ಆಯ್ಕೆ ಮಾಡುವುದನ್ನು ಎತ್ತಿಹಿಡಿಯುವ ಒಂದು ತೀರ್ಪು
ವಿಶ್ವದಲ್ಲೆಲ್ಲ ಅತಿ ಪ್ರಸಿದ್ಧನಾಗಿರುವ ವ್ಯಕ್ತಿಯೇ, ತಿಳಿವಳಿಕೆಯ ಆಯ್ಕೆಯನ್ನು ಅನುಮೋದಿಸುತ್ತಾನೆ. ಆತನು ನಮ್ಮ ಸೃಷ್ಟಿಕರ್ತನೇ ಆಗಿದ್ದಾನೆ. ಆತನಿಗೆ ಮಾನವನ ಅಗತ್ಯಗಳ ಕುರಿತಾಗಿ ಅಪರಿಮಿತವಾದ ಜ್ಞಾನವಿದೆ. ಆತನು ನಮಗೆ ಉಪದೇಶ, ಎಚ್ಚರಿಕೆ ಮತ್ತು ನಾವು ತೆಗೆದುಕೊಳ್ಳಬೇಕಾದ ಮಾರ್ಗಕ್ರಮದ ಕುರಿತಾಗಿ ಮಾರ್ಗದರ್ಶನವನ್ನು ಉದಾರಭಾವದಿಂದ ಕೊಡುತ್ತಾನೆ. ಆದರೆ ಅದೇ ಸಮಯದಲ್ಲಿ, ತನ್ನ ಬುದ್ಧಿವಂತ ಸೃಷ್ಟಿಜೀವಿಗಳಿಗೆ ಆತನೇ ಕೊಟ್ಟಿರುವ ಇಚ್ಛಾಸ್ವಾತಂತ್ರ್ಯವನ್ನು ಆತನು ಕಡೆಗಣಿಸುವುದಿಲ್ಲ. ಆತನ ಪ್ರವಾದಿಯಾದ ಮೋಶೆಯು, ದೇವರ ಹೊರನೋಟವನ್ನು ಹೀಗೆ ಪ್ರತಿಬಿಂಬಿಸಿದನು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; . . . ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.”—ಧರ್ಮೋಪದೇಶಕಾಂಡ 30:19.
ಈ ಮೂಲತತ್ವವು, ಔಷಧದ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ತಿಳಿವಳಿಕೆಯ ಆಯ್ಕೆ ಇಲ್ಲವೆ ತಿಳಿವಳಿಕೆಯ ಸಮ್ಮತಿ ಎಂಬ ವಿಚಾರವು, ಜಪಾನ್ ದೇಶದಲ್ಲಿ ಹಾಗೂ ಈ ಹಿಂದೆ ಅಷ್ಟೊಂದು ಸಾಮಾನ್ಯವಾಗಿರದಂತಹ ದೇಶಗಳಲ್ಲಿ ಸ್ವೀಕಾರಾರ್ಹವಾಗುತ್ತಿದೆ. ತಿಳಿವಳಿಕೆಯ ಸಮ್ಮತಿ ಏನಾಗಿದೆಯೆಂಬುದನ್ನು ಡಾಕ್ಟರ್ ಮೀಚೀಟಾರೊ ನಾಕಾಮೂರ ಹೀಗೆ ವರ್ಣಿಸಿದರು: “ಅದು, ರೋಗದ ವಿಷಯವಾಗಿ ಮತ್ತು ಮುಂದೇನಾಗುವುದೆಂಬುದರ ಕುರಿತಾಗಿ, ಚಿಕಿತ್ಸೆಯ ವಿಧಾನ ಮತ್ತು ಅದರ ಸಂಭವನೀಯ ಪಾರ್ಶ್ವ ಪರಿಣಾಮಗಳ ಕುರಿತಾಗಿ ವೈದ್ಯನು ರೋಗಿಗೆ ಸರಳವಾದ ಮಾತುಗಳಲ್ಲಿ ವಿವರಿಸುವುದೇ ಆಗಿದೆ. ಅದೇ ಸಮಯದಲ್ಲಿ, ರೋಗಿ ತನಗೆ ಬೇಕಾಗಿರುವ ಚಿಕಿತ್ಸೆಯ ವಿಧಾನವನ್ನು ನಿರ್ಣಯಿಸುವ ಹಕ್ಕನ್ನು ವೈದ್ಯನು ಗೌರವಿಸುತ್ತಾನೆ.”—ಜಪಾನ್ ಮೆಡಿಕಲ್ ಜರ್ನಲ್.
ಅನೇಕ ವರ್ಷಗಳಿಂದ ಜಪಾನಿನಲ್ಲಿರುವ ವೈದ್ಯರು, ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಈ ವಿಧವನ್ನು ವಿರೋಧಿಸಲು ಅನೇಕ ಕಾರಣಗಳನ್ನು ಕೊಟ್ಟಿದ್ದಾರೆ. ಮತ್ತು ನ್ಯಾಯಾಲಯಗಳು ಈ ವೈದ್ಯಕೀಯ ಪದ್ಧತಿಗೆ ತಲೆಬಾಗಿವೆ. ಆದುದರಿಂದಲೇ, 1998ರ ಫೆಬ್ರವರಿ 9ರಂದು ಟೋಕ್ಯೊ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಟಾಕ್ಯೊ ಈನಾಬರವರು, ತಿಳಿವಳಿಕೆಯ ಆಯ್ಕೆಯನ್ನು ಎತ್ತಿಹಿಡಿದ ಒಂದು ತೀರ್ಪನ್ನು ಕೊಟ್ಟಾಗ ಅದೊಂದು ಐತಿಹಾಸಿಕ ಘಟನೆಯಾಯಿತು. ಆ ತೀರ್ಪು ಏನಾಗಿತ್ತು, ಮತ್ತು ಈ ವಿಷಯವನ್ನು ನ್ಯಾಯಾಲಯದ ವರೆಗೂ ಬರುವಂತೆ ಮಾಡಿದ ವಾದಾಂಶ ಏನಾಗಿತ್ತು?
ಈ ಹಿಂದೆ 1992ರ ಜುಲೈ ತಿಂಗಳಿನಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ 63 ವರ್ಷ ಪ್ರಾಯದ ಮೀಸಾಏ ಟಾಕೆಡಾಳು, ಟೋಕ್ಯೊ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬಂದಳು. ಅವಳಿಗೆ ಯಕೃತ್ತಿನಲ್ಲಿ ಮ್ಯಾಲಿಗ್ನೆಂಟ್ ಟ್ಯೂಮರ್ ಇದೆಯೆಂದು ತಿಳಿಸಲಾಯಿತು, ಮತ್ತು ಅದಕ್ಕಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ರಕ್ತವನ್ನು ದುರುಪಯೋಗಿಸಬಾರದೆಂದು ಹೇಳುವ ಬೈಬಲಿನ ಆಜ್ಞೆಗೆ ವಿಧೇಯಳಾಗಲು ಬಯಸುತ್ತಾ, ತನಗೆ ಕೇವಲ ರಕ್ತರಹಿತ ಚಿಕಿತ್ಸೆಯು ಕೊಡಲ್ಪಡಬೇಕೆಂಬ ಬಯಕೆಯನ್ನು ಅವಳು ತನ್ನ ವೈದ್ಯರಿಗೆ ಸ್ಪಷ್ಟವಾಗಿ ತಿಳಿಸಿದಳು. (ಆದಿಕಾಂಡ 9:3, 4; ಅ. ಕೃತ್ಯಗಳು 15:29) ಅವಳ ನಿರ್ಣಯದಿಂದಾಗಿ ಆಗುವ ಯಾವುದೇ ಅನಾಹುತದಿಂದ ವೈದ್ಯರನ್ನು ಮತ್ತು ಆಸ್ಪತ್ರೆಯನ್ನು ಮುಕ್ತಗೊಳಿಸುವ ಒಂದು ಫಾರ್ಮನ್ನು ವೈದ್ಯರು ಅವಳಿಂದ ಪಡೆದುಕೊಂಡರು. ನಿಮ್ಮ ಇಷ್ಟದಂತೆಯೇ ಚಿಕಿತ್ಸೆಮಾಡುವೆವೆಂದು ವೈದ್ಯರು ಅವಳಿಗೆ ಆಶ್ವಾಸನೆಯನ್ನಿತ್ತರು.
ಶಸ್ತ್ರಚಿಕಿತ್ಸೆಯ ನಂತರ, ಮೀಸಾಏ ಇನ್ನೂ ಔಷಧದ ಮಂಪರಿನಲ್ಲಿದ್ದಾಗ, ಅವಳಿಗೆ ರಕ್ತಪೂರಣವನ್ನು ಕೊಡಲಾಯಿತು. ಇದು ಅವಳು ಸ್ಪಷ್ಟವಾಗಿ ತಿಳಿಸಿದಂತಹ ಇಚ್ಛೆಗೆ ತೀರ ವಿರುದ್ಧವಾದದ್ದಾಗಿತ್ತು. ಅನಧಿಕೃತವಾಗಿ ಕೊಡಲ್ಪಟ್ಟಿರುವ ಈ ರಕ್ತಪೂರಣದ ವಿಷಯವನ್ನು ಗೋಪ್ಯವಾಗಿಡಲು ಪ್ರಯತ್ನಿಸಲಾಯಿತು. ಆದರೆ, ಆಸ್ಪತ್ರೆಯ ಕಾರ್ಮಿಕನೊಬ್ಬನು ಅದನ್ನು ಒಬ್ಬ ವಾರ್ತಾ ವರದಿಗಾರನಿಗೆ ರಹಸ್ಯವಾಗಿ ತಿಳಿಸಿದಾಗ ಆ ಗುಟ್ಟು ರಟ್ಟಾಯಿತು. ತನಗೆ ಅನಧಿಕೃತವಾಗಿ ರಕ್ತಪೂರಣವನ್ನು ಕೊಡಲಾಗಿದೆಯೆಂದು ಈ ಪ್ರಾಮಾಣಿಕ ಕ್ರೈಸ್ತ ಮಹಿಳೆಗೆ ಗೊತ್ತಾದಾಗ ಅವಳಿಗೆ ಹೇಗಾಗಿರಬೇಕೆಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ವೈದ್ಯಕೀಯ ಸಿಬ್ಬಂದಿಯು ತಮ್ಮ ಮಾತಿಗನುಸಾರ ನಡೆದುಕೊಂಡು, ತನ್ನ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವರೆಂದು ನಂಬುತ್ತಾ, ಅವಳು ಆ ಸಿಬ್ಬಂದಿಯ ಮೇಲೆ ಭರವಸೆಯನ್ನಿಟ್ಟಿದ್ದಳು. ವೈದ್ಯ/ರೋಗಿಯ ಸಂಬಂಧದ ಈ ಘೋರ ಉಲ್ಲಂಘನೆಯಿಂದಾಗಿ ಅವಳು ಅನುಭವಿಸಿದ ಭಾವನಾತ್ಮಕ ಬೇಗುದಿಯಿಂದಾಗಿ, ಮತ್ತು ತದ್ರೀತಿಯ ರಕ್ತರಹಿತ ಚಿಕಿತ್ಸೆಯನ್ನು ಬಯಸುವ ಇತರರನ್ನು ಇಂತಹ ವೈದ್ಯಕೀಯ ದುರುಪಚಾರದಿಂದ ತಪ್ಪಿಸಲಿಕ್ಕಾಗಿ ಒಂದು ಪೂರ್ವನಿದರ್ಶನವನ್ನು ಇಡುವ ನಿರೀಕ್ಷೆಯೊಂದಿಗೆ, ಅವಳು ಈ ವಿಷಯವನ್ನು ನ್ಯಾಯಾಲಯಕ್ಕೆ ಒಯ್ದಳು.
ಸಾರ್ವಜನಿಕ ಕ್ರಮ ಮತ್ತು ನೈತಿಕ ಮಟ್ಟಗಳು
ಟೋಕ್ಯೋ ಜಿಲ್ಲಾ ನ್ಯಾಯಾಲಯದ ಮೂವರು ನ್ಯಾಯಾಧೀಶರು ಈ ಮೊಕದ್ದಮೆಯ ಕುರಿತು ವಿಚಾರಣೆಮಾಡಿ, ವೈದ್ಯರ ಪಕ್ಷವನ್ನು ಹಿಡಿಯುತ್ತಾ ತೀರ್ಪನ್ನು ನೀಡಿದರು. ಈ ರೀತಿಯಲ್ಲಿ ಅವರು ತಿಳಿವಳಿಕೆಯ ಸಮ್ಮತಿಯ ವಿರುದ್ಧ ತೀರ್ಪನ್ನು ನೀಡಿದರು. 1997ರ ಮಾರ್ಚ್ 12ರಂದು ನೀಡಲ್ಪಟ್ಟ ಅವರ ತೀರ್ಪಿನಲ್ಲಿ, ಸಂಪೂರ್ಣವಾಗಿ ರಕ್ತರಹಿತವಾದ ಚಿಕಿತ್ಸೆಗಾಗಿ ಕರಾರನ್ನು ಮಾಡುವ ಯಾವುದೇ ಪ್ರಯತ್ನವು, ಕಾನೂನುಸಮ್ಮತವಲ್ಲವೆಂದು ಅವರು ತಿಳಿಸಿದರು. ಒಂದು ಅಪಾಯಕರ ಸನ್ನಿವೇಶವು ಎದ್ದಾಗಲೂ ರಕ್ತವನ್ನು ಕೊಡದಿರುವಂತೆ ಒಬ್ಬ ವೈದ್ಯನು ವಿಶೇಷ ಕರಾರನ್ನು ಮಾಡುವುದು, ಕೋಜೋ ರ್ಯೋಸೋಕುa ಅಥವಾ ಸಾಮಾಜಿಕ ಮಟ್ಟಗಳನ್ನು ಉಲ್ಲಂಘಿಸುತ್ತದೆಂದು ಅವರು ತರ್ಕಿಸಿದರು. ಒಬ್ಬ ವೈದ್ಯನ ಪ್ರಧಾನ ಹಂಗು, ಸಾಧ್ಯವಿರುವಷ್ಟರ ಮಟ್ಟಿಗೆ ಜೀವವನ್ನು ಉಳಿಸುವುದಾಗಿದೆ, ಆದುದರಿಂದ ರೋಗಿಯ ಧಾರ್ಮಿಕ ನಂಬಿಕೆಗಳು ಏನೇ ಆಗಿರಲಿ, ಅಂತಹ ಒಂದು ಒಪ್ಪಂದವನ್ನು ಮಾಡುವುದು ಕಾನೂನುಸಮ್ಮತವಲ್ಲವೆಂಬುದು ಅವರ ಅಭಿಪ್ರಾಯವಾಗಿತ್ತು. ಒಬ್ಬ ವೈದ್ಯನ ವೃತ್ತಿಪರ ಅಭಿಪ್ರಾಯವು, ರೋಗಿಯು ಮುಂಚಿತವಾಗಿಯೇ ಮಾಡಬಹುದಾದ ಯಾವುದೇ ವೈದ್ಯಕೀಯ ವಿನಂತಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿದೆಯೆಂದು ಅವರು ಕೊನೆಯ ವಿಶ್ಲೇಷಣೆಯಲ್ಲಿ ತೀರ್ಪುನೀಡಿದರು.
ಇದೇ ಕಾರಣಗಳಿಗಾಗಿ, ಒಬ್ಬ ವೈದ್ಯನು ತಾನು ಮಾಡಲಿರುವ ಒಂದು ಶಸ್ತ್ರಚಿಕಿತ್ಸೆಯ ಮೂಲ ವಿಧಾನ, ಪರಿಣಾಮಗಳು ಮತ್ತು ಅಪಾಯಗಳನ್ನು ವಿವರಿಸಬಹುದಾದರೂ, “ತಾನು ರಕ್ತವನ್ನು ಕೊಡುವೆನೊ ಇಲ್ಲವೊ ಎಂಬುದನ್ನು ಹೇಳದೆ ಇರಸಾಧ್ಯವಿದೆ” ಎಂದು ಆ ನ್ಯಾಯಾಧೀಶರು ತಿಳಿಸಿದರು. ಅವರ ತೀರ್ಪು ಇದಾಗಿತ್ತು: “ಪ್ರತಿವಾದಿಗಳಾದ ವೈದ್ಯರು, ಯಾವುದೇ ಪರಿಸ್ಥಿತಿಯಲ್ಲಿ ರಕ್ತವನ್ನು ಕೊಡಬಾರದೆಂಬ ಫಿರ್ಯಾದಿಯ ಬಯಕೆಯನ್ನು ಅರ್ಥಮಾಡಿಕೊಂಡು, ತಾವು ಅವಳ ಇಚ್ಛೆಗನುಸಾರ ಮಾಡುವೆವೆಂಬಂತೆ ವರ್ತಿಸಿ, ಅವಳು ಆ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಳ್ಳುವಂತೆ ಮಾಡಿದ್ದು ಯಾವುದೇ ರೀತಿಯಲ್ಲಿ ಕಾನೂನುವಿರುದ್ಧ ಅಥವಾ ಅಯೋಗ್ಯವೆಂದು ಹೇಳಸಾಧ್ಯವಿಲ್ಲ.” ವೈದ್ಯರು ಹೀಗೆ ಮಾಡದೆ ಇರುತ್ತಿದ್ದಲ್ಲಿ, ರೋಗಿಯು ಶಸ್ತ್ರಚಿಕಿತ್ಸೆಯನ್ನು ಮಾಡಿಸಲು ನಿರಾಕರಿಸಿ, ಆಸ್ಪತ್ರೆಯನ್ನು ಬಿಟ್ಟುಹೋಗುವ ಸಾಧ್ಯತೆಯಿತ್ತೆಂದು ನೆನಸಲಾಯಿತು.
ನ್ಯಾಯಾಲಯದ ಆ ತೀರ್ಪು, ತಿಳಿವಳಿಕೆಯ ಸಮ್ಮತಿಯನ್ನು ಬೆಂಬಲಿಸುವವರನ್ನು ದಂಗುಬಡಿಸಿ, ದಿಗಿಲುಗೊಳಿಸಿತು. ಟಕೇಡ ಮೊಕದ್ದಮೆಯ ಕುರಿತಾದ ತೀರ್ಪು ಮತ್ತು ಜಪಾನಿನಲ್ಲಿ ತಿಳಿವಳಿಕೆಯ ಸಮ್ಮತಿಗಾಗಿರುವ ತೊಡಕುಗಳ ಕುರಿತು ಚರ್ಚಿಸುತ್ತಾ, ಪೌರ ಕಾನೂನಿನ ವಿಷಯದಲ್ಲಿ ಒಬ್ಬ ಪ್ರಧಾನ ಅಧಿಕಾರಿಯಾಗಿರುವ ಪ್ರೊಫೆಸರ್ ಟಾಕೂಆ ಯಾಮಾಡಾ ಬರೆದುದು: “ಈ ತೀರ್ಪಿಗಾಗಿ ಉಪಯೋಗಿಸಲ್ಪಟ್ಟಿರುವ ತರ್ಕವು ಸಮರ್ಥಿಸಲ್ಪಡುವಲ್ಲಿ, ರಕ್ತಪೂರಣದ ನಿರಾಕರಣೆ ಮತ್ತು ತಿಳಿವಳಿಕೆಯ ಸಮ್ಮತಿಯ ಕುರಿತ ಕಾನೂನುಬದ್ಧ ತತ್ವವು, ಗಾಳಿಯಲ್ಲಿ ಮಿಣುಗುತ್ತಿರುವ ಒಂದು ಮೇಣದಬತ್ತಿಯಂತೆ ಆಗುವುದು.” (ಕಾನೂನು ಪತ್ರಿಕೆಯಾದ ಹೋಗಾಕು ಕ್ಯೋಶಿಟ್ಸು) ಬಲಾತ್ಕಾರದಿಂದ ಕೊಡಲ್ಪಟ್ಟಿರುವ ಆ ರಕ್ತಪೂರಣವನ್ನು, “ಭರವಸೆಯ ಘೋರ ಉಲ್ಲಂಘನೆ, ಒಂದು ಅನಿರೀಕ್ಷಿತ ಆಕ್ರಮಣಕ್ಕೆ ಸಮಾನವಾದ ಸಂಗತಿ” ಎಂದು ಕಟುವಾದ ಮಾತುಗಳೊಂದಿಗೆ ಅವರು ಖಂಡಿಸಿದರು. ಭರವಸೆಯನ್ನು ನಾಶಗೊಳಿಸುವ ಅಂತಹ ಕಾರ್ಯವನ್ನು, “ಖಡಾಖಂಡಿತವಾಗಿಯೂ ಎಂದಿಗೂ ಅನುಮತಿಸಬಾರದು” ಎಂದು ಪ್ರೊಫೆಸರ್ ಯಾಮಾಡಾ ಕೂಡಿಸಿ ಹೇಳಿದರು.
ಮೀಸಾಏಯ ನಿರಭಿಮಾನಿ ಸ್ವಭಾವದಿಂದಾಗಿ, ಅವಳು ಪ್ರಚಾರಕ್ಕೆ ಗುರಿಯಾಗಲು ಬಯಸಲಿಲ್ಲ. ಆದರೆ ಯೆಹೋವನ ನಾಮ ಮತ್ತು ರಕ್ತದ ಪಾವಿತ್ರ್ಯದ ಕುರಿತಾದ ನೀತಿಯ ಮಟ್ಟಗಳನ್ನು ಎತ್ತಿಹಿಡಿಯುವುದರಲ್ಲಿ ತಾನು ಪಾಲ್ಗೊಳ್ಳಬಹುದೆಂಬುದನ್ನು ಗ್ರಹಿಸುತ್ತಾ, ಅವಳು ತನ್ನ ಪಾತ್ರವನ್ನು ವಹಿಸಲು ದೃಢನಿರ್ಧಾರವನ್ನು ಮಾಡಿದಳು. ಅವಳು ತನ್ನ ವಕೀಲನಿಗೆ ಬರೆದುದು: “ನಾನು ಧೂಳಿನ ಕಣ, ಅದಕ್ಕಿಂತಲೂ ಕಡೆ ಎಂದೂ ಹೇಳಬಹುದು. ನನ್ನಂತಹ ಅನರ್ಹ ವ್ಯಕ್ತಿಯನ್ನು ಏಕೆ ಉಪಯೋಗಿಸಲಾಗುತ್ತಿದೆಯೆಂದು ನಾನು ಯೋಚಿಸುತ್ತೇನೆ. ಆದರೆ ಕಲ್ಲುಗಳನ್ನು ಕೂಗುವಂತೆ ಮಾಡಬಲ್ಲ ಯೆಹೋವನು ಏನು ಹೇಳುತ್ತಾನೊ ಅದನ್ನು ನಾನು ಮಾಡಲು ಪ್ರಯತ್ನಿಸುವಾಗ, ಆತನು ನನಗೆ ಬಲವನ್ನು ನಿಶ್ಚಯವಾಗಿ ಕೊಡುವನು.” (ಮತ್ತಾಯ 10:18; ಲೂಕ 19:40) ಆ ಮೊಕದ್ದಮೆಗಾಗಿ ಸಾಕ್ಷಿಕಟಕಟೆಯಲ್ಲಿ ನಿಂತಿದ್ದಾಗ, ಆ ವಿಶ್ವಾಸದ್ರೋಹದಿಂದಾಗಿ ತಾನು ಅನುಭವಿಸಿದ ಭಾವನಾತ್ಮಕ ನೋವನ್ನು ಅವಳು ನಡುಗುವ ಧ್ವನಿಯಲ್ಲಿ ವರ್ಣಿಸಿದಳು. “ಅತ್ಯಾಚಾರಕ್ಕೊಳಗಾಗಿರುವ ಒಬ್ಬ ಸ್ತ್ರೀಯಂತೆ, ಮಾನಭಂಗ ಮಾಡಲ್ಪಟ್ಟಿರುವ ಅನಿಸಿಕೆ ನನಗಾಯಿತು.” ಅವಳು ಕೊಟ್ಟ ಸಾಕ್ಷ್ಯವು, ಆ ದಿನ ನ್ಯಾಯಾಲಯದಲ್ಲಿದ್ದ ಅನೇಕರನ್ನು ಕಣ್ಣೀರು ಸುರಿಸುವಂತೆ ಮಾಡಿತು.
ಅನಿರೀಕ್ಷಿತವಾದ ಉತ್ತೇಜನ
ಜಿಲ್ಲಾ ನ್ಯಾಯಾಲಯದ ಈ ತೀರ್ಪಿನಿಂದಾಗಿ, ತತ್ಕ್ಷಣವೇ ಆ ಮೊಕದ್ದಮೆಯನ್ನು ಉಚ್ಚ ನ್ಯಾಯಾಲಯಕ್ಕೆ ಅಪೀಲ್ ಮಾಡಲಾಯಿತು. ಮೇಲ್ಮನವಿಯ ನ್ಯಾಯಾಲಯದಲ್ಲಿನ ಆರಂಭದ ವಾದಗಳು 1997ರ ಜುಲೈ ತಿಂಗಳಿನಲ್ಲಿ ಆರಂಭವಾದವು. ಮತ್ತು ಈಗ ಕಳೆಗುಂದಿರುವುದಾದರೂ, ದೃಢಮನಸ್ಸಿನವಳಾದ ಮೀಸಾಏ ಕೂಡ ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ಅಲ್ಲಿ ಉಪಸ್ಥಿತಳಿದ್ದಳು. ಅವಳಲ್ಲಿ ಕ್ಯಾನ್ಸರ್ ರೋಗವು ಪುನಃ ತಲೆದೋರಿತ್ತು, ಮತ್ತು ಅವಳು ಹೆಚ್ಚು ದುರ್ಬಲಳಾಗುತ್ತಾ ಇದ್ದಳು. ಮುಖ್ಯ ನ್ಯಾಯಾಧೀಶನು, ಒಂದು ಅಸಾಮಾನ್ಯವಾದ ಕ್ರಮವನ್ನು ತೆಗೆದುಕೊಳ್ಳುತ್ತಾ, ನ್ಯಾಯಾಲಯವು ತೆಗೆದುಕೊಳ್ಳಲಿದ್ದ ನಿರ್ದೇಶನವನ್ನು ಸ್ಪಷ್ಟಪಡಿಸಿ ತಿಳಿಸಿದಾಗ, ಮೀಸಾಏ ತುಂಬ ಉತ್ತೇಜನವನ್ನು ಪಡೆದಳು. ಒಬ್ಬ ವೈದ್ಯನು, ತಾನು ರೋಗಿಯ ಇಷ್ಟದಂತೆ ಮಾಡುವೆನೆಂದು ನಟಿಸುತ್ತಾ, ಬೇರೇನನ್ನೊ ಮಾಡಲು ಗುಪ್ತವಾಗಿ ನಿರ್ಧರಿಸಿ, ರೋಗಿಯ ಇಷ್ಟವನ್ನು ಅಲಕ್ಷಿಸುವ ಹಕ್ಕು ಇದೆ ಎಂಬ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಮೇಲ್ಮನವಿಯ ನ್ಯಾಯಾಲಯವು ಒಪ್ಪಿಕೊಳ್ಳುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು. “ಅವರನ್ನು ಅಜ್ಞಾನಿಗಳಾಗಿಯೂ, ಅವಲಂಬಿತರನ್ನಾಗಿಯೂ ಇಡಿರಿ” ಎಂದರ್ಥವುಳ್ಳ “ಶೀರಾಶೀಮು ಬೆಕರಾಸು, ಯೋರಾಶೀಮು ಬೇಶಿ”b ಎಂಬ, ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ನೀತಿಯನ್ನು ವೈದ್ಯಕೀಯ ವೃತ್ತಿಯಲ್ಲಿರುವವರು ಅನ್ವಯಿಸುವುದನ್ನು ನ್ಯಾಯಾಲಯವು ಬೆಂಬಲಿಸುವುದಿಲ್ಲವೆಂದು ಮುಖ್ಯ ನ್ಯಾಯಾಧೀಶರು ಹೇಳಿದರು. ತದನಂತರ ಮೀಸಾಏ ಹೇಳಿದ್ದು: “ನ್ಯಾಯಾಧೀಶರ ನ್ಯಾಯವಾದ ಹೇಳಿಕೆಯನ್ನು ಕೇಳಿ ನನಗೆ ತುಂಬ ಸಂತೋಷವಾಗುತ್ತದೆ. ಇದು, ಜಿಲ್ಲಾ ನ್ಯಾಯಾಲಯದ ಹಿಂದಿನ ತೀರ್ಪಿಗಿಂತ ತೀರ ಭಿನ್ನವಾಗಿದೆ.” ಅವಳು ಕೂಡಿಸಿ ಹೇಳಿದ್ದು: “ಇದಕ್ಕಾಗಿಯೇ ನಾನು ಯೆಹೋವನಿಗೆ ಪ್ರಾರ್ಥಿಸುತ್ತಿದ್ದೆ.”
ಮುಂದಿನ ತಿಂಗಳು ಮೀಸಾಏ ಮರಣಹೊಂದಿದಳು. ಆ ಸಮಯದಲ್ಲಿ ಅವಳ ಪ್ರೀತಿಯ ಕುಟುಂಬ ಮತ್ತು ಬೇರೊಂದು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯವರು ಅವಳ ಬಳಿ ಇದ್ದರು. ಆ ಆಸ್ಪತ್ರೆಯಲ್ಲಿ ಅವರ ಪ್ರಾಮಾಣಿಕ ನಂಬಿಕೆಗಳು ಅರ್ಥಮಾಡಿಕೊಳ್ಳಲ್ಪಟ್ಟು, ಗೌರವಿಸಲ್ಪಟ್ಟಿದ್ದವು. ಅವಳ ಮರಣದಿಂದ ತುಂಬ ದುಃಖಿತನಾಗಿದ್ದರೂ, ಅವಳ ಮಗ ಮಾಸಾಮಿ ಮತ್ತು ಇತರ ಕುಟುಂಬ ಸದಸ್ಯರು, ಅವಳ ಇಚ್ಚೆಗನುಸಾರವಾಗಿ ಮೊಕದ್ದಮೆಯನ್ನು ಕೊನೆಮುಟ್ಟಿಸುವ ದೃಢಮನಸ್ಸುಳ್ಳವರಾಗಿದ್ದರು.
ತೀರ್ಪು
ಕೊನೆಗೆ, 1998ರ ಫೆಬ್ರವರಿ 9ರಂದು, ಉಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರು, ಹಿಂದಿನ ತೀರ್ಪಿಗೆ ವಿರುದ್ಧವಾದ ತಮ್ಮ ತೀರ್ಪನ್ನು ಕೊಟ್ಟರು. ಆ ಚಿಕ್ಕ ನ್ಯಾಯಾಲಯ ಕೋಣೆಯಲ್ಲಿ, ಇಷ್ಟರ ವರೆಗೆ ಈ ಮೊಕದ್ದಮೆಯಲ್ಲಿ ತುಂಬ ಆಸಕ್ತಿಯನ್ನು ತೋರಿಸಿದಂತಹ ವರದಿಗಾರರು, ವಿದ್ಯಾರ್ಥಿಗಳು ಮತ್ತು ಇನ್ನಿತರರು ತುಂಬಿಕೊಂಡಿದ್ದರು. ಪ್ರಮುಖ ವಾರ್ತಾಪತ್ರಿಕೆಗಳು ಮತ್ತು ಟೆಲಿವಿಷನ್ ಸ್ಟೇಷನ್ಗಳು ಈ ತೀರ್ಪಿನ ಕುರಿತಾಗಿ ವರದಿಸಿದವು. ಕೆಲವು ತಲೆಬರಹಗಳು ಹೀಗಿದ್ದವು: “ನ್ಯಾಯಾಲಯ: ರೋಗಿಗಳು ಚಿಕಿತ್ಸೆಯನ್ನು ನಿರಾಕರಿಸಸಾಧ್ಯವಿದೆ”; “ಉಚ್ಚ ನ್ಯಾಯಾಲಯ: ರಕ್ತಪೂರಣವು ಹಕ್ಕುಗಳ ಉಲ್ಲಂಘನೆಯಾಗಿದೆ”; “ಬಲಾತ್ಕಾರದಿಂದ ರಕ್ತಪೂರಣವನ್ನು ಕೊಟ್ಟ ವೈದ್ಯನು ನ್ಯಾಯಾಲಯದಲ್ಲಿ ಸೋಲುತ್ತಾನೆ”; ಮತ್ತು “ರಕ್ತಪೂರಣವನ್ನು ಪಡೆದುಕೊಂಡದಕ್ಕಾಗಿ ಯೆಹೋವನ ಸಾಕ್ಷಿಯೊಬ್ಬಳು ಪರಿಹಾರ ಧನವನ್ನು ಪಡೆಯುತ್ತಾಳೆ.”
ತೀರ್ಪಿನ ಕುರಿತಾದ ವರದಿಗಳು ನಿಷ್ಕೃಷ್ಟವಾಗಿದ್ದವು ಮತ್ತು ತುಂಬ ಅನುಕೂಲಕರವಾಗಿದ್ದವು. ದ ಡೇಲಿ ಯೊಮೀಉರೀ ವಾರ್ತಾಪತ್ರಿಕೆಯು ವರದಿಸಿದ್ದು: “ಒಬ್ಬ ರೋಗಿಯು ನಿರಾಕರಿಸುವ ಚಿಕಿತ್ಸಾವಿಧಾನಗಳನ್ನು ವೈದ್ಯರು ಉಪಯೋಗಿಸುವುದು ಅಯೋಗ್ಯವಾಗಿದೆಯೆಂದು ನ್ಯಾಯಾಧೀಶ ಟಾಕಿಯೊ ಇನಾಬಾ ಹೇಳಿದರು.” ಅದು ಇದನ್ನೂ ಸ್ಪಷ್ಟವಾಗಿ ತಿಳಿಸಿತು: “ಅವಳಿಗೆ [ರಕ್ತ ಪೂರಣವನ್ನು] ಕೊಟ್ಟ ವೈದ್ಯರು, ಅವಳು ತನ್ನ ಚಿಕಿತ್ಸೆಯ ಆಯ್ಕೆಮಾಡುವ ಅವಕಾಶವನ್ನು ಅವಳಿಂದ ದೋಚಿಕೊಂಡರು.”
ಜೀವವು ಅಪಾಯದಲ್ಲಿ ಸಿಕ್ಕಿಕೊಂಡಿರುವ ಸನ್ನಿವೇಶವು ಬರುವಲ್ಲಿಯೂ, ರಕ್ತವು ಉಪಯೋಗಿಸಲ್ಪಡುವುದಿಲ್ಲ ಎಂದು ಎರಡೂ ಪಕ್ಷಗಳು ಒಪ್ಪಿಕೊಂಡಿರುವ ಒಂದು ಕರಾರು ಇತ್ತೆಂಬುದಕ್ಕೆ ಈ ಮೊಕದ್ದಮೆಯಲ್ಲಿ ಸಾಕಷ್ಟು ರುಜುವಾತಿರಲಿಲ್ಲವೆಂದು ನ್ಯಾಯಾಲಯಕ್ಕೆ ಅನಿಸಿತೆಂದು ಆಸಾಹೀ ಶೀಂಬುನ್ ಹೇಳಿತು. ಆದರೂ, ಅಂತಹ ಒಂದು ಕರಾರಿನ ಕಾನೂನುಬದ್ಧತೆಯ ಕುರಿತಾಗಿ ಹಿಂದಿನ ನ್ಯಾಯಾಲಯದ ಅಭಿಪ್ರಾಯದೊಂದಿಗೆ ನ್ಯಾಯಾಧೀಶರು ಒಪ್ಪಿಕೊಳ್ಳಲಿಲ್ಲವೆಂಬುದನ್ನು ಅದು ತೋರಿಸಿತು. ಅವರು ಹೀಗಂದಿದ್ದರು: “ಯಾವುದೇ ಪರಿಸ್ಥಿತಿಯಲ್ಲಿ, ರಕ್ತಪೂರಣವು ಕೊಡಲ್ಪಡಬಾರದೆಂಬ ಒಂದು ಸುವಿಚಾರಿತ ಒಪ್ಪಂದವು ಸಂಬಂಧಪಟ್ಟ ಪಕ್ಷಗಳ ನಡುವೆ ಇರುವಲ್ಲಿ, ಅದು ಸಾರ್ವಜನಿಕ ಕ್ರಮಕ್ಕೆ ವಿರುದ್ಧವಾಗಿದ್ದು, ಹೀಗೆ ಕಾನೂನುಸಮ್ಮತವಾಗಿಲ್ಲವೆಂದು ಈ ನ್ಯಾಯಾಲಯವು ಪರಿಗಣಿಸುವುದಿಲ್ಲ.” “ಪ್ರತಿಯೊಬ್ಬ ಮನುಷ್ಯನು ಒಂದಲ್ಲ ಒಂದು ದಿನ ಸಾಯಲೇಬೇಕು, ಮತ್ತು ಮರಣದ ಆ ಕ್ಷಣದ ಕಡೆಗಿನ ಕಾರ್ಯಗತಿಯನ್ನು ಪ್ರತಿಯೊಬ್ಬ ವ್ಯಕ್ತಿಯು ನಿರ್ಣಯಿಸಸಾಧ್ಯವಿದೆ” ಎಂಬ ನ್ಯಾಯಾಧೀಶರ ದೃಷ್ಟಿಕೋನವನ್ನೂ ಆ ವಾರ್ತಾಪತ್ರಿಕೆಯು ತಿಳಿಸಿತು.
ವಾಸ್ತವದಲ್ಲಿ, ಯೆಹೋವನ ಸಾಕ್ಷಿಗಳು ಈ ವಿಷಯದ ಕುರಿತು ಸಂಶೋಧನೆಯನ್ನು ಮಾಡಿದ್ದಾರೆ. ಮತ್ತು ತಾವು ಜೀವಿಸಲು ಅತ್ಯುತ್ತಮವಾದ ಮಾರ್ಗವನ್ನು ಆಯ್ಕೆಮಾಡಿದ್ದೇವೆಂದು ಅವರಿಗೆ ಮನವರಿಕೆಯಾಗಿದೆ. ಆ ಮಾರ್ಗದಲ್ಲಿ, ರಕ್ತಪೂರಣಗಳ ವಿದಿತ ಅಪಾಯಗಳನ್ನು ತಿರಸ್ಕರಿಸಿ, ಅದಕ್ಕೆ ಬದಲಾಗಿ, ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಮತ್ತು ದೇವರ ನಿಯಮಕ್ಕೆ ಹೊಂದಿಕೆಯಲ್ಲಿರುವ ರಕ್ತರಹಿತ ಚಿಕಿತ್ಸಾಕ್ರಮಗಳನ್ನು ಸ್ವೀಕರಿಸುವುದು ಸೇರಿದೆ. (ಅ. ಕೃತ್ಯಗಳು 21:25) ಸಾಂವಿಧಾನಿಕ ಕಾನೂನಿನ ಒಬ್ಬ ಪ್ರಸಿದ್ಧ ಜಪಾನೀ ಪ್ರೊಫೆಸರನು ಹೇಳಿದ್ದು: “ವಾಸ್ತವದಲ್ಲಿ, [ರಕ್ತ ಪೂರಣ] ಚಿಕಿತ್ಸೆಯನ್ನು ನಿರಾಕರಿಸುವುದು, ‘ಸಾಯುವುದು ಹೇಗೆ’ ಎಂಬುದನ್ನು ಆಯ್ದುಕೊಳ್ಳುವ ಸಂಗತಿಯಾಗಿರುವುದಿಲ್ಲ, ಬದಲಾಗಿ ಜೀವಿಸುವುದು ಹೇಗೆ ಎಂಬ ಆಯ್ಕೆಯ ಸಂಗತಿಯಾಗಿರುತ್ತದೆ.”
ಉಚ್ಚ ನ್ಯಾಯಾಲಯವು ಮಾಡಿರುವ ತೀರ್ಪು, ವೈದ್ಯರಿಗಿರುವ ನಿರ್ಧಾರಸ್ವಾತಂತ್ರ್ಯದ ಹಕ್ಕುಗಳು, ಕೆಲವರು ನೆನಸಿರುವಷ್ಟು ವಿಶಾಲವಾಗಿರುವುದಿಲ್ಲ ಎಂಬುದನ್ನು ಅವರಿಗೆ ಎಚ್ಚರಿಸಬೇಕು. ಮತ್ತು ಇನ್ನೂ ಹೆಚ್ಚಿನ ಆಸ್ಪತ್ರೆಗಳು ನೀತಿಸೂತ್ರ ನಿರ್ದೇಶನಗಳನ್ನು ಸ್ಥಾಪಿಸುವಂತೆ ಮಾಡಬೇಕು. ನ್ಯಾಯಾಲಯದ ಈ ತೀರ್ಪು ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟು, ತಮ್ಮ ಚಿಕಿತ್ಸೆಯ ವಿಷಯದಲ್ಲಿ ನಿರ್ಣಯವನ್ನು ಮಾಡುವ ಯಾವುದೇ ಹಕ್ಕಿಲ್ಲದಿರುವ ರೋಗಿಗಳೆಲ್ಲರಿಗೆ ಉತ್ತೇಜನದಾಯಕವಾಗಿದೆ. ಆದರೆ, ಎಲ್ಲ ಪಕ್ಷಗಳು ಅದನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿಲ್ಲ. ಸರಕಾರಿ ಆಸ್ಪತ್ರೆ ಮತ್ತು ಆ ಮೂವರು ವೈದ್ಯರು ಈ ಮೊಕದ್ದಮೆಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲ್ ಮಾಡಿದ್ದಾರೆ. ವಿಶ್ವದ ಪರಮಾಧಿಕಾರಿಯಂತೆಯೇ, ಜಪಾನಿನ ಅತ್ಯುಚ್ಚ ನ್ಯಾಯಾಲಯವು ಸಹ ರೋಗಿಯ ಹಕ್ಕುಗಳನ್ನು ಎತ್ತಿಹಿಡಿಯುವುದೊ ಎಂಬುದನ್ನು ನಾವು ಕಾದುನೋಡಬೇಕು.
[ಅಧ್ಯಯನ ಪ್ರಶ್ನೆಗಳು]
a ಇದು ಕಾನೂನುಬದ್ಧವಾಗಿ ನಿರೂಪಿಸಲ್ಪಟ್ಟಿರದ ಒಂದು ವಿಚಾರವಾಗಿದೆ. ಅದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅನ್ವಯಿಸುವುದು ಮ್ಯಾಜಿಸ್ಟ್ರೇಟ್ಗೆ ಬಿಡಲ್ಪಟ್ಟಿದೆ.
b ಇದು, ತಮ್ಮ ಪ್ರಜೆಗಳ ಮೇಲೆ ಆಳ್ವಿಕೆಯನ್ನು ನಡಿಸುವುದರಲ್ಲಿ ಟೊಕುಗಾವಾ ಅವಧಿಯ ಊಳಿಗಮಾನ್ಯ ಪದ್ಧತಿಯ ಧಣಿಗಳ ಸೂತ್ರವಾಗಿತ್ತು.