿನಿಧಿ ತಂಡವನ್ನು ಕಳುಹಿಸಿದನು. ಅದರಲ್ಲಿ ಶಾಫಾನನ ಮಗನಾದ ಎಲ್ಲಾಸನೂ ಇದ್ದನು. ಸೆರೆಯಾಳುಗಳಾಗಿದ್ದ ಯೆಹೂದ್ಯರಿಗೆ ಯೆಹೋವನಿಂದ ಬಂದಿದ್ದ ಒಂದು ಮಹತ್ವಪೂರ್ಣ ಸಂದೇಶವನ್ನೊಳಗೊಂಡಿದ್ದ ಪತ್ರವನ್ನು ಯೆರೆಮೀಯನು ಎಲ್ಲಾಸನಿಗೊಪ್ಪಿಸಿದನು.—ಯೆರೆಮೀಯ 29:1-3.
ಹೀಗೆ, ಶಾಫಾನನು, ಅವನ ಪುತ್ರರಲ್ಲಿ ಮೂವರು, ಮತ್ತು ಮೊಮ್ಮಕ್ಕಳಲ್ಲಿ ಇಬ್ಬರು ತಮ್ಮ ಪ್ರಭಾವಶಾಲಿ ಸ್ಥಾನಗಳನ್ನು ಸತ್ಯಾರಾಧನೆಯನ್ನೂ, ನಂಬಿಗಸ್ತ ಪ್ರವಾದಿಯಾದ ಯೆರೆಮೀಯನನ್ನೂ ಬೆಂಬಲಿಸಲು ಉಪಯೋಗಿಸಿದ್ದರೆಂದು ಬೈಬಲ್ ದಾಖಲೆಯು ಈ ವರೆಗೆ ಸೂಚಿಸುತ್ತದೆ. ಆದರೆ ಶಾಫಾನನ ಮಗನಾದ ಯಾಜನ್ಯನ ಕುರಿತಾಗಿ ಏನು? ಶಾಫಾನನ ಕುಟುಂಬದ ಇತರ ಸದಸ್ಯರಂತಿರದೆ, ಅವನು ವಿಗ್ರಾಹಾರಾಧನೆಯಲ್ಲಿ ಒಳಗೂಡಿದನೆಂದು ತೋರಿಬರುತ್ತದೆ. ಯೆಹೆಜ್ಕೇಲನು ಬಾಬೆಲಿನಲ್ಲಿ ಸೆರೆವಾಸದಲ್ಲಿದ್ದ ಆರನೆಯ ವರ್ಷದಲ್ಲಿ, ಇಲ್ಲವೆ ಸಾ.ಶ.ಪೂ. 612ರಲ್ಲಿ ಆ ಪ್ರವಾದಿಗೆ ಒಂದು ದರ್ಶನವಾಯಿತು. ಅದರಲ್ಲಿ ಯೆರೂಸಲೇಮಿನಲ್ಲಿದ್ದ ದೇವಾಲಯದಲ್ಲಿ 70 ಮಂದಿ ಪುರುಷರು ವಿಗ್ರಹಗಳಿಗೆ ಧೂಪ ಸುಡುತ್ತಿರುವುದನ್ನು ಅವನು ನೋಡಿದನು. ಅವರಲ್ಲಿ ಯಾಜನ್ಯನೂ ಇದ್ದನು. ಮತ್ತು ಇವನೊಬ್ಬನ ಹೆಸರನ್ನು ಮಾತ್ರ ಅಲ್ಲಿ ತಿಳಿಸಲಾಗಿದೆ. ಇದು ಅವನು ಆ ಗುಂಪಿನಲ್ಲಿ ಒಬ್ಬ ಪ್ರಮುಖ ಸದಸ್ಯನಾಗಿದ್ದಿರಬಹುದು ಎಂಬುದನ್ನು ಸೂಚಿಸುತ್ತದೆ. (ಯೆಹೆಜ್ಕೇಲ 8:1, 9-12) ಯಾಜನ್ಯನ ಉದಾಹರಣೆಯು, ಒಬ್ಬ ವ್ಯಕ್ತಿಯು ಒಂದು ದೈವಭಕ್ತ ಕುಟುಂಬದಲ್ಲಿ ಬೆಳೆಸಲ್ಪಟ್ಟ ಕಾರಣಮಾತ್ರಕ್ಕೆ ಅವನೂ ಯೆಹೋವನ ನಂಬಿಗಸ್ತ ಆರಾಧಕನಾಗುವನೆಂಬ ಖಾತ್ರಿಯನ್ನು ಕೊಡುವುದಿಲ್ಲವೆಂಬುದನ್ನು ಪ್ರದರ್ಶಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಮಾರ್ಗಕ್ರಮಕ್ಕಾಗಿ ಜವಾಬ್ದಾರನಾಗಿದ್ದಾನೆ.—2 ಕೊರಿಂಥ 5:10.
ಶಾಫಾನ ಮತ್ತು ಅವನ ಕುಟುಂಬದ ಚರಿತ್ರೆ
ಶಾಫಾನ ಮತ್ತು ಅವನ ಕುಟುಂಬವು, ಯೆರೂಸಲೇಮಿನಲ್ಲಿ ನಡೆದಂಥ ಘಟನೆಗಳಲ್ಲಿ ಪಾತ್ರವಹಿಸಲಾರಂಭಿಸಿದ ಸಮಯದೊಳಗೆ, ಮೊಹರುಗಳ ಬಳಕೆಯು ಯೆಹೂದದಲ್ಲಿ ಸಾಮಾನ್ಯವಾಗಿಬಿಟ್ಟಿತ್ತು. ದಸ್ತಾವೇಜುಗಳಿಗೆ ಸಾಕ್ಷ್ಯವನ್ನೊದಗಿಸಲು ಇಲ್ಲವೆ ಸಹಿಹಾಕಲು ಮೊಹರುಗಳನ್ನು ಉಪಯೋಗಿಸಲಾಗುತ್ತಿತ್ತು ಮತ್ತು ಅವುಗಳನ್ನು ಅಮೂಲ್ಯ ಮಣಿಗಳು, ಲೋಹ, ದಂತ, ಇಲ್ಲವೆ ಗಾಜಿನಿಂದ ತಯಾರಿಸಲಾಗುತ್ತಿತ್ತು. ಸಾಮಾನ್ಯವಾಗಿ, ಮೊಹರಿನ ಧಣಿಯ ಹೆಸರು, ಅವನ ತಂದೆಯ ಹೆಸರು ಮತ್ತು ಕೆಲವೊಮ್ಮೆ, ಧಣಿಯ ಪದವಿಯನ್ನು ಅವುಗಳ ಮೇಲೆ ಕೆತ್ತಲಾಗುತ್ತಿತ್ತು.
ಮಣ್ಣಿನ ನೂರಾರು ಹೀಬ್ರು ಮೊಹರು ಗುರುತುಗಳನ್ನು ಕಂಡುಹಿಡಿಯಲಾಗಿದೆ. ಪುರಾತನಕಾಲದ ಅಭಿಲೇಖಗಳ ಅಧ್ಯಯನವಾಗಿರುವ, ಹೀಬ್ರು ಶಾಸನಶಾಸ್ತ್ರದ ವಿದ್ವಾಂಸರಾದ ಪ್ರೊಫೆಸರ್ ನಮಾನ್ ಆವೀಗಾಡ್ ಹೇಳಿದ್ದು: “ಈ ಮೊಹರು ಅಭಿಲೇಖಗಳು, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವ್ಯಕ್ತಿಗಳ ಬಗ್ಗೆ ಹೇಳುವ ಒಂದೇ ಒಂದು ಹೀಬ್ರು ಶಾಸನಲಿಪಿ ಸಂಬಂಧಿತ ಮೂಲವಾಗಿವೆ.” ಶಾಫಾನ ಇಲ್ಲವೆ ಅವನ ಕುಟುಂಬ ಸದಸ್ಯರ ಕುರಿತಾದ ಯಾವುದೇ ಮೊಹರು ಅಭಿಲೇಖಗಳು ಕಂಡುಹಿಡಿಯಲ್ಪಟ್ಟಿವೆಯೊ? ಹೌದು, ಶಾಫಾನ ಮತ್ತು ಅವನ ಮಗನಾದ ಗೆಮರ್ಯನ ಹೆಸರುಗಳು, 19 ಮತ್ತು 21ನೆಯ ಪುಟಗಳಲ್ಲಿ ತೋರಿಸಲ್ಪಟ್ಟಿರುವ ಮೊಹರಿನಲ್ಲಿ ತೋರಿಬರುತ್ತವೆ.
ಆ ಕುಟುಂಬದ ಇತರ ನಾಲ್ಕು ಸದಸ್ಯರ ಹೆಸರುಗಳು ಸಹ ಮೊಹರು ಗುರುತುಗಳಲ್ಲಿ ಸೂಚಿಸಲ್ಪಟ್ಟಿರುವ ಸಾಧ್ಯತೆಯಿದೆಯೆಂದೂ ವಿದ್ವಾಂಸರು ಹೇಳುತ್ತಾರೆ. ಅಂದರೆ ಶಾಫಾನನ ತಂದೆಯಾದ ಅಚೆಲ್ಯ, ಶಾಫಾನನ ಮಗನಾದ ಅಹೀಕಾಮ್, ಶಾಫಾನನ ಮಗನಾದ ಗೆಮರ್ಯ, ಮತ್ತು ಗೆದಲ್ಯ; ಇವನ ಬಗ್ಗೆ, ಒಂದು ಮೊಹರು ಅಭಿಲೇಖದಲ್ಲಿ, “ರಾಜಮನೆತನದ ಮೇಲೆ ಅಧಿಕಾರ”ವಿದ್ದವನೆಂದು ಸೂಚಿಸಿರುವಂತೆ ವ್ಯಕ್ತವಾಗುತ್ತದೆ. ಈ ಮೊಹರುಗಳಲ್ಲಿ ನಾಲ್ಕನೆಯದ್ದು, ಶಾಫಾನನ ಮೊಮ್ಮಗನಾದ ಗೆದಲ್ಯನದ್ದೆಂದು ಪರಿಗಣಿಸಲಾಗುತ್ತದೆ. ಆದರೆ ಅವನ ತಂದೆಯಾದ ಅಹೀಕಾಮನ ಹೆಸರು ಆ ಮೊಹರಿನಲ್ಲಿಲ್ಲ. ಆ ಮೊಹರು ಗುರುತಿನಲ್ಲಿರುವ ಅವನ ಪದವಿಯು, ಅವನು ಆ ರಾಜ್ಯದಲ್ಲೇ ಅತ್ಯುಚ್ಚ ಸ್ಥಾನದಲ್ಲಿದ್ದ ಅಧಿಕಾರಿಗಳಲ್ಲೊಬ್ಬನಾಗಿದ್ದನೆಂದು ಸೂಚಿಸುತ್ತದೆ.
ನಾವು ಯಾವ ಪಾಠವನ್ನು ಕಲಿಯಬಹುದು?
ಸತ್ಯಾರಾಧನೆ ಮತ್ತು ನಂಬಿಗಸ್ತ ಯೆರೆಮೀಯನನ್ನು ಬೆಂಬಲಿಸಲಿಕ್ಕಾಗಿ ತಮ್ಮ ಪ್ರಭಾವಶಾಲಿ ಸ್ಥಾನವನ್ನು ಉಪಯೋಗಿಸುವುದರಲ್ಲಿ ಶಾಫಾನ ಮತ್ತು ಅವನ ಕುಟುಂಬವು ಎಂಥ ಉತ್ತಮ ಮಾದರಿಯನ್ನಿಟ್ಟಿತು! ನಾವು ಕೂಡ, ನಮ್ಮ ಸಂಪನ್ಮೂಲಗಳನ್ನು ಮತ್ತು ಪ್ರಭಾವವನ್ನು, ಯೆಹೋವನ ಸಂಸ್ಥೆ ಹಾಗೂ ನಮ್ಮ ಜೊತೆ ಆರಾಧಕರನ್ನು ಬೆಂಬಲಿಸಲಿಕ್ಕಾಗಿ ಉಪಯೋಗಿಸಸಾಧ್ಯವಿದೆ.
ಬೈಬಲನ್ನು ಕ್ರಮವಾಗಿ ಓದುವುದು ಮಾತ್ರವಲ್ಲ, ಅದನ್ನು ಕೂಲಂಕಷವಾಗಿ ಪರೀಕ್ಷಿಸುವುದು ಹಾಗೂ ಶಾಫಾನ ಮತ್ತು ಅವನ ಕುಟುಂಬ ಸದಸ್ಯರಂಥ ಯೆಹೋವನ ಪ್ರಾಚೀನಕಾಲದ ಸಾಕ್ಷಿಗಳೊಂದಿಗೆ ಚಿರಪರಿಚಿತರಾಗುವುದು ನಮಗೆ ಸಂಪದ್ಯುಕ್ತವಾಗಿದೆ ಹಾಗೂ ನಂಬಿಕೆಯನ್ನು ಪ್ರೇರಿಸುವಂಥದ್ದಾಗಿದೆ. ಶಾಫಾನ ಮತ್ತು ಅವನ ಕುಟುಂಬ ಸದಸ್ಯರು ಸಹ, ನಾವು ಯಾರ ಮಾದರಿಗಳನ್ನು ಅನುಕರಿಸಬಹುದೊ ಆ ‘ಸಾಕ್ಷಿಯ ಮೇಘದಲ್ಲಿ’ ಒಳಗೂಡಿದ್ದಾರೆ.—ಇಬ್ರಿಯ 12:1.
[ಪಾದಟಿಪ್ಪಣಿ]
a ಯೋಷೀಯನು ಸುಮಾರು 25 ವರ್ಷದವನಾಗಿದ್ದಾಗ, ಶಾಫಾನನ ಮಗನಾದ ಅಹೀಕಾಮನು ಒಬ್ಬ ಪ್ರಾಯಸ್ಥ ಪುರುಷನಾಗಿದ್ದನೆಂಬುದನ್ನು ಪರಿಗಣಿಸುವಾಗ, ಶಾಫಾನನು ಯೋಷೀಯನಿಗಿಂತಲೂ ಹೆಚ್ಚು ಪ್ರಾಯದವನಾಗಿದ್ದಿರಲೇಬೇಕು.—2 ಅರಸುಗಳು 22:1-3, 11-14.
[ಪುಟ 22ರಲ್ಲಿರುವ ಚೌಕ]
ಹುಲ್ದ—ಒಬ್ಬ ಪ್ರಭಾವಶಾಲಿ ಪ್ರವಾದಿನಿ
ದೇವಾಲಯದಲ್ಲಿ ಕಂಡುಹಿಡಿಯಲ್ಪಟ್ಟ “ಧರ್ಮೋಪದೇಶಗ್ರಂಥವು” ಓದಲ್ಪಡುವುದನ್ನು ಕೇಳಿಸಿಕೊಂಡ ನಂತರ, ರಾಜನಾದ ಯೋಷೀಯನು ಶಾಫಾನನನ್ನೂ ಇನ್ನೂ ನಾಲ್ಕು ಮಂದಿ ಉಚ್ಚ ಪದವಿಯ ಅಧಿಕಾರಿಗಳನ್ನೂ ಆ ಗ್ರಂಥದ ಬಗ್ಗೆ ‘ಯೆಹೋವನ ಬಳಿಗೆ ಹೋಗಿ ವಿಚಾರಿಸುವಂತೆ’ ಅಪ್ಪಣೆಕೊಟ್ಟನು. (2 ಅರಸುಗಳು 22:8-20) ಈ ಪ್ರತಿನಿಧಿ ತಂಡವು ಎಲ್ಲಿ ಹೋಗಸಾಧ್ಯವಿತ್ತು? ಪ್ರವಾದಿಗಳೂ, ಬೈಬಲ್ ಲೇಖಕರೂ ಆಗಿದ್ದ ಯೆರೆಮೀಯ ಮತ್ತು ಪ್ರಾಯಶಃ ನಹೂಮ ಹಾಗೂ ಚೆಫನ್ಯರು ಆ ಸಮಯದಲ್ಲಿ ಯೆಹೂದದಲ್ಲಿ ವಾಸಿಸುತ್ತಿದ್ದರು. ಆದರೆ ಆ ಪ್ರತಿನಿಧಿ ತಂಡವು, ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಯಿತು.
ಯೆರೂಸಲೇಮ್—ಅಗೆತಶಾಸ್ತ್ರದ ಚರಿತ್ರೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಈ ಘಟನೆಯ ಕುರಿತಾದ ಗಮನಾರ್ಹ ವಿಷಯವೇನೆಂದರೆ, ಆ ಕಥೆಯಲ್ಲಿನ ಗಂಡು ಹೆಣ್ಣು ಎಂಬ ಅಂಶಕ್ಕೆ ಯಾವುದೇ ಗಮನವು ಕೊಡಲ್ಪಟ್ಟಿಲ್ಲ. ಎಲ್ಲಾ ಗಂಡಸರೇ ಆಗಿದ್ದ ಒಂದು ಮಂಡಲಿಯು, ಧರ್ಮಶಾಸ್ತ್ರದ ಸುರಳಿಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಒಬ್ಬ ಸ್ತ್ರೀಯ ಬಳಿಗೆ ಹೋಗುವುದು ಯಾವುದೇ ರೀತಿಯಲ್ಲಿ ಅನುಚಿತವಾಗಿದೆ ಎಂದು ಯಾರೂ ಪರಿಗಣಿಸಲಿಲ್ಲ. ಅದು ಕರ್ತನ ವಾಕ್ಯವಾಗಿದೆ ಎಂದು ಅವಳು ಘೋಷಿಸಿದಾಗ, ಆ ತೀರ್ಮಾನವನ್ನು ಮಾಡಲು ಅವಳಿಗಿರುವ ಅಧಿಕಾರವನ್ನು ಯಾರೂ ಪ್ರಶ್ನಿಸಲಿಲ್ಲ. ಪ್ರಾಚೀನ ಇಸ್ರಾಯೇಲಿನಲ್ಲಿ ಸ್ತ್ರೀಯರಿಗಿದ್ದ ಪಾತ್ರವನ್ನು ನಿರ್ಧರಿಸುವಾಗ ಹೆಚ್ಚಿನ ವೇಳೆ ಈ ಘಟನೆಯನ್ನು ಉಪೇಕ್ಷಿಸಲಾಗುತ್ತದೆ.” ಆದರೆ, ಅವಳಿಗೆ ಸಿಕ್ಕಿದಂಥ ಸಂದೇಶವು ನಿಶ್ಚಯವಾಗಿಯೂ ಯೆಹೋವನಿಂದ ಬಂದದ್ದಾಗಿತ್ತು.
[ಪುಟ 21ರಲ್ಲಿರುವ ರೇಖಾಕೃತಿ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಶಾಫಾನನ ಕುಟುಂಬ ವೃಕ್ಷ
ಮೆಷುಲ್ಲಾಮ
↓
ಅಚೆಲ್ಯ
↓
ಶಾಫಾನ
↓ ↓ ↓ ↓
ಅಹೀಕಾಮ್ ಎಲ್ಲಾಸ ಗೆಮರ್ಯ ಯಾಜನ್ಯ
↓ ↓
ಗೆದಲ್ಯ ಮೀಕಾಯ
[ಪುಟ 20ರಲ್ಲಿರುವ ಚಿತ್ರ]
ಗೆಮರ್ಯ ಮತ್ತು ಅವನೊಂದಿಗಿದ್ದ ಇತರರು, ಯೆರೆಮೀಯನ ಸುರಳಿಯನ್ನು ಸುಟ್ಟುಹಾಕದಂತೆ ಯೆಹೋಯಾಕೀಮನನ್ನು ಬೇಡಿಕೊಂಡರು
[ಪುಟ 22ರಲ್ಲಿರುವ ಚಿತ್ರ]
ಯಾಜನ್ಯನು ಶಾಫಾನನ ಕುಟುಂಬದ ಸದಸ್ಯನಾಗಿದ್ದರೂ, ಅವನು ವಿಗ್ರಹಗಳನ್ನು ಆರಾಧಿಸುತ್ತಿರುವುದನ್ನು ದರ್ಶನದಲ್ಲಿ ನೋಡಲಾಯಿತು
[ಪುಟ 19ರಲ್ಲಿರುವ ಚಿತ್ರ ಕೃಪೆ]
Courtesy Israel Antiquities Authority
[ಪುಟ 21ರಲ್ಲಿರುವ ಚಿತ್ರ ಕೃಪೆ]
Courtesy Israel Antiquities Authority