ವಾಚಕರಿಂದ ಪ್ರಶ್ನೆಗಳು
ಯೆಹೋವನ ಸಾಕ್ಷಿಗಳಲ್ಲಿ ಕೆಲವರಿಗೆ ಧಾರ್ಮಿಕ ಕಟ್ಟಡಗಳಿಗೆ ಅಥವಾ ಆಸ್ತಿಗಳಿಗೆ ಸಂಬಂಧಿಸಿದ ಉದ್ಯೋಗವು ನೀಡಲ್ಪಟ್ಟಿದೆ. ಇಂತಹ ಕೆಲಸದ ಶಾಸ್ತ್ರೀಯ ನೋಟವೇನು?
ತಮ್ಮ ಕುಟುಂಬಗಳಿಗೆ ಭೌತಿಕವಾಗಿ ಒದಗಿಸುವುದರ ಮಹತ್ವವನ್ನು ಎತ್ತಿತೋರಿಸುವ 1 ತಿಮೊಥೆಯ 5:8ನ್ನು ಪ್ರಾಮಾಣಿಕವಾಗಿ ಅನ್ವಯಿಸಲು ಬಯಸುವ ಎಲ್ಲ ಕ್ರೈಸ್ತರು ಈ ಸಮಸ್ಯೆಯನ್ನು ಎದುರಿಸಬಹುದು. ಕ್ರೈಸ್ತರು ಈ ಸಲಹೆಯನ್ನು ಅನ್ವಯಿಸಬೇಕೆಂಬುದು ಸತ್ಯವಾಗಿದ್ದರೂ, ಕೆಲಸದ ಸ್ವರೂಪಕ್ಕೆ ಗಮನಕೊಡದೆ ಯಾವುದೇ ರೀತಿಯ ಉದ್ಯೋಗವನ್ನು ಅವರು ಸ್ವೀಕರಿಸಬೇಕೆಂಬುದು ಇದರ ಅರ್ಥವಲ್ಲ. ಕ್ರೈಸ್ತರು ದೇವರ ಚಿತ್ತದ ಇನ್ನಿತರ ಸಲಹೆಸೂಚನೆಗಳನ್ನು ಪಾಲಿಸುವವರಾಗಿದ್ದಾರೆ. ಉದಾಹರಣೆಗೆ, ತನ್ನ ಕುಟುಂಬವನ್ನು ಪೋಷಿಸಬೇಕೆಂಬ ವ್ಯಕ್ತಿಯ ಇಚ್ಛೆಯು ತಾನೇ, ಅನೈತಿಕತೆ ಇಲ್ಲವೆ ಕೊಲೆಯ ಕುರಿತಾದ ಬೈಬಲಿನ ಆಜ್ಞೆಯ ಉಲ್ಲಂಘನೆಯನ್ನು ನ್ಯಾಯವೆಂದು ಸಮರ್ಥಿಸಲಾರದು. (ಹೋಲಿಸಿ ಆದಿಕಾಂಡ 39:4-9; ಯೆಶಾಯ 2:4; ಯೋಹಾನ 17:14, 16.) ಕ್ರೈಸ್ತರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನಿಂದ ಹೊರಬರುವ ಆಜ್ಞೆಗನುಗುಣವಾಗಿಯೂ ವರ್ತಿಸಬೇಕೆಂಬುದು ಅತ್ಯಾವಶ್ಯಕವಾಗಿದೆ.—ಪ್ರಕಟನೆ 18:4, 5.
ಲೋಕದಾದ್ಯಂತ, ದೇವರ ಸೇವಕರು ಉದ್ಯೋಗದ ವಿಷಯದಲ್ಲಿ ಅನೇಕ ಸನ್ನಿವೇಶಗಳನ್ನು ಎದುರಿಸುತ್ತಾರೆ. ಎಲ್ಲ ಸಾಧ್ಯತೆಗಳನ್ನು ಪಟ್ಟಿಮಾಡಿ, ಮುಚ್ಚುಮರೆಯಿಲ್ಲದ ನಿಯಮಗಳನ್ನು ಮಾಡಲು ಪ್ರಯತ್ನಿಸುವುದು ವ್ಯರ್ಥವಾದದ್ದೂ ನಮ್ಮ ಅಧಿಕಾರಕ್ಕೆ ನಿಲುಕದಂತಹದ್ದೂ ಆಗಿರುವುದು. (2 ಕೊರಿಂಥ 1:24) ಹಾಗಿದ್ದರೂ, ಕ್ರೈಸ್ತರು ವೈಯಕ್ತಿಕ ಉದ್ಯೋಗದ ನಿರ್ಧಾರಗಳನ್ನು ಮಾಡುವಾಗ ಪರಿಗಣಿಸಬೇಕಾದ ಕೆಲವೊಂದು ಅಂಶಗಳನ್ನು ನಾವು ಉಲ್ಲೇಖಿಸುವೆವು. ಈ ಅಂಶಗಳು, ಜುಲೈ 15, 1982ರ ವಾಚ್‌ಟವರ್ ಪತ್ರಿಕೆಯಲ್ಲಿ ಕಾಣಿಸಿಕೊಂಡ, ನಮ್ಮ ದೇವದತ್ತ ಮನಸ್ಸಾಕ್ಷಿಯಿಂದ ಪ್ರಯೋಜನ ಪಡೆದುಕೊಳ್ಳುವುದು ಎಂಬ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸಲ್ಪಟ್ಟಿದ್ದವು. ಅಲ್ಲಿದ್ದ ರೇಖಾಚೌಕವು ಎರಡು ಮುಖ್ಯ ಪ್ರಶ್ನೆಗಳನ್ನು ಎಬ್ಬಿಸಿತಲ್ಲದೆ, ಇತರ ಸಹಾಯಕರ ಅಂಶಗಳನ್ನೂ ತಿಳಿಯಪಡಿಸಿತು.
ಮೊದಲನೆಯ ಮುಖ್ಯ ಪ್ರಶ್ನೆಯು ಹೀಗಿದೆ: ಐಹಿಕ ಉದ್ಯೋಗವನ್ನು ಬೈಬಲು ಪ್ರತ್ಯೇಕವಾಗಿ ಖಂಡಿಸುತ್ತದೊ? ಇದರ ಕುರಿತು ಹೇಳಿಕೆ ನೀಡುತ್ತಾ, ಬೈಬಲು ಕಳ್ಳತನ, ರಕ್ತದ ದುರುಪಯೋಗ, ಮತ್ತು ಮೂರ್ತಿಪೂಜೆಯನ್ನು ಖಂಡಿಸುತ್ತದೆಂದು ಆ ಕಾವಲಿನಬುರುಜು ಪತ್ರಿಕೆಯು ಗಮನಿಸಿತು. ದೇವರು ಖಂಡಿಸುವಂತಹ ಈ ಮೇಲೆ ತಿಳಿಸಲ್ಪಟ್ಟಂತಹ ಕೆಲಸಗಳನ್ನು ನೇರವಾಗಿ ಪ್ರವರ್ಧಿಸುವ ಐಹಿಕ ಕೆಲಸದಿಂದ ಕ್ರೈಸ್ತನೊಬ್ಬನು ದೂರವಿರಬೇಕು.
ಎರಡನೆಯ ಪ್ರಶ್ನೆಯು ಹೀಗಿದೆ: ಈ ಉದ್ಯೋಗವು, ಖಂಡಿಸಲ್ಪಟ್ಟ ಆಚರಣೆಯಲ್ಲಿ ಒಬ್ಬನು ಭಾಗಿಯಾಗುವಂತೆ ಮಾಡುವುದೊ? ಜೂಜಾಟದ ತಾಣ, ಗರ್ಭಪಾತದ ಆಸ್ಪತ್ರೆ, ಇಲ್ಲವೆ ವೇಶ್ಯಾಗೃಹದಲ್ಲಿ ಉದ್ಯೋಗಸ್ಥನಾಗಿರುವ ವ್ಯಕ್ತಿಯು, ಒಂದು ಅಶಾಸ್ತ್ರೀಯ ಕೆಲಸದಲ್ಲಿ ಖಂಡಿತವಾಗಿಯೂ ಭಾಗಿಯಾಗಿರುವನು. ಅವನ ದಿನನಿತ್ಯದ ಕೆಲಸವು ಕೇವಲ ಕಸಗುಡಿಸುವುದು ಇಲ್ಲವೆ ಟೆಲಿಫೋನ್ ಕರೆಗಳನ್ನು ಉತ್ತರಿಸುವುದಾಗಿದ್ದರೂ, ದೇವರ ವಾಕ್ಯವು ಖಂಡಿಸುವ ಒಂದು ಆಚರಣೆಗೆ ಅವನು ನೆರವು ನೀಡುತ್ತಿರುವನು.
ಉದ್ಯೋಗಸಂಬಂಧಿತ ನಿರ್ಣಯಗಳನ್ನು ಮಾಡಬೇಕಾದ ಅನೇಕ ಕ್ರೈಸ್ತರು, ಈ ಪ್ರಶ್ನೆಗಳನ್ನು ಕೇವಲ ವಿಶ್ಲೇಷಿಸುವುದರಿಂದ ಒಂದು ವ್ಯಕ್ತಿಗತ ನಿರ್ಣಯಕ್ಕೆ ಬರಲು ಸಹಾಯ ಕಂಡುಕೊಂಡಿದ್ದಾರೆ.
ಉದಾಹರಣೆಗೆ, ಒಬ್ಬ ಸತ್ಯಾರಾಧಕನು ಸುಳ್ಳು ಧಾರ್ಮಿಕ ಸಂಸ್ಥೆಯ ಉದ್ಯೋಗಸ್ಥನಾಗಿದ್ದು, ಒಂದು ಚರ್ಚಿಗಾಗಿ ಮತ್ತು ಅದರ ಆವರಣಗಳಲ್ಲಿ ಏಕೆ ಕೆಲಸಮಾಡಲು ಸಾಧ್ಯವಿಲ್ಲ ಎಂಬುದನ್ನು ಆ ಎರಡು ಪ್ರಶ್ನೆಗಳಿಂದ ನೋಡಸಾಧ್ಯವಿದೆ. ಪ್ರಕಟನೆ 18:4, ಈ ಆಜ್ಞೆಯನ್ನು ವಿಧಿಸುತ್ತದೆ: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು.” ವ್ಯಕ್ತಿಯೊಬ್ಬನು ಸುಳ್ಳು ಆರಾಧನೆಯನ್ನು ಕಲಿಸುವ ಒಂದು ಧರ್ಮದ ಖಾಯಂ ಉದ್ಯೋಗಸ್ಥನಾಗಿದ್ದರೆ, ಅವನು ಮಹಾ ಬಾಬೆಲಿನ ಕೆಲಸಗಳಲ್ಲಿ ಮತ್ತು ಪಾಪಗಳಲ್ಲಿ ಭಾಗಿಯಾಗಿರುವನು. ಉದ್ಯೋಗಿಯು ಒಬ್ಬ ತೋಟಗಾರ, ದ್ವಾರಪಾಲಕ, ದುರಸ್ತಿಮಾಡುವವ, ಇಲ್ಲವೆ ಲೆಕ್ಕಿಗನಾಗಿದ್ದಲ್ಲಿ, ಅವನ ಕೆಲಸವು ಸತ್ಯಾರಾಧನೆಗೆ ವಿರುದ್ಧವಾಗಿರುವ ಆರಾಧನೆಯನ್ನು ಪ್ರವರ್ಧಿಸಲು ಸಹಾಯಮಾಡುವಂತಹದ್ದು ಆಗಿರುವುದು. ಅಲ್ಲದೆ, ಈ ವ್ಯಕ್ತಿಯು ಚರ್ಚನ್ನು ಸುಂದರಗೊಳಿಸಲು, ಅದನ್ನು ಸುಸ್ಥಿತಿಯಲ್ಲಿಡಲು, ಇಲ್ಲವೆ ಅದರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಶ್ರಮಿಸುತ್ತಿರುವುದನ್ನು ನೋಡುವ ಜನರು, ನ್ಯಾಯೋಚಿತವಾಗಿ ಅವನನ್ನು ಆ ಧರ್ಮದೊಂದಿಗೆ ಸಂಬಂಧಿಸುವರು.
ಆದರೆ, ಒಂದು ಚರ್ಚ್ ಇಲ್ಲವೆ ಧಾರ್ಮಿಕ ಸಂಸ್ಥೆಯ ಖಾಯಂ ಉದ್ಯೋಗಸ್ಥನಾಗಿರದ ವ್ಯಕ್ತಿಯ ಕುರಿತೇನು? ಬಹುಶಃ ಅವನು ಚರ್ಚಿನ ನೆಲಮಾಳಿಗೆಯಲ್ಲಿ ಒಡೆದುಹೋದ ಒಂದು ನೀರಿನ ಕೊಳಾಯಿಯನ್ನು ತುರ್ತಾಗಿ ದುರಸ್ತಿಮಾಡುವುದಕ್ಕಾಗಿ ಕರೆಯಲ್ಪಟ್ಟಿದ್ದಾನೆ. ಅದು ಚರ್ಚಿಗೆ ಚಾವಣಿ ಹೊದಿಸುವಂತಹ ಇಲ್ಲವೆ ವಿದ್ಯುತ್ ನಿರೋಧನ ಮಾಡುವಂತಹ ಕಾಂಟ್ರ್ಯಾಕ್ಟ್ ಕೆಲಸಕ್ಕಿಂತಲೂ ಭಿನ್ನವಾಗಿರುವುದಲ್ಲವೊ?
ಇನ್ನೂ ಹಲವಾರು ಸನ್ನಿವೇಶಗಳನ್ನು ಊಹಿಸಿಕೊಳ್ಳಸಾಧ್ಯವಿದೆ. ಆದುದರಿಂದ ಆ ಕಾವಲಿನಬುರುಜು ಪತ್ರಿಕೆಯು ನಿರೂಪಿಸಿದಂತಹ ಐದು ಹೆಚ್ಚಿನ ಅಂಶಗಳನ್ನು ನಾವು ಪುನರ್ವಿಮರ್ಶಿಸೋಣ:
1. ಉದ್ಯೋಗವು ಶಾಸ್ತ್ರೀಯ ಆಕ್ಷೇಪಣೆಗೆ ಗುರಿಯಾಗಿರದಂತಹ ಜನೋಪಕಾರಿ ಸೇವೆಯಾಗಿದೆಯೊ? ಒಬ್ಬ ಪೋಸ್ಟ್‌ಮ್ಯಾನ್‌ನ ಉದಾಹರಣೆಯನ್ನು ತೆಗೆದುಕೊಳ್ಳಿ. ಅವನು ಪತ್ರಗಳನ್ನು ವಿತರಿಸುತ್ತಿರುವ ಕ್ಷೇತ್ರದಲ್ಲಿ ಒಂದು ಚರ್ಚ್ ಇಲ್ಲವೆ ಗರ್ಭಪಾತದ ಆಸ್ಪತ್ರೆಯು ಇರುವಲ್ಲಿ, ಅವನೊಂದು ಖಂಡಿಸಲ್ಪಟ್ಟ ಆಚರಣೆಯನ್ನು ಪ್ರವರ್ಧಿಸುತ್ತಿದ್ದಾನೆಂದು ಅದು ಖಂಡಿತವಾಗಿಯೂ ಸೂಚಿಸಲಾರದು. ಒಂದು ಚರ್ಚ್ ಇಲ್ಲವೆ ಆಸ್ಪತ್ರೆಯನ್ನು ಸೇರಿಸಿ, ಎಲ್ಲ ಕಟ್ಟಡಗಳ ಕಿಟಕಿಯಿಂದ ಪ್ರಕಾಶಿಸುವ ಸೂರ್ಯನ ಬೆಳಕನ್ನು ಸ್ವತಃ ದೇವರೇ ಒದಗಿಸುತ್ತಾನೆ. (ಅ. ಕೃತ್ಯಗಳು 14:16, 17) ಹಾಗೆಯೇ, ಒಬ್ಬ ಪೋಸ್ಟ್‌ಮ್ಯಾನ್ ಆಗಿರುವ ಕ್ರೈಸ್ತನು ಅನುದಿನವೂ ಒಂದು ಜನೋಪಕಾರಿ ಸೇವೆಯನ್ನು ಎಲ್ಲರಿಗೂ ಸಲ್ಲಿಸುತ್ತಿದ್ದಾನೆಂದು ತೀರ್ಮಾನಿಸಬಹುದು. ಒಂದು ತುರ್ತಿನ ಸನ್ನಿವೇಶದಲ್ಲಿ, ಅಂದರೆ ಚರ್ಚಿನಲ್ಲಿ ನೀರಿನ ಕೊಳಾಯಿಯು ಒಡೆದು, ನೀರು ತುಂಬುವುದನ್ನು ತಡೆಯಲು ಕರೆಯಲ್ಪಟ್ಟ ಕೊಳಾಯಿಗಾರನಂತೆ, ಇಲ್ಲವೆ ಚರ್ಚಿನ ಕಾರ್ಯಕ್ರಮವು ಜರುಗುತ್ತಿರುವಾಗ ಕುಸಿದುಬಿದ್ದ ಒಬ್ಬರಿಗೆ ಚಿಕಿತ್ಸೆನೀಡಲು ಕರೆಯಲ್ಪಟ್ಟ ಆ್ಯಂಬುಲೆನ್ಸಿನ ಅನುಚರನಂತೆ ಕೆಲಸಮಾಡುವ ಒಬ್ಬ ಕ್ರೈಸ್ತನ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಇದನ್ನು ಅವನು ಕೇವಲ ಒಂದು ಜನೋಪಕಾರಿ ಸೇವೆಯ ಸನ್ನಿವೇಶವಾಗಿ ಪರಿಗಣಿಸಬಹುದು.
2. ತನ್ನ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಒಬ್ಬ ಕ್ತಿಗೆ ಎಷ್ಟು ಅಧಿಕಾರವಿದೆ? ಒಂದು ಅಂಗಡಿಯ ಯಜಮಾನನಾಗಿರುವ ಕ್ರೈಸ್ತನೊಬ್ಬನು, ಮೂರ್ತಿಗಳನ್ನು, ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ತಾಯಿತಗಳನ್ನು, ಸಿಗರೇಟುಗಳನ್ನು, ಇಲ್ಲವೆ ರಕ್ತದಿಂದ ಮಾಡಲ್ಪಟ್ಟ ಸಾಸೆಜ್‌ಗಳನ್ನು ತರಿಸಿಟ್ಟು ಮಾರಲು ಖಂಡಿತವಾಗಿಯೂ ಒಪ್ಪಿಕೊಳ್ಳಲಾರನು. ಅವನು ಅಂಗಡಿಯ ಯಜಮಾನನಾಗಿರುವ ಕಾರಣ, ಎಲ್ಲವೂ ಅವನ ಕೈಯಲ್ಲಿದೆ. ಸಿಗರೇಟುಗಳ ಇಲ್ಲವೆ ಮೂರ್ತಿಗಳ ವ್ಯಾಪಾರಮಾಡಿ ಲಾಭಗಳಿಸುವಂತೆ ಜನರು ಅವನನ್ನು ಒತ್ತಾಯಿಸಿದರೂ, ಅವನು ತನ್ನ ಶಾಸ್ತ್ರೀಯ ನಂಬಿಕೆಗಳಿಗೆ ಸುಸಂಗತವಾಗಿ ವರ್ತಿಸುವನು. ಮತ್ತೊಂದು ಕಡೆಯಲ್ಲಿ, ಕ್ರೈಸ್ತನೊಬ್ಬನು ಆಹಾರವಸ್ತುಗಳ ಒಂದು ದೊಡ್ಡ ಅಂಗಡಿಯಲ್ಲಿ ಕೆಲಸಕ್ಕಿರುವಾಗ, ನಗದುಯಂತ್ರವನ್ನು ನಡಿಸುವಂತೆ, ನೆಲವನ್ನು ಪಾಲಿಶ್ ಮಾಡುವಂತೆ ಇಲ್ಲವೆ ಹಣದ ಲೆಕ್ಕಾಚಾರವನ್ನು ನೋಡಿಕೊಳ್ಳುವಂತೆ ನೇಮಿಸಲ್ಪಟ್ಟಿರಬಹುದು. ಸಿಗರೇಟುಗಳು ಇಲ್ಲವೆ ಹಬ್ಬಗಳಿಗಾಗಿರುವ ವಸ್ತುಗಳಂತಹ ಕೆಲವು ಆಕ್ಷೇಪಣೀಯ ವಸ್ತುಗಳು ಅಲ್ಲಿದ್ದರೂ, ಯಾವ ಉತ್ಪಾದನೆಗಳನ್ನು ತರಿಸಲಾಗುತ್ತದೆ ಮತ್ತು ವ್ಯಾಪಾರಮಾಡಲಾಗುತ್ತದೆ ಎಂಬ ವಿಷಯದಲ್ಲಿ ಅವನಿಗೆ ನಿಯಂತ್ರಣವಿರುವುದಿಲ್ಲ.a (ಹೋಲಿಸಿ ಲೂಕ 7:8; 17:7, 8.) ಇದು ಮುಂದಿನ ವಿಷಯಕ್ಕೆ ಸಂಬಂಧಿಸಿದೆ.
3. ವ್ಯಕ್ತಿಯು ಅದರಲ್ಲಿ ಎಷ್ಟರ ಮಟ್ಟಿಗೆ ಒಳಗೊಂಡಿದ್ದಾನೆ? ನಾವು ಪುನಃ ಅಂಗಡಿಯ ಉದಾಹರಣೆಗೆ ಹಿಂದಿರುಗೋಣ. ನಗದುಯಂತ್ರವನ್ನು ನಡೆಸುವ ಇಲ್ಲವೆ ಶೆಲ್ಫ್‌ಗಳಲ್ಲಿ ಸಾಮಾನುಗಳನ್ನು ತುಂಬುವ ಕೆಲಸಕ್ಕೆ ನೇಮಿಸಲ್ಪಟ್ಟ ಒಬ್ಬ ಉದ್ಯೋಗಸ್ಥನಿಗೆ, ಕೆಲವೊಮ್ಮೆ ಮಾತ್ರ ಸಿಗರೇಟುಗಳನ್ನು ಇಲ್ಲವೆ ಧಾರ್ಮಿಕ ವಸ್ತುಗಳನ್ನು ನಿರ್ವಹಿಸುವ ಸಂದರ್ಭ ಬರಬಹುದು. ಅದು ತನ್ನ ಸಂಪೂರ್ಣ ಕೆಲಸದ ಒಂದು ಚಿಕ್ಕ ಭಾಗ ಮಾತ್ರವೇ ಆಗಿರುವುದು. ಆದರೆ, ಅದೇ ಅಂಗಡಿಯಲ್ಲಿನ ತಂಬಾಕು ವಿಭಾಗದಲ್ಲಿ ಕೆಲಸಮಾಡುವ ಉದ್ಯೋಗಸ್ಥನಿಗೆ ಹೋಲಿಸುವಾಗ, ಇದು ಎಷ್ಟು ಭಿನ್ನವಾಗಿದೆ! ಅನುದಿನವೂ ಅವನ ಕೆಲಸವು, ಕ್ರೈಸ್ತ ನಂಬಿಕೆಗಳಿಗೆ ವಿರುದ್ಧವಾಗಿರುವ ವಿಷಯದ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. (2 ಕೊರಿಂಥ 7:1) ಉದ್ಯೋಗದ ಸವಾಲುಗಳನ್ನು ಎದುರಿಸುವಾಗ, ಒಳಗೂಡಿಕೆಯ ಇಲ್ಲವೆ ಸಂಪರ್ಕದ ಪ್ರಮಾಣವನ್ನು ಪರಿಗಣಿಸುವುದು ಏಕೆ ಪ್ರಾಮುಖ್ಯವೆಂಬುದನ್ನು ಇದು ಚೆನ್ನಾಗಿ ದೃಷ್ಟಾಂತಿಸುತ್ತದೆ.
4. ಸಂಬಳವನ್ನು ಯಾರು ಕೊಡುತ್ತಾರೆ ಇಲ್ಲವೆ ಕೆಲಸಮಾಡಬೇಕಾದ ಸ್ಥಳವು ಎಲ್ಲಿದೆ? ಎರಡು ಸನ್ನಿವೇಶಗಳನ್ನು ಪರಿಗಣಿಸಿರಿ. ತನ್ನ ಸುತ್ತಮುತ್ತಲಿನ ಪರಿಸರವನ್ನು ಅಂದಗೊಳಿಸಲು, ಗರ್ಭಪಾತದ ಆಸ್ಪತ್ರೆಯೊಂದು ವ್ಯಕ್ತಿಯೊಬ್ಬನಿಗೆ ಸಂಬಳಕೊಟ್ಟು ಅಕ್ಕಪಕ್ಕದ ರಸ್ತೆಗಳನ್ನು ಶುಚಿಮಾಡಿಸುತ್ತದೆ. ಅವನ ಸಂಬಳವು ಗರ್ಭಪಾತದ ಆಸ್ಪತ್ರೆಯಿಂದ ಬರುವುದಾದರೂ, ಅವನು ಅಲ್ಲಿ ಕೆಲಸಮಾಡುವುದಿಲ್ಲ ಮತ್ತು ದಿನವಿಡೀ ಅವನು ಆ ಆಸ್ಪತ್ರೆಯಲ್ಲಿರುವುದನ್ನು ಯಾರೊಬ್ಬರೂ ನೋಡುವುದಿಲ್ಲ. ಸಂಬಳವನ್ನು ಕೊಡುವವರು ಯಾರೇ ಆಗಿರಲಿ, ಅವನೊಂದು ಸಾರ್ವಜನಿಕ ಕೆಲಸಮಾಡುತ್ತಿರುವುದನ್ನು ಜನರು ನೋಡುತ್ತಾರೆ, ಮತ್ತು ಇದನ್ನು ಶಾಸ್ತ್ರಗಳು ವಿರೋಧಿಸುವುದಿಲ್ಲ. ಈಗ ಭಿನ್ನವಾದೊಂದು ಸನ್ನಿವೇಶವನ್ನು ಪರಿಗಣಿಸೋಣ. ವೇಶ್ಯಾವಾಟಿಕೆಯು ಕಾನೂನುಬದ್ಧವಾಗಿರುವ ಒಂದು ದೇಶದಲ್ಲಿ, ಸಾರ್ವಜನಿಕ ಆರೋಗ್ಯ ಕೇಂದ್ರವು ವೇಶ್ಯಾಗೃಹದಲ್ಲಿ ಕೆಲಸಮಾಡುವಂತೆ ಒಬ್ಬ ನರ್ಸಿಗೆ ಸಂಬಳಕೊಡುತ್ತದೆ. ಅವಳ ಕೆಲಸವು, ರತಿರವಾನಿತ ರೋಗಗಳ ಹಬ್ಬುವಿಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಆರೋಗ್ಯ ತಪಾಸಣೆಗಳನ್ನು ನಡೆಸುವುದಾಗಿದೆ. ಅವಳು ಸಾರ್ವಜನಿಕ ಆರೋಗ್ಯ ಕೇಂದ್ರದಿಂದ ಸಂಬಳ ಪಡೆದುಕೊಳ್ಳುವುದಾದರೂ, ಸಂಪೂರ್ಣವಾಗಿ ವೇಶ್ಯಾಗೃಹದಲ್ಲಿ ಕೆಲಸಮಾಡುತ್ತಾ, ಅನೈತಿಕತೆಯನ್ನು ಹೆಚ್ಚು ಸುರಕ್ಷಿತವೂ ಸ್ವೀಕಾರಯೋಗ್ಯವೂ ಆಗಿ ಮಾಡುತ್ತಾಳೆ. ಆದುದರಿಂದಲೇ, ಸಂಬಳದ ಮೂಲ ಹಾಗೂ ಕೆಲಸದ ಸ್ಥಳವನ್ನು ಒಬ್ಬನು ಏಕೆ ಪರಿಗಣಿಸಬೇಕೆಂಬುದನ್ನು ಈ ಉದಾಹರಣೆಗಳು ದೃಷ್ಟಾಂತಿಸುತ್ತವೆ.
5. ಕೆಲಸವನ್ನು ಮಾಡುವುದರ ಪರಿಣಾಮವು ಏನಾಗಿರುವುದು; ಅದು ಒಬ್ಬನ ಮನಸ್ಸಾಕ್ಷಿಯನ್ನು ನೋಯಿಸುವುದೊ ಇಲ್ಲವೆ ಇತರರು ಎಡವುವಂತೆ ಮಾಡುವುದೊ? ನಾವು ನಮ್ಮ ಹಾಗೂ ಇತರರ ಮನಸ್ಸಾಕ್ಷಿಯನ್ನು ಪರಿಗಣಿಸಲೇಬೇಕು. ಒಂದು ನಿರ್ದಿಷ್ಟವಾದ ಕೆಲಸವು (ಅದರ ಸ್ಥಳ ಹಾಗೂ ಸಂಬಳದ ಮೂಲವನ್ನು ಸೇರಿಸಿ) ಹೆಚ್ಚಿನ ಕ್ರೈಸ್ತರಿಗೆ ಸ್ವೀಕಾರಯೋಗ್ಯವಾಗಿ ತೋರಿದರೂ, ತನ್ನ ವೈಯಕ್ತಿಕ ಮನಸ್ಸಾಕ್ಷಿಯನ್ನು ಆ ಕೆಲಸವು ತೊಂದರೆಗೊಳಪಡಿಸುವುದೆಂದು ವ್ಯಕ್ತಿಯೊಬ್ಬನು ಗ್ರಹಿಸಬಹುದು. ಅತ್ಯುತ್ತಮ ಮಾದರಿಯನ್ನಿಟ್ಟ ಅಪೊಸ್ತಲ ಪೌಲನು ಹೇಳಿದ್ದು: “ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಮನಸ್ಸಿನಿಂದ ಒಳ್ಳೇ ಸಾಕ್ಷಿಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.” (ಇಬ್ರಿಯ 13:18) ನಮ್ಮ ಮನಸ್ಸನ್ನು ಕ್ಷೋಭೆಗೊಳಪಡಿಸುವಂತಹ ಕೆಲಸವನ್ನು ಮಾಡುವುದರಿಂದ ನಾವು ದೂರವಿರತಕ್ಕದ್ದು; ಹಾಗಿದ್ದರೂ ಈ ವಿಷಯದಲ್ಲಿ ಭಿನ್ನವಾಗಿ ವರ್ತಿಸುವವರ ವಿಷಯದಲ್ಲಿ ನಾವು ಟೀಕಾತ್ಮಕರಾಗಿರಬಾರದು. ಇದಕ್ಕೆ ವಿಪರೀತವಾಗಿ, ನಿರ್ದಿಷ್ಟವಾದೊಂದು ಕೆಲಸವು ಬೈಬಲಿಗೆ ವಿರುದ್ಧವಾಗಿಲ್ಲವೆಂದು ಕ್ರೈಸ್ತನೊಬ್ಬನಿಗೆ ತಿಳಿದಿರುವುದಾದರೂ, ಅದನ್ನು ಮಾಡುವುದರಿಂದ ಸಭೆಯಲ್ಲಿರುವ ಮತ್ತು ಸಮುದಾಯದಲ್ಲಿರುವ ಅನೇಕರು ಕ್ಷೋಭೆಗೊಳ್ಳುವರೆಂದು ಅವನು ಗ್ರಹಿಸಿಕೊಳ್ಳಬಹುದು. ಸರಿಯಾದ ಮನೋಭಾವವನ್ನು ಪೌಲನು ಈ ಮಾತುಗಳಲ್ಲಿ ವ್ಯಕ್ತಪಡಿಸಿದನು: “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.”—2 ಕೊರಿಂಥ 6:3, 4.
ಈಗ ನಾವು ನಮ್ಮ ಮುಖ್ಯ ಪ್ರಶ್ನೆಯ ಕಡೆಗೆ ಗಮನಹರಿಸೋಣ. ಅದು ಒಂದು ಚರ್ಚಿನಲ್ಲಿ ಹೊಸ ಕಿಟಕಿಗಳನ್ನು ಅಳವಡಿಸುವುದು, ರತ್ನಗಂಬಳಿಗಳನ್ನು ಶುಚಿಮಾಡುವುದು, ಇಲ್ಲವೆ ಕುಲುಮೆಯನ್ನು ದುರಸ್ತಿಪಡಿಸುವಂತಹ ಕೆಲಸಗಳನ್ನು ಮಾಡುವುದರ ಕುರಿತಾಗಿತ್ತು. ಮೇಲಿನ ಅಂಶಗಳು ಹೇಗೆ ಇದರಲ್ಲಿ ಒಳಗೂಡಿರಬಲ್ಲವು?
ಅಧಿಕಾರದ ವಿಷಯವನ್ನು ಜ್ಞಾಪಿಸಿಕೊಳ್ಳಿರಿ. ಚರ್ಚಿನಲ್ಲಿ ಇಂತಹ ಕೆಲಸಗಳನ್ನು ಮಾಡಬೇಕೊ ಬೇಡವೊ ಎಂದು ನಿರ್ಣಯಿಸುವ ಯಜಮಾನ ಇಲ್ಲವೆ ಮ್ಯಾನೆಜರನು ಒಬ್ಬ ಕ್ರೈಸ್ತನಾಗಿದ್ದಾನೊ? ಅಧಿಕಾರವುಳ್ಳ ಒಬ್ಬ ಕ್ರೈಸ್ತನು ಇಂತಹ ಕೆಲಸದ ಕಾಂಟ್ರ್ಯಾಕ್ಟ್ ಪಡೆದು ಮಹಾ ಬಾಬೆಲಿನೊಂದಿಗೆ ಭಾಗವಹಿಸಲು ಇಲ್ಲವೆ ಸುಳ್ಳಾರಾಧನೆಯನ್ನು ಪ್ರವರ್ಧಿಸುವ ಬೇರೆ ಯಾವುದೊ ಧರ್ಮಕ್ಕೆ ನೆರವನ್ನು ನೀಡಲು ಬಯಸುವನೊ? ಅದು ಸ್ವಂತ ಅಂಗಡಿಯಲ್ಲಿ ಒಬ್ಬನು ಸಿಗರೇಟುಗಳನ್ನು ಇಲ್ಲವೆ ಮೂರ್ತಿಗಳನ್ನು ಮಾರಲು ನಿರ್ಧರಿಸುವುದಕ್ಕೆ ಸಮಾನವಾಗಿರುವುದಲ್ಲವೊ?—2 ಕೊರಿಂಥ 6:14-16.
ಯಾವ ಕೆಲಸಗಳು ಸ್ವೀಕರಿಸಲ್ಪಡಬೇಕು ಎಂಬ ವಿಷಯದಲ್ಲಿ ನಿರ್ಣಯಮಾಡುವ ಅಧಿಕಾರ ಒಬ್ಬ ಕ್ರೈಸ್ತ ಉದ್ಯೋಗಸ್ಥನಿಗೆ ಇರದಿದ್ದಲ್ಲಿ, ಕೆಲಸದ ಸ್ಥಳ ಮತ್ತು ಒಳಗೂಡಿಕೆಯ ಪ್ರಮಾಣದಂತಹ ಇತರ ವಿಷಯಗಳನ್ನು ಅವನು ಪರಿಗಣಿಸತಕ್ಕದ್ದು. ಒಂದು ಸಮಾರಂಭಕ್ಕಾಗಿ ಕುರ್ಚಿಗಳನ್ನು ಕೊಂಡೊಯ್ಯುವ ಇಲ್ಲವೆ ಹೊಸ ಕುರ್ಚಿಗಳನ್ನು ಹಾಕಿಬರುವಂತಹ ಕೆಲಸವನ್ನು ಇಲ್ಲವೆ ಚರ್ಚಿನಲ್ಲಿ ಹೊತ್ತಿಕೊಂಡ ಬೆಂಕಿಯನ್ನು, ಅದು ಹರಡುವ ಮುಂಚೆ ಆರಿಸಲು ಕರೆಯಲ್ಪಟ್ಟ ಬೆಂಕಿ ಆರಿಸುವವನಂತಹ ಜನೋಪಕಾರಿ ಸೇವೆಯನ್ನು ಮಾಡುವಂತೆ ಉದ್ಯೋಗಿಯು ಕೇಳಿಕೊಳ್ಳಲ್ಪಟ್ಟಿದ್ದಾನೊ? ಈ ಕೆಲಸವು, ಚರ್ಚಿಗೆ ಬಣ್ಣಹಚ್ಚುತ್ತಾ ಬಹಳಷ್ಟು ಸಮಯವನ್ನು ಕಳೆಯುವ ಕೆಲಸಕ್ಕಿಂತ ಇಲ್ಲವೆ ಅದನ್ನು ಅಂದಗೊಳಿಸಲು ಕ್ರಮವಾಗಿ ತೋಟಗಾರಿಕೆ ಮಾಡುವಂತಹ ಕೆಲಸಕ್ಕಿಂತ ಭಿನ್ನವಾಗಿದೆ ಎಂಬುದನ್ನು ಅನೇಕರು ನೋಡಬಲ್ಲರು. ಇಂತಹ ಕ್ರಮವಾದ ಇಲ್ಲವೆ ದೀರ್ಘಾವಧಿಯ ಸಂಪರ್ಕದ ಕಾರಣ, ಜನರು ಆ ಕ್ರೈಸ್ತನನ್ನು ಅವನು ಅನುಮೋದಿಸದ ಧರ್ಮದೊಂದಿಗೆ ಸಂಬಂಧಿಸುವಂತೆ ಮಾಡಬಹುದು. ಹೀಗೆ, ಅವರು ಎಡವುವಂತೆ ಇದು ಮಾಡಬಹುದು.—ಮತ್ತಾಯ 13:41; 18:6, 7.
ಉದ್ಯೋಗದ ವಿಷಯದಲ್ಲಿ ನಾವು ಹಲವಾರು ಪ್ರಾಮುಖ್ಯ ವಿಷಯಗಳನ್ನು ಈಗ ಪರಿಗಣಿಸಿದ್ದೇವೆ. ಇವು ಸುಳ್ಳು ಧರ್ಮವನ್ನು ಒಳಗೊಂಡ ಒಂದು ನಿರ್ದಿಷ್ಟ ಪ್ರಶ್ನೆಯ ಪೂರ್ವಾಪರದಲ್ಲಿ ಪ್ರಸ್ತುತಗೊಳಿಸಲ್ಪಟ್ಟವು. ಆದರೂ, ಇತರ ರೀತಿಯ ಉದ್ಯೋಗದ ಸಂಬಂಧದಲ್ಲಿಯೂ ಇವುಗಳನ್ನು ಪರಿಗಣಿಸಸಾಧ್ಯವಿದೆ. ಪ್ರತಿಯೊಂದು ಸಂದರ್ಭದಲ್ಲಿಯೂ ಪ್ರಾರ್ಥನಾಪೂರ್ವಕ ವಿಶ್ಲೇಷಣೆಯನ್ನು ಮಾಡಿ, ಪ್ರತ್ಯೇಕವಾಗಿರುವ ಆ ಸನ್ನಿವೇಶದ ನಿರ್ದಿಷ್ಟ ಹಾಗೂ ಅಪೂರ್ವವಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಮೇಲೆ ಪ್ರಸ್ತುತಗೊಳಿಸಲ್ಪಟ್ಟ ಅಂಶಗಳು ಈಗಾಗಲೇ ಅನೇಕ ಪ್ರಾಮಾಣಿಕ ಕ್ರೈಸ್ತರಿಗೆ ಸಹಾಯಮಾಡಿವೆ. ಇದರಿಂದ ಅವರು ಯೆಹೋವನ ಮುಂದೆ ನೆಟ್ಟಗೆ ಮತ್ತು ಯಥಾರ್ಥವಾಗಿ ನಡೆಯುವ ತಮ್ಮ ಬಯಕೆಯನ್ನು ಪ್ರತಿಬಿಂಬಿಸುವ ಶುದ್ಧ ಅಂತಃಕರಣದ ನಿರ್ಣಯಗಳನ್ನು ಮಾಡಲು ಸಾಧ್ಯವಾಗಿದೆ.—ಜ್ಞಾನೋಕ್ತಿ 3:5, 6; ಯೆಶಾಯ 2:3; ಇಬ್ರಿಯ 12:12-14.
[ಅಧ್ಯಯನ ಪ್ರಶ್ನೆಗಳು]
a ಆಸ್ಪತ್ರೆಗಳಲ್ಲಿ ಕೆಲಸಮಾಡುತ್ತಿರುವ ಕೆಲವು ಕ್ರೈಸ್ತರು, ಅಧಿಕಾರದ ಈ ಅಂಶಕ್ಕೆ ಪರಿಗಣನೆಯನ್ನು ನೀಡಬೇಕಾಗಿದೆ. ರೋಗಿಯೊಬ್ಬನಿಗಾಗಿ ಬೇಕಾದ ಔಷಧಿಗಳನ್ನು ತರಿಸುವ ಇಲ್ಲವೆ ಅಗತ್ಯವಿರುವ ವೈದ್ಯಕೀಯ ವಿಧಾನಗಳನ್ನು ನಡೆಸುವ ಅಧಿಕಾರ ಒಬ್ಬ ವೈದ್ಯನಿಗೆ ಇರಬಹುದು. ರೋಗಿಗೆ ಯಾವ ಆಕ್ಷೇಪಣೆ ಇರದಿದ್ದರೂ, ಬೈಬಲಿನ ಸ್ಥಾನವನ್ನು ಅರಿತಿರುವ ಅಧಿಕಾರದಲ್ಲಿರುವ ಒಬ್ಬ ಕ್ರೈಸ್ತ ವೈದ್ಯನು, ಒಂದು ರಕ್ತಪೂರಣವನ್ನು ಇಲ್ಲವೆ ಗರ್ಭಪಾತವನ್ನು ಹೇಗೆ ನಡೆಸಬಲ್ಲನು? ಇದಕ್ಕೆ ತದ್ವಿರುದ್ಧವಾಗಿ, ಆಸ್ಪತ್ರೆಯೊಂದರಲ್ಲಿ ಕೆಲಸಕ್ಕಿರುವ ನರ್ಸಿಗೆ ಅಂತಹ ಅಧಿಕಾರ ಇರಲಾರದು. ದಿನನಿತ್ಯದ ಕೆಲಸಗಳನ್ನು ಅವಳು ಮಾಡಿದಂತೆ, ಯಾವುದೊ ಉದ್ದೇಶಕ್ಕಾಗಿ ರಕ್ತದ ಪರೀಕ್ಷೆಯನ್ನು ಮಾಡುವಂತೆ ಇಲ್ಲವೆ ಗರ್ಭಪಾತಕ್ಕಾಗಿ ಬಂದ ಒಬ್ಬ ರೋಗಿಯ ಆರೈಕೆ ಮಾಡುವಂತೆ ವೈದ್ಯನು ಅವಳಿಗೆ ಹೇಳಬಹುದು. 2 ಅರಸು 5:17-19ರಲ್ಲಿ ದಾಖಲಿಸಲ್ಪಟ್ಟಿರುವ ಉದಾಹರಣೆಗನುಸಾರ, ರಕ್ತಪೂರಣವನ್ನು ನೀಡುವ ಇಲ್ಲವೆ ಗರ್ಭಪಾತವನ್ನು ನಡೆಸುವಂತೆ ಆದೇಶಿಸುವ ಅಧಿಕಾರ ತನಗಿಲ್ಲವಾದುದರಿಂದ, ರೋಗಿಗಾಗಿ ಅವಳು ಜನೋಪಕಾರಿ ಸೇವೆಗಳನ್ನು ಮಾಡಬಹುದೆಂದು ನಿರ್ಣಯಿಸಬಹುದು. ಹಾಗಿದ್ದರೂ, ‘ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಳ್ಳಲಿಕ್ಕಾಗಿ’ ಅವಳು ತನ್ನ ಮನಸ್ಸಾಕ್ಷಿಯನ್ನು ಪರಿಗಣಿಸಬೇಕೆಂಬುದು ಬಹಳ ಪ್ರಾಮುಖ್ಯ.—ಅ. ಕೃತ್ಯಗಳು 23:1.