ಜೆರೋಮ್—ಬೈಬಲ್ ಭಾಷಾಂತರದ ವಿವಾದಾತ್ಮಕ ಮೂಲಕರ್ತ
ಏಪ್ರಿಲ್ 8, 1546ರಂದು, ಟ್ರೆಂಟ್ನ ಸಲಹಾಸಮಿತಿಯು ಒಂದು ಕಾನೂನನ್ನು ಜಾರಿಗೆ ತಂದಿತು. ಅದೇನೆಂದರೆ, ಲ್ಯಾಟಿನ್ ವಲ್ಗೆಟ್ ಬೈಬಲನ್ನು “[ಕ್ಯಾತೊಲಿಕ್] ಚರ್ಚು ಅಂಗೀಕರಿಸಿದೆ . . . ಮತ್ತು ಯಾರೊಬ್ಬರೂ ಯಾವುದೇ ನೆಪದಿಂದ ಅದರ ವಿರುದ್ಧ ಆಕ್ಷೇಪಣೆಯನ್ನೆತ್ತಬಾರದು.” ಈ ಲ್ಯಾಟಿನ್ ವಲ್ಗೆಟ್ ಬೈಬಲು ಒಂದು ಸಾವಿರ ವರ್ಷಗಳಿಗೆ ಮೊದಲೇ ಪೂರ್ಣಗೊಳಿಸಲ್ಪಟ್ಟಿತ್ತಾದರೂ, ಈ ಬೈಬಲ್ ಹಾಗೂ ಅದರ ಭಾಷಾಂತರಕಾರನಾದ ಜೆರೋಮನ ವಿಷಯದಲ್ಲಿ ಬಹಳ ದೀರ್ಘ ಸಮಯದಿಂದ ವಾಗ್ವಾದವು ನಡೆಯುತ್ತಿತ್ತು. ಈ ಜೆರೋಮನು ಯಾರಾಗಿದ್ದನು? ಅವನು ಹಾಗೂ ಅವನ ಬೈಬಲ್ ಭಾಷಾಂತರವು ಏಕೆ ವಿವಾದಕ್ಕೊಳಗಾಗಿತ್ತು? ಅವನ ಕೆಲಸವು ಇಂದಿನ ಬೈಬಲ್ ಭಾಷಾಂತರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
ಒಬ್ಬ ವಿದ್ವಾಂಸನಾಗುವುದು
ಜೆರೋಮನ ಲ್ಯಾಟಿನ್ ಹೆಸರು ಯೂಸೀಬಿಯಸ್ ಹೈರಾನಮಸ್ ಎಂದಾಗಿತ್ತು. ಅವನು ಸುಮಾರು ಸಾ.ಶ. 346ರಲ್ಲಿ, ಇಂದು ಇಟಲಿ ಮತ್ತು ಸ್ಲೊವೇನಿಯದ ಮಧ್ಯದಲ್ಲಿರುವ ಗಡಿಗೆ ಸಮೀಪವಾಗಿರುವ, ಡಾಲ್ಮೇಷಿಯದ ರೋಮನ್ ಪ್ರಾಂತವಾದ ಸ್ಟ್ರೀಡನ್ನಲ್ಲಿ ಹುಟ್ಟಿದನು.a ಅವನ ಹೆತ್ತವರು ಸ್ವಲ್ಪ ಮಟ್ಟಿಗೆ ಐಶ್ವರ್ಯವಂತರಾಗಿದ್ದರು. ಮತ್ತು ತೀರ ಚಿಕ್ಕ ಪ್ರಾಯದಲ್ಲೇ ಹಣದ ಲಾಭಗಳ ಅನುಭವ ಜೆರೋಮನಿಗಾಯಿತು; ರೋಮ್ನಲ್ಲಿ, ಸುಪ್ರಸಿದ್ಧ ವ್ಯಾಕರಣಜ್ಞನಾಗಿದ್ದ ಡೊನಾಟಸ್ನ ಕೆಳಗೆ ಇವನು ವಿದ್ಯಾಭ್ಯಾಸ ಮಾಡಿದನು. ಜೆರೋಮನು, ವ್ಯಾಕರಣ, ಆಲಂಕಾರಿಕ ಭಾಷೆ, ಹಾಗೂ ತತ್ವಜ್ಞಾನದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿ ಪರಿಣಮಿಸಿದನು. ಇದೇ ಸಮಯಾವಧಿಯಲ್ಲಿ ಅವನು ಗ್ರೀಕ್ ಭಾಷೆಯನ್ನು ಸಹ ಕಲಿಯಲು ಆರಂಭಿಸಿದನು.
ಜೆರೋಮನು ಸಾ.ಶ. 366ರಲ್ಲಿ ರೋಮನ್ನು ಬಿಟ್ಟು, ಎಲ್ಲ ಕಡೆಗಳಲ್ಲಿ ಅಲೆದಾಡುತ್ತಾ, ಕಟ್ಟಕಡೆಗೆ ಇಟಲಿಯ ಆಕ್ವಲಿಯಕ್ಕೆ ಬಂದು ನೆಲೆಸಿದನು. ಅಲ್ಲಿ ಅವನಿಗೆ ಸಂನ್ಯಾಸ್ವತದ ಪರಿಚಯವಾಯಿತು. ಸಂಪೂರ್ಣ ಸ್ವತ್ಯಾಗದ ದೃಷ್ಟಿಕೋನಗಳಿಂದ ಆಕರ್ಷಿತನಾಗಿ, ಅವನು ಹಾಗೂ ಅವನ ಸ್ನೇಹಿತರ ಒಂದು ಗುಂಪು, ಸಂನ್ಯಾಸ ಜೀವನ ಶೈಲಿಯನ್ನು ಮೈಗೂಡಿಸಿಕೊಳ್ಳುತ್ತಾ ಮುಂದಿನ ಅನೇಕ ವರ್ಷಗಳನ್ನು ಅಲ್ಲಿ ಕಳೆಯಿತು.
ಸಾ.ಶ. 373ರಲ್ಲಿ, ಅಸ್ಪಷ್ಟವಾದ ಕಾರಣಗಳಿಂದ ಈ ಗುಂಪು ಚದರಿಹೋಯಿತು. ಈ ಭ್ರಾಂತಿನಿವಾರಣೆಯಾದ ಮೇಲೆ, ಜೆರೋಮನು ಪೂರ್ವ ದಿಕ್ಕಿನ ಕಡೆಗೆ ಪ್ರಯಾಣ ಬೆಳೆಸಿ, ಬಿಥೂನ್ಯ, ಗಲಾತ್ಯ, ಮತ್ತು ಕಿಲಿಕ್ಯಕ್ಕೆ ಹೋಗಿ, ಕಾಲಕ್ರಮೇಣ ಸಿರಿಯದ ಅಂತಿಯೋಕ್ಯಕ್ಕೆ ಬಂದನು.
ಈ ದೀರ್ಘಕಾಲದ ಪ್ರಯಾಣದಿಂದ ಜೆರೋಮನು ಭಾರಿ ಕಷ್ಟವನ್ನು ಅನುಭವಿಸಿದನು. ಅವನು ತುಂಬ ಬಳಲಿದ್ದನು ಮತ್ತು ಅವನ ಆರೋಗ್ಯ ಅಷ್ಟು ಉತ್ತಮವಾಗಿರಲಿಲ್ಲ. ಅವನಿಗೆ ತುಂಬ ಜ್ವರವೂ ಇತ್ತು. ತನ್ನ ಮಿತ್ರನೊಬ್ಬನಿಗೆ ಪತ್ರ ಬರೆಯುತ್ತಾ ಅವನು ಹೇಳಿದ್ದು: “ಅಯ್ಯೋ, ಕರ್ತನಾದ ಯೇಸು ಕ್ರಿಸ್ತನು ಈ ಕ್ಷಣವೇ ನಿನ್ನ ಬಳಿಗೆ ನನ್ನನ್ನು ಕರೆದೊಯ್ಯುತ್ತಿದ್ದಲ್ಲಿ ಎಷ್ಟು ಒಳ್ಳೇದಿರುತ್ತಿತ್ತು. ಸ್ವಸ್ಥವಿರುವಾಗಲೂ ದುರ್ಬಲವಾಗಿದ್ದ ನನ್ನ ಬಡದೇಹವು ಈಗ ಜರ್ಜರಿತವಾಗಿ ಹೋಗಿದೆ.”
ಅನಾರೋಗ್ಯ, ಒಂಟಿತನ, ಮತ್ತು ಮಾನಸಿಕ ಸಂಘರ್ಷವು ಮಾತ್ರ ಸಾಕಾಗದೋ ಎಂಬಂತೆ, ಜೆರೋಮನ ಮೇಲೆ ಇನ್ನೊಂದು ವಿಪತ್ತು ಬಂತು. ಅದು ಆತ್ಮಿಕ ರೀತಿಯದ್ದಾಗಿತ್ತು. ಅವನಿಗೆ ಒಂದು ಕನಸು ಬಿತ್ತು. ಅದರಲ್ಲಿ ಅವನನ್ನು ದೇವರ “ನ್ಯಾಯಾಸನದ ಮುಂದೆ ಎಳೆದೊಯ್ಯಲಾಗಿತ್ತು.” ನೀನು ಯಾರು ಎಂಬುದನ್ನು ನೀನೇ ಹೇಳು ಎಂದು ಅವನಿಗೆ ಅಪ್ಪಣೆ ಕೊಡಲ್ಪಟ್ಟಾಗ, ಜೆರೋಮನು ಉತ್ತರಿಸಿದ್ದು: “ನಾನು ಒಬ್ಬ ಕ್ರೈಸ್ತನು.” ಆದರೆ ಸ್ವರ್ಗದ ಮೇಲ್ವಿಚಾರಕನು ಹೇಳಿದ್ದು: “ನೀನು ಸುಳ್ಳು ಹೇಳುತ್ತಿದ್ದೀ. ನೀನು ಕ್ರಿಸ್ತನ ಹಿಂಬಾಲಕನಲ್ಲ, ಸಿಸೆರೋನ ಅನುಯಾಯಿಯಾಗಿದ್ದೀ.”
ಅಷ್ಟರ ತನಕ, ಕಲಿಯುವುದಕ್ಕಾಗಿರುವ ಜೆರೋಮನ ವ್ಯಾಮೋಹವು, ದೇವರ ವಾಕ್ಯಕ್ಕೆ ಬದಲಾಗಿ ವಿಧರ್ಮಿ ಸಾಹಿತ್ಯದ ಅಧ್ಯಯನದ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು. “ನನ್ನ ಮನಸ್ಸಾಕ್ಷಿಯು ನನ್ನನ್ನು ಕೊಲ್ಲುತ್ತಿದ್ದುದರಿಂದ ನಾನು ಯಾತನೆಗೆ ಒಳಗಾದೆ” ಎಂದು ಅವನು ಹೇಳಿದನು. ವಿಷಯಗಳನ್ನು ಸರಿಪಡಿಸುವ ನಿರೀಕ್ಷೆಯಿಂದ, ಜೆರೋಮನು ತನ್ನ ಕನಸಿನಲ್ಲಿ ಹೀಗೆ ಪ್ರತಿಜ್ಞೆಮಾಡಿದನು: “ಕರ್ತನೇ, ಇನ್ನೆಂದಾದರೂ ನಾನು ಲೌಕಿಕ ಪುಸ್ತಕಗಳನ್ನು ಕೊಂಡುಕೊಳ್ಳುವುದಾದರೆ, ಅಥವಾ ನಾನು ಅಂತಹ ಪುಸ್ತಕಗಳನ್ನು ಓದುವುದಾದರೆ, ನಾನು ನಿನ್ನನ್ನು ಅಲ್ಲಗಳೆದಂತೆಯೇ.”
ತದನಂತರ, ಒಂದು ಕನಸಿನಲ್ಲಿ ಮಾಡಿದ ಪ್ರತಿಜ್ಞೆಗೆ ನಾನು ಹೊಣೆಗಾರನಲ್ಲ ಎಂದು ಜೆರೋಮನು ವಾಗ್ವಾದಿಸಿದನು. ಆದರೂ, ಕಡಿಮೆಪಕ್ಷ ತಾತ್ವಿಕ ರೀತಿಯಲ್ಲಿ ತನ್ನ ಪ್ರತಿಜ್ಞೆಯನ್ನು ಪೂರೈಸಲು ಅವನು ನಿರ್ಧರಿಸಿದನು. ಆದುದರಿಂದ ಜೆರೋಮನು ಅಂತಿಯೋಕ್ಯವನ್ನು ಬಿಟ್ಟು, ಅರಾಮ್ಯ ಮರುಭೂಮಿಯಲ್ಲಿರುವ ಖಾಲ್ಕಿಸ್ನ ಏಕಾಂತ ಸ್ಥಳದಲ್ಲಿ ವಾಸಿಸತೊಡಗಿದನು. ಒಬ್ಬ ಸಂನ್ಯಾಸಿಯೋಪಾದಿ ಬದುಕುತ್ತಾ, ಅವನು ಬೈಬಲನ್ನು ಹಾಗೂ ದೇವತಾಶಾಸ್ತ್ರಜ್ಞರ ಸಾಹಿತ್ಯವನ್ನು ಅಭ್ಯಾಸಿಸುವುದರಲ್ಲಿ ತನ್ನನ್ನು ತೊಡಗಿಸಿಕೊಂಡನು. ಜೆರೋಮನು ಹೇಳಿದ್ದು: “ಈ ಹಿಂದೆ ನಾನು ಮನುಷ್ಯರ ಪುಸ್ತಕಗಳನ್ನು ಎಷ್ಟು ಉತ್ಸಾಹದಿಂದ ಓದುತ್ತಿದ್ದೆನೋ ಅದಕ್ಕಿಂತಲೂ ಹೆಚ್ಚಾದ ಉತ್ಸಾಹದಿಂದ ನಾನು ದೇವರ ಪುಸ್ತಕಗಳನ್ನು ಓದಿದೆ.” ಅವನು ಸಿರಿಯದ ಸ್ಥಳಿಕ ಭಾಷೆಯನ್ನು ಸಹ ಕಲಿತುಕೊಂಡನು ಮತ್ತು ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿದ್ದ ಒಬ್ಬ ಯೆಹೂದ್ಯನ ಸಹಾಯದಿಂದ ಹೀಬ್ರು ಭಾಷೆಯನ್ನು ಸಹ ಕಲಿಯಲು ಆರಂಭಿಸಿದನು.
ಪೋಪನ ಆದೇಶ
ಸುಮಾರು ಐದು ವರ್ಷಗಳ ಸಂನ್ಯಾಸಿ ಜೀವಿತದ ಬಳಿಕ, ತನ್ನ ಅಭ್ಯಾಸವನ್ನು ಮುಂದುವರಿಸಲಿಕ್ಕಾಗಿ ಜೆರೋಮನು ಅಂತಿಯೋಕ್ಯಕ್ಕೆ ಹಿಂದಿರುಗಿದನು. ಆದರೆ, ಅಲ್ಲಿಗೆ ಹಿಂದಿರುಗಿದ ಬಳಿಕ, ಚರ್ಚ್ ಸಂಪೂರ್ಣವಾಗಿ ವಿಭಾಗಗೊಂಡಿದೆ ಎಂಬುದು ಅವನಿಗೆ ಗೊತ್ತಾಯಿತು. ಇದಕ್ಕೆ ಮೊದಲು, ಜೆರೋಮನು ಇನ್ನೂ ಮರುಭೂಮಿಯಲ್ಲಿ ಇದ್ದಾಗಲೇ, ಅವನು ಪೋಪ್ ದಮಾಸಸ್ನ ಬಳಿ ಸಲಹೆಗಾಗಿ ವಿನಂತಿಸಿಕೊಳ್ಳುತ್ತಾ ಹೇಳಿದ್ದು: “ಚರ್ಚು ಮೂರು ಪಕ್ಷಗಳಾಗಿ ವಿಭಾಗವಾಗಿದೆ, ಮತ್ತು ಇವುಗಳಲ್ಲಿ ಪ್ರತಿಯೊಂದು ಪಕ್ಷವು, ನನ್ನನ್ನು ಅದರ ಬೆಂಬಲಿಗನಾಗುವಂತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.”
ಈ ಮಧ್ಯೆ ಜೆರೋಮನು, ಅಂತಿಯೋಕ್ಯದಲ್ಲಿ ಬಿಷಪನ ಬಿರುದನ್ನು ಗಳಿಸುವ ಹಕ್ಕುದಾರರೆಂದು ಪ್ರತಿಪಾದಿಸಿದ್ದ ಮೂವರು ಪುರುಷರಲ್ಲಿ ಒಬ್ಬನಾಗಿದ್ದ ಪೌಲಿನಸ್ನೊಂದಿಗೆ ಒಮ್ಮತದಿಂದಿರಲು ನಿರ್ಧರಿಸಿದನು. ಎರಡು ಷರತ್ತುಗಳ ಆಧಾರದ ಮೇಲೆ ಜೆರೋಮನು ಪೌಲಿನಸ್ನಿಂದ ಪುರೋಹಿತ ದೀಕ್ಷೆಯನ್ನು ಪಡೆಯಲು ಒಪ್ಪಿಕೊಂಡನು. ನಾನು ನನ್ನ ಸಂನ್ಯಾಸ್ವತದ ಆಕಾಂಕ್ಷೆಗಳನ್ನು ಬೆನ್ನಟ್ಟಲು ನನಗೆ ಸ್ವಾತಂತ್ರ್ಯ ಕೊಡಬೇಕು ಎಂಬುದು ಮೊದಲನೆಯ ಷರತ್ತಾಗಿತ್ತು. ನಿರ್ದಿಷ್ಟ ಚರ್ಚಿನಲ್ಲಿ ನಡೆಸಲ್ಪಡುವ ಯಾವುದೇ ಯಾಜಕಸಂಬಂಧಿತ ಹಂಗುಗಳು ತನಗೆ ಇರಬಾರದು ಎಂಬುದು ಎರಡನೆಯ ಷರತ್ತಾಗಿತ್ತು.
ಸಾ.ಶ. 381ರಲ್ಲಿ, ಜೆರೋಮನು ಪೌಲಿನಸ್ನ ಜೊತೆ ಕಾನ್ಸ್ಸ್ಟೆಂಟಿನೋಪಲ್ನ ಸಲಹಾಸಮಿತಿಗೆ ಹೋದನು ಮತ್ತು ತದನಂತರ ಅಲ್ಲಿಂದ ಅವನೊಂದಿಗೆ ರೋಮ್ಗೂ ಹೋದನು. ಜೆರೋಮನಲ್ಲಿರುವ ಪಾಂಡಿತ್ಯ ಹಾಗೂ ಭಾಷಾಸಂಬಂಧಿತ ಕೌಶಲಗಳನ್ನು ಪೋಪ್ ದಮಾಸಸ್ ಬೇಗನೆ ಗುರುತಿಸಿದನು. ಒಂದೇ ವರ್ಷದೊಳಗೆ, ದಮಾಸಸ್ನ ಖಾಸಗಿ ಸೆಕ್ರಿಟರಿಯಾಗುವಂತಹ ಗೌರವಾನಿತ್ವ ಸ್ಥಾನವು ಜೆರೋಮನಿಗೆ ಸಿಕ್ಕಿತು.
ಸೆಕ್ರಿಟರಿಯಾಗಿದ್ದ ಜೆರೋಮನು, ಈ ಹುದ್ದೆಯಲ್ಲಿರುವಾಗಲೂ ತನ್ನ ವಿವಾದಾತ್ಮಕ ಮನೋವೃತ್ತಿಯನ್ನು ಮುಂದುವರಿಸಿದನು. ಯಾವುದೇ ವಿಷಯವಾಗಲಿ ಅದರ ಬಗ್ಗೆ ವಾದಮಾಡುವುದು ಅವನಿಗೆ ತುಂಬ ಪ್ರಿಯವಾಗಿತ್ತು. ಉದಾಹರಣೆಗಾಗಿ, ಪೋಪನ ಆಸ್ಥಾನದಲ್ಲಿದ್ದ ಸುಖವಿಲಾಸಗಳ ಮಧ್ಯೆಯೂ ಅವನು ಒಬ್ಬ ಸಂನ್ಯಾಸಿಯೋಪಾದಿ ಬದುಕುತ್ತಿದ್ದನು. ಅಷ್ಟು ಮಾತ್ರವಲ್ಲ, ತನ್ನ ವಿರಕ್ತ ಜೀವನ ಶೈಲಿಯನ್ನು ಉತ್ತೇಜಿಸುವ ಮೂಲಕ, ಮತ್ತು ಪಾದ್ರಿಗಳ ಐಷಾರಾಮದ ಲೌಕಿಕ ಜೀವನ ರೀತಿಯ ವಿರುದ್ಧ ಭಾವಾವೇಶದಿಂದ ಮಾತಾಡುವ ಮೂಲಕ, ಜೆರೋಮನು ಅನೇಕರನ್ನು ವೈರಿಗಳನ್ನಾಗಿ ಮಾಡಿಕೊಂಡನು.
ಇಷ್ಟೊಂದು ಮಂದಿ ವೈರಿಗಳು ಜೆರೋಮನಿಗಿದ್ದರಾದರೂ, ಪೋಪ್ ದಮಾಸಸ್ ಮಾತ್ರ ಸಂಪೂರ್ಣವಾಗಿ ಜೆರೋಮನ ಪಕ್ಷವಹಿಸುತ್ತಿದ್ದನು. ತನ್ನ ಬೈಬಲ್ ಸಂಶೋಧನೆಯನ್ನು ಮುಂದುವರಿಸುವಂತೆ ಪೋಪನು ಯಾವಾಗಲೂ ಜೆರೋಮನನ್ನು ಉತ್ತೇಜಿಸುತ್ತಿದ್ದನು; ಇದಕ್ಕೆ ಸಕಾರಣವಿತ್ತು. ಏಕೆಂದರೆ, ಆ ಸಮಯದಲ್ಲಿ ಬೈಬಲಿನ ಅನೇಕಾನೇಕ ಲ್ಯಾಟಿನ್ ಭಾಷಾಂತರಗಳು ಉಪಯೋಗದಲ್ಲಿದ್ದವು. ಇವುಗಳಲ್ಲಿ ಹೆಚ್ಚಿನ ಭಾಷಾಂತರಗಳು ಅಜಾಗರೂಕತೆಯಿಂದ ಮಾಡಲ್ಪಟ್ಟಿದ್ದು, ಎದ್ದುಕಾಣುವಂತಹ ದೋಷಗಳು ಅವುಗಳಲ್ಲಿದ್ದವು. ದಮಾಸಸ್ನ ಇನ್ನೊಂದು ಚಿಂತೆಯು ಏನಾಗಿತ್ತೆಂದರೆ, ಭಾಷೆಯ ಕಾರಣದಿಂದಾಗಿ, ಚರ್ಚು ಪೂರ್ವ ಹಾಗೂ ಪಶ್ಚಿಮ ಭಾಗಗಳಾಗಿ ವಿಭಾಗವಾಗಿತ್ತು. ಪೂರ್ವದಲ್ಲಿರುವ ಜನರಲ್ಲಿ ಕೇವಲ ಕೆಲವೇ ಮಂದಿಗೆ ಲ್ಯಾಟಿನ್ ಭಾಷೆ ಗೊತ್ತಿತ್ತು; ಪಶ್ಚಿಮದಲ್ಲಿರುವ ಕೆಲವೇ ಮಂದಿಗೆ ಗ್ರೀಕ್ ಭಾಷೆ ಗೊತ್ತಿತ್ತು.
ಆದುದರಿಂದ, ಸುವಾರ್ತಾ ಪುಸ್ತಕಗಳ ಪರಿಷ್ಕೃತ ಲ್ಯಾಟಿನ್ ಭಾಷಾಂತರವನ್ನು ಸಿದ್ಧಗೊಳಿಸುವುದು ಪೋಪ್ ದಮಾಸಸ್ನ ಚಿಂತೆಯಾಗಿತ್ತು. ಮೂಲ ಗ್ರೀಕ್ ಭಾಷೆಯಲ್ಲಿನ ಭಾಷಾಂತರವನ್ನು ನಿಷ್ಕೃಷ್ಟವಾಗಿ ವ್ಯಕ್ತಪಡಿಸುವ, ಸೂಕ್ತವಾದ ಲ್ಯಾಟಿನ್ ವಾಕ್ಸಂಪತ್ತಿರುವ, ಹಾಗೂ ಸ್ಪಷ್ಟವಾಗಿರುವಂತಹ ಒಂದು ಭಾಷಾಂತರವು ದಮಾಸಸ್ನಿಗೆ ಬೇಕಾಗಿತ್ತು. ಅಂತಹ ಒಂದು ಭಾಷಾಂತರವನ್ನು ಮಾಡಶಕ್ತರಿರುವ ಕೆಲವೇ ವಿದ್ವಾಂಸರಲ್ಲಿ ಜೆರೋಮನು ಒಬ್ಬನಾಗಿದ್ದನು. ಗ್ರೀಕ್, ಲ್ಯಾಟಿನ್ ಹಾಗೂ ಸಿರಿಯನ್ ಭಾಷೆಗಳು ನಿರರ್ಗಳವಾಗಿ ಬರುತ್ತಿದ್ದು, ಸಾಕಷ್ಟು ಹೀಬ್ರು ಭಾಷೆಯನ್ನು ತಿಳಿದವನಾಗಿದ್ದ ಜೆರೋಮನು, ಈ ಕೆಲಸಕ್ಕೆ ಅರ್ಹನಾದ ವ್ಯಕ್ತಿಯಾಗಿದ್ದನು. ಆದುದರಿಂದ, ದಮಾಸಸ್ನ ಆದೇಶದಂತೆ, ಜೆರೋಮನು ಈ ಕಾರ್ಯಯೋಜನೆಯನ್ನು ಆರಂಭಿಸಿದನು. ಈ ಕೆಲಸಕ್ಕಾಗಿ ಅವನು ತನ್ನ ಜೀವಿತದ ಮುಂದಿನ 20 ವರ್ಷಗಳನ್ನು ವಿನಿಯೋಗಿಸಬೇಕಾಗಿತ್ತು.
ವಿವಾದವು ಇನ್ನೂ ತೀವ್ರಗೊಳ್ಳುತ್ತದೆ
ಸುವಾರ್ತಾ ಪುಸ್ತಕಗಳನ್ನು ಭಾಷಾಂತರಿಸುವ ಕೆಲಸವನ್ನು ಜೆರೋಮನು ತ್ವರಿತಗತಿಯಿಂದ ಮಾಡುತ್ತಿದ್ದನಾದರೂ, ಅವನ ಭಾಷಾಂತರವು ಸ್ಪಷ್ಟವೂ ಪಾಂಡಿತ್ಯವುಳ್ಳದ್ದೂ ಆಗಿತ್ತು. ತನ್ನ ಭಾಷಾಂತರವು ಮೂಲ ಗ್ರೀಕ್ ಭಾಷಾಂತರಕ್ಕೆ ಹೆಚ್ಚು ಹೊಂದಿಕೆಯಲ್ಲಿರುವಂತೆ ಮಾಡುವುದಕ್ಕಾಗಿ, ಆಗ ದೊರೆಯುತ್ತಿದ್ದ ಎಲ್ಲ ಗ್ರೀಕ್ ಭಾಷೆಯ ಹಸ್ತಪ್ರತಿಗಳನ್ನು ಹೋಲಿಸುತ್ತಾ, ಅವನು ಲ್ಯಾಟಿನ್ ಭಾಷಾಂತರ ಶೈಲಿಯಲ್ಲಿ ಹಾಗೂ ಸಾರಾಂಶದಲ್ಲಿದ್ದ ತಪ್ಪುಗಳನ್ನು ಸರಿಪಡಿಸಿದನು.
ಜೆರೋಮನು, ಗ್ರೀಕ್ ಸೆಪ್ಟ್ಯುಅಜಿಂಟ್ ಮೂಲಪಾಠವನ್ನು ಆಧಾರವಾಗಿಟ್ಟುಕೊಂಡು ಕೀರ್ತನೆಗಳ ಲ್ಯಾಟಿನ್ ಪರಿಷ್ಕರಣವನ್ನು ಭಾಷಾಂತರಿಸಿದಾಗ, ಜನರು ಅದನ್ನು ಅಂಗೀಕರಿಸಿದರು. ಅದೇ ರೀತಿಯಲ್ಲಿ ಜೆರೋಮನು ಭಾಷಾಂತರಿಸಿದ ನಾಲ್ಕು ಸುವಾರ್ತಾ ಪುಸ್ತಕಗಳು ಸಹ ಜನರಿಂದ ಅಂಗೀಕರಿಸಲ್ಪಟ್ಟವು. ಅದೇ ಸಮಯದಲ್ಲಿ ಅವನ ಭಾಷಾಂತರವನ್ನು ಟೀಕಿಸುವವರೂ ಇದ್ದರು. “ತಿರಸ್ಕಾರಾರ್ಹ ಮನೋಭಾವವಿದ್ದ ಕೆಲವು ವ್ಯಕ್ತಿಗಳು, ಪುರಾತನ ಜನರ ಅಧಿಕಾರಕ್ಕೆ ಹಾಗೂ ಇಡೀ ಲೋಕದ ಇಷ್ಟಕ್ಕೆ ವಿರುದ್ಧವಾಗಿ, ಸುವಾರ್ತೆಯಲ್ಲಿದ್ದ ಭಾಗಗಳನ್ನು ಸರಿಪಡಿಸಲು ನಾನು ಪ್ರಯತ್ನಿಸಿದ್ದೆ ಎಂದು ನನ್ನ ಮೇಲೆ ಉದ್ದೇಶಪೂರ್ವಕವಾಗಿ ಅಪವಾದ ಹೊರಿಸುತ್ತಿದ್ದರು” ಎಂದು ಜೆರೋಮನು ಬರೆದನು. ಸಾ.ಶ. 384ರಲ್ಲಿ ಪೋಪ್ ದಮಾಸಸ್ ಮೃತಪಟ್ಟ ಬಳಿಕ, ಅಂತಹ ದೂಷಣೆಗಳು ಇನ್ನೂ ಹೆಚ್ಚಾದವು. ಹೊಸದಾಗಿ ಬಂದ ಪೋಪನೊಂದಿಗೆ ಜೆರೋಮನಿಗೆ ಒಳ್ಳೆಯ ಸಂಬಂಧವಿರದಿದ್ದ ಕಾರಣ, ಜೆರೋಮನು ರೋಮನ್ನು ಬಿಟ್ಟುಹೋಗಲು ನಿರ್ಧರಿಸಿದನು. ಪುನಃ ಜೆರೋಮನು ಪೂರ್ವದ ಕಡೆಗೆ ಪ್ರಯಾಣ ಬೆಳೆಸಿದನು.
ಹೀಬ್ರು ಭಾಷೆಯ ವಿದ್ವಾಂಸನಾಗುವುದು
ಸಾ.ಶ. 386ರಲ್ಲಿ ಜೆರೋಮನು ಬೆತ್ಲೆಹೇಮಿಗೆ ಹೋಗಿ ನೆಲೆಸಿದನು. ಅವನ ಉಳಿದ ಜೀವಮಾನವೆಲ್ಲ ಅವನು ಬೆತ್ಲೆಹೇಮಿನಲ್ಲಿಯೇ ಕಳೆಯಲಿಕ್ಕಿದ್ದನು. ಅವನ ಜೊತೆ ನಿಷ್ಠಾವಂತ ಹಿಂಬಾಲಕರ ಒಂದು ಚಿಕ್ಕ ಗುಂಪು ಸಹ ಇತ್ತು; ಈ ಗುಂಪಿನಲ್ಲಿ, ರೋಮ್ನಿಂದ ಬಂದಿದ್ದ ಉದಾತ್ತಗುಣದ ಒಬ್ಬ ಶ್ರೀಮಂತ ಸ್ತ್ರೀಯಾದ ಪೌಲಾ ಸಹ ಇದ್ದಳು. ಜೆರೋಮನ ಸಾರುವಿಕೆಯ ಫಲಿತಾಂಶವಾಗಿ, ಪೌಲಾ ಸಂನ್ಯಾಸ ಜೀವನ ಶೈಲಿಯನ್ನು ಅನುಸರಿಸತೊಡಗಿದ್ದಳು. ಅವಳಿಂದ ದೊರಕಿದ ಹಣಕಾಸಿನ ಸಹಾಯದಿಂದ, ಜೆರೋಮನ ಮಾರ್ಗದರ್ಶನದ ಕೆಳಗೆ ಒಂದು ಸಂನ್ಯಾಸಿಮಠವು ಸ್ಥಾಪಿಸಲ್ಪಟ್ಟಿತು. ಅಲ್ಲಿ ಅವನು ತನ್ನ ಪಾಂಡಿತ್ಯಪೂರ್ಣ ಕೆಲಸವನ್ನು ಮುಂದುವರಿಸಿದನು ಹಾಗೂ ತನ್ನ ಜೀವಿತದಲ್ಲಿ ಮಾಡಬೇಕಾದ ಭಾಷಾಂತರದ ಮಹಾಕಾರ್ಯವನ್ನು ಪೂರ್ಣಗೊಳಿಸಿದನು.
ಜೆರೋಮನು ಪ್ಯಾಲೆಸ್ಟೀನ್ನಲ್ಲಿ ವಾಸಿಸುತ್ತಿದ್ದುದರಿಂದ, ಅವನಿಗೆ ತನ್ನ ಹೀಬ್ರು ಭಾಷಾ ಜ್ಞಾನವನ್ನು ಉತ್ತಮಗೊಳಿಸಿಕೊಳ್ಳುವ ಅವಕಾಶವು ಸಿಕ್ಕಿತು. ಹೀಬ್ರು ಭಾಷೆಯ ಅತಿ ಕಷ್ಟಕರವಾದ ಅಂಶಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಅವನು ಹಣಕೊಟ್ಟು ಅನೇಕ ಯೆಹೂದಿ ಶಿಕ್ಷಕರಿಂದ ಸಹಾಯ ಪಡೆದನು. ಒಬ್ಬ ಶಿಕ್ಷಕನು ಸಹಾಯ ಮಾಡಿದರೂ ಅದನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ತಿಬೇರಿಯದ ಬಾರಾನಿನಾಸ್ ಎಂಬ ಶಿಕ್ಷಕನೊಬ್ಬನ ಕುರಿತು ಜೆರೋಮನು ಹೇಳಿದ್ದು: “ರಾತ್ರಿ ವೇಳೆಯಲ್ಲಿ ನನಗೆ ಕಲಿಸುವಂತೆ ಬಾರಾನಿನಾಸ್ನ ಮನವೊಪ್ಪಿಸಲಿಕ್ಕೆ ನಾನು ತುಂಬ ಕಷ್ಟಪಡಬೇಕಾಯಿತು ಮತ್ತು ತುಂಬ ಹಣವನ್ನು ವೆಚ್ಚಮಾಡಬೇಕಾಯಿತು.” ಅವರು ರಾತ್ರಿ ವೇಳೆಯಲ್ಲಿ ಏಕೆ ಅಭ್ಯಾಸಮಾಡುತ್ತಿದ್ದರು? ಏಕೆಂದರೆ ಒಬ್ಬ “ಕ್ರೈಸ್ತ”ನೊಂದಿಗೆ ಸಹವಾಸಮಾಡಿದರೆ ಯೆಹೂದಿ ಸಮಾಜವು ತನ್ನ ಬಗ್ಗೆ ಏನು ತಿಳಿದುಕೊಳ್ಳುತ್ತದೋ ಎಂಬ ಭಯ ಬಾರಾನಿನಾಸ್ನಿಗಿತ್ತು!
ಜೆರೋಮನ ದಿನಗಳಲ್ಲಿ, ಹೀಬ್ರು ಭಾಷೆಯನ್ನು ಮಾತಾಡುವ ಅನ್ಯರು, ಕಂಠದಿಂದ ಮಾಡುವ ಉಚ್ಚಾರಣೆಗಳನ್ನು ಸರಿಯಾಗಿ ಉಚ್ಚರಿಸಲು ಅಸಮರ್ಥರಾಗಿದ್ದರಿಂದ, ಯೆಹೂದ್ಯರು ಅವರನ್ನು ನೋಡಿ ಅಪಹಾಸ್ಯಮಾಡುತ್ತಿದ್ದರು. ಆದರೂ, ಬಹಳಷ್ಟು ಪ್ರಯತ್ನವನ್ನು ಮಾಡುವ ಮೂಲಕ ಜೆರೋಮನು, ಈ ಉಚ್ಚಾರಣೆಗಳನ್ನು ಕರಗತಮಾಡಿಕೊಳ್ಳಲು ಶಕ್ತನಾದನು. ಅಷ್ಟುಮಾತ್ರವಲ್ಲ, ಜೆರೋಮನು ಅನೇಕಾನೇಕ ಹೀಬ್ರು ಪದಗಳನ್ನು ಲ್ಯಾಟಿನ್ ಭಾಷೆಗೆ ಲಿಪ್ಯಂತರ (ಟ್ರಾನ್ಸ್ಲಿಟ್ರೇಟ್) ಮಾಡಿದನು. ಇದು ಅವನಿಗೆ ಪದಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಸಹಾಯ ಮಾಡಿತಲ್ಲದೆ, ಆ ಸಮಯದಲ್ಲಿದ್ದ ಹೀಬ್ರು ಉಚ್ಚಾರಣೆಯನ್ನು ಸಹ ಸಂರಕ್ಷಿಸಿತು.
ಜೆರೋಮನ ಅತ್ಯಂತ ದೊಡ್ಡ ವಿವಾದ
ಜೆರೋಮನು ಬೈಬಲಿನ ಎಷ್ಟು ಭಾಗವನ್ನು ಭಾಷಾಂತರಮಾಡುವಂತೆ ಪೋಪ್ ದಮಾಸಸ್ ಉದ್ದೇಶಿಸಿದ್ದನು ಎಂಬುದು ಎಲ್ಲೂ ಸ್ಪಷ್ಟವಾಗಿ ಕಂಡುಬಂದಿಲ್ಲ. ಆದರೆ ಜೆರೋಮನು ಈ ಭಾಷಾಂತರದ ಕೆಲಸವನ್ನು ಯಾವ ದೃಷ್ಟಿಕೋನದಿಂದ ವೀಕ್ಷಿಸಿದನು ಎಂಬ ವಿಷಯದಲ್ಲಿ ಯಾವುದೇ ಸಂಶಯವಿಲ್ಲ. ಜೆರೋಮನು ಏಕಾಗ್ರಚಿತ್ತನಾಗಿದ್ದನು ಮತ್ತು ನಿರ್ಧಾರಾತ್ಮಕ ಮನೋಭಾವದವನಾಗಿದ್ದನು. “ಚರ್ಚಿಗೆ ತುಂಬ ಉಪಯುಕ್ತಕರವಾಗಿದ್ದ, ಭವಿಷ್ಯತ್ತಿನ ಸಂತತಿಗೆ ಯೋಗ್ಯವಾಗಿದ್ದ” ಸಾಹಿತ್ಯವನ್ನು ಉತ್ಪಾದಿಸುವುದು ಅವನ ಕಡುಬಯಕೆಯಾಗಿತ್ತು. ಆದುದರಿಂದ, ಇಡೀ ಬೈಬಲಿನ ಪರಿಷ್ಕೃತ ಲ್ಯಾಟಿನ್ ಭಾಷಾಂತರವನ್ನು ಲಭ್ಯಗೊಳಿಸುವ ನಿರ್ಧಾರವನ್ನು ಅವನು ಕೈಗೊಂಡನು.
ಹೀಬ್ರು ಶಾಸ್ತ್ರದ ಭಾಷಾಂತರವನ್ನು, ಸೆಪ್ಟ್ಯುಅಜಿಂಟ್ ಭಾಷಾಂತರದ ಆಧಾರದ ಮೇಲೆ ಮಾಡುವ ಉದ್ದೇಶ ಜೆರೋಮನಿಗಿತ್ತು. ಹೀಬ್ರು ಶಾಸ್ತ್ರದ ಈ ಗ್ರೀಕ್ ಭಾಷಾಂತರವು, ಮೂಲತಃ ಸಾ.ಶ.ಪೂ. ಮೂರನೆಯ ಶತಮಾನದಲ್ಲಿ ಭಾಷಾಂತರಿಸಲ್ಪಟ್ಟಿದ್ದು, ಅದು ನೇರವಾಗಿ ದೇವರಿಂದ ಪ್ರೇರಿಸಲ್ಪಟ್ಟಿತ್ತೆಂದು ಅನೇಕರು ನಂಬಿದ್ದರು. ಈ ಕಾರಣದಿಂದ, ಆ ಸಮಯದಲ್ಲಿ ಗ್ರೀಕ್ ಭಾಷೆಯನ್ನು ಮಾತಾಡುತ್ತಿದ್ದ ಜನರ ನಡುವೆ ಸೆಪ್ಟ್ಯುಅಜಿಂಟ್ ಭಾಷಾಂತರವು ಹೆಚ್ಚು ವ್ಯಾಪಕವಾಗಿ ವಿತರಿಸಲ್ಪಟ್ಟಿತ್ತು.
ಆದರೂ, ಜೆರೋಮನು ತನ್ನ ಭಾಷಾಂತರದ ಕೆಲಸವನ್ನು ಮುಂದುವರಿಸಿದಾಗ, ಗ್ರೀಕ್ ಹಸ್ತಪ್ರತಿಗಳಲ್ಲಿ ಅಸಂಗತ ವಿಷಯಗಳಿರುವುದನ್ನು ಅವನು ಕಂಡುಹಿಡಿದನು. ಈ ಮುಂಚೆ ಅದೇ ರೀತಿಯ ತಪ್ಪುಗಳು ಲ್ಯಾಟಿನ್ ಭಾಷೆಯಲ್ಲೂ ಇರುವುದನ್ನು ಅವನು ನೋಡಿದ್ದನು. ಜೆರೋಮನ ಆಶಾಭಂಗವು ಹೆಚ್ಚಾಯಿತು. ಕಟ್ಟಕಡೆಗೆ, ವಿಶ್ವಾಸಾರ್ಹವಾದ ರೀತಿಯಲ್ಲಿ ಭಾಷಾಂತರವನ್ನು ಮಾಡಬೇಕಾದರೆ, ತುಂಬ ಜನಪ್ರಿಯವಾಗಿರುವ ಸೆಪ್ಟ್ಯುಅಜಿಂಟ್ ಭಾಷಾಂತರವನ್ನು ಒಳಗೊಂಡು ಇತರ ಗ್ರೀಕ್ ಹಸ್ತಪ್ರತಿಗಳನ್ನು ಅಲಕ್ಷಿಸಬೇಕು, ಮತ್ತು ನೇರವಾಗಿ ಮೂಲ ಹೀಬ್ರು ಗ್ರಂಥಪಾಠವನ್ನೇ ಭಾಷಾಂತರದಲ್ಲಿ ಉಪಯೋಗಿಸಬೇಕು ಎಂಬ ನಿರ್ಧಾರಕ್ಕೆ ಅವನು ಬಂದನು.
ಆದರೆ ಈ ನಿರ್ಧಾರದಿಂದ ಅವನು ಕಟು ವಿರೋಧವನ್ನು ಎದುರಿಸಬೇಕಾಯಿತು. ಕೆಲವರು ಅವನನ್ನು, ಮೂಲಪಾಠವನ್ನು ಮೋಸದಿಂದ ತಿದ್ದುವವನು, ಪಾಷಂಡಿ, ಯೆಹೂದ್ಯರ ಪಕ್ಷವನ್ನು ಹಿಡಿಯಲಿಕ್ಕಾಗಿ ಚರ್ಚಿನ ಸಂಪ್ರದಾಯಗಳನ್ನು ತೊರೆದವನು ಎಂದು ತೆಗಳಿದರು. ಆ ಕಾಲದಲ್ಲಿ ಚರ್ಚಿನ ಪ್ರಮುಖ ದೇವತಾಶಾಸ್ತ್ರಜ್ಞನಾಗಿದ್ದ ಅಗಸ್ಟಿನನು ಸಹ, ಸೆಪ್ಟ್ಯುಅಜಿಂಟ್ ಭಾಷಾಂತರವನ್ನೇ ಆಧಾರವಾಗಿಟ್ಟುಕೊಂಡು ಭಾಷಾಂತರವನ್ನು ಮಾಡುವಂತೆ ಜೆರೋಮನ ಬಳಿ ಬೇಡಿಕೊಂಡನು. ಅಗಸ್ಟಿನನು ಹೇಳಿದ್ದು: “ಒಂದುವೇಳೆ ನಿನ್ನ ಭಾಷಾಂತರವು ಹೆಚ್ಚೆಚ್ಚು ಚರ್ಚುಗಳಲ್ಲಿ ಓದಿಸಲ್ಪಡುವಲ್ಲಿ, ಇದು ಬಹಳ ವಿಷಾದಕರ ಸಂಗತಿಯಾಗಿರುವುದು. ಏಕೆಂದರೆ ಶಾಸ್ತ್ರಗಳಲ್ಲಿ ಓದುವ ವಿಷಯಗಳನ್ನು ಕೇಳಿಸಿಕೊಂಡು, ಲ್ಯಾಟಿನ್ ಚರ್ಚುಗಳು ಹಾಗೂ ಗ್ರೀಕ್ ಚರ್ಚುಗಳ ಮಧ್ಯೆ ಭಿನ್ನತೆಗಳು ಉಂಟಾಗುವವು.”
ಹೌದು, ಪಶ್ಚಿಮ ಭಾಗದಲ್ಲಿರುವ ಚರ್ಚುಗಳು, ಹೀಬ್ರು ಮೂಲಪಾಠಗಳ ಮೇಲೆ ಆಧಾರಿತವಾದ ಜೆರೋಮನ ಲ್ಯಾಟಿನ್ ಭಾಷಾಂತರವನ್ನು ಉಪಯೋಗಿಸುವಾಗ, ಪೂರ್ವದಲ್ಲಿರುವ ಗ್ರೀಕ್ ಚರ್ಚುಗಳು ಸೆಪ್ಟ್ಯುಅಜಿಂಟ್ ಭಾಷಾಂತರವನ್ನು ಉಪಯೋಗಿಸುವಲ್ಲಿ, ಚರ್ಚು ವಿಭಾಗಿತವಾಗಬಹುದು ಎಂಬುದೇ ಅಗಸ್ಟಿನನ ಭಯಕ್ಕೆ ಕಾರಣವಾಗಿತ್ತು.b ಇದಕ್ಕೆ ಕೂಡಿಸಿ, ಜೆರೋಮನು ಮಾತ್ರವೇ ರುಜುಪಡಿಸಸಾಧ್ಯವಿದ್ದ ಒಂದು ಭಾಷಾಂತರವನ್ನು ಸಿದ್ಧಗೊಳಿಸುವ ಸಲುವಾಗಿ, ಸೆಪ್ಟ್ಯುಅಜಿಂಟ್ ಭಾಷಾಂತರವನ್ನು ಬದಿಗೆ ತಳ್ಳಿದ್ದಕ್ಕಾಗಿ ಅಗಸ್ಟಿನನು ಸಂದೇಹಗಳನ್ನು ವ್ಯಕ್ತಪಡಿಸಿದನು.
ಈ ಎಲ್ಲ ವಿರೋಧಗಳಿಂದ ಜೆರೋಮನ ಮೇಲೆ ಯಾವ ಪರಿಣಾಮವುಂಟಾಯಿತು? ಸ್ವಭಾವತಃ ಜೆರೋಮನು ತನ್ನ ವಿರೋಧಿಗಳ ಮಾತುಗಳಿಗೆ ಲಕ್ಷ್ಯಕೊಡಲಿಲ್ಲ. ಅವನು ನೇರವಾಗಿ ಹೀಬ್ರು ಮೂಲಪಾಠದಿಂದಲೇ ಭಾಷಾಂತರವನ್ನು ಮುಂದುವರಿಸಿದನು, ಮತ್ತು ಸಾ.ಶ. 405ನೆಯ ವರ್ಷದೊಳಗೆ ಅವನು ತನ್ನ ಲ್ಯಾಟಿನ್ ಭಾಷೆಯ ಬೈಬಲನ್ನು ಪೂರ್ಣಗೊಳಿಸಿದ್ದನು. ಅನೇಕ ವರ್ಷಗಳ ಬಳಿಕ ಅವನ ಭಾಷಾಂತರಕ್ಕೆ ವಲ್ಗೆಟ್ ಎಂಬ ಹೆಸರು ಕೊಡಲ್ಪಟ್ಟಿತು; ಸರ್ವಸಾಮಾನ್ಯವಾದ ರೀತಿಯಲ್ಲಿ ಈ ಭಾಷಾಂತರವು ಅಂಗೀಕರಿಸಲ್ಪಡುತ್ತದೆ ಎಂಬುದನ್ನು ಇದು ಸೂಚಿಸುತ್ತದೆ (ಲ್ಯಾಟಿನ್ ಶಬ್ದವಾದ ವಲ್ಗೆಟಸ್ನ ಅರ್ಥ, “ಸಾಮಾನ್ಯವಾದದ್ದು, ಹೆಚ್ಚು ಜನಪ್ರಿಯವಾದದ್ದು ಎಂದಾಗಿದೆ”).
ದೀರ್ಘಕಾಲಿಕ ಸಾಧನೆಗಳು
ಜೆರೋಮನು ಮಾಡಿದ ಹೀಬ್ರು ಶಾಸ್ತ್ರದ ಭಾಷಾಂತರವು, ಈಗಾಗಲೇ ಅಸ್ತಿತ್ವದಲ್ಲಿದ್ದ ಭಾಷಾಂತರದ ಕೇವಲ ಒಂದು ಪರಿಷ್ಕರಣವಾಗಿರಲಿಲ್ಲ. ಜೆರೋಮನ ಬೈಬಲ್ ಭಾಷಾಂತರವು, ಮುಂದಿನ ಸಂತತಿಯ ಬೈಬಲ್ ಅಭ್ಯಾಸ ಹಾಗೂ ಭಾಷಾಂತರದ ದಿಕ್ಕನ್ನೇ ಬದಲಾಯಿಸಿತು. “ಈ ವಲ್ಗೆಟ್ ಬೈಬಲು, ನಾಲ್ಕನೆಯ ಶತಮಾನದ ಸಾಹಿತ್ಯ ಲೋಕದ ಅತ್ಯಂತ ದೊಡ್ಡ ಹಾಗೂ ಪ್ರಭಾವಶಾಲಿಯಾದ ಸಾಧನೆಯಾಗಿ ಉಳಿದಿದೆ” ಎಂದು ಇತಿಹಾಸಕಾರನಾದ ವಿಲ್ ಡುರೆಂಟ್ ಹೇಳಿದನು.
ಜೆರೋಮನು ತುಂಬ ಕಟುವಾಗಿ ಮಾತನಾಡುವವನೂ, ಜಗಳಮಾಡುವ ವ್ಯಕ್ತಿತ್ವವುಳ್ಳವನೂ ಆಗಿದ್ದನು. ಆದರೂ ಅವನೊಬ್ಬನೇ ಬೈಬಲಿನ ಭಾಷಾಂತರವನ್ನು ಮಾಡಿ, ಪ್ರೇರಿತ ಹೀಬ್ರು ಮೂಲಪಾಠದಿಂದಲೇ ಬೈಬಲನ್ನು ಪರಿಶೋಧಿಸುವ ಮಾರ್ಗವನ್ನು ತೆರೆದನು. ಪುರಾತನ ಹೀಬ್ರು ಹಾಗೂ ಗ್ರೀಕ್ ಬೈಬಲ್ ಹಸ್ತಪ್ರತಿಗಳನ್ನು ಅವನು ತುಂಬ ಹುರುಪಿನಿಂದ ಹೋಲಿಸಿ ಅಭ್ಯಾಸಿಸಿದನು; ಆದರೆ ಆ ಹಸ್ತಪ್ರತಿಗಳು ಇಂದು ನಮ್ಮ ದಿನಗಳಲ್ಲಿ ಅಸ್ತಿತ್ವದಲ್ಲಿಲ್ಲ. ಇವನ ಭಾಷಾಂತರವು, ಮ್ಯಾಸರೀಟರೆಂಬ ಯೆಹೂದಿ ಬರಹಗಾರರ ಸಮಯಕ್ಕಿಂತಲೂ ಬಹಳ ಮುಂಚಿನದ್ದಾಗಿತ್ತು. ಆದುದರಿಂದ, ಬೈಬಲ್ ಮೂಲಪಾಠಗಳ ಬದಲಿ ಭಾಷಾಂತರಗಳನ್ನು ಹೋಲಿಸಿ ನೋಡಲು, ಈ ವಲ್ಗೆಟ್ ಬೈಬಲ್ ಅತ್ಯುತ್ತಮವಾದ ರೆಫರೆನ್ಸನ್ನು ಒದಗಿಸುತ್ತದೆ.
ಅವನ ವಿಪರೀತ ನಡವಳಿಕೆಯನ್ನು ಅಥವಾ ಧಾರ್ಮಿಕ ದೃಷ್ಟಿಕೋನಗಳನ್ನು ಮಾನ್ಯಮಾಡದಿದ್ದರೂ, ದೇವರ ವಾಕ್ಯವನ್ನು ಪ್ರೀತಿಸುವವರು, ಬೈಬಲ್ ಭಾಷಾಂತರದಲ್ಲಿ ಈ ವಿವಾದಾತ್ಮಕ ಮೂಲಕರ್ತನ ಶ್ರದ್ಧಾಪೂರ್ವಕವಾದ ಪ್ರಯತ್ನಗಳನ್ನು ಗಣ್ಯಮಾಡಸಾಧ್ಯವಿದೆ. ಮತ್ತು ಜೆರೋಮನು ತನ್ನ ಗುರಿಯನ್ನು ಸಾಧಿಸಿದನು. “ಭವಿಷ್ಯತ್ತಿನ ಸಂತತಿಗೆ ಯೋಗ್ಯವಾಗಿದ್ದ” ಒಂದು ಬೈಬಲನ್ನು ಅವನು ಉತ್ಪಾದಿಸಿದನು.
[ಅಧ್ಯಯನ ಪ್ರಶ್ನೆಗಳು]
a ಜೆರೋಮನ ಜೀವಿತದಲ್ಲಿ ನಡೆದ ಘಟನೆಗಳ ದಿನಾಂಕಗಳು ಹಾಗೂ ಕ್ರಮದ ಬಗ್ಗೆ ಎಲ್ಲ ಇತಿಹಾಸಕಾರರು ಸಹಮತದಿಂದಿಲ್ಲ.
b ಕಾಲಕಳೆದಂತೆ, ಪಾಶ್ಚಿಮಾತ್ಯ ಕ್ರೈಸ್ತಪ್ರಪಂಚದಲ್ಲಿ ಜೆರೋಮನ ಭಾಷಾಂತರವು ಮೂಲಭೂತ ಬೈಬಲಾಗಿ ಪರಿಣಮಿಸಿತು. ಅದೇ ಸಮಯದಲ್ಲಿ, ಪೂರ್ವದ ಕ್ರೈಸ್ತಪ್ರಪಂಚದಲ್ಲಿ ಇಂದಿನ ವರೆಗೂ ಸೆಪ್ಟ್ಯುಅಜಿಂಟ್ ಭಾಷಾಂತರದ ಬಳಕೆಯೇ ಮುಂದುವರಿಯುತ್ತಿದೆ.
[ಪುಟ 28 ರಲ್ಲಿರುವ ಚಿತ್ರ]
ಬೆತ್ಲೆಹೇಮಿನಲ್ಲಿರುವ ಜೆರೋಮನ ಪ್ರತಿಮೆ
[ಕೃಪೆ]
Garo Nalbandian
[ಪುಟ 26 ರಲ್ಲಿರುವ ಚಿತ್ರ ಕೃಪೆ]
ಮೇಲೆ ಎಡಭಾಗದಲ್ಲಿ, ಹೀಬ್ರು ಹಸ್ತಪ್ರತಿ: Courtesy of the Shrine of the Book, Israel Museum, Jerusalem; ಕೆಳಗೆ ಎಡಭಾಗದಲ್ಲಿ, ಸಿರಿಯನ್ ಹಸ್ತಪ್ರತಿ: Reproduced by kind permission of The Trustees of the Chester Beatty Library, Dublin; ಮೇಲೆ ಮಧ್ಯಭಾಗದಲ್ಲಿ, ಗ್ರೀಕ್ ಹಸ್ತಪ್ರತಿ: Courtesy of Israel Antiquities Authority