ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನ ಸಮರ್ಪಣೆ—ಯೆಹೋವನಿಗೊಂದು ಉತ್ಸವ
ಪುರಾತನ ಸಮಯದಿಂದಲೂ, ಸಂತೋಷಸಂಭ್ರಮಗಳಿಂದ ಕೂಡಿದ ಉತ್ಸವಗಳು ಸತ್ಯಾರಾಧನೆಯ ಭಾಗವಾಗಿದ್ದವು. ಪುರಾತನ ಇಸ್ರಾಯೇಲ್ನಲ್ಲಿ ನಡೆಯುತ್ತಿದ್ದ ಉತ್ಸವಗಳಲ್ಲಿ ಕೆಲವು, ಅನೇಕ ದಿನಗಳ ವರೆಗೆ ಆಚರಿಸಲ್ಪಡುತ್ತಿದ್ದವು ಮತ್ತು ಅದಕ್ಕೆ ಸಾವಿರಗಟ್ಟಲೆ ಯೆಹೋವನ ಆರಾಧಕರು ಹಾಜರಾಗುತ್ತಿದ್ದರು. ಸೊಲೊಮೋನನ ದೇವಾಲಯದ ಪ್ರಾರಂಭೋತ್ಸವವು ಏಳು ದಿನಗಳ ವರೆಗೆ ನಡೆಯಿತು, ಮತ್ತು ಅದನ್ನು ಹಿಂಬಾಲಿಸಿ ಒಂದು ವಾರದಷ್ಟು ಉದ್ದದ ಪರ್ಣಶಾಲೆಗಳ ಹಬ್ಬವು ಸಹ ಆಚರಿಸಲ್ಪಟ್ಟಿತು. ಯೆಹೋವನು ಇಸ್ರಾಯೇಲ್ಯರೊಂದಿಗೆ ವ್ಯವಹರಿಸಿದ ಅದ್ಭುತಕರ ವಿಧದ ಕುರಿತು ಮನನಮಾಡುವಂತೆ ಇದು ಅವರಿಗೆ ಅವಕಾಶವನ್ನು ಒದಗಿಸಿತು. ಅವರು “ಯೆಹೋವನು . . . ಮಾಡಿದ ಸರ್ವೋಪಕಾರಗಳನ್ನು ನೆನಸಿ ಆನಂದಚಿತ್ತರಾಗಿ ಹರ್ಷಿಸುತ್ತಾ” ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.—1 ಅರಸು 8:66.
1999ರ ಮೇ 17-22ರ ತನಕ, ಅಮೆರಿಕದ ನ್ಯೂ ಯಾರ್ಕಿನ ಪ್ಯಾಟರ್ಸನ್ನಲ್ಲಿರುವ ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನಲ್ಲಿ ಏನು ಸಂಭವಿಸಿತೋ ಅದು, ಪುರಾತನ ಸಮಯದ ಆನಂದಮಯ ಉತ್ಸವಗಳನ್ನು ಸಂದರ್ಶಕರಿಗೆ ಜ್ಞಾಪಕ ಹುಟ್ಟಿಸಿತು. ಭೂವ್ಯಾಪಕ ಬೈಬಲ್ ಶಿಕ್ಷಣವನ್ನು ವಿಸ್ತಾರಗೊಳಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟ 28 ಕಟ್ಟಡಗಳ ಸಮರ್ಪಣೆಯ ಮೇಲೆ ಕೇಂದ್ರೀಕರಿಸುತ್ತಾ, ಇದು ವಿಶೇಷ ಚಟುವಟಿಕೆಯ ಒಂದು ವಾರವಾಗಿತ್ತು. ಆ ಸ್ಮರಣಾರ್ಹ ವಾರದಲ್ಲಿ, ಬ್ರೂಕ್ಲಿನ್, ವಾಲ್ಕಿಲ್, ಮತ್ತು ಪ್ಯಾಟರ್ಸನ್ಗಳಲ್ಲಿ ಕೆಲಸಮಾಡುತ್ತಿದ್ದ ಮುಖ್ಯಕಾರ್ಯಾಲಯದ ಸಿಬ್ಬಂದಿಯ ಎಲ್ಲ 5,400 ಸದಸ್ಯರಿಗೆ, ಪ್ಯಾಟರ್ಸನ್ನಲ್ಲಿದ್ದ ಬ್ರಾಂಚ್ ಕಟ್ಟಡಗಳನ್ನು ಸಂಪೂರ್ಣವಾಗಿ ಸುತ್ತಿನೋಡುವ ಏರ್ಪಾಡುಗಳು ಮಾಡಲ್ಪಟ್ಟಿದ್ದವು. ಪ್ಯಾಟರ್ಸನ್ಗೆ ಬಂದಿದ್ದ ಅತಿಥಿಗಳಲ್ಲಿ, ಈ ಮುಂಚೆ ಬೆತೆಲ್ ಸಿಬ್ಬಂದಿಯ ಸದಸ್ಯರಾಗಿದ್ದು, ಎಡ್ಯುಕೇಷನಲ್ ಸೆಂಟರ್ನ ನಿರ್ಮಾಣಕಾರ್ಯದಲ್ಲಿ ಭಾಗವಹಿಸಿದ್ದ 500ಕ್ಕಿಂತಲೂ ಹೆಚ್ಚು ಮಂದಿ, ವಾಚ್ ಟವರ್ ಸೊಸೈಟಿಯ 23 ಬ್ರಾಂಚ್ಗಳಿಂದ ಆಗಮಿಸಿದ ಪ್ರತಿನಿಧಿಗಳು, ಮತ್ತು ಸಮೀಪದ ಸಭೆಗಳಿಂದ ಬಂದ ಇನ್ನಿತರರು ಸೇರಿದ್ದರು—ಇವರೆಲ್ಲರೂ ಒಟ್ಟಿಗೆ ಹೆಚ್ಚುಕಡಿಮೆ 8,100 ಮಂದಿ.
ಟೂರ್ ಪ್ರದರ್ಶನಗಳು ತಿಳಿವಳಿಕೆ ನೀಡುತ್ತವೆ
ಎಡ್ಯುಕೇಷನಲ್ ಸೆಂಟರ್ನ ಬಗ್ಗೆ ಸಂದರ್ಶಕರಿಗೆ ಪರಿಚಯಮಾಡಿಸಲಿಕ್ಕಾಗಿ, ವಿಶೇಷ ಪ್ರದರ್ಶನಗಳು, ಶೈಕ್ಷಣಿಕ ವಿಡಿಯೋ ಷೋಗಳು, ಮತ್ತು ತಾವಾಗಿಯೇ ಸುತ್ತಿನೋಡುವ ಟೂರ್ಗಳು ಏರ್ಪಡಿಸಲ್ಪಟ್ಟಿದ್ದವು. ಪ್ರಮುಖವಾದ ಪ್ರವೇಶಾಂಗಣದಲ್ಲಿ, ಯೇಸುವಿನ ಭೂಶುಶ್ರೂಷೆಯ ಸಮಯದಲ್ಲಿ ಯೆರೂಸಲೇಮಿನಲ್ಲಿ ಅಸ್ತಿತ್ವದಲ್ಲಿದ್ದ ದೇವಾಲಯದ ಮಾದರಿ (ಮಾಡೆಲ್)ಯ ಕಡೆಗೆ ಸಂದರ್ಶಕರು ತತ್ಕ್ಷಣವೇ ಆಕರ್ಷಿತರಾದರು. ಇನ್ನಿತರ ಪ್ರದರ್ಶನಗಳು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್, ಇತಿಹಾಸ ಪ್ರಸಿದ್ಧವಾದ ಅಧಿವೇಶನಗಳು, ಸಭಾ ಕೂಟಗಳು, ಈಗ ಪ್ರತಿ ವಾರ ನಡೆಸಲ್ಪಡುತ್ತಿರುವ ಲಕ್ಷಾಂತರ ಗೃಹ ಬೈಬಲ್ ಅಧ್ಯಯನಗಳ ಆಧುನಿಕ ದಿನದ ಅಭಿವೃದ್ಧಿ, ಮತ್ತು ಯೇಸುವಿನ ಆಜ್ಞೆಗೆ ವಿಧೇಯತೆಯಲ್ಲಿ ಇಂತಹ ಚಟುವಟಿಕೆಗೆ ಅವಕಾಶವನ್ನು ಮಾಡಿಕೊಡಲಿಕ್ಕಾಗಿ, ಕಾನೂನು ಇಲಾಖೆ (ಲೀಗಲ್ ಡಿಪಾರ್ಟ್ಮೆಂಟ್)ಯಿಂದ ಮಾಡಲ್ಪಡುವ ಕೆಲಸದ ಆರಂಭದ ಇತಿಹಾಸದ ಕಡೆಗೆ ಗಮನವನ್ನು ಸೆಳೆದವು.—ಮತ್ತಾಯ 28:19, 20.
ಪಕ್ಕದ ಸಭಾಂಗಣದಲ್ಲಿ, 1,700 ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದು; ಸಮರ್ಪಣೆಯ ಉತ್ಸವಗಳ ಸಮಯದಲ್ಲಿ ಸಂದರ್ಶಕರಾಗಿ ಬಂದಿದ್ದವರಿಗೆ, “ಬಲದಿಂದಲ್ಲ—ನನ್ನ ಆತ್ಮದಿಂದಲೇ” ಎಂಬ ಶೀರ್ಷಿಕೆಯಿದ್ದ 33 ನಿಮಿಷಗಳ ವಿಡಿಯೋ ಪ್ರದರ್ಶನವು ಈ ಸಭಾಂಗಣದಲ್ಲಿ ತೋರಿಸಲ್ಪಟ್ಟಿತು. ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ ಹೇಗೆ ಕಟ್ಟಲ್ಪಟ್ಟಿತು ಎಂಬುದನ್ನು ಈ ವಿಡಿಯೋ ತೋರಿಸಿತು. ಎಲ್ಲ ವಿಷಯಗಳಲ್ಲಿ ಯೆಹೋವನು ನೀಡಿದ ಮಾರ್ಗದರ್ಶನವನ್ನು ಮತ್ತು 15 ವರ್ಷಗಳ ಈ ಯೋಜನೆಯನ್ನು ಯಶಸ್ವಿಕರವಾಗಿ ಮುಕ್ತಾಯದ ಹಂತಕ್ಕೆ ತಂದುಮುಟ್ಟಿಸಲಿಕ್ಕಾಗಿ ಮಾಡಲ್ಪಟ್ಟ ಪ್ರಯತ್ನಗಳ ಮೇಲಿನ ಆತನ ಆಶೀರ್ವಾದಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವಂತಹ ಘಟನೆಗಳನ್ನು ಇಂಟರ್ವ್ಯೂಗಳು ತಿಳಿಯಪಡಿಸಿದವು. ಇದರ ನಿರ್ಮಾಣ ಯೋಜನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. 1994ರಲ್ಲಿ, ಒಂದು ಹಂತದಲ್ಲಿ, ಕಟ್ಟಡ ನಿವೇಶನದಲ್ಲಿ ಸುಮಾರು 526 ಕೆಲಸಗಾರರಿದ್ದರು; ಅವರಲ್ಲಿ 350 ಮಂದಿ ಪೂರ್ಣ ಸಮಯದ ಸ್ವಯಂಸೇವಕರು, 113 ಮಂದಿ ತಾತ್ಕಾಲಿಕ ಕೆಲಸಗಾರರು, ಮತ್ತು ಪ್ರತಿ ದಿನ ಬಂದುಹೋಗುತ್ತಿದ್ದ 63 ಮಂದಿ ಸಹಾಯಕರು ಸೇರಿದ್ದರು. ಇನ್ನೂ ಅನೇಕರು ದಾನಗಳನ್ನು ಕೊಡುವ ಮೂಲಕ ಈ ಕೆಲಸಕ್ಕೆ ಬೆಂಬಲ ನೀಡಿದರು. ಯೆಹೋವನ ಆತ್ಮದ ಸಹಾಯವಿಲ್ಲದೆ ಇದು ಎಂದೂ ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಅವರೆಲ್ಲರೂ ಮನಗಾಣುತ್ತಾರೆ.—ಜೆಕರ್ಯ 4:6.
ಎಡ್ಯುಕೇಷನಲ್ ಸೆಂಟರ್ನ ಕಟ್ಟಡವನ್ನು ಸುತ್ತಿನೋಡಿದವರೆಲ್ಲರೂ, ದೈವಿಕ ಬೋಧನೆಯನ್ನು ಉತ್ತೇಜಿಸುವ ಪ್ರಾಮುಖ್ಯ ಕೆಲಸವು ಇಲ್ಲಿ ನಡೆಯುತ್ತದೆ ಎಂಬುದನ್ನು ಅವಲೋಕಿಸಶಕ್ತರಾದರು. ಸ್ಕೂಲ್ ಕಟ್ಟಡದ ಮೊದಲನೆಯ ಮಹಡಿಯಲ್ಲಿದ್ದ ಗಿಲ್ಯಡ್ ಸ್ಕೂಲ್ನ ಪ್ರವೇಶದ್ವಾರದಲ್ಲಿದ್ದ ಚಿತ್ರಪಟಗಳು, ಈ ಸ್ಕೂಲ್ನ ಹೇರಳವಾದ ಆತ್ಮಿಕ ಪರಂಪರೆ ಹಾಗೂ ಇತಿಹಾಸವನ್ನು ಎತ್ತಿತೋರಿಸಿದವು. 1943ರಲ್ಲಿ, ನ್ಯೂ ಯಾರ್ಕಿನ ಸೌತ್ ಲ್ಯಾನ್ಸಿಂಗ್ನಲ್ಲಿದ್ದ ಸ್ಕೂಲ್ನ ಮೂಲ ಕ್ಯಾಂಪಸ್ನಲ್ಲಿ ಗಿಲ್ಯಡ್ ಸ್ಕೂಲ್ನ ಮೊದಲ ಕ್ಲಾಸ್ ಆರಂಭವಾದಂದಿನಿಂದ, 7,000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಮಿಷನೆರಿ ಸೇವೆಗಾಗಿ ತರಬೇತುಗೊಳಿಸಲಾಗಿದೆ. ಸ್ಕೂಲ್ ಕಟ್ಟಡದ ಎರಡನೆಯ ಮಹಡಿಯಲ್ಲಿದ್ದ ಚಿತ್ರಪಟಗಳು, ಬ್ರಾಂಚ್ ಕಮಿಟಿ ಸದಸ್ಯರಿಗಾಗಿ ಏರ್ಪಡಿಸಲ್ಪಡುವ ಸ್ಕೂಲ್ ಹಾಗೂ ಸಂಚರಣ ಮೇಲ್ವಿಚಾರಕರಿಗಾಗಿರುವ ಸ್ಕೂಲ್ನ ಚಿತ್ರಣವನ್ನು ನೀಡಿದವು—ಈ ಎರಡೂ ಕ್ಲಾಸ್ಗಳು ಇಲ್ಲಿಯೇ ನಡೆಯುತ್ತವೆ. 1995ರಲ್ಲಿ ಬ್ರಾಂಚ್ ಸ್ಕೂಲ್ ಆರಂಭವಾದಂದಿನಿಂದ, ಇದು 106 ದೇಶಗಳ 360 ಬ್ರಾಂಚ್ ಕಮಿಟಿ ಸದಸ್ಯರಿಗೆ ಪ್ರೌಢ ಶಿಕ್ಷಣವನ್ನು ಒದಗಿಸಿದೆ.
ಸಂದರ್ಶಕರು ಕಟ್ಟಡದ ಟೂರ್ಗೆ ಹೋಗಿದ್ದಾಗ, ಅಧಿಕಾಂಶ ಕ್ಷೇತ್ರಗಳಲ್ಲಿ ತಾವು ಚಿತ್ರಗಳ ಪ್ರದರ್ಶನಕ್ಕಿಂತಲೂ ಹೆಚ್ಚಿನದ್ದನ್ನು ನೋಡಲು ಶಕ್ತರಾಗಿದ್ದೇವೆ ಎಂದು ಆ ಕೂಡಲೆ ಗ್ರಹಿಸಿದರು. ಅವರು ನೇರವಾಗಿ ಬೇರೆ ಬೇರೆ ಡಿಪಾರ್ಟ್ಮೆಂಟ್ಗಳಿಗೆ ಹೋಗಲು, ಆಫೀಸುಗಳನ್ನು ಹಾಗೂ ಇನ್ನಿತರ ಸ್ಥಳಗಳನ್ನು ವೈಯಕ್ತಿಕವಾಗಿ ಭೇಟಿಮಾಡಲು, ಮತ್ತು ಅಲ್ಲಿ ಮಾಡಲ್ಪಡುವ ಕೆಲಸದ ವಿಸ್ತಾರ ನೋಟವನ್ನು ಪಡೆದುಕೊಳ್ಳಲು ಶಕ್ತರಾಗಿದ್ದರು. ಟೂರ್ನ ಒಂದು ಮುಖ್ಯಾಂಶವು ಆಡಿಯೊ/ವಿಡಿಯೊ ಸರ್ವಿಸಸ್ನ ಕಟ್ಟಡವಾಗಿತ್ತು. ಬೈಬಲ್ ಶಿಕ್ಷಣವನ್ನು ಉತ್ತೇಜಿಸಲಿಕ್ಕಾಗಿ ಇಲ್ಲಿ ಎಷ್ಟೊಂದು ಅತ್ಯುತ್ತಮವಾದ ಸೌಕರ್ಯಗಳು ಉಪಯೋಗಿಸಲ್ಪಡುತ್ತಿವೆ! ಬೋಧಪ್ರದವಾದ ಅನೇಕ ಪ್ರದರ್ಶನಗಳು ಹಾಗೂ ಲಘು ವಿಡಿಯೋ ಕಾರ್ಯಕ್ರಮಗಳ ಮೂಲಕ, ಧ್ವನಿಯ ರೆಕಾರ್ಡಿಂಗ್ಗಳು ಹೇಗೆ ಮಾಡಲ್ಪಡುತ್ತವೆ ಮತ್ತು ವಿಡಿಯೊಗಳು ಹೇಗೆ ತಯಾರಿಸಲ್ಪಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂದರ್ಶಕರಿಗೆ ಸಹಾಯ ಮಾಡಲಾಯಿತು. ರಂಗಸಜ್ಜು ಹಾಗೂ ಪೋಷಾಕುಗಳ ಸಿದ್ಧತೆಯಲ್ಲಿ ಮಾಡಲ್ಪಡುವ ವ್ಯಾಪಕವಾದ ರಿಸರ್ಚ್ನ ಕುರಿತು ಅವರು ಸ್ವಲ್ಪಮಟ್ಟಿಗೆ ತಿಳಿದುಕೊಂಡರು. ತುಂಬ ಕಡಿಮೆ ಖರ್ಚಿನಲ್ಲಿ ಸ್ಟೇಜ್ ಸೆಟ್ಗಳು ಹೇಗೆ ಜೋಡಿಸಲ್ಪಡುತ್ತವೆ, ಮತ್ತು ಹೇಗೆ ಚಿಕ್ಕಪುಟ್ಟ ವಿವರಗಳಿಗೂ ವಿಶೇಷ ಗಮನವನ್ನು ಕೊಡಲಾಗುತ್ತದೆ ಎಂಬುದನ್ನು ಅವರು ನೋಡಿದರು. ನೋಡುತ್ತಿರುವ ದೃಶ್ಯದಲ್ಲಿ ತಾವೂ ಒಳಗೂಡಿದ್ದೇವೆ ಎಂಬ ಅನಿಸಿಕೆಯನ್ನು ಜನರಲ್ಲಿ ಉಂಟುಮಾಡಲಿಕ್ಕಾಗಿ ಸಂಗೀತವು ಹೇಗೆ ಉಪಯೋಗಿಸಲ್ಪಡುತ್ತದೆ ಎಂಬುದನ್ನು ಸಹ ಅವರು ಕಣ್ಣಾರೆ ಕಂಡರು. 1990ರಿಂದ ಸೊಸೈಟಿಯು 41 ಭಾಷೆಗಳಲ್ಲಿ ಹತ್ತು ವಿಡಿಯೊಗಳನ್ನು ಬಿಡುಗಡೆಮಾಡಿದೆ; ಇವುಗಳಲ್ಲಿ ಅಮೆರಿಕನ್ ಸಂಕೇತ ಭಾಷೆಯನ್ನು ಉಪಯೋಗಿಸುವವರಿಗಾಗಿ ಸಿದ್ಧಪಡಿಸಲ್ಪಟ್ಟ ಇತರ ವಿಡಿಯೊಗಳೊಂದಿಗೆ, ಬೇರೆ ಬೇರೆ ಬೈಬಲ್ ಮುಖ್ಯವಿಷಯಗಳನ್ನು ಎತ್ತಿತೋರಿಸುವ ವಿಡಿಯೊಗಳೂ ಸೇರಿವೆ.
ಟೂರ್ ಮಾಡುತ್ತಿದ್ದ ಅನೇಕರು ಫೋಟೋ ಲ್ಯಾಬ್, ಆರ್ಟ್ ಡಿಪಾರ್ಟ್ಮೆಂಟ್, ಕಂಪ್ಯೂಟರ್ ತರಬೇತಿ ಹಾಗೂ ಸಹಾಯವನ್ನು ನೀಡುವ ಇನ್ಫರ್ಮೇಷನ್ ಸರ್ವಿಸಸ್, 11,242 ಸಭೆಗಳು ಹಾಗೂ 572 ಸಂಚರಣ ಮೇಲ್ವಿಚಾರಕರ ಚಟುವಟಿಕೆಯನ್ನು ನೋಡಿಕೊಳ್ಳುವಂತಹ ಸರ್ವಿಸ್ ಡಿಪಾರ್ಟ್ಮೆಂಟ್, ಮತ್ತು ಎಲ್ಲಿ ಪ್ರತಿ ವರ್ಷ ಸುಮಾರು 14,000 ಪ್ರಶ್ನೆಗಳು ನಿರ್ವಹಿಸಲ್ಪಡುತ್ತವೋ ಆ ರೈಟಿಂಗ್ ಕಾರಿಸ್ಪಾಂಡನ್ಸ್ ಡಿಪಾರ್ಟ್ಮೆಂಟ್ಗಳಿಗೆ ಹೋದರು. ಕಳುಹಿಸಲ್ಪಟ್ಟಿರುವ ಪತ್ರಗಳ ಹಿಂದೆ ಮಾಡಲ್ಪಡುವ ಸಂಶೋಧನೆಯನ್ನು ಹಾಗೂ ಗಂಭೀರವಾದ ಸಮಸ್ಯೆಗಳೊಂದಿಗೆ ವ್ಯವಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂಬುದನ್ನು ತಮ್ಮ ಪ್ರಶ್ನೆಗಳ ಮೂಲಕ ವ್ಯಕ್ತಪಡಿಸುವಂತಹ ಜನರ ಕಡೆಗೆ ತೋರಿಸಲ್ಪಡುವ ನಿಜವಾದ ಚಿಂತೆಯನ್ನು ನೋಡಿ ಅವರು ಪ್ರಭಾವಿತರಾದರು.
ಟೂರ್ ಮಾಡುತ್ತಿದ್ದ ಜನರ ತಂಡಗಳು, ಒಂದರ ನಂತರ ಇನ್ನೊಂದರಂತೆ ಟ್ರಾನ್ಸ್ಲೇಶನ್ ಸರ್ವಿಸಸ್ ಇಲಾಖೆಯನ್ನು ಸಂದರ್ಶಿಸಿದವು. ಕಳೆದ ಐದು ವರ್ಷಗಳಲ್ಲಿ, ಸೊಸೈಟಿಯು ಎಷ್ಟು ಭಾಷೆಗಳಲ್ಲಿ ಬೈಬಲ್ ಸಾಹಿತ್ಯವನ್ನು ಒದಗಿಸುತ್ತಿತ್ತೋ ಆ ಸಂಖ್ಯೆಗೆ ಇನ್ನೂ 102 ಭಾಷೆಗಳು ಕೂಡಿಸಲ್ಪಟ್ಟವು ಎಂಬುದನ್ನು ತಿಳಿದು ಅವರು ಅತ್ಯಾಶ್ಚರ್ಯಪಟ್ಟರು. ಲೋಕವ್ಯಾಪಕವಾಗಿ, ಇಂಗ್ಲಿಷನ್ನು ಬಿಟ್ಟು ಇನ್ನಿತರ ಭಾಷೆಗಳಲ್ಲಿರುವ ಸೊಸೈಟಿಯ ಪ್ರಕಾಶನಗಳನ್ನು ಸುಮಾರು 80 ಪ್ರತಿಶತ ಯೆಹೋವನ ಸಾಕ್ಷಿಗಳು ಓದುತ್ತಾರೆ. ಅವರ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ, 100 ದೇಶಗಳಲ್ಲಿರುವ ಭಾಷಾಂತರ ಇಲಾಖೆಗಳಲ್ಲಿ 1,700ಕ್ಕಿಂತಲೂ ಹೆಚ್ಚು ಸ್ವಯಂಸೇವಕರು ಕೆಲಸಮಾಡುತ್ತಿದ್ದಾರೆ. ಕಾವಲಿನಬುರುಜು ಪತ್ರಿಕೆಗಳು ಉತ್ತರ ಮತ್ತು ದಕ್ಷಿಣ ಅಮೆರಿಕ, ಯೂರೋಪ್, ಏಷ್ಯಾ, ಮತ್ತು ಆಫ್ರಿಕನ್ ಭಾಷೆಗಳಲ್ಲಿರುವುದನ್ನು ಪ್ರದರ್ಶನಗಳು ತೋರಿಸಿದವು. 31 ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿರುವ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲನ್ನು ಸಹ ಸಂದರ್ಶಕರು ನೋಡಸಾಧ್ಯವಿತ್ತು. ವಾಟ್ ಟವರ್ ಪ್ರಕಾಶನಗಳು ಇಂದು 332 ಭಾಷೆಗಳಲ್ಲಿ ದೊರೆಯುತ್ತವೆ ಮತ್ತು ಇವುಗಳಲ್ಲಿ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ 219 ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿದೆ ಎಂಬುದನ್ನು ಅವರು ತಿಳಿದುಕೊಂಡರು.
ಲೀಗಲ್ ಡಿಪಾರ್ಟ್ಮೆಂಟ್ಗೆ ಹೋದ ಸಂದರ್ಶಕರಿಗೆ, ಲೋಕವ್ಯಾಪಕವಾಗಿ ಕಾನೂನಿನ ಗಮನವು ಬೇಕಾಗುವ ಬೇರೆ ಬೇರೆ ಕಾರ್ಯಕ್ಷೇತ್ರಗಳನ್ನು ತೋರಿಸಲಾಯಿತು. ಒಂದು ವಿಡಿಯೊದಲ್ಲಿ, ರಕ್ತಪೂರಣವನ್ನು ಒಳಗೊಂಡಿದ್ದ ಒಂದು ಕೇಸಿನಲ್ಲಿ ಸಾಕ್ಷಿ ವಕೀಲನೊಬ್ಬನು ವಾದಿಸುತ್ತಿದ್ದಂತಹ ಒಂದು ಕೋರ್ಟ್ ಮೊಕದ್ದಮೆಯನ್ನು ಅವರು ನೋಡಿದರು. ಸುವಾರ್ತೆಯನ್ನು ಸಾರ್ವಜನಿಕವಾಗಿ ಸಾರುವ ಅವಕಾಶವನ್ನು ಮಾಡಿಕೊಡಲಿಕ್ಕಾಗಿ ಯಾವ ಕೆಲಸಗಳು ಮಾಡಲ್ಪಡುತ್ತಿವೆ ಎಂಬುದು ಸಹ ಅವರಿಗೆ ಗೊತ್ತಾಯಿತು. (ಫಿಲಿಪ್ಪಿ 1:7) ಈ ವರ್ಷದ ಮಾರ್ಚ್ ತಿಂಗಳಿನಲ್ಲಿ, ಅಮೆರಿಕದ ನ್ಯೂ ಜೆರ್ಸಿಯ ಓರಡೆಲ್ನ ನಗರಕ್ಕೆ, ಫೆಡರಲ್ ಡಿಸ್ಟ್ರಿಕ್ಟ್ ಕೋರ್ಟ್ ಕೊಟ್ಟ ತೀರ್ಪಿನ ಕಡೆಗೆ ಗಮನ ಸೆಳೆಯಲಾಯಿತು. ಆ ತೀರ್ಪಿನಲ್ಲಿ, ಓರಡೆಲ್ನಲ್ಲಿ ಮನೆಯಿಂದ ಮನೆಗೆ ಸಾರ್ವಜನಿಕವಾಗಿ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಬಯಸುವ ಯೆಹೋವನ ಸಾಕ್ಷಿಗಳಿಗೆ, ಪರವಾನಗಿ ಹಾಗೂ ಬ್ಯಾಡ್ಜಿನ ಆವಶ್ಯಕತೆಗಳನ್ನು ತೆಗೆದುಹಾಕುವ ಮೂಲಕ ನಗರಾಡಳಿತವು ತನ್ನ ನಿಯಮಗಳನ್ನು ಬದಲಾಯಿಸುವಂತೆ ನಿರ್ದೇಶಿಸಲಾಯಿತು.
ಸಂದರ್ಶಕರು ಕೇವಲ ಇಷ್ಟನ್ನೇ ನೋಡಲಿಲ್ಲ. ಪ್ರೀಕಾಸ್ಟ್ ಕಾಂಕ್ರೀಟ್ ಕಾರ್ಖಾನೆಯಲ್ಲಿ ಕಟ್ಟಡ ರಚನೆಯ ಪ್ರದರ್ಶನವನ್ನು ಅವರು ಪರೀಕ್ಷಿಸಿದರು. ಮಲಿನ ಜಲವನ್ನು ಶುದ್ಧೀಕರಿಸುವ ಸೌಕರ್ಯಗಳು, ಪವರ್ಹೌಸ್, ನೀರಿನಿಂದ ರಾಸಾಯನಿಕಗಳನ್ನು ಇಲ್ಲವಾಗಿಸುವ ಸೌಕರ್ಯ, ಮತ್ತು ಅನೇಕ ಮೇಂಟೆನೆನ್ಸ್ ಷಾಪ್ಗಳನ್ನು ಸಹ ಹತ್ತಿರದಿಂದ ನೋಡಿದರು. ಇದು ಒಂದು ಅಪೂರ್ವ ಅವಕಾಶವಾಗಿತ್ತು.
ಸಮರ್ಪಣೆಯ ಕಾರ್ಯಕ್ರಮವು ದೈವಿಕ ಶಿಕ್ಷಣಕ್ಕೆ ಮಹತ್ವ ನೀಡುತ್ತದೆ
ಸಮರ್ಪಣೆಯ ಕಾರ್ಯಕ್ರಮವು, ಮೇ 19ರ ಬುಧವಾರದಂದು, ಸಂಜೆ 4:00 ಗಂಟೆಗೆ ಆರಂಭವಾಯಿತು. 6,929 ಜನರ ಹರ್ಷಭರಿತ ಗುಂಪಿನಲ್ಲಿ, ಮುಖ್ಯಕಾರ್ಯಾಲಯದ ಸಿಬ್ಬಂದಿಯ ಸದಸ್ಯರು, ಸೊಸೈಟಿಯ ಅತಿಥಿಗಳು, ಮತ್ತು ಕೆನಡ ಬ್ರಾಂಚ್ನಲ್ಲಿ ಒಟ್ಟುಗೂಡಿದ್ದ 372 ಮಂದಿ ಸೇರಿದ್ದರು; ಕೆನಡ ಬ್ರಾಂಚ್ಗೆ ಇಲೆಕ್ಟ್ರಾನಿಕ್ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.
ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾದ ಮಿಲ್ಟನ್ ಜಿ. ಹೆನ್ಶೆಲ್ರಿಂದ ಹೃತ್ಪೂರ್ವಕ ನುಡಿಗಳನ್ನು ಕೇಳಿಸಿಕೊಂಡು ಸಭಿಕರು ಸಂತೋಷಗೊಂಡರು. ಆ ಬಳಿಕ, ಆಡಳಿತ ಮಂಡಲಿಯ ಸದಸ್ಯರೂ ಈ ಸಮಾರಂಭದ ಅಧ್ಯಕ್ಷರೂ ಆಗಿದ್ದ ಥಿಯೋಡರ್ ಜಾರಸ್ ಅವರು, ವಿಲಿಯಮ್ ಮಾಲೆನ್ಫಾಂಟ್ರನ್ನು ಪರಿಚಯಿಸಿದರು. “ಕಟ್ಟಡ ನಿರ್ಮಾಣ ಯೋಜನೆಯ ಮುಖ್ಯಾಂಶಗಳು” ಎಂಬ ಭಾಷಣವನ್ನು ಕೊಡುತ್ತಿರುವಾಗ, ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನ ಆರಂಭ, ವಿನ್ಯಾಸ, ಹಾಗೂ ನಿರ್ಮಾಣಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಮೂವರು ಸಹೋದರರೊಂದಿಗೆ ಇಂಟರ್ವ್ಯೂ ನಡೆಸಿದರು. ಕಟ್ಟಡವನ್ನು ಕಟ್ಟಲು ಹಿಡಿದ ಅನೇಕ ವರ್ಷಗಳ ಸಮಯದಲ್ಲಿ, ಈ ನಿರ್ಮಾಣ ಯೋಜನೆಯಲ್ಲಿ ಕೆಲಸ ಮಾಡಲಿಕ್ಕಾಗಿ, ಸುಮಾರು 8,700ಕ್ಕಿಂತಲೂ ಹೆಚ್ಚು ತಾತ್ಕಾಲಿಕ ಕೆಲಸಗಾರರು ತಮ್ಮ ಸ್ವಂತ ಖರ್ಚಿನಿಂದ ಬಂದಿದ್ದರು ಎಂದು ಇಂಟರ್ವ್ಯೂಗಳಲ್ಲಿ ಹೇಳಲಾಯಿತು. ದೈವಿಕ ಬೋಧನೆಯಿಂದ ಸಾಧ್ಯಗೊಳಿಸಲ್ಪಟ್ಟ ಐಕ್ಯಭಾವ ಹಾಗೂ ಉದಾರ ಮನೋಭಾವಕ್ಕೆ ಎಂತಹ ಅತ್ಯುತ್ತಮವಾದ ಒಂದು ಪುರಾವೆ!
ಇದರ ಬಳಿಕ, “ಭೌಗೋಲಿಕ ಪ್ರಮಾಣದಲ್ಲಿ ದೈವಿಕ ಶಿಕ್ಷಣ” ಎಂಬ ಶೀರ್ಷಿಕೆಯುಳ್ಳ ಒಂದು ಭಾಷಣಮಾಲೆಯು ಕೊಡಲ್ಪಟ್ಟಿತು. ಆಡಳಿತ ಮಂಡಲಿಯ ನಾಲ್ಕು ಸದಸ್ಯರಿಂದ ಈ ಭಾಷಣಮಾಲೆಯು ಸಾದರಪಡಿಸಲ್ಪಟ್ಟಿತು. ದೈವಿಕ ಶಿಕ್ಷಣದ ಆಧಾರವು ದೇವರ ವಾಕ್ಯವಾದ ಬೈಬಲಾಗಿದ್ದು, ಇದು “ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ [“ನಿಷ್ಕೃಷ್ಟ ಜ್ಞಾನದಿಂದ,” NW] ಅಭಿವೃದ್ಧಿಯಾಗು”ವಂತೆ ಕ್ರೈಸ್ತರನ್ನು ಉತ್ತೇಜಿಸುತ್ತದೆ ಎಂದು ಜಾನ್ ಈ. ಬಾರ್ ಒತ್ತಿಹೇಳಿದರು. (ಕೊಲೊಸ್ಸೆ 1:10) ಕ್ರೈಸ್ತ ಸಭೆಯ ತಲೆಯಾಗಿರುವ ಯೇಸು ಕ್ರಿಸ್ತನಿಂದ, ಲೋಕವ್ಯಾಪಕವಾಗಿರುವ ಸಹೋದರತ್ವದ ಪ್ರತಿಯೊಬ್ಬ ಸದಸ್ಯನ ತನಕ, ದೈವಿಕ ಶಿಕ್ಷಣವು ಹೇಗೆ ದೇವಪ್ರಭುತ್ವ ರೀತಿಯಲ್ಲಿ ವ್ಯವಸ್ಥಾಪಿಸಲ್ಪಟ್ಟಿದೆ ಎಂಬ ವಿಷಯದ ಬಗ್ಗೆ ಡ್ಯಾನಿಯೆಲ್ ಸಿಡ್ಲಿಕ್ ಚರ್ಚಿಸಿದರು. (1 ಕೊರಿಂಥ 12:12-27) ಭಾಷಣಮಾಲೆಯ ಕೊನೆಯ ಎರಡು ಭಾಗಗಳು, ಗೆರಿಟ್ ಲಾಶ್ ಮತ್ತು ಕ್ಯಾರಿ ಬಾರ್ಬರ್ರಿಂದ ಕೊಡಲ್ಪಟ್ಟವು. ಎಲ್ಲೆಡೆಯೂ ಇರುವ ಜನರನ್ನು ತಲಪಲಿಕ್ಕಾಗಿ ಮತ್ತು ಅವರು ಸಹ ದೇವರ ಮಾರ್ಗದಲ್ಲಿ ನಡೆಯಸಾಧ್ಯವಾಗುವಂತೆ ಅವರಿಗೆ ಕಲಿಸಲಿಕ್ಕಾಗಿ, ದೈವಿಕ ಶಿಕ್ಷಣವು ಶುಶ್ರೂಷಕರನ್ನು ಹೇಗೆ ಅರ್ಹರನ್ನಾಗಿಮಾಡುತ್ತದೆ ಎಂಬುದನ್ನು ಅವು ತೋರಿಸಿದವು.—ಯೆಶಾಯ 2:1-4; 2 ಕೊರಿಂಥ 3:5.
ಈ ಎಡ್ಯುಕೇಷನಲ್ ಸೆಂಟರ್ನಲ್ಲಿ ನಡೆಯುವ ಬೇರೆ ಬೇರೆ ಸ್ಕೂಲ್ಗಳ ಕುರಿತು ಸಭಿಕರಿಗೆ ತಿಳಿವಳಿಕೆ ನೀಡಲಿಕ್ಕಾಗಿ, ಸ್ಕೂಲ್ಗಳ ಶಿಕ್ಷಕರೊಂದಿಗೆ ಹಾಗೂ ಈ ಕಾರ್ಯಾಚರಣೆಯಲ್ಲಿ ಒಳಗೂಡಿದ್ದ ಇತರರೊಂದಿಗೆ ಇಂಟರ್ವ್ಯೂಗಳು ಹಾಗೂ ಚರ್ಚೆಗಳು ನಡೆಸಲ್ಪಟ್ಟವು. ಭೂವ್ಯಾಪಕವಾಗಿ ದೈವಿಕ ಶೈಕ್ಷಣಿಕ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಪ್ರತಿಯೊಂದು ಸ್ಕೂಲ್ ವಹಿಸುವ ಪಾತ್ರವನ್ನು ಸಹ ತೋರಿಸಲಾಯಿತು. ಗಿಲ್ಯಡ್ ಶಾಲೆಯು, ಬೈಬಲಿನ ಪ್ರತಿಯೊಂದು ಪುಸ್ತಕದ ಅಧ್ಯಯನದ ಮೇಲೆ, ಯೆಹೋವನ ಜನರ ಆಧುನಿಕ ದಿನದ ಇತಿಹಾಸದ ಮೇಲೆ, ಮತ್ತು ಮಿಷನೆರಿ ಸೇವೆಗಾಗಿ ಸಿದ್ಧರಾಗುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ ಎಂದು ತಿಳಿಸಲಾಯಿತು. ಬ್ರಾಂಚ್ ಸ್ಕೂಲ್, ಬ್ರಾಂಚ್ ಕಮಿಟಿಯ ಸದಸ್ಯರು ಒಳಗೂಡಿರುವ ಬೇರೆ ಬೇರೆ ಕಾರ್ಯಕ್ಷೇತ್ರಗಳ ಗಮನಾರ್ಹವಾದ ವ್ಯಾಪಕ ಅಧ್ಯಯನವೇ ಆಗಿದೆ. ಸಂಚರಣ ಮೇಲ್ವಿಚಾರಕರಿಗಾಗಿರುವ ಶಾಲೆಯು, ಕೇವಲ ಸಂಚರಣ ಸಹೋದರರ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಮಾತ್ರವಲ್ಲ, ಸಭೆಗಳಿಗೆ ವಿಶೇಷವಾಗಿ ಪ್ರಯೋಜನದಾಯಕವಾಗಿರುವ ಆತ್ಮಿಕ ಸಹಾಯವನ್ನು ಒದಗಿಸಲಿಕ್ಕಾಗಿ ಅವರನ್ನು ತರಬೇತುಗೊಳಿಸಲು ಏರ್ಪಡಿಸಲ್ಪಟ್ಟಿದೆ.
ಈ ವಿಶೇಷ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುತ್ತಾ, ಆಡಳಿತ ಮಂಡಲಿಯ ಸದಸ್ಯರಾದ ಲೈಡ್ ಬ್ಯಾರಿ ಅವರು, “ನಮ್ಮ ಮಹಾನ್ ಸೃಷ್ಟಿಕರ್ತನೊಂದಿಗೆ ಕಟ್ಟುವುದು” ಎಂಬ ವಿಷಯದ ಮೇಲೆ ಸಮರ್ಪಣೆಯ ಭಾಷಣವನ್ನು ಕೊಟ್ಟರು. ಸೃಷ್ಟಿಕರ್ತನಾದ ಯೆಹೋವನು, ತನ್ನ ಎಲ್ಲ ಸೃಷ್ಟಿಕ್ರಿಯೆಗಳನ್ನು ನೋಡಿ ಹರ್ಷಪಡುತ್ತಾನೆ ಮತ್ತು ಆತನೊಂದಿಗೆ ನಾವು ಕೂಡ ಹರ್ಷಿಸುವಂತೆ ಕರೆಕೊಡುತ್ತಾನೆ ಎಂದು ಅವರು ಹೇಳಿದರು. (ಯೆಶಾಯ 65:18) “ಸಮಸ್ತವನ್ನು ಕಟ್ಟಿದಾತನು ದೇವರೇ” ಆಗಿರುವುದರಿಂದ, ಈ ಎಲ್ಲ ನಿರ್ಮಾಣ ಯೋಜನೆಯ ಅಂತಿಮ ಕೀರ್ತಿಯು ಯೆಹೋವ ದೇವರಿಗೇ ಸಲ್ಲತಕ್ಕದ್ದು. (ಇಬ್ರಿಯ 3:4) ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಬಳಿಕ, ನಮ್ಮ ಮಹಾನ್ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ವಾಚ್ಟವರ್ ಎಡ್ಯುಕೇಷನ್ ಸೆಂಟರನ್ನು ಸಮರ್ಪಿಸುತ್ತಾ, ಭಾಷಣಕರ್ತರು ಒಂದು ಹೃದಯಸ್ಪರ್ಶಿ ಪ್ರಾರ್ಥನೆಯನ್ನು ಮಾಡಿದರು.a
ಹಾಜರಾಗಿದ್ದವರೆಲ್ಲರೂ ಇಡೀ ವಾರದ ಸಂತೋಷಸಂಭ್ರಮಗಳನ್ನು ಬಹಳ ದೀರ್ಘ ಕಾಲಾವಧಿಯ ವರೆಗೆ ಜ್ಞಾಪಿಸಿಕೊಳ್ಳುವರು ಎಂಬುದರಲ್ಲಿ ಸಂದೇಹವೇ ಇಲ್ಲ. ವಾಚ್ಟವರ್ ಎಡ್ಯುಕೇಷನಲ್ ಸೆಂಟರನ್ನು ಸಂದರ್ಶಿಸಲು ನೀವು ಯಾಕೆ ಏರ್ಪಾಡುಗಳನ್ನು ಮಾಡಬಾರದು? ನಮ್ಮ ಪ್ರೀತಿಯ ಸೃಷ್ಟಿಕರ್ತನ ಕುರಿತು ಹೆಚ್ಚನ್ನು ಕಲಿಯುವ ಹಾಗೂ ಆತನ ನೀತಿಯ ಮಾರ್ಗಗಳಿಗನುಸಾರ ಜೀವಿಸುವ ನಿಮ್ಮ ಪ್ರಯತ್ನಗಳಲ್ಲಿ, ಈ ಭೇಟಿ ಮತ್ತು ಟೂರ್ ನಿಮಗೆ ತುಂಬ ಉತ್ತೇಜನದಾಯಕವಾಗಿರುವುದು ಎಂಬ ವಿಷಯದಲ್ಲಿ ನಮಗೆ ಭರವಸೆಯಿದೆ.
[ಅಧ್ಯಯನ ಪ್ರಶ್ನೆಗಳು]
a 1999ರ ಜುಲೈ 2ರಂದು ಸಹೋದರ ಬ್ಯಾರಿಯವರು ನಂಬಿಗಸ್ತಿಕೆಯಿಂದ ತಮ್ಮ ಭೂಜೀವಿತವನ್ನು ಮುಗಿಸಿದರು. ಅಕ್ಟೋಬರ್ 1, 1999ರ ಕಾವಲಿನಬುರುಜು ಪತ್ರಿಕೆಯ 16ನೆಯ ಪುಟವನ್ನು ನೋಡಿರಿ.
[ಪುಟ 10 ರಲ್ಲಿರುವ ಚಿತ್ರಗಳು]
ಜನರಿಂದ ಭರ್ತಿಯಾಗಿರುವ ಸಭಾಂಗಣ ಮತ್ತು ಡೈನಿಂಗ್ ರೂಮ್ನಲ್ಲಿಯೂ ಸಭಿಕರು ತುಂಬಿಕೊಂಡಿರುವುದು
[ಪುಟ 10 ರಲ್ಲಿರುವ ಚಿತ್ರಗಳು]
ಟೂರ್ಗಳು ವಿಶೇಷವಾಗಿ ಹರ್ಷದಾಯಕವಾದ ವೈಶಿಷ್ಟ್ಯಗಳಾಗಿದ್ದವು