ಜೀವನ ಕಥೆ
ನನ್ನ ಅಮೂಲ್ಯ ನೆನಪುಗಳಿಗಾಗಿ ಕೃತಜ್ಞಳು!
ಡ್ರುಸಿಲ ಕೇನ್ ಅವರು ಹೇಳಿದಂತೆ
ಇಸವಿ 1933ರ ಸಮಯ. ನಾನು ಆಗತಾನೇ ಸನೋಆ ಕೇನ್ರನ್ನು ಮದುವೆಯಾಗಿದ್ದೆ. ಅವರು ಸಹ ನನ್ನಂತೆಯೇ ಒಬ್ಬ ಕಾಲ್ಪೋರ್ಟರ್, ಅಂದರೆ ಪೂರ್ಣ ಸಮಯದ ಸೌವಾರ್ತಿಕರಾಗಿದ್ದರು. ನಾನು ತುಂಬ ಪುಳಕಗೊಂಡಿದ್ದು, ನನ್ನ ಗಂಡನೊಂದಿಗೆ ಅವರ ನೇಮಕದಲ್ಲಿ ಜೊತೆಗೂಡುವ ಯೋಜನೆಯನ್ನು ಮಾಡುತ್ತಾ ಇದ್ದೆ. ಆದರೆ ಅವರೊಂದಿಗೆ ಜೊತೆಗೂಡಿ ಸೇವೆಮಾಡಲು ನನಗೆ ಒಂದು ಸೈಕಲ್ನ ಆವಶ್ಯಕತೆಯಿತ್ತು. ಆ ಕಾಲದಲ್ಲಿ ಅದೊಂದು ದುಬಾರಿ ವಸ್ತುವಾಗಿತ್ತು ಮತ್ತು ಆರ್ಥಿಕ ಕುಸಿತದ ಅವಧಿಯಲ್ಲಿ ಹಣಕಾಸಿನ ಸ್ಥಿತಿಯು ತುಂಬ ಕೀಳ್ಮಟ್ಟದ್ದಾಗಿದ್ದದರಿಂದ ಅದನ್ನು ಖರೀದಿಸುವಷ್ಟು ಹಣ ನನ್ನ ಬಳಿ ಇರಲಿಲ್ಲ. ಈಗ ಏನು ಮಾಡುವುದು?
ನನ್ನ ಈ ಬಿಕ್ಕಟ್ಟಿನ ಕುರಿತಾಗಿ ತಿಳಿದಾಗ, ನನ್ನ ಮೈದುನಂದಿರು ನನಗಾಗಿ ಒಂದು ಸೈಕಲನ್ನು ಸಿದ್ಧಪಡಿಸಲಿಕ್ಕೋಸ್ಕರ, ಆ ಸ್ಥಳದಲ್ಲಿದ್ದ ಎಲ್ಲ ತಿಪ್ಪೆಗುಂಡಿಗಳಲ್ಲಿ ಸೈಕಲಿನ ಹಳೆಯ ಭಾಗಗಳಿಗಾಗಿ ಹುಡುಕಾಡಿದರು. ಅವರಿಗೆ ಅದೆಲ್ಲವೂ ಸಿಕ್ಕಿತು ಮತ್ತು ಅವರದನ್ನು ಜೋಡಿಸಿ, ಒಂದು ಸೈಕಲನ್ನು ತಯಾರಿಸಿದರು. ಮತ್ತು ಆ ಸೈಕಲನ್ನು ಉಪಯೋಗಿಸಬಹುದಿತ್ತು! ಸೈಕಲ್ ಓಡಿಸಲು ಕಲಿತುಕೊಂಡ ಕೂಡಲೆ ನಾನು ಮತ್ತು ಸನೋಆ ಅಲ್ಲಿಂದ ಹೊರಟೆವು. ವರ್ಸ್ಟರ್ ಮತ್ತು ಹರ್ಫರ್ಡ್ ಎಂಬ ಇಂಗ್ಲೆಂಡಿನ ಪ್ರಾಂತಗಳ ಮೂಲಕ ಸಂತೋಷದಿಂದ ಸೈಕಲ್ ಸವಾರಿಮಾಡುತ್ತಾ, ನಾವು ಭೇಟಿಯಾದವರೆಲ್ಲರಿಗೆ ಸಾಕ್ಷಿಯನ್ನು ಕೊಡುತ್ತಾ ಹೋದೆವು.
ನಂಬಿಕೆಯ ಈ ಸರಳವಾದ ಹೆಜ್ಜೆಯು, ಸ್ವಾರಸ್ಯಕರ ನೆನಪುಗಳಿಂದ ತುಂಬಿರುವ ಜೀವನಕ್ಕೆ ನಡೆಸುವುದೆಂದು ನಾನು ಆಗ ನೆನಸಿರಲೇ ಇಲ್ಲ. ಆದರೆ ನನ್ನ ಈ ಜೀವಿತಕ್ಕೆ ಆತ್ಮಿಕ ತಳಪಾಯವನ್ನು ಹಾಕಿದವರು, ನನ್ನ ಪ್ರಿಯ ಹೆತ್ತವರೇ ಆಗಿದ್ದರು.
ಮಹಾ ಯುದ್ಧದ ಕಷ್ಟಕರ ವರ್ಷಗಳು
ನಾನು 1909ರ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದೆ. ತದನಂತರ ಸ್ವಲ್ಪ ಸಮಯದೊಳಗೆ, ನನ್ನ ತಾಯಿ ದ ಡಿವೈನ್ ಪ್ಲ್ಯಾನ್ ಆಫ್ ದಿ ಏಜಸ್ ಎಂಬ ಪುಸ್ತಕದ ಒಂದು ಪ್ರತಿಯನ್ನು ಪಡೆದರು; ಮತ್ತು 1914ರಲ್ಲಿ ನನ್ನ ಹೆತ್ತವರು, “ಫೋಟೋ ಡ್ರಾಮಾ ಆಫ್ ಕ್ರಿಯೇಷನ್” ಅನ್ನು ನೋಡಲಿಕ್ಕಾಗಿ ನನ್ನನ್ನು ಲ್ಯಾಂಕ್ಶೈರ್ನ ಓಲ್ಡಹಾಮ್ಗೆ ಕರೆದುಕೊಂಡುಹೋದರು. (ಇವೆರಡೂ, ಈಗ ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುವವರಿಂದ ಸಿದ್ಧಪಡಿಸಲ್ಪಟ್ಟಿದ್ದವು.) ನಾನು ಆಗ ಚಿಕ್ಕವಳಾಗಿದ್ದರೂ, ಅಲ್ಲಿ ನಾನೇನನ್ನು ನೋಡಿದೆನೊ ಅದರಿಂದಾದ ಸಂತೋಷದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಕುಣಿದು ಕುಪ್ಪಳಿಸುತ್ತಾ ಇದ್ದದ್ದು ನನಗೆ ಈಗಲೂ ಸ್ಪಷ್ಟವಾಗಿ ನೆನಪಿದೆ. ಅನಂತರ ಫ್ರ್ಯಾಂಕ್ ಹೀಲೀ ಎಂಬವರು, ನಾವು ವಾಸಿಸುತ್ತಿದ್ದ ರಾಕ್ಡೇಲ್ ಎಂಬಲ್ಲಿ ಒಂದು ಬೈಬಲ್ ಅಭ್ಯಾಸ ಗುಂಪನ್ನು ಆರಂಭಿಸಿದರು. ಈ ಅಭ್ಯಾಸಕ್ಕೆ ಹಾಜರಾಗುವುದು, ಒಂದು ಕುಟುಂಬದೋಪಾದಿ ಶಾಸ್ತ್ರವಚನಗಳ ತಿಳಿವಳಿಕೆಯನ್ನು ಹೆಚ್ಚಿಸಲು ನಮಗೆ ಸಹಾಯಮಾಡಿತು.
ಅದೇ ವರ್ಷ, ಮಹಾ ಯುದ್ಧ ಅಥವಾ ನಾವು ಈಗ ಕರೆಯುವಂತೆ Iನೆಯ ಲೋಕ ಯುದ್ಧದ ಆರಂಭದಿಂದಾಗಿ ನಮ್ಮ ಜೀವಿತಗಳ ಪ್ರಶಾಂತತೆಯು ನುಚ್ಚುನೂರಾಯಿತು. ನನ್ನ ತಂದೆಯನ್ನು ಸೇನೆಯಲ್ಲಿ ಭರ್ತಿಯಾಗಲಿಕ್ಕಾಗಿ ಕರೆಸಲಾಯಿತು. ಆದರೆ ಅವರು ಒಂದು ತಟಸ್ಥ ನಿಲುವನ್ನು ತೆಗೆದುಕೊಂಡರು. ನ್ಯಾಯಾಲಯದಲ್ಲಿ ಅವರನ್ನು “ಅತಿ ಸಭ್ಯ ಪುರುಷನೆಂದು” ವರ್ಣಿಸಲಾಯಿತು, ಮತ್ತು “ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಅವನು ನಿಷ್ಕಪಟವಾಗಿ ನಿರಾಕರಿಸುತ್ತಿದ್ದಾನೆಂಬ ನಂಬಿಕೆ ತಮಗಿದೆಯೆಂದು ಹೇಳಿದ ಮಹನೀಯರುಗಳಿಂದ” ಹಲವಾರು ಪತ್ರಗಳನ್ನು ಸಲ್ಲಿಸಲಾಯಿತು. ಇದನ್ನು ಸ್ಥಳಿಕ ವಾರ್ತಾಪತ್ರಿಕೆಯೊಂದು ವರದಿಸಿತು.
ಆದರೆ ತಂದೆಯವರಿಗೆ ಪೂರ್ಣವಾದ ವಿನಾಯಿತಿಯನ್ನು ಕೊಡುವ ಬದಲಿಗೆ, ಅವರಿಗೆ “ಕೇವಲ ಯೋಧ ಸೇವೆಯಿಂದ” ವಿನಾಯಿತಿಯನ್ನು ನೀಡಲಾಯಿತು. ಅಂದಿನಿಂದಲೇ ಅವರು, ನನ್ನ ತಾಯಿ ಮತ್ತು ನಾನು ಎಲ್ಲರ ಅಪಹಾಸ್ಯಕ್ಕೀಡಾದೆವು. ಕೊನೆಗೆ ತಂದೆಯವರ ವರ್ಗೀಕರಣವನ್ನು ಪುನಃ ವಿಮರ್ಶಿಸಲಾಯಿತು ಮತ್ತು ಅವರನ್ನು ಕೃಷಿ ಕೆಲಸಕ್ಕೆ ನೇಮಿಸಲಾಯಿತು. ಆದರೆ ಕೆಲವು ಬೇಸಾಯಗಾರರು ಅವರ ಪರಿಸ್ಥಿತಿಯನ್ನು ಸ್ವಪ್ರಯೋಜನಕ್ಕಾಗಿ ದುರುಪಯೋಗಿಸುತ್ತಾ, ಅವರಿಗೆ ತುಂಬ ಕಡಿಮೆ ಸಂಬಳವನ್ನು ಕೊಡುತ್ತಿದ್ದರು ಇಲ್ಲವೇ ಬಿಡಿಗಾಸನ್ನೂ ಕೊಡುತ್ತಿರಲಿಲ್ಲ. ಕುಟುಂಬವನ್ನು ಪೋಷಿಸಲಿಕ್ಕಾಗಿ ನನ್ನ ತಾಯಿ ಸಹ ಕೆಲಸಕ್ಕೆ ಹೋದರು. ಒಂದು ಖಾಸಗಿ ಲಾಂಡ್ರಿಯಲ್ಲಿ ಅವರು ಕಠಿನವಾದ ಕೆಲಸವನ್ನು ಮಾಡಿದರು. ಆದರೆ ಅವರಿಗೆ ಸಿಗುತ್ತಿದ್ದ ಸಂಬಳವು ಅತ್ಯಲ್ಪವಾಗಿತ್ತು. ಹೀಗಿದ್ದರೂ ಇಂಥ ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸುತ್ತಾ ನನ್ನ ಯೌವನವನ್ನು ಕಳೆದಿರುವುದು ನನ್ನನ್ನು ಎಷ್ಟು ಬಲಪಡಿಸಿತ್ತೆಂಬುದನ್ನು ನಾನು ಈಗ ಗ್ರಹಿಸಬಲ್ಲೆ. ಹೆಚ್ಚು ಪ್ರಾಮುಖ್ಯವಾಗಿರುವ ಆತ್ಮಿಕ ವಿಷಯಗಳನ್ನು ಗಣ್ಯಮಾಡುವಂತೆ ಅದು ನನಗೆ ಸಹಾಯಮಾಡಿತು.
ಒಂದು ಚಿಕ್ಕ ಆರಂಭ
ಸ್ವಲ್ಪ ಸಮಯದ ನಂತರ, ಡ್ಯಾನಿಯೇಲ್ ಹ್ಯೂಸ್ ಎಂಬ ಒಬ್ಬ ಉತ್ಸಾಹಭರಿತ ಬೈಬಲ್ ವಿದ್ಯಾರ್ಥಿಯು ನಮ್ಮ ಜೀವಿತಗಳ ಭಾಗವಾಗಿಬಿಟ್ಟರು. ನಾವು ಆಸ್ವೆಸ್ಟ್ರೀ ಎಂಬ ಪಟ್ಟಣಕ್ಕೆ ಸ್ಥಳಾಂತರಿಸಿದ್ದೆವು. ಅವರು ಅಲ್ಲಿಂದ ಸುಮಾರು 20 ಕಿಲೊಮೀಟರ್ ದೂರದಲ್ಲಿದ್ದ ರೂಅಬನ್ ಎಂಬ ಹಳ್ಳಿಯಲ್ಲಿ ಕಲ್ಲಿದ್ದಲಿನ ಗಣಿತೋಡುವವರಾಗಿದ್ದರು. ನಾವು ಅವರನ್ನು ಪ್ರೀತಿಯಿಂದ ಅಂಕಲ್ ಡ್ಯಾನ್ ಎಂದು ಕರೆಯುತ್ತಿದ್ದೆವು. ಅವರು ನಮ್ಮ ಕುಟುಂಬದೊಂದಿಗೆ ಸಂಪರ್ಕವನ್ನಿಟ್ಟುಕೊಂಡರು. ಮತ್ತು ಅವರು ನಮ್ಮನ್ನು ಭೇಟಿಯಾಗಲು ಬಂದಾಗಲೆಲ್ಲ ಶಾಸ್ತ್ರೀಯ ವಿಷಯಗಳ ಕುರಿತಾಗಿಯೇ ಮಾತಾಡುತ್ತಿದ್ದರು. ಅವರು ಎಂದೂ ಹರಟೆಮಾತಾಡುತ್ತಿರಲಿಲ್ಲ. 1920ರಲ್ಲಿ ಆಸ್ವೆಸ್ಟ್ರೀಯಲ್ಲಿ ಒಂದು ಬೈಬಲ್ ಅಭ್ಯಾಸ ತರಗತಿಯನ್ನು ಆರಂಭಿಸಲಾಯಿತು, ಮತ್ತು 1921ರಲ್ಲಿ ಅಂಕಲ್ ಡ್ಯಾನ್ ನನಗೆ ದ ಹಾರ್ಪ್ ಆಫ್ ಗಾಡ್ ಪುಸ್ತಕದ ಒಂದು ಪ್ರತಿಯನ್ನು ಕೊಟ್ಟರು. ನನಗೆ ಈ ಪುಸ್ತಕವು ತುಂಬ ಅಮೂಲ್ಯವಾದದ್ದಾಗಿತ್ತು, ಯಾಕೆಂದರೆ ಅದರಿಂದಾಗಿ ನಾನು ಬೈಬಲಿನ ಬೋಧನೆಗಳನ್ನು ಹೆಚ್ಚು ಸುಲಭವಾಗಿ ಅರ್ಥಮಾಡಿಕೊಳ್ಳಲು ಶಕ್ತಳಾದೆ.
ಪ್ರೈಸ್ ಹ್ಯೂಸ್a ಎಂಬುವವರೂ ಇದ್ದರು. ಇವರು ಅನಂತರ ಯೆಹೋವನ ಸಾಕ್ಷಿಗಳ ಲಂಡನ್ ಬ್ರಾಂಚ್ನ ಸೇವಕರಾದರು. ಅವರು ತಮ್ಮ ಕುಟುಂಬದೊಂದಿಗೆ, ವೆಲ್ಶ್ ಗಡಿಯಲ್ಲಿ ಬ್ರಾನ್ಗಾರ್ತ್ನ ಹತ್ತಿರ ವಾಸಿಸುತ್ತಿದ್ದರು. ಅವರ ಅಕ್ಕ ಸಿಸೀ, ನನ್ನ ತಾಯಿಯ ಆಪ್ತ ಗೆಳತಿಯಾದರು.
ಇಸವಿ 1922ರಲ್ಲಿ, ‘ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ’ ಎಂಬ ಕರೆಯು ಕೊಡಲ್ಪಟ್ಟಾಗ ಉಂಟಾದ ಸಂಭ್ರಮವು ನನಗೆ ಈಗಲೂ ಜ್ಞಾಪಕವಿದೆ. ತದನಂತರದ ವರ್ಷಗಳಲ್ಲಿ, ನಾನು ಇನ್ನೂ ಶಾಲೆಗೆ ಹೋಗುತ್ತಿದ್ದರೂ, ಆ ವಿಶೇಷ ಕಿರುಹೊತ್ತಗೆಗಳ ವಿತರಣೆಯಲ್ಲಿ, ನಿರ್ದಿಷ್ಟವಾಗಿ 1924ರಲ್ಲಿ ಎಕ್ಲೀಸಿಆ್ಯಸ್ಟಿಕ್ಸ್ ಇಂಡೈಕ್ಟೆಡ್ ಎಂಬ ಕಿರುಹೊತ್ತಗೆಯ ವಿತರಣೆಯಲ್ಲಿ ನಾನು ಅತ್ಯುತ್ಸಾಹದಿಂದ ಜೊತೆಗೂಡಿದೆ. ಆ ದಶಕದ ಕುರಿತು ಈಗ ಯೋಚಿಸುವಾಗ, ಆ ಅನೇಕಾನೇಕ ನಂಬಿಗಸ್ತ ಸಹೋದರ ಸಹೋದರಿಯರೊಂದಿಗೆ ಸಹವಾಸಮಾಡುವುದು ಎಂಥ ಒಂದು ಸುಯೋಗವಾಗಿತ್ತು ಎಂದನಿಸುತ್ತದೆ. ಅವರಲ್ಲಿ, ಮಾಡ್ ಕ್ಲಾರ್ಕ್b ಮತ್ತು ಅವರ ಸಂಗಾತಿ ಮೇರಿ ಗ್ರ್ಯಾಂಟ್,# ಎಡ್ಗರ್ ಕ್ಲೇ,# ರಾಬರ್ಟ್ ಹಾಡಿಲಿಂಗ್ಟನ್, ಕೇಟೀ ರಾಬರ್ಟ್ಸ್, ಎಡ್ವಿನ್ ಸ್ಕಿನ್ನರ್,# ಹಾಗೂ ಕೆನಡದಲ್ಲಿನ ಕೆಲಸದಲ್ಲಿ ಸಹಾಯಮಾಡಲು ಅಲ್ಲಿಗೆ ಹೋದ ಪರ್ಸೀ ಚ್ಯಾಪ್ಮನ್ ಮತ್ತು ಜ್ಯಾಕ್ ನೇತನ್ರವರು # ಸೇರಿದ್ದರು.
“ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಎಂಬ ಬೈಬಲ್ ಭಾಷಣವು, ನಮ್ಮ ವಿಸ್ತಾರವಾದ ಟೆರಿಟೊರಿಯಲ್ಲಿ ಸಮಯೋಚಿತವಾದ ಸಾಕ್ಷಿಯಾಗಿ ಪರಿಣಮಿಸಿತು. 1922ರ ಮೇ 14ರಂದು, ಪ್ರೈಸ್ ಹ್ಯೂಸ್ರವರ ಸಂಬಂಧಿಕನಾಗಿದ್ದ ಸ್ಟ್ಯಾನ್ಲಿ ರಾಜರ್ಸ್, ನಮ್ಮ ಪಟ್ಟಣದ ಉತ್ತರದಿಕ್ಕಿನಲ್ಲಿದ್ದ ಒಂದು ಹಳ್ಳಿಯಾಗಿರುವ ಚಿರ್ಕ್ನಲ್ಲಿ ಮತ್ತು ಅದೇ ಸಾಯಂಕಾಲ ಆಸ್ವೆಸ್ಟ್ರೀಯಲ್ಲಿರುವ ಚಲನಚಿತ್ರ ಮಂದಿರದಲ್ಲಿ ಆ ಭಾಷಣವನ್ನು ಕೊಡಲಿಕ್ಕಾಗಿ ಲಿವರ್ಪೂಲ್ನಿಂದ ಬಂದರು. ಆ ಸಂದರ್ಭಕ್ಕಾಗಿ ವಿಶೇಷವಾಗಿ ಮುದ್ರಿಸಲ್ಪಟ್ಟಿದ್ದ ಹ್ಯಾಂಡ್ಬಿಲ್ಗಳಲ್ಲಿ ಒಂದು, ಈಗಲೂ ನನ್ನ ಹತ್ತಿರ ಇದೆ. ಈ ಎಲ್ಲ ಸಮಯದಲ್ಲಿ, ನಮ್ಮ ಚಿಕ್ಕ ಗುಂಪನ್ನು, ನಾವು ಪಿಲ್ಗ್ರಿಮ್ಸ್ ಎಂದು ಕರೆಯುತ್ತಿದ್ದ ಮೂವರು ಸಂಚರಣಾ ಮೇಲ್ವಿಚಾರಕರಾದ, ಹರ್ಬರ್ಟ್ ಸೀನಿಯರ್, ಆ್ಯಲ್ಬರ್ಟ್ ಲಾಯ್ಡ್, ಮತ್ತು ಜಾನ್ ಬ್ಲೇನೀಯವರು ಭೇಟಿ ನೀಡಿ ಬಲಪಡಿಸುತ್ತಿದ್ದರು.
ನಿರ್ಣಯಮಾಡುವ ಸಮಯ
ಇಸವಿ 1929ರಲ್ಲಿ, ನಾನು ದೀಕ್ಷಾಸ್ನಾನವನ್ನು ತೆಗೆದುಕೊಳ್ಳುವ ನಿರ್ಣಯವನ್ನು ಮಾಡಿದೆ. ಆಗ ನಾನು 19 ವರ್ಷದವಳಾಗಿದ್ದೆ, ಮತ್ತು ಅದೇ ಸಮಯದಲ್ಲಿ ನನ್ನ ಮೊತ್ತಮೊದಲ ನಿಜವಾದ ಪರೀಕ್ಷೆಯನ್ನೂ ಎದುರಿಸಿದೆ. ಒಬ್ಬ ಯುವಕನೊಂದಿಗೆ ನನ್ನ ಭೇಟಿಯಾಯಿತು. ಅವನ ತಂದೆ ಒಬ್ಬ ರಾಜಕಾರಣಿಯಾಗಿದ್ದನು. ನಾವು ಪರಸ್ಪರ ಆಕರ್ಷಿತರಾಗಿ, ಅವನು ನನಗೆ ಮದುವೆಯ ಪ್ರಸ್ತಾಪವನ್ನು ಮಾಡಿದನು. ಹಿಂದಿನ ವರ್ಷ, ಸರಕಾರ (ಇಂಗ್ಲಿಷ್) ಎಂಬ ಪುಸ್ತಕವು ಬಿಡುಗಡೆಯಾಗಿದ್ದರಿಂದ ನಾನು ಅವನಿಗೆ ಅದರ ಒಂದು ಪ್ರತಿಯನ್ನು ಕೊಟ್ಟೆ. ಆದರೆ ಅವನಿಗೆ ಆ ಪುಸ್ತಕದ ಶೀರ್ಷಿಕೆಯಾಗಿರುವ ಸ್ವರ್ಗೀಯ ಸರಕಾರದಲ್ಲಿ ಯಾವುದೇ ಅಭಿರುಚಿಯಿರಲಿಲ್ಲವೆಂದು ಬೇಗನೆ ವ್ಯಕ್ತವಾಯಿತು. ಪ್ರಾಚೀನಕಾಲದ ಇಸ್ರಾಯೇಲ್ಯರಿಗೆ, ಅವಿಶ್ವಾಸಿಗಳೊಂದಿಗೆ ಯಾವುದೇ ಮದುವೆ ಸಂಬಂಧಗಳನ್ನು ಬೆಳೆಸಬಾರದೆಂಬ ಆಜ್ಞೆಯನ್ನು ಕೊಡಲಾಗಿತ್ತು ಮತ್ತು ಇದೇ ಮೂಲತತ್ವವು ಕ್ರೈಸ್ತರಿಗೆ ಅನ್ವಯಿಸುತ್ತದೆಂದು ನನ್ನ ಅಭ್ಯಾಸಗಳಿಂದ ನನಗೆ ತಿಳಿದಿತ್ತು. ಆದುದರಿಂದ, ನನಗೆ ತುಂಬ ಕಷ್ಟವಾದರೂ, ಅವನ ಮದುವೆ ಪ್ರಸ್ತಾಪಕ್ಕೆ ನಾನು ಇಲ್ಲ ಎಂದು ಹೇಳಿಬಿಟ್ಟೆ.—ಧರ್ಮೋಪದೇಶಕಾಂಡ 7:3; 2 ಕೊರಿಂಥ 6:14.
ನಾನು ಅಪೊಸ್ತಲ ಪೌಲನ ಮಾತುಗಳಿಂದ ಬಲವನ್ನು ಪಡೆದುಕೊಂಡೆ: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.” (ಗಲಾತ್ಯ 6:9) ನಮ್ಮ ಪ್ರಿಯ ಅಂಕಲ್ ಡ್ಯಾನ್ ನನಗೆ ಪತ್ರದಲ್ಲಿ ಹೀಗೆ ಬರೆಯುವ ಮೂಲಕ ಸಹ ನನ್ನನ್ನು ಉತ್ತೇಜಿಸಿದರು: “ಸಂಕಷ್ಟಗಳು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅಂಥ ಸಮಯಗಳಲ್ಲಿ ರೋಮಾಪುರ 8, ವಚನ 28ನ್ನು ಅನ್ವಯಿಸಿಕೊ.” ಆ ವಚನವು ಹೀಗನ್ನುತ್ತದೆ: “ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ.” ನಾನು ಆ ನಿರ್ಣಯವನ್ನು ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆದರೂ ನಾನು ಸರಿಯಾದ ನಿರ್ಣಯವನ್ನೇ ತೆಗೆದುಕೊಂಡಿದ್ದೇನೆಂದು ನನಗೆ ಗೊತ್ತಿತ್ತು. ಅದೇ ವರ್ಷ ನಾನೊಬ್ಬ ಕಾಲ್ಪೋರ್ಟರ್ ಆಗಿ ಸೇರಿಕೊಂಡೆ.
ಪಂಥಾಹ್ವಾನವನ್ನು ಎದುರಿಸುವುದು
ಇಸವಿ 1931ರಲ್ಲಿ, ಯೆಹೋವನ ಸಾಕ್ಷಿಗಳು ಎಂಬ ಹೊಸ ಹೆಸರು ನಮಗೆ ಸಿಕ್ಕಿತ್ತು. ಮತ್ತು ಅದೇ ವರ್ಷದಲ್ಲಿ, ರಾಜ್ಯ—ಲೋಕದ ನಿರೀಕ್ಷೆ (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ಉಪಯೋಗಿಸುತ್ತಾ ಒಂದು ಹುರುಪಿನ ಕಾರ್ಯಾಚರಣೆಯನ್ನು ನಡೆಸಿದೆವು. ಪ್ರತಿಯೊಬ್ಬ ರಾಜಕಾರಣಿ, ಪಾದ್ರಿ ಮತ್ತು ವ್ಯಾಪಾರಸ್ಥನಿಗೆ ಇದರ ಒಂದು ಪ್ರತಿಯನ್ನು ಕೊಡಲಾಯಿತು. ನನ್ನ ಟೆರಿಟೊರಿಯು, ಉತ್ತರದಿಕ್ಕಿನಲ್ಲಿ ಸುಮಾರು 25 ಕಿಲೊಮೀಟರ್ಗಳಷ್ಟು ದೂರ ಅಂದರೆ ಆಸ್ವೆಸ್ಟ್ರೀಯಿಂದ ರೆಕ್ಸಮ್ ವರೆಗಿತ್ತು. ಅದೆಲ್ಲವನ್ನು ಪೂರ್ತಿಯಾಗಿ ಮಾಡಿಮುಗಿಸುವುದು ಒಂದು ಕಷ್ಟಕರ ಕೆಲಸವಾಗಿತ್ತು.
ಮುಂದಿನ ವರ್ಷ ಬರ್ಮಿಂಗ್ಹಾಮ್ನಲ್ಲಿ ನಡೆದ ಒಂದು ಅಧಿವೇಶನದಲ್ಲಿ, 24 ಸ್ವಯಂಸೇವಕರಿಗಾಗಿ ಒಂದು ಕರೆಯನ್ನು ಕೊಡಲಾಯಿತು. ನಮ್ಮಲ್ಲಿ 24 ಮಂದಿ ಅತ್ಯುತ್ಸಾಹದಿಂದ, ಸೇವೆಯ ಒಂದು ಹೊಸ ವೈಶಿಷ್ಟ್ಯಕ್ಕಾಗಿ ನಮ್ಮ ಹೆಸರುಗಳನ್ನು ಕೊಟ್ಟೆವು. ಅದೇನಾಗಿರುವುದೆಂಬುದೂ ನಮಗೆ ಗೊತ್ತಿರಲಿಲ್ಲ. ನಾವು ಇಬ್ಬಿಬ್ಬರಾಗಿ ಕೆಲಸಮಾಡುತ್ತಾ ರಾಜ್ಯವನ್ನು ಘೋಷಿಸುತ್ತಾ, ನಮ್ಮ ಮುಂದುಗಡೆ ಮತ್ತು ಹಿಂದುಗಡೆ ಭಾರವಾದ ಜಾಹೀರಾತು ಫಲಕಗಳನ್ನು ತೂಗುಹಾಕಿಕೊಂಡು, ರಾಜ್ಯ—ಲೋಕದ ನಿರೀಕ್ಷೆ ಎಂಬ ಅದೇ ಪುಸ್ತಿಕೆಯನ್ನು ಎಲ್ಲರಿಗೆ ನೀಡುವಂತೆ ನೇಮಿಸಲ್ಪಟ್ಟಾಗ, ನಮಗೆಷ್ಟು ಆಶ್ಚರ್ಯವಾಯಿತೆಂಬುದನ್ನು ಊಹಿಸಿಕೊಳ್ಳಿ!
ಒಂದು ದೊಡ್ಡ ಚರ್ಚಿನ ಸುತ್ತಲಿನ ಪರಿಸರದಲ್ಲಿ ನಾವು ಕೆಲಸಮಾಡುತ್ತಿದ್ದಾಗ, ಎಲ್ಲರೂ ನನ್ನನ್ನು ನೋಡುತ್ತಿದ್ದಾರೆಂದು ನನಗೆ ತುಂಬ ಮುಜುಗರವಾಗುತ್ತಿತ್ತು. ಹೀಗಿದ್ದರೂ, ಆ ನಗರದಲ್ಲಿ ನನ್ನ ಪರಿಚಯವಿರುವವರು ಯಾರೂ ಇಲ್ಲವೆಂದು ನಾನು ನನ್ನನ್ನೇ ಸಂತೈಸಿಕೊಂಡೆ. ಆದರೆ ನನ್ನ ಬಳಿ ಬಂದ ಪ್ರಥಮ ವ್ಯಕ್ತಿಯೇ, ನನ್ನ ಹಳೆಯ ಶಾಲಾ ಸ್ನೇಹಿತೆಯಾಗಿದ್ದಳು. ಅವಳು ನನ್ನನ್ನು ಎವೆಯಿಕ್ಕದೆ ನೋಡುತ್ತಾ, “ಈ ರೀತಿಯ ವೇಷದಲ್ಲಿ ಇಲ್ಲೇನು ಮಾಡುತ್ತಿದ್ದೀಯಾ?” ಎಂದು ಕೇಳಿದಳು. ಈ ಅನುಭವವು ನನ್ನಲ್ಲಿದ್ದ ಮನುಷ್ಯರ ಭಯವನ್ನು ಹೋಗಲಾಡಿಸಿತು!
ಮನೆಯಿಂದ ಇನ್ನೂ ದೂರ ಹೋಗುವುದು
ಇಸವಿ 1933ರಲ್ಲಿ, ನನಗಿಂತ 25 ವರ್ಷ ದೊಡ್ಡವರಾಗಿದ್ದ ಸನೋಆ ಎಂಬ ವಿಧುರ ಸಹೋದರನನ್ನು ನಾನು ಮದುವೆಯಾದೆ. ಅವರ ಮೊದಲನೆಯ ಹೆಂಡತಿ ಒಬ್ಬ ಹುರುಪಿನ ಬೈಬಲ್ ವಿದ್ಯಾರ್ಥಿಯಾಗಿದ್ದಳು, ಮತ್ತು ಅವಳ ಮರಣದ ನಂತರವೂ ಸನೋಆರವರು ನಂಬಿಗಸ್ತಿಕೆಯಿಂದ ತಮ್ಮ ನೇಮಕಕ್ಕೆ ಅಂಟಿಕೊಂಡಿದ್ದರು. ಸ್ವಲ್ಪ ಸಮಯದೊಳಗೆ ನಾವು ಇಂಗ್ಲೆಂಡನ್ನು ಬಿಟ್ಟು, ಸುಮಾರು 150 ಕಿಲೊಮೀಟರ್ಗಳಷ್ಟು ದೂರದಲ್ಲಿರುವ ನಮ್ಮ ಹೊಸ ಟೆರಿಟೊರಿಯಾದ ನಾರ್ತ್ ವೇಲ್ಸ್ಗೆ ಸ್ಥಳಾಂತರಿಸಿದೆವು. ಕಾರ್ಟನ್ಗಳನ್ನು, ಸೂಟ್ಕೇಸ್ಗಳನ್ನು ಮತ್ತು ನಮ್ಮ ಇನ್ನಿತರ ಅಮೂಲ್ಯ ಸ್ವತ್ತುಗಳನ್ನು ನಮ್ಮ ಸೈಕಲಿನ ಹ್ಯಾಂಡಲ್ಬಾರ್ಗಳ ಮೇಲೆ ಒಂದರ ಮೇಲೊಂದರಂತೆ ಇಟ್ಟು, ಅಡ್ಡಕಂಬಿಗಳ ನಡುವೆ ತುರುಕಿಸಿ, ಹಿಂದಿನ ಚಕ್ರದ ಎರಡೂ ಕಡೆಗಳಲ್ಲಿ ತೂಗುಹಾಕಿರುವ ಚೀಲಗಳಲ್ಲಿ ಹಾಕಿದೆವು. ಹೀಗೆಲ್ಲಾ ಮಾಡಿಯೂ ನಮ್ಮ ಗಮ್ಯಸ್ಥಾನವನ್ನು ಸುರಕ್ಷಿತವಾಗಿ ತಲಪಿದೆವು! ನಮ್ಮ ಆ ನೇಮಕದಲ್ಲಿ ಸೈಕಲ್ಗಳಿಲ್ಲದೆ ಏನನ್ನೂ ಮಾಡಲಾಗುತ್ತಿರಲಿಲ್ಲ. ಸೈಕಲ್ನಲ್ಲಿ ನಾವು ಎಲ್ಲಾ ಕಡೆಗಳಿಗೆ ಹೋಗಬಹುದಿತ್ತು. ಸುಮಾರು 900 ಮೀಟರ್ಗಳಷ್ಟು ಎತ್ತರವಿರುವ, ಕಾಡರ್ ಇಡ್ರಿಸ್ ಎಂಬ ಒಂದು ವೆಲ್ಶ್ ಪರ್ವತದ ನೆತ್ತಿಯ ವರೆಗೂ ನಾವು ಹೋದೆವು. “ರಾಜ್ಯದ ಈ ಸುವಾರ್ತೆಯನ್ನು” ಕೇಳಲು ಹಾತೊರೆಯುತ್ತಿದ್ದ ಜನರನ್ನು ಕಂಡುಕೊಳ್ಳುವುದು ತುಂಬ ಪ್ರತಿಫಲದಾಯಕವಾಗಿತ್ತು.—ಮತ್ತಾಯ 24:14.
ನಾವು ಅಲ್ಲಿ ತಲಪಿದ ಸ್ವಲ್ಪ ಸಮಯದೊಳಗೆ, ಟಾಮ್ ಪ್ರೈಸ್ ಎಂಬ ಒಬ್ಬ ವ್ಯಕ್ತಿಯು ನಮ್ಮಂತೆಯೇ ಅವರಿಗೆ ಸಾರುತ್ತಿದ್ದನೆಂದು ಜನರು ಹೇಳಿದರು. ಕಟ್ಟಕಡೆಗೆ ನಾವು ಅವನ ಪತ್ತೆಹಚ್ಚಿದೆವು. ಅವನು ವೆಲ್ಶ್ಪೂಲ್ನ ಹತ್ತಿರದಲ್ಲಿ ಲಾಂಗ್ ಮೌಂಟನ್ನಲ್ಲಿ ವಾಸಿಸುತ್ತಿದ್ದನು. ಮತ್ತು ನಮಗೆ ಎಷ್ಟೊಂದು ಆಶ್ಚರ್ಯವಾಗಿತ್ತು! ನಾನು ಸಾಕ್ಷಿಯನ್ನು ಕೊಡಲಾರಂಭಿಸಿದ ಆರಂಭದ ದಿನಗಳಲ್ಲಿ, ನಾನೇ ರಿಕನ್ಸಿಲಿಯೇಷನ್ ಎಂಬ ಬೈಬಲ್ ಅಭ್ಯಾಸ ಸಹಾಯಕವನ್ನು ಅವನೊಂದಿಗೆ ಬಿಟ್ಟುಹೋಗಿದ್ದೆ. ಅವನು ಅದನ್ನು ತನ್ನಷ್ಟಕ್ಕೇ ಅಭ್ಯಾಸಮಾಡಿ, ಹೆಚ್ಚಿನ ಸಾಹಿತ್ಯಕ್ಕಾಗಿ ಲಂಡನ್ ಬ್ರಾಂಚ್ಗೆ ಬರೆದಿದ್ದನು ಮತ್ತು ಅಂದಿನಿಂದ ತನ್ನ ಹೊಸ ನಂಬಿಕೆಯ ಕುರಿತಾಗಿ ಹುರುಪಿನಿಂದ ಇತರರಿಗೆ ಸಾರುತ್ತಿದ್ದನು. ನಾವು ಅವನೊಂದಿಗೆ ಸಹವಾಸಮಾಡುತ್ತಾ ಅನೇಕ ತಾಸುಗಳನ್ನು ಕಳೆದೆವು, ಮತ್ತು ಪರಸ್ಪರರನ್ನು ಉತ್ತೇಜಿಸಲಿಕ್ಕಾಗಿ ಅನೇಕವೇಳೆ ಜೊತೆಯಾಗಿ ಅಭ್ಯಾಸಮಾಡಿದೆವು.
ಒಂದು ವಿಪತ್ತು ಆಶೀರ್ವಾದಗಳಿಗೆ ನಡೆಸುತ್ತದೆ
ಇಸವಿ 1934ರಲ್ಲಿ ನಾರ್ತ್ ವೇಲ್ಸ್ಗೆ ಹತ್ತಿರದಲ್ಲಿದ್ದ ಎಲ್ಲ ಕಾಲ್ಪೋರ್ಟರರು, ರೆಕ್ಸಮ್ ಪಟ್ಟಣಕ್ಕೆ ಹೋಗಿ, ನೀತಿವಂತ ಪ್ರಭು (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ವಿತರಿಸಲು ಸಹಾಯಮಾಡುವಂತೆ ಆಮಂತ್ರಿಸಲ್ಪಟ್ಟರು. ಈ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸುವ ಮುಂಚಿನ ದಿನವೇ ಒಂದು ರಾಷ್ಟ್ರೀಯ ವಿಪತ್ತು ಸಂಭವಿಸಿತ್ತು. ರೆಕ್ಸಮ್ನಿಂದ ಉತ್ತರದಿಕ್ಕಿನಲ್ಲಿ ಮೂರು ಕಿಲೊಮೀಟರ್ಗಳಷ್ಟು ದೂರದಲ್ಲಿದ್ದ ಗ್ರೆಸ್ಫರ್ಡ್ ಕಲ್ಲಿದ್ದಲಿನ ಗಣಿಯಲ್ಲಿ ನಡೆದ ಸ್ಫೋಟದಲ್ಲಿ, 266 ಮಂದಿ ಗಣಿಗಾರರು ಕೊಲ್ಲಲ್ಪಟ್ಟರು. 200ಕ್ಕಿಂತಲೂ ಹೆಚ್ಚು ಮಕ್ಕಳು ತಂದೆಯಿಲ್ಲದವರಾದರು, ಮತ್ತು 160 ಮಂದಿ ಸ್ತ್ರೀಯರು ವಿಧವೆಯರಾದರು.
ನಾವು ಮೃತ ವ್ಯಕ್ತಿಗಳ ಕುಟುಂಬದವರ ಪಟ್ಟಿ ಮಾಡಿ, ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ, ಅವರೊಂದಿಗೆ ಒಂದು ಪುಸ್ತಿಕೆಯನ್ನು ಬಿಟ್ಟುಹೋಗಬೇಕಾಗಿತ್ತು. ನನಗೆ ಕೊಡಲ್ಪಟ್ಟಿದ್ದ ಹೆಸರುಗಳಲ್ಲಿ ಒಂದು, ಶ್ರೀಮತಿ ಚ್ಯಾಡ್ವಿಕ್ ಎಂಬವರದ್ದಾಗಿತ್ತು. ಅವರು ತಮ್ಮ 19 ವರ್ಷ ಪ್ರಾಯದ ಮಗನನ್ನು ಕಳೆದುಕೊಂಡಿದ್ದರು. ನಾನು ಅವರಿಗೆ ಭೇಟಿಯಿತ್ತಾಗ, ಅವರ ಹಿರಿಯ ಮಗನಾದ ಜ್ಯಾಕ್ ಅವರನ್ನು ಸಂತೈಸಲಿಕ್ಕಾಗಿ ಅಲ್ಲಿಗೆ ಬಂದಿದ್ದ. ಈ ಯುವಕನು ನನ್ನ ಗುರುತುಹಿಡಿದನಾದರೂ ಆಗ ಅವನು ನನಗೇನನ್ನೂ ಹೇಳಲಿಲ್ಲ. ಅನಂತರ ಅವನು, ನಾನು ಕೊಟ್ಟ ಪುಸ್ತಿಕೆಯನ್ನು ಓದಿದನು ಮತ್ತು ನಾನು ಅವನೊಂದಿಗೆ ಕೆಲವೊಂದು ವರ್ಷಗಳ ಹಿಂದೆ ಬಿಟ್ಟುಹೋಗಿದ್ದ ಕೊನೆಯ ಯುದ್ಧ (ಇಂಗ್ಲಿಷ್) ಎಂಬ ಇನ್ನೊಂದು ಪುಸ್ತಿಕೆಗಾಗಿ ಹುಡುಕಲಾರಂಭಿಸಿದನು.
ಜ್ಯಾಕ್ ಮತ್ತು ಅವನ ಹೆಂಡತಿ ಮೇ, ನಾನು ಎಲ್ಲಿ ಉಳಿಯುತ್ತಿದ್ದೇನೆಂಬುದನ್ನು ಪತ್ತೆಹಚ್ಚಿ, ಹೆಚ್ಚಿನ ಸಾಹಿತ್ಯಕ್ಕಾಗಿ ನನ್ನ ಬಳಿ ಬಂದರು. 1936ರಲ್ಲಿ ರೆಕ್ಸಮ್ನಲ್ಲಿದ್ದ ತಮ್ಮ ಮನೆಯಲ್ಲಿ ಕೂಟಗಳನ್ನು ನಡೆಸಲು ಅವರು ಒಪ್ಪಿಕೊಂಡರು. ಆರು ತಿಂಗಳುಗಳ ಬಳಿಕ ಆ್ಯಲ್ಬರ್ಟ್ ಲಾಯ್ಡ್ರವರ ಭೇಟಿಯಾದಾಗ, ಒಂದು ಸಭೆಯನ್ನು ಸ್ಥಾಪಿಸಲಾಯಿತು ಮತ್ತು ಜ್ಯಾಕ್ ಚ್ಯಾಡ್ವಿಕ್ ಅಲ್ಲಿನ ಅಧ್ಯಕ್ಷ ಮೇಲ್ವಿಚಾರಕರಾದರು. ಈಗ ರೆಕ್ಸಮ್ನಲ್ಲಿ ಮೂರು ಸಭೆಗಳಿವೆ.
ಒಂದು ಜಿಪ್ಸಿ ಗಾಲಿಮನೆಯಲ್ಲಿ ಜೀವನ
ಇಷ್ಟರ ವರೆಗೆ, ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದಾಗ, ನಮಗೆ ಸಿಗುತ್ತಿದ್ದ ಯಾವುದೇ ವಸತಿಸೌಕರ್ಯದಲ್ಲಿ ತಂಗುತ್ತಿದ್ದೆವು. ಆದರೆ ಈಗ, ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಎಳೆದುಕೊಂಡು ಹೋಗಬಹುದಾದ ಒಂದು ಸ್ವಂತ ಮನೆಯಿರಲು ಇದು ಸೂಕ್ತ ಸಮಯವೆಂದು ಸನೋಆ ನಿರ್ಣಯಿಸಿದರು. ನನ್ನ ಗಂಡನವರು ಜಿಪ್ಸಿ ಮೂಲದವರಾಗಿದ್ದು, ಒಬ್ಬ ನಿಸ್ಸೀಮ ಬಡಗಿಯಾಗಿದ್ದರು. ಆದುದರಿಂದ ಅವರು ನಮಗಾಗಿ ಒಂದು ಜಿಪ್ಸಿ ಗಾಲಿಮನೆಯನ್ನು ತಯಾರಿಸಿದರು. ನಾವು ಅದಕ್ಕೆ ಎಲಿಸಬೇತ್ ಎಂದು ಹೆಸರಿಟ್ಟೆವು. ಅದು ಒಂದು ಬೈಬಲ್ ಹೆಸರಾಗಿದ್ದು, ಅದರರ್ಥ “ಸಮೃದ್ಧಿಯ ದೇವರು” ಎಂದಾಗಿತ್ತು.
ನಾವು ತಂಗಿದಂಥ ಒಂದು ಸ್ಥಳವು ನನಗೆ ವಿಶೇಷವಾಗಿ ನೆನಪಿದೆ. ಅದು ಒಂದು ಹೊಳೆಯ ಪಕ್ಕದಲ್ಲಿದ್ದ ಹಣ್ಣಿನ ತೋಟವಾಗಿತ್ತು. ನನಗಂತೂ ಅದು ಒಂದು ಪರದೈಸದಂತಿತ್ತು! ಆ ಗಾಲಿಮನೆಯಲ್ಲಿ ಸೀಮಿತ ಸ್ಥಳ ಮತ್ತು ಪೀಠೋಪಕರಣಗಳಿದ್ದರೂ, ಅದರಲ್ಲಿ ನಾವು ಜೊತೆಯಾಗಿ ಕಳೆದ ವರ್ಷಗಳಲ್ಲಿ ನಮ್ಮ ಸಂತೋಷಕ್ಕೆ ಯಾವುದೇ ಕೊರತೆಯಿರಲಿಲ್ಲ. ಚಳಿಗಾಲದಲ್ಲಿ, ಮಂಚದ ಮೇಲಿನ ಬಟ್ಟೆಗಳು ಶೀತದಿಂದ ಗಟ್ಟಿಯಾಗಿ ಗಾಲಿಮನೆಯ ಗೋಡೆಗಳಿಗೆ ಅಂಟಿಕೊಳ್ಳುತ್ತಿದ್ದವು, ಮತ್ತು ನೀರು ಘನೀಭವಿಸುವುದು ಯಾವಾಗಲೂ ಒಂದು ಸಮಸ್ಯೆಯಾಗಿರುತ್ತಿತ್ತು. ನೀರನ್ನು ತುಂಬ ದೂರದಿಂದ ಹೊತ್ತುಕೊಂಡು ತರಬೇಕಾಗುತ್ತಿತ್ತು. ಹೀಗಿದ್ದರೂ ಈ ಕಷ್ಟಗಳನ್ನು ನಾವು ಜೊತೆಯಾಗಿ ಜಯಿಸಿದೆವು.
ಒಮ್ಮೆ ಚಳಿಗಾಲದಲ್ಲಿ ನಾನು ಅಸ್ವಸ್ಥಳಾದೆ, ಮತ್ತು ನಮ್ಮ ಬಳಿ ಕೇವಲ ಸ್ವಲ್ಪ ಆಹಾರವಿತ್ತು, ಹಣವಿರಲಿಲ್ಲ. ಸನೋಆ ಮಂಚದ ಪಕ್ಕದಲ್ಲಿ ಕುಳಿತುಕೊಂಡು, ನನ್ನ ಕೈಯನ್ನು ತಮ್ಮ ಹಸ್ತದಲ್ಲಿ ತೆಗೆದುಕೊಂಡು ಕೀರ್ತನೆ 37:25ನ್ನು ಓದಿದರು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” ನನ್ನನ್ನು ದಿಟ್ಟಿಸಿ ನೋಡುತ್ತಾ ಅವರು ಹೀಗಂದರು: “ಬೇಗನೆ ಏನಾದರೂ ಆಗದಿದ್ದರೆ ನಾವು ಭಿಕ್ಷೆಬೇಡಬೇಕಾಗಬಹುದು. ಆದರೆ ದೇವರು ಹಾಗಾಗುವಂತೆ ಬಿಡಲಾರನೆಂದು ನನಗೆ ಗೊತ್ತು!” ಅನಂತರ ಅವರು ನಮ್ಮ ನೆರೆಹೊರೆಯವರಿಗೆ ಸಾಕ್ಷಿಯನ್ನು ಕೊಡಲು ಹೊರಟರು.
ಮಧ್ಯಾಹ್ನದ ಸಮಯದಲ್ಲಿ ನನಗೆ ಏನಾದರೂ ಕುಡಿಯಲಿಕ್ಕಾಗಿ ಕೊಡಲು ಸನೋಆರವರು ಹಿಂದೆ ಬಂದಾಗ, ಅವರಿಗಾಗಿ ಒಂದು ಲಕೋಟೆ ಕಾದಿತ್ತು. ಅದರಲ್ಲಿ ಅವರ ತಂದೆ ಕಳುಹಿಸಿದ 50 ಪೌಂಡ್ ಹಣವಿತ್ತು. ಕೆಲವು ವರ್ಷಗಳ ಹಿಂದೆ, ಹಣವನ್ನು ಮೋಸದಿಂದ ದುರುಪಯೋಗಿಸಿದ ಆರೋಪವನ್ನು ಸನೋಆರವರ ಮೇಲೆ ಹೊರಿಸಲಾಗಿತ್ತು, ಆದರೆ ಅವರು ನಿರ್ದೋಷಿಯಾಗಿದ್ದರೆಂಬುದು ಈಗತಾನೇ ತಿಳಿದುಬಂದಿತ್ತು. ಆದುದರಿಂದ ನಷ್ಟಪರಿಹಾರಕ್ಕಾಗಿ ಈ ಕೊಡುಗೆಯನ್ನು ಕಳುಹಿಸಲಾಗಿತ್ತು. ಇದು ಎಷ್ಟು ಸಮಯೋಚಿತವಾಗಿತ್ತು!
ಒಂದು ಒಳ್ಳೆಯ ಪಾಠ
ಕೆಲವೊಮ್ಮೆ ಅನೇಕ ವರ್ಷಗಳ ನಂತರ ನಾವು ಪಾಠಗಳನ್ನು ಕಲಿಯುತ್ತೇವೆ. ದೃಷ್ಟಾಂತಕ್ಕಾಗಿ: ನಾನು 1927ರಲ್ಲಿ ಶಾಲೆಯನ್ನು ಬಿಟ್ಟುಬಿಡುವ ಮುಂಚೆ, ನನ್ನ ಎಲ್ಲ ಸಹಪಾಠಿಗಳು ಮತ್ತು ಶಿಕ್ಷಕಿಯರಿಗೆ ಸಾಕ್ಷಿಯನ್ನು ಕೊಟ್ಟೆ. ಆದರೆ ಲವೀನ್ಯ ಫ್ಯಾರ್ಕ್ಲಾ ಎಂಬ ಒಬ್ಬ ಶಿಕ್ಷಕಿಗೆ ನಾನು ಸಾಕ್ಷಿ ಕೊಡಲಿಲ್ಲ. ನನ್ನ ಜೀವಿತದಲ್ಲಿ ನಾನೇನು ಮಾಡಲು ಯೋಜಿಸುತ್ತಿದ್ದೇನೆಂಬುದರ ಕುರಿತಾಗಿ ಯಾರಿಗೂ ಆಸಕ್ತಿ ಇಲ್ಲದಿದ್ದರಿಂದ, ಮತ್ತು ಹೇಗೂ ನನಗೂ ಮಿಸ್ ಫ್ಯಾರ್ಕ್ಲಾರಿಗೂ ಹೊಂದಾಣಿಕೆ ಇರಲಿಲ್ಲವಾದ್ದರಿಂದ, ನಾನು ಅವರಿಗೆ ಏನೂ ಹೇಳುವುದಿಲ್ಲವೆಂದು ನಿರ್ಣಯಿಸಿದೆ. ಆದರೆ ಸುಮಾರು 20 ವರ್ಷಗಳ ನಂತರ, ಈ ಶಿಕ್ಷಕಿಯು ತನ್ನ ಹಳೆಯ ಸ್ನೇಹಿತರು ಮತ್ತು ವಿದ್ಯಾರ್ಥಿಗಳಿಗೆಲ್ಲ ತಾನು ಈಗ ಒಬ್ಬ ಯೆಹೋವನ ಸಾಕ್ಷಿಯಾಗಿದ್ದೇನೆಂದು ಹೇಳಲು ಹಿಂದಿರುಗಿ ಬಂದಿದ್ದಾರೆಂದು ನನ್ನ ತಾಯಿ ನನಗೆ ಹೇಳಿದಾಗ, ನನಗೆ ಎಷ್ಟು ಆಶ್ಚರ್ಯ ಮತ್ತು ಅದೇ ಸಮಯದಲ್ಲಿ ಆನಂದವೂ ಆಯಿತೆಂಬುದನ್ನು ನೀವು ಊಹಿಸಿಕೊಳ್ಳಬಹುದು!
ನಮ್ಮಿಬ್ಬರ ಭೇಟಿಯಾದಾಗ, ನಾನು ಹಿಂದೆ ಅವರಿಗೆ ನನ್ನ ಧರ್ಮ ಮತ್ತು ನಾನು ಯೋಜಿಸುತ್ತಿದ್ದ ಜೀವನವೃತ್ತಿಯ ಬಗ್ಗೆ ಏಕೆ ಹೇಳಿರಲಿಲ್ಲವೆಂಬುದನ್ನು ವಿವರಿಸಿದೆ. ಅವರು ನಾನು ಹೇಳಿದ್ದನ್ನು ಮೌನವಾಗಿ ಆಲಿಸುತ್ತಾ, ಅನಂತರ ಹೇಳಿದ್ದು: “ನಾನು ಯಾವಾಗಲೂ ಸತ್ಯಕ್ಕಾಗಿ ಹುಡುಕುತ್ತಾ ಇದ್ದೆ. ಅದೇ ನನ್ನ ಜೀವನದ ಅನ್ವೇಷಣೆಯಾಗಿತ್ತು!” ಈ ಅನುಭವವು ನನಗೆ ಒಂದು ಒಳ್ಳೆಯ ಪಾಠವನ್ನು ಕಲಿಸಿಕೊಟ್ಟಿತ್ತು. ಅದೇನೆಂದರೆ, ನಾನು ಭೇಟಿಯಾಗುವ ಯಾವುದೇ ವ್ಯಕ್ತಿಗೆ ಸಾಕ್ಷಿಯನ್ನು ಕೊಡಲು ಹಿಂಜರಿಯಬಾರದು ಮತ್ತು ಎಂದಿಗೂ ಯಾವುದೇ ವ್ಯಕ್ತಿಯ ಕುರಿತಾಗಿ ಅವಸರದ ತೀರ್ಮಾನವನ್ನು ಮಾಡಬಾರದು.
ಇನ್ನೊಂದು ಯುದ್ಧ ಮತ್ತು ಮುಂದಕ್ಕೆ
ಸಾವಿರದ ಒಂಬೈನೂರ ಮೂವತ್ತರ ದಶಕವು ಅಂತ್ಯಗೊಳ್ಳುತ್ತಿದ್ದಂತೆ, ಪುನಃ ಒಮ್ಮೆ ಯುದ್ಧದ ಕಾರ್ಮೋಡಗಳು ಕವಿಯಲಾರಂಭಿಸಿದವು. ನನಗಿಂತಲೂ ಹತ್ತು ವರ್ಷ ಚಿಕ್ಕವನಾಗಿದ್ದ ನನ್ನ ತಮ್ಮ ಡೆನಿಸ್ಗೆ, ಮಿಲಿಟರಿ ಸೇವೆಯಿಂದ ವಿನಾಯಿತಿಯನ್ನು ನೀಡಲಾಯಿತು. ಆದರೆ ಒಂದು ಷರತ್ತಿನ ಮೇಲೆ. ಅದೇನೆಂದರೆ, ಅವನು ತನ್ನ ಐಹಿಕ ಉದ್ಯೋಗದಲ್ಲಿಯೇ ಉಳಿಯಬೇಕಾಗಿತ್ತು. ಅವನು ಸತ್ಯದಲ್ಲಿ ಅಷ್ಟೇನೂ ಆಸಕ್ತಿಯನ್ನು ತೋರಿಸಿರಲಿಲ್ಲ. ಆದುದರಿಂದ, ಸ್ಥಳಿಕ ಪಯನೀಯರರಾಗಿದ್ದ ರೂಪರ್ಟ್ ಬ್ರ್ಯಾಡ್ಬೆರಿ ಮತ್ತು ಅವರ ತಮ್ಮ ಡೇವಿಡ್ ಅವನನ್ನು ಭೇಟಿಮಾಡುವಂತೆ ನನ್ನ ಗಂಡನೂ ನಾನೂ ಅವರನ್ನು ಕೇಳಿಕೊಂಡೆವು. ಅವರು ಅವನನ್ನು ಭೇಟಿಮಾಡಿದರು ಮತ್ತು ಅವನೊಂದಿಗೆ ಬೈಬಲ್ ಅಭ್ಯಾಸವನ್ನೂ ಮಾಡಿದರು. 1942ರಲ್ಲಿ ಡೆನಿಸ್ ದೀಕ್ಷಾಸ್ನಾನಪಡೆದುಕೊಂಡು, ತದನಂತರ ಪಯನೀಯರ್ ಸೇವೆಯನ್ನು ಆರಂಭಿಸಿದನು. 1957ರಲ್ಲಿ ಅವನನ್ನು ಸಂಚರಣಾ ಮೇಲ್ವಿಚಾರಕನನ್ನಾಗಿ ನೇಮಿಸಲಾಯಿತು.
ನಮ್ಮ ಮಗಳಾದ ಎಲಿಸಬೇತಳು 1938ರಲ್ಲಿ ಜನಿಸಿದಳು, ಮತ್ತು ನಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಸನೋಆ ನಮ್ಮ ಗಾಲಿಮನೆಯನ್ನು ವಿಸ್ತರಿಸಿದರು. 1942ರಲ್ಲಿ ನಮ್ಮ ಎರಡನೆಯ ಮಗಳಾದ ಯ್ಯೂನಿಸ್ ಹುಟ್ಟಿದಾಗ, ಹೆಚ್ಚು ಸ್ಥಿರವಾದ, ಒಂದು ಕಾಯಂ ಮನೆಯಲ್ಲಿರುವುದೇ ಒಳ್ಳೇದೆಂದು ತೋರಿತು. ಈ ಕಾರಣಕ್ಕಾಗಿ ಸನೋಆರವರು ಕೆಲವೊಂದು ವರ್ಷಗಳ ವರೆಗೆ ಪಯನೀಯರ್ ಸೇವೆಯನ್ನು ನಿಲ್ಲಿಸಿದರು, ಮತ್ತು ನಾವು ರೆಕ್ಸಮ್ನ ಹತ್ತಿರದಲ್ಲಿದ್ದ ಒಂದು ಚಿಕ್ಕ ಮನೆಗೆ ಸ್ಥಳಾಂತರಿಸಿದೆವು. ತದನಂತರ ನಾವು ಚೆಶೈರ್ನ ಪಕ್ಕದಲ್ಲಿರುವ ಮಿಡ್ಲಿಜ್ ಎಂಬ ಪಟ್ಟಣದಲ್ಲಿ ನೆಲೆಸಿದೆವು. ಅಲ್ಲಿಯೇ 1956ರಲ್ಲಿ ನನ್ನ ಪ್ರಿಯ ಗಂಡನವರು ಮರಣಪಟ್ಟರು.
ನಮ್ಮ ಇಬ್ಬರೂ ಪುತ್ರಿಯರು ಪೂರ್ಣ ಸಮಯದ ಸೌವಾರ್ತಿಕರಾದರು, ಮತ್ತು ಮದುವೆಯಾಗಿ ಸಂತೋಷದಿಂದಿದ್ದಾರೆ. ಯ್ಯೂನಿಸ್ ಮತ್ತು ಹಿರಿಯನಾಗಿರುವ ಅವಳ ಗಂಡನು, ಈಗಲೂ ಲಂಡನ್ನಲ್ಲಿ ವಿಶೇಷ ಪಯನೀಯರರೋಪಾದಿ ಸೇವೆ ಸಲ್ಲಿಸುತ್ತಿದ್ದಾರೆ. ಎಲಿಸಬೇತಳ ಗಂಡನೂ ಒಬ್ಬ ಸಭಾ ಹಿರಿಯನಾಗಿದ್ದಾನೆ. ಅವರು, ಅವರ ಮಕ್ಕಳು ಮತ್ತು ನನ್ನ ನಾಲ್ಕು ಮಂದಿ ಮರಿಮಕ್ಕಳು ನನ್ನ ಹತ್ತಿರದಲ್ಲೇ ಲ್ಯಾಂಕ್ಶೈರ್ನ ಪ್ರೆಸ್ಟನ್ನಲ್ಲಿ ವಾಸಿಸುತ್ತಿರುವುದರಿಂದ ನನಗೆ ತುಂಬ ಆನಂದವಾಗುತ್ತದೆ.
ರಸ್ತೆಯ ಆಚೆ ಪಕ್ಕದಲ್ಲಿರುವ ರಾಜ್ಯ ಸಭಾಗೃಹಕ್ಕೆ ನಾನು ನನ್ನ ಅಪಾರ್ಟ್ಮೆಂಟಿನಿಂದ ನಡೆದುಕೊಂಡು ಹೋಗಲು ಸಾಧ್ಯವಿರುವುದಕ್ಕಾಗಿ ಆಭಾರಿಯಾಗಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ, ನಾನು ಗುಜರಾಥಿ ಭಾಷೆಯನ್ನಾಡುವ ಗುಂಪಿನೊಂದಿಗೆ ಸಹವಾಸಮಾಡಲಾರಂಭಿಸಿದ್ದೇನೆ. ಈ ಗುಂಪು ಇದೇ ರಾಜ್ಯ ಸಭಾಗೃಹದಲ್ಲಿ ಕೂಡಿಬರುತ್ತದೆ. ನನಗೆ ಆ ಭಾಷೆಯನ್ನು ಕಲಿಯುವುದು ಸುಲಭವಾಗಿರುವುದಿಲ್ಲ, ಯಾಕೆಂದರೆ ಈಗ ನನಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ. ಯುವ ಜನರು ಸುಲಭವಾಗಿ ಕೇಳಿ ಅರ್ಥಮಾಡಿಕೊಳ್ಳಬಹುದಾದ ಸ್ವರದಲ್ಲಿನ ನವಿರಾದ ಭೇದಗಳನ್ನು ಗ್ರಹಿಸಲು ಕೆಲವೊಮ್ಮೆ ನನಗೆ ಕಷ್ಟವಾಗುತ್ತದೆ. ಆದರೆ ಆ ಭಾಷೆಯನ್ನು ಕಲಿಯುವುದು ಒಂದು ಆಸಕ್ತಿಕರ ಪಂಥಾಹ್ವಾನವಾಗಿರುತ್ತದೆ.
ಈಗಲೂ ನಾನು ಮನೆಯಿಂದ ಮನೆಗೆ ಸಾರಲು ಮತ್ತು ನನ್ನ ಮನೆಯಲ್ಲಿಯೇ ಬೈಬಲ್ ಅಭ್ಯಾಸಗಳನ್ನು ನಡೆಸಲು ಶಕ್ತಳಾಗಿದ್ದೇನೆ. ನನ್ನ ಸ್ನೇಹಿತರು ನನ್ನನ್ನು ಭೇಟಿಯಾಗಲು ಬರುವಾಗ, ನನ್ನ ಹಿಂದಿನ ಅನುಭವಗಳನ್ನು ಜ್ಞಾಪಿಸಿಕೊಂಡು ಅವರಿಗೆ ಹೇಳಲು ನನಗೆ ಯಾವಾಗಲೂ ತುಂಬ ಸಂತೋಷವಾಗುತ್ತದೆ. ಹತ್ತಿರ ಹತ್ತಿರ 90 ವರ್ಷಗಳಿಂದ ಯೆಹೋವನ ಜನರೊಂದಿಗೆ ಸಹವಾಸಮಾಡುತ್ತಿರುವಾಗ, ನಾನು ಪಡೆದಿರುವ ಆಶೀರ್ವಾದಗಳ ಕುರಿತಾದ ಅಮೂಲ್ಯ ನೆನಪುಗಳಿಗಾಗಿ ನಾನು ತುಂಬ ಆಭಾರಿಯಾಗಿದ್ದೇನೆ.
[ಪಾದಟಿಪ್ಪಣಿಗಳು]
a ಪ್ರೈಸ್ ಹ್ಯೂಸ್ರವರ ಜೀವನ ಕಥೆಯು, “ನಂಬಿಗಸ್ತ ಸಂಸ್ಥೆಯ ಜೊತೆ ಸಮವಾಗಿ ಹೆಜ್ಜೆಹಾಕುವುದು” ಎಂಬ ವಾಚ್ಟವರ್ ಪತ್ರಿಕೆಯ 1963ರ ಏಪ್ರಿಲ್ 1ರ ಸಂಚಿಕೆಯಲ್ಲಿ ಬಂದಿತ್ತು.
b ಯೆಹೋವನ ಈ ನಂಬಿಗಸ್ತ ಸೇವಕರ ಜೀವನ ಕಥೆಗಳು ದ ವಾಚ್ಟವರ್ ಪತ್ರಿಕೆಯ ಹಿಂದಿನ ಸಂಚಿಕೆಗಳಲ್ಲಿ ಪ್ರಕಟಿಸಲ್ಪಟ್ಟಿವೆ.
[ಪುಟ 25ರಲ್ಲಿರುವ ಚಿತ್ರ]
ನಾನು 1922ರ ಮೇ 14ರಂದು ಕೇಳಿಸಿಕೊಂಡ, “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಎಂಬ ಬೈಬಲ್ ಭಾಷಣವನ್ನು ಜಾಹೀರುಪಡಿಸುವ ಹ್ಯಾಂಡ್ಬಿಲ್
[ಪುಟ 26ರಲ್ಲಿರುವ ಚಿತ್ರ]
1933ರಲ್ಲಿ ನಮ್ಮ ಮದುವೆಯಾದ ಸ್ವಲ್ಪ ಸಮಯದ ಬಳಿಕ ಸನೋಆರೊಂದಿಗೆ
[ಪುಟ 26ರಲ್ಲಿರುವ ಚಿತ್ರ]
ನನ್ನ ಗಂಡ ಕಟ್ಟಿದಂಥ “ಎಲಿಸಬೇತ್” ಎಂಬ ಹೆಸರಿನ ಗಾಲಿಮನೆಯ ಪಕ್ಕದಲ್ಲಿ ನಿಂತಿರುವುದು