ಆತ್ಮಿಕ ಬಲಹೀನತೆಯನ್ನು ಗುರುತಿಸುವ ಮತ್ತು ಜಯಿಸುವ ವಿಧ
ಗ್ರೀಕ್ ಪುರಾಣಕ್ಕನುಸಾರ, ಟ್ರಾಯ್ ನಗರದ ವಿರುದ್ಧ ನಡೆದ ಟ್ರೋಜನ್ ಯುದ್ಧದಲ್ಲಿ, ಅಕಿಲೀಸ್ ಎಂಬವನು ಗ್ರೀಕ್ ಯೋಧರಲ್ಲೇ ಅತ್ಯಂತ ಸಾಹಸಿಯಾಗಿದ್ದನು. ಅಕಿಲೀಸ್ ಶಿಶುವಾಗಿದ್ದಾಗ, ಅವನ ತಾಯಿಯು ಅವನನ್ನು ಸ್ಟಿಕ್ಸ್ ಹೊಳೆಯ ನೀರಿನಲ್ಲಿ ಮುಳುಗಿಸಿ ಹೊರತೆಗೆದ ಕಾರಣ ಅವನು ಅಭೇದ್ಯನಾಗಿದ್ದರೂ, ಅವನ ತಾಯಿಯು ಅವನನ್ನು ಹಿಡಿದಿದ್ದ ಅವನ ಹಿಮ್ಮಡಿಯು ಮಾತ್ರ ದುರ್ಬಲವಾಗಿತ್ತು. ಟ್ರಾಯ್ ನಗರದ ಪ್ರೈಯಮ್ ರಾಜನ ಪುತ್ರನಾದ ಪ್ಯಾರಿಸ್, ಅದೇ ಭಾಗವನ್ನು ಮಾರಕವಾಗಿ ಗಾಯಗೊಳಿಸಿ, ಅಕಿಲೀಸನನ್ನು ಕೊಂದನು.
ಕ್ರೈಸ್ತರು ಕ್ರಿಸ್ತನ ಯೋಧರಾಗಿದ್ದು, ಒಂದು ಆತ್ಮಿಕ ಹೋರಾಟದಲ್ಲಿ ತೊಡಗಿದ್ದಾರೆ. (2 ತಿಮೊಥೆಯ 2:3) ಅಪೊಸ್ತಲ ಪೌಲನು ವಿವರಿಸುವುದು: “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.” ಹೌದು, ನಮ್ಮ ವೈರಿಗಳು, ಪಿಶಾಚನಾದ ಸೈತಾನನು ಮತ್ತು ಅವನ ದೆವ್ವಗಳಲ್ಲದೆ ಇನ್ಯಾರೂ ಅಲ್ಲ.—ಎಫೆಸ 6:12.
“ಯುದ್ಧಶೂರ”ನೆಂದು ವರ್ಣಿಸಲ್ಪಟ್ಟಿರುವ ಯೆಹೋವನ ಸಹಾಯವು ನಮಗೆ ದೊರಕದೆ ಹೋಗಿದ್ದಲ್ಲಿ, ಇದು ನಿಜವಾಗಿಯೂ ಏಕಪಕ್ಷೀಯ ಹೋರಾಟವಾಗಿರುತ್ತಿತ್ತು. (ವಿಮೋಚನಕಾಂಡ 15:3) ದುಷ್ಟ ವೈರಿಗಳ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು, ನಮಗೆ ಆತ್ಮಿಕ ರಕ್ಷಾಕವಚವು ನೀಡಲ್ಪಟ್ಟಿದೆ. ಆದುದರಿಂದ ಅಪೊಸ್ತಲನು ಪೌಲನು ಪ್ರೇರಿಸಿದ್ದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು [“ರಕ್ಷಾಕವಚವನ್ನು,” NW] ಧರಿಸಿಕೊಳ್ಳಿರಿ.”—ಎಫೆಸ 6:11.
ಯೆಹೋವ ದೇವರು ಒದಗಿಸಿರುವ ರಕ್ಷಾಕವಚವು, ಯಾವುದೇ ರೀತಿಯ ಆತ್ಮಿಕ ದಾಳಿಯನ್ನು ಎದುರಿಸಲು ಸಮರ್ಥವಾದ ಅತ್ಯುತ್ತಮ ಗುಣಮಟ್ಟದ್ದು ಎಂಬುದರಲ್ಲಿ ಸಂದೇಹವೇ ಇಲ್ಲ. ಪೌಲನು ಕೊಟ್ಟಂತಹ ಪಟ್ಟಿಯ ಕಡೆಗೆ ಗಮನ ಹರಿಸಿರಿ: ಸತ್ಯವೆಂಬ ನಡುಕಟ್ಟು, ನೀತಿಯೆಂಬ ವಜ್ರಕವಚ, ಸಮಾಧಾನದ [“ಸುವಾರ್ತೆಯ,” NW] ವಿಷಯವಾದ ಕೆರಗಳು, ನಂಬಿಕೆಯೆಂಬ ಗುರಾಣಿ, ರಕ್ಷಣೆಯೆಂಬ ಶಿರಸ್ತ್ರಾಣ, ಪವಿತ್ರಾತ್ಮದ ಕತ್ತಿ. ಇದಕ್ಕಿಂತಲೂ ಉತ್ತಮವಾದ ಆಯುಧಗಳನ್ನು ಒಬ್ಬನು ಅಪೇಕ್ಷಿಸಬಲ್ಲನೊ? ಇಂತಹ ಒಂದು ರಕ್ಷಾಕವಚವನ್ನು ಧರಿಸಿಕೊಳ್ಳುವ ಒಬ್ಬ ಕ್ರೈಸ್ತ ಯೋಧನು, ಕಷ್ಟಸಾಧ್ಯ ಪರಿಸ್ಥಿತಿಗಳ ಎದುರಿನಲ್ಲೂ ಜಯಶಾಲಿಯಾಗುವ ಅವಕಾಶವನ್ನು ಪಡೆದಿರುವನು.—ಎಫೆಸ 6:13-17.
ಯೆಹೋವನು ನೀಡಿರುವ ಆತ್ಮಿಕ ರಕ್ಷಾಕವಚವು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ನಮಗೆ ಭದ್ರತೆಯನ್ನು ಒದಗಿಸುವಂತಹದ್ದಾಗಿದ್ದರೂ, ನಾವು ಅದನ್ನು ಲಘುವಾಗಿ ಎಣಿಸಬಾರದು. ಅಜೇಯನೆಂದು ಎಣಿಸಲ್ಪಟ್ಟಿದ್ದ ಅಕಿಲೀಸನನ್ನು ಜ್ಞಾಪಿಸಿಕೊಳ್ಳುವುದಾದರೆ, ನಮಗೂ ಒಂದು ದುರ್ಬಲಸ್ಥಾನ ಇಲ್ಲವೆ ಆತ್ಮಿಕ ಅಕಿಲೀಸ್ ಹಿಮ್ಮಡಿಯಿರುವ ಸಾಧ್ಯತೆ ಇದೆಯೊ? ಯಾವುದೇ ಮುನ್ನೆಚ್ಚರಿಕೆಯಿಲ್ಲದೆ ಆಕ್ರಮಣಕ್ಕೊಳಗಾದಾಗ, ಅದು ಮಾರಕವಾಗಿ ಪರಿಣಮಿಸಬಲ್ಲದು.
ನಿಮ್ಮ ಆತ್ಮಿಕ ರಕ್ಷಾಕವಚವನ್ನು ಪರಿಶೀಲಿಸಿರಿ
ನೀರ್ಗಲ್ಲು ಜಾರಾಟದ ಓಲಿಂಪಿಕ್ ಪಂದ್ಯದಲ್ಲಿ ಎರಡು ಬಾರಿ ಸ್ವರ್ಣ ಪದಕವನ್ನು ಪಡೆದ ಮತ್ತು ಅತ್ಯುತ್ತಮ ಆರೋಗ್ಯವುಳ್ಳವನಾಗಿ ತೋರುತ್ತಿದ್ದ ಒಬ್ಬ ಆಟಗಾರನು, ಪ್ರ್ಯಾಕ್ಟಿಸ್ ಮಾಡುವಾಗ ಹಠಾತ್ತನೆ ಕುಸಿದುಬಿದ್ದು ಸತ್ತುಹೋದನು. ಇದಾದ ಸ್ವಲ್ಪದರಲ್ಲೇ, ದ ನ್ಯೂ ಯಾರ್ಕ್ ಟೈಮ್ಸ್ನಲ್ಲಿ ಒಂದು ಗಂಭೀರವಾದ ವರದಿಯು ನೀಡಲ್ಪಟ್ಟಿತು: “ಪ್ರತಿ ವರ್ಷ ಹೃದಯಾಘಾತವನ್ನು ಅನುಭವಿಸುವ 6,00,000 ಅಮೆರಿಕನರಲ್ಲಿ ಅರ್ಧದಷ್ಟು ಜನರಿಗೆ ಯಾವುದೇ ರೋಗಲಕ್ಷಣಗಳಿರುವುದಿಲ್ಲ.” ನಮಗೆ ಹೇಗೆ ಅನಿಸುತ್ತದೊ ಅದರಿಂದ ನಮ್ಮ ಆರೋಗ್ಯದ ಸ್ಥಿತಿಯನ್ನು ನಿರ್ಧರಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ.
ನಮ್ಮ ಆತ್ಮಿಕ ಕ್ಷೇಮದ ವಿಷಯದಲ್ಲೂ ಇದು ಸತ್ಯವಾಗಿದೆ. ಬೈಬಲಿನ ಬುದ್ಧಿವಾದವು ಹೀಗಿದೆ: “ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” (1 ಕೊರಿಂಥ 10:12) ಲಭ್ಯವಿರುವ ರಕ್ಷಾಕವಚಗಳಲ್ಲಿಯೇ ನಮ್ಮ ಆತ್ಮಿಕ ರಕ್ಷಾಕವಚವು ಅತ್ಯುತ್ತಮವಾಗಿದ್ದರೂ, ಬಲಹೀನತೆಯು ಉದ್ಭವಿಸಬಲ್ಲದು. ನಾವು ಪಾಪದಲ್ಲಿ ಜನಿಸಿರುವ ಕಾರಣ, ನಮ್ಮ ಪಾಪಪೂರ್ಣ ಹಾಗೂ ಅಪರಿಪೂರ್ಣ ಸ್ವಭಾವವು, ದೇವರ ಚಿತ್ತವನ್ನು ಮಾಡಬೇಕೆಂಬ ನಮ್ಮ ನಿರ್ಧಾರವನ್ನು ಸುಲಭವಾಗಿ ಅದುಮಿಬಿಡಬಲ್ಲದು. (ಕೀರ್ತನೆ 51:5) ನಮ್ಮ ಸದುದ್ದೇಶಗಳ ಎದುರಿನಲ್ಲೂ, ನ್ಯಾಯವಾಗಿ ತೋರುವ ತರ್ಕಗಳು ಇಲ್ಲವೆ ನೆಪಗಳನ್ನು ರೂಪಿಸುವ ಮೂಲಕ ನಮ್ಮ ಮೋಸಕರ ಹೃದಯವು ನಮ್ಮನ್ನು ವಂಚಿಸಬಲ್ಲದು. ಈ ಕಾರಣ ನಾವು ಸುಲಭವಾಗಿ ನಮ್ಮ ಬಲಹೀನತೆಯನ್ನು ಕಡೆಗಣಿಸಿ, ಎಲ್ಲವೂ ಸರಿಯಾಗಿದೆ ಎಂದು ನೆನಸುತ್ತಾ ಸ್ವತಃ ಮೋಸಕ್ಕೆ ಗುರಿಯಾಗುತ್ತೇವೆ.—ಯೆರೆಮೀಯ 17:9; ರೋಮಾಪುರ 7:21-23.
ಇದಕ್ಕೆ ಸೇರಿಸಿ, ಸರಿತಪ್ಪಿನ ಅರ್ಥವು ಅಸ್ತವ್ಯಸ್ತಗೊಂಡಿರುವ ಮತ್ತು ಅನೇಕ ವೇಳೆ ವಿಕೃತಗೊಳಿಸಲ್ಪಟ್ಟಿರುವ ಒಂದು ಲೋಕದಲ್ಲಿ ನಾವು ಜೀವಿಸುತ್ತೇವೆ. ಒಂದು ವಿಷಯವು ಸರಿಯೊ ತಪ್ಪೋ ಎಂಬುದು, ಆ ವಿಷಯದ ಬಗ್ಗೆ ವ್ಯಕ್ತಿಗೆ ಹೇಗೆ ಅನಿಸುತ್ತದೆ ಎಂಬುದರಿಂದ ನಿರ್ಧರಿಸಲ್ಪಡಬಹುದು. ಈ ರೀತಿಯ ವಿಚಾರವು, ಜಾಹೀರಾತುಗಳಿಂದ, ಜನಪ್ರಿಯ ಮನೋರಂಜನೆಯಿಂದ, ಮತ್ತು ವಾರ್ತಾಮಾಧ್ಯಮಗಳಿಂದ ಪ್ರವರ್ಧಿಸಲ್ಪಡುತ್ತದೆ. ನಾವು ಜಾಗರೂಕರಾಗಿರದ್ದಿದ್ದಲ್ಲಿ, ನಾವೂ ಅದೇ ರೀತಿಯಲ್ಲಿ ಯೋಚಿಸಲಾರಂಭಿಸುವೆವು, ಮತ್ತು ನಮ್ಮ ಆತ್ಮಿಕ ರಕ್ಷಾಕವಚವು ಬಲಹೀನಗೊಳ್ಳಲು ತೊಡಗಬಹುದು.
ಇಂತಹ ಅಪಾಯಕರ ಸನ್ನಿವೇಶದೊಳಕ್ಕೆ ಬೀಳುವ ಬದಲು, ನಾವು ಬೈಬಲಿನ ಬುದ್ಧಿವಾದಕ್ಕೆ ಗಮನಕೊಡಬೇಕು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ.” (2 ಕೊರಿಂಥ 13:5) ನಾವು ಹಾಗೆ ಮಾಡುವಾಗ, ವಿಕಸಿಸಿಕೊಂಡಿರಬಹುದಾದ ಯಾವುದೇ ಬಲಹೀನತೆಗಳನ್ನು ಗುರುತಿಸಲು ಮತ್ತು ನಮ್ಮ ವೈರಿಗಳು ಅವುಗಳ ಮೇಲೆ ದೃಷ್ಟಿಬೀರಿ, ದಾಳಿಯನ್ನು ಮಾಡುವ ಮುಂಚೆ ಆ ಬಲಹೀನತೆಗಳನ್ನು ಸರಿಪಡಿಸಿಕೊಳ್ಳಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಶಕ್ತರಾಗಿರುವೆವು. ಆದರೆ, ನಾವು ಇಂತಹ ಪರೀಕ್ಷೆಯನ್ನು ಹೇಗೆ ಮಾಡುವೆವು? ಈ ಆತ್ಮಪರಿಶೀಲನೆಯಲ್ಲಿ ನಾವು ಗಮನಿಸಬೇಕಾದ ಕೆಲವು ರೋಗಲಕ್ಷಣಗಳಾವುವು?
ರೋಗಲಕ್ಷಣಗಳನ್ನು ಗುರುತಿಸುವುದು
ಆತ್ಮಿಕ ಬಲಹೀನತೆಯನ್ನು ಸೂಚಿಸಬಹುದಾದ ಒಂದು ಸಾಮಾನ್ಯ ಲಕ್ಷಣವು, ನಮ್ಮ ವೈಯಕ್ತಿಕ ಅಧ್ಯಯನ ಹವ್ಯಾಸಗಳಲ್ಲಿ ನಾವು ತೋರುವ ಅಸಡ್ಡೆಯೇ. ತಾವು ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ ಮಾಡಬೇಕೆಂದು ಕೆಲವರಿಗೆ ಅನಿಸಿದರೂ, ಅದಕ್ಕೆ ಬೇಕಾದ ಸಮಯವನ್ನು ಬದಿಗಿಡುವುದು ಅಸಾಧ್ಯವೆಂದು ಅವರು ಕಂಡುಕೊಳ್ಳುತ್ತಾರೆ. ಇಂದಿನ ಕಾರ್ಯಮಗ್ನ ಜೀವಿತದಲ್ಲಿ, ಇಂತಹ ಒಂದು ಕೆಟ್ಟ ಸನ್ನಿವೇಶದಲ್ಲಿ ಸಿಕ್ಕಿಕೊಳ್ಳುವುದು ತೀರ ಸುಲಭ. ಆದರೆ, ತಾವು ಸಾಧ್ಯವಾದಾಗಲೆಲ್ಲ ಬೈಬಲಿನ ಪ್ರಕಾಶನಗಳನ್ನು ಓದುವುದರಿಂದ ಮತ್ತು ಕೆಲವೊಂದು ಕ್ರೈಸ್ತ ಕೂಟಗಳಿಗೆ ಹಾಜರಾಗುವುದರಿಂದ ಅಷ್ಟೇನೂ ಕೆಟ್ಟ ಪರಿಸ್ಥಿತಿಯಲ್ಲಿಲ್ಲವೆಂದು ಜನರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ ವಿವರಣೆ ನೀಡುವುದೇ ಇದಕ್ಕಿಂತಲೂ ಕೆಟ್ಟದಾದ ಸಂಗತಿಯಾಗಿದೆ.
ಇಂತಹ ತರ್ಕವು ಒಂದು ರೀತಿಯ ಆತ್ಮವಂಚನೆಯಾಗಿದೆ. ಇದು, ಕಡಿಮೆಪಕ್ಷ ಒಂದು ಊಟಕ್ಕಾದರೂ ಸಾಕಷ್ಟು ಸಮಯವಿರದ ಒಬ್ಬ ವ್ಯಕ್ತಿಯಂತಿದೆ. ಅವನು ಒಂದು ಕೆಲಸದಿಂದ ಮತ್ತೊಂದಕ್ಕೆ ಧಾವಿಸುವಾಗ ಸಾಧ್ಯವಾದರೆ ಒಂದು ತುತ್ತನ್ನು ಬಾಯಿಗೆ ಹಾಕಿಕೊಳ್ಳುತ್ತಾನೆ. ಅವನು ಹಸಿವಿನಿಂದ ಕಷ್ಟಾನುಭವಿಸದಿದ್ದರೂ, ಇಂದಲ್ಲ ನಾಳೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸಲೇಬೇಕು. ತದ್ರೀತಿಯಲ್ಲಿ, ನಮಗೆ ಪೋಷಣೆಯನ್ನು ನೀಡುವ ಆತ್ಮಿಕ ಆಹಾರವನ್ನು ನಿರಂತರವಾಗಿ ಸೇವಿಸದಿದ್ದಲ್ಲಿ, ನಮ್ಮ ಆತ್ಮಿಕ ರಕ್ಷಾಕವಚದಲ್ಲಿ ಬಲಹೀನಸ್ಥಾನಗಳು ಬೇಗನೆ ವಿಕಸಿಸಿಕೊಳ್ಳುವೆವು. ನಾವು ಲೌಕಿಕ ಅಪಪ್ರಚಾರ ಮತ್ತು ಮನೋಭಾವಗಳಿಗೆ ಸತತವಾಗಿ ಒಡ್ಡಲ್ಪಡುವುದರಿಂದ, ಸೈತಾನನ ಮಾರಕ ದಾಳಿಗಳಿಗೆ ಸುಲಭವಾಗಿ ಬಲಿಯಾಗಬಹುದು.
ಆತ್ಮಿಕ ಬಲಹೀನತೆಯ ಮತ್ತೊಂದು ಲಕ್ಷಣವು, ನಮ್ಮ ಆತ್ಮಿಕ ಹೋರಾಟದ ಕುರಿತಾದ ತುರ್ತಿನ ಪ್ರಜ್ಞೆಯ ಕೊರತೆಯೇ. ಶಾಂತಿಯ ಸಮಯದಲ್ಲಿ ಒಬ್ಬ ಸೈನಿಕನಿಗೆ ಕದನದ ಬಿಗುಪು ಹಾಗೂ ಅಪಾಯದ ಅನಿಸಿಕೆಯಾಗುವುದಿಲ್ಲ. ಕದನಕ್ಕಾಗಿ ಸಿದ್ಧನಾಗಿರುವ ತುರ್ತಿನ ಅನಿಸಿಕೆ ಅವನಿಗಿರಲಾರದು. ಕದನಕ್ಕಾಗಿ ಅವನನ್ನು ಹಠಾತ್ತನೆ ಕರೆಯಲಾದಾಗ, ಅವನು ಅದಕ್ಕೆ ಸಿದ್ಧನಾಗಿರಲಾರನು. ಆತ್ಮಿಕ ವಿಷಯದಲ್ಲೂ ಇದು ಸತ್ಯವಾಗಿದೆ. ನಮ್ಮ ತುರ್ತಿನ ಪ್ರಜ್ಞೆಯು ಕಡಿಮೆಯಾಗುವಂತೆ ನಾವು ಬಿಡುವುದಾದರೆ, ನಮ್ಮನ್ನು ಎದುರುಗೊಳ್ಳಬಹುದಾದ ದಾಳಿಗಳನ್ನು ಹಿಮ್ಮೆಟ್ಟಿಸಲು ನಾವು ಸಿದ್ಧರಾಗಿರಲಾರೆವು.
ಆದರೆ, ನಾವು ಇಂತಹ ಸನ್ನಿವೇಶದಲ್ಲಿದ್ದೇವೆಂದು ಹೇಗೆ ಹೇಳಸಾಧ್ಯವಿದೆ? ವಸ್ತುಸ್ಥಿತಿಯನ್ನು ಅರಿತುಕೊಳ್ಳಲು ನಾವು ಕೆಲವೊಂದು ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಬಹುದು: ನಾನು ಸುತ್ತಾಡಲು ಹೋಗುವಾಗ ಎಷ್ಟು ಆತುರನಾಗಿರುತ್ತೇನೊ, ಅಷ್ಟೇ ಆತುರತೆಯನ್ನು ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ವ್ಯಕ್ತಪಡಿಸುತ್ತೇನೊ? ನಾನು ಖರೀದಿಮಾಡಲಿಕ್ಕಾಗಿ ಇಲ್ಲವೆ ಟಿವಿಯನ್ನು ವೀಕ್ಷಿಸಲಿಕ್ಕಾಗಿ ಎಷ್ಟು ಸಮಯವನ್ನು ವ್ಯಯಿಸಲು ಸಿದ್ಧನಾಗಿದ್ದೇನೊ, ಅಷ್ಟೇ ಸಮಯವನ್ನು ಕೂಟಗಳ ತಯಾರಿಗಾಗಿ ವ್ಯಯಿಸಲು ಸಿದ್ಧನೋ? ನಾನು ಕ್ರೈಸ್ತನಾದಾಗ ಬಿಟ್ಟುಕೊಟ್ಟ ಚಟುವಟಿಕೆಗಳು ಇಲ್ಲವೆ ಅವಕಾಶಗಳ ಬಗ್ಗೆ ವಿಷಾದಪಡುತ್ತೇನೊ? ಇತರರ ಸುಖಸೌಕರ್ಯದ ಜೀವನವನ್ನು ನೋಡಿ, ನನಗೆ ಹೊಟ್ಟೆಕಿಚ್ಚಾಗುತ್ತದೊ? ಇವು ವಿಚಾರಪ್ರೇರಕ ಪ್ರಶ್ನೆಗಳಾಗಿದ್ದರೂ, ನಮ್ಮ ಆತ್ಮಿಕ ರಕ್ಷಾಕವಚದಲ್ಲಿರಬಹುದಾದ ಯಾವುದೇ ಬಲಹೀನತೆಯನ್ನು ಗುರುತಿಸಲಿಕ್ಕಾಗಿ ಸಹಾಯಕಾರಿಯಾಗಿವೆ.
ನಮ್ಮ ರಕ್ಷಾಕವಚವು ಆತ್ಮಿಕವಾಗಿರುವುದರಿಂದ, ದೇವರ ಆತ್ಮವು ನಮ್ಮ ಜೀವಿತದಲ್ಲಿ ಧಾರಾಳವಾಗಿ ಹರಿಯಬೇಕೆಂಬುದು ಅತ್ಯಾವಶ್ಯಕ. ನಮ್ಮ ಎಲ್ಲ ಚಟುವಟಿಕೆಗಳಲ್ಲಿ ದೇವರಾತ್ಮದ ಫಲಗಳು ಎಷ್ಟರ ಮಟ್ಟಿಗೆ ಪ್ರದರ್ಶಿಸಲ್ಪಡುತ್ತವೋ ಅದರಿಂದ ಇದು ತಿಳಿದುಬರುತ್ತದೆ. ಇತರರು ನಿಮಗೆ ಇಷ್ಟವಾಗದಂತಹ ವಿಷಯವನ್ನು ಹೇಳುವುದಾದರೆ ಇಲ್ಲವೆ ಮಾಡುವುದಾದರೆ, ನೀವು ಅದರಿಂದ ಬೇಗನೆ ಕಿರಿಕಿರಿಗೊಳ್ಳುತ್ತೀರೊ ಇಲ್ಲವೆ ಕ್ಷೋಭೆಗೊಳ್ಳುತ್ತೀರೊ? ಸಲಹೆಯನ್ನು ಸ್ವೀಕರಿಸುವುದು ಕಷ್ಟಕರವೆಂದು ನಿಮಗೆ ಅನಿಸುತ್ತದೊ, ಅಥವಾ ಇತರರು ಯಾವಾಗಲೂ ನಿಮ್ಮಲ್ಲಿ ತಪ್ಪು ಹುಡುಕುತ್ತಿದ್ದಾರೆಂದು ನಿಮಗೆ ಅನಿಸುತ್ತದೊ? ಇತರ ವ್ಯಕ್ತಿಗಳ ಆಶೀರ್ವಾದಗಳು ಇಲ್ಲವೆ ಸಾಧನೆಗಳನ್ನು ಕಂಡು ನೀವು ತೀವ್ರವಾಗಿ ಅಸೂಯೆಪಡುತ್ತೀರೊ? ಇತರರೊಂದಿಗೆ, ವಿಶೇಷವಾಗಿ ನಿಮ್ಮ ಸಮಾನಸ್ಥರೊಂದಿಗೆ ಸ್ನೇಹದಿಂದಿರುವುದು ಕಷ್ಟಕರವೆಂದು ನಿಮಗೆ ತೋರುತ್ತದೊ? ನಮ್ಮ ಜೀವಿತವು ದೇವರಾತ್ಮದ ಫಲಗಳಿಂದ ತುಂಬಿದೆಯೊ ಇಲ್ಲವೆ ಶರೀರಭಾವದ ಕರ್ಮಗಳು ಅಗೋಚರವಾಗಿ ಬೆಳೆಯುತ್ತಿವೆಯೊ ಎಂಬುದನ್ನು ನೋಡಲು, ಪ್ರಾಮಾಣಿಕವಾದೊಂದು ಆತ್ಮಪರಿಶೀಲನೆಯು ನಮಗೆ ಸಹಾಯ ಮಾಡುವುದು.—ಗಲಾತ್ಯ 5:22-26; ಎಫೆಸ 4:22-27.
ಆತ್ಮಿಕ ಬಲಹೀನತೆಯನ್ನು ಜಯಿಸಲು ತೆಗೆದುಕೊಳ್ಳಬೇಕಾದ ಸಕಾರಾತ್ಮಕ ಹೆಜ್ಜೆಗಳು
ಆತ್ಮಿಕ ಬಲಹೀನತೆಯ ಲಕ್ಷಣಗಳನ್ನು ಗುರುತಿಸುವುದು ಒಂದು ವಿಷಯವಾದರೆ, ಅವುಗಳನ್ನು ಎದುರಿಸಲು ಮತ್ತು ವಿಷಯಗಳನ್ನು ಸರಿಪಡಿಸಲು ಬೇಕಾದ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಮತ್ತೊಂದು ವಿಷಯವಾಗಿದೆ. ಆದರೆ ವಿಷಾದನೀಯವಾಗಿ, ಅನೇಕರು ನೆಪಗಳನ್ನು ಕೊಡುತ್ತಾರೆ, ವಿಷಯವನ್ನು ನ್ಯಾಯವೆಂದು ಸಮರ್ಥಿಸುತ್ತಾರೆ, ಸಮಸ್ಯೆಯನ್ನು ಕ್ಷುಲ್ಲಕವೆಂದು ಭಾವಿಸುತ್ತಾರೆ ಇಲ್ಲವೆ ಅದರ ಇರುವಿಕೆಯನ್ನೇ ಅಲ್ಲಗಳೆಯುತ್ತಾರೆ. ಕೆಲವೊಂದು ಭಾಗಗಳಿರದ ರಕ್ಷಾಕವಚವನ್ನು ಧರಿಸಿಕೊಂಡು ಯುದ್ಧಕ್ಕೆ ಹೋಗುವಂತೆ, ಅದು ಎಷ್ಟೊಂದು ಅಪಾಯಕಾರಿಯಾಗಿದೆ! ಅಂತಹ ಒಂದು ಜೀವನವು ನಮ್ಮನ್ನು ಸೈತಾನನ ದಾಳಿಗೆ ಸುಲಭಭೇದ್ಯರನ್ನಾಗಿ ಮಾಡುವುದು. ಆದಕಾರಣ, ನಾವು ಗುರುತಿಸಬಹುದಾದ ಯಾವುದೇ ದೋಷಗಳನ್ನು ಸರಿಪಡಿಸಲಿಕ್ಕಾಗಿ ಸಕಾರಾತ್ಮಕ ಹೆಜ್ಜೆಗಳನ್ನು ತ್ವರಿತವಾಗಿ ತೆಗೆದುಕೊಳ್ಳಬೇಕು. ನಾವು ಏನು ಮಾಡಸಾಧ್ಯವಿದೆ?—ರೋಮಾಪುರ 8:13; ಯಾಕೋಬ 1:22-25.
ಒಂದು ಆತ್ಮಿಕ ಯುದ್ಧದಲ್ಲಿ, ಅಂದರೆ ಒಬ್ಬ ಕ್ರೈಸ್ತನ ಹೃದಮನಗಳ ನಿಯಂತ್ರಣವನ್ನು ಒಳಗೊಂಡಿರುವ ಒಂದು ಯುದ್ಧದಲ್ಲಿ ನಾವು ಒಳಗೂಡಿರುವುದರಿಂದ, ನಮ್ಮ ಮನಶ್ಶಕ್ತಿಗಳನ್ನು ಕಾಪಾಡಲು ನಮ್ಮಿಂದ ಸಾಧ್ಯವಾದುದನ್ನೆಲ್ಲ ನಾವು ಮಾಡಬೇಕು. ನಮ್ಮ ಆತ್ಮಿಕ ರಕ್ಷಾಕವಚದಲ್ಲಿ, ನಮ್ಮ ಹೃದಯವನ್ನು ರಕ್ಷಿಸುವ “ನೀತಿಯೆಂಬ ವಜ್ರಕವಚ” ಮತ್ತು ನಮ್ಮ ಮನಸ್ಸನ್ನು ರಕ್ಷಿಸುವ “ರಕ್ಷಣೆಯೆಂಬ ಶಿರಸ್ತ್ರಾಣ”ವಿದೆ. ಈ ಆಯುಧಗಳನ್ನು ಪರಿಣಾಮಕಾರಿಯಾಗಿ ಬಳಸಲು ಕಲಿತುಕೊಳ್ಳುವುದು, ಸೋಲನ್ನು ಇಲ್ಲವೆ ಗೆಲುವನ್ನು ಅರ್ಥೈಸಬಹುದು.—ಎಫೆಸ 6:14-17; ಜ್ಞಾನೋಕ್ತಿ 4:23; ರೋಮಾಪುರ 12:2.
“ನೀತಿಯೆಂಬ ವಜ್ರಕವಚ”ವನ್ನು ಸರಿಯಾಗಿ ಧರಿಸಿಕೊಳ್ಳುವುದು, ನೀತಿಯ ವಿಷಯದಲ್ಲಿ ನಮ್ಮ ಪ್ರೀತಿಯನ್ನು ಮತ್ತು ನಿಯಮರಾಹಿತ್ಯದ ವಿಷಯದಲ್ಲಿ ನಮ್ಮ ದ್ವೇಷವನ್ನು ನಾವು ನಿರಂತರವಾಗಿ ಪರಿಶೀಲಿಸುವುದನ್ನು ಅಗತ್ಯಪಡಿಸುತ್ತದೆ. (ಕೀರ್ತನೆ 45:7; 97:10; ಆಮೋಸ 5:15) ಲೋಕದೊಂದಿಗೆ ನಮ್ಮ ಮಟ್ಟಗಳೂ ಕೆಳಕ್ಕಿಳಿದಿವೆಯೊ? ಈ ಮೊದಲು ನಮ್ಮನ್ನು ತಲ್ಲಣಗೊಳಿಸಿದ ವಿಷಯಗಳನ್ನು ಈಗ ನಾವು ನಿಜ ಜೀವನದಲ್ಲಿ ಅಥವಾ ಟಿವಿ ಮತ್ತು ಚಲನ ಚಿತ್ರಗಳಲ್ಲಿ ನೋಡುವಾಗ, ಮತ್ತು ಪುಸ್ತಕಗಳು ಹಾಗೂ ಪತ್ರಿಕೆಗಳಲ್ಲಿ ಓದುವಾಗ, ಅವು ನಮ್ಮನ್ನು ಸಂತೋಷಪಡಿಸುತ್ತವೊ? ಲೋಕದಲ್ಲಿ ಯಾವುದನ್ನು ಸ್ವಾತಂತ್ರ್ಯ ಹಾಗೂ ಲೌಕಿಕ ಜ್ಞಾನವೆಂದು ಮಹಿಮೆಗೊಳಿಸಲಾಗಿದೆಯೊ ಅದು ನಿಜವಾಗಿಯೂ ವೇಷಾಂತರಿಸಿಕೊಂಡಿರುವ ಸ್ವೇಚ್ಛಾಚಾರ ಮತ್ತು ವಂಚನೆಯಾಗಿರಬಹುದೆಂದು, ನೀತಿಯ ಪರವಾಗಿ ನಮಗಿರುವ ಪ್ರೀತಿಯು ನಮಗೆ ಮನಗಾಣಿಸುವುದು.—ರೋಮಾಪುರ 13:13, 14; ತೀತ 2:12.
“ರಕ್ಷಣೆಯೆಂಬ ಶಿರಸ್ತ್ರಾಣ”ವನ್ನು ಧರಿಸಿಕೊಳ್ಳುವುದು, ಈ ಲೋಕದ ಥಳಕುಬಳಕಿನಿಂದ ತಪ್ಪುದಾರಿಗೆ ಎಳೆಯಲ್ಪಡದಂತೆ ನೋಡಿಕೊಂಡು, ಮುಂದಿರುವ ಅದ್ಭುತಕರವಾದ ಆಶೀರ್ವಾದಗಳನ್ನು ಮನಸ್ಸಿನಲ್ಲಿ ಸುಸ್ಪಷ್ಟವಾಗಿಟ್ಟುಕೊಳ್ಳುವುದನ್ನು ಒಳಗೊಳ್ಳುತ್ತದೆ. (ಇಬ್ರಿಯ 12:2, 3; 1 ಯೋಹಾನ 2:16) ಈ ಹೊರನೋಟವು, ಪ್ರಾಪಂಚಿಕ ಗಳಿಕೆ ಇಲ್ಲವೆ ವೈಯಕ್ತಿಕ ಲಾಭಕ್ಕಿಂತಲೂ ಆತ್ಮಿಕ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವಂತೆ ನಮಗೆ ಸಹಾಯಮಾಡುವುದು. (ಮತ್ತಾಯ 6:33) ರಕ್ಷಾಕವಚದಲ್ಲಿ ಈ ಭಾಗವು ಸುಸ್ಥಿತಿಯಲ್ಲಿದೆ ಎಂಬುನ್ನು ಖಚಿತಪಡಿಸಿಕೊಳ್ಳಲು, ನಾವು ನಮ್ಮನ್ನೇ ಪ್ರಾಮಾಣಿಕವಾಗಿ ಹೀಗೆ ಕೇಳಿಕೊಳ್ಳತಕ್ಕದ್ದು: ನಾನು ಜೀವನದಲ್ಲಿ ಏನನ್ನು ಬೆನ್ನಟ್ಟುತ್ತಿದ್ದೇನೆ? ನನಗೆ ನಿರ್ದಿಷ್ಟವಾದ ಆತ್ಮಿಕ ಗುರಿಗಳಿವೆಯೊ? ಅವುಗಳನ್ನು ಸಾಧಿಸಲು ನಾನು ಏನು ಮಾಡುತ್ತಿದ್ದೇನೆ? ನಾವು ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರಾಗಿರಲಿ ಇಲ್ಲವೆ “ಮಹಾ ಸಮೂಹ”ದವರಾಗಿರಲಿ, ಪೌಲನನ್ನು ಅನುಕರಿಸಬೇಕು. ಅವನು ಹೇಳಿದ್ದು: “ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ . . . ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.”—ಪ್ರಕಟನೆ 7:9; ಫಿಲಿಪ್ಪಿ 3:13, 14.
ಪೌಲನು ನಮ್ಮ ಆತ್ಮಿಕ ರಕ್ಷಾಕವಚದ ಕುರಿತು ನೀಡಿದ ವರ್ಣನೆಯು, ಈ ಮುಂದಿನ ಬುದ್ಧಿವಾದದೊಂದಿಗೆ ಕೊನೆಗೊಳ್ಳುತ್ತದೆ: “ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ.” (ಎಫೆಸ 6:18) ಯಾವುದೇ ಆತ್ಮಿಕ ಬಲಹೀನತೆಯನ್ನು ಜಯಿಸಲು ಇಲ್ಲವೆ ತಡೆಯಲು ನಾವು ತೆಗೆದುಕೊಳ್ಳಸಾಧ್ಯವಿರುವ ಎರಡು ಸಕಾರಾತ್ಮಕ ಹೆಜ್ಜೆಗಳನ್ನು ಇದು ಸೂಚಿಸುತ್ತದೆ: ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳುವುದು, ಮತ್ತು ಜೊತೆ ಕ್ರೈಸ್ತರೊಂದಿಗೆ ನಿಕಟವಾದ ಬಂಧವನ್ನು ರೂಪಿಸಿಕೊಳ್ಳುವುದು.
ಯೆಹೋವನಿಗೆ “ಎಲ್ಲಾ ಸಮಯಗಳಲ್ಲಿ” (ಬಹಿರಂಗವಾಗಿ, ಖಾಸಗಿಯಾಗಿ, ವೈಯಕ್ತಿಕವಾಗಿ, ಇದ್ದಕ್ಕಿದ್ದಹಾಗೆ) ಮತ್ತು “ಸಕಲವಿಧವಾದ” (ಪಾಪನಿವೇದನೆ, ಕ್ಷಮೆಗಾಗಿ ಭಿನ್ನಹ, ಮಾರ್ಗದರ್ಶನೆಗಾಗಿ ವಿನಂತಿ, ಆಶೀರ್ವಾದಗಳಿಗೆ ಉಪಕಾರ, ಹೃದಯದಿಂದ ಬರುವ ಸ್ತುತಿಗಳು) ಪ್ರಾರ್ಥನೆಗಳನ್ನು ಮಾಡುವ ಅಭ್ಯಾಸ ನಮಗಿರುವಾಗ, ನಾವು ಯೆಹೋವನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುತ್ತೇವೆ. ನಮಗಿರಸಾಧ್ಯವಾದ ಅತ್ಯಂತ ಮಹಾ ಸಂರಕ್ಷಣೆಯು ಇದೇ ಆಗಿದೆ.—ರೋಮಾಪುರ 8:31; ಯಾಕೋಬ 4:7, 8.
ಮತ್ತೊಂದು ಕಡೆಯಲ್ಲಿ, “ದೇವಜನರೆಲ್ಲರ ವಿಷಯದಲ್ಲಿ” ಅಂದರೆ ನಮ್ಮ ಜೊತೆ ಕ್ರೈಸ್ತರ ಪರವಾಗಿ ಪ್ರಾರ್ಥಿಸುವಂತೆ ನಮಗೆ ಬುದ್ಧಿವಾದ ನೀಡಲಾಗಿದೆ. ನಮ್ಮ ಪ್ರಾರ್ಥನೆಗಳಲ್ಲಿ ನಾವು, ದೂರದ ದೇಶಗಳಲ್ಲಿ ಹಿಂಸೆಯನ್ನು ಅಥವಾ ಇತರ ಸಂಕಷ್ಟಗಳನ್ನು ಅನುಭವಿಸುತ್ತಿರುವ ನಮ್ಮ ಆತ್ಮಿಕ ಸಹೋದರರನ್ನು ಜ್ಞಾಪಿಸಿಕೊಳ್ಳಬಹುದು. ಆದರೆ ನಾವು ಅನುದಿನವೂ ಯಾರೊಂದಿಗೆ ಸಹವಸಿಸುತ್ತೇವೊ ಮತ್ತು ಕೆಲಸಮಾಡುತ್ತೇವೊ ಆ ಕ್ರೈಸ್ತರ ಕುರಿತೇನು? ಯೇಸು ತನ್ನ ಶಿಷ್ಯರಿಗಾಗಿ ಪ್ರಾರ್ಥಿಸಿದಂತೆಯೇ, ನಾವು ಅವರ ಪರವಾಗಿ ಪ್ರಾರ್ಥಿಸುವುದು ಯೋಗ್ಯವಾಗಿದೆ. (ಯೋಹಾನ 17:9; ಯಾಕೋಬ 5:16) ಇಂತಹ ಪ್ರಾರ್ಥನೆಗಳು ನಮ್ಮನ್ನು ಒಟ್ಟಿಗೆ ಸೇರಿಸಿ, “ಕೆಡುಕನ” ದಾಳಿಗಳನ್ನು ತಾಳಿಕೊಳ್ಳುವಂತೆ ನಮ್ಮನ್ನು ಬಲಪಡಿಸುವವು.—2 ಥೆಸಲೊನೀಕ 3:1-3.
ಕೊನೆಯದಾಗಿ, ಅಪೊಸ್ತಲ ಪೇತ್ರನ ಪ್ರೀತಿಪೂರ್ಣ ಬುದ್ಧಿವಾದವನ್ನು ಮನಸ್ಸಿನಲ್ಲಿ ದೃಢವಾಗಿಟ್ಟುಕೊಳ್ಳಿರಿ: “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಜಿತೇಂದ್ರಿಯರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರ್ರಿ. ಮೊಟ್ಟಮೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:7, 8) ನಮ್ಮ ಸ್ವಂತ ಹಾಗೂ ಇತರ ಜನರ ಮಾನವ ಅಪರಿಪೂರ್ಣತೆಗಳು ನಮ್ಮ ಹೃದಮನಗಳೊಳಗೆ ನುಸುಳಿ, ಅಡೆತಡೆಗಳಾಗಿ ಪರಿಣಮಿಸುವಂತೆ ಬಿಡುವುದು ಬಹಳ ಸುಲಭ. ಈ ಮಾನವ ಬಲಹೀನತೆಯನ್ನು ಸೈತಾನನು ಚೆನ್ನಾಗಿ ಬಲ್ಲನು. ಒಡಕು ಹುಟ್ಟಿಸಿ ಜಯಿಸುವುದು, ಅವನ ಕುತಂತ್ರಗಳಲ್ಲೊಂದಾಗಿದೆ. ಆದುದರಿಂದ, ನಾವು ಪರಸ್ಪರರಿಗಾಗಿರುವ ತೀವ್ರವಾದ ಪ್ರೀತಿಯಿಂದ ಇಂತಹ ಪಾಪಗಳನ್ನು ಮುಚ್ಚಬೇಕು ಮತ್ತು “ಸೈತಾನನಿಗೆ ಅವಕಾಶಕೊಡ”ದೇ ಇರಬೇಕು.—ಎಫೆಸ 4:25-27.
ಈಗ ಆತ್ಮಿಕವಾಗಿ ಪ್ರಬಲರಾಗಿರಿ
ನಿಮ್ಮ ಕೂದಲು ಕೆದರಿಹೋಗಿರುವುದನ್ನು ಇಲ್ಲವೆ ನಿಮ್ಮ ಟೈ ನೆಟ್ಟಗಿಲ್ಲದಿರುವುದನ್ನು ನೀವು ಗಮನಿಸಿದರೆ, ನೀವು ಏನು ಮಾಡುತ್ತೀರಿ? ಆದಷ್ಟು ಬೇಗನೆ ಅವುಗಳನ್ನು ಸರಿಪಡಿಸುತ್ತೀರಿ. ಇಂತಹ ಭೌತಿಕ ವೈಪರೀತ್ಯಗಳು ಅಷ್ಟೊಂದು ಪ್ರಾಮುಖ್ಯವಲ್ಲವೆಂದು ಭಾವಿಸುತ್ತಾ, ಅವುಗಳನ್ನು ಸರಿಪಡಿಸದೆ ಬಿಡುವವರು ತೀರ ವಿರಳ. ನಮ್ಮ ಆತ್ಮಿಕ ಬಲಹೀನತೆಗಳಿಗೆ ಪ್ರತಿಕ್ರಿಯಿಸುವ ವಿಷಯದಲ್ಲಿ ನಾವು ಅಷ್ಟೇ ತ್ವರಿತರಾಗಿರೋಣ. ಭೌತಿಕ ಕುಂದುಕೊರತೆಗಳು ಜನರ ಅಸಮ್ಮತಿಸೂಚಕ ನೋಟಗಳನ್ನು ಸ್ವಾಗತಿಸಬಹುದಾದರೂ, ಸರಿಪಡಿಸದೇ ಬಿಡಲ್ಪಟ್ಟ ಆತ್ಮಿಕ ದೋಷಗಳು ಯೆಹೋವನ ಅಸಮ್ಮತಿಯಲ್ಲಿ ಪರಿಣಮಿಸುವುವು.—1 ಸಮುವೇಲ 16:7.
ಯಾವುದೇ ಆತ್ಮಿಕ ಬಲಹೀನತೆಯನ್ನು ಬೇರುಸಹಿತ ಕಿತ್ತುಹಾಕಿ, ಆತ್ಮಿಕವಾಗಿ ಪ್ರಬಲರಾಗಿ ಉಳಿಯುವಂತೆ ನಮಗೆ ಸಹಾಯ ಮಾಡಲು ಬೇಕಾದ ಎಲ್ಲವನ್ನು ಯೆಹೋವನು ಪ್ರೀತಿಪರವಾಗಿ ನಮಗೆ ಕೊಟ್ಟಿದ್ದಾನೆ. ಕ್ರೈಸ್ತ ಕೂಟಗಳು, ಬೈಬಲ್ ಪ್ರಕಾಶನಗಳು, ಪ್ರೌಢ ಹಾಗೂ ನಮಗಾಗಿ ಚಿಂತಿಸುವ ಜೊತೆ ಕ್ರೈಸ್ತರ ಮೂಲಕ, ಆತನು ನಾವು ಮಾಡಬೇಕಾದ ವಿಷಯಗಳ ಕುರಿತು ಸತತವಾದ ಮರುಜ್ಞಾಪನಗಳನ್ನು ಮತ್ತು ಸಲಹೆಸೂಚನೆಗಳನ್ನು ಒದಗಿಸುತ್ತಾನೆ. ಅವುಗಳನ್ನು ಸ್ವೀಕರಿಸಿ, ಅನ್ವಯಿಸುವುದು ನಮಗೆ ಬಿಟ್ಟದ್ದು. ಇದಕ್ಕೆ ಪ್ರಯತ್ನ ಹಾಗೂ ಸ್ವಶಿಸ್ತಿನ ಅಗತ್ಯವಿದೆ. ಆದರೆ ಅಪೊಸ್ತಲ ಪೌಲನು ಪ್ರಾಮಾಣಿಕವಾಗಿ ಹೇಳಿದ ವಿಷಯವನ್ನು ಜ್ಞಾಪಿಸಿಕೊಳ್ಳಿರಿ: “ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ. ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.”—1 ಕೊರಿಂಥ 9:26, 27.
ಜಾಗರೂಕರಾಗಿದ್ದು, ಒಂದು ಆತ್ಮಿಕ ಅಕಿಲೀಸ್ ಹಿಮ್ಮಡಿಯು ಬೆಳೆಯುವಂತೆ ಎಂದಿಗೂ ಬಿಡಬೇಡಿರಿ. ಬದಲಿಗೆ ನಮ್ಮಲ್ಲಿರಬಹುದಾದ ಯಾವುದೇ ಆತ್ಮಿಕ ಬಲಹೀನತೆಯನ್ನು ಗುರುತಿಸಲು ಮತ್ತು ಜಯಿಸಲು ಅಗತ್ಯವಾಗಿರುವಂಥದನ್ನು ನಾವು ಈಗಲೇ ದೀನಭಾವ ಹಾಗೂ ಧೈರ್ಯದಿಂದ ಮಾಡೋಣ.
[ಪುಟ 19 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ.”—2 ಕೊರಿಂಥ 13:5.
[ಪುಟ 21 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಪ್ರಾರ್ಥನೆಯಲ್ಲಿ . . . ಸ್ವಸ್ಥಚಿತ್ತರಾಗಿಯೂ ಇರ್ರಿ. ಮೊಟ್ಟಮೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.’—1 ಪೇತ್ರ 4:7, 8.
[ಪುಟ 20 ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮನ್ನೇ ಕೇಳಿಕೊಳ್ಳಿರಿ . . .
◆ ನಾನು ಖರೀದಿಮಾಡಲಿಕ್ಕಾಗಿ ಇಲ್ಲವೆ ಟಿವಿಯನ್ನು ವೀಕ್ಷಿಸಲಿಕ್ಕಾಗಿ ಎಷ್ಟು ಸಮಯವನ್ನು ವ್ಯಯಿಸಲು ಸಿದ್ಧನಾಗಿದ್ದೇನೊ, ಅಷ್ಟೇ ಸಮಯವನ್ನು ಕೂಟಗಳ ತಯಾರಿಗಾಗಿ ವ್ಯಯಿಸಲು ಸಿದ್ಧನೋ?
◆ ಇತರರ ಸುಖಸೌಕರ್ಯದ ಜೀವನವನ್ನು ನೋಡಿ, ನನಗೆ ಹೊಟ್ಟೆಕಿಚ್ಚಾಗುತ್ತದೊ?
◆ ಇತರರು ನನಗೆ ಇಷ್ಟವಾಗದಂತಹ ವಿಷಯವನ್ನು ಹೇಳುವುದಾದರೆ ಇಲ್ಲವೆ ಮಾಡುವುದಾದರೆ, ನಾನು ಅದರಿಂದ ಬೇಗನೆ ಕಿರಿಕಿರಿಗೊಳ್ಳುತ್ತೇನೊ ಇಲ್ಲವೆ ಕ್ಷೋಭೆಗೊಳ್ಳುತ್ತೇನೊ?
◆ ಸಲಹೆಯನ್ನು ಸ್ವೀಕರಿಸುವುದು ಕಷ್ಟಕರವೆಂದು ನನಗೆ ಅನಿಸುತ್ತದೊ, ಅಥವಾ ಇತರರು ಯಾವಾಗಲೂ ನನ್ನಲ್ಲಿ ತಪ್ಪು ಹುಡುಕುತ್ತಿದ್ದಾರೆಂದು ನನಗೆ ಅನಿಸುತ್ತದೊ?
◆ ಇತರರೊಂದಿಗೆ ಸ್ನೇಹದಿಂದಿರುವುದು ಕಷ್ಟಕರವೆಂದು ನನಗೆ ತೋರುತ್ತದೊ?
◆ ಲೋಕದೊಂದಿಗೆ ನನ್ನ ಮಟ್ಟಗಳೂ ಕೆಳಮಟ್ಟಕ್ಕಿಳಿದಿವೆಯೊ?
◆ ನನಗೆ ನಿರ್ದಿಷ್ಟವಾದ ಆತ್ಮಿಕ ಗುರಿಗಳಿವೆಯೊ?
◆ ಆತ್ಮಿಕ ಗುರಿಗಳನ್ನು ಸಾಧಿಸಲು ನಾನು ಏನು ಮಾಡುತ್ತಿದ್ದೇನೆ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
ಅಕಿಲೀಸ್: ಮಹಾನ್ ಪುರುಷರು ಮತ್ತು ಜನಪ್ರಿಯ ಸ್ತ್ರೀಯರು ಎಂಬ ಇಂಗ್ಲಿಷ್ ಪುಸ್ತಕದಿಂದ; ರೋಮನ್ ಸೈನಿಕರು ಮತ್ತು ಪುಟ 21: ಹಿಸ್ಟಾರಿಕ್ ಕಾಸ್ಟ್ಯೂಮ್ ಇನ್ ಪಿಕ್ಚರ್ಸ್/Dover Publications, Inc., New York