ಜೀವನ ಕ
ನಾವು ಯೆಹೋವನನ್ನು ಪರೀಕ್ಷಿಸಿದೆವು
ಪೌಲ್ ಸ್ಕ್ರಿಬ್ನರ್ ಅವರು ಹೇಳಿದಂತೆ
“ನಮಸ್ಕಾರ, ಶ್ರೀಮತಿ ಸ್ಟ್ಯಾಕ್ಹೌಸ್. ಈ ದಿನ ಬೆಳಗ್ಗೆ ನಾನು ಈಸ್ಟರ್ ಕೇಕ್ಗಳಿಗಾಗಿ ಆರ್ಡರ್ಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಮತ್ತು ನಿಮ್ಮ ಕುಟುಂಬಕ್ಕಾಗಿ ಕೇಕನ್ನು ನನ್ನಲ್ಲಿ ಖರೀದಿಸಿದರೆ, ಖಂಡಿತವಾಗಿಯೂ ನೀವು ಅದನ್ನು ಇಷ್ಟಪಡುವಿರಿ ಎಂಬ ಖಾತ್ರಿ ನನಗಿದೆ.” ಅದು 1938ರ ವಸಂತಕಾಲದ ಆರಂಭವಾಗಿತ್ತು, ಮತ್ತು ಅಮೆರಿಕದ ನ್ಯೂ ಜೆರ್ಸಿಯ ಆ್ಯಟ್ಕೊ ಪಟ್ಟಣದಲ್ಲಿ ನಾನು ಜೆನರಲ್ ಬೇಕಿಂಗ್ ಕಂಪನಿಯ ಕೇಕ್ಗಳನ್ನು ಮಾರುತ್ತಿದ್ದು, ನನ್ನ ಅತ್ಯುತ್ತಮ ಗಿರಾಕಿಗಳಲ್ಲಿ ಒಬ್ಬರೊಂದಿಗೆ ಮಾತಾಡುತ್ತಿದ್ದೆ. ನನ್ನ ಆಶ್ಚರ್ಯಕ್ಕೆ, ಶ್ರೀಮತಿ ಸ್ಟ್ಯಾಕ್ಹೌಸ್ ಕೇಕ್ ಬೇಡ ಎಂದು ಹೇಳಿಬಿಟ್ಟರು.
“ನಮಗೆ ಕೇಕ್ನ ಅಗತ್ಯವಿಲ್ಲ ಎಂದು ನನಗನಿಸುತ್ತದೆ. ಏಕೆಂದರೆ ನಾವು ಈಸ್ಟರ್ ಹಬ್ಬವನ್ನು ಆಚರಿಸುವುದಿಲ್ಲ” ಎಂದು ಅವರು ಹೇಳಿದರು.
ಈಗ ಏನು ಹೇಳಬೇಕೆಂಬುದೇ ನನಗೆ ತೋಚಲಿಲ್ಲ. ಅವರೇಕೆ ಈಸ್ಟರ್ ಹಬ್ಬವನ್ನು ಆಚರಿಸುವುದಿಲ್ಲ? ನಿಶ್ಚಯವಾಗಿಯೂ, ಸೇಲ್ಸ್ನ ಮೊದಲ ನಿಯಮಕ್ಕನುಸಾರ, ಗಿರಾಕಿಗಳು ಹೇಳುವುದು ಯಾವಾಗಲೂ ಸರಿಯಾಗಿರುತ್ತದೆ. ಹಾಗಾದರೆ ಈಗ ನಾನೇನು ಮಾಡಬೇಕು? ಧೈರ್ಯತಂದುಕೊಂಡು ನಾನು ಅವರಿಗೆ ಹೇಳಿದೆ: “ಆದರೆ ಈ ಕೇಕ್ ತುಂಬ ರುಚಿಕರವಾಗಿದೆ, ಮತ್ತು ನಾವು ತಯಾರಿಸುವ ತಿಂಡಿಗಳನ್ನು ನೀವು ತುಂಬ ಇಷ್ಟಪಡುತ್ತೀರೆಂದು ನನಗೆ ಗೊತ್ತು. ನೀವು ಈಸ್ಟರ್ ಹಬ್ಬವನ್ನು ಆಚರಿಸುವುದಿಲ್ಲವಾದರೂ, ನಿಮ್ಮ ಕುಟುಂಬಕ್ಕೆ ನಮ್ಮ ಕೇಕ್ ಇಷ್ಟವಾಗುತ್ತದೆಂದು ನೀವು ನೆನಸುವುದಿಲ್ಲವೋ?”
“ಈಗ ನಮಗೆ ಕೇಕ್ ಬೇಡ” ಎಂದು ಅವರು ಪುನಃ ಹೇಳಿದರು. ತಮ್ಮ ಮಾತನ್ನು ಮುಂದುವರಿಸುತ್ತಾ ಅವರು ಹೇಳಿದ್ದು: “ಬಹಳ ಸಮಯದಿಂದಲೂ ನಾನು ನಿಮ್ಮೊಂದಿಗೆ ಒಂದು ವಿಷಯದ ಕುರಿತು ಮಾತಾಡಲು ಬಯಸುತ್ತಿದ್ದೆ ಸ್ಕ್ರಿಬ್ನರ್. ಬಹುಶಃ ಇದು ಒಂದು ಸದವಕಾಶವಾಗಿದೆ.” ಆ ಸಂಭಾಷಣೆಯು ನನ್ನ ಜೀವಿತವನ್ನೇ ಬದಲಾಯಿಸಲಿಕ್ಕಿತ್ತು! ನ್ಯೂ ಜೆರ್ಸಿಯ ಬರ್ಲಿನ್ನ ಯೆಹೋವನ ಸಾಕ್ಷಿಗಳ ಕಂಪನಿಯ (ಅಥವಾ ಸಭೆಯ) ಒಬ್ಬ ಸದಸ್ಯರಾಗಿದ್ದ ಶ್ರೀಮತಿ ಸ್ಟ್ಯಾಕ್ಹೌಸ್, ಈಸ್ಟರ್ ಆಚರಣೆಯು ಎಲ್ಲಿಂದ ಆರಂಭವಾಯಿತು ಎಂಬುದನ್ನು ವಿವರಿಸಿದರು ಮತ್ತು ಮೂರು ಪುಸ್ತಿಕೆಗಳನ್ನು ನನಗೆ ಕೊಟ್ಟರು. ಸುರಕ್ಷೆ, ಅನಾವರಣ, ಮತ್ತು ಸಂರಕ್ಷಣೆ (ಇಂಗ್ಲಿಷ್) ಎಂಬುದು ಅವುಗಳ ಶಿರೋನಾಮವಾಗಿತ್ತು. ಈ ಪುಸ್ತಿಕೆಗಳೊಂದಿಗೆ ನಾನು ಮನೆಗೆ ಹೋದೆ. ಅವುಗಳನ್ನು ಓದಬೇಕೆಂಬ ಕುತೂಹಲ ನನಗಿತ್ತಾದರೂ ಸ್ವಲ್ಪ ಭಯವೂ ಆಯಿತು. ಶ್ರೀಮತಿ ಸ್ಟ್ಯಾಕ್ಹೌಸ್ ಹೇಳಿದ ವಿಷಯವು ಚಿರಪರಿಚಿತವಾಗಿದ್ದಂತೆ ಧ್ವನಿಸಿತು. ಅದನ್ನು ನನ್ನ ಬಾಲ್ಯದಲ್ಲಿ ಕೇಳಿಸಿಕೊಂಡಿದ್ದೆ.
ಬೈಬಲ್ ವಿದ್ಯಾರ್ಥಿಗಳೊಂದಿಗೆ ಆರಂಭದ ಸಂಪರ್ಕ
ಇಸವಿ 1907ರ ಜನವರಿ 31ರಂದು ನಾನು ಜನಿಸಿದೆ. ಮತ್ತು 1915ರಲ್ಲಿ, ನಾನು ಎಂಟು ವರ್ಷದವನಾಗಿದ್ದಾಗ ನನ್ನ ತಂದೆಯವರು ಕ್ಯಾನ್ಸರ್ನಿಂದ ತೀರಿಹೋದರು. ಆದುದರಿಂದ, ನಾನು ಹಾಗೂ ನನ್ನ ತಾಯಿ, ಮ್ಯಾಸಚೂಸೆಟ್ಸ್ನ ಮಾಲ್ಡನ್ನಲ್ಲಿರುವ ಒಂದು ದೊಡ್ಡ ಮನೆಯಲ್ಲಿ ನನ್ನ ತಾಯಿಯ ಹೆತ್ತವರೊಂದಿಗೆ ವಾಸಿಸತೊಡಗಿದೆವು. ನನ್ನ ಸೋದರಮಾವನಾದ ಬೆಂಜಮಿನ್ ರ್ಯಾನ್ಸಮ್ ಹಾಗೂ ಅವರ ಪತ್ನಿಯು ಸಹ ಅದೇ ಕಟ್ಟಡದ ಮೂರನೆಯ ಮಹಡಿಯಲ್ಲಿ ವಾಸಿಸುತ್ತಿದ್ದರು. ಸೋದರಮಾವನಾದ ಬೆನ್, ಇಪ್ಪತ್ತನೆಯ ಶತಮಾನವು ಆರಂಭವಾಗುವುದಕ್ಕೆ ಸ್ವಲ್ಪ ಮುಂಚೆ, ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿ—ಯೆಹೋವನ ಸಾಕ್ಷಿಗಳನ್ನು ಆಗ ಈ ಹೆಸರಿನಿಂದ ಕರೆಯಲಾಗುತ್ತಿತ್ತು—ಗಳೊಂದಿಗೆ ಒಡನಾಟಮಾಡುತ್ತಿದ್ದರು. ನಾನು ಸೋದರಮಾವನನ್ನು ತುಂಬ ಇಷ್ಟಪಡುತ್ತಿದ್ದೆ. ಆದರೆ ನನ್ನ ತಾಯಿಯ ಕುಟುಂಬದವರು ಮೆಥೊಡಿಸ್ಟರಾಗಿದ್ದರಿಂದ, ಅವನೊಬ್ಬ ವಿಚಿತ್ರ ಮನುಷ್ಯನೆಂದು ಅವರಿಗೆಲ್ಲ ಅನಿಸುತ್ತಿತ್ತು. ಅನೇಕ ವರ್ಷಗಳ ಬಳಿಕ ನನ್ನ ಅತ್ತೆಯವರು ಸೋದರಮಾವನಿಗೆ ವಿಚ್ಛೇದ ನೀಡುವ ಮುಂಚೆ, ಸೋದರಮಾವನವರ ಧಾರ್ಮಿಕ ನಂಬಿಕೆಗಳಿಗೋಸ್ಕರ ಸ್ವಲ್ಪ ಕಾಲದ ವರೆಗೆ ಅವರನ್ನು ಮಾನಸಿಕ ಕೇಂದ್ರಕ್ಕೆ ಸೇರಿಸುವುದರಲ್ಲಿ ಯಶಸ್ವಿಯಾದರು! ಸೋದರಮಾವನಾದ ಬೆನ್ರಿಗೆ ಮಾನಸಿಕವಾಗಿ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಆಸ್ಪತ್ರೆಯ ವೈದ್ಯರು ಆದಷ್ಟು ಬೇಗನೆ ಕಂಡುಹಿಡಿದರು ಮತ್ತು ಕ್ಷಮಾಯಾಚನೆಯೊಂದಿಗೆ ಅವರನ್ನು ಬಿಡುಗಡೆಮಾಡಿದರು.
ಸೋದರಮಾವನವರು ನನ್ನನ್ನು, ಬಾಸ್ಟನ್ನಲ್ಲಿದ್ದ ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳ ಕೂಟಗಳಿಗೆ ಕರೆದೊಯ್ಯುತ್ತಿದ್ದರು. ಅದರಲ್ಲೂ ವಿಶೇಷವಾಗಿ ಬೇರೆ ಸಭೆಗಳ ಭಾಷಣಕರ್ತರು ಭಾಷಣಗಳನ್ನು ಕೊಡಲು ಬರುವಾಗ ಅಥವಾ ವಿಶೇಷ ಘಟನೆಗಳಿದ್ದಾಗ ನಾನು ತಪ್ಪದೇ ಅವರೊಂದಿಗೆ ಹೋಗುತ್ತಿದ್ದೆ. ಒಂದು ಸಲ, ಭಾಷಣಕೊಡಲು ಬಂದ ಭಾಷಣಕರ್ತರು ಚಾರ್ಲ್ಸ್ ಟೇಸ್ ರಸ್ಸಲರೇ ಆಗಿದ್ದರು. ಆ ದಿನಗಳಲ್ಲಿ ಸಾರುವ ಕೆಲಸದ ಮೇಲ್ವಿಚಾರಣೆಯನ್ನು ಇವರೇ ನೋಡಿಕೊಳ್ಳುತ್ತಿದ್ದರು. ಇನ್ನೊಂದು ಸಂದರ್ಭದಲ್ಲಿ, “ಫೋಟೋ-ಡ್ರಾಮಾ ಆಫ್ ಕ್ರಿಯೇಷನ್” ಚಲನಚಿತ್ರವನ್ನು ತೋರಿಸುವ ವಿಶೇಷ ಏರ್ಪಾಡನ್ನೂ ಮಾಡಲಾಗಿತ್ತು. ಈ ಚಲನಚಿತ್ರವನ್ನು 1915ರಷ್ಟು ಹಿಂದೆ ನೋಡಿದೆನಾದರೂ, ಇಸಾಕನನ್ನು ಯಜ್ಞವಾಗಿ ಅರ್ಪಿಸಲಿಕ್ಕೋಸ್ಕರ ಅಬ್ರಹಾಮನು ಅವನನ್ನು ಬೆಟ್ಟಕ್ಕೆ ಕರೆದುಕೊಂಡುಹೋಗುತ್ತಿರುವ ಚಿತ್ರಣವು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. (ಆದಿಕಾಂಡ 22ನೆಯ ಅಧ್ಯಾಯ) ಅಬ್ರಹಾಮನೂ ಇಸಾಕನೂ ಸೇರಿಕೊಂಡು ಕಟ್ಟಿಗೆಯ ಹೊರೆಯೊಂದಿಗೆ ಕಷ್ಟಪಟ್ಟು ಬೆಟ್ಟವನ್ನು ಹತ್ತುತ್ತಿರುವ ದೃಶ್ಯವು ಈಗಲೂ ನನ್ನ ಕಣ್ಣುಗಳ ಮುಂದೆಯೇ ಇದೆ. ನಾನು ತಂದೆಯಿಲ್ಲದ ಹುಡುಗನಾಗಿದ್ದರಿಂದ, ಆ ದೃಶ್ಯವು ನನ್ನ ಮೇಲೆ ಬಲವಾದ ಪ್ರಭಾವವನ್ನು ಬೀರಿತು.
ತದನಂತರ, ನನ್ನ ಸೋದರಮಾವ ಹಾಗೂ ಅತ್ತೆಯವರು ಮೇನ್ಗೆ ಸ್ಥಳಾಂತರಿಸಿದರು. ನನ್ನ ತಾಯಿ ಇನ್ನೊಂದು ಮದುವೆಮಾಡಿಕೊಂಡರು ಮತ್ತು ನಮ್ಮ ಕುಟುಂಬವು ನ್ಯೂ ಜೆರ್ಸಿಗೆ ಸ್ಥಳಾಂತರಿಸಿತು. ಆದುದರಿಂದ, ಅನೇಕ ವರ್ಷಗಳ ವರೆಗೆ ನನ್ನ ಸೋದರಮಾವನವರನ್ನು ನಾನು ನೋಡಲೇ ಇಲ್ಲ. ನ್ಯೂ ಜೆರ್ಸಿಯಲ್ಲಿ ನನ್ನ ಹದಿಪ್ರಾಯದಲ್ಲಿದ್ದಾಗ, ನಾನು ಮೆರೀಅನ್ ನೆಫ್ಳನ್ನು ಭೇಟಿಯಾದೆ. ಒಂದು ಪ್ರೆಸ್ಬಿಟೇರಿಯನ್ ಕುಟುಂಬದ ಎಂಟು ಮಕ್ಕಳಲ್ಲಿ ಇವಳು ಒಬ್ಬಳಾಗಿದ್ದು, ನಾನು ಆಗಾಗ್ಗೆ ಇವಳ ಮನೆಗೆ ಹೋಗುತ್ತಿದ್ದೆ. ಈ ಕುಟುಂಬದೊಂದಿಗೆ ಮತ್ತು ಅವರ ಚರ್ಚಿನ ಯುವಕರ ಗುಂಪಿನೊಂದಿಗೆ ಭಾನುವಾರ ಸಾಯಂಕಾಲಗಳಂದು ನಾನು ಎಷ್ಟು ಸಮಯವನ್ನು ವ್ಯಯಿಸುತ್ತಿದ್ದೆ ಅಂದರೆ, ಕಾಲಕ್ರಮೇಣ ನಾನು ಸಹ ಪ್ರೆಸ್ಬಿಟೇರಿಯನ್ ಗುಂಪಿನ ಒಬ್ಬ ಸದಸ್ಯನಾಗಿಬಿಟ್ಟೆ. ಆದರೂ, ಬೈಬಲ್ ವಿದ್ಯಾರ್ಥಿಗಳ ಕೂಟಗಳಲ್ಲಿ ಕಲಿತಿದ್ದಂತಹ ಕೆಲವು ವಿಷಯಗಳನ್ನು ಮಾತ್ರ ನಾನು ಮರೆಯಲಿಲ್ಲ. 1928ರಲ್ಲಿ ನಾನು ಮತ್ತು ಮೆರೀಅನ್ ಮದುವೆ ಮಾಡಿಕೊಂಡೆವು. 1935 ಹಾಗೂ 1938ರಲ್ಲಿ ನಮ್ಮ ಹೆಣ್ಣುಮಕ್ಕಳಾದ ಡೋರಸ್ ಮತ್ತು ಲ್ವೀಸ್ ಜನಿಸಿದರು. ನಮ್ಮ ಕುಟುಂಬದಲ್ಲಿ ಒಂದು ಚಿಕ್ಕ ಮಗು ಹಾಗೂ ನವಜಾತ ಶಿಶುವಿದ್ದುದರಿಂದ, ನಮ್ಮ ಕುಟುಂಬವನ್ನು ಬೆಳೆಸುವುದರಲ್ಲಿ ಆತ್ಮಿಕ ಮಾರ್ಗದರ್ಶನದ ಆವಶ್ಯಕತೆಯಿದೆ ಎಂಬುದು ನಮ್ಮಿಬ್ಬರ ಅರಿವಿಗೆ ಬಂತು.
ಆ ಪುಸ್ತಿಕೆಗಳಲ್ಲಿ ಸತ್ಯವನ್ನು ಕಂಡುಹಿಡಿದದ್ದು
ನಾನು ಮತ್ತು ಮೆರೀಅನ್ ಇಬ್ಬರೂ, ಯಾವ ಚರ್ಚಿಗೆ ಸೇರಿಕೊಳ್ಳುವುದು ಎಂದು ಯೋಚಿಸುತ್ತಿದ್ದೆವು. ಇದಕ್ಕಾಗಿ ನಾವು ಒಂದು ಉಪಾಯವನ್ನು ಮಾಡಿದೆವು. ಅದೇನೆಂದರೆ, ಒಂದು ಭಾನುವಾರ ನಾನು, ಮತ್ತು ಇನ್ನೊಂದು ಭಾನುವಾರ ಮೆರೀಅನ್ಳು ಮನೆಯಲ್ಲಿ ಉಳಿದುಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದೆವು, ಹಾಗೂ ಸರದಿಯ ಪ್ರಕಾರ ನಮ್ಮಲ್ಲಿ ಒಬ್ಬರು ಒಂದೊಂದು ವಾರ ಒಂದೊಂದು ಚರ್ಚಿಗೆ ಭೇಟಿ ನೀಡುತ್ತಿದ್ದೆವು. ಒಂದು ಭಾನುವಾರ ಮನೆಯಲ್ಲಿ ಉಳಿಯುವುದು ಮೆರೀಅನ್ಳ ಸರದಿಯಾಗಿತ್ತು. ಆದರೆ ನಾನು ಮನೆಯಲ್ಲಿ ಉಳಿದುಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ನಾನವಳಿಗೆ ಹೇಳಿದೆ. ಏಕೆಂದರೆ ಶ್ರೀಮತಿ ಸ್ಟ್ಯಾಕ್ಹೌಸರು ನನಗೆ ಕೊಟ್ಟಿದ್ದ ಮೂರು ಪುಸ್ತಿಕೆಗಳಲ್ಲಿ ಒಂದಾಗಿದ್ದ ಸುರಕ್ಷೆ (ಇಂಗ್ಲಿಷ್) ಪುಸ್ತಿಕೆಯನ್ನು ಓದಲು ನಾನು ನಿರ್ಧರಿಸಿದ್ದೆ. ಆ ಪುಸ್ತಿಕೆಯನ್ನು ಓದಲಾರಂಭಿಸಿ ಮುಗಿಸುವ ತನಕ ಕೆಳಗಿಡಲು ಸಾಧ್ಯವಾಗಲೇ ಇಲ್ಲ! ಯಾವ ಚರ್ಚಿನಲ್ಲಿಯೂ ಕಂಡುಕೊಳ್ಳಲು ಸಾಧ್ಯವಿರದಂತಹ ಯಾವುದನ್ನೋ ನಾನು ಈ ಪುಸ್ತಿಕೆಯಲ್ಲಿ ಕಂಡುಕೊಂಡಿದ್ದೇನೆ ಎಂದು ನನಗೆ ಹೆಚ್ಚೆಚ್ಚು ಮನದಟ್ಟಾಗತೊಡಗಿತು. ಮುಂದಿನ ವಾರವೂ ಇದೇ ರೀತಿ ಸಂಭವಿಸಿತು. ಅಂದರೆ ಈ ಭಾನುವಾರವೂ ನಾನೇ ಮಕ್ಕಳನ್ನು ನೋಡಿಕೊಳ್ಳುತ್ತೇನೆಂದು ಮೆರೀಅನ್ಗೆ ಹೇಳಿ ಅವಳನ್ನು ಚರ್ಚಿಗೆ ಕಳುಹಿಸಿದೆ ಮತ್ತು ಅನಾವರಣ (ಇಂಗ್ಲಿಷ್) ಪುಸ್ತಿಕೆಯನ್ನು ಓದಿದೆ. ನಾನು ಓದುತ್ತಿದ್ದ ವಿಷಯವು ನನಗೆ ಚಿರಪರಿಚಿತವಾಗಿರುವಂತೆ ತೋರಿತು. ಸೋದರಮಾವನವರು ಇದನ್ನೇ ನಂಬುತ್ತಿದ್ದರೋ? ಅವರ ಧರ್ಮವು ವಿಚಿತ್ರವಾದದ್ದೆಂದು ನಮ್ಮ ಕುಟುಂಬವು ನೆನಸಿತ್ತು. ಮೆರೀಅನ್ ನನ್ನ ಬಗ್ಗೆ ಏನೆಂದುಕೊಳ್ಳುವಳೋ? ಇದರ ಬಗ್ಗೆ ನಾನು ಚಿಂತಿಸಬೇಕಾಗಿರಲಿಲ್ಲ. ಅನಾವರಣ ಪುಸ್ತಿಕೆಯನ್ನು ನಾನು ಓದಿದ ಕೆಲವು ದಿನಗಳ ಬಳಿಕ, ಕೆಲಸದಿಂದ ನಾನು ಹಿಂದಿರುಗಿದಾಗ, “ನೀವು ಮನೆಗೆ ತಂದ ಆ ಪುಸ್ತಿಕೆಗಳನ್ನು ನಾನು ಓದಿದೆ. ಅವು ನಿಜವಾಗಿಯೂ ಆಸಕ್ತಿಕರವಾಗಿವೆ” ಎಂದು ಮೆರೀಅನ್ ಹೇಳಿದ್ದು ನನಗೆ ನಿಜಕ್ಕೂ ಆಶ್ಚರ್ಯವನ್ನುಂಟುಮಾಡಿತು. ಆದರೆ ಇದನ್ನು ಕೇಳಿಸಿಕೊಂಡು ನನಗೆ ಎಷ್ಟು ನೆಮ್ಮದಿಯಾಯಿತು!
ಆ ಪುಸ್ತಿಕೆಗಳ ಕೊನೆಯ ಪುಟದಲ್ಲಿ, ಸುಳ್ಳು ಧರ್ಮವನ್ನು ತೀಕ್ಷ್ಣ ರೀತಿಯಲ್ಲಿ ಖಂಡಿಸಲಾದ ವೈರಿಗಳು (ಇಂಗ್ಲಿಷ್) ಎಂಬ ಪುಸ್ತಕದ ಕುರಿತಾದ ಮಾಹಿತಿಯಿತ್ತು ಮತ್ತು ಈ ಪುಸ್ತಕವು ಇತ್ತೀಚೆಗೆ ಬಿಡುಗಡೆಯಾಗಿತ್ತು. ನಾವು ಆ ಪುಸ್ತಕವನ್ನು ಪಡೆದುಕೊಳ್ಳಲು ನಿರ್ಧರಿಸಿದೆವು. ಆದರೂ, ಅಂಚೆಯ ಮೂಲಕ ಅದನ್ನು ತರಿಸಲು ಪ್ರಯತ್ನಿಸುವುದಕ್ಕೆ ಮೊದಲೇ, ಒಬ್ಬ ಸಾಕ್ಷಿಯು ನಮ್ಮ ಮನೆಗೆ ಭೇಟಿ ನೀಡಿದನು ಮತ್ತು ಆ ಪುಸ್ತಕವನ್ನೇ ನಮಗೆ ಕೊಟ್ಟನು. ನಾವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಅದೇ ಪುಸ್ತಕವು ನಮಗೆ ಸಹಾಯಮಾಡಿತು! ಬೇರೆ ಬೇರೆ ಚರ್ಚುಗಳಿಗೆ ಭೇಟಿ ನೀಡುವುದನ್ನು ನಾವು ನಿಲ್ಲಿಸಿಬಿಟ್ಟೆವು ಮತ್ತು ನ್ಯೂ ಜೆರ್ಸಿಯ ಕ್ಯಾಮ್ಡೆನ್ನಲ್ಲಿರುವ ಯೆಹೋವನ ಸಾಕ್ಷಿಗಳ ಕಂಪನಿಯ ಕೂಟಗಳಿಗೆ ಹೋಗಲು ಆರಂಭಿಸಿದೆವು. ಕೆಲವೇ ತಿಂಗಳುಗಳ ಬಳಿಕ, 1938, ಜುಲೈ 31ರ ಭಾನುವಾರದಂದು, ನಮ್ಮಲ್ಲಿ ಸುಮಾರು 50 ಮಂದಿ, ಸಹೋದರಿ ಸ್ಟ್ಯಾಕ್ಹೌಸರ ಮನೆಯ ತೋಟದಲ್ಲಿ ಒಟ್ಟುಗೂಡಿದೆವು; ನಾನು ಈಸ್ಟರ್ ಹಬ್ಬದ ಕೇಕ್ಗಳನ್ನು ಮಾರಲು ಪ್ರಯತ್ನಿಸಿದ್ದು ಇದೇ ಮನೆಯಲ್ಲಿ. ನಾವೆಲ್ಲರೂ ಜಡ್ಜ್ ರದರ್ಫರ್ಡ್ರ ರೆಕಾರ್ಡ್ಮಾಡಲ್ಪಟ್ಟ ದೀಕ್ಷಾಸ್ನಾನದ ಕುರಿತಾದ ಭಾಷಣವನ್ನು ಕೇಳಿಸಿಕೊಂಡೆವು. ತದನಂತರ ನಾವೆಲ್ಲರೂ ಅಲ್ಲಿಯೇ ವಸ್ತ್ರಗಳನ್ನು ಬದಲಾಯಿಸಿಕೊಂಡು, ನಮ್ಮಲ್ಲಿ 19 ಮಂದಿ ಸಮೀಪದಲ್ಲಿದ್ದ ಉಪನದಿಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆವು.
ಪಯನೀಯರನಾಗಲು ನಿರ್ಧರಿಸಿದ್ದು
ನನ್ನ ದೀಕ್ಷಾಸ್ನಾನವಾದ ಬಳಿಕ, ಸಾರ್ವಜನಿಕ ಶುಶ್ರೂಷೆಯನ್ನು ತಮ್ಮ ಮುಖ್ಯ ಚಟುವಟಿಕೆಯಾಗಿ ಮಾಡಿಕೊಳ್ಳುವಂತಹ, ಪಯನೀಯರರೆಂದು ಕರೆಯಲ್ಪಡುವ ಜನರ ಬಗ್ಗೆ ಸಭೆಯಲ್ಲಿದ್ದ ಒಬ್ಬ ಸಹೋದರಿ ನನಗೆ ಹೇಳಿದರು. ಆ ಕೂಡಲೆ ನನಗೆ ತುಂಬ ಕುತೂಹಲವುಂಟಾಯಿತು ಮತ್ತು ಎಲ್ಲರೂ ಪಯನೀಯರ್ ಸೇವೆಯನ್ನು ಮಾಡುತ್ತಿದ್ದ ಒಂದು ಕುಟುಂಬದ ಪರಿಚಯ ನನಗಾಯಿತು. ವೃದ್ಧ ವ್ಯಕ್ತಿಯಾಗಿದ್ದ ಕೋನಿಗ್, ಅವರ ಪತ್ನಿ, ಹಾಗೂ ಅವರ ಬೆಳೆದ ಮಗಳು—ಎಲ್ಲರೂ ನೆರೆಹೊರೆಯಲ್ಲಿದ್ದ ಸಭೆಯೊಂದರಲ್ಲಿ ಪಯನೀಯರರಾಗಿದ್ದರು. ಎಳೆಯ ಮಕ್ಕಳಿರುವ ಕುಟುಂಬದ ತಂದೆಯಾಗಿದ್ದ ನಾನು, ಶುಶ್ರೂಷೆಯಲ್ಲಿ ಕೋನಿಗ್ ಕುಟುಂಬವು ಪಡೆದುಕೊಳ್ಳುತ್ತಿದ್ದ ಆನಂದದಿಂದ ತುಂಬ ಪ್ರಭಾವಿತನಾದೆ. ಕೆಲವೊಮ್ಮೆ ನನ್ನ ಬೇಕರಿ ಟ್ರಕ್ಕನ್ನು ದಾರಿಯ ಬದಿಯಲ್ಲಿ ನಿಲ್ಲಿಸಿ, ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಅವರೊಂದಿಗೆ ಸಮಯವನ್ನು ಕಳೆಯುತ್ತಿದ್ದೆ. ಸ್ವಲ್ಪದರಲ್ಲೇ, ನಾನು ಸಹ ಒಬ್ಬ ಪಯನೀಯರನಾಗಬೇಕು ಎಂಬ ಬಯಕೆ ನನ್ನಲ್ಲಿ ಉಂಟಾಯಿತು. ಆದರೆ ಹೇಗೆ? ಏಕೆಂದರೆ ನಮಗೆ ಇಬ್ಬರು ಚಿಕ್ಕ ಮಕ್ಕಳಿದ್ದರು ಮತ್ತು ನನ್ನ ಕೆಲಸವು ಬಹಳಷ್ಟು ಸಮಯ ಹಾಗೂ ಪ್ರಯತ್ನವನ್ನು ಕೇಳಿಕೊಳ್ಳುತ್ತಿತ್ತು. ವಾಸ್ತವದಲ್ಲಿ, ಯೂರೋಪಿನಲ್ಲಿ IIನೆಯ ಲೋಕ ಯುದ್ಧವು ಆರಂಭವಾಗಿ ಅಮೆರಿಕದಲ್ಲಿದ್ದ ಹೆಚ್ಚೆಚ್ಚು ಪುರುಷರು ಮಿಲಿಟರಿ ಸೈನ್ಯಕ್ಕೆ ಸೇರಿಕೊಂಡಂತೆ, ಅಯೋಧ ಕೆಲಸಗಳಲ್ಲಿದ್ದವರಾದ ನಮಗೆ ಅತ್ಯಧಿಕ ಪ್ರಮಾಣದಲ್ಲಿ ಕೆಲಸವನ್ನು ಮಾಡಲಿಕ್ಕಿತ್ತು. ಇನ್ನೂ ಬೇರೆ ಕಡೆಗಳಲ್ಲಿ ಹೋಗಿ ಕೇಕನ್ನು ಮಾರುವಂತೆ ನನ್ನನ್ನು ಪ್ರೋತ್ಸಾಹಿಸಲಾಗುತ್ತಿತ್ತು ಮತ್ತು ಒಂದುವೇಳೆ ಈ ರೀತಿಯ ಕಾರ್ಯತಖ್ತೆಯು ಇರುವಲ್ಲಿ ನಾನು ಎಂದಿಗೂ ಪಯನೀಯರ್ ಸೇವೆಯನ್ನು ಮಾಡಲಾರೆನೆಂಬುದು ನನಗೆ ಗೊತ್ತಿತ್ತು.
ಪಯನೀಯರ್ ಸೇವೆಯನ್ನು ಮಾಡುವ ನನ್ನ ಬಯಕೆಯ ಕುರಿತು ಸಹೋದರ ಕೋನಿಗ್ರೊಂದಿಗೆ ಮಾತಾಡಿದಾಗ, ಅವರು ಹೇಳಿದ್ದು: “ಯೆಹೋವನ ಸೇವೆಯಲ್ಲಿ ಕಷ್ಟಪಟ್ಟು ಕೆಲಸಮಾಡುತ್ತಿರು ಮತ್ತು ನಿನ್ನ ಗುರಿಯ ಕುರಿತು ಪ್ರಾರ್ಥನೆಯಲ್ಲಿ ಆತನನ್ನು ಬೇಡಿಕೊ. ನಿನ್ನ ಗುರಿಯನ್ನು ತಲಪುವಂತೆ ಆತನೇ ನಿನಗೆ ಸಹಾಯಮಾಡುವನು.” ಒಂದು ವರ್ಷದ ತನಕ ನಾನು ಹೀಗೆಯೇ ಮಾಡುತ್ತಿದ್ದೆ. ನಾವು ಯೆಹೋವನ ಬಳಿ ಬೇಡಿಕೊಳ್ಳುವುದಕ್ಕಿಂತ ಮುಂಚೆಯೇ ನಮಗೆ ಏನೇನು ಅಗತ್ಯವಿದೆ ಎಂಬುದು ಆತನಿಗೆ ತಿಳಿದಿರುತ್ತದೆ ಎಂಬ ಆಶ್ವಾಸನೆ ನೀಡುವ ಮತ್ತಾಯ 6:8ರಂತಹ ಶಾಸ್ತ್ರವಚನಗಳ ಕುರಿತು ನಾನು ಮನನಮಾಡಿದೆ. ಮತ್ತು ಮತ್ತಾಯ 6:33ರಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು ನಾನು ಅನುಸರಿಸಲು ಪ್ರಯತ್ನಿಸುತ್ತಾ, ದೇವರ ರಾಜ್ಯಕ್ಕೂ ಆತನ ನೀತಿಗೂ ಪ್ರಥಮ ಸ್ಥಾನವನ್ನು ಕೊಡತೊಡಗಿದೆ. ಸೋನ್ ಸೇವಕರಾಗಿದ್ದ (ಇಂದು ಸರ್ಕಿಟ್ ಮೇಲ್ವಿಚಾರಕ ಎಂದು ಕರೆಯಲಾಗುತ್ತದೆ) ಸಹೋದರ ಮೆಲ್ವಿನ್ ವಿನ್ಚೆಸ್ಟರ್ ಸಹ ನನಗೆ ತುಂಬ ಉತ್ತೇಜನ ನೀಡಿದರು.
ನನ್ನ ಗುರಿಗಳ ಕುರಿತು ನಾನು ಮೆರೀಅನ್ಳೊಂದಿಗೆ ಮಾತಾಡಿದೆ. ಮಲಾಕಿಯ 3:10ರಲ್ಲಿರುವ ಮಾತುಗಳ ಬಗ್ಗೆ ನಾವು ಮಾತಾಡಿಕೊಂಡೆವು. ನಮ್ಮ ಮೇಲೆ ಯೆಹೋವನು ಸುವರವನ್ನು ಸುರಿಸುವನೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ನೋಡುವಂತೆ ಈ ವಚನವು ನಮ್ಮನ್ನು ಉತ್ತೇಜಿಸುತ್ತದೆ. ನನ್ನ ಪತ್ನಿಯ ಉತ್ತರದಿಂದ ನಿಜವಾಗಿಯೂ ನನಗೆ ಪ್ರೋತ್ಸಾಹ ಸಿಕ್ಕಿತು: “ನೀವು ಪಯನೀಯರ್ ಸೇವೆಯನ್ನು ಮಾಡಲು ಬಯಸುವಲ್ಲಿ, ನನ್ನ ಕಾರಣದಿಂದ ಅದನ್ನು ಮುಂದೂಡಬೇಡಿ. ನೀವು ಪಯನೀಯರ್ ಸೇವೆಯನ್ನು ಮಾಡುತ್ತಿರುವಾಗ ನಾನು ಹುಡುಗಿಯರನ್ನು ನೋಡಿಕೊಳ್ಳಬಲ್ಲೆ. ಹೇಗಿದ್ದರೂ ನಮಗೆ ಭೌತಿಕ ರೀತಿಯಲ್ಲಿ ಹೆಚ್ಚಿನದ್ದರ ಆವಶ್ಯಕತೆಯಿಲ್ಲ.” ವಿವಾಹವಾಗಿ ಈಗಾಗಲೇ 12 ವರ್ಷಗಳು ಕಳೆದಿದ್ದುದರಿಂದ, ಮೆರೀಅನ್ ತುಂಬ ಮಿತವಾಗಿ ಖರ್ಚುಮಾಡುವ ಹಾಗೂ ಜಾಗರೂಕತೆಯಿಂದ ಕಾರ್ಯನಿರ್ವಹಿಸುವ ಗೃಹಿಣಿ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಅನೇಕ ವರ್ಷಗಳಿಂದ ಅವಳು ಒಬ್ಬ ಅತ್ಯುತ್ತಮ ಪಯನೀಯರ್ ಸಂಗಾತಿಯೋಪಾದಿಯೂ ಸಹಾಯ ನೀಡಿದ್ದಾಳೆ. 60 ವರ್ಷಗಳ ಪೂರ್ಣ ಸಮಯದ ಸೇವೆಯಲ್ಲಿ ನಾವು ಯಶಸ್ಸನ್ನು ಪಡೆದುಕೊಳ್ಳಲು ಕಾರಣವಾಗಿರುವ ಗುಟ್ಟುಗಳಲ್ಲಿ ಒಂದು, ನಮ್ಮಲ್ಲಿ ಭೌತಿಕವಾಗಿ ಎಷ್ಟೇ ಕಡಿಮೆಯಿದ್ದರೂ ಅದರಲ್ಲೇ ತೃಪ್ತಿಪಟ್ಟುಕೊಂಡು, ನಮ್ಮಲ್ಲಿ ಸಾಕಷ್ಟು ಇದೆಯೆಂದು ಭಾವಿಸಿಕೊಳ್ಳುವ ಅವಳ ಸಾಮರ್ಥ್ಯವೇ ಆಗಿದೆ.
ಅನೇಕ ತಿಂಗಳುಗಳ ವರೆಗೆ ಪ್ರಾರ್ಥನಾಪೂರ್ವಕವಾಗಿ ಯೋಜನೆಯನ್ನು ಮಾಡಿದ ಬಳಿಕ, 1941ರ ಬೇಸಗೆಯಷ್ಟಕ್ಕೆ ನಾನು ಮತ್ತು ಮೆರೀಅನ್ ಸ್ವಲ್ಪ ಹಣವನ್ನು ಕೂಡಿಸಿದೆವು. ಈ ಹಣದಿಂದ, ನಮ್ಮ ಕುಟುಂಬವು ವಾಸಿಸುವಷ್ಟು ದೊಡ್ಡದಾಗಿದ್ದು, 5.5 ಮೀಟರ್ಗಳಷ್ಟು ಉದ್ದವಾಗಿದ್ದ ಟ್ರೇಲರ್ (ಗಾಡಿ) ಅನ್ನು ಖರೀದಿಸಿದೆವು. ನಾನು ಉದ್ಯೋಗವನ್ನು ಬಿಟ್ಟುಬಿಟ್ಟೆ ಮತ್ತು 1941ರ ಜುಲೈ ತಿಂಗಳಲ್ಲಿ ರೆಗ್ಯುಲರ್ ಪಯನೀಯರನಾದೆ. ಅಂದಿನಿಂದ ಇಂದಿನ ತನಕ ನಾನು ಪೂರ್ಣ ಸಮಯದ ಸೇವೆಯಲ್ಲೇ ಇದ್ದೇನೆ. ನ್ಯೂ ಜೆರ್ಸಿ ಮತ್ತು ಮಿಸೂರಿಯ ಸೆಂಟ್ ಲೂಯಿಸ್ನ ನಡುವಿನ ರೂಟ್ 50ರಲ್ಲಿರುವ ಹತ್ತು ಬಸ್ ಸ್ಟಾಪ್ಗಳೇ ನನ್ನ ಮೊದಲ ನೇಮಕವಾಗಿದ್ದವು. ಆಗಸ್ಟ್ ತಿಂಗಳ ಆರಂಭದಲ್ಲಿ ಇಲ್ಲಿಯೇ ನಮ್ಮ ಅಧಿವೇಶನವು ನಡೆಯಲಿತ್ತು. ದಾರಿಯುದ್ದಕ್ಕೂ ಯಾವ ಯಾವ ಸ್ಥಳಗಳಲ್ಲಿ ಸಹೋದರರು ವಾಸಿಸುತ್ತಿದ್ದರೋ ಅವರ ಹೆಸರುಗಳು ಮತ್ತು ವಿಳಾಸಗಳು ನನಗೆ ಕಳುಹಿಸಲ್ಪಟ್ಟಿದ್ದವು. ಆದುದರಿಂದ, ಅವರು ನಮ್ಮನ್ನು ಯಾವಾಗ ನಿರೀಕ್ಷಿಸಸಾಧ್ಯವಿದೆ ಎಂಬುದನ್ನು ವಿವರಿಸುತ್ತಾ ನಾನು ಮುಂದಾಗಿಯೇ ಅವರಿಗೆ ಪತ್ರಗಳನ್ನು ಬರೆಯುತ್ತಿದ್ದೆ. ನಾವು ಅಧಿವೇಶನಕ್ಕೆ ಹೋದಾಗ, ಇನ್ನೊಂದು ನೇಮಕವನ್ನು ಪಡೆಯಲಿಕ್ಕಾಗಿ ನಾನು ಪಯನೀಯರ್ ಡೆಸ್ಕಿಗೆ ಹೋಗಬೇಕಾಗಿತ್ತು.
“ನಾನು ಯೆಹೋವನನ್ನು ಪರೀಕ್ಷಿಸುವೆ”
ನಮ್ಮ ಚಿಕ್ಕ ಟ್ರೇಲರ್ನಲ್ಲಿ ನಾವು ಸಾಹಿತ್ಯವನ್ನು ತುಂಬಿಸಿದೆವು ಮತ್ತು ಸಹೋದರರಿಗೆ ವಿದಾಯ ಹೇಳಲಿಕ್ಕಾಗಿ ಕ್ಯಾಮ್ಡೆನ್ನಲ್ಲಿ ನಮ್ಮ ಕೊನೆಯ ಕೂಟಕ್ಕೆ ಹೋದೆವು. ಇಬ್ಬರು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮಗಿದ್ದುದರಿಂದ ಮತ್ತು ಅಧಿವೇಶನದ ನಂತರ ಹೋಗಿ ಸೇರಬೇಕಾದ ಸ್ಥಳ ಯಾವುದು ಎಂಬುದು ನಮಗೆ ಗೊತ್ತಿರಲಿಲ್ಲವಾದ್ದರಿಂದ, ಕೆಲವು ಸಹೋದರರಿಗೆ ನಮ್ಮ ಯೋಜನೆಗಳು ಅವಾಸ್ತವಿಕವಾಗಿ ಕಂಡುಬಂದಿರಬೇಕು. ಆದುದರಿಂದ, ಅವರಲ್ಲಿ ಅನೇಕರು ಹೇಳಿದ್ದು: “ನೀವು ಬೇಗನೆ ಹಿಂದೆ ಬರುವಿರಿ.” ಆದರೆ “ನಾವು ಹಿಂದೆ ಬರುವುದಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ನಿನ್ನನ್ನು ನೋಡಿಕೊಳ್ಳುತ್ತೇನೆಂದು ಯೆಹೋವನು ಹೇಳಿದ್ದಾನೆ, ಮತ್ತು ನಾನು ಯೆಹೋವನನ್ನು ಪರೀಕ್ಷಿಸುವೆ” ಎಂದು ನಾನು ಹೇಳಿದ್ದು ನನಗೆ ಇನ್ನೂ ನೆನಪಿದೆ.
ಮ್ಯಾಸಚೂಸೆಟ್ಸ್ನಿಂದ ಮಿಸಿಸಿಪಿಯ ವರೆಗಿನ 20 ಪಟ್ಟಣಗಳಲ್ಲಿ ಆರು ದಶಕಗಳ ತನಕ ಪಯನೀಯರ್ ಸೇವೆಮಾಡಿದ ಬಳಿಕ, ಯೆಹೋವನು ತನ್ನ ವಚನವನ್ನು ನೆರವೇರಿಸುವುದಕ್ಕಿಂತಲೂ ಹೆಚ್ಚನ್ನು ಮಾಡಿದ್ದಾನೆ ಎಂದು ನಾವು ಹೇಳಬಲ್ಲೆವು. ಮೆರೀಅನ್ಳ ಮೇಲೆ, ನನ್ನ ಮೇಲೆ, ಮತ್ತು ನಮ್ಮ ಇಬ್ಬರು ಪುತ್ರಿಯರ ಮೇಲೆ ಆತನು ಸುರಿಸಿರುವ ಆಶೀರ್ವಾದಗಳು, 1941ರಷ್ಟು ಹಿಂದೆ ನಾನು ನಿರೀಕ್ಷಿಸಿದ್ದಕ್ಕಿಂತಲೂ ಎಷ್ಟೋ ಅತ್ಯಧಿಕವಾಗಿದ್ದವು. ಈ ಆಶೀರ್ವಾದಗಳಲ್ಲಿ, ನಮ್ಮ ಪುತ್ರಿಯರು ಸಮೀಪದ ಸಭೆಗಳಲ್ಲಿ ನಂಬಿಗಸ್ತ ಪಯನೀಯರರಾಗಿ ಸೇವೆಮಾಡುವುದು, ಮತ್ತು ಅಮೆರಿಕದ ಪೂರ್ವ ತೀರದಲ್ಲಿ ಚೆದುರಿರುವ ಹೆಚ್ಚುಕಡಿಮೆ (ಕಳೆದ ಬಾರಿ ಲೆಕ್ಕಿಸಿದಾಗ) ಒಂದು ನೂರು ಮಂದಿ ಆತ್ಮಿಕ ಪುತ್ರರು ಹಾಗೂ ಪುತ್ರಿಯರನ್ನು ನಾವು ಪಡೆದುಕೊಂಡಿರುವುದು ಸಹ ಒಳಗೂಡಿದೆ. ತಮ್ಮ ಜೀವಿತಗಳನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡ 52 ವ್ಯಕ್ತಿಗಳೊಂದಿಗೆ ನಾನು ಅಭ್ಯಾಸಮಾಡಿದ್ದೇನೆ ಮತ್ತು ಸುಮಾರು 48 ವ್ಯಕ್ತಿಗಳೊಂದಿಗೆ ಮೆರೀಅನ್ ಅಭ್ಯಾಸಮಾಡಿದ್ದಾಳೆ.
ಇಸವಿ 1941ರ ಆಗಸ್ಟ್ ತಿಂಗಳಿನಲ್ಲಿ ನಾವು ಸೆಂಟ್ ಲೂಯಿಸ್ಗೆ ಹೋದೆವು ಮತ್ತು ಬೆತೆಲ್ನ ಸಹೋದರ ಟಿ. ಜೆ. ಸಲಿವನ್ರನ್ನು ಭೇಟಿಯಾದೆವು. ನನ್ನ ಆರ್ಡಿನೇಷನ್ ಪತ್ರವು ಅವರ ಬಳಿಯಲ್ಲಿತ್ತು; ಆದರೆ ಯುದ್ಧವು ಹತ್ತಿರವಾಗಿದ್ದು, ಪುರುಷರನ್ನು ಬಲಾತ್ಕಾರದಿಂದ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದ ಕಾರಣ ಈಗ ಆ ಪತ್ರವು ನನಗೆ ಬೇಕಾಗಿತ್ತು. ಶುಶ್ರೂಷೆಯಲ್ಲಿ ನಾನು ಎಷ್ಟು ಸಮಯವನ್ನು ಕಳೆಯುತ್ತೇನೋ ಅಷ್ಟೇ ಸಮಯವನ್ನು ನನ್ನ ಹೆಂಡತಿಯು ಸಹ ಕಳೆಯುತ್ತಿದ್ದಾಳೆ ಮತ್ತು ಅವಳು ಸಹ ನನ್ನೊಂದಿಗೆ ಪಯನೀಯರ್ ಸೇವೆಯನ್ನು ಮಾಡಲು ಬಯಸುತ್ತಾಳೆ ಎಂದು ನಾನು ಸಹೋದರ ಸಲಿವನ್ರಿಗೆ ಹೇಳಿದೆ. ಆಗ ಅಧಿವೇಶನದಲ್ಲಿ ಪಯನೀಯರ್ ಡೆಸ್ಕ್ ಇನ್ನೂ ತೆರೆದಿರಲಿಲ್ಲವಾದರೂ, ಈ ಕೂಡಲೆ ಸಹೋದರ ಸಲಿವನ್ ಮೆರೀಅನ್ಳನ್ನು ಪಯನೀಯರಳಾಗಿ ನೇಮಿಸಿದರು. ಇದಲ್ಲದೆ ಅವರು ನಮಗೆ ಕೇಳಿದ್ದು: “ಅಧಿವೇಶನದ ಬಳಿಕ ನೀವು ಎಲ್ಲಿ ಪಯನೀಯರ್ ಸೇವೆಯನ್ನು ಮಾಡುವಿರಿ?” ಅದು ನಮಗೇ ಗೊತ್ತಿರಲಿಲ್ಲ. ಬಳಿಕ ಅವರೇ ಹೇಳಿದ್ದು: “ಇರಲಿ, ಚಿಂತಿಸಬೇಡಿ. ಪಯನೀಯರರ ಅಗತ್ಯವಿರುವ ಒಂದು ಕ್ಷೇತ್ರದಿಂದ ಬಂದಿರುವಂತಹ ಯಾರನ್ನಾದರೂ ನೀವು ಅಧಿವೇಶನದಲ್ಲಿ ಭೇಟಿಯಾಗುವಿರಿ ಮತ್ತು ನಿಮ್ಮ ಸಮಸ್ಯೆಯು ಬಗೆಹರಿಸಲ್ಪಡುವುದು. ನೀವು ಎಲ್ಲಿದ್ದೀರಿ ಎಂಬುದನ್ನು ಪತ್ರದ ಮೂಲಕ ನಮಗೆ ತಿಳಿಸಿರಿ, ನಾವೇ ನಿಮಗೆ ನೇಮಕ ಪತ್ರವನ್ನು ಕಳುಹಿಸುತ್ತೇವೆ.” ಹೀಗೆಯೇ ಆಯಿತು. ಮಾಜಿ ಸೋನ್ ಸೇವಕರಾಗಿದ್ದ ಸಹೋದರ ಜ್ಯಾಕ್ ಡವಿಟ್ರಿಗೆ, ವರ್ಜಿನಿಯದ ನ್ಯೂ ಮಾರ್ಕೆಟ್ನಲ್ಲಿ ಪಯನೀಯರ್ ಹೋಮ್ ಇದ್ದ ಕೆಲವರ ಪರಿಚಯವಿತ್ತು. ಇದರಲ್ಲಿ ಇನ್ನಷ್ಟು ಪಯನೀಯರರಿಗೆ ಸ್ಥಳಾವಕಾಶವಿತ್ತು. ಹೀಗೆ, ಅಧಿವೇಶನದ ಬಳಿಕ ನಾವು ನ್ಯೂ ಮಾರ್ಕೆಟ್ಗೆ ಪ್ರಯಾಣಿಸಿದೆವು.
ನ್ಯೂ ಮಾರ್ಕೆಟ್ನಲ್ಲಿ ನಮಗೆ ಒಂದು ವಿಶೇಷ ಆಶ್ಚರ್ಯವು ಕಾದಿತ್ತು. ಪಯನೀಯರ್ ಕೆಲಸದಲ್ಲಿ ನಮ್ಮೊಂದಿಗೆ ಜೊತೆಗೂಡಲಿಕ್ಕಾಗಿ ಫಿಲಡೆಲ್ಫಿಯದಿಂದ ಬೆಂಜಮಿನ್ ರ್ಯಾನ್ಸಮ್ ಅಲ್ಲದೆ ಇನ್ಯಾರು ಬರಲಿಕ್ಕಿದ್ದರು? ಹೌದು, ಸೋದರಮಾವ ಬೆನ್ರವರೇ. ಬಾಸ್ಟನ್ನಲ್ಲಿದ್ದಾಗ ನನ್ನ ಹೃದಯದಲ್ಲಿ ಸತ್ಯದ ಬೀಜಗಳನ್ನು ಅವರು ಬಿತ್ತಿದ 25ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ, ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಅವರೊಂದಿಗೆ ಕೆಲಸಮಾಡುವುದು ಎಷ್ಟು ಆನಂದಮಯ ಅನುಭವವಾಗಿತ್ತು! ಅನೇಕ ವರ್ಷಗಳ ವರೆಗೆ ಕುಟುಂಬದಿಂದ ತಾತ್ಸಾರ, ಅವಮಾನ ಹಾಗೂ ಹಿಂಸೆಯನ್ನು ಎದುರಿಸಿದ್ದರೂ, ಸೋದರಮಾವ ಬೆನ್ರವರು ಯೆಹೋವನಿಗಾಗಿ ಮತ್ತು ಶುಶ್ರೂಷೆಗಾಗಿದ್ದ ತಮ್ಮ ಪ್ರೀತಿಯನ್ನು ಎಂದೂ ಕಳೆದುಕೊಂಡಿರಲಿಲ್ಲ.
ನ್ಯೂ ಮಾರ್ಕೆಟ್ನ ಪಯನೀಯರ್ ಹೋಮ್ನಲ್ಲಿ ನಾವು ಎಂಟು ತಿಂಗಳ ವರೆಗೆ ಉಳಿದೆವು ಮತ್ತು ಆನಂದಿಸಿದೆವು. ಆ ಸಮಯದಲ್ಲಿ ನಾವು ಅನೇಕ ವಿಷಯಗಳನ್ನು ಕಲಿತುಕೊಂಡೆವು. ಸಾಹಿತ್ಯಕ್ಕೆ ಬದಲಾಗಿ ಕೋಳಿಗಳು ಹಾಗೂ ಮೊಟ್ಟೆಗಳನ್ನು ಹೇಗೆ ವಿನಿಮಯಮಾಡಿಕೊಳ್ಳುವುದು ಎಂಬುದನ್ನೂ ಕಲಿತೆವು. ತದನಂತರ ಸೋದರಮಾವನವರಾದ ಬೆನ್, ಮೆರೀಅನ್, ನಾನು ಹಾಗೂ ಇನ್ನೂ ಮೂರು ಮಂದಿ, ಪೆನ್ಸಿಲ್ವೇನಿಯದ ಹ್ಯಾನೋವರ್ನಲ್ಲಿ ವಿಶೇಷ ಪಯನೀಯರರಾಗಿ ಸೇವೆಮಾಡುವಂತೆ ನೇಮಿಸಲ್ಪಟ್ಟೆವು. 1942ರಿಂದ 1945ರ ವರೆಗೆ ಪೆನ್ಸಿಲ್ವೇನಿಯದಲ್ಲಿ ನಾವು ಪಡೆದುಕೊಳ್ಳಲಿದ್ದ ಆರು ನೇಮಕಗಳಲ್ಲಿ ಇದು ಮೊದಲನೆಯದಾಗಿತ್ತು.
ಎರಡನೆಯ ಲೋಕ ಯುದ್ಧದ ಸಮಯದಲ್ಲಿ ವಿಶೇಷ ಪಯನೀಯರರು
ನಮ್ಮ ತಟಸ್ಥ ನಿಲುವಿನ ಕಾರಣ, IIನೆಯ ಲೋಕ ಯುದ್ಧದ ಸಮಯದಲ್ಲಿ ನಾವು ಹಗೆತನವನ್ನು ಎದುರಿಸಬೇಕಾದ ಸಮಯಗಳೂ ಇದ್ದವು. ಆದರೆ ಯೆಹೋವನು ನಮಗೆ ಅಗತ್ಯವಿರುವ ಬೆಂಬಲವನ್ನು ನೀಡಲು ಮರೆಯಲಿಲ್ಲ. ಒಂದು ಸಲ ಮ್ಯಾಸಚೂಸೆಟ್ಸ್ನ ಪ್ರಾವಿನ್ಸ್ಟೌನ್ನಲ್ಲಿ, ನಮ್ಮ ಹಳೆಯ ಬ್ಯೂಯಿಕ್ ಗಾಡಿ ದಾರಿಯಲ್ಲೇ ಕೈಕೊಟ್ಟಿತು. ಮತ್ತು ಒಂದು ಪುನರ್ಭೇಟಿಯನ್ನು ಮಾಡಲಿಕ್ಕಾಗಿ ಒಂದು ಕ್ಯಾಥೊಲಿಕ್ ಬಡಾವಣೆಯ ದಾರಿಯಲ್ಲಿ ಕೆಲವು ಕಿಲೊಮೀಟರುಗಳ ವರೆಗೆ ನಡೆಯಬೇಕಾಗಿತ್ತು. ಆ ಕ್ಯಾಥೊಲಿಕರು ನಮ್ಮನ್ನು ತುಂಬ ದ್ವೇಷಿಸುತ್ತಿದ್ದರು. ನಾನು ತರುಣ ಪುಂಡರ ಒಂದು ಗುಂಪಿನ ಪಕ್ಕದಲ್ಲೇ ಹಾದುಹೋಗುತ್ತಿದ್ದಾಗ, ಅವರು ನನ್ನನ್ನು ಗುರುತಿಸಿದರು ಮತ್ತು ಜೋರಾಗಿ ಬೈಯತೊಡಗಿದರು. ಅವರು ನನ್ನನ್ನು ಬೆನ್ನಟ್ಟದಿರಲಿಕ್ಕಾಗಿ ನಾನು ಬೇಗ ಬೇಗ ನಡೆಯತೊಡಗಿದೆ, ಆದರೆ ಅವರು ನನ್ನ ಮೇಲೆ ಎಸೆಯುತ್ತಿದ್ದ ಕಲ್ಲುಗಳ ಶಬ್ದ ನನ್ನ ಕಿವಿಗೆ ಬೀಳುತ್ತಿತ್ತು. ಯಾವುದೇ ಗಾಯವಿಲ್ಲದೆ ನಾನು ಆ ಆಸಕ್ತ ವ್ಯಕ್ತಿಯ ಮನೆಗೆ ಬಂದು ಮುಟ್ಟಿದೆ. ಆದರೆ ಅಮೆರಿಕನ್ ಲೀಜನ್ನ ಗೌರವಾನ್ವಿತ ಸದಸ್ಯನಾಗಿದ್ದ ಮನೆಯವನು, ಕ್ಷಮೆಯಾಚಿಸುತ್ತಾ ನನಗೆ ಹೇಳಿದ್ದು: “ಈ ದಿನ ನಾನು ನಿಮ್ಮೊಂದಿಗೆ ಸಮಯವನ್ನು ಕಳೆಯಲಾರೆ. ಏಕೆಂದರೆ ಒಂದು ಚಲನಚಿತ್ರವನ್ನು ನೋಡಲಿಕ್ಕಾಗಿ ನಾವು ನಗರಕ್ಕೆ ಹೋಗುತ್ತಿದ್ದೇವೆ ಎಂದು ಹೇಳಲು ಮರೆತೇಬಿಟ್ಟಿದ್ದೆ.” ನಾನು ಬರುತ್ತಿರುವಾಗ ಕಲ್ಲುಗಳನ್ನು ಎಸೆದು, ನನ್ನ ಹಿಂದಿರುಗುವಿಕೆಗಾಗಿ ಕಾಯುತ್ತಿರುವ ಆ ಪುಂಡರ ಗುಂಪನ್ನು ನೆನಸಿಕೊಂಡು ನನಗೆ ತುಂಬ ಭಯವಾಯಿತು. ಆದರೆ, “ನೀವೇಕೆ ನಮ್ಮ ಜೊತೆಯೇ ಅಷ್ಟು ದೂರ ಬರಬಾರದು? ನಾವು ದಾರಿಯಲ್ಲೇ ಮಾತಾಡಿಕೊಂಡು ಹೋಗಬಹುದಲ್ಲಾ” ಎಂದು ಆ ವ್ಯಕ್ತಿಯು ಹೇಳಿದಾಗ ನಾನು ಧೈರ್ಯತಂದುಕೊಂಡೆ. ಹೀಗೆ ನಾನು ಅವನಿಗೆ ಬೈಬಲಿನ ಬಗ್ಗೆ ಹೆಚ್ಚನ್ನು ತಿಳಿಸಲು ಸಾಧ್ಯವಾಯಿತು ಮತ್ತು ಆ ಅಪಾಯದ ಸ್ಥಳದಿಂದ ಸುರಕ್ಷಿತವಾಗಿ ಮನೆಯನ್ನು ಮುಟ್ಟಿದೆ.
ಕುಟುಂಬ ಹಾಗೂ ಶುಶ್ರೂಷೆಯ ಜವಾಬ್ದಾರಿಗಳನ್ನು ಸರಿದೂಗಿಸುವುದು
ಯುದ್ಧದ ಬಳಿಕ ನಾವು ವರ್ಜಿನಿಯದ ಬೇರೆ ಬೇರೆ ಸ್ಥಳಗಳಲ್ಲಿ ಸೇವೆಮಾಡಿದೆವು; ಶಾರ್ಲಟ್ಸ್ವಿಲ್ನಲ್ಲಿ ವಿಶೇಷ ಹಾಗೂ ರೆಗ್ಯುಲರ್ ಪಯನೀಯರರಾಗಿ ಎಂಟು ವರ್ಷ ಸೇವೆಮಾಡಿದ್ದೂ ಇದರಲ್ಲಿ ಒಳಗೂಡಿದೆ. 1956ರಷ್ಟಕ್ಕೆ ನಮ್ಮ ಪುತ್ರಿಯರು ದೊಡ್ಡವರಾಗಿ ಮದುವೆಯಾಗಿದ್ದರು. ನಾನು ಮತ್ತು ಮೆರೀಅನ್ ವರ್ಜಿನಿಯದ ಹ್ಯಾರಿಸನ್ಬರ್ಗ್ನಲ್ಲಿ ಪಯನೀಯರರಾಗಿಯೂ ಉತ್ತರ ಕ್ಯಾರೊಲೈನದ ಲಿಂಕಲ್ಟನ್ನಲ್ಲಿ ವಿಶೇಷ ಪಯನೀಯರರಾಗಿಯೂ ಸೇವೆಮಾಡುತ್ತಾ, ಪುನಃ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸತೊಡಗಿದೆವು.
ಇಸವಿ 1966ರಲ್ಲಿ ನನ್ನನ್ನು ಸರ್ಕಿಟ್ ಕೆಲಸಕ್ಕೆ ನೇಮಿಸಲಾಯಿತು. 1930ಗಳಲ್ಲಿ ನ್ಯೂ ಜೆರ್ಸಿಯಲ್ಲಿ ಸಹೋದರ ವಿನ್ಚೆಸ್ಟರರು ನನಗೆ ಮಾಡಿದಂತೆಯೇ, ಒಂದು ಸಭೆಯಿಂದ ಇನ್ನೊಂದು ಸಭೆಗೆ ಹೋಗಿ ಸಹೋದರರನ್ನು ಉತ್ತೇಜಿಸುವುದೇ ನನ್ನ ನೇಮಕವಾಗಿತ್ತು. ಎರಡು ವರ್ಷಗಳ ವರೆಗೆ ನಾನು ಟೆನೆಸೀಯಲ್ಲಿರುವ ಸಭೆಗಳ ಸರ್ಕಿಟ್ನಲ್ಲಿ ಸೇವೆಮಾಡಿದೆ. ತದನಂತರ ನನಗೆ ಹಾಗೂ ಮೆರೀಅನ್ಳಿಗೆ ವಿಶೇಷ ಪಯನೀಯರ್ ಸೇವೆಗೆ ಹಿಂದಿರುಗುವಂತೆ ಕೇಳಿಕೊಳ್ಳಲಾಯಿತು. ಖಂಡಿತವಾಗಿಯೂ ವಿಶೇಷ ಪಯನೀಯರ್ ಸೇವೆಯನ್ನು ನಾವು ತುಂಬ ಇಷ್ಟಪಡುತ್ತಿದ್ದೆವು. 1968ರಿಂದ 1977ರ ತನಕ, ಜಾರ್ಜಿಯದಿಂದ ಮಿಸಿಸಿಪ್ಪಿಯ ತನಕ ಇರುವ ಅಮೆರಿಕದ ದಕ್ಷಿಣ ಭಾಗದ ಬೇರೆ ಬೇರೆ ಸ್ಥಳಗಳಲ್ಲಿ ನಾವು ವಿಶೇಷ ಪಯನೀಯರರಾಗಿ ಸೇವೆಮಾಡಿದೆವು.
ಜಾರ್ಜಿಯದ ಈಸ್ಟ್ಮನ್ನಲ್ಲಿ, ಪವೆಲ್ ಕರ್ಕ್ಲಂಡ್ ಎಂಬ ಸಹೋದರರ ಸ್ಥಾನದಲ್ಲಿ ನನ್ನನ್ನು ಸಭಾ ಮೇಲ್ವಿಚಾರಕನನ್ನಾಗಿ (ಈಗ ಅಧ್ಯಕ್ಷ ಮೇಲ್ವಿಚಾರಕ ಎಂದು ಕರೆಯಲಾಗುತ್ತದೆ) ನೇಮಿಸಲಾಯಿತು. ಈ ಪ್ರೀತಿಯ ವೃದ್ಧ ಸಹೋದರರು ಅನೇಕ ವರ್ಷಗಳ ವರೆಗೆ ಸರ್ಕಿಟ್ ಮೇಲ್ವಿಚಾರಕರಾಗಿ ಸೇವೆಮಾಡಿದ್ದು, ಈಗ ತುಂಬ ಅಸ್ವಸ್ಥರಾಗಿದ್ದರು. ಇವರು ತುಂಬ ಕೃತಜ್ಞ ಮನೋಭಾವದವರೂ ಒಳ್ಳೆಯ ರೀತಿಯಲ್ಲಿ ಬೆಂಬಲ ನೀಡುವವರೂ ಆಗಿದ್ದರು. ಇವರ ಬೆಂಬಲವು ಅತ್ಯಾವಶ್ಯಕವಾಗಿತ್ತು, ಏಕೆಂದರೆ ಸಭೆಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿತ್ತು ಮತ್ತು ಇದರಲ್ಲಿ ಸಭೆಯ ಕೆಲವು ಪ್ರಮುಖ ವ್ಯಕ್ತಿಗಳು ಸಹ ಒಳಗೂಡಿದ್ದರು. ಕ್ರಮೇಣ ಈ ವಿವಾದವು ತುಂಬ ಗಂಭೀರವಾಗಿ ಪರಿಣಮಿಸಿತು ಮತ್ತು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುವುದರಲ್ಲಿ ನಾನು ತುಂಬ ಸಮಯವನ್ನು ಕಳೆಯುತ್ತಿದ್ದೆ. ಜ್ಞಾನೋಕ್ತಿ 3:5, 6ರಂತಹ ಶಾಸ್ತ್ರವಚನಗಳು ನನ್ನ ಮನಸ್ಸಿಗೆ ಬಂದವು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಈ ವಿಷಯಗಳನ್ನು ಬಿಚ್ಚುಮನಸ್ಸಿನಿಂದ ಚರ್ಚಿಸಲಿಕ್ಕಾಗಿ ಕಷ್ಟಪಟ್ಟು ಕಾರ್ಯನಡಿಸಿದ ಬಳಿಕ, ನಾವು ಸಭೆಯನ್ನು ಪುನಃ ಒಂದುಗೂಡಿಸಲು ಶಕ್ತರಾದೆವು ಮತ್ತು ಇದರಿಂದ ಎಲ್ಲರಿಗೂ ಒಳ್ಳೇದಾಯಿತು.
ಇಸವಿ 1977ರಷ್ಟಕ್ಕೆ, ನಮ್ಮ ವಯಸ್ಸಿನ ಪರಿಣಾಮಗಳ ಅನುಭವ ನಮಗಾಗತೊಡಗಿತು. ಮತ್ತು ನಮ್ಮ ಇಬ್ಬರು ಪುತ್ರಿಯರು ತಮ್ಮ ಕುಟುಂಬಗಳೊಂದಿಗೆ ಜೀವಿಸುತ್ತಿದ್ದ ಶಾರ್ಲಟ್ಸ್ವಿಲ್ ಕ್ಷೇತ್ರಕ್ಕೆ ನಮ್ಮನ್ನು ಪುನಃ ಕಳುಹಿಸಲಾಯಿತು. ಕಳೆದ 23 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸಮಾಡುವುದರಲ್ಲಿ ನಾವು ತುಂಬ ಆನಂದಿಸಿದ್ದೇವೆ. ಅಷ್ಟುಮಾತ್ರವಲ್ಲ, ವರ್ಜಿನಿಯದಲ್ಲಿರುವ ರಕರ್ಸ್ವಿಲ್ ಸಭೆಯನ್ನು ಆರಂಭಿಸಲು ಸಹಾಯಮಾಡುವ ಹಾಗೂ ನಮ್ಮ ಆರಂಭದ ಬೈಬಲ್ ವಿದ್ಯಾರ್ಥಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ಬೆಳೆದು ದೊಡ್ಡವರಾಗಿ ಸಭಾ ಹಿರಿಯರು, ಪಯನೀಯರರು ಮತ್ತು ಬೆತೆಲಿಗರಾಗಿ ಸೇವೆಮಾಡುವುದನ್ನು ನೋಡುವ ಸುಯೋಗವೂ ನಮಗೆ ಸಿಕ್ಕಿದೆ. ಈಗಲೂ ನಾನು ಮತ್ತು ಮೆರೀಅನ್, ಉತ್ತಮವಾದ ಕ್ಷೇತ್ರ ಸೇವಾ ಕಾರ್ಯತಖ್ತೆಯನ್ನು ಕಾಪಾಡಿಕೊಳ್ಳಲು ಶಕ್ತರಾಗಿದ್ದೇವೆ. ಇದಲ್ಲದೆ, ಶಾರ್ಲಟ್ಸ್ವಿಲ್ನ ಈಸ್ಟ್ ಸಭೆಯಲ್ಲಿ ಒಬ್ಬ ಹಿರಿಯನೋಪಾದಿ ಸೇವೆಸಲ್ಲಿಸುವ, ಪುಸ್ತಕ ಅಭ್ಯಾಸವನ್ನು ನಡೆಸುವ ಹಾಗೂ ಬಹಿರಂಗ ಭಾಷಣಗಳನ್ನು ಕೊಡುವ ಸುಯೋಗವೂ ನನಗೆ ಸಿಕ್ಕಿದೆ.
ಗತ ವರ್ಷಗಳಲ್ಲಿ, ಎಲ್ಲರಂತೆಯೇ ನಾವು ಸಹ ಅನೇಕ ಸಮಸ್ಯೆಗಳನ್ನು ಅನುಭವಿಸಿದ್ದೇವೆ. ಉದಾಹರಣೆಗೆ, ನಾವು ಎಷ್ಟೇ ಪ್ರಯತ್ನವನ್ನು ಮಾಡಿದರೂ, ನಮ್ಮ ಮಗಳಾದ ಡೋರಸ್ ತನ್ನ ಹದಿಪ್ರಾಯದಲ್ಲಿ ಸ್ವಲ್ಪ ಸಮಯದ ವರೆಗೆ ಆತ್ಮಿಕವಾಗಿ ಬಲಹೀನಳಾದಳು ಮತ್ತು ಯೆಹೋವನ ಸಾಕ್ಷಿಯಲ್ಲದ ಒಬ್ಬ ವ್ಯಕ್ತಿಯನ್ನು ಮದುವೆಯಾದಳು. ಆದರೆ ಯೆಹೋವನ ಕಡೆಗಿದ್ದ ತನ್ನ ಪ್ರೀತಿಯನ್ನು ಅವಳು ಸಂಪೂರ್ಣವಾಗಿ ಕಳೆದುಕೊಂಡಿರಲಿಲ್ಲ. ಈಗ ಅವಳ ಮಗನಾದ ಬಿಲ್, ನ್ಯೂ ಯಾರ್ಕಿನ ವಾಲ್ಕಿಲ್ನಲ್ಲಿರುವ ಬೆತೆಲ್ನಲ್ಲಿ 15 ವರ್ಷಗಳಿಂದ ಸೇವೆಮಾಡುತ್ತಿದ್ದಾನೆ. ಡೋರಸ್ ಮತ್ತು ಲ್ವೀಸ್ ಇಬ್ಬರೂ ಈಗ ವಿಧವೆಯರಾಗಿದ್ದಾರೆ, ಆದರೆ ಹತ್ತಿರದ ಸಭೆಗಳಲ್ಲಿ ಅವರು ರೆಗ್ಯುಲರ್ ಪಯನೀಯರರಾಗಿ ಸಂತೋಷದಿಂದ ಸೇವೆಮಾಡುತ್ತಿದ್ದಾರೆ.
ಗತ ವರ್ಷಗಳಲ್ಲಿ ಕಲಿತ ಪಾಠಗಳು
ಯೆಹೋವನ ಸೇವೆಮಾಡುವುದರಲ್ಲಿ ಯಶಸ್ಸನ್ನು ಪಡೆದುಕೊಳ್ಳಲಿಕ್ಕಾಗಿ ನಾನು ಕೆಲವು ನಿಯಮಗಳನ್ನು ಅನ್ವಯಿಸಿಕೊಳ್ಳಲು ಕಲಿತಿದ್ದೇನೆ: ನಿಮ್ಮ ಜೀವಿತವನ್ನು ಸರಳವಾಗಿಡಿರಿ. ನಿಮ್ಮ ಖಾಸಗಿ ಜೀವನವನ್ನೂ ಒಳಗೊಂಡು ನಿಮ್ಮ ಎಲ್ಲ ವ್ಯವಹಾರಗಳಲ್ಲಿ ಒಳ್ಳೇ ಮಾದರಿಯಾಗಿರಿ. ಎಲ್ಲ ವಿಷಯಗಳಲ್ಲಿ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮಾರ್ಗದರ್ಶನವನ್ನು ಅನ್ವಯಿಸಿರಿ.—ಮತ್ತಾಯ 24:45.
ಮಕ್ಕಳನ್ನು ಬೆಳೆಸುತ್ತಿರುವಾಗಲೂ ಯಶಸ್ವಿಕರವಾಗಿ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಮೆರೀಅನ್ ಚಿಕ್ಕದಾದರೂ ಪರಿಣಾಮಕಾರಿಯಾದ ಕೆಲವು ಸಲಹೆಗಳನ್ನು ಪಟ್ಟಿಮಾಡಿಕೊಂಡಿದ್ದಾಳೆ: ಕಾರ್ಯರೂಪಕ್ಕೆ ತರಬಹುದಾದಂತಹ ಒಂದು ಕಾರ್ಯತಖ್ತೆಯನ್ನು ಮಾಡಿಕೊಂಡು ಅದಕ್ಕನುಸಾರ ನಡೆಯಿರಿ. ನಿಮ್ಮ ಪಯನೀಯರ್ ಸೇವೆಯನ್ನು ಜೀವನವೃತ್ತಿಯಾಗಿ ಮಾಡಿಕೊಳ್ಳಿರಿ. ಆರೋಗ್ಯಕರವಾದ ಆಹಾರಕ್ರಮವನ್ನು ಅನುಸರಿಸಿರಿ. ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಿರಿ. ಮನೋರಂಜನೆಯಲ್ಲಿ ಅತಿಯಾಗಿ ಒಳಗೂಡದಿರಿ. ಸತ್ಯವನ್ನು ಹಾಗೂ ಎಲ್ಲ ರೀತಿಯ ಶುಶ್ರೂಷೆಯನ್ನು ನಿಮ್ಮ ಮಕ್ಕಳು ಹಿತಕರವಾದ ಅನುಭವವಾಗಿ ಪರಿಗಣಿಸುವಂತೆ ಅವರಿಗೆ ಸಹಾಯಮಾಡಿರಿ. ಎಲ್ಲ ಸಮಯಗಳಲ್ಲಿ ಶುಶ್ರೂಷೆಯು ಅವರಿಗೆ ಆಸಕ್ತಿಕರ ಅನುಭವವಾಗುವಂತೆ ಮಾಡಿರಿ.
ಈಗ ನಾವು 90ಗಳ ಪ್ರಾಯದಲ್ಲಿದ್ದೇವೆ. ಸ್ಟ್ಯಾಕ್ಹೌಸರ ಮನೆಯ ತೋಟದಲ್ಲಿ ದೀಕ್ಷಾಸ್ನಾನದ ಭಾಷಣವನ್ನು ನಾವು ಕೇಳಿಸಿಕೊಂಡು ಅರುವತ್ತೆರಡು ವರ್ಷಗಳು ಕಳೆದಿವೆ, ಮತ್ತು ಪೂರ್ಣ ಸಮಯದ ಸೇವೆಯಲ್ಲಿ ನಾವು 60 ವರ್ಷಗಳನ್ನು ಕಳೆದಿದ್ದೇವೆ. ನಮ್ಮ ಜೀವಿತದಲ್ಲಿ ಪೂರ್ಣವಾಗಿ ಹಾಗೂ ಬಹಳಷ್ಟು ಮಟ್ಟಿಗೆ ಸಂತೃಪ್ತರಾಗಿದ್ದೇವೆ ಎಂದು ನಾನು ಮತ್ತು ಮೆರೀಅನ್ ಮನಃಪೂರ್ವಕವಾಗಿ ಹೇಳಬಲ್ಲೆವು. ಯುವಪ್ರಾಯದ ಒಬ್ಬ ತಂದೆಯೋಪಾದಿ ಆತ್ಮಿಕ ಗುರಿಗಳಿಗೆ ಪ್ರಥಮ ಸ್ಥಾನ ನೀಡುವಂತೆ ಹಾಗೂ ಆ ಗುರಿಗಳನ್ನು ಸಾಧಿಸಲಿಕ್ಕಾಗಿ ಕಾರ್ಯನಡಿಸುತ್ತಾ ಇರುವಂತೆ ನನಗೆ ಕೊಡಲ್ಪಟ್ಟ ಉತ್ತೇಜನಕ್ಕೆ ನಾನು ತುಂಬ ಕೃತಜ್ಞನಾಗಿದ್ದೇನೆ. ನನ್ನ ಪ್ರೀತಿಯ ಪತ್ನಿಯಾದ ಮೆರೀಅನ್ ಹಾಗೂ ನನ್ನ ಪುತ್ರಿಯರು ಈ ಎಲ್ಲ ವರ್ಷಗಳಲ್ಲಿ ನನಗೆ ಪೂರ್ಣವಾದ ಬೆಂಬಲವನ್ನು ನೀಡಿದ್ದಕ್ಕಾಗಿ ಅವರಿಗೂ ನಾನು ಆಭಾರಿಯಾಗಿದ್ದೇನೆ. ನಮ್ಮಲ್ಲಿ ಯಾವುದೇ ರೀತಿಯ ಭೌತಿಕ ಸಂಪತ್ತು ಇಲ್ಲವಾದರೂ, ಪ್ರಸಂಗಿ 2:25ರಲ್ಲಿ (NW) ಕಂಡುಬರುವ, “ನನಗಿಂತಲೂ ಹೆಚ್ಚು ತಿಂದುಕುಡಿಯುವವರು ಯಾರಿದ್ದಾರೆ?” ಎಂಬ ವಚನವನ್ನು ಅನೇಕವೇಳೆ ಸ್ವತಃ ನನಗೇ ಅನ್ವಯಿಸಿಕೊಳ್ಳುತ್ತೇನೆ.
ನಮ್ಮ ವಿಷಯದಲ್ಲಿ ಹೇಳುವುದಾದರೆ, ಮಲಾಕಿಯ 3:10ರಲ್ಲಿ ಕಂಡುಬರುವ ತನ್ನ ವಾಗ್ದಾನವನ್ನು ಯೆಹೋವನು ಅತ್ಯಧಿಕ ರೀತಿಯಲ್ಲಿ ಪೂರೈಸಿದ್ದಾನೆ ಎಂಬುದಂತೂ ಸತ್ಯ. ಖಂಡಿತವಾಗಿಯೂ ಆತನು ‘ನಮ್ಮ ಮೇಲೆ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿದಿದ್ದಾನೆ’!
[ಪುಟ 29ರಲ್ಲಿರುವ ಚೌಕ/ಚಿತ್ರ]
ಯುದ್ಧದ ವರ್ಷಗಳ ನೆನಪುಗಳು
ಯುದ್ಧ ಮುಗಿದು ಸುಮಾರು 60 ವರ್ಷಗಳಾದ ನಂತರ ಇಡೀ ಕುಟುಂಬವು, ಗತಿಸಿದ ಆ ವರ್ಷಗಳ ಕುರಿತು ಅನೇಕ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡಿದೆ.
“ಪೆನ್ಸಿಲ್ವೇನಿಯದಲ್ಲಿ ತುಂಬ ಚಳಿ ಇರುತ್ತಿತ್ತು” ಎಂದು ಡೋರಸ್ ಜ್ಞಾಪಿಸಿಕೊಳ್ಳುತ್ತಾಳೆ. “ಒಂದು ರಾತ್ರಿ ತಾಪಮಾನವು -30 ಡಿಗ್ರಿ ಸೆಲ್ಸಿಯಸ್ ಆಗಿತ್ತು. ನಮ್ಮ ಪಾದಗಳಿಗೆ ಚಳಿಯಾಗದಂತೆ, ನಾನು ಮತ್ತು ಡೋರಸ್ ನಮ್ಮ ಹಳೆಯ ಬ್ಯೂಯಿಕ್ ಗಾಡಿಯ ಹಿಂದಿನ ಸೀಟ್ನಲ್ಲಿ ಒಬ್ಬರ ಪಾದಗಳ ಮೇಲೆ ಇನ್ನೊಬ್ಬರು ಕುಳಿತುಕೊಳ್ಳುತ್ತಿದ್ದೆವು” ಎಂದು ಲ್ವೀಸ್ ಹೇಳುತ್ತಾಳೆ.
“ಆದರೆ ನಾವು ಬಡವರು ಅಥವಾ ನಮಗೆ ಏನೋ ಕೊರತೆಯಿದೆ ಎಂದು ನಮಗೆಂದಿಗೂ ಅನಿಸಲಿಲ್ಲ. ಅಧಿಕಾಂಶ ಜನರಿಗಿಂತಲೂ ಹೆಚ್ಚಾಗಿ ನಾವು ಆಗಿಂದಾಗ್ಗೆ ನಿವಾಸ ಸ್ಥಳವನ್ನು ಬದಲಾಯಿಸುತ್ತಿದ್ದೆವು ಎಂಬುದು ನಮಗೆ ಗೊತ್ತಿತ್ತು. ಆದರೆ ತಿನ್ನುವಕುಡಿಯುವ ವಿಷಯಗಳಲ್ಲಿ ನಮಗೆ ಕೊರತೆಯೇ ಇರಲಿಲ್ಲ. ಅಷ್ಟುಮಾತ್ರವಲ್ಲ, ನಾವು ಒಳ್ಳೇ ಬಟ್ಟೆಗಳನ್ನು ಸಹ ಧರಿಸುತ್ತಿದ್ದೆವು; ನಮಗಿಂತ ಸ್ವಲ್ಪ ಹೆಚ್ಚು ಪ್ರಾಯದ ಹೆಣ್ಣುಮಕ್ಕಳಿದ್ದ, ಒಹಾಯೋದ ಕೆಲವು ಸ್ನೇಹಿತರು ನಮಗೆ ಹೆಚ್ಚುಕಡಿಮೆ ಹೊಸದಾಗಿರುವಂತಹ ಅತ್ಯುತ್ತಮ ಗುಣಮಟ್ಟದ ಬಟ್ಟೆಗಳನ್ನು ಕಳುಹಿಸುತ್ತಿದ್ದರು” ಎಂದು ಡೋರಸ್ ಹೇಳುತ್ತಾಳೆ.
ಲ್ವೀಸ್ ಜ್ಞಾಪಿಸಿಕೊಂಡದ್ದು: “ಅಪ್ಪ ಮತ್ತು ಅಮ್ಮ ಯಾವಾಗಲೂ ನಮ್ಮನ್ನು ಪ್ರೀತಿಸುತ್ತಿದ್ದರು ಮತ್ತು ಗಣ್ಯಮಾಡುತ್ತಿದ್ದರು. ಹಾಗೂ ಶುಶ್ರೂಷೆಯಲ್ಲಿ ಅವರೊಂದಿಗೆ ಬಹಳಷ್ಟು ಸಮಯವನ್ನು ಕಳೆಯುವ ಅವಕಾಶ ನಮಗೆ ಸಿಕ್ಕಿತು. ಇದರಿಂದ ನಾವು ತುಂಬ ವಿಶೇಷ ವ್ಯಕ್ತಿಗಳು ಎಂಬ ಅನಿಸಿಕೆ ಉಂಟಾಗುತ್ತಿತ್ತು ಮತ್ತು ನಾವು ಅವರಿಗೆ ಇನ್ನಷ್ಟು ಆಪ್ತರಾಗುತ್ತಿದ್ದೇವೆ ಎಂದು ನಮಗನಿಸಿತು.”
ಪೌಲ್ ನೆನಪಿಸಿಕೊಳ್ಳುವುದು: “ನನ್ನ ಬಳಿ 1936ರ ಬ್ಯೂಯಿಕ್ ಸ್ಪೆಷಲ್ ಗಾಡಿಯಿತ್ತು ಮತ್ತು ಆ ಗಾಡಿಗಳ ಆ್ಯಕ್ಸೆಲ್ಗಳು ಇದ್ದಕ್ಕಿದ್ದಂತೆ ಕಳಚಿಕೊಳ್ಳುವುದಕ್ಕೆ ತುಂಬ ಪ್ರಸಿದ್ಧವಾಗಿದ್ದವು. ಬಹುಶಃ ಇಡೀ ಕಾರಿಗೆ ಹೋಲಿಸುವಾಗ ಇಂಜಿನ್ ತುಂಬ ಪ್ರಬಲವಾಗಿದ್ದುದರಿಂದಲೇ ಈ ಸಮಸ್ಯೆಯಿತ್ತೆಂಬುದು ನನ್ನ ಅಭಿಪ್ರಾಯ. ಯಾವಾಗಲೂ ತಿಂಗಳಲ್ಲಿ ಅತಿ ಹೆಚ್ಚು ಚಳಿಯಿರುವ ರಾತ್ರಿಯೇ ಈ ಆ್ಯಕ್ಸೆಲ್ ಕಳಚಿಕೊಳ್ಳುತ್ತಿತ್ತು ಮತ್ತು ಇನ್ನೊಂದು ಆ್ಯಕ್ಸೆಲ್ ತರಲಿಕ್ಕಾಗಿ ನಾನು ಗುಜರಿಗೆ ಹೋಗುತ್ತಿದ್ದೆ. ಹೀಗೆ, ಆ್ಯಕ್ಸೆಲ್ಗಳನ್ನು ಬದಲಾಯಿಸುವುದರಲ್ಲಿ ನಾನು ಪರಿಣತನಾಗಿಬಿಟ್ಟೆ.”
ಮೆರೀಅನ್ ಹೇಳುವುದು: “ರೇಷನ್ ಕಾರ್ಡನ್ನು ಮಾತ್ರ ಮರೆಯಬೇಡಿ. ಮಾಂಸ, ಪೆಟ್ರೋಲ್, ಕಾರುಗಳ ಟೈರ್ಗಳು ಎಲ್ಲವೂ ರೇಷನ್ನಲ್ಲಿಯೇ ಸಿಗುತ್ತಿದ್ದವು. ಪ್ರತಿ ಬಾರಿ ನಾವು ಪಯನೀಯರ್ ಸೇವೆಯಲ್ಲಿ ಹೊಸ ಸ್ಥಳಕ್ಕೆ ಹೋದಾಗ, ಸ್ಥಳಿಕ ಸರಕಾರಿ ಅಧಿಕಾರಿಯ ಬಳಿಗೆ ಹೋಗಿ ರೇಷನ್ ಕಾರ್ಡಿಗಾಗಿ ಅರ್ಜಿಯನ್ನು ಹಾಕುತ್ತಿದ್ದೆವು. ಒಂದು ರೇಷನ್ ಕಾರ್ಡ್ ಸಿಗಲು ಹಲವಾರು ತಿಂಗಳುಗಳೇ ತಗಲುತ್ತಿದ್ದವು. ಮತ್ತು ಹೊಸ ಸ್ಥಳದಲ್ಲಿ ರೇಷನ್ ಕಾರ್ಡ್ ನಮ್ಮ ಕೈಸೇರುತ್ತಿದ್ದಂತೆ, ನಮಗೆ ಇನ್ನೊಂದು ಸ್ಥಳಕ್ಕೆ ಹೋಗುವಂತಹ ನೇಮಕವು ಸಿಗುತ್ತಿತ್ತು ಮತ್ತು ನಾವು ಪುನಃ ಹೊಸ ಕಾರ್ಡಿಗಾಗಿ ಅರ್ಜಿ ಹಾಕಬೇಕಾಗುತ್ತಿತ್ತು. ಆದರೆ ಯೆಹೋವನು ಮಾತ್ರ ಸದಾ ನಮ್ಮ ಆರೈಕೆಮಾಡಿದನು.”
[ಚಿತ್ರ]
ಇಸವಿ 2000ದಲ್ಲಿ, ಡೋರಸ್ (ಎಡಭಾಗದಲ್ಲಿ) ಮತ್ತು ಲ್ವೀಸ್ರೊಂದಿಗೆ ಮೆರೀಅನ್ ಹಾಗೂ ನಾನು
[ಪುಟ 25ರಲ್ಲಿರುವ ಚಿತ್ರ]
ಇಸವಿ 1918ರಲ್ಲಿ, ನಾನು 11 ವರ್ಷದವನಾಗಿದ್ದಾಗ ನನ್ನ ತಾಯಿಯೊಂದಿಗೆ
[ಪುಟ 26ರಲ್ಲಿರುವ ಚಿತ್ರ]
ಇಸವಿ 1948ರಲ್ಲಿ ಲ್ವೀಸ್, ಮೆರೀಅನ್ ಮತ್ತು ಡೋರಸ್ರೊಂದಿಗೆ—ಹುಡುಗಿಯರು ದೀಕ್ಷಾಸ್ನಾನ ಪಡೆದುಕೊಂಡಾಗ
[ಪುಟ 26ರಲ್ಲಿರುವ ಚಿತ್ರ]
ಇಸವಿ 1928ರ ಅಕ್ಟೋಬರ್ ತಿಂಗಳಲ್ಲಾದ ನಮ್ಮ ವಿವಾಹದ ಫೋಟೋ
[ಪುಟ 26ರಲ್ಲಿರುವ ಚಿತ್ರ]
ಇಸವಿ 1955ರಲ್ಲಿ, ಯಾಂಕೀ ಸ್ಟೇಡಿಯಮ್ನಲ್ಲಿ ನಾನು ಮತ್ತು ನನ್ನ ಪುತ್ರಿಯರು (ತೀರ ಎಡಭಾಗದಲ್ಲಿ ಮತ್ತು ತೀರ ಬಲಭಾಗದಲ್ಲಿ)