ಇತರರಿಗೆ ಮಾನಮರ್ಯಾದೆಯನ್ನು ತೋರಿಸಿರಿ
“ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.”—ರೋಮಾಪುರ 12:10.
1, 2. ನಮ್ರಭಾವವನ್ನು ತೋರಿಸಲಿಕ್ಕಾಗಿ ನಾವು ಏನನ್ನು ಅಭ್ಯಾಸಿಸಬೇಕು? (ಬಿ) “ಮಾನ” ಎಂಬ ಪದವನ್ನು ಬೈಬಲು ಅನೇಕ ವೇಳೆ ಹೇಗೆ ಉಪಯೋಗಿಸುತ್ತದೆ, ಮತ್ತು ಮಾನಮರ್ಯಾದೆಯನ್ನು ತೋರಿಸುವುದು ಯಾರಿಗೆ ಸುಲಭವಾಗಿದೆ?
ನಮ್ಮ ಹಿಂದಿನ ಲೇಖನವು, ದೇವರ ವಾಕ್ಯದಲ್ಲಿರುವ ಈ ಸಲಹೆಯನ್ನು ಎತ್ತಿತೋರಿಸಿತು: “ನೀವೆಲ್ಲರೂ ನಮ್ರಭಾವವೆಂಬ ಸೊಂಟಾಪಟ್ಟಿಯನ್ನು ಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:5, NW) ನಮ್ರಭಾವ ಎಂಬ ಸೊಂಟಾಪಟ್ಟಿಯನ್ನು ಕಟ್ಟಿಕೊಳ್ಳುವ ಒಂದು ವಿಧವು, ಇತರರಿಗೆ ಮಾನಮರ್ಯಾದೆಯನ್ನು ತೋರಿಸುವ ರೂಢಿಯನ್ನು ಮಾಡಿಕೊಳ್ಳುವುದೇ ಆಗಿದೆ.
2 ಬೈಬಲಿನಲ್ಲಿ “ಮಾನ” ಎಂಬುದಾಗಿ ಅನೇಕ ವೇಳೆ ಉಪಯೋಗಿಸಲ್ಪಟ್ಟಿರುವ ಪದವು, ನಾವು ಇತರರಿಗೆ ತೋರಿಸಬೇಕಾದ ಗೌರವ, ಮನ್ನಣೆ, ಮತ್ತು ಪರಿಗಣನೆಯನ್ನು ಸೂಚಿಸುತ್ತದೆ. ನಾವು ಇತರರಿಗೆ ದಯೆಯನ್ನು ತೋರಿಸುವ ಮೂಲಕ, ಅವರ ಗೌರವಕ್ಕೆ ಮನ್ನಣೆಯನ್ನು ನೀಡುವ ಮೂಲಕ, ಅವರ ಅಭಿಪ್ರಾಯಕ್ಕೆ ಕಿವಿಗೊಡುವ ಮೂಲಕ, ಅವರ ನ್ಯಾಯೋಚಿತವಾದ ವಿನಂತಿಗಳನ್ನು ಪೂರೈಸುವ ಮೂಲಕ ಮಾನಮರ್ಯಾದೆಯನ್ನು ತೋರಿಸುತ್ತೇವೆ. ನಮ್ರಭಾವದವರಿಗೆ ಇದನ್ನು ಮಾಡುವುದು ಕಷ್ಟಕರವಾಗಿರುವುದಿಲ್ಲ. ಆದರೆ, ಅಹಂಕಾರಿಗಳಿಗೆ ಯಥಾರ್ಥವಾದ ಮಾನಮರ್ಯಾದೆಯನ್ನು ತೋರಿಸುವುದು ಕಷ್ಟಕರವಾಗಿರಬಹುದು. ಆದುದರಿಂದಲೇ, ಅವರು ಮಿಥ್ಯಾ ಪ್ರಶಂಸೆಯ ಮೂಲಕ ಅನುಗ್ರಹಗಳನ್ನೂ ಲಾಭಗಳನ್ನೂ ಪಡೆದುಕೊಳ್ಳಲು ಪ್ರಯತ್ನಿಸಬಹುದು.
ಯೆಹೋವನು ಮನುಷ್ಯರಿಗೆ ಮಾನಮರ್ಯಾದೆಯನ್ನು ತೋರಿಸುತ್ತಾನೆ
3, 4. ಯೆಹೋವನು ಅಬ್ರಹಾಮನಿಗೆ ಹೇಗೆ ಮಾನಮರ್ಯಾದೆಯನ್ನು ತೋರಿಸಿದನು, ಮತ್ತು ಏಕೆ?
3 ಮಾನಮರ್ಯಾದೆಯನ್ನು ತೋರಿಸುವ ವಿಷಯದಲ್ಲಿ ಸ್ವತಃ ಯೆಹೋವನೇ ಮಾದರಿಯನ್ನಿಡುತ್ತಾನೆ. ಆತನು ಮನುಷ್ಯರನ್ನು ಯಂತ್ರಮಾನವರಂತೆ ಉಪಚರಿಸದೆ, ಅವರಿಗೆ ಇಚ್ಛಾಸ್ವಾತಂತ್ರ್ಯವನ್ನು ನೀಡಿದನು. (1 ಪೇತ್ರ 2:16) ದೃಷ್ಟಾಂತಕ್ಕೆ, ಘೋರ ದುಷ್ಟತನದ ಕಾರಣ ಸೊದೋಮ್ ಪಟ್ಟಣವು ನಾಶವಾಗಲಿದೆ ಎಂದು ಆತನು ಅಬ್ರಹಾಮನಿಗೆ ತಿಳಿಸಿದಾಗ, ಅಬ್ರಹಾಮನು ಕೇಳಿದ್ದು: “ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ?” ಆ 50 ಮಂದಿ ನೀತಿವಂತರಿಗಾಗಿ ಆ ಪಟ್ಟಣವನ್ನು ಉಳಿಸುವೆನೆಂದು ಯೆಹೋವನು ಉತ್ತರಿಸಿದನು. ಅಬ್ರಹಾಮನು ದೀನತೆಯಿಂದ ಬೇಡಿಕೊಳ್ಳುತ್ತಾ ಇದ್ದನು. ಅಲ್ಲಿ ಕೇವಲ 45, ಅಥವಾ 40, ಇಲ್ಲದಿದ್ದರೆ 30 ಮಂದಿ ನೀತಿವಂತರಿದ್ದರೆ, ಆಗೇನು? ಸೊದೋಮಿನಲ್ಲಿ ಕೇವಲ ಹತ್ತು ಮಂದಿ ನೀತಿವಂತರಿದ್ದರೂ ಅದನ್ನು ನಾಶಗೊಳಿಸಲಾರೆನೆಂದು ಯೆಹೋವನು ಅಬ್ರಹಾಮನಿಗೆ ಆಶ್ವಾಸನೆಯನ್ನು ನೀಡಿದನು.—ಆದಿಕಾಂಡ 18:20-33.
4 ಸೊದೋಮಿನಲ್ಲಿ ಹತ್ತು ಮಂದಿ ನೀತಿವಂತರು ಕೂಡ ಇರಲಿಲ್ಲವೆಂದು ಯೆಹೋವನಿಗೆ ಗೊತ್ತಿತ್ತಾದರೂ, ಅಬ್ರಹಾಮನ ಮಾತಿಗೆ ಕಿವಿಗೊಟ್ಟು ಅವನೊಂದಿಗೆ ಗೌರವದಿಂದ ನಡೆದುಕೊಳ್ಳುವ ಮೂಲಕ ಯೆಹೋವನು ಅಬ್ರಹಾಮನಿಗೆ ಮಾನಮರ್ಯಾದೆಯನ್ನು ತೋರಿಸಿದನು. ಏಕೆ? ಏಕೆಂದರೆ ಅಬ್ರಹಾಮನು “ದೇವರನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.” ಇದರಿಂದಾಗಿ, ಅಬ್ರಹಾಮನು “ದೇವರ ಸ್ನೇಹಿತ”ನೆಂದು ಕರೆಯಲ್ಪಟ್ಟನು. (ಆದಿಕಾಂಡ 5:6; ಯಾಕೋಬ 2:23) ಅಲ್ಲದೆ, ಅಬ್ರಹಾಮನು ಇತರರಿಗೆ ಮಾನಮರ್ಯಾದೆಯನ್ನು ತೋರಿಸುವುದನ್ನು ಯೆಹೋವನು ನೋಡಿದ್ದನು. ಭೂಪ್ರದೇಶದ ವಿಷಯದಲ್ಲಿ ಅಬ್ರಹಾಮನ ಮತ್ತು ಅವನ ಸೋದರಳಿಯನಾದ ಲೋಟನ ಮಂದೆಯವರ ನಡುವೆ ಜಗಳವಾದಾಗ, ಲೋಟನು ತನಗೆ ಬೇಕಾದ ಪ್ರದೇಶವನ್ನು ಆರಿಸಿಕೊಳ್ಳುವಂತೆ ಅಬ್ರಹಾಮನು ಅವನಿಗೆ ಮೊದಲ ಅವಕಾಶವನ್ನು ಕೊಡುವ ಮೂಲಕ ಮಾನಮರ್ಯಾದೆಯನ್ನು ತೋರಿಸಿದನು. ತನ್ನ ದೃಷ್ಟಿಯಲ್ಲಿ ಅತ್ಯುತ್ತಮವಾಗಿದ್ದ ಪ್ರದೇಶವನ್ನು ಲೋಟನು ಆರಿಸಿಕೊಂಡಾಗ, ಅಬ್ರಹಾಮನು ಬೇರೆ ಸ್ಥಳಕ್ಕೆ ಹೊರಟುಹೋದನು.—ಆದಿಕಾಂಡ 13:5-11.
5. ಯೆಹೋವನು ಲೋಟನಿಗೆ ಹೇಗೆ ಮಾನಮರ್ಯಾದೆಯನ್ನು ತೋರಿಸಿದನು?
5 ಯೆಹೋವನು ತದ್ರೀತಿಯಲ್ಲಿ ನೀತಿವಂತನಾದ ಲೋಟನಿಗೆ ಮಾನಮರ್ಯಾದೆಯನ್ನು ತೋರಿಸಿದನು. ಸೊದೋಮನ್ನು ನಾಶಗೊಳಿಸುವ ಮುಂಚೆ, ಬೆಟ್ಟಗುಡ್ಡಗಳಿಗೆ ಓಡಿಹೋಗುವಂತೆ ಲೋಟನಿಗೆ ಹೇಳಿದನು. ಆದರೆ, ಆ ಸ್ಥಳಕ್ಕೆ ಹೋಗಲು ಇಷ್ಟಪಡದ ಲೋಟನು, ನಾಶಗೊಳಿಸಲ್ಪಡಲಿದ್ದ ಪ್ರದೇಶದ ಒಂದು ಪಟ್ಟಣವಾದ ಚೋಗರ್ಗೆ ಹೋಗಲು ಬಯಸಿದನು. ಯೆಹೋವನು ಲೋಟನಿಗೆ ಹೇಳಿದ್ದು: “ಈ ವಿಷಯದಲ್ಲಿಯೂ ನಿನಗೆ ಅನುಗ್ರಹಮಾಡಿದ್ದೇನೆ, ನೋಡು; ನೀನು ಹೇಳಿದ ಊರನ್ನು ನಾನು ಕೆಡಹುವದಿಲ್ಲ.” ನಂಬಿಗಸ್ತ ಲೋಟನು ಕೇಳಿಕೊಂಡದ್ದನ್ನು ಮಾಡುವ ಮೂಲಕ, ಯೆಹೋವನು ಅವನಿಗೆ ಮಾನಮರ್ಯಾದೆಯನ್ನು ತೋರಿಸಿದನು.—ಆದಿಕಾಂಡ 19:15-22; 2 ಪೇತ್ರ 2:6-9.
6. ಯೆಹೋವನು ಮೋಶೆಗೆ ಹೇಗೆ ಮಾನಮರ್ಯಾದೆಯನ್ನು ತೋರಿಸಿದನು?
6 ಯೆಹೋವನು ಮೋಶೆಯನ್ನು ಐಗುಪ್ತಕ್ಕೆ ಕಳುಹಿಸಿ, ತನ್ನ ಜನರನ್ನು ದಾಸತ್ವದಿಂದ ಹೊರನಡೆಸುವಂತೆ ಮತ್ತು ಅವರನ್ನು ಹೋಗಗೊಡುವುದರ ಕುರಿತು ಫರೋಹನಲ್ಲಿ ಮಾತಾಡುವಂತೆ ಹೇಳಿದಾಗ, ಮೋಶೆಯು ಪ್ರತಿಕ್ರಿಯಿಸಿದ್ದು: “ಸ್ವಾಮೀ, ನಾನು . . . ವಾಕ್ಚಾತುರ್ಯವಿಲ್ಲದವನು.” ಯೆಹೋವನು ಮೋಶೆಗೆ ಆಶ್ವಾಸನೆ ನೀಡಿದ್ದು: “ನಾನು ನಿನ್ನ ಬಾಯಿಗೆ ಸಹಾಯವಾಗಿದ್ದು ನೀನು ಮಾತಾಡಬೇಕಾದದ್ದನ್ನು ಬೋಧಿಸುವೆನು.” ಆದರೆ ಮೋಶೆಯು ಮತ್ತಷ್ಟೂ ಹಿಂಜರಿದನು. ಆಗ ಯೆಹೋವನು ಅವನಿಗೆ ಮತ್ತೆ ಆಶ್ವಾಸನೆಯನ್ನು ನೀಡಿ, ಅವನ ವದನಕನಾಗಿ ಸಹೋದರನಾದ ಆರೋನನನ್ನು ಕಳುಹಿಸುವ ಏರ್ಪಾಡು ಮಾಡಿದನು.—ವಿಮೋಚನಕಾಂಡ 4:10-16.
7. ಯೆಹೋವನು ಇತರರಿಗೆ ಮಾನಮರ್ಯಾದೆಯನ್ನು ತೋರಿಸಲು ಏಕೆ ಸಿದ್ಧಮನಸ್ಸುಳ್ಳವನಾಗಿದ್ದನು?
7 ಈ ಎಲ್ಲ ಸಂದರ್ಭಗಳಲ್ಲಿ, ಯೆಹೋವನು ಇತರರಿಗೆ, ಅಂದರೆ ಆತನಿಗೆ ಸೇವೆಸಲ್ಲಿಸಿದವರಿಗೆ ಮಾನಮರ್ಯಾದೆಯನ್ನು ತೋರಿಸಲು ಸಿದ್ಧಮನಸ್ಸುಳ್ಳವನಾಗಿದ್ದನು. ಅವರು ಕೇಳಿಕೊಂಡ ವಿಷಯಗಳು ಯೆಹೋವನ ಮೂಲ ಉದ್ದೇಶಕ್ಕೆ ಸರಿಹೊಂದದಿದ್ದರೂ, ಆತನು ಅವರ ವಿನಂತಿಗಳನ್ನು ಪರಿಗಣಿಸಿ, ಅವು ಆತನ ಉದ್ದೇಶಗಳನ್ನು ಉಲ್ಲಂಘಿಸದ ವರೆಗೆ ಅವುಗಳನ್ನು ಪರಿಗಣನೆಗೆ ತೆಗೆದುಕೊಂಡನು.
ಯೇಸು ಇತರರಿಗೆ ಮಾನಮರ್ಯಾದೆಯನ್ನು ತೋರಿಸಿದನು
8. ಬಹಳ ಅಸ್ವಸ್ಥಳಾಗಿದ್ದ ಒಬ್ಬ ಹೆಂಗಸಿಗೆ ಯೇಸು ಹೇಗೆ ಮಾನಮರ್ಯಾದೆಯನ್ನು ತೋರಿಸಿದನು?
8 ಯೇಸು ಇತರರಿಗೆ ಮಾನಮರ್ಯಾದೆಯನ್ನು ತೋರಿಸುವ ವಿಷಯದಲ್ಲಿ ಯೆಹೋವನನ್ನು ಅನುಕರಿಸಿದನು. ಒಮ್ಮೆ, ಒಂದು ಜನಸಮೂಹದಲ್ಲಿ ಹನ್ನೆರಡು ವರುಷಗಳ ಕಾಲ ರಕ್ತಕುಸುಮ ರೋಗದಿಂದ ಬಳಲುತ್ತಿದ್ದ ಒಬ್ಬ ಹೆಂಗಸು ಇದ್ದಳು. ವೈದ್ಯರು ಅವಳನ್ನು ಗುಣಪಡಿಸಲು ಅಶಕ್ತರಾಗಿದ್ದರು. ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಅವಳು ಅಶುದ್ಧಳೆಂದು ಪರಿಗಣಿಸಲ್ಪಟ್ಟಳು, ಮತ್ತು ಅವಳು ಅಲ್ಲಿಗೆ ಬರಬಾರದಾಗಿತ್ತು. ಅವಳು ಯೇಸುವಿನ ಹಿಂದೆ ಹೋಗಿ, ಅವನ ವಸ್ತ್ರವನ್ನು ಮುಟ್ಟಿ ಗುಣಮುಖಳಾದಳು. ಅವಳು ನಿಯಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಏಕೆ ನಡೆದುಕೊಳ್ಳಲಿಲ್ಲವೆಂದು ತಗಾದೆಮಾಡುತ್ತಾ ಯೇಸು ಅವಳನ್ನು ಖಂಡಿಸಲಿಲ್ಲ. ಬದಲಿಗೆ, ಅವಳ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುತ್ತಾ, “ಮಗಳೇ ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ” ಎಂದು ಹೇಳುವ ಮೂಲಕ ಅವಳಿಗೆ ಮಾನಮರ್ಯಾದೆಯನ್ನು ತೋರಿಸಿದನು.—ಮಾರ್ಕ 5:25-34; ಯಾಜಕಕಾಂಡ 15:25-27.
9. ಯೇಸು ಒಬ್ಬ ಅನ್ಯದೇಶದವಳಿಗೆ ಹೇಗೆ ಮಾನಮರ್ಯಾದೆಯನ್ನು ತೋರಿಸಿದನು?
9 ಮತ್ತೊಂದು ಸಂದರ್ಭದಲ್ಲಿ, ಕಾನಾನ್ಯ ದೇಶದವಳೊಬ್ಬಳು ಯೇಸುವಿಗೆ ಹೇಳಿದ್ದು: “ಸ್ವಾಮೀ, ದಾವೀದನ ಕುಮಾರನೇ, ನನ್ನನ್ನು ಕರುಣಿಸು. ನನ್ನ ಮಗಳಿಗೆ ದೆವ್ವದ ಕಾಟ ಬಹಳವಾಗಿದೆ.” ತಾನು ಅನ್ಯದೇಶದವರಿಗಲ್ಲ, ಬದಲಿಗೆ ಇಸ್ರಾಯೇಲ್ಯರಿಗಾಗಿ ಕಳುಹಿಸಲ್ಪಟ್ಟಿದ್ದೇನೆಂದು ಅರಿತ ಯೇಸು ಹೇಳಿದ್ದು: “[ಇಸ್ರಾಯೇಲಿನ] ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ [ಅನ್ಯರಿಗೆ] ಹಾಕುವದು ಸರಿಯಲ್ಲ.” ಅದಕ್ಕೆ ಆ ಸ್ತ್ರೀಯು ಉತ್ತರಿಸಿದ್ದು: “ನಾಯಿಮರಿಗಳಂತೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ.” ಆಗ ಯೇಸು ಹೇಳಿದ್ದು: “ಅಮ್ಮಾ, ನಿನ್ನ ನಂಬಿಕೆ ಬಹಳ, ನಿನ್ನ ಮನಸ್ಸಿನಂತೆ ಆಗಲಿ.” ಆಕೆಯ ಮಗಳು ಸ್ವಸ್ಥಳಾದಳು. ಈ ಅನ್ಯದೇಶದವಳ ನಂಬಿಕೆಯ ಕಾರಣ ಯೇಸು ಅವಳಿಗೆ ಮಾನಮರ್ಯಾದೆಯನ್ನು ತೋರಿಸಿದನು. ನಾಯಿಗಳೆಂದು ಸೂಚಿಸುವ ಬದಲು, ಅವನು ಬಳಸಿದ ನಾಯಿಮರಿಗಳೆಂಬ ಅಭಿವ್ಯಕ್ತಿಯು ಆ ಸನ್ನಿವೇಶವನ್ನು ಹಗುರಗೊಳಿಸಿ, ಅವನ ಸಹಾನುಭೂತಿಯನ್ನು ವ್ಯಕ್ತಪಡಿಸಿತು.—ಮತ್ತಾಯ 15:21-28.
10. ಯಾವ ಪ್ರಭಾವಶಾಲಿ ಪಾಠವನ್ನು ಯೇಸು ತನ್ನ ಶಿಷ್ಯರಿಗೆ ಕಲಿಸಿದನು, ಮತ್ತು ಅದು ಏಕೆ ಅಗತ್ಯವಾಗಿತ್ತು?
10 ಶಿಷ್ಯರಲ್ಲಿ ನಾ-ಮೊದಲು ಎಂಬ ಸಮಸ್ಯೆಯಿದ್ದ ಕಾರಣ, ನಮ್ರಭಾವದವರಾಗಿರುವ ಮತ್ತು ಇತರರಿಗೆ ಮಾನಮರ್ಯಾದೆಯನ್ನು ತೋರಿಸುವ ಅಗತ್ಯದ ಕುರಿತು ಯೇಸು ಅವರಿಗೆ ಕಲಿಸುತ್ತಾ ಇದ್ದನು. ಒಮ್ಮೆ ಅವರಲ್ಲಿ ವಾಗ್ವಾದ ನಡೆದ ಮೇಲೆ, ಯೇಸು ಕೇಳಿದ್ದು: “ನೀವು ದಾರಿಯಲ್ಲಿ ಏನು ಮಾತನಾಡಿಕೊಳ್ಳುತ್ತಿದ್ದಿರಿ”? ಅವರು ಸುಮ್ಮನಿದ್ದರು, ಯಾಕಂದರೆ “ಅವರು [ತಮ್ಮಲ್ಲಿ] ಯಾವನು ಹೆಚ್ಚಿನವನೆಂದು ವಾಗ್ವಾದಮಾಡಿಕೊಂಡಿದ್ದರು.” (ಮಾರ್ಕ 9:33, 34) ಯೇಸುವಿನ ಮರಣದ ಹಿಂದಿನ ರಾತ್ರಿಯೂ “ತಮ್ಮಲ್ಲಿ ಯಾವನು ಹೆಚ್ಚಿನವನೆನಿಸಿಕೊಳ್ಳುವವನು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.” (ಲೂಕ 22:24) ಆದಕಾರಣ ಪಸ್ಕದ ಊಟ ನಡೆಯುತ್ತಿರುವಾಗ, ಯೇಸು “ಬೋಗುಣಿಯಲ್ಲಿ ನೀರುಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕೂ . . . ಪ್ರಾರಂಭಿಸಿದನು.” ಇದು ಎಂತಹ ಒಂದು ಪರಿಣಾಮಕಾರಿಯಾದ ಪಾಠವಾಗಿತ್ತು! ಯೇಸು ದೇವಕುಮಾರನಾಗಿದ್ದು, ಯೆಹೋವನ ನಂತರ ಇಡೀ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದ್ದನು. ಆದರೂ, ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಯೇಸು ಅವರಿಗೆ ಮಾನಮರ್ಯಾದೆಯನ್ನು ತೋರಿಸುವುದರಲ್ಲಿ ಒಂದು ಪಾಠವನ್ನು ಕಲಿಸಿದನು. ಅವನು ಹೇಳಿದ್ದು: “ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.”—ಯೋಹಾನ 13:5-15.
ಪೌಲನು ಮಾನಮರ್ಯಾದೆಯನ್ನು ತೋರಿಸಿದನು
11, 12. ಪೌಲನು ಕ್ರೈಸ್ತನಾದ ಬಳಿಕ, ಯಾವ ವಿಷಯವನ್ನು ಕಲಿತುಕೊಂಡನು, ಮತ್ತು ಕಲಿತುಕೊಂಡ ವಿಷಯವನ್ನು ಫಿಲೆಮೋನನ ಸಂಬಂಧದಲ್ಲಿ ಹೇಗೆ ಅನ್ವಯಿಸಿದನು?
11 ಯೇಸುವನ್ನು ಅನುಕರಿಸುವವನೋಪಾದಿ, ಅಪೊಸ್ತಲ ಪೌಲನು ಇತರರಿಗೆ ಮಾನಮರ್ಯಾದೆಯನ್ನು ತೋರಿಸಿದನು. (1 ಕೊರಿಂಥ 11:1) ಅವನು ಹೇಳಿದ್ದು: ನಾವು “ಮನುಷ್ಯರಿಂದ ಬರುವ ಮಾನಮರ್ಯಾದೆಯನ್ನು . . . ಹೊಂದಲಪೇಕ್ಷಿಸುವವರಾಗಿಲ್ಲ. ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು.” (1 ಥೆಸಲೊನೀಕ 2:6, 7) ಒಬ್ಬ ತಾಯಿಯು ತನ್ನ ಮಕ್ಕಳಿಗೆ ಸರಿಯಾದ ಪೋಷಣೆ ನೀಡುವ ಮೂಲಕ ಪರಾಮರಿಸುತ್ತಾಳೆ. ಅಂತೆಯೇ ಪೌಲನು ಕ್ರೈಸ್ತನಾದ ಮೇಲೆ, ನಮ್ರನಾಗಿರಲು ಕಲಿತುಕೊಂಡು ತನ್ನ ಜೊತೆ ಕ್ರೈಸ್ತರನ್ನು ಕೋಮಲಭಾವದಿಂದ ಉಪಚರಿಸುವ ಮೂಲಕ ಮಾನಮರ್ಯಾದೆಯನ್ನು ತೋರಿಸಿದನು. ಹೀಗೆ ಮಾಡುವ ಮೂಲಕ, ಅವನು ಅವರ ಇಚ್ಛಾಸ್ವಾತಂತ್ರ್ಯವನ್ನು ಮಾನ್ಯಮಾಡಿದನು. ಅವನು ರೋಮಿನಲ್ಲಿ ಸೆರೆವಾಸಿಯಾಗಿದ್ದಾಗ ನಡೆದ ಒಂದು ಘಟನೆಯಿಂದ ಇದು ಪ್ರದರ್ಶಿಸಲ್ಪಟ್ಟಿತು.
12 ತನ್ನ ಯಜಮಾನನಿಂದ ತಪ್ಪಿಸಿಕೊಂಡು ಬಂದಿದ್ದ ಓನೇಸಿಮನೆಂಬ ದಾಸನು, ಪೌಲನ ಬೋಧನೆಗೆ ಕಿವಿಗೊಟ್ಟು, ಒಬ್ಬ ಕ್ರೈಸ್ತನೂ ಪೌಲನ ಮಿತ್ರನೂ ಆದನು. ಆ ದಾಸನ ಯಜಮಾನನಾಗಿದ್ದ ಫಿಲೆಮೋನನು ಸಹ ಒಬ್ಬ ಕ್ರೈಸ್ತನಾಗಿದ್ದು, ಏಷ್ಯಾ ಮೈನರ್ನಲ್ಲಿ ವಾಸಿಸುತ್ತಿದ್ದನು. ಓನೇಸಿಮನು ತನಗೆ ಬಹಳಷ್ಟು ಸಹಾಯವನ್ನು ಮಾಡಿದನೆಂದು ಪೌಲನು ಒಂದು ಪತ್ರದಲ್ಲಿ ಫಿಲೆಮೋನನಿಗೆ ಬರೆದು ತಿಳಿಸಿದನು. ಅವನು ಹೇಳಿದ್ದು: “ನಾನು . . . ಅವನನ್ನು ನನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದೆನು.” ಆದರೆ, ಪೌಲನು ಓನೇಸಿಮನನ್ನು ಫಿಲೆಮೋನನ ಬಳಿಗೆ ಕಳುಹಿಸಿದನು, ಏಕೆಂದರೆ “ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕವಾಗಿ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.” ಪೌಲನು ತನ್ನ ಅಪೊಸ್ತಲತನದ ಸ್ಥಾನವನ್ನು ದುರುಪಯೋಗಿಸಲು ಬಯಸಲಿಲ್ಲ. ಹೀಗೆ, ಓನೇಸಿಮನನ್ನು ರೋಮಿನಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸದೇ ಇರುವ ಮೂಲಕ ಅವನು ಫಿಲೆಮೋನನಿಗೆ ಮಾನಮರ್ಯಾದೆಯನ್ನು ತೋರಿಸಿದನು. ಫಿಲೆಮೋನನು ಓನೇಸಿಮನನ್ನು “ದಾಸನಿಗಿಂತ ಉತ್ತಮನಾಗಿ ಪ್ರಿಯ ಸಹೋದರನಂತೆ” ಉಪಚರಿಸುತ್ತಾ ಮಾನಮರ್ಯಾದೆಯನ್ನು ತೋರಿಸಬೇಕೆಂದು ಪೌಲನು ಸಲಹೆ ಕೊಟ್ಟನು.—ಫಿಲೆಮೋನ 13-16.
ನಮ್ಮ ದಿನದಲ್ಲಿ ಮಾನಮರ್ಯಾದೆಯನ್ನು ತೋರಿಸುವುದು
13. ನಾವು ಏನು ಮಾಡುವಂತೆ ರೋಮಾಪುರ 12:10 ಪ್ರಚೋದಿಸುತ್ತದೆ?
13 ದೇವರ ವಾಕ್ಯವು ಸಲಹೆ ನೀಡುವುದು: “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮಾಪುರ 12:10) ಬೇರೆಯವರೇ ನಮಗೆ ಮೊದಲು ಮಾನಮರ್ಯಾದೆಯನ್ನು ತೋರಿಸಬೇಕೆಂದು ಕಾಯದೆ, ನಾವೇ ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬೇಕೆಂಬುದು ಇದರ ಅರ್ಥ. “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.” (1 ಕೊರಿಂಥ 10:24; 1 ಪೇತ್ರ 3:8, 9) ಹೀಗೆ, ಕುಟುಂಬ ವೃತ್ತದಲ್ಲಿ, ಸಭೆಯಲ್ಲಿರುವ ಜೊತೆ ಕ್ರೈಸ್ತರಿಗೆ, ಮತ್ತು ಸಭೆಯ ಹೊರಗಿರುವವರಿಗೆ ಮಾನಮರ್ಯಾದೆಯನ್ನು ತೋರಿಸುವ ಅವಕಾಶಗಳಿಗಾಗಿ ಯೆಹೋವನ ಸೇವಕರು ಎದುರುನೋಡುತ್ತಾರೆ.
14. ಗಂಡಹೆಂಡತಿಯರ ಮಧ್ಯೆ ಮಾನಮರ್ಯಾದೆಯು ಹೇಗೆ ತೋರಿಸಲ್ಪಡುತ್ತದೆ?
14 ಬೈಬಲು ಹೇಳುವುದು: “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ.” (1 ಕೊರಿಂಥ 11:3) ಕ್ರಿಸ್ತನು ಸಭೆಯನ್ನು ಪರಾಮರಿಸುವಂತೆಯೇ ಪುರುಷನು ತನ್ನ ಹೆಂಡತಿಯನ್ನು ಉಪಚರಿಸಬೇಕೆಂದು ಯೆಹೋವನು ನಿರ್ಬಂಧಿಸುತ್ತಾನೆ. ತನ್ನ ಹೆಂಡತಿಯು “ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು . . . ಮಾನಮರ್ಯಾದೆಯನ್ನು ಸಲ್ಲಿ”ಸುವಂತೆ 1 ಪೇತ್ರ 3:7ರಲ್ಲಿ ಗಂಡನು ನಿರ್ದೇಶಿಸಲ್ಪಟ್ಟಿದ್ದಾನೆ. ಈ ಕಾರಣ, ಸಿದ್ಧಮನಸ್ಸಿನಿಂದ ಕಿವಿಗೊಡುವ ಮೂಲಕ ಮತ್ತು ತನ್ನ ಹೆಂಡತಿಯ ಸೂಚನೆಗಳನ್ನು ಪರಿಗಣಿಸುವ ಮೂಲಕ ಅವನು ಇದನ್ನು ಮಾಡಬಲ್ಲನು. (ಆದಿಕಾಂಡ 21:12) ಯಾವ ಬೈಬಲ್ ತತ್ವವೂ ಒಳಗೂಡಿರದಿದ್ದಾಗ, ಅವನು ಅವಳಿಗೆ ಪ್ರಥಮ ಆಯ್ಕೆಯನ್ನು ಕೊಡಬಹುದು, ಮತ್ತು ಸಹಾಯದ ಹಸ್ತವನ್ನು ನೀಡಿ, ಅವಳೊಂದಿಗೆ ದಯೆಯಿಂದ ವರ್ತಿಸಬಹುದು. ಇದಕ್ಕೆ ಪ್ರತಿಯಾಗಿ “ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು.” (ಎಫೆಸ 5:33) ಹೀಗೆ, ಅವಳು ಅವನ ಮಾತಿಗೆ ಕಿವಿಗೊಡುವಳು. ತನ್ನ ಇಚ್ಛೆಯಂತೆಯೇ ಸರ್ವವೂ ನಡೆಯಬೇಕೆಂದು ಅವಳು ಹಟಸಾಧಿಸಲು ಪ್ರಯತ್ನಿಸುವುದಿಲ್ಲ. ಗಂಡನನ್ನು ಅವಳು ಅಲ್ಪವಾಗಿ ಎಣಿಸುವುದಿಲ್ಲ ಅಥವಾ ಪೀಡಿಸುವುದಿಲ್ಲ. ಅವಳಿಗೆ ಕೆಲವೊಂದು ಕ್ಷೇತ್ರಗಳಲ್ಲಿ ಶ್ರೇಷ್ಠವಾದ ಸಾಮರ್ಥ್ಯಗಳಿದ್ದರೂ, ತನ್ನ ಗಂಡನ ಮೇಲೆ ಅಧಿಕಾರ ನಡೆಸದೆ ನಮ್ರಭಾವವನ್ನು ತೋರಿಸುವಳು.
15. ವೃದ್ಧರಿಗೆ ಯಾವ ರೀತಿಯ ಪರಿಗಣನೆಯು ತೋರಿಸಲ್ಪಡುತ್ತದೆ, ಮತ್ತು ಅವರು ಹೇಗೆ ಪ್ರತಿಕ್ರಿಯಿಸಬೇಕು?
15 ಕ್ರೈಸ್ತ ಸಭೆಯೊಳಗಿರುವ ವೃದ್ಧರು, ನಾವು ತೋರಿಸುವ ಮಾನಮರ್ಯಾದೆಗೆ ವಿಶೇಷವಾಗಿ ಅರ್ಹರಾಗಿರುತ್ತಾರೆ. “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು, ವಯಸ್ಸಾದ ಪುರುಷ [ಇಲ್ಲವೆ, ಸ್ತ್ರೀಗೆ]ನಿಗೆ ಪರಿಗಣನೆಯನ್ನು ತೋರಿಸತಕ್ಕದ್ದು.” (ಯಾಜಕಕಾಂಡ 19:32, NW) ಇದು ನಂಬಿಗಸ್ತರಾಗಿದ್ದು, ಅನೇಕ ವರ್ಷಗಳಿಂದ ಯೆಹೋವನನ್ನು ಸೇವಿಸಿರುವವರ ವಿಷಯದಲ್ಲಿ ಬಹಳ ಸತ್ಯವಾಗಿದೆ, ಏಕೆಂದರೆ “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.” (ಜ್ಞಾನೋಕ್ತಿ 16:31) ತಮಗಿಂತಲೂ ವಯಸ್ಸಾದ ಜೊತೆ ಕ್ರೈಸ್ತರಿಗೆ ಯೋಗ್ಯವಾದ ಮನ್ನಣೆಯನ್ನು ನೀಡುವ ಮೂಲಕ, ಮೇಲ್ವಿಚಾರಕರು ಮಾದರಿಯನ್ನಿಡಬೇಕು. ವಯಸ್ಸಾದವರು ಕೂಡ ಕಿರಿಯರ ಕಡೆಗೆ, ಅಂದರೆ ವಿಶೇಷವಾಗಿ ಮಂದೆಯ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯುಳ್ಳವರ ಕಡೆಗೆ ಗೌರವಪೂರ್ಣ ಮನೋಭಾವವನ್ನು ವ್ಯಕ್ತಪಡಿಸಬೇಕು.—1 ಪೇತ್ರ 5:2, 3.
16. ಹೆತ್ತವರು ಮತ್ತು ಮಕ್ಕಳು ಯಾವ ರೀತಿಯಲ್ಲಿ ಪರಸ್ಪರ ಮಾನಮರ್ಯಾದೆಯನ್ನು ತೋರಿಸುತ್ತಾರೆ?
16 ಮಕ್ಕಳು ತಮ್ಮ ಹೆತ್ತವರಿಗೆ ಮಾನಮರ್ಯಾದೆಯನ್ನು ತೋರಿಸಬೇಕು: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ—ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” ಇದಕ್ಕೆ ಪ್ರತಿಯಾಗಿ ಹೆತ್ತವರು ತಮ್ಮ ಮಕ್ಕಳಿಗೆ ಮಾನಮರ್ಯಾದೆಯನ್ನು ತೋರಿಸುತ್ತಾರೆ. ಏಕೆಂದರೆ “ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ” ಎಂಬುದಾಗಿ ಅವರಿಗೆ ಹೇಳಲಾಗಿದೆ.—ಎಫೆಸ 6:1-4; ವಿಮೋಚನಕಾಂಡ 20:12.
17. “ಇಮ್ಮಡಿಯಾದ ಮಾನಕ್ಕೆ” ಯಾರು ಅರ್ಹರಾಗಿದ್ದಾರೆ?
17 ಸಭೆಯಲ್ಲಿ ಪ್ರಯಾಸಪಟ್ಟು ಕೆಲಸಮಾಡುವವರಿಗೂ ಮಾನಮರ್ಯಾದೆಯನ್ನು ತೋರಿಸಬೇಕಾಗಿದೆ. “ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.” (1 ತಿಮೊಥೆಯ 5:17) ಅವರಿಗೆ ಮಾನಮರ್ಯಾದೆಯನ್ನು ತೋರಿಸಬಹುದಾದ ಒಂದು ವಿಧವು, ಇಬ್ರಿಯ 13:17ರಲ್ಲಿ ತಿಳಿಸಲ್ಪಟ್ಟ ವಿಷಯವನ್ನು ಮಾಡುವುದೇ ಆಗಿದೆ: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ.”
18. ಸಭೆಯ ಹೊರಗಿರುವವರನ್ನು ನಾವು ಹೇಗೆ ಉಪಚರಿಸಬೇಕು?
18 ಸಭೆಯ ಹೊರಗಿರುವವರಿಗೆ ನಾವು ಮಾನಮರ್ಯಾದೆಯನ್ನು ತೋರಿಸುವ ಅಗತ್ಯವಿದೆಯೊ? ಹೌದು. ಉದಾಹರಣೆಗೆ, “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ” ಎಂಬುದಾಗಿ ನಾವು ಉಪದೇಶಿಸಲ್ಪಟ್ಟಿದ್ದೇವೆ. (ರೋಮಾಪುರ 13:1) ಈ ಐಹಿಕ ಪ್ರಭುಗಳ ಸ್ಥಾನವನ್ನು ಯೆಹೋವನ ರಾಜ್ಯವು ವಶಪಡಿಸಿಕೊಳ್ಳುವ ತನಕ, ಅವರು ಅಧಿಕಾರ ನಡೆಸುವಂತೆ ಆತನು ಅನುಮತಿಸಿದ್ದಾನೆ. (ದಾನಿಯೇಲ 2:44) ಆದುದರಿಂದ ನಾವು, “ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿ . . . ಯಾರಿಗೆ ಭಯವೋ ಅವರಿಗೆ ಭಯವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿ”ಸುತ್ತೇವೆ. (ರೋಮಾಪುರ 13:7) ನಾವು “ಎಲ್ಲ ರೀತಿಯ ಪುರುಷರಿಗೆ [ಅಥವಾ, ಸ್ತ್ರೀಯರಿಗೆ] ಮಾನಮರ್ಯಾದೆಯನ್ನು” (NW) ತೋರಿಸಬೇಕು.—1 ಪೇತ್ರ 2:17.
19. ಇತರರಿಗೆ ‘ಒಳ್ಳೇದನ್ನು ಮಾಡಿ’ ಅವರಿಗೆ ಮಾನಮರ್ಯಾದೆಯನ್ನು ತೋರಿಸುವುದು ಹೇಗೆ?
19 ಸಭೆಯ ಹೊರಗಿರುವವರಿಗೆ ಮಾನಮರ್ಯಾದೆಯನ್ನು ತೋರಿಸಬೇಕೆಂಬುದು ಸತ್ಯವಾಗಿದ್ದರೂ, ದೇವರ ವಾಕ್ಯವು ಒತ್ತಿಹೇಳುವ ವಿಷಯವನ್ನು ಗಮನಿಸಿರಿ: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ಇತರರಿಗೆ ‘ಒಳ್ಳೇದನ್ನು ಮಾಡ’ಸಾಧ್ಯವಿರುವ ಅತ್ಯುತ್ತಮ ವಿಧವು, ಅವರಲ್ಲಿ ಆತ್ಮಿಕ ಆವಶ್ಯಕತೆಗಳನ್ನು ಬೆಳೆಸಿ, ಅವುಗಳನ್ನು ಪೂರೈಸುವುದೇ ಆಗಿದೆ. (ಮತ್ತಾಯ 5:3) ಅಪೊಸ್ತಲ ಪೌಲನ ಮರುಜ್ಞಾಪನಕ್ಕೆ ಕಿವಿಗೊಡುವ ಮೂಲಕ ನಾವು ಇದನ್ನು ಮಾಡಸಾಧ್ಯವಿದೆ: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.” ಸಾಕ್ಷಿಕೊಡಲಿಕ್ಕಾಗಿರುವ ಪ್ರತಿಯೊಂದು ಸಂದರ್ಭವನ್ನು ನಾವು ಜಾಣ್ಮೆಯಿಂದ ಬಳಸಿಕೊಂಡು, ‘ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ನೆರವೇರಿಸುವಾಗ,’ ನಾವು ಎಲ್ಲರಿಗೂ ಒಳ್ಳೇದನ್ನು ಮಾಡುತ್ತೇವೆ ಮಾತ್ರವಲ್ಲ, ಅವರಿಗೆ ಮಾನಮರ್ಯಾದೆಯನ್ನೂ ತೋರಿಸುತ್ತೇವೆ.—2 ತಿಮೊಥೆಯ 2:15; 4:5.
ಯೆಹೋವನಿಗೆ ಮಾನಮರ್ಯಾದೆಯನ್ನು ತೋರಿಸುವುದು
20. ಫರೋಹನಿಗೆ ಮತ್ತು ಅವನ ಸೇನೆಗಳಿಗೆ ಏನು ಸಂಭವಿಸಿತು, ಮತ್ತು ಏಕೆ?
20 ಯೆಹೋವನು ತನ್ನ ಸೃಷ್ಟಿಜೀವಿಗಳಿಗೆ ಮಾನಮರ್ಯಾದೆಯನ್ನು ತೋರಿಸುತ್ತಾನೆ. ಇದಕ್ಕೆ ಪ್ರತಿಯಾಗಿ ನಾವು ಆತನಿಗೆ ಮಾನಮರ್ಯಾದೆಯನ್ನು ತೋರಿಸಬೇಕಾಗಿರುವುದು ನ್ಯಾಯವಾದದ್ದು. (ಜ್ಞಾನೋಕ್ತಿ 3:9; ಪ್ರಕಟನೆ 4:11) ಯೆಹೋವನ ವಾಕ್ಯವು ಹೀಗೂ ಹೇಳುತ್ತದೆ: “ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸುವವರು ತಿರಸ್ಕಾರಹೊಂದುವರು.” (1 ಸಮುವೇಲ 2:30) ದೇವರ ಜನರನ್ನು ಐಗುಪ್ತದಿಂದ ಕಳುಹಿಸುವಂತೆ ಫರೋಹನಿಗೆ ಹೇಳಲಾದಾಗ, ಅವನು ಜಂಬದಿಂದ ಉತ್ತರಿಸಿದ್ದು: “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ?” (ವಿಮೋಚನಕಾಂಡ 5:2) ಇಸ್ರಾಯೇಲ್ಯರನ್ನು ಧ್ವಂಸಗೊಳಿಸಲು ಫರೋಹನು ತನ್ನ ಸೇನೆಗಳನ್ನು ಕಳುಹಿಸಿದಾಗ, ಯೆಹೋವನು ಇಸ್ರಾಯೇಲ್ ಜನಾಂಗಕ್ಕಾಗಿ ಕೆಂಪು ಸಮುದ್ರವನ್ನು ವಿಭಾಗಿಸಿದನು. ಆದರೆ ಐಗುಪ್ತದವರು ಇಸ್ರಾಯೇಲ್ಯರನ್ನು ಹಿಂಬಾಲಿಸಿ ಬಂದಾಗ, ನೀರು ತನ್ನ ಸ್ಥಾನಕ್ಕೆ ಹಿಂದಿರುಗುವಂತೆ ಯೆಹೋವನು ಮಾಡಿದನು. “[ಯೆಹೋವನು] ಫರೋಹನ ರಥಗಳನ್ನೂ ಸೈನಿಕರನ್ನೂ ಸಮುದ್ರದಲ್ಲಿ ಕೆಡವಿದನು.” (ವಿಮೋಚನಕಾಂಡ 14:26-28; 15:4) ಹೀಗೆ, ಯೆಹೋವನಿಗೆ ಮಾನಮರ್ಯಾದೆಯನ್ನು ತೋರಿಸಲು ನಿರಾಕರಿಸಿದ ಅಹಂಕಾರಿ ಫರೋಹನು, ಘೋರವಾದ ಅಂತ್ಯವನ್ನು ಅನುಭವಿಸಿದನು.—ಕೀರ್ತನೆ 136:15.
21. ಯೆಹೋವನು ಬೇಲ್ಶಚ್ಚರನ ವಿರುದ್ಧವಾಗಿ ಇದ್ದದ್ದೇಕೆ, ಮತ್ತು ಇದರ ಪರಿಣಾಮವೇನಾಯಿತು?
21 ಬಾಬೆಲಿನ ರಾಜನಾದ ಬೇಲ್ಶಚ್ಚರನು ಯೆಹೋವನಿಗೆ ಮಾನಮರ್ಯಾದೆಯನ್ನು ತೋರಿಸಲು ನಿರಾಕರಿಸಿದನು. ಉತ್ಸವವೊಂದರಲ್ಲಿ ಕುಡಿದು ಮತ್ತನಾಗಿದ್ದ ಅವನು, ಯೆರೂಸಲೇಮಿನ ಆಲಯದಿಂದ ಲೂಟಿಮಾಡಲಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಪವಿತ್ರ ಪಾತ್ರೆಗಳಿಂದ ದ್ರಾಕ್ಷಾರಸವನ್ನು ಕುಡಿಯುವ ಮೂಲಕ ಯೆಹೋವನಿಗೆ ಅವಮಾನ ಮಾಡಿದನು. ಮತ್ತು ಇದನ್ನು ಮುಂದುವರಿಸುತ್ತ ಅವನು ತನ್ನ ವಿಧರ್ಮಿ ದೇವತೆಗಳನ್ನು ಸ್ತುತಿಸಿದನು. ಆದರೆ, ಯೆಹೋವನ ಸೇವಕನಾದ ದಾನಿಯೇಲನು ಅವನಿಗೆ ಹೇಳಿದ್ದು: ನೀನು “ನಿನ್ನ ಮನಸ್ಸನ್ನು ತಗ್ಗಿಸಿಕೊಳ್ಳಲಿಲ್ಲ; ಪರಲೋಕದೊಡೆಯನಿಗೆ ವಿರುದ್ಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿ.” ಆ ರಾತ್ರಿಯೇ ಬೇಲ್ಶಚ್ಚರನು ಕೊಲ್ಲಲ್ಪಟ್ಟು, ಅವನ ರಾಜ್ಯವು ಅವನಿಂದ ಕಸಿದುಕೊಳ್ಳಲ್ಪಟ್ಟಿತು.—ದಾನಿಯೇಲ 5:22-31.
22. (ಎ) ಯೆಹೋವನು ಇಸ್ರಾಯೇಲಿನ ಮುಖಂಡರು ಹಾಗೂ ಜನತೆಯ ಮೇಲೆ ಏಕೆ ಕೋಪಗೊಂಡನು? (ಬಿ) ಯೆಹೋವನು ಯಾರಿಗೆ ಅನುಗ್ರಹ ತೋರಿಸಿದನು, ಮತ್ತು ಯಾವ ಪರಿಣಾಮದೊಂದಿಗೆ?
22 ಸಾ.ಶ ಒಂದನೆಯ ಶತಮಾನದಲ್ಲಿ, ರಾಜ ಹೆರೋದನು ಜನಸಮೂಹವನ್ನು ಸಂಬೋಧಿಸುತ್ತಿದ್ದನು. ಆಗ ಅವರು, “ಇದು ಮನುಷ್ಯನ ನುಡಿಯಲ್ಲ, ದೇವರ ನುಡಿಯೇ” ಎಂದು ಆರ್ಭಟಿಸಿದರು. ಆ ಒಣಹೆಮ್ಮೆಯ ರಾಜನು ಮಹಿಮೆಯನ್ನು ಬಯಸಿದ ಕಾರಣ, ಅದಕ್ಕೆ ಅಸಮ್ಮತಿಯನ್ನು ಸೂಚಿಸಲಿಲ್ಲ. ಆಗ, “ಆ ಘನವನ್ನು ಅವನು ದೇವರಿಗೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಬಡಿದನು.” (ಅ. ಕೃತ್ಯಗಳು 12:21-23) ಅವನು ದೇವರಿಗೆ ಮಾನಮರ್ಯಾದೆಯನ್ನು ತೋರಿಸದೆ, ತನ್ನನ್ನೇ ಮಹಿಮೆಪಡಿಸಿಕೊಂಡ ಕಾರಣ, ಅವನು ಕೊಲ್ಲಲ್ಪಟ್ಟನು. ಆ ಸಮಯದ ಧಾರ್ಮಿಕ ಮುಖಂಡರು, ದೇವರ ಮಗನಾದ ಯೇಸುವನ್ನು ಕೊಲ್ಲಲು ಸಂಚು ಹೂಡುವ ಮೂಲಕ ಅವಮರ್ಯಾದೆಯನ್ನು ತೋರಿಸಿದರು. ಯೇಸು ಸತ್ಯವನ್ನೇ ಕಲಿಸಿದನೆಂದು ಕೆಲವು ಪ್ರಭುಗಳಿಗೆ ಗೊತ್ತಿದ್ದರೂ ಅವರು ಅವನನ್ನು ಹಿಂಬಾಲಿಸಲಿಲ್ಲ, ಏಕೆಂದರೆ “ದೇವರಿಂದ ಬರುವ ಮಾನಕ್ಕಿಂತ ಮನಷ್ಯರಿಂದ ಬರುವ ಮಾನವೇ ಅವರಿಗೆ ಇಷ್ಟವಾಗಿತ್ತು.” (ಯೋಹಾನ 11:47-53; 12:42, 43) ಆ ಜನಾಂಗವು ಒಂದು ಗುಂಪಿನೋಪಾದಿ ಯೆಹೋವನಿಗೆ ಇಲ್ಲವೆ ಆತನ ನೇಮಿತ ಪ್ರತಿನಿಧಿಯಾದ ಯೇಸುವಿಗೆ ಮಾನಮರ್ಯಾದೆಯನ್ನು ತೋರಿಸಲಿಲ್ಲ. ಆದಕಾರಣ, ಯೆಹೋವನು ಅವರನ್ನು ಮತ್ತು ಅವರ ಆಲಯವನ್ನು ನಾಶನಕ್ಕೆ ಗುರಿಯಾಗುವಂತೆ ಬಿಟ್ಟುಬಿಡುವ ಮೂಲಕ, ಅವರಿಗೆ ಮಾನಮರ್ಯಾದೆಯನ್ನು ನಿರಂತರವಾಗಿ ತೋರಿಸಲಿಲ್ಲ. ಆದರೆ ತನಗೆ ಮತ್ತು ತನ್ನ ಪುತ್ರನಿಗೆ ಮಾನಮರ್ಯಾದೆಯನ್ನು ತೋರಿಸಿದವರನ್ನು ಆತನು ಜೀವಂತವಾಗಿ ಉಳಿಸಿದನು.—ಮತ್ತಾಯ 23:38; ಲೂಕ 21:20-22.
23. ದೇವರ ನೂತನ ಲೋಕದಲ್ಲಿ ಜೀವಿಸಲು ನಾವು ಏನು ಮಾಡಬೇಕು? (ಕೀರ್ತನೆ 37:9-11; ಮತ್ತಾಯ 5:5)
23 ಈ ಪ್ರಚಲಿತ ವ್ಯವಸ್ಥೆಯು ನಾಶಗೊಂಡ ತರುವಾಯ, ದೇವರ ನೂತನ ಲೋಕದಲ್ಲಿ ಜೀವಿಸಲು ಬಯಸುವವರೆಲ್ಲರೂ, ದೇವರಿಗೆ ಮತ್ತು ಆತನ ಪುತ್ರನಾದ ಕ್ರಿಸ್ತ ಯೇಸುವಿಗೆ ಮಾನಮರ್ಯಾದೆಯನ್ನು ತೋರಿಸಿ, ಅವರಿಗೆ ವಿಧೇಯರಾಗಬೇಕು. (ಯೋಹಾನ 5:22, 23; ಫಿಲಿಪ್ಪಿ 2:9-11) ಇಂತಹ ಮಾನಮರ್ಯಾದೆಯನ್ನು ತೋರಿಸದವರು “ದೇಶದೊಳಗಿಂದ ಕೀಳಲ್ಪಡುವರು.” ಮತ್ತೊಂದು ಕಡೆಯಲ್ಲಿ, ದೇವರಿಗೆ ಮತ್ತು ಕ್ರಿಸ್ತನಿಗೆ ಮಾನಮರ್ಯಾದೆಯನ್ನು ತೋರಿಸಿ ವಿಧೇಯರಾಗುವ ಯಥಾರ್ಥವಂತರು, “ದೇಶದಲ್ಲಿ . . . ನೆಲೆಯಾಗಿರುವರು.”—ಜ್ಞಾನೋಕ್ತಿ 2:21, 22.
ಪುನರ್ವಿಮರ್ಶೆಯಲ್ಲಿ
◻ ಇತರರಿಗೆ ಮಾನಮರ್ಯಾದೆಯನ್ನು ತೋರಿಸುವುದು ಎಂದರೇನು, ಮತ್ತು ಯೆಹೋವನು ಇದನ್ನು ಹೇಗೆ ಮಾಡಿದನು?
◻ ಯೇಸು ಮತ್ತು ಪೌಲರಿಬ್ಬರೂ ಇತರರಿಗೆ ಹೇಗೆ ಮಾನಮರ್ಯಾದೆಯನ್ನು ತೋರಿಸಿದರು?
◻ ನಮ್ಮ ದಿನದಲ್ಲಿ ಮಾನಮರ್ಯಾದೆಗೆ ಯಾರು ಯೋಗ್ಯರಾಗಿದ್ದಾರೆ?
◻ ನಾವು ಯೆಹೋವನಿಗೆ ಮತ್ತು ಯೇಸುವಿಗೆ ಏಕೆ ಮಾನಮರ್ಯಾದೆಯನ್ನು ತೋರಿಸಬೇಕು?
[ಪುಟ 17 ರಲ್ಲಿರುವ ಚಿತ್ರ]
ಅಬ್ರಹಾಮನ ಬೇಡಿಕೆಗೆ ಪರಿಗಣನೆಯನ್ನು ತೋರಿಸುವ ಮೂಲಕ ಯೆಹೋವನು ಅವನಿಗೆ ಮಾನಮರ್ಯಾದೆಯನ್ನು ತೋರಿಸಿದನು
[ಪುಟ 18 ರಲ್ಲಿರುವ ಚಿತ್ರ]
ಯಶಸ್ವೀ ವಿವಾಹಗಳಲ್ಲಿ, ಗಂಡಹೆಂಡತಿಯರು ಪರಸ್ಪರ ಮಾನಮರ್ಯಾದೆಯನ್ನು ತೋರಿಸುತ್ತಾರೆ