ಕಾಯುವುದು ಹೇಗೆಂದು ನಿಮಗೆ ಗೊತ್ತೋ?
ಪ್ರತಿ ವರ್ಷ, ಜನರು ಕೇವಲ ಕಾಯುತ್ತಾ ಎಷ್ಟು ಸಮಯವನ್ನು ಕಳೆಯುತ್ತಾರೆ ಎಂಬುದು ನಿಮಗೆ ಗೊತ್ತೋ? ಅಂಗಡಿಯ ಮುಂದೆ ಇಲ್ಲವೇ ಪೆಟ್ರೋಲ್ ಸ್ಟೇಷನಿನ ಮುಂದೆ ಗಂಟಾನುಗಟ್ಟಲೇ ನಿಲ್ಲುತ್ತಾರೆ. ಹೋಟೆಲುಗಳಲ್ಲಿ ಆಹಾರಕ್ಕಾಗಿ ಕಾಯಬೇಕಾಗಿರುತ್ತದೆ. ಡಾಕ್ಟರಿಗಾಗಿ ಇಲ್ಲವೇ ದಂತವೈದ್ಯರಿಗಾಗಿ ಕಾದು ಕಾದು ಸುಸ್ತಾಗಬೇಕಾಗುತ್ತದೆ. ಬಸ್ಸು ಮತ್ತು ರೈಲುಗಳಿಗಾಗಿ ಜನಜಂಗುಳಿಯ ಮಧ್ಯೆ ಕಾಯಬೇಕಾಗಿರುತ್ತದೆ. ನಿಜ, ವ್ಯಕ್ತಿಯೊಬ್ಬನ ಜೀವಿತದ ಬಹಳಷ್ಟು ಸಮಯ ಕಾಯುವುದರಲ್ಲಿಯೇ ಕಳೆದುಹೋಗುತ್ತದೆ. ಒಂದು ಅಂದಾಜಿಗನುಸಾರ, ಪ್ರತಿ ವರ್ಷ ಜರ್ಮನರ ಸುಮಾರು 470 ಕೋಟಿಗಳಷ್ಟು ತಾಸುಗಳು ಟ್ರ್ಯಾಫಿಕ್ ಜ್ಯಾಮ್ಗಳಲ್ಲಿಯೇ ಕಳೆದುಹೋಗುತ್ತವೆ! ಅಂದರೆ, ಈ ತಾಸುಗಳು ಸುಮಾರು 7,000 ಜನರ ಆಯುಷ್ಯಕ್ಕೆ ಸಮಾನವಾಗಿದೆ.
ಕಾಯುವುದು ನಿಜವಾಗಿಯೂ ತಲೆ ಚಿಟ್ಟುಹಿಡಿಸಬಹುದು. ಈಗಂತೂ ಎಲ್ಲವನ್ನೂ ಮಾಡಿಮುಗಿಸಲು ಸಮಯವೇ ಸಾಕಾಗುವುದಿಲ್ಲ. ಮಾಡಿಮುಗಿಸಲು ಇನ್ನೂ ಬೇರೆ ಅನೇಕ ಕೆಲಸಗಳಿವೆ ಎಂಬ ನೆನಪೇ ಹುಚ್ಚುಹಿಡಿಸುತ್ತದೆ. ಅಲೆಕ್ಸಾಂಡರ್ ರೋಸ್ ಎಂಬ ಲೇಖಕನು ಒಮ್ಮೆ ಹೇಳಿದ್ದು: “ಕಾಯುವುದೇ ಅರ್ಧ ತಲೆನೋವು.”
ಕಾಯುವುದು ನಿಜವಾಗಿಯೂ ದುಬಾರಿಯಾಗಿರಸಾಧ್ಯವಿದೆ ಎಂಬುದನ್ನು ಅಮೆರಿಕನ್ ರಾಜ್ಯನೀತಿಜ್ಞನಾದ ಬೆಂಜಮೀನ್ ಫ್ರ್ಯಾಂಕ್ಲಿನ್ ಕಂಡುಕೊಂಡನು. ಸುಮಾರು 250 ವರ್ಷಗಳ ಹಿಂದೆ ಅವನು ಹೇಳಿದ್ದು: “ಸಮಯವು ಹಣ ಇದ್ದಹಾಗೇ.” ಆದುದರಿಂದಲೇ, ವ್ಯಾಪಾರದ ಸಂಸ್ಥೆಗಳು ಕೆಲಸದ ಕಾರ್ಯಗತಿಯಲ್ಲಿ ಅನಾವಶ್ಯಕವಾದ ವಿಳಂಬಗಳನ್ನು ಹೇಗೆ ತಡೆಯಬಹುದು ಎಂಬುದಕ್ಕೆ ಹತ್ತು ಹಲವಾರು ವಿಧಗಳನ್ನು ಹುಡುಕುತ್ತಿರುತ್ತವೆ. ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಉತ್ಪನ್ನಗಳನ್ನು ಉತ್ಪಾದಿಸಿದರೆ ಹೆಚ್ಚು ಲಾಭವು ಸಿಗುತ್ತದೆ. ಜನರಿಗೆ ನೇರವಾಗಿ ಸೇವೆಸಲ್ಲಿಸುವ ವ್ಯಾಪಾರಗಳು ಶೀಘ್ರ ಸೇವೆಯನ್ನು ನೀಡಲು ಪ್ರಯತ್ನಿಸುತ್ತವೆ. ಫಾಸ್ಟ್ ಫುಡ್, ಡ್ರೈವ್-ಇನ್ ಬ್ಯಾಂಕಿಂಗ್ನಂತಹ (ಕಾರಿನಿಂದ ಕೆಳಗಿಳಿಯದೇ ಬ್ಯಾಂಕ್ ವ್ಯವಹಾರದ ಏರ್ಪಾಡು) ಶೀಘ್ರ ಸೇವೆಯನ್ನು ನೀಡುತ್ತವೆ. ಏಕೆಂದರೆ ಗಿರಾಕಿಗಳ ಮನಸ್ಸನ್ನು ಗೆಲ್ಲಬೇಕೆಂದರೆ, ಕಾಯಬೇಕಾಗಿರುವ ಸಮಯವನ್ನು ಕಡಿಮೆಗೊಳಿಸಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ.
ನಮ್ಮ ಜೀವನವನ್ನು ಹಾಳುಮಾಡಿಕೊಳ್ಳುವುದು
ಹತ್ತೊಂಬತ್ತನೇ ಶತಮಾನದ ಅಮೆರಿಕನ್ ಕವಿಯಾದ ರಾಲ್ಫ್ ವಾಲ್ಡೋ ಎಮರ್ಸನ್ ಒಮ್ಮೆ ದೂರಿದ್ದು: “ಮನುಷ್ಯರ ಆಯಸ್ಸು ಕಾಯುವುದರಲ್ಲಿಯೇ ಕಳೆದುಹೋಗುತ್ತದೆ!” ಕಾಯುವುದರಿಂದ ಆಗುವ ಬೇಸರ ಹಾಗೂ ಅದರಿಂದ ಉಂಟಾಗುವ ಶಾರೀರಿಕ ಇರುಸುಮುರುಸಿನ ಕುರಿತು ಇತ್ತೀಚೆಗೆ ಲೇಖಕರಾದ ಲ್ಯಾನ್ಸ್ ಮಾರೋ ದೂರಿದರು. ಆದರೆ ಇವರು “ಕಾಯುವಿಕೆಯ ಕುಟಿಲ ಸಂಕಟದ” ಬಗ್ಗೆ ಮಾತಾಡಿದರು. ಅದು ಏನು? “ಒಬ್ಬನ ಅತ್ಯಮೂಲ್ಯ ಸಂಪನ್ಮೂಲ, ಸಮಯ, ಜೀವಿತದ ಭಾಗವು ಕದಿಯಲ್ಪಡುವಾಗ, ಅದು ತುಂಬಲಾರದ ನಷ್ಟವಾಗಿ ಹೋಗುತ್ತದೆ.” ಇದು ನಿಜವಾಗಿಯೂ ದುಃಖದ ಸಂಗತಿಯಾಗಿದೆ. ಆದರೆ ಇದು ಕಟುಸತ್ಯ. ಕಾಯುವುದರಲ್ಲಿ ಕಳೆದುಹೋದ ಸಮಯವು ಇನ್ನೆಂದಿಗೂ ಹಿಂದಿರುಗಿಬರುವುದಿಲ್ಲ.
ಜೀವನವು ಇಷ್ಟೊಂದು ಅಲ್ಪಕಾಲದ್ದಾಗಿರದ ಪಕ್ಷದಲ್ಲಿ, ಕಾಯುವುದು ನಿಜವಾಗಿಯೂ ಒಂದು ಚಿಂತೆಯ ವಿಷಯವಾಗುತ್ತಿರಲಿಲ್ಲ. ಆದರೆ ಜೀವನ ನೀರಿನ ಮೇಲಿನ ಗುಳ್ಳೆಯಂತೆ. ಈ ವಿಷಯದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ, ಬೈಬಲಿನ ಕೀರ್ತನೆಗಾರನು ಹೇಳಿದ್ದು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.” (ಕೀರ್ತನೆ 90:10) ನಾವೆಲ್ಲಿಯೇ ಜೀವಿಸಲಿ, ನಾವು ಯಾರೇ ಆಗಿರಲಿ, ನಮ್ಮ ಜೀವನ, ಅಂದರೆ ನಾವು ಹುಟ್ಟುವಾಗಿನಿಂದ ಪ್ರಾರಂಭವಾಗುವ ದಿನಗಳು, ಗಂಟೆಗಳು, ನಿಮಿಷಗಳು ಎಲ್ಲವೂ ತೀರ ಕಡಿಮೆ. ಹೀಗಿರುವುದಾದರೂ, ಕೆಲವೊಮ್ಮೆ ಘಟನೆಗಳು ಸಂಭವಿಸುವಂತೆ ಇಲ್ಲವೇ ಜನರಿಗಾಗಿ ಕಾಯುವುದರಲ್ಲಿ ಅಮೂಲ್ಯವಾದ ಸಮಯವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ನಾವು ತಪ್ಪಿಸಲಿಕ್ಕೆ ಆಗುವುದಿಲ್ಲ.
ಕಾಯುವುದಕ್ಕೆ ಕಲಿತುಕೊಳ್ಳುವುದು
ತನ್ನ ಮುಂದೆ ಇರುವ ವಾಹನವನ್ನು ಓವರ್ಟೇಕ್ ಮಾಡಲು ಶತಪ್ರಯತ್ನಮಾಡುತ್ತಿರುವ ಕಾರಿನ ಡ್ರೈವರನ್ನು ನಾವು ನೋಡಿರಬಹುದು ಇಲ್ಲವೇ ಆ ಕಾರಿನಲ್ಲಿ ನಾವು ಇದ್ದಿರಬಹುದು. ಆ ಡ್ರೈವರನಿಗೆ ಹಾಗೆ ಓವರ್ಟೇಕ್ ಮಾಡಿಕೊಂಡು ಹೋಗಬೇಕಾದಂಥ ತುರ್ತು ಕೆಲಸವೋ ಇಲ್ಲವೇ ಅದರ ಆವಶ್ಯಕತೆಯೋ ಇರುವುದಿಲ್ಲ. ಆದರೂ, ಮತ್ತೊಬ್ಬ ಡ್ರೈವರಿನ ಹಿಂದೆ ತನ್ನ ವಾಹನವನ್ನು ಓಡಿಸಿಕೊಂಡು ಹೋಗುವುದನ್ನು ಅವನು ಸಹಿಸಲಾರ. ಅವನ ಅಸಹನೆಯು ಅವನು ಕಾಯುವುದನ್ನು ಕಲಿತುಕೊಂಡಿಲ್ಲ ಎಂಬ ಗುಟ್ಟನ್ನು ರಟ್ಟುಮಾಡುತ್ತದೆ. ಕಲಿತುಕೊಳ್ಳುವುದೋ? ಹೌದು, ಕಾಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು, ಕಲಿತುಕೊಳ್ಳಬೇಕಾದ ಒಂದು ಪಾಠವಾಗಿದೆ. ಯಾರೊಬ್ಬರೂ ಅದನ್ನು ಹುಟ್ಟುವಾಗಲೇ ಪಡೆದುಕೊಂಡು ಬಂದಿರುವುದಿಲ್ಲ. ಕಂದಮ್ಮಗಳಿಗೆ ಹಸಿವೆಯಾದಾಗ ಇಲ್ಲವೇ ಅಸೌಖ್ಯವಾಗಿರುವಾಗ ಯಾವಾಗಲೂ ಎತ್ತಿಕೊಳ್ಳುವಂತೆ ಹಠಮಾಡುತ್ತಿರುತ್ತವೆ. ಆದರೆ ಅವರು ದೊಡ್ಡವರಾಗುತ್ತಾ ಹೋದಂತೆ, ಕೆಲವೊಮ್ಮೆ ಕಾಯಬೇಕಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಕಾಯುವುದು ಜೀವಿತದ ಅವಿಭಾಜ್ಯ ಅಂಗವಾಗಿರುವುದರಿಂದ, ಅಗತ್ಯಬಿದ್ದಾಗ ತಾಳ್ಮೆಯಿಂದ ಹೇಗೆ ಕಾಯುವುದು ಎಂಬುದನ್ನು ತಿಳಿದಿರುವುದು ಒಬ್ಬನನ್ನು ಪ್ರೌಢ ವ್ಯಕ್ತಿಯೆಂದು ಗುರುತಿಸುತ್ತದೆ.
ಕೆಲವೊಮ್ಮೆ ನಿಜವಾಗಿಯೂ ತುರ್ತಿನ ಪರಿಸ್ಥಿತಿಗಳು ಎದ್ದೇಳಬಹುದು. ಆಗ ಕಾಯವುದು ಅಸಹನೀಯ ಎಂಬುದು ಒಪ್ಪತಕ್ಕದ್ದೇ. ಒಬ್ಬ ಯುವ ಪತಿಯು ತನ್ನ ಪತ್ನಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಆಗುವ ಅಡಚಣೆಗೆ ಅಸಹನೆಯನ್ನು ತೋರಿಸುವುದರಲ್ಲಿ ಆಶ್ಚರ್ಯವಿಲ್ಲ. ಲೋಟನು ವಿಳಂಬಿಸಿದಾಗ ಅವನು ಸೋದೋಮನ್ನು ಕೂಡಲೇ ಬಿಟ್ಟುಹೋಗುವಂತೆ ದೇವದೂತರು ಅವನಿಗೆ ತರಾತುರಿಯಿಂದ ಹೇಳಿದರು. ಏಕೆಂದರೆ ಆ ಪಟ್ಟಣವು ಇನ್ನೇನು ನಾಶವಾಗಲಿತ್ತು. ಲೋಟನ ಹಾಗೂ ಅವನ ಕುಟುಂಬದ ಜೀವವು ಬಿರುಗಾಳಿಯ ಮಧ್ಯೆ ಕಂದೀಲಿನಂತೆ ತೂಗುತ್ತಿತ್ತು. ಅದು ಯಾವಾಗಲಾದರೂ ಆರಿಹೋಗಬಹುದಿತ್ತು. (ಆದಿಕಾಂಡ 19:15, 16) ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಜನರು ಕಾಯಬೇಕಾಗಿ ಬರುವಾಗ, ಅವರ ಜೀವವು ಅಪಾಯದಲ್ಲಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಪ್ರತಿಯೊಬ್ಬರು ತಾಳ್ಮೆಯಿಂದಿರಲು ಕಲಿತುಕೊಳ್ಳುವುದಾದರೆ, ಆ ಸಮಯವು ತಲೆಚಿಟ್ಟುಹಿಡಿಸುವಂತಹದ್ದು ಆಗಿರಲಾರದು. ಇದನ್ನು ನಾವು ಕಲಿತುಕೊಳ್ಳುವಾಗ, ಯಾರೋ ಒಬ್ಬರ ಅಸಮರ್ಥತೆ ಹಾಗೂ ನಿರಾಸಕ್ತಿಯ ಕಾರಣದಿಂದ ನಾವು ಕಾಯಬೇಕಾಗಿರುವುದಾದರೂ ಸರಿ ಆಗಲೂ ಸಮತೂಕವನ್ನು ಕಾಪಾಡಿಕೊಳ್ಳುವೆವು. ಅಷ್ಟುಮಾತ್ರವಲ್ಲ, ಕಾಯುತ್ತಾ ಕುಳಿತುಕೊಳ್ಳುವ ಸಮಯದಲ್ಲಿ ಪ್ರಯೋಜನವನ್ನು ತರುವಂತಹ ಕೆಲಸವನ್ನು ಮಾಡುವುದನ್ನು ನಾವೆಲ್ಲರೂ ಕಲಿತುಕೊಳ್ಳುವಾಗ, ತಾಳ್ಮೆಯಿಂದಿರುವುದು ಸುಲಭವಾಗುತ್ತದೆ. ಪುಟ 5ರಲ್ಲಿರುವ ರೇಖಾಚೌಕದಲ್ಲಿ ಕೆಲವೊಂದು ಸಲಹೆಗಳು ಕೊಡಲ್ಪಟ್ಟಿವೆ. ಇದು ಕಾಯುವುದನ್ನು ಸಹನೀಯವೂ ಪ್ರಯೋಜನಕಾರಿಯೂ ಆಗಿ ಮಾಡುವುದು.
ಅಸಹನೆಯು ಅಹಂಕಾರವನ್ನು ಬಯಲುಗೊಳಿಸುತ್ತದೆ. ಅಂದರೆ, ತಾನು ಒಬ್ಬ ಗಣ್ಯ ವ್ಯಕ್ತಿ ತನ್ನನ್ನು ಕಾಯಿಸಬಾರದು ಎಂಬ ಮನೋಭಾವವನ್ನು ಇದು ಹೊರಪಡಿಸುತ್ತದೆ. ಇಂತಹ ಮನೋಭಾವವುಳ್ಳ ವ್ಯಕ್ತಿಗಳಿಗೆ, ಬೈಬಲಿನ ಈ ವಾಕ್ಯಗಳು ತಕ್ಕದ್ದಾಗಿವೆ: “ಹಮ್ಮುಗಾರನಿಗಿಂತ ತಾಳ್ಮೆಯುಳ್ಳವನು ಉತ್ತಮ.” (ಪ್ರಸಂಗಿ 7:8) ಹಮ್ಮು ಅಥವಾ ಅಹಂಕಾರವು ಅತ್ಯಂತ ಗಂಭೀರವಾದ ವ್ಯಕ್ತಿತ್ವ ದೋಷವಾಗಿದೆ. ಇದರ ಕುರಿತು ಬೈಬಲು ಹೇಳುವುದು: “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ.” (ಜ್ಞಾನೋಕ್ತಿ 16:5) ತಾಳ್ಮೆಯಿಂದಿರಲು ಕಲಿತುಕೊಳ್ಳುವುದು ಅಂದರೆ, ಕಾಯುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವುದು, ನಮ್ಮನ್ನು ಹಾಗೂ ನಮ್ಮ ಸುತ್ತುಮತ್ತಲಿರುವ ಜನರೊಂದಿಗೆ ನಮಗಿರುವ ಸಂಬಂಧವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದನ್ನು ಕೇಳಿಕೊಳ್ಳುತ್ತದೆ.
ತಾಳ್ಮೆಗೆ ತಕ್ಕ ಫಲವು ಸಿಗುವುದು
ಕಾಯುತ್ತಿರುವುದು ನಿಜವಾಗಿಯೂ ಸಾರ್ಥಕವಾಗಿದೆ ಮತ್ತು ಕಾಯುತ್ತಿರುವ ಸಂಗತಿಯು ಕಡೆಗೆ ಸಂಭವಿಸಿಯೇ ತೀರುವುದು ಎಂಬುದು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವಾಗ, ಕಾಯುವುದು ಅಷ್ಟೇನೂ ಕಷ್ಟಕರವಾಗಿರುವುದಿಲ್ಲ. ಇದರ ವಿಷಯದಲ್ಲಿ, ದೇವರ ಎಲ್ಲ ಸತ್ಯಾರಾಧಕರು, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಯೆಹೋವನ ಭವ್ಯವಾದ ವಾಗ್ದಾನಗಳ ನೆರವೇರಿಕೆಗಾಗಿ ಕಾಯುತ್ತಾ ಇದ್ದಾರೆ. ಉದಾಹರಣೆಗೆ, ದೈವಪ್ರೇರಿತವಾದ ಕೀರ್ತನೆಯಲ್ಲಿ ನಮಗೆ ಹೀಗೆ ಹೇಳಲಾಗಿದೆ: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” ಇದೇ ವಾಗ್ದಾನವು ಅಪೊಸ್ತಲ ಪೌಲನು ಹೀಗೆ ಹೇಳಿದಾಗ ಮಾರ್ದನಿಸಿತು. ಅವನು ಹೇಳಿದ್ದು: “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (ಕೀರ್ತನೆ 37:29; 1 ಯೋಹಾನ 2:17) ನಾವು ಎಂದೆಂದಿಗೂ ಜೀವಿಸುವಲ್ಲಿ, ಅದಕ್ಕಾಗಿ ಕಾಯುವುದು ಅಷ್ಟೇನೂ ಕಷ್ಟಕರವಾಗಿರುವುದಿಲ್ಲ ಎಂಬುದು ಸ್ಪಷ್ಟ. ಆದರೆ ಈಗ ನಾವು ಸದಾಕಾಲ ಜೀವಿಸುತ್ತಿಲ್ಲ. ಆದುದರಿಂದ ನಿತ್ಯಜೀವದ ಬಗ್ಗೆ ಮಾತಾಡುವುದು ವ್ಯಾವಹಾರಿಕವಾಗಿದೆಯೋ?
ಈ ಪ್ರಶ್ನೆಗೆ ಉತ್ತರ ಕೊಡುವ ಮೊದಲು ಈ ವಿಷಯವನ್ನು ಗಮನಿಸಿರಿ. ದೇವರು ನಮ್ಮ ಮೊದಲ ಹೆತ್ತವರಾದ ಆದಾಮಹವ್ವರನ್ನು ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ ಸೃಷ್ಟಿಸಿದನು. ಅವರು ಪಾಪ ಮಾಡಿದ ಕಾರಣದಿಂದಲೇ ಆ ಪ್ರತೀಕ್ಷೆಯು ಅವರ ಕೈಬಿಟ್ಟು ಹೋಯಿತು. ಆದಾಮಹವ್ವರು ಮಾತ್ರವಲ್ಲ, ಅವರ ಮಕ್ಕಳಾದ ನಾವು ಸಹ ಸದಾಕಾಲ ಜೀವಿಸುವ ಸುಯೋಗವನ್ನು ಕಳೆದುಕೊಳ್ಳಬೇಕಾಯಿತು. ಆದರೆ ಅವರು ಪಾಪಮಾಡಿದ ತಕ್ಷಣವೇ, ಅವರ ಅವಿಧೇಯತೆಯಿಂದ ಉಂಟಾದ ಪರಿಣಾಮಗಳನ್ನು ವಿಮುಖಗೊಳಿಸುವ ತನ್ನ ಉದ್ದೇಶವನ್ನು ದೇವರು ಪ್ರಕಟಪಡಿಸಿದನು. ಆತನು ಬರಲಿರುವ ‘ಸಂತಾನದ’ ಕುರಿತು ವಾಗ್ದಾನಿಸಿದನು. ಆ ಸಂತಾನವು ಯೇಸು ಕ್ರಿಸ್ತನೇ ಆಗಿದ್ದನು.—ಆದಿಕಾಂಡ 3:15; ರೋಮಾಪುರ 5:18.
ನಾವು ವ್ಯಕ್ತಿಗತವಾಗಿ ಆತನ ವಾಗ್ದಾನಗಳ ನೆರವೇರಿಕೆಯಿಂದ ಪ್ರಯೋಜನವನ್ನು ಪಡೆದುಕೊಳ್ಳುವೆವೋ ಇಲ್ಲವೋ ಎಂಬುದು ನಮ್ಮ ಕೈಯಲ್ಲಿದೆ. ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ನಾವು ತಾಳ್ಮೆಯಿಂದಿರಬೇಕು. ಈ ರೀತಿಯ ತಾಳ್ಮೆಯನ್ನು ಕಲಿತುಕೊಳ್ಳಲಿಕ್ಕಾಗಿ ಬೈಬಲು ನಮಗೆ ಸಹಾಯಮಾಡುತ್ತದೆ. ಅದು ಒಬ್ಬ ರೈತನ ಉದಾಹರಣೆಯ ಬಗ್ಗೆ ಮನನಮಾಡುವಂತೆ ನಮಗೆ ಉತ್ತೇಜನ ನೀಡುತ್ತದೆ. ಬೀಜ ಬಿತ್ತಿದ ನಂತರ, ಕೊಯ್ಲಿನ ಸಮಯದ ತನಕ ಅವನಿಗೆ ಕಾಯುವುದನ್ನು ಬಿಟ್ಟು ಇನ್ಯಾವ ಮಾರ್ಗವೂ ಇರುವುದಿಲ್ಲ. ತನ್ನ ಬೆಳೆಯನ್ನು ರಕ್ಷಿಸಲಿಕ್ಕೆ ಏನೆಲ್ಲ ಮಾಡಸಾಧ್ಯವೋ ಅದನ್ನು ಮಾಡುತ್ತಾ ತಾಳ್ಮೆಯಿಂದ ಕಾಯಬೇಕು ಅಷ್ಟೇ. ಆಗ ಅವನ ತಾಳ್ಮೆಗೆ ತಕ್ಕ ಫಲವು ಸಿಗುತ್ತದೆ. ಮತ್ತು ತನ್ನ ಬೆವರಿನ ಫಲಗಳನ್ನು ಅವನು ನೋಡಬಲ್ಲನು. (ಯಾಕೋಬ 5:7) ಪೌಲನು ತಾಳ್ಮೆಯ ಇನ್ನೊಂದು ಉದಾಹರಣೆಯನ್ನು ಕೊಡುತ್ತಾನೆ. ಅವನು ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ನಮಗೆ ಜ್ಞಾಪಕಹುಟ್ಟಿಸುತ್ತಾನೆ. ದೇವರ ಉದ್ದೇಶಗಳ ನೆರವೇರಿಕೆಗಾಗಿ ಅವರು ಎದುರುನೋಡುತ್ತಿದ್ದರಾದರೂ, ದೇವರ ನೇಮಿತ ಸಮಯಕ್ಕಾಗಿ ಕಾಯಲೇಬೇಕಾಗಿತ್ತು. “ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳ ವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ” ಅವರನ್ನು ನಾವು ಅನುಕರಿಸಬೇಕು ಎಂದು ಪೌಲನು ನಮ್ಮನ್ನು ಉತ್ತೇಜಿಸುತ್ತಾನೆ.—ಇಬ್ರಿಯ 6:11, 12.
ಹೌದು, ಕಾಯುವುದು ಜೀವಿತದ ಅವಿಭಾಜ್ಯ ಅಂಗವಾಗಿದೆ. ಆದರೆ ಇದು ಯಾವಾಗಲೂ ನಮಗೆ ಚಿಟ್ಟುಹಿಡಿಸುವಂತಹದ್ದು ಆಗಿರಬೇಕಾಗಿಲ್ಲ. ದೇವರ ವಾಗ್ದಾನಗಳು ಪೂರ್ತಿಯಾಗುವುದಕ್ಕಾಗಿ ಕಾಯುತ್ತಿರುವವರಿಗೆ, ಇದು ನಿಜವಾಗಿಯೂ ಸಂತೋಷದ ವಿಷಯವಾಗಿದೆ. ಕಾಯುತ್ತಿರುವ ಸಮಯದಲ್ಲಿ ಇವರು, ದೇವರೊಂದಿಗೆ ಒಂದು ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವುದು ಹಾಗೂ ತಮ್ಮ ನಂಬಿಕೆಯನ್ನು ಎತ್ತಿತೋರಿಸುವಂತಹ ವಿಷಯಗಳನ್ನು ಮಾಡಸಾಧ್ಯವಿದೆ. ಪ್ರಾರ್ಥನೆ, ಅಧ್ಯಯನ ಹಾಗೂ ಮನನದ ಮೂಲಕ, ದೇವರು ವಾಗ್ದಾನಿಸಿರುವ ವಿಷಯಗಳು ಖಂಡಿತವಾಗಿಯೂ ನೆರವೇರುವವು ಎಂಬ ಅಚಲವಾದ ಭರವಸೆಯನ್ನು ಅವರು ಬೆಳೆಸಿಕೊಳ್ಳಸಾಧ್ಯವಿದೆ.
[ಪುಟ 5ರಲ್ಲಿರುವ ಚೌಕ/ಚಿತ್ರಗಳು]
ಕಾಯುವುದರಿಂದ ಆಗುವ ನೋವನ್ನು ಕಡಿಮೆಗೊಳಿಸಿಕೊಳ್ಳಿರಿ!
ಮುಂದಾಗಿಯೇ ಯೋಜನೆಮಾಡಿರಿ! ಕಾಯಬೇಕು ಎಂಬುದು ನಿಮಗೆ ಗೊತ್ತಾಗುವಲ್ಲಿ, ಆ ಸಮಯದಲ್ಲಿ ಓದುವುದು, ಬರೆಯುವುದು, ಹೆಣಿಗೆ, ಕ್ರೋಷೆ ಕೆಲಸ ಮುಂತಾದುವುಗಳನ್ನು ಮಾಡಿರಿ ಇಲ್ಲವೇ ಉಪಯೋಗಕ್ಕೆ ಬರುವಂತಹ ಇನ್ನಿತರ ಕೆಲಸವನ್ನು ಮಾಡಿರಿ.
ನಾಗಾಲೋಟದಿಂದ ಓಡುತ್ತಿರುವ ಈ ಲೋಕದಲ್ಲಿ, ಮನನಮಾಡುವುದು ನಿಜವಾಗಿಯೂ ಕಷ್ಟ. ಆದುದರಿಂದ ಆ ಸಮಯವನ್ನು ಮನನಮಾಡುವುದಕ್ಕಾಗಿ ಉಪಯೋಗಿಸಿರಿ.
ಟೆಲಿಫೋನ್ ಮಾಡಲು ಕಾಯುತ್ತಿರುವುದಾದರೆ, ಕೇವಲ ಐದು ಹತ್ತು ನಿಮಿಷಗಳಲ್ಲಿ ಹಲವಾರು ಪುಟಗಳಷ್ಟು ವಿಷಯಗಳನ್ನು ನೀವು ಓದಸಾಧ್ಯವಿದೆ.
ನೀವು ಗುಂಪಿನೊಂದಿಗೆ ಕಾಯುತ್ತಿರುವುದಾದರೆ, ಸೂಕ್ತವಾಗಿರುವಲ್ಲಿ, ಇತರರೊಂದಿಗೆ ಮಾತಾಡಿರಿ ಹಾಗೂ ಅವರೊಂದಿಗೆ ಆತ್ಮೋನ್ನತಿಯನ್ನು ಮಾಡುವಂತಹ ಮಾತುಗಳನ್ನಾಡಿರಿ.
ನೀವು ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ, ಅನಿರೀಕ್ಷಿತವಾಗಿ ಕಾಯಬೇಕಾದ ಸಂದರ್ಭವು ನಿಮಗೆ ಒದಗಿಬರಬಹುದು. ಆದುದರಿಂದ ಕಾರಿನಲ್ಲಿ ಒಂದು ನೋಟ್ಬುಕ್ ಅನ್ನು ಇಲ್ಲವೇ ಓದಲು ಕೆಲವು ಪತ್ರಿಕೆ ಪುಸ್ತಕಗಳನ್ನು ಇಡಿರಿ.
ಕಣ್ಣುಗಳನ್ನು ಮುಚ್ಚಿ ವಿರಮಿಸಿರಿ ಇಲ್ಲವೇ ಪ್ರಾರ್ಥನೆ ಮಾಡಿರಿ.
ಕಾಯುವುದರಲ್ಲಿ ಸಫಲತೆಯನ್ನು ಕಂಡುಕೊಳ್ಳುವುದು, ನಮ್ಮ ಮನೋಭಾವ ಹಾಗೂ ಮುಂದಾಲೋಚನೆಯ ಮೇಲೆ ಹೊಂದಿಕೊಂಡಿದೆ.