ದೇವರ ಸೇವೆಯಲ್ಲಿ ಐಕ್ಯವಾಗಿರುವ ದೊಡ್ಡ ಕುಟುಂಬಗಳು
“ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ. ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ; ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು” ಎಂದು ಕೀರ್ತನೆಗಾರನು ಬರೆದನು.—ಕೀರ್ತನೆ 127:3-5.
ಹೌದು, ಮಕ್ಕಳು ಯೆಹೋವನಿಂದ ಬಂದ ಆಶೀರ್ವಾದವಾಗಬಹುದು. ಬಿಲ್ಲುಗಾರನು ತನ್ನ ಬತ್ತಳಿಕೆಯಲ್ಲಿರುವ ಬಾಣಗಳನ್ನು ಪ್ರಯೋಗಿಸುವುದು ಹೇಗೆಂದು ತಿಳಿದುಕೊಳ್ಳುವುದರಲ್ಲಿ ತೃಪ್ತಿಯನ್ನು ಕಂಡುಕೊಳ್ಳುವಂತೆಯೇ, ನಿತ್ಯಜೀವಕ್ಕೆ ನಡೆಸುವ ಮಾರ್ಗದಲ್ಲಿ ತಮ್ಮ ಮಕ್ಕಳನ್ನು ಮಾರ್ಗದರ್ಶಿಸುವ ಹೆತ್ತವರು ಸಂತೋಷವನ್ನು ಕಂಡುಕೊಳ್ಳುತ್ತಾರೆ.—ಮತ್ತಾಯ 7:14.
ಗತಕಾಲದಲ್ಲಿ, ಅನೇಕ ಮಕ್ಕಳಿಂದ ‘ತುಂಬಿದ್ದ’ ಕುಟುಂಬಗಳು, ದೇವಜನರಲ್ಲಿ ಸಾಮಾನ್ಯವಾದ ವಿಷಯವಾಗಿತ್ತು. ಉದಾಹರಣೆಗೆ, ಐಗುಪ್ತದಲ್ಲಿ ಅವರು ಬಂಧಿವಾಸಿಗಳಾಗಿದ್ದ ಸಮಯವನ್ನು ಸ್ಮರಿಸಿಕೊಳ್ಳಿರಿ: “ಇಸ್ರಾಯೇಲ್ಯರು ಅಭಿವೃದ್ಧಿಯಾಗಿ ಅತ್ಯಧಿಕವಾಗಿ ಹೆಚ್ಚಿ ಬಹಳ ಬಲಗೊಂಡರು; ಆ ದೇಶದಲ್ಲೆಲ್ಲಾ ತುಂಬಿಕೊಂಡರು.” (ವಿಮೋಚನಕಾಂಡ 1:7) ಐಗುಪ್ತವನ್ನು ಪ್ರವೇಶಿಸಿದ ಇಸ್ರಾಯೇಲ್ಯರ ಜನಸಂಖ್ಯೆಯೊಂದಿಗೆ ಆ ದೇಶದಿಂದ ಹೊರಬಂದ ಜನಸಂಖ್ಯೆಯನ್ನು ಹೋಲಿಸುವಾಗ, ಹತ್ತು ಮಕ್ಕಳುಳ್ಳ ಕುಟುಂಬಗಳು ಸಾಧಾರಣ ಗಾತ್ರದವುಗಳಾಗಿದ್ದವು ಎಂದು ತಿಳಿದುಬರುತ್ತದೆ!
ಇಂದು ಅನೇಕರಿಗೆ ದೊಡ್ಡದೆಂದು ಅನಿಸಬಹುದಾದ ಒಂದು ಕುಟುಂಬದಲ್ಲಿ ಯೇಸು ಬೆಳೆದನು. ಯೇಸುವನ್ನು ಜ್ಯೇಷ್ಠಪುತ್ರನೆಂದು ಪರಿಗಣಿಸಲಾದ ಆ ಕುಟುಂಬದಲ್ಲಿ, ಯೋಸೇಫನಿಗೆ ಮತ್ತು ಮರಿಯಳಿಗೆ ಇನ್ನಿತರ ನಾಲ್ವರು ಗಂಡುಮಕ್ಕಳು ಮತ್ತು ಕೆಲವು ಹೆಣ್ಣುಮಕ್ಕಳಿದ್ದರು. (ಮತ್ತಾಯ 13:54-56) ಮರಿಯ ಮತ್ತು ಯೋಸೇಫರಿಗೆ ಅನೇಕ ಮಕ್ಕಳಿದ್ದ ಕಾರಣದಿಂದಲೇ, ಯೆರೂಸಲೇಮಿನಿಂದ ಹಿಂದಿರುಗುತ್ತಿದ್ದ ಸಮಯದಲ್ಲಿ ಯೇಸು ಅವರ ಗುಂಪಿನಲ್ಲಿ ಇಲ್ಲದಿರುವುದನ್ನು ಗಮನಿಸದೇ ಅವರು ಪ್ರಯಾಣವನ್ನು ಆರಂಭಿಸಿದ್ದಿರಬಹುದು.—ಲೂಕ 2:42-46.
ಇಂದಿನ ದೊಡ್ಡ ಕುಟುಂಬಗಳು
ಇಂದು ಅನೇಕ ಕ್ರೈಸ್ತರು, ಆತ್ಮಿಕ, ಆರ್ಥಿಕ, ಸಾಮಾಜಿಕ, ಮತ್ತು ಇನ್ನಿತರ ಕಾರಣಗಳಿಗಾಗಿ ತಮ್ಮ ಕುಟುಂಬಗಳ ಗಾತ್ರವನ್ನು ಸೀಮಿತಗೊಳಿಸಲು ನಿರ್ಧರಿಸುತ್ತಾರೆ. ಹಾಗಿದ್ದರೂ, ಅನೇಕ ಸಮುದಾಯಗಳಲ್ಲಿ ದೊಡ್ಡ ಕುಟುಂಬಗಳು ಇನ್ನೂ ಅಸ್ತಿತ್ವದಲ್ಲಿವೆ. ದ ಸ್ಟೇಟ್ ಆಫ್ ದ ವರ್ಲ್ಡ್ಸ್ ಚಿಲ್ಡ್ರನ್ 1997 ಎಂಬ ಪ್ರಕಾಶನಕ್ಕನುಸಾರ, ಸಂತಾನೋತ್ಪತ್ತಿಯ ಪ್ರಮಾಣವು ಅತ್ಯಧಿಕವಾಗಿರುವ ಕ್ಷೇತ್ರವು, ಉಪ-ಸಹಾರದ ಆಫ್ರಿಕ ಖಂಡವಾಗಿದೆ. ಅಲ್ಲಿ ಒಬ್ಬ ಸಾಧಾರಣ ಸ್ತ್ರೀಯು ಆರು ಮಂದಿ ಮಕ್ಕಳಿಗೆ ಜನ್ಮನೀಡುತ್ತಾಳೆ.
ದೊಡ್ಡ ಕುಟುಂಬಗಳುಳ್ಳ ಕ್ರೈಸ್ತ ಹೆತ್ತವರಿಗೆ, ತಮ್ಮ ಮಕ್ಕಳು ಯೆಹೋವನನ್ನು ಪ್ರೀತಿಸುವವರಾಗುವಂತೆ ತರಬೇತುಗೊಳಿಸುವುದು ಬಹಳ ಕಷ್ಟಕರವಾಗಿದ್ದರೂ, ಅನೇಕರು ಅದರಲ್ಲಿ ಸಫಲರಾಗಿದ್ದಾರೆ. ಕುಟುಂಬವು ಶುದ್ಧಾರಾಧನೆಯಲ್ಲಿ ಐಕ್ಯವಾಗಿರುವುದರ ಮೇಲೆಯೇ ಸಾಫಲ್ಯವು ಅವಲಂಬಿಸಿದೆ. ಕೊರಿಂಥದ ಸಭೆಗೆ ಅಪೊಸ್ತಲ ಪೌಲನು ಬರೆದಂತಹ ಮಾತುಗಳು, ಇಂದಿನ ಕ್ರೈಸ್ತ ಕುಟುಂಬಗಳಿಗೆ ಹಿಂದಿನಷ್ಟೇ ಪ್ರಭಾವಕಾರಿಯಾಗಿವೆ. ಅವನು ಬರೆದುದು: “ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು . . . ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (1 ಕೊರಿಂಥ 1:10) ಇಂತಹ ಐಕ್ಯವನ್ನು ಹೇಗೆ ಸಾಧಿಸಬಹುದು?
ಹೆತ್ತವರು ಆತ್ಮಿಕ ಅಭಿರುಚಿಯುಳ್ಳ ವ್ಯಕ್ತಿಗಳಾಗಿರಬೇಕು
ಒಂದು ಪ್ರಾಮುಖ್ಯ ಅಂಶವೇನೆಂದರೆ, ಹೆತ್ತವರು ಪೂರ್ಣ ರೀತಿಯಲ್ಲಿ ದೇವರಿಗೆ ಭಯಭಕ್ತಿಯುಳ್ಳವರಾಗಿರಬೇಕು. ಮೋಶೆಯು ಇಸ್ರಾಯೇಲ್ಯರಿಗೆ ಹೇಳಿದಂತಹ ವಿಷಯವನ್ನು ಗಮನಿಸಿರಿ: “ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು; ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:4-7.
ದೇವರ ಆಜ್ಞೆಗಳು ಪ್ರಥಮವಾಗಿ ಹೆತ್ತವರ ‘ಹೃದಯದಲ್ಲಿ’ ಇರಬೇಕು ಎಂಬುದನ್ನು ಮೋಶೆ ಸೂಚಿಸಿರುವುದನ್ನು ಗಮನಿಸಿರಿ. ಆಗ ಮಾತ್ರ ತಮ್ಮ ಮಕ್ಕಳಿಗೆ ಕ್ರಮವಾದ ಆತ್ಮಿಕ ಉಪದೇಶವನ್ನು ನೀಡುವ ಆಸಕ್ತಿ ಹೆತ್ತವರಿಗಿರುವುದು. ವಾಸ್ತವದಲ್ಲಿ, ಹೆತ್ತವರು ಆತ್ಮಿಕವಾಗಿ ಬಲವುಳ್ಳವರಾಗಿರುವಾಗ, ತಮ್ಮ ಮಕ್ಕಳಿಗೆ ಆತ್ಮಿಕ ವಿಷಯಗಳನ್ನು ಬೋಧಿಸುವುದರಲ್ಲಿ ಆಸಕ್ತರಾಗಿರುತ್ತಾರೆ.
ಒಬ್ಬ ಆತ್ಮಿಕ ವ್ಯಕ್ತಿಯಾಗಿ ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕಾದರೆ, ದೇವರ ವಾಕ್ಯವನ್ನು ಕ್ರಮವಾಗಿ ಓದಿ, ಮನನ ಮಾಡಿ, ಮತ್ತು ಓದಿದ ವಿಷಯವನ್ನು ಅನ್ವಯಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುವವನು ಮತ್ತು ಅದನ್ನು “ಹಗಲಿರುಳು” ಓದುವವನು, “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು” ಎಂದು ಕೀರ್ತನೆಗಾರನು ಬರೆದನು.—ಕೀರ್ತನೆ 1:2, 3.
ಸತತವಾಗಿ ನೀರೆರೆಯಲ್ಪಟ್ಟ ಮರವು ಒಳ್ಳೆಯ ಫಲವನ್ನು ಕೊಡುವಂತೆಯೇ, ಆತ್ಮಿಕವಾಗಿ ಪೋಷಿಸಲ್ಪಟ್ಟ ಕುಟುಂಬಗಳು ಯೆಹೋವನಿಗೆ ಸ್ತುತಿಯನ್ನು ತರುತ್ತಾ ದೈವಿಕ ಫಲವನ್ನು ನೀಡುತ್ತವೆ. ಪಶ್ಚಿಮ ಆಫ್ರಿಕದಲ್ಲಿ ವಾಸಿಸುವ ಯೂವಾಮೆಗ್ವೂ ಕುಟುಂಬವನ್ನು ಪರಿಗಣಿಸಿರಿ. ಯೂವಾಮೆಗ್ವೂ ಮತ್ತು ಅವನ ಪತ್ನಿಗೆ ಎಂಟು ಮಂದಿ ಮಕ್ಕಳಿದ್ದರೂ, ಇಬ್ಬರೂ ಕ್ರಮದ ಪಯನೀಯರರಾಗಿ, ಅಂದರೆ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಸಲ್ಲಿಸುತ್ತಾರೆ. ಅವನು ಹೇಳುವುದು: “ನಮ್ಮ ಕುಟುಂಬದಲ್ಲಿ 20 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಕ್ರಮವಾದ ಕುಟುಂಬ ಬೈಬಲ್ ಅಧ್ಯಯನವು ನಡಿಯುತ್ತಾ ಇದೆ. ನಾವು ಮಕ್ಕಳಿಗೆ ಬಾಲ್ಯಾವಸ್ಥೆಯಿಂದ ದೇವರ ವಾಕ್ಯವನ್ನು, ನಮ್ಮ ಕುಟುಂಬ ಅಧ್ಯಯನದಲ್ಲಿ ಮಾತ್ರವಲ್ಲ, ಶೂಶ್ರೂಷೆಯ ಸಮಯದಲ್ಲಿ ಮತ್ತು ಇತರ ಸಮಯಗಳಲ್ಲಿಯೂ ಕಲಿಸಿದ್ದೇವೆ. ನಮ್ಮ ಮಕ್ಕಳಲ್ಲಿ ಎಲ್ಲರೂ ರಾಜ್ಯ ಸುವಾರ್ತೆಯ ಘೋಷಕರಾಗಿದ್ದಾರೆ. ಅವರಲ್ಲಿ ಆರು ವರ್ಷ ವಯಸ್ಸಿನವನಾಗಿರುವ ಕೊನೆಯವನು ಮಾತ್ರ, ಇನ್ನೂ ದೀಕ್ಷಾಸ್ನಾನ ಪಡೆದುಕೊಂಡಿಲ್ಲ.”
ಒಂದು ತಂಡದೋಪಾದಿ ಕೆಲಸಮಾಡುವುದು
“ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ ಸಾಧನ” ಎಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 24:3) ಕುಟುಂಬದೊಳಗೆ ಅಂತಹ ಜ್ಞಾನವು, ಎಲ್ಲರೂ ಸೇರಿ ಸಹಕರಿಸುವಂತೆ ಮಾಡುತ್ತದೆ. ಕುಟುಂಬವೆಂಬ ತಂಡದ “ನಾಯಕ” ತಂದೆಯಾಗಿದ್ದಾನೆ. ಅವನು ಮನೆವಾರ್ತೆಯಲ್ಲಿ ದೇವರು ನೇಮಿಸಿದ ತಲೆಯಾಗಿದ್ದಾನೆ. (1 ಕೊರಿಂಥ 11:3) ತಲೆತನದ ಜವಾಬ್ದಾರಿಯಲ್ಲಿ ಒಳಗೂಡಿರುವ ಮಹತ್ವವನ್ನು ಪ್ರೇರಿತ ಅಪೊಸ್ತಲ ಪೌಲನು, ಹೀಗೆ ಬರೆದಾಗ ಒತ್ತಿಹೇಳಿದ್ದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”—1 ತಿಮೊಥೆಯ 5:8.
ದೇವರ ವಾಕ್ಯದಲ್ಲಿರುವ ಈ ಸಲಹೆಗೆ ಅನುಗುಣವಾಗಿ, ಕ್ರೈಸ್ತ ಪತಿಯರು ತಮ್ಮ ಪತ್ನಿಯರ ಆತ್ಮಿಕತೆಯ ಕಡೆಗೆ ಗಮನವಹಿಸಬೇಕು. ಪತ್ನಿಯರು ಮನೆಗೆಲಸವೆಂಬ ಭಾರವಾದ ಹೊರೆಯನ್ನು ಹೊರುವಲ್ಲಿ, ಅವರ ಆತ್ಮಿಕತೆಯು ಬಾಧಿಸಲ್ಪಡುವುದು. ಒಂದು ಆಫ್ರಿಕ ದೇಶದಲ್ಲಿ, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡ ಕ್ರೈಸ್ತನೊಬ್ಬನು, ಆತ್ಮಿಕ ವಿಷಯಗಳಲ್ಲಿ ತನ್ನ ಹೆಂಡತಿ ಉದಾಸೀನಳಾಗಿದ್ದಳೆಂದು ಸಭಾ ಹಿರಿಯರಿಗೆ ದೂರುಕೊಟ್ಟನು. ಅವನ ಹೆಂಡತಿಗೆ ಪ್ರಾಯೋಗಿಕ ಸಹಾಯದ ಅಗತ್ಯವಿದೆ ಎಂದು ಹಿರಿಯರು ಸೂಚಿಸಿದರು. ಆ ಕಾರಣ ಆ ಗಂಡನು ಮನೆಯ ಕೆಲಸಗಳಲ್ಲಿ ಅವಳಿಗೆ ನೆರವಾಗತೊಡಗಿದನು. ಅವಳು ವಾಚನದಲ್ಲಿ ಹಾಗೂ ಬೈಬಲ್ ಜ್ಞಾನದಲ್ಲಿ ಉತ್ತಮಗೊಳ್ಳುವಂತೆಯೂ ಅವನು ಸಹಾಯಮಾಡಿದನು. ಅವಳು ಉತ್ತಮವಾಗಿ ಪ್ರತಿಕ್ರಿಯಿಸಿದಳು, ಮತ್ತು ಈಗ ಇಡೀ ಕುಟುಂಬವು ದೇವರ ಸೇವೆಯಲ್ಲಿ ಐಕ್ಯವಾಗಿದೆ.
ತಂದೆಗಳು ತಮ್ಮ ಮಕ್ಕಳ ಆತ್ಮಿಕತೆಯ ಕುರಿತೂ ಚಿಂತಿಸುವವರಾಗಿರಬೇಕು. ಪೌಲನು ಬರೆದುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ.” (ಎಫೆಸ 6:4) ತಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸಬಾರದೆಂಬ ಬುದ್ಧಿವಾದವನ್ನು ಮತ್ತು ಅವರಿಗೆ ತರಬೇತಿ ನೀಡುವ ನಿರ್ದೇಶನವನ್ನು ಹೆತ್ತವರು ಪಾಲಿಸುವಾಗ, ತಾವು ಕುಟುಂಬವೆಂಬ ತಂಡದ ಭಾಗವಾಗಿದ್ದೇವೆಂದು ಮಕ್ಕಳಿಗೆ ಅನಿಸುತ್ತದೆ. ಫಲಸ್ವರೂಪವಾಗಿ, ಆತ್ಮಿಕ ಗುರಿಗಳನ್ನು ಮುಟ್ಟಲು ಮಕ್ಕಳು ತಮ್ಮಲ್ಲಿಯೇ ಒಬ್ಬರಿಗೊಬ್ಬರು ಸಹಾಯ ಹಾಗೂ ಉತ್ತೇಜನವನ್ನು ನೀಡಿಕೊಳ್ಳಬಹುದು.
ಮಕ್ಕಳು ಆತ್ಮಿಕ ಜವಾಬ್ದಾರಿಗಳಿಗೆ ಸಿದ್ಧರಾಗಿರುವಾಗ ಅವುಗಳನ್ನು ಅವರಿಗೆ ಕೊಡುವುದು, ತಂಡದೋಪಾದಿ ಕೆಲಸಮಾಡುವುದರಲ್ಲಿ ಒಳಗೂಡಿದೆ. 11 ಮಂದಿ ಮಕ್ಕಳ ತಂದೆಯಾಗಿರುವ ಒಬ್ಬ ಕ್ರೈಸ್ತ ಹಿರಿಯನು, ನಸುಕಿನಲ್ಲೇ ಎದ್ದು, ಕೆಲಸಕ್ಕೆ ಹೋಗುವ ಮೊದಲು ಹಲವಾರು ಮಕ್ಕಳೊಂದಿಗೆ ಅಧ್ಯಯನಗಳನ್ನು ನಡೆಸುತ್ತಾನೆ. ಹಿರಿಯ ಮಕ್ಕಳು ತಮ್ಮ ದೀಕ್ಷಾಸ್ನಾನದ ಬಳಿಕ, ಸರದಿಯಾಗಿ ತಮ್ಮತಂಗಿಯರಿಗೆ ಸಹಾಯಮಾಡುತ್ತಾ, ಬೈಬಲನ್ನು ಅವರಿಗೆ ಕಲಿಸುವುದರಲ್ಲಿ ಭಾಗವಹಿಸುತ್ತಾರೆ. ಅವರ ಪ್ರಯತ್ನಗಳನ್ನು ಪ್ರಶಂಸಿಸುತ್ತಾ, ತಂದೆಯು ಮೇಲ್ವಿಚಾರಣೆ ಮಾಡುತ್ತಾನೆ. ಆ ಮಕ್ಕಳಲ್ಲಿ ಆರು ಮಂದಿ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಮತ್ತು ಇತರರು ಆ ಗುರಿಯನ್ನು ಮುಟ್ಟಲು ಸತತವಾಗಿ ಪ್ರಯಾಸಪಡುತ್ತಿದ್ದಾರೆ.
ಒಳ್ಳೆಯ ಸಂವಾದ, ಏಕರೀತಿಯ ಗುರಿಗಳು
ಐಕ್ಯ ಕುಟುಂಬಗಳಿಗೆ ಅತ್ಯಾವಶ್ಯಕವಾದದ್ದು, ಪ್ರೀತಿಪೂರ್ಣ ಸಂವಾದ ಹಾಗೂ ಏಕರೀತಿಯ ಆತ್ಮಿಕ ಗುರಿಗಳು. ನೈಜಿರೀಯದಲ್ಲಿ ವಾಸಿಸುವ ಕ್ರೈಸ್ತ ಹಿರಿಯನಾದ ಗೌರ್ಡನ್, 11ರಿಂದ 27ರ ವಯೋಮಾನದಲ್ಲಿರುವ ಏಳು ಮಂದಿ ಮಕ್ಕಳ ತಂದೆಯಾಗಿದ್ದಾನೆ. ಆ ಮಕ್ಕಳಲ್ಲಿ ಆರು ಮಂದಿ ಹೆತ್ತವರಂತೆಯೇ ಪಯನೀಯರರಾಗಿದ್ದಾರೆ. ಇತ್ತೀಚೆಗೆ ದೀಕ್ಷಾಸ್ನಾನ ಪಡೆದುಕೊಂಡ ಕಿರಿಯ ಮಗನು, ಕುಟುಂಬದ ಉಳಿದ ಸದಸ್ಯರೊಂದಿಗೆ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಕ್ರಮವಾಗಿ ಭಾಗವಹಿಸುತ್ತಾನೆ. ವಯಸ್ಕರಾಗಿರುವ ಇಬ್ಬರು ಗಂಡುಮಕ್ಕಳು ಸಭೆಯಲ್ಲಿ ಶುಶ್ರೂಷಾ ಸೇವಕರಾಗಿದ್ದಾರೆ.
ಗೌರ್ಡನ್ ವೈಯಕ್ತಿಕವಾಗಿ ತನ್ನ ಮಕ್ಕಳಲ್ಲಿ ಪ್ರತಿಯೊಬ್ಬರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸಿದನು. ಅಲ್ಲದೆ, ಕುಟುಂಬವು ವ್ಯಾಪಕವಾದ ಬೈಬಲ್ ಶಿಕ್ಷಣದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತದೆ. ಪ್ರತಿದಿನ ಬೆಳಗ್ಗೆ ಅವರು ಬೈಬಲ್ ವಚನವನ್ನು ಪರಿಗಣಿಸಲು ಮತ್ತು ತರುವಾಯ ಸಭಾ ಕೂಟಗಳಿಗಾಗಿ ತಯಾರಿಸಲು ಒಟ್ಟುಸೇರುತ್ತಾರೆ.
ಕುಟುಂಬದ ಪ್ರತಿಯೊಬ್ಬ ಸದಸ್ಯನ ಗುರಿಗಳಲ್ಲೊಂದು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿರುವ ಎಲ್ಲ ಲೇಖನಗಳನ್ನು ಓದುವುದಾಗಿದೆ. ಇತ್ತೀಚೆಗೆ ಅವರು ದೈನಿಕ ಬೈಬಲ್ ವಾಚನವನ್ನು ಈ ಕ್ರಮಕ್ಕೆ ಕೂಡಿಸಿದರು. ತಾವು ಓದುವ ವಿಷಯದ ಕುರಿತು ಮಾತಾಡುವ ಮೂಲಕ, ಕುಟುಂಬದ ಸದಸ್ಯರು ಈ ಹವ್ಯಾಸವನ್ನು ಮುಂದುವರಿಸಲು ಒಬ್ಬರನ್ನೊಬ್ಬರು ಉತ್ತೇಜಿಸುತ್ತಾರೆ.
ಸಾಪ್ತಾಹಿಕ ಕುಟುಂಬ ಬೈಬಲ್ ಅಧ್ಯಯನವು ಎಷ್ಟು ಚೆನ್ನಾಗಿ ಸ್ಥಾಪಿತಗೊಂಡಿದೆ ಎಂದರೆ ಯಾರಿಗೂ ಮರುಜ್ಞಾಪನದ ಅಗತ್ಯವೇ ಇರುವುದಿಲ್ಲ, ಎಲ್ಲರೂ ಅದಕ್ಕಾಗಿ ಹಾತೊರೆಯುತ್ತಿರುತ್ತಾರೆ. ವರ್ಷಗಳು ಉರುಳಿದಂತೆ, ಕುಟುಂಬ ಅಧ್ಯಯನದ ವಿಷಯ, ರೂಪರೇಖೆ, ಮತ್ತು ಸಮಯಾವಧಿಯು, ಮಕ್ಕಳ ವಯಸ್ಸು ಹಾಗೂ ಅಗತ್ಯಗಳಿಗನುಸಾರ ಬದಲಾಗಿದೆ. ಈ ಕುಟುಂಬವು, ದೇವರ ಇತರ ನಂಬಿಗಸ್ತ ಸೇವಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಕಾರಣ, ಇದು ಮಕ್ಕಳ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಿದೆ.
ಒಂದು ಕುಟುಂಬದೋಪಾದಿ, ಅವರು ಕಾರ್ಯಗಳನ್ನು ಒಟ್ಟಾಗಿ ಮಾಡುತ್ತಾರೆ ಮತ್ತು ಮನೋರಂಜನೆಗಾಗಿ ಸಮಯವನ್ನು ಬದಿಗಿಡುತ್ತಾರೆ. ವಾರಕ್ಕೊಮ್ಮೆ ಅವರು ಕುಟುಂಬವಾಗಿ ಒಂದು ಸಂಜೆಯನ್ನು ವ್ಯಯಿಸುತ್ತಾರೆ. ಇದರಲ್ಲಿ ರಸಪ್ರಶ್ನೆಗಳು, ಹಿತಕರವಾದ ಜೋಕುಗಳು, ಪಿಯಾನೊ ನುಡಿಸುವಿಕೆ, ಕಥೆಹೇಳುವಿಕೆ, ಮತ್ತು ವಿಶ್ರಾಮ ಪಡೆದುಕೊಳ್ಳುವುದು ಸೇರಿರುತ್ತದೆ. ಕೆಲವೊಮ್ಮೆ ಅವರು ಕಡಲ ತೀರಕ್ಕೊ ಪ್ರೇಕ್ಷಣೀಯ ಸ್ಥಳಗಳಿಗೊ ಹೋಗುತ್ತಾರೆ.
ಯೆಹೋವನ ಮೇಲೆ ಆತುಕೊಳ್ಳುವುದು
ಈ ಮೇಲೆ ತಿಳಿಸಿದಂತಹ ಯಾವ ವಿಷಯವೂ, ದೊಡ್ಡ ಕುಟುಂಬಗಳನ್ನು ಬೆಳೆಸುವುದರಲ್ಲಿ ಒಳಗೂಡಿರುವ ಶ್ರಮವನ್ನು ಕಡಿಮೆಮಾಡುವುದಿಲ್ಲ. ಒಬ್ಬ ಕ್ರೈಸ್ತ ತಂದೆಯು ಹೇಳುವುದು, “ಎಂಟು ಮಕ್ಕಳಿಗೆ ಒಬ್ಬ ಉತ್ತಮ ತಂದೆಯಾಗಿರುವುದು ಒಂದು ದೊಡ್ಡ ಸವಾಲಾಗಿದೆ. ಅವರನ್ನು ಪೋಷಿಸಲು ಹೇರಳವಾದ ಭೌತಿಕ ಹಾಗೂ ಆತ್ಮಿಕ ಆಹಾರದ ಅಗತ್ಯವಿದೆ. ಅವರಿಗೆ ಬೆಂಬಲ ನೀಡುವಷ್ಟು ಹಣವನ್ನು ಸಂಪಾದಿಸಲು ನಾನು ಬಹಳ ಪರಿಶ್ರಮ ಪಡಬೇಕಾಗಿದೆ. ಹಿರಿಯ ಮಕ್ಕಳು ಹದಿವಯಸ್ಕರಾಗಿದ್ದು, ಎಲ್ಲ ಎಂಟು ಮಕ್ಕಳು ಶಾಲೆಗೆ ಹೋಗುತ್ತಾರೆ. ಆತ್ಮಿಕ ತರಬೇತಿಯು ಅತ್ಯಾವಶ್ಯಕವೆಂದು ನನಗೆ ಗೊತ್ತಿದ್ದರೂ, ನನ್ನ ಮಕ್ಕಳಲ್ಲಿ ಕೆಲವರು ಹಟಮಾರಿಗಳೂ ಅವಿಧೇಯರೂ ಆಗಿದ್ದಾರೆ. ಅವರು ಆ ರೀತಿಯಲ್ಲಿ ವರ್ತಿಸುವಾಗ ನನಗೆ ದುಃಖವಾಗುತ್ತದೆ. ಆದರೆ, ನಾನೂ ಕೆಲವೊಮ್ಮೆ ಯೆಹೋವನ ಮನನೋಯಿಸುತ್ತೇನೆಂದು, ಮತ್ತು ಆತನು ನನ್ನನ್ನು ಕ್ಷಮಿಸುತ್ತಾನೆಂದು ನಾನು ಬಲ್ಲವನಾಗಿದ್ದೇನೆ. ನನ್ನ ಮಕ್ಕಳು ತಿಳಿವಳಿಕೆಯಲ್ಲಿ ಪ್ರೌಢರಾಗುವ ತನಕ ನಾನು ತಾಳ್ಮೆಯಿಂದ ಅವರನ್ನು ಸರಿಪಡಿಸುತ್ತಾ ಇರಬೇಕು.
“ಎಲ್ಲರೂ ಪಶ್ಚಾತ್ತಾಪಪಡಬೇಕೆಂದು ಇಚ್ಛಿಸುವುದರಿಂದ ನಮ್ಮೊಂದಿಗೆ ತಾಳ್ಮೆಯಿಂದ ವರ್ತಿಸುವ ಯೆಹೋವನ ಮಾದರಿಯನ್ನು ಅನುಸರಿಸಲು ನಾನು ಪ್ರಯತ್ನಿಸುತ್ತೇನೆ. ನನ್ನ ಕುಟುಂಬದೊಂದಿಗೆ ನಾನು ಅಧ್ಯಯನ ಮಾಡುತ್ತೇನೆ, ಮತ್ತು ನನ್ನ ಮಕ್ಕಳಲ್ಲಿ ಕೆಲವರು ದೀಕ್ಷಾಸ್ನಾನದ ಗುರಿಯನ್ನು ಸಾಧಿಸುವುದರಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನಾನು ಪರಿಣಾಮಗಳಿಗಾಗಿ ನನ್ನ ಸ್ವಂತ ಬಲದ ಮೇಲೆ ಆತುಕೊಳ್ಳುವುದಿಲ್ಲ, ಏಕೆಂದರೆ ನನ್ನ ಶಕ್ತಿಯಿಂದ ಏನನ್ನೂ ಸಾಧಿಸಸಾಧ್ಯವಿಲ್ಲ. ನಾನು ಪ್ರಾರ್ಥನೆಯಲ್ಲಿ ಯೆಹೋವನ ಸಮೀಪಕ್ಕೆ ಬರಲು ಮತ್ತು ‘ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು’ ಎಂಬ ಜ್ಞಾನೋಕ್ತಿಯನ್ನು ಅನ್ವಯಿಸಲು ಪ್ರಯತ್ನಿಸುತ್ತೇನೆ. ನನ್ನ ಮಕ್ಕಳ ತರಬೇತಿಯನ್ನು ಯಶಸ್ವಿಕರವಾಗಿ ಪೂರ್ತಿಗೊಳಿಸಲು ಯೆಹೋವನು ನನಗೆ ಸಹಾಯ ಮಾಡುವನು.”—ಜ್ಞಾನೋಕ್ತಿ 3:5, 6.
ಎಂದಿಗೂ ಬಿಟ್ಟುಕೊಡಬೇಡಿರಿ!
ಕೆಲವೊಮ್ಮೆ ಮಕ್ಕಳ ತರಬೇತಿಯು ಗಣ್ಯಮಾಡಲ್ಪಡದ ಕೆಲಸವಾಗಿ ತೋರಬಹುದಾದರೂ, ಎಂದಿಗೂ ಬಿಟ್ಟುಕೊಡಬೇಡಿರಿ! ಅದರಲ್ಲಿ ಪಟ್ಟುಹಿಡಿದವರಾಗಿರಿ! ನಿಮ್ಮ ಪ್ರಯತ್ನಗಳನ್ನು ಮಕ್ಕಳು ಈಗ ಗಣ್ಯಮಾಡದಿದ್ದರೂ ಇಲ್ಲವೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದಿದ್ದರೂ, ಅವರು ತರುವಾಯ ಹಾಗೆ ಮಾಡಬಹುದು. ಆತ್ಮದ ಫಲಗಳನ್ನೊಳಗೊಂಡ ಒಬ್ಬ ಕ್ರೈಸ್ತನಾಗಲು ಒಂದು ಮಗುವಿಗೆ ಸಮಯಾವಕಾಶದ ಅಗತ್ಯವಿದೆ.—ಗಲಾತ್ಯ 5:22, 23.
ಕೆನ್ಯದಲ್ಲಿ ವಾಸಿಸುವ ಮೊನಿಕಾ, ಹತ್ತು ಮಕ್ಕಳಲ್ಲಿ ಒಬ್ಬಳು. ಆಕೆ ಹೇಳುವುದು: “ನನ್ನ ಹೆತ್ತವರು ಬಾಲ್ಯಾವಸ್ಥೆಯಿಂದ ನಮಗೆ ಬೈಬಲ್ ಸತ್ಯವನ್ನು ಕಲಿಸಿದರು. ತಂದೆಯವರು ಪ್ರತಿ ವಾರ ನಮ್ಮೊಂದಿಗೆ ಕ್ರೈಸ್ತ ಪ್ರಕಾಶನಗಳನ್ನು ಅಭ್ಯಸಿಸುತ್ತಿದ್ದರು. ಅವರ ಕೆಲಸದ ನಿಮಿತ್ತ, ಅಧ್ಯಯನವು ಪ್ರತಿ ವಾರ ಅದೇ ದಿನದಂದು ನಡೆಯುತ್ತಿರಲಿಲ್ಲ. ಕೆಲವೊಮ್ಮೆ, ಅವರು ಕೆಲಸದಿಂದ ಮನೆಗೆ ಬರುವ ದಾರಿಯಲ್ಲಿ ನಾವು ಹೊರಗೆ ಆಟವಾಡುತ್ತಿರುವುದನ್ನು ಕಂಡು, ನಮ್ಮ ಬೈಬಲ್ ಅಧ್ಯಯನಕ್ಕಾಗಿ ಐದು ನಿಮಿಷಗಳಲ್ಲಿ ಎಲ್ಲರೂ ಒಳಗೆ ಬರುವಂತೆ ಹೇಳುತ್ತಿದ್ದರು. ನಮ್ಮ ಬೈಬಲ್ ಅಧ್ಯಯನದ ಬಳಿಕ, ಪ್ರಶ್ನೆಗಳನ್ನು ಕೇಳುವಂತೆ ಇಲ್ಲವೆ ಸಮಸ್ಯೆಗಳನ್ನು ಚರ್ಚಿಸುವಂತೆ ನಾವು ಉತ್ತೇಜಿಸಲ್ಪಡುತ್ತಿದ್ದೆವು.
“ನಾವು ದೇವಭಯವುಳ್ಳ ಮಕ್ಕಳೊಂದಿಗೆ ಸಹವಾಸಿಸುತ್ತಿದ್ದೇವೆ ಎಂಬುದನ್ನು ಅವರು ಖಚಿತಪಡಿಸಿಕೊಂಡರು. ಅವರು ಶಾಲೆಗೆ ಕ್ರಮವಾಗಿ ಭೇಟಿನೀಡಿ, ನಮ್ಮ ನಡತೆಯ ಬಗ್ಗೆ ಶಿಕ್ಷಕರಲ್ಲಿ ವಿಚಾರಿಸಿದರು. ಅಂತಹ ಒಂದು ಭೇಟಿಯಲ್ಲಿ, ನನ್ನ ಅಣ್ಣಂದಿರಲ್ಲಿ ಮೂವರು ಇತರ ಹುಡುಗರೊಂದಿಗೆ ಜಗಳವಾಡಿದರೆಂದು ಮತ್ತು ಕೆಲವೊಮ್ಮೆ ಅವರು ಅಸಭ್ಯರಾಗಿ ವರ್ತಿಸಿದರೆಂದು ಅವರಿಗೆ ತಿಳಿದುಬಂತು. ಕೆಟ್ಟ ವರ್ತನೆಗಾಗಿ ಆ ಮೂವರೂ ತಂದೆಯಿಂದ ದಂಡಿಸಲ್ಪಟ್ಟರು. ಅವರು ದೈವಿಕ ಮಾರ್ಗದಲ್ಲಿ ನಡೆದುಕೊಳ್ಳುವ ಅಗತ್ಯ ಏಕಿದೆ ಎಂಬುದನ್ನು ಶಾಸ್ತ್ರಗಳಿಂದ ವಿವರಿಸಲೂ ತಂದೆಯವರು ಸಮಯವನ್ನು ತೆಗೆದುಕೊಂಡರು.
“ನಮ್ಮೊಂದಿಗೆ ಕೂಟಗಳಿಗಾಗಿ ತಯಾರಿಸುವ ಮೂಲಕ, ಕೂಟಗಳಿಗೆ ಹಾಜರಾಗುವುದರ ಪ್ರಯೋಜನಗಳನ್ನು ನಮ್ಮ ಹೆತ್ತವರು ತೋರಿಸಿಕೊಟ್ಟರು. ಮನೆಯಲ್ಲಿ ಪ್ರ್ಯಾಕ್ಟೀಸ್ ಅವಧಿಗಳನ್ನು ಏರ್ಪಡಿಸುವ ಮೂಲಕ, ಶುಶ್ರೂಷಕರಾಗುವಂತೆ ನಾವು ತರಬೇತುಗೊಳಿಸಲ್ಪಟ್ಟೆವು. ಚಿಕ್ಕಂದಿನಿಂದಲೇ ನಾವು ನಮ್ಮ ಹೆತ್ತವರೊಂದಿಗೆ ಕ್ಷೇತ್ರ ಸೇವೆಗೆ ಹೋಗುತ್ತಿದ್ದೆವು.
“ಇಂದು, ನನ್ನ ಅಣ್ಣಂದಿರಲ್ಲಿ ಮೂವರು ವಿಶೇಷ ಪಯನೀಯರರಾಗಿದ್ದಾರೆ, ಅಕ್ಕ ಕ್ರಮದ ಪಯನೀಯರಳಾಗಿದ್ದಾಳೆ, ಇನ್ನೊಬ್ಬ ತಂಗಿ ವಿವಾಹವಾಗಿ ಒಂದು ಕುಟುಂಬವನ್ನು ಬೆಳೆಸುತ್ತಿರುವ ಹುರುಪುಳ್ಳ ಸಾಕ್ಷಿಯಾಗಿದ್ದಾಳೆ. 18 ಮತ್ತು 16 ವರ್ಷ ವಯಸ್ಸಿನ ನನ್ನ ತಂಗಿಯರು ಸ್ನಾತ ಪ್ರಚಾರಕರಾಗಿದ್ದಾರೆ. ಕೊನೆಯ ಇಬ್ಬರು ತಮ್ಮಂದಿರಿಗೆ ತರಬೇತಿ ನೀಡಲಾಗುತ್ತಿದೆ. ನಾನು ಎರಡು ವರ್ಷಗಳಿಂದ ಯೆಹೋವನ ಸಾಕ್ಷಿಗಳ ಕೆನ್ಯ ಬ್ರಾಂಚ್ ಆಫೀಸಿನಲ್ಲಿ ಸೇವೆ ಸಲ್ಲಿಸುತ್ತಾ ಇದ್ದೇನೆ. ನನ್ನ ಹೆತ್ತವರು ಆತ್ಮಿಕ ಜನರಾಗಿರುವುದರಿಂದ ನಾನು ಅವರನ್ನು ಪ್ರೀತಿಸುತ್ತೇನೆ ಮತ್ತು ಗಣ್ಯಮಾಡುತ್ತೇನೆ. ಅವರು ನಮಗೆ ಉತ್ತಮ ಮಾದರಿಯನ್ನಿಟ್ಟರು.”
ನಿಮಗೆ ಎಷ್ಟೇ ಮಕ್ಕಳಿರಲಿ, ನಿತ್ಯ ಜೀವಕ್ಕೆ ನಡೆಸುವ ಪಥದಲ್ಲಿ ನಡೆಯುವಂತೆ ಅವರಿಗೆ ಸಹಾಯ ಮಾಡುವುದನ್ನು ಎಂದಿಗೂ ಬಿಟ್ಟುಕೊಡಬೇಡಿರಿ. ಯೆಹೋವನು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸಿದಂತೆ, ಅಪೊಸ್ತಲ ಯೋಹಾನನು ತನ್ನ ಆತ್ಮಿಕ ಮಕ್ಕಳ ಕುರಿತು ಹೇಳಿದ ಮಾತುಗಳನ್ನು ನೀವೂ ಹೇಳುವಿರಿ: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.”—3 ಯೋಹಾನ 4.