ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ದೇವರಿಗೆ ಎಲ್ಲವು ಸಾಧ್ಯವೇ”
ಮತ್ತಾಯ 19:26ರಲ್ಲಿ ಕಂಡು ಬರುವ ಈ ಮೇಲಿನ ಮಾತುಗಳು, ವೆನಿಸ್ವೇಲದ ಒಬ್ಬ ಯುವತಿಯ ವಿಷಯದಲ್ಲಿ ಸತ್ಯವಾಗಿದ್ದವು. ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡಲು ಅವಳು ಕಲಿತ ಮೇಲೆ, ಗಂಭೀರವಾದೊಂದು ಸಮಸ್ಯೆಯನ್ನು ಜಯಿಸಲು ಅವಳು ಶಕ್ತಳಾದಳು. ಅವಳು ತಿಳಿಸುವುದು:
“ನನ್ನ ಅಜ್ಜಿ ದಯಾವಂತರೂ ಪ್ರೀತಿಪರರೂ ಆಗಿದ್ದರು. ಆದರೆ, ನಾನು ಕೇವಲ 16 ವರ್ಷದವಳಾಗಿದ್ದಾಗ ಅವರು ತೀರಿಹೋದರು. ಅವರ ಸಾವು ನನ್ನ ಮೇಲೆ ಭಾರಿ ಪರಿಣಾಮವನ್ನು ಬೀರಿತು. ಇದರಿಂದಾಗಿ ನಾನು ನನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡೆ. ನಾನು ಮನೆಯ ಹೊರಗೆ, ಅಂದರೆ ಅಂಗಳಕ್ಕೂ ಹೋಗಬಯಸಲಿಲ್ಲ. ಹೀಗೆ, ನಾನು ಸಂಪೂರ್ಣವಾಗಿ ಒಬ್ಬ ಏಕಾಂತವಾಸಿಯಾಗಿ ಪರಿಣಮಿಸಿದೆ.
“ನಾನು ಶಾಲೆಗೂ ಹೋಗಲಿಲ್ಲ, ನನಗೊಂದು ಉದ್ಯೋಗವೂ ಇರಲಿಲ್ಲ. ದಿನವಿಡೀ ನನ್ನ ಕೋಣೆಯಲ್ಲೇ ಇರುತ್ತಿದ್ದೆ. ನನಗೆ ಮಿತ್ರರೇ ಇರದಿದ್ದ ಕಾರಣ ನಾನು ಒಂಟಿಯಾಗಿದ್ದು, ಭಾರಿ ಖಿನ್ನತೆಯಿಂದ ಕಷ್ಟಾನುಭವಿಸಿದೆ. ನಾನು ಅಯೋಗ್ಯಳೆಂಬ ಭಾವನೆ ನನ್ನಲ್ಲಿ ಮೂಡಿದಾಗ, ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದೆ. ‘ನಾನು ಏಕೆ ಜೀವಿಸುತ್ತಿದ್ದೇನೆ?’ ಎಂದು ನನ್ನನ್ನೇ ಕೇಳಿಕೊಂಡೆ.
“ಗೀಸೆಲಾ ಎಂಬ ಒಬ್ಬ ಯುವ ಸಾಕ್ಷಿಯು, ನನ್ನ ತಾಯಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಕೊಡುತ್ತಿದ್ದಳು. ಒಂದು ದಿನ ಗೀಸೆಲಾ ನಮ್ಮ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ, ತಾಯಿಯು ಅವಳನ್ನು ಕರೆದರು. ಅವಳು ನನಗೆ ಸಹಾಯ ಮಾಡಸಾಧ್ಯವೊ ಎಂದು ಅವಳನ್ನು ಕೇಳಿದರು. ಪ್ರಯತ್ನಿಸಿ ನೋಡಲು ಗೀಸೆಲಾ ಒಪ್ಪಿಕೊಂಡರೂ, ನಾನು ಅವಳನ್ನು ಸಂಧಿಸಲು ನಿರಾಕರಿಸಿದೆ. ಇದರಿಂದ ಗೀಸೆಲಾ ನಿರುತ್ಸಾಹಿತಳಾಗಲಿಲ್ಲ. ಅವಳು ನನಗೊಂದು ಪತ್ರ ಬರೆದು, ನನ್ನ ಸ್ನೇಹಿತೆಯಾಗಲು ಬಯಸುತ್ತಾಳೆಂದು ಮತ್ತು ಅವಳಿಗಿಂತಲೂ ಬಹಳಷ್ಟು ಪ್ರಮುಖನಾದ ಒಬ್ಬ ವ್ಯಕ್ತಿ ನನ್ನ ಮಿತ್ರನಾಗಲು ಬಯಸುತ್ತಾನೆಂದು ತಿಳಿಸಿದಳು. ಯೆಹೋವ ದೇವರೇ ಆ ವ್ಯಕ್ತಿಯೆಂದು ಅವಳು ಬರೆದಳು.
“ಇದರಿಂದ ಪ್ರಭಾವಿತಳಾದ ನಾನು, ಅವಳ ಪತ್ರಕ್ಕೆ ಉತ್ತರವನ್ನಿತ್ತೆ. ಮೂರು ತಿಂಗಳುಗಳ ವರೆಗೆ ನಾವು ಪತ್ರವ್ಯವಹಾರ ನಡೆಸಿದೆವು. ಸಾಕಷ್ಟು ಪ್ರಚೋದನೆಯ ಬಳಿಕವೇ ನಾನು ಗೀಸೆಲಾಳನ್ನು ನೇರವಾಗಿ ಭೇಟಿಯಾಗುವ ಸಾಹಸಮಾಡಿದೆ. ನಮ್ಮ ಪ್ರಥಮ ಭೇಟಿಯಲ್ಲೇ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದಿಂದ ಗೀಸೆಲಾ ನನ್ನೊಂದಿಗೆ ಬೈಬಲಿನ ಅಧ್ಯಯನವನ್ನು ನಡೆಸಿದಳು. ಅಧ್ಯಯನದ ನಂತರ, ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಕೂಟಕ್ಕೆ ಹಾಜರಾಗುವಂತೆ ನನ್ನನ್ನು ಆಮಂತ್ರಿಸಿದಳು. ನಾನು ಬೆಚ್ಚಿಬಿದ್ದೆ. ನಾಲ್ಕು ವರ್ಷಗಳ ವರೆಗೆ ನಾನು ಮನೆಯ ಆಚೆ ಹೋಗಿರಲಿಲ್ಲ, ಮತ್ತು ಹೊರಗೆ ಕಾಲಿಡುವ ವಿಚಾರವೇ ದಿಗಿಲುಗೊಳಿಸುವಂತಹದ್ದಾಗಿತ್ತು.
“ಗೀಸೆಲಾ ನನ್ನೊಂದಿಗೆ ಬಹಳ ತಾಳ್ಮೆಯಿಂದ ನಡೆದುಕೊಂಡಳು. ಭಯಪಡುವಂತಹದ್ದೇನೂ ಇಲ್ಲವೆಂದು ಮತ್ತು ನನ್ನೊಂದಿಗೆ ಅವಳೂ ಕೂಟಕ್ಕೆ ಬರುವಳೆಂದು ಆಶ್ವಾಸನೆ ನೀಡಿದಳು. ಕೊನೆಗೂ ನಾನು ಒಪ್ಪಿದೆ. ನಾವು ರಾಜ್ಯ ಸಭಾಗೃಹವನ್ನು ತಲಪಿದಾಗ, ನಾನು ನಡಗುತ್ತಾ ಬೆವರಲಾರಂಭಿಸಿದೆ. ಯಾರನ್ನೂ ವಂದಿಸಲು ನನಗಾಗಲಿಲ್ಲ. ಆದರೂ, ಕ್ರಮವಾಗಿ ಕೂಟಗಳಿಗೆ ಬರಲು ನಾನು ಒಪ್ಪಿಕೊಂಡೆ ಮತ್ತು ಗೀಸೆಲಾ ಪ್ರತಿ ವಾರ ನನ್ನನ್ನು ತಪ್ಪದೆ ಕರೆದೊಯ್ಯುತ್ತಿದ್ದಳು.
“ನನ್ನ ಅಂಜಿಕೆಯನ್ನು ಜಯಿಸುವಂತೆ ಸಹಾಯ ಮಾಡಲು, ಗೀಸೆಲಾ ನನ್ನನ್ನು ಸಮಯಕ್ಕೆ ಮುಂಚಿತವಾಗಿಯೇ ಕೂಟಗಳಿಗೆ ಕೊಂಡೊಯ್ದಳು. ನಾವು ಬಾಗಿಲ ಬಳಿ ನಿಂತು, ಒಬ್ಬೊಬ್ಬರಾಗಿ ಬರುತ್ತಿದ್ದವರನ್ನು ವಂದಿಸಿದೆವು. ಹೀಗೆ, ಒಮ್ಮೆಲೇ ಒಂದು ದೊಡ್ಡ ಗುಂಪನ್ನು ಎದುರಿಸುವ ಬದಲು, ನಾನು ಪ್ರತಿ ಸಲ ಒಬ್ಬರನ್ನು ಇಲ್ಲವೆ ಇಬ್ಬರನ್ನು ಮುಖಾಮುಖಿಯಾಗಿ ಭೇಟಿಯಾದೆ. ಇನ್ನು ನನ್ನಿಂದ ಸಾಧ್ಯವಿಲ್ಲವೆಂದು ನನಗನಿಸಿದಾಗ, ಗೀಸೆಲಾ ಮತ್ತಾಯ 19:26ನ್ನು ಉದ್ಧರಿಸಿದಳು: ‘ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ.’
“ಅದು ಸುಲಭವಾಗಿರದಿದ್ದರೂ, ಒಂದು ಸರ್ಕಿಟ್ ಸಮ್ಮೇಳನದಲ್ಲಿ ಇನ್ನೂ ದೊಡ್ಡದಾದ ಜನರ ಕ್ಕೂಟಕ್ಕೆ ಹಾಜರಾಗಲು ನಾನು ಕೊನೆಗೂ ಶಕ್ತಳಾದೆ. ಅದು ಎಂತಹ ಒಂದು ದೊಡ್ಡ ಹೆಜ್ಜೆಯಾಗಿತ್ತು! ಸೆಪ್ಟೆಂಬರ್ 1995ರಲ್ಲಿ, ಮನೆ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವುದರ ಬಗ್ಗೆ ಹಿರಿಯರಲ್ಲಿ ಮಾತಾಡಲು ನಾನು ಧೈರ್ಯ ತಂದುಕೊಂಡೆ. ಆರು ತಿಂಗಳುಗಳ ತರುವಾಯ ಏಪ್ರಿಲ್ 1996ರಲ್ಲಿ, ನೀರಿನ ದೀಕ್ಷಾಸ್ನಾನದ ಮೂಲಕ ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಿಕೊಂಡೆ.
“ಇದೆಲ್ಲವನ್ನು ಮಾಡಲು ಬೇಕಾದ ಧೈರ್ಯವನ್ನು ನಾನು ಎಲ್ಲಿಂದ ಕಂಡುಕೊಂಡೆನೆಂದು ಇತ್ತೀಚೆಗೆ ಒಬ್ಬರು ಕೇಳಿದಾಗ, ನಾನು ಉತ್ತರಿಸಿದ್ದು: ‘ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆ ನನ್ನ ಭಯಕ್ಕಿಂತಲೂ ಹೆಚ್ಚಾಗಿದೆ.’ ನಾನು ಆಗಿಂದಾಗ್ಗೆ ಖಿನ್ನಳಾಗುವುದಾದರೂ, ರೆಗ್ಯುಲರ್ ಪಯನೀಯರಳೋಪಾದಿ ಸೇವೆ ಸಲ್ಲಿಸುವ ಮೂಲಕ ನನ್ನ ಆನಂದವು ಹೆಚ್ಚಾಗಿದೆ. ಗತವಿಷಯಗಳನ್ನು ಜ್ಞಾಪಿಸಿಕೊಳ್ಳುವಾಗ, ನಾನು ಗೀಸೆಲಾಳೊಂದಿಗೆ ಸಮ್ಮತಿಸಲೇ ಬೇಕು. ನನ್ನಲ್ಲಿ ಆಸಕ್ತಿಯನ್ನು ತೋರಿಸುವ ಮತ್ತು ‘ನನ್ನನ್ನು ಬಲಪಡಿಸುವ’ ಒಬ್ಬ ಮಿತ್ರ ಈಗ ನನಗಿದ್ದಾನೆ.”—ಫಿಲಿಪ್ಪಿ 4:13.
[ಪುಟ 8 ರಲ್ಲಿರುವ ಚಿತ್ರ]
“ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆ ನನ್ನ ಭಯಕ್ಕಿಂತಲೂ ಹೆಚ್ಚಾಗಿದೆ”