ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳುತ್ತಾ ಇರ್ರಿ!
“ನನ್ನ ಪ್ರಿಯರೇ, . . . ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.”—ಫಿಲಿಪ್ಪಿ 2:12.
1, 2. ತಮ್ಮ ಜೀವಿತಗಳು ಏನಾಗಿ ಪರಿಣಮಿಸುತ್ತವೆ ಎಂಬುದರ ಮೇಲೆ ತಮಗೆ ಯಾವುದೇ ನಿಯಂತ್ರಣವಿಲ್ಲವೆಂದು ಭಾವಿಸುವಂತೆ ಯಾವ ಜನಪ್ರಿಯ ಅಭಿಪ್ರಾಯಗಳು ಕಾರಣವಾಗಿವೆ?
“ನೀವು ಈ ರೀತಿಯಲ್ಲೇ ಜನಿಸಿದ್ದೀರೊ?” ಇತ್ತೀಚೆಗೆ ಆ ಪ್ರಶ್ನೆಯು ಒಂದು ಜನಪ್ರಿಯ ಪತ್ರಿಕೆಯ ಮುಖಪುಟದಲ್ಲಿ ತೋರಿಬಂತು. ಆ ತಲೆಬರಹದ ಕೆಳಗೆ ಈ ಪದಗಳು ಇದ್ದವು: “ವ್ಯಕ್ತಿತ್ವ, ಪ್ರಕೃತಿ, ಜೀವನ ಆಯ್ಕೆಗಳು ಸಹ. ಅದು ಬಹುಮಟ್ಟಿಗೆ ನಿಮ್ಮ ವಂಶವಾಹಿಗಳಲ್ಲಿದೆ ಎಂದು ಹೊಸ ಸಂಶೋಧನೆಗಳು ತೋರಿಸುತ್ತವೆ.” ಅಂತಹ ಹೇಳಿಕೆಗಳು, ಜನರಿಗೆ ತಮ್ಮ ಸ್ವಂತ ಜೀವನದ ಮೇಲೆ ಯಾವುದೇ ನಿಯಂತ್ರಣವಿಲ್ಲವೆಂಬ ಅನಿಸಿಕೆಯನ್ನು ಮೂಡಿಸಬಲ್ಲದು.
2 ತಮ್ಮ ಹೆತ್ತವರ ನ್ಯೂನ ಪಾಲನೆಯು, ಅಥವಾ ತಮ್ಮ ಶಿಕ್ಷಕರ ನ್ಯೂನ ಬೋಧನೆಯು, ಯಾವುದೊ ರೀತಿಯಲ್ಲಿ ತಮ್ಮನ್ನು ಗೋಳಿನ ಜೀವನಕ್ಕೆ ತಳ್ಳಿದೆಯೆಂದು ಇತರರು ಭಯಪಡುತ್ತಾರೆ. ತಮ್ಮ ಹೆತ್ತವರ ತಪ್ಪುಗಳನ್ನು ಪುನರಾವರ್ತಿಸುವುದು, ತಮ್ಮ ಅತಿ ಕೆಟ್ಟದ್ದಾದ ಆವೇಗಗಳಿಗನುಸಾರವಾಗಿ ಕ್ರಿಯೆಗೈಯುವುದು, ಯೆಹೋವನಿಗೆ ಅಪನಂಬಿಗಸ್ತರಾಗುವುದು—ಚುಟುಕಾಗಿ ಹೇಳುವುದಾದರೆ ತಪ್ಪಾದ ಆಯ್ಕೆಗಳನ್ನು ಮಾಡುವುದು ಅನಿವಾರ್ಯವೆಂದು ಅವರಿಗೆ ಅನಿಸಬಹುದು. ಬೈಬಲ್ ಅದನ್ನೇ ಕಲಿಸುತ್ತದೊ? ಇಂತಹದ್ದೇ ವಿಷಯವನ್ನು—ಪೂರ್ವಾದೃಷ್ಟದ ಬೋಧನೆ—ಬೈಬಲ್ ಕಲಿಸುತ್ತದೆಂದು ದೃಢವಾಗಿ ಹೇಳುವ ಕೆಲವು ಧಾರ್ಮಿಕ ವ್ಯಕ್ತಿಗಳಿದ್ದಾರೆ. ಈ ಬೋಧನೆಗನುಸಾರ, ನಿಮ್ಮ ಜೀವಿತದಲ್ಲಿನ ಪ್ರತಿಯೊಂದು ಘಟನೆಯನ್ನು ದೇವರು ತುಂಬ ಸಮಯದ ಹಿಂದೆಯೇ ನಿಶ್ಚಯಿಸಿದ್ದಾನೆ.
3. ನಮ್ಮ ಭವಿಷ್ಯತ್ತಿಗಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯದ ಕುರಿತಾಗಿ ಬೈಬಲಿನಲ್ಲಿ ಯಾವ ಉತ್ತೇಜನಕರ ಸಂದೇಶವಿದೆ?
3 ಈ ಎಲ್ಲ ವಿಭಿನ್ನ ಅಭಿಪ್ರಾಯಗಳಲ್ಲಿ ಈ ಸಂದೇಶ ಇದೆ: ನಿಮಗೆ ಯಾವುದೇ ಆಯ್ಕೆಯಿಲ್ಲ, ನಿಮ್ಮ ಜೀವನವು ಹೇಗೆ ಪರಿಣಮಿಸುವುದು ಎಂಬುದರ ಮೇಲೆ ನಿಮಗೆ ಯಾವುದೇ ನಿಯಂತ್ರಣವಿಲ್ಲ. ಅದೊಂದು ನಿರುತ್ತೇಜಿಸುವ ಸಂದೇಶವಾಗಿದೆ ಅಲ್ಲವೇ. ಮತ್ತು ನಿರುತ್ತೇಜನವು ಸಮಸ್ಯೆಗೆ ಕೂಡಿಸುತ್ತದೆ. ಜ್ಞಾನೋಕ್ತಿ 24:10 ಹೇಳುವುದು: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ [“ನಿರುತ್ತೇಜಿತನಾದರೆ,” NW] ನಿನ್ನ ಬಲವೂ ಇಕ್ಕಟ್ಟೇ.” ಆದರೆ ಬೈಬಲಿಗನುಸಾರ ನಾವು ‘ನಮ್ಮ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳ’ಸಾಧ್ಯವಿದೆ ಎಂದು ನಮ್ಮನ್ನು ಉತ್ತೇಜಿಸಲಾಗಿದೆ. (ಫಿಲಿಪ್ಪಿ 2:12) ಈ ಸಕಾರಾತ್ಮಕ ಶಾಸ್ತ್ರೀಯ ಬೋಧನೆಯಲ್ಲಿ ನಾವು ನಮ್ಮ ಭರವಸೆಯನ್ನು ಹೇಗೆ ದೃಢಪಡಿಸಬಲ್ಲೆವು?
ನಾವು ನಮ್ಮಲ್ಲೇ ಮಾಡುವಂತಹ ‘ಕಟ್ಟುವ’ ಕೆಲಸ
4. 1 ಕೊರಿಂಥ 3:10-15 ಅಗ್ನಿನಿರೋಧಕ ಸಾಮಗ್ರಿಗಳೊಂದಿಗೆ ಕಟ್ಟುವುದರ ಕುರಿತಾಗಿ ತಿಳಿಸುತ್ತದಾದರೂ, ಅದು ಏನನ್ನು ಅರ್ಥೈಸುವುದಿಲ್ಲ?
4 1 ಕೊರಿಂಥ 3:10-15ರಲ್ಲಿ ಕಂಡುಬರುವ ಅಪೊಸ್ತಲ ಪೌಲನ ದೃಷ್ಟಾಂತವನ್ನು ಪರಿಗಣಿಸಿರಿ. ಅಲ್ಲಿ ಅವನು ಒಂದು ಕ್ರೈಸ್ತ ನಿರ್ಮಾಣ ಕೆಲಸದ ಕುರಿತಾಗಿ ಮಾತಾಡುತ್ತಾನೆ. ಮತ್ತು ಅವನ ದೃಷ್ಟಾಂತದ ಮೂಲತತ್ವವು ಆಂತರಿಕ ಮತ್ತು ಬಾಹ್ಯ ಶುಶ್ರೂಷೆಗೆ ಅನ್ವಯವಾಗಬಲ್ಲದು. ಒಬ್ಬ ಶಿಷ್ಯನು ಯೆಹೋವನನ್ನು ಸೇವಿಸುವ ಆಯ್ಕೆಯನ್ನು ಮಾಡಿ, ಅದಕ್ಕನುಸಾರವಾಗಿ ಜೀವಿಸುವುದು, ಅವನನ್ನು ಕಲಿಸಿ, ತರಬೇತಿಗೊಳಿಸಿದವರ ಪೂರ್ಣ ಜವಾಬ್ದಾರಿಯೆಂದು ಪೌಲನು ಅರ್ಥೈಸುತ್ತಾನೊ? ಇಲ್ಲ. ಶಿಕ್ಷಕನು ತನ್ನಿಂದ ಸಾಧ್ಯವಿರುವಷ್ಟು ಅತ್ಯುತ್ತಮವಾದ ಕಟ್ಟುವ ಕೆಲಸವನ್ನು ಮಾಡುವುದರ ಮಹತ್ವವನ್ನು ಒತ್ತಿಹೇಳುತ್ತಿದ್ದನಷ್ಟೇ. ಆದರೆ ನಾವು ಹಿಂದಿನ ಲೇಖನದಲ್ಲಿ ನೋಡಿರುವಂತೆ, ವಿದ್ಯಾರ್ಥಿ ಅಥವಾ ಶಿಷ್ಯನಿಗೆ ಈ ವಿಷಯದಲ್ಲಿ ಯಾವುದೇ ಆಯ್ಕೆಯಿಲ್ಲವೆಂದು ಅವನು ಹೇಳುತ್ತಿರಲಿಲ್ಲ. ಪೌಲನ ದೃಷ್ಟಾಂತವು ನಾವು ಇತರರಲ್ಲಿ ಮಾಡುವ ಕೆಲಸದ ಮೇಲೆ ಕೇಂದ್ರೀಕರಿಸುತ್ತದೆ ಹೊರತು, ನಮ್ಮನ್ನೇ ಕಟ್ಟಿಕೊಳ್ಳುವುದರ ಮೇಲಲ್ಲ ಎಂಬುದು ನಿಜ. ಅಸಡ್ಡೆಯ ಕಟ್ಟಡ ಕೆಲಸವು ನಾಶವಾಗುವಾಗ, ಸ್ವತಃ ಕಟ್ಟುವವನು ಪಾರುಗೊಳಿಸಲ್ಪಡುವುದರ ಕುರಿತಾಗಿ ಪೌಲನು ಮಾತಾಡುವುದರಿಂದ ಇದು ವ್ಯಕ್ತವಾಗುತ್ತದೆ. ಆದರೆ, ನಾವು ನಮ್ಮಲ್ಲೇ ಮಾಡುವಂತಹ ಕೆಲಸಕ್ಕೆ ಬೈಬಲ್ ಕೆಲವೊಮ್ಮೆ ಒಂದೇ ರೀತಿಯ ರೂಪಕವನ್ನು ಅನ್ವಯಿಸುತ್ತದೆ.
5. ಕ್ರೈಸ್ತರು ತಮ್ಮಲ್ಲೇ ‘ಕಟ್ಟುವ’ ಕೆಲಸವನ್ನು ಮಾಡಬೇಕೆಂಬುದನ್ನು ಯಾವ ವಚನಗಳು ತೋರಿಸುತ್ತವೆ?
5 ಉದಾಹರಣೆಗಾಗಿ, ಯೂದ 20, 21ನ್ನು (NW) ಪರಿಗಣಿಸಿರಿ: “ಪ್ರಿಯರೇ, ನೀವಾದರೋ ನಿಮ್ಮ ಅತಿ ಪವಿತ್ರವಾದ ನಂಬಿಕೆಯ ಮೇಲೆ ನಿಮ್ಮನ್ನು ಕಟ್ಟುತ್ತಾ ಇರುವ, ಮತ್ತು ಪವಿತ್ರಾತ್ಮದೊಂದಿಗೆ ಪ್ರಾರ್ಥಿಸುವ ಮೂಲಕ ನಿಮ್ಮನ್ನೇ ದೇವರ ಪ್ರೀತಿಯಲ್ಲಿ ಇರಿಸಿಕೊಳ್ಳಿರಿ.” ಪೌಲನು 1 ಕೊರಿಂಥ 3ನೆಯ ಅಧ್ಯಾಯದಲ್ಲಿ “ಕಟ್ಟುವುದಕ್ಕಾಗಿ” ಉಪಯೋಗಿಸುವ ಗ್ರೀಕ್ ಪದವನ್ನೇ ಯೂದನು ಇಲ್ಲಿ ಉಪಯೋಗಿಸುತ್ತಾನೆ. ಆದರೆ, ನಾವು ನಮ್ಮನ್ನೇ ನಮ್ಮ ನಂಬಿಕೆಯ ಅಸ್ತಿವಾರದ ಮೇಲೆ ಕಟ್ಟಬೇಕೆಂಬುದು ಅವನ ಅಭಿಪ್ರಾಯವಾಗಿರುವಂತೆ ತೋರುತ್ತದೆ. ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಮನುಷ್ಯನ ಕುರಿತಾದ ಯೇಸುವಿನ ದೃಷ್ಟಾಂತವನ್ನು ದಾಖಲಿಸುವಾಗ, ಲೂಕನು, ಕ್ರೈಸ್ತ ಕಟ್ಟಡದ ದೃಷ್ಟಾಂತದಲ್ಲಿ ಪೌಲನು “ಅಸ್ತಿವಾರ”ಕ್ಕಾಗಿ ಉಪಯೋಗಿಸುವ ಅದೇ ಗ್ರೀಕ್ ಪದವನ್ನು ಉಪಯೋಗಿಸುತ್ತಾನೆ. (ಲೂಕ 6:48, 49) ಇನ್ನೂ ಹೆಚ್ಚಾಗಿ, ಪೌಲನು ತನ್ನ ಜೊತೆ ಕ್ರೈಸ್ತರಿಗೆ ಆತ್ಮಿಕ ಪ್ರಗತಿಯನ್ನು ಮಾಡುವಂತೆ ಬುದ್ಧಿವಾದವನ್ನು ಕೊಡುವಾಗ, ಒಂದು “ಅಸ್ತಿವಾರ”ದ ಮೇಲೆ ಕಟ್ಟಲ್ಪಡುವುದರ ಚಿತ್ರಣವನ್ನು ಪೌಲನು ಉಪಯೋಗಿಸುತ್ತಾನೆ. ಹೌದು, ನಾವು ‘ಕಟ್ಟುವ’ ಕೆಲಸವನ್ನು ನಮ್ಮಲ್ಲೇ ಮಾಡಬೇಕೆಂದು ದೇವರ ವಾಕ್ಯವು ಕಲಿಸುತ್ತದೆ.—ಎಫೆಸ 3:15-19; ಕೊಲೊಸ್ಸೆ 1:23; 2:7.
6. (ಎ) ಪ್ರತಿಯೊಬ್ಬ ಕ್ರೈಸ್ತ ಶಿಷ್ಯನು, ಒಂದು ಸಂಘಟಿತ ಕಟ್ಟಡ ಯೋಜನೆಯ ಫಲಿತಾಂಶವಾಗಿರುವ ವಿಧವನ್ನು ದೃಷ್ಟಾಂತಿಸಿರಿ. (ಬಿ) ಪ್ರತಿಯೊಬ್ಬ ಶಿಷ್ಯನಿಗೆ ಯಾವ ಜವಾಬ್ದಾರಿಯಿದೆ?
6 ಒಬ್ಬ ಕ್ರೈಸ್ತನನ್ನು ಕಟ್ಟುವುದು, ಒಬ್ಬ ಮನುಷ್ಯನ ಕೆಲಸವೊ? ನೀವು ಒಂದು ಮನೆಯನ್ನು ಕಟ್ಟಲು ನಿರ್ಣಯಿಸಿದ್ದೀರೆಂದು ಊಹಿಸಿಕೊಳ್ಳಿರಿ. ಯೋಜನೆಗಳಿಗಾಗಿ ನೀವು ಒಬ್ಬ ವಾಸ್ತುಶಿಲ್ಪಿಯ ಬಳಿ ಹೋಗುತ್ತೀರಿ. ಹೆಚ್ಚಿನ ಕೆಲಸವನ್ನು ನೀವು ಮಾಡಲು ಉದ್ದೇಶಿಸುವುದಾದರೆ, ನಿಮ್ಮೊಂದಿಗೆ ಕೆಲಸವನ್ನು ಮಾಡಲು ಮತ್ತು ಅತ್ಯುತ್ತಮವಾದ ವಿಧಾನಗಳನ್ನು ನಿಮಗೆ ತಿಳಿಸಲು ನೀವು ಒಬ್ಬ ಕಾಂಟ್ರ್ಯಾಕ್ಟರನನ್ನು ಕೆಲಸಕ್ಕೆ ಇಡುತ್ತೀರಿ. ಅವನೊಂದು ಭದ್ರವಾದ ಅಸ್ತಿವಾರವನ್ನು ಹಾಕುವಲ್ಲಿ, ಯೋಜನೆಗಳನ್ನು ನೀವು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವಲ್ಲಿ, ಖರೀದಿಸಬೇಕಾದ ಅತ್ಯುತ್ತಮ ಸಾಮಗ್ರಿಗಳ ಕುರಿತು ಸಲಹೆನೀಡುವಲ್ಲಿ, ಮತ್ತು ಕಟ್ಟಡದ ಕುರಿತಾಗಿಯೂ ನಿಮಗೆ ಅನೇಕ ವಿಷಯಗಳನ್ನು ಕಲಿಸುವಲ್ಲಿ, ಅವನೊಂದು ಒಳ್ಳೆಯ ಕೆಲಸ ಮಾಡಿದ್ದಾನೆಂದು ನೀವು ಬಹುಶಃ ಒಪ್ಪಿಕೊಳ್ಳುವಿರಿ. ಆದರೆ ನೀವು ಅವನ ಸಲಹೆಯನ್ನು ಅಲಕ್ಷಿಸಿ, ಕಡಿಮೆ ಬೆಲೆಯ ಅಥವಾ ಕಳಪೆ ಸಾಮಗ್ರಿಗಳನ್ನು ಖರೀದಿಸಿ, ವಾಸ್ತುಶಿಲ್ಪಿಯ ಯೋಜನೆಗಳನ್ನೂ ಅಲಕ್ಷಿಸುವುದಾದರೆ ಆಗೇನು? ಮನೆಯು ಕುಸಿದುಬೀಳುವಲ್ಲಿ, ನೀವು ಖಂಡಿತವಾಗಿಯೂ ಕಾಂಟ್ರ್ಯಾಕ್ಟರನನ್ನು ಅಥವಾ ವಾಸ್ತುಶಿಲ್ಪಿಯ ಮೇಲೆ ಆರೋಪ ಹೊರಿಸಲಾರಿರಿ! ತದ್ರೀತಿಯಲ್ಲಿ ಪ್ರತಿಯೊಬ್ಬ ಕ್ರೈಸ್ತ ಶಿಷ್ಯನು, ಒಂದು ಸಂಘಟಿತ ಕಟ್ಟಡ ಯೋಜನೆಯ ಫಲವಾಗಿದ್ದಾನೆ. ಯೆಹೋವನು ಕುಶಲ ವಾಸ್ತುಶಿಲ್ಪಿಯಾಗಿದ್ದಾನೆ. “ದೇವರ ಜೊತೆಕೆಲಸದವ”ರಲ್ಲಿ ಒಬ್ಬನೋಪಾದಿ, ಆ ವಿದ್ಯಾರ್ಥಿಗೆ ಕಲಿಸುವ ಮತ್ತು ಕಟ್ಟುವ ನಂಬಿಗಸ್ತ ಕ್ರೈಸ್ತನನ್ನು ಆತನು ಬೆಂಬಲಿಸುತ್ತಾನೆ. (1 ಕೊರಿಂಥ 3:9) ಆದರೂ ವಿದ್ಯಾರ್ಥಿಯು ಕೂಡ ಒಳಗೂಡಿರುತ್ತಾನೆ. ಕೊನೆಯಲ್ಲಿ, ತನ್ನ ಸ್ವಂತ ಜೀವನ ಕ್ರಮಕ್ಕಾಗಿ ಅವನೇ ಜವಾಬ್ದಾರನಾಗಿರುತ್ತಾನೆ. (ರೋಮಾಪುರ 14:12) ಅವನಿಗೆ ಉತ್ತಮ ಕ್ರೈಸ್ತ ಗುಣಗಳಿರಬೇಕಾದಲ್ಲಿ, ಅವನು ಅದನ್ನು ಪಡೆದುಕೊಳ್ಳಲು ತನ್ನಲ್ಲೇ ಅವುಗಳನ್ನು ಕಟ್ಟಲು ಕಷ್ಟಪಡಬೇಕು.—2 ಪೇತ್ರ 1:5-8.
7. ಕೆಲವು ಕ್ರೈಸ್ತರು ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಾರೆ, ಮತ್ತು ಅವರಿಗೆ ಯಾವುದು ಸಾಂತ್ವನ ನೀಡಬಲ್ಲದು?
7 ವಂಶವಾಹಿಗಳು, ಪರಿಸರ ಮತ್ತು ನಮ್ಮ ಶಿಕ್ಷಕರ ಗುಣಮಟ್ಟಕ್ಕೆ ಯಾವುದೇ ಸಂಬಂಧವಿಲ್ಲವೆಂದು ಇದರ ಅರ್ಥವೊ? ಖಂಡಿತವಾಗಿಯೂ ಇಲ್ಲ. ಇವುಗಳಲ್ಲಿ ಪ್ರತಿಯೊಂದು ಪ್ರಾಮುಖ್ಯ ಮತ್ತು ಪ್ರಭಾವಶಾಲಿಯಾಗಿದೆಯೆಂದು ದೇವರ ವಾಕ್ಯವು ಅಂಗೀಕರಿಸುತ್ತದೆ. ಅನೇಕ ಪಾಪಪೂರ್ಣ, ನಕಾರಾತ್ಮಕ ಪ್ರವೃತ್ತಿಗಳು ಜನ್ಮಸಿದ್ಧವಾಗಿವೆ ಮತ್ತು ಅವುಗಳ ವಿರುದ್ಧ ಹೋರಾಡುವುದು ತುಂಬ ಕಷ್ಟಕರವಾಗಿರಬಹುದು. (ಕೀರ್ತನೆ 51:5; ರೋಮಾಪುರ 5:12; 7:21-23) ಹೆತ್ತವರ ತರಬೇತಿ ಮತ್ತು ಮನೆಯ ಪರಿಸರವು ಎಳೆಯರ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಬಲ್ಲದು—ಅದು ಒಳ್ಳೆಯದಕ್ಕಾಗಿರಬಹುದು ಅಥವಾ ಕೆಟ್ಟದಕ್ಕಾಗಿರಸಾಧ್ಯವಿದೆ. (ಜ್ಞಾನೋಕ್ತಿ 22:6; ಕೊಲೊಸ್ಸೆ 3:21) ಯೆಹೂದಿ ಧಾರ್ಮಿಕ ಮುಖಂಡರ ಬೋಧನೆಯು ಇತರರ ಮೇಲೆ ಬೀರಿದ ಕೆಟ್ಟ ಪರಿಣಾಮಗಳಿಗಾಗಿ ಯೇಸು ಅವರನ್ನು ಖಂಡಿಸಿದನು. (ಮತ್ತಾಯ 23:13, 15) ಇಂದು ಅಂತಹ ಅಂಶಗಳು ನಮ್ಮೆಲ್ಲರನ್ನೂ ಪ್ರಭಾವಿಸುತ್ತವೆ. ಉದಾಹರಣೆಗಾಗಿ ದೇವರ ಜನರಲ್ಲಿ ಕೆಲವರು, ತಮ್ಮ ಕಷ್ಟಕರ ಬಾಲ್ಯಾವಸ್ಥೆಗಳಿಂದಾಗಿ ಪಂಥಾಹ್ವಾನಗಳನ್ನು ಎದುರಿಸುತ್ತಾರೆ. ಇಂತಹವರಿಗೆ ನಮ್ಮ ದಯೆ ಮತ್ತು ಅನುಭೂತಿಯ ಅಗತ್ಯವಿದೆ. ಮತ್ತು ಅವರು ತಮ್ಮ ಹೆತ್ತವರ ತಪ್ಪುಗಳನ್ನು ಪುನರಾವರ್ತಿಸುವುದು ಅಥವಾ ಅಪನಂಬಿಗಸ್ತರಾಗಿರುವುದು ಅನಿವಾರ್ಯ ಅಲ್ಲ ಎಂಬ ಬೈಬಲ್ ಸಂದೇಶದಿಂದ ಅವರು ಸಾಂತ್ವನವನ್ನು ಪಡೆದುಕೊಳ್ಳಬಹುದು. ಪುರಾತನ ಯೆಹೂದದ ಕೆಲವೊಂದು ರಾಜರುಗಳು ಈ ವಿಷಯವನ್ನು ದೃಷ್ಟಾಂತಿಸುವ ವಿಧವನ್ನು ಪರಿಗಣಿಸಿರಿ.
ಯೆಹೂದದ ರಾಜರುಗಳು—ಅವರು ತಮ್ಮ ಸ್ವಂತ ಆಯ್ಕೆಗಳನ್ನು ಮಾಡಿದರು
8. ಯೋತಾಮನಿಗೆ ತನ್ನ ತಂದೆಯಿಂದ ಯಾವ ಕೆಟ್ಟ ಮಾದರಿಯಿತ್ತು, ಆದರೂ ಅವನು ಯಾವ ಆಯ್ಕೆಯನ್ನು ಮಾಡಿದನು?
8 ಉಜ್ಜೀಯನು 16ರ ಎಳೆಯ ವಯಸ್ಸಿನಲ್ಲಿ ಯೆಹೂದದ ರಾಜನಾದನು ಮತ್ತು 52 ವರ್ಷಗಳ ವರೆಗೆ ಆಳಿದನು. ಈ ಎಲ್ಲ ಸಮಯದಲ್ಲಿ, ಅವನು “ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು.” (2 ಅರಸುಗಳು 15:3) ದಂಗುಬಡಿಸುವಂತಹ ಅನೇಕ ಮಿಲಿಟರಿ ವಿಜಯಗಳನ್ನು ಅವನಿಗೆ ಕೊಟ್ಟು ಯೆಹೋವನು ಅವನನ್ನು ಆಶೀರ್ವದಿಸಿದನು. ಆದರೆ ದುಃಖಕರವಾಗಿ, ಯಶಸ್ಸು ಉಜ್ಜೀಯನ ತಲೆಗೇರಿತು. ಅವನು ಗರ್ವಿಷ್ಟನಾಗಿ, ಯಾಜಕರಿಗಾಗಿ ಮೀಸಲಾಗಿಡಲ್ಪಟ್ಟಿರುವ ಒಂದು ಕೆಲಸವಾದ, ಆಲಯದ ವೇದಿಯಲ್ಲಿ ಧೂಪವನ್ನು ಅರ್ಪಿಸುವ ಮೂಲಕ ಯೆಹೋವನ ವಿರುದ್ಧ ದಂಗೆಯೆದ್ದನು. ಉಜ್ಜೀಯನನ್ನು ಗದರಿಸಲಾಯಿತು, ಆದರೆ ಅವನು ಕೋಪದಿಂದ ಪ್ರತಿಕ್ರಿಯಿಸಿದನು. ಅನಂತರ ಅವನ ಸೊಕ್ಕಡಗಿಸಲಾಯಿತು—ಅವನಿಗೆ ಕುಷ್ಟರೋಗವು ತಗಲಿತು ಮತ್ತು ಅವನು ತನ್ನ ಉಳಿದ ಜೀವಮಾನವನ್ನು ಏಕಾಂತವಾಸದಲ್ಲಿ ಕಳೆಯಬೇಕಾಯಿತು. (2 ಪೂರ್ವಕಾಲವೃತ್ತಾಂತ 26:16-23) ಅವನ ಮಗನಾದ ಯೋತಾಮನು ಇದಕ್ಕೆಲ್ಲ ಹೇಗೆ ಪ್ರತಿಕ್ರಿಯಿಸಿದನು? ಈ ಯುವ ಪುರುಷನು ತನ್ನ ತಂದೆಯಿಂದ ಸುಲಭವಾಗಿ ಪ್ರಭಾವಿಸಲ್ಪಟ್ಟು, ಯೆಹೋವನ ತಿದ್ದುಪಾಟಿನ ಕುರಿತು ಅಸಮಾಧಾನಪಡಬಹುದಿತ್ತು. ಸಾಮಾನ್ಯ ಜನರು ಅವನ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರಸಾಧ್ಯವಿತ್ತು, ಯಾಕಂದರೆ ಅವರು ತಪ್ಪಾದ ಧಾರ್ಮಿಕ ಪದ್ಧತಿಗಳನ್ನು ನಡಿಸುತ್ತಿದ್ದರು. (2 ಅರಸುಗಳು 15:4) ಆದರೆ ಯೋತಾಮನು ತನ್ನ ಸ್ವಂತ ಆಯ್ಕೆಯನ್ನು ಮಾಡಿದನು. ಅವನು “ಯೆಹೋವನ ಚಿತ್ತಾನುಸಾರವಾಗಿ ನಡೆದನು.”—2 ಪೂರ್ವಕಾಲವೃತ್ತಾಂತ 27:2.
9. ಆಹಾಜನ ಮುಂದೆ ಒಳ್ಳೆಯ ಮಾದರಿಯನ್ನಿಟ್ಟ ಕೆಲವು ವ್ಯಕ್ತಿಗಳು ಯಾರು, ಆದರೆ ಅವನ ಜೀವಿತವು ಏನಾಗಿ ಪರಿಣಮಿಸಿತು?
9 ಯೋತಾಮನು 16 ವರ್ಷಗಳ ವರೆಗೆ ಆಳುತ್ತಾ, ಆ ಸಮಯದಲ್ಲೆಲ್ಲ ಯೆಹೋವನಿಗೆ ನಂಬಿಗಸ್ತನಾಗಿ ಉಳಿದನು. ಆದುದರಿಂದ ಅವನ ಮಗನಾದ ಆಹಾಜನಿಗೆ, ಒಬ್ಬ ನಂಬಿಗಸ್ತ ತಂದೆಯ ಅತ್ಯುತ್ಕೃಷ್ಟ ಮಾದರಿಯಿತ್ತು. ಮತ್ತು ಆಹಾಜನ ಇತರ ಉತ್ತಮ ಮಾದರಿಗಳಿದ್ದರು. ನಂಬಿಗಸ್ತ ಪ್ರವಾದಿಗಳಾದ ಯೆಶಾಯ, ಹೋಶೇಯ, ಮತ್ತು ಮೀಕ ಆ ದೇಶದಲ್ಲಿ ಸಕ್ರಿಯವಾಗಿ ಪ್ರವಾದಿಸುತ್ತಿದ್ದ ಸಮಯದಲ್ಲಿ ಜೀವಿಸುವ ಧನ್ಯತೆಯನ್ನು ಪಡೆದಿದ್ದನು. ಆದರೂ ಅವನು ಒಂದು ಕೆಟ್ಟ ಆಯ್ಕೆಯನ್ನು ಮಾಡಿದನು. ‘ಅವನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ. ತನ್ನ ಪೂರ್ವಿಕನಾದ ದಾವೀದನ ಮಾರ್ಗವನ್ನು ಬಿಟ್ಟನು.’ ಅವನು ಬಾಳನ ವಿಗ್ರಹಗಳನ್ನು ಮಾಡಿ, ಅವುಗಳನ್ನು ಆರಾಧಿಸಿದನು. ಸುಳ್ಳು ದೇವರುಗಳಿಗೆ ತನ್ನ ಸ್ವಂತ ಪುತ್ರರಲ್ಲಿ ಕೆಲವರನ್ನೂ ಅವನು ಬಲಿಯಾಗಿ ಅರ್ಪಿಸಿದನು. ಅವನಿಗೆ ಅತ್ಯುತ್ತಮವಾದ ಮಾದರಿಗಳಿದ್ದರೂ, ಒಬ್ಬ ರಾಜನೋಪಾದಿ ಮತ್ತು ಯೆಹೋವನ ಸೇವಕನೋಪಾದಿ ಅವನು ದುರಂತಮಯವಾಗಿ ತಪ್ಪಿಬಿದ್ದನು.—2 ಪೂರ್ವಕಾಲವೃತ್ತಾಂತ 28:1-4.
10. ಆಹಾಜನು ಯಾವ ರೀತಿಯ ತಂದೆಯಾಗಿದ್ದನು, ಆದರೆ ಅವನ ಮಗನಾದ ಹಿಜ್ಕೀಯನು ಯಾವ ಆಯ್ಕೆಯನ್ನು ಮಾಡಿದನು?
10 ಶುದ್ಧಾರಾಧನೆಯ ದೃಷ್ಟಿಕೋನದಿಂದ, ಆಹಾಜನಿಗಿಂತಲೂ ಕೆಟ್ಟವನಾದ ತಂದೆಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಅವನ ಮಗನಾದ ಹಿಜ್ಕೀಯನಿಗೆ, ತನ್ನ ತಂದೆಯು ಯಾರಾಗಿರಬೇಕೆಂದು ಆಯ್ಕೆ ಮಾಡಲು ಸಾಧ್ಯವಿರಲಿಲ್ಲ! ಆಹಾಜನು ಬಾಳ್ ದೇವತೆಗೆ ಬಲಿಯಾಗಿ ಅರ್ಪಿಸಿದ ಯುವ ಪುತ್ರರು, ಹಿಜ್ಕೀಯನ ಸ್ವಂತ ಸಹೋದರರಾಗಿದ್ದಿರಬಹುದು. ಈ ಘೋರವಾದ ಹಿನ್ನೆಲೆಯು, ಹಿಜ್ಕೀಯನು ಸಹ ಯೆಹೋವನಿಗೆ ಅಪನಂಬಿಗಸ್ತನಾಗುವಂತೆ ಮಾಡಿತೊ? ಇದಕ್ಕೆ ವಿರುದ್ಧವಾಗಿ, ಹಿಜ್ಕೀಯನು ಯೆಹೂದದ ಕೆಲವೇ ಸತ್ಯಸಂಧ ಮಹಾರಾಜರುಗಳಲ್ಲಿ ಒಬ್ಬನಾದನು. ನಂಬಿಗಸ್ತನೂ, ವಿವೇಕಿಯೂ, ಪ್ರಿಯನೂ ಆದ ಒಬ್ಬ ಮನುಷ್ಯನಾದನು. “ಯೆಹೋವನು ಇವನ ಸಂಗಡ ಇದ್ದ”ನು. (2 ಅರಸುಗಳು 18:3-7) ಹಿಜ್ಕೀಯನು ಇನ್ನೂ ಒಬ್ಬ ಯುವ ರಾಜಕುಮಾರನಾಗಿದ್ದಾಗಲೇ, 119ನೆಯ ಕೀರ್ತನೆಯ ಪ್ರೇರಿತ ಬರಹಗಾರನಾಗಿದ್ದನೆಂದು ನಂಬಲು ಕಾರಣವಿದೆ. ಅವನೇ ಬರಹಗಾರನಾಗಿರುವಲ್ಲಿ, “ಮನೋವ್ಯಥೆಯಿಂದ ಕಣ್ಣೀರುಸುರಿಸುತ್ತೇನೆ” ಎಂಬ ಈ ಮಾತುಗಳನ್ನು ಅವನು ಏಕೆ ಬರೆದನೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಲ್ಲ. (ಕೀರ್ತನೆ 119:28) ತನ್ನ ದುಃಖಮಯ ಕಷ್ಟಗಳ ಎದುರಿನಲ್ಲೂ, ಯೆಹೋವನ ವಾಕ್ಯವು ತನ್ನ ಜೀವನವನ್ನು ಮಾರ್ಗದರ್ಶಿಸುವಂತೆ ಹಿಜ್ಕೀಯನು ಅನುಮತಿಸಿದನು. ಕೀರ್ತನೆ 119:105 ಹೇಳುವುದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” ಹೌದು, ಹಿಜ್ಕೀಯನು ತನ್ನ ಸ್ವಂತ ಆಯ್ಕೆಯನ್ನು—ಸರಿಯಾದ ಆಯ್ಕೆಯನ್ನು—ಮಾಡಿದನು.
11. (ಎ) ತನ್ನ ತಂದೆಯ ಒಳ್ಳೆಯ ಮಾದರಿಯ ಎದುರಿನಲ್ಲೂ, ಯೆಹೋವನ ವಿರುದ್ಧ ಮನಸ್ಸೆಯ ದಂಗೆಯು ಎಷ್ಟು ವಿಪರೀತವಾಗಿತ್ತು? (ಬಿ) ತನ್ನ ಜೀವನದ ಅಂತ್ಯದಲ್ಲಿ ಮನಸ್ಸೆಯು ಯಾವ ಆಯ್ಕೆಯನ್ನು ಮಾಡಿದನು, ಮತ್ತು ಇದರಿಂದ ನಾವೇನನ್ನು ಕಲಿತುಕೊಳ್ಳಬಹುದು?
11 ಆದರೆ ವಿರೋಧಾಭಾಸದಂತೆ, ಯೆಹೂದದ ರಾಜರುಗಳಲ್ಲಿಯೇ ಅತ್ಯುತ್ತಮನಾದ ರಾಜನ ಮಗನು, ಅತ್ಯಂತ ದುಷ್ಟ ರಾಜನಾಗಿ ಪರಿಣಮಿಸಿದನು. ಹಿಜ್ಕೀಯನ ಮಗನಾದ ಮನಸ್ಸೆ, ಹಿಂದೆಂದೂ ನಡೆಸಲ್ಪಟ್ಟಿರದಂತಹ ಮಟ್ಟದಲ್ಲಿ ವಿಗ್ರಹಾರಾಧನೆ, ಪ್ರೇತಾರಾಧನೆ, ಮತ್ತು ಹಿಂಸಾಚಾರವನ್ನು ಪ್ರವರ್ಧಿಸಿದನು. ಬಹುಶಃ ಪ್ರವಾದಿಗಳ ಮೂಲಕ “ಯೆಹೋವನು ಮನಸ್ಸೆಯನ್ನೂ ಅವನ ಪ್ರಜೆಗಳನ್ನೂ ಎಚ್ಚರಿಸಿದ”ನು. (2 ಪೂರ್ವಕಾಲವೃತ್ತಾಂತ 33:10) ಮನಸ್ಸೆಯು, ಯೆಶಾಯನನ್ನು ಗರಗಸದಿಂದ ಕೊಯ್ದು ಕೊಲ್ಲುವ ಮೂಲಕ ಇದಕ್ಕೆ ಪ್ರತಿಕ್ರಿಯೆಯನ್ನು ತೋರಿಸಿದನೆಂದು ಯೆಹೂದಿ ಸಂಪ್ರದಾಯವು ತಿಳಿಸುತ್ತದೆ. (ಇಬ್ರಿಯ 11:37ನ್ನು ಹೋಲಿಸಿರಿ.) ಇದು ಸತ್ಯವಾಗಿರಲಿ ಇಲ್ಲದಿರಲಿ, ಮನಸ್ಸೆಗೆ ಕೊಡಲ್ಪಟ್ಟ ಯಾವುದೇ ದೈವಿಕ ಎಚ್ಚರಿಕೆಗಳಿಗೆ ಅವನು ಕಿವಿಗೊಡದೆ ಇದ್ದ ಮಾತಂತೂ ನಿಜ. ವಾಸ್ತವದಲ್ಲಿ, ತನ್ನ ಅಜ್ಜನಾದ ಆಹಾಜನು ಮಾಡಿದಂತೆ, ಅವನು ಕೂಡ ತನ್ನ ಸ್ವಂತ ಪುತ್ರರಲ್ಲಿ ಕೆಲವರನ್ನು ಬಲಿಗಳೋಪಾದಿ ಜೀವಂತವಾಗಿ ಸುಟ್ಟುಬಿಟ್ಟನು. ಆದರೂ, ಈ ದುಷ್ಟ ಮನುಷ್ಯನು ತನ್ನ ಜೀವನದ ಅಂತ್ಯದಲ್ಲಿ ಕಠಿನವಾದ ಸಂಕಷ್ಟಗಳ ಸಮಯದಲ್ಲಿ ಪಶ್ಚಾತ್ತಾಪಪಟ್ಟು, ತನ್ನ ಮಾರ್ಗಗಳನ್ನು ಬದಲಾಯಿಸಿದನು. (2 ಪೂರ್ವಕಾಲವೃತ್ತಾಂತ 33:1-6, 11-20) ಘೋರವಾದ ಆಯ್ಕೆಗಳನ್ನು ಮಾಡಿರುವ ಒಬ್ಬ ವ್ಯಕ್ತಿಗೆ ವಿಮೋಚನೆಯ ಆಸೆಯೇ ಇಲ್ಲವೆಂಬುದು ತಪ್ಪು ಎಂಬುದನ್ನು ಅವನ ಮಾದರಿಯು ನಮಗೆ ಕಲಿಸುತ್ತದೆ. ಆ ವ್ಯಕ್ತಿಯು ಬದಲಾಗಬಲ್ಲನು.
12. ಆಮೋನನು ಮತ್ತು ಅವನ ಮಗನಾದ ಯೋಷೀಯನು, ಯೆಹೋವನ ಸೇವೆಯ ಸಂಬಂಧದಲ್ಲಿ ಯಾವ ವಿರುದ್ಧ ಆಯ್ಕೆಗಳನ್ನು ಮಾಡಿದರು?
12 ತನ್ನ ತಂದೆಯ ಪಶ್ಚಾತ್ತಾಪದಿಂದ ಮನಸ್ಸೆಯ ಮಗನಾದ ಆಮೋನನು ತುಂಬ ವಿಷಯಗಳನ್ನು ಕಲಿಯಬಹುದಿತ್ತು. ಆದರೆ ಅವನು ತಪ್ಪಾದ ಆಯ್ಕೆಗಳನ್ನು ಮಾಡಿದನು. ವಾಸ್ತವದಲ್ಲಿ ಆಮೋನನು “ಮಹಾಪರಾಧಿಯಾದನು.” ಕೊನೆಯಲ್ಲಿ ಅವನನ್ನು ಹತಿಸಲಾಯಿತು. ಅವನ ಮಗನಾದ ಯೋಷೀಯನು ಎಲ್ಲರಿಗಿಂತಲೂ ತೀರ ಭಿನ್ನನಾಗಿದ್ದನು. ತನ್ನ ಅಜ್ಜನಿಗೆ ಏನಾಯಿತೊ ಅದರಿಂದ ಯೋಷೀಯನು ಪಾಠವನ್ನು ಕಲಿಯಲು ಆರಿಸಿಕೊಂಡನೆಂದು ವ್ಯಕ್ತವಾಗುತ್ತದೆ. ಅವನು ಕೇವಲ ಎಂಟು ವರ್ಷದವನಾಗಿದ್ದಾಗ ಆಳಲು ಪ್ರಾರಂಭಿಸಿದನು. ಅವನು ಕೇವಲ 16 ವರ್ಷದವನಾಗಿದ್ದಾಗ, ಯೆಹೋವನಿಗಾಗಿ ಹುಡುಕಲಾರಂಭಿಸಿದನು, ಮತ್ತು ತದನಂತರ ಒಬ್ಬ ಆದರ್ಶಪ್ರಾಯ, ನಂಬಿಗಸ್ತ ಅರಸನಾಗಿ ರುಜುವಾದನು. (2 ಪೂರ್ವಕಾಲವೃತ್ತಾಂತ 33:20—34:5) ಅವನು ಸರಿಯಾದ ಆಯ್ಕೆಯನ್ನು ಮಾಡಿದನು.
13. (ಎ) ನಾವು ಪರಿಗಣಿಸಿರುವ ಯೂದಾಯದ ರಾಜರುಗಳಿಂದ ನಾವೇನನ್ನು ಕಲಿತುಕೊಳ್ಳುತ್ತೇವೆ? (ಬಿ) ಹೆತ್ತವರ ತರಬೇತಿಯು ಎಷ್ಟು ಪ್ರಾಮುಖ್ಯವಾಗಿದೆ?
13 ಯೆಹೂದದ ಏಳು ಮಂದಿ ರಾಜರುಗಳ ಈ ಸಂಕ್ಷಿಪ್ತ ಪರಿಶೀಲನೆಯು, ನಮಗೊಂದು ಪ್ರಬಲವಾದ ಪಾಠವನ್ನು ಕಲಿಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ, ಅತ್ಯಂತ ದುಷ್ಟ ರಾಜರುಗಳಿಗೆ ಅತ್ಯಂತ ಉತ್ತಮ ಪುತ್ರರಿದ್ದರು ಮತ್ತು ಇದಕ್ಕೆ ವಿರುದ್ಧವಾಗಿ, ಅತ್ಯಂತ ಉತ್ತಮ ರಾಜರುಗಳಿಗೆ ಅತ್ಯಂತ ದುಷ್ಟ ಪುತ್ರರಿದ್ದರು. (ಪ್ರಸಂಗಿ 2:18-21ನ್ನು ಹೋಲಿಸಿರಿ.) ಇದು, ಹೆತ್ತವರ ತರಬೇತಿಯ ಮಹತ್ವವನ್ನು ಕಡಿಮೆಗೊಳಿಸುವುದಿಲ್ಲ. ಯೆಹೋವನ ಮಾರ್ಗಕ್ಕನುಸಾರವಾಗಿ ತಮ್ಮ ಮಕ್ಕಳನ್ನು ತರಬೇತಿಗೊಳಿಸುವ ಹೆತ್ತವರು, ಆ ಮಕ್ಕಳು ಯೆಹೋವನ ನಂಬಿಗಸ್ತ ಸೇವಕರಾಗುವಂತೆ ಸಾಧ್ಯವಿರುವ ಅತ್ಯುತ್ತಮವಾದ ಸಂದರ್ಭವನ್ನು ನಿಶ್ಚಯವಾಗಿಯೂ ಕೊಡುತ್ತಾರೆ. (ಧರ್ಮೋಪದೇಶಕಾಂಡ 6:6, 7) ಆದರೂ, ಕೆಲವು ಮಕ್ಕಳು, ನಂಬಿಗಸ್ತ ಹೆತ್ತವರ ಅತ್ಯುತ್ತಮವಾದ ಪ್ರಯತ್ನಗಳ ಎದುರಿನಲ್ಲೂ, ತಪ್ಪಾದ ಮಾರ್ಗಕ್ರಮವನ್ನು ಅನುಸರಿಸಲು ಆರಿಸಿಕೊಳ್ಳುತ್ತಾರೆ. ಇನ್ನಿತರ ಮಕ್ಕಳಿಗೆ, ಹೆತ್ತವರ ಅತ್ಯಂತ ಕೆಟ್ಟ ಪ್ರಭಾವವಿದ್ದರೂ, ಅವರು ಯೆಹೋವನನ್ನು ಪ್ರೀತಿಸಲು ಮತ್ತು ಸೇವಿಸಲು ಆರಿಸಿಕೊಳ್ಳುತ್ತಾರೆ. ಆತನ ಆಶೀರ್ವಾದದೊಂದಿಗೆ, ಅವರು ತಮ್ಮ ಜೀವನವನ್ನು ಸಫಲಗೊಳಿಸುತ್ತಾರೆ. ನಿಮ್ಮ ವಿಷಯದಲ್ಲಿ ಅದು ಏನಾಗಿರುವುದೆಂದು ನೀವು ಕೆಲವೊಮ್ಮೆ ಯೋಚಿಸುತ್ತೀರೊ? ಹಾಗಾದರೆ, ನೀವು ಸರಿಯಾದ ಆಯ್ಕೆಯನ್ನು ಮಾಡಬಲ್ಲಿರಿ ಎಂದು ಯೆಹೋವನು ಕೊಡುವ ವ್ಯಕ್ತಿಗತ ಆಶ್ವಾಸನೆಗಳಲ್ಲಿ ಕೆಲವನ್ನು ಪರಿಗಣಿಸಿರಿ.
ಯೆಹೋವನು ನಿಮ್ಮನ್ನು ನಂಬುತ್ತಾನೆ!
14. ಯೆಹೋವನಿಗೆ ನಮ್ಮ ಇತಿಮಿತಿಗಳು ಅರ್ಥವಾಗುತ್ತವೆಂದು ನಮಗೆ ಹೇಗೆ ಗೊತ್ತು?
14 ಯೆಹೋವನು ಎಲ್ಲವನ್ನೂ ನೋಡುತ್ತಾನೆ. ಜ್ಞಾನೋಕ್ತಿ 15:3 ಹೇಳುವುದು: “ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.” ಯೆಹೋವನ ಕುರಿತು ರಾಜ ದಾವೀದನು ಹೇಳಿದ್ದು: “ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.” (ಕೀರ್ತನೆ 139:16) ಆದುದರಿಂದ ನೀವು ಹೋರಾಡುತ್ತಿರುವ ನಕಾರಾತ್ಮಕ ಪ್ರವೃತ್ತಿಗಳು ಯಾವುವು ಎಂದು ಯೆಹೋವನಿಗೆ ತಿಳಿದಿದೆ. ನೀವು ಅದನ್ನು ರಕ್ತಗತವಾಗಿ ಪಡೆದಿದ್ದೀರೊ ಅಥವಾ ನಿಮ್ಮ ನಿಯಂತ್ರಣಕ್ಕೆ ಮೀರಿರುವ ಇತರ ಪ್ರಭಾವಗಳಿಂದಾಗಿ ಪಡೆದಿದ್ದೀರೊ ಎಂಬುದು ಆತನಿಗೆ ಗೊತ್ತಿದೆ. ಇವು ನಿಮ್ಮನ್ನು ನಿಖರವಾಗಿ ಹೇಗೆ ಪ್ರಭಾವಿಸುತ್ತವೆಂಬುದು ಆತನಿಗೆ ಅರ್ಥವಾಗುತ್ತದೆ. ನಿಮ್ಮ ಇತಿಮಿತಿಗಳ ಬಗ್ಗೆ ನಿಮಗಿಂತಲೂ ಆತನಿಗೇ ಚೆನ್ನಾಗಿ ಗೊತ್ತು. ಮತ್ತು ಆತನು ದಯಾಪೂರ್ಣನಾಗಿದ್ದಾನೆ. ನಾವು ಮಾಡಸಾಧ್ಯವಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಆತನು ಎಂದೂ ನಿರೀಕ್ಷಿಸುವುದಿಲ್ಲ.—ಕೀರ್ತನೆ 103:13, 14.
15. (ಎ) ಇತರರಿಂದ ಉದ್ದೇಶಪೂರ್ವಕವಾಗಿ ನೋಯಿಸಲ್ಪಟ್ಟಿರುವವರಿಗೆ, ಸಾಂತ್ವನದ ಒಂದು ಮೂಲವು ಯಾವುದು? (ಬಿ) ಯಾವ ಜವಾಬ್ದಾರಿಯನ್ನು ಕೊಡುವ ಮೂಲಕ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬನನ್ನು ಘನತೆಗೇರಿಸುತ್ತಾನೆ?
15 ಇನ್ನೊಂದು ಬದಿಯಲ್ಲಿ, ಪರಿಸ್ಥಿತಿಗಳಿಂದಾಗಿ ನಿಸ್ಸಹಾಯಕರಾಗಿ ಇರುವವರೋಪಾದಿ ಯೆಹೋವನು ನಮ್ಮನ್ನು ವೀಕ್ಷಿಸುವುದಿಲ್ಲ. ನಮಗೆ ಈ ಹಿಂದೆ ಕೆಟ್ಟ ಅನುಭವಗಳಿದ್ದಿರುವಲ್ಲಿ, ಯೆಹೋವನು ಅಂತಹ ಎಲ್ಲ ಬುದ್ಧಿಪೂರ್ವಕವಾಗಿ ನೋವನ್ನುಂಟುಮಾಡುವ ನಡತೆಯನ್ನು ದ್ವೇಷಿಸುತ್ತಾನೆಂಬ ಖಾತ್ರಿಯಿಂದ ನಾವು ಸಾಂತ್ವನವನ್ನು ಪಡೆದುಕೊಳ್ಳಬಹುದು. (ಕೀರ್ತನೆ 11:5; ರೋಮಾಪುರ 12:19) ಆದರೆ ನಾವು ಗೊತ್ತಿದ್ದು ತಪ್ಪಾದ ಆಯ್ಕೆಗಳನ್ನು ಮಾಡುವುದಾದರೆ, ಆತನು ನಮ್ಮ ತಪ್ಪು ಕೃತ್ಯಗಳ ಪರಿಣಾಮಗಳಿಂದ ನಮ್ಮನ್ನು ರಕ್ಷಿಸುವನೊ? ಖಂಡಿತವಾಗಿಯೂ ಇಲ್ಲ. ಆತನ ವಾಕ್ಯವು ಹೇಳುವುದು: “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಸರಿಯಾದದ್ದನ್ನೇ ಮಾಡುವ ಮತ್ತು ಆತನನ್ನೇ ಸೇವಿಸುವ ಜವಾಬ್ದಾರಿಯನ್ನು ನೀಡಿ, ಯೆಹೋವನು ತನ್ನ ಬುದ್ಧಿಶಕ್ತಿಯುಳ್ಳ ಜೀವಿಗಳನ್ನು ಘನತೆಗೇರಿಸುತ್ತಾನೆ. ಅದು ಮೋಶೆಯು ಇಸ್ರಾಯೇಲ್ ಜನಾಂಗಕ್ಕೆ ಹೇಳಿದಂತೆ ಇದೆ: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.” (ಧರ್ಮೋಪದೇಶಕಾಂಡ 30:19) ನಾವು ಕೂಡ ಸರಿಯಾದ ಆಯ್ಕೆಯನ್ನು ಮಾಡಬಲ್ಲೆವೆಂದು ಯೆಹೋವನಿಗೆ ಭರವಸೆಯಿದೆ. ನಮಗೆ ಅದು ತಿಳಿದಿರುವುದು ಹೇಗೆ?
16. ‘ನಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳುವುದರಲ್ಲಿ’ ನಾವು ಹೇಗೆ ಸಫಲರಾಗಿರಬಲ್ಲೆವು?
16 ಅಪೊಸ್ತಲ ಪೌಲನು ಬರೆದಂತಹ ವಿಷಯವನ್ನು ಗಮನಿಸಿರಿ: “ಹೀಗಿರುವಲ್ಲಿ ನನ್ನ ಪ್ರಿಯರೇ, . . . ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. ಯಾಕಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ.” (ಫಿಲಿಪ್ಪಿ 2:12, 13) ಇಲ್ಲಿ “ಸಾಧಿಸಿಕೊಳ್ಳಿರಿ” ಎಂದು ಭಾಷಾಂತರಿಸಲ್ಪಟ್ಟಿರುವ ಮೂಲ ಗ್ರೀಕ್ ಪದವು, ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದನ್ನು ಅರ್ಥೈಸುತ್ತದೆ. ಆದುದರಿಂದ ನಮ್ಮಲ್ಲಿ ಯಾರೂ ತಪ್ಪಿಬೀಳುವುದು ಅಥವಾ ಬಿಟ್ಟುಬಿಡುವುದು ಪೂರ್ವನಿಶ್ಚಯಿಸಲ್ಪಟ್ಟಿಲ್ಲ. ಯೆಹೋವ ದೇವರು ನಮಗೆ ಕೊಟ್ಟಿರುವ ಕೆಲಸವನ್ನು—ನಮ್ಮ ರಕ್ಷಣೆಗೆ ನಡಿಸುವ ಕೆಲಸವನ್ನು—ನಾವು ಪೂರ್ಣಗೊಳಿಸಬಲ್ಲೆವೆಂಬ ಭರವಸೆ ಆತನಿಗಿದೆ. ಹಾಗಿರದಿದ್ದಲ್ಲಿ, ಆತನು ಅಂತಹ ಹೇಳಿಕೆಯನ್ನು ಬರೆಯಲು ಪ್ರೇರಿಸುತ್ತಿರಲಿಲ್ಲ. ಆದರೆ ನಾವು ಹೇಗೆ ಸಫಲರಾಗಬಲ್ಲೆವು? ಅದು ನಮ್ಮ ಸ್ವಂತ ಬಲದಿಂದಲ್ಲ. ನಮಗೆ ಯಾರ ಸಹಾಯವು ಬೇಕಾಗಿರದಿರುತ್ತಿದ್ದಲ್ಲಿ, ನಾವು ‘ಮನೋಭೀತಿಯಿಂದ ನಡುಗುವವರಾಗಿರುವ’ ಅಗತ್ಯವಿರುತ್ತಿರಲಿಲ್ಲ. ಅದಕ್ಕೆ ಬದಲಾಗಿ, ಯೆಹೋವನು ‘ನಮ್ಮೊಳಗೆ ಕ್ರಿಯೆಗೈಯುತ್ತಾನೆ’ (NW). ಆತನ ಪವಿತ್ರಾತ್ಮವು, ‘ಸುಚಿತ್ತವನ್ನು ನಡೆಸಲು’ ಸಹಾಯಮಾಡುತ್ತಾ ನಮ್ಮ ಹೃದಮನಗಳಲ್ಲಿ ಕೆಲಸಮಾಡುತ್ತದೆ. ಆ ಪ್ರೀತಿಪರ ಸಹಾಯದೊಂದಿಗೆ, ನಾವು ಜೀವನದಲ್ಲಿ ಸರಿಯಾದ ಆಯ್ಕೆಗಳನ್ನು ಮಾಡಿ, ಅದಕ್ಕನುಸಾರ ಜೀವಿಸದಿರಲು ಯಾವುದಾದರೂ ಕಾರಣವಿದೆಯೊ? ಇಲ್ಲ!—ಲೂಕ 11:13.
17. ನಾವು ನಮ್ಮಲ್ಲೇ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಸಾಧ್ಯವಿದೆ, ಮತ್ತು ಹಾಗೆ ಮಾಡುವಂತೆ ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ?
17 ನಮಗೆ ಜಯಿಸಲು ಅಡಚಣೆಗಳಿರುವವು. ಇಂದಿನ ವರೆಗೆ ನಮಗಿದ್ದ ದುಶ್ಚಟಗಳು ಮತ್ತು ನಮ್ಮ ಆಲೋಚನೆಯನ್ನು ವಿಕೃತಗೊಳಿಸಸಾಧ್ಯವಿರುವ ಹಾನಿಕರ ಪ್ರಭಾವಗಳನ್ನು ನಾವು ಪ್ರಾಯಶಃ ಜಯಿಸಬೇಕಾಗುವುದು. ಹಾಗಿದ್ದರೂ, ಯೆಹೋವನ ಆತ್ಮದ ಸಹಾಯದಿಂದ ನಾವು ಇವುಗಳನ್ನು ಜಯಿಸಸಾಧ್ಯವಿದೆ! ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದಂತೆ, ದೇವರ ವಾಕ್ಯವು “ಬಲವಾಗಿರುವ” ಸಂಗತಿಗಳನ್ನೂ ಕೆಡವಿಹಾಕುವಷ್ಟು ಶಕ್ತಿಶಾಲಿಯಾಗಿದೆ. (2 ಕೊರಿಂಥ 10:4) ನಮ್ಮಲ್ಲೇ ಸಂಪೂರ್ಣ ಬದಲಾವಣೆಗಳನ್ನು ಮಾಡಿಕೊಳ್ಳಲಿಕ್ಕಾಗಿ ಯೆಹೋವನು ನಮಗೆ ಸಹಾಯಮಾಡಬಲ್ಲನು. ನಾವು “ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿ”ಬಿಡುವಂತೆ ಮತ್ತು ‘ನಮ್ಮ ಅಂತರ್ಯದಲ್ಲಿ ಹೊಸಬರಾಗಿ ನೂತನಸ್ವಭಾವವನ್ನು ಧರಿಸಿಕೊಳ್ಳುವಂತೆ’ ಆತನ ವಾಕ್ಯವು ಪ್ರೇರಿಸುತ್ತದೆ. “ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.” (ಎಫೆಸ 4:22-24) ನಾವು ಅಂತಹ ಬದಲಾವಣೆಗಳನ್ನು ಮಾಡುವಂತೆ ಯೆಹೋವನ ಆತ್ಮವು ನಮಗೆ ನಿಜವಾಗಿಯೂ ಸಹಾಯಮಾಡಬಲ್ಲದೊ? ನಿಶ್ಚಯವಾಗಿಯೂ! ದೇವರ ಆತ್ಮವು ನಮ್ಮಲ್ಲಿ ಫಲವನ್ನು ಉತ್ಪಾದಿಸುತ್ತದೆ—ಇವು ನಾವೆಲ್ಲರೂ ವಿಕಸಿಸಿಕೊಳ್ಳಲು ಬಯಸುವಂತಹ ಮನೋಹರವಾದ, ಅಮೂಲ್ಯ ಗುಣಗಳು. ಇವುಗಳಲ್ಲಿ ಪ್ರಥಮ ಗುಣವು, ಪ್ರೀತಿಯಾಗಿದೆ.—ಗಲಾತ್ಯ 5:22, 23.
18. ವಿವೇಚನಾಶೀಲನಾದ ಪ್ರತಿಯೊಬ್ಬ ಮಾನವನು ಮಾಡಲು ಸಂಪೂರ್ಣ ಶಕ್ತನಾಗಿರುವ ಆಯ್ಕೆಯು ಯಾವುದು, ಮತ್ತು ಇದು ನಾವು ಏನನ್ನು ಮಾಡಲು ದೃಢನಿರ್ಧಾರವುಳ್ಳವರಾಗಿರುವಂತೆ ಸಹಾಯಮಾಡಬೇಕು?
18 ಇಲ್ಲಿಯೇ ಒಂದು ಮಹಾ, ಬಿಡುಗಡೆಗೊಳಿಸುವಂತಹ ಸತ್ಯವು ಅಡಕವಾಗಿದೆ. ಯೆಹೋವ ದೇವರಿಗೆ ಪ್ರೀತಿಸುವ ಅಪರಿಮಿತ ಸಾಮರ್ಥ್ಯವಿದೆ, ಮತ್ತು ನಾವು ಆತನ ಸ್ವರೂಪದಲ್ಲಿ ರಚಿಸಲ್ಪಟ್ಟಿದ್ದೇವೆ. (ಆದಿಕಾಂಡ 1:26; 1 ಯೋಹಾನ 4:8) ಆದುದರಿಂದ ನಾವು ಯೆಹೋವನನ್ನು ಪ್ರೀತಿಸಲು ಆರಿಸಿಕೊಳ್ಳಬಹುದು. ನಮ್ಮ ಭವಿಷ್ಯತ್ತಿಗೆ ಕೀಲಿಕೈ, ನಾವು ಕ್ರೈಸ್ತರಾಗುವುದಕ್ಕಿಂತ ಮುಂಚಿನ ಜೀವಿತವು, ನಾವು ಮಾಡಿರುವ ತಪ್ಪುಗಳು, ಅಥವಾ ತಪ್ಪನ್ನು ಮಾಡಲಿಕ್ಕಾಗಿ ನಾವು ಬಾಧ್ಯತೆಯಾಗಿ ಪಡೆದಿರುವ ಪ್ರವೃತ್ತಿಯಲ್ಲ, ಅದಕ್ಕೆ ಬದಲಾಗಿ ಆ ಪ್ರೀತಿಯೇ ಆಗಿದೆ. ಏದೆನಿನಲ್ಲಿ ನಂಬಿಗಸ್ತರಾಗಿ ಉಳಿಯಲಿಕ್ಕಾಗಿ, ಆದಾಮ ಹವ್ವರಿಗೆ ಯೆಹೋವ ದೇವರ ಮೇಲೆ ಪ್ರೀತಿಯಿರಬೇಕಿತ್ತು. ಅರ್ಮಗೆದೋನನ್ನು ಪಾರಾಗಲು ಮತ್ತು ಕ್ರಿಸ್ತನ ಸಹಸ್ರ ವರ್ಷಗಳ ಆಳ್ವಿಕೆಯ ಅಂತ್ಯದಲ್ಲಿನ ಕೊನೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂತಹ ಪ್ರೀತಿಯೇ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. (ಪ್ರಕಟನೆ 7:14; 20:5, 7-10) ನಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಅಂತಹ ಪ್ರೀತಿಯನ್ನು ಬೆಳೆಸಿಕೊಳ್ಳಬಹುದು. (ಮತ್ತಾಯ 22:37; 1 ಕೊರಿಂಥ 13:13) ಯೆಹೋವನನ್ನು ಪ್ರೀತಿಸಲು ಮತ್ತು ಆ ಪ್ರೀತಿಯನ್ನು ನಿತ್ಯತೆಗೂ ಹೆಚ್ಚಿಸುತ್ತಾ ಇರಲು ನಾವು ದೃಢನಿರ್ಧಾರವುಳ್ಳವರಾಗಿರೋಣ.
ನೀವೇನು ನೆನಸುತ್ತೀರಿ?
◻ ವ್ಯಕ್ತಿಗತ ಜವಾಬ್ದಾರಿಯ ಕುರಿತಾಗಿ ಯಾವ ಜನಪ್ರಿಯ ಅಭಿಪ್ರಾಯಗಳು ಬೈಬಲಿನ ಸಕಾರಾತ್ಮಕ ಬೋಧನೆಯನ್ನು ವಿರೋಧಿಸುತ್ತವೆ?
◻ ಪ್ರತಿಯೊಬ್ಬ ಕ್ರೈಸ್ತನು ತನ್ನಲ್ಲೇ ಯಾವ ಕಟ್ಟುವ ಕೆಲಸವನ್ನು ಮಾಡಬೇಕು?
◻ ಯೆಹೂದದ ರಾಜರುಗಳ ಮಾದರಿಗಳು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಆಯ್ಕೆಯನ್ನು ಮಾಡುತ್ತಾನೆಂಬುದನ್ನು ಹೇಗೆ ಪ್ರದರ್ಶಿಸುತ್ತವೆ?
◻ ನಮ್ಮ ಸುತ್ತುಮುತ್ತಲಿನ ನಕಾರಾತ್ಮಕ ಪ್ರಭಾವಗಳ ಎದುರಿನಲ್ಲೂ ನಾವು ಜೀವನದಲ್ಲಿ ಸರಿಯಾದ ಆಯ್ಕೆಗಳನ್ನು ಮಾಡಬಲ್ಲೆವೆಂದು ಯೆಹೋವನು ನಮಗೆ ಹೇಗೆ ಆಶ್ವಾಸನೆಯನ್ನು ನೀಡುತ್ತಾನೆ?
[ಪುಟ 15 ರಲ್ಲಿರುವ ಚಿತ್ರ]
ನಿಮ್ಮ ಭವಿಷ್ಯತ್ತನ್ನು ವಂಶವಾಹಿಗಳು ನಿರ್ಧರಿಸುತ್ತವೊ?
[ಪುಟ 17 ರಲ್ಲಿರುವ ಚಿತ್ರ]
ತನ್ನ ತಂದೆಯು ಕೆಟ್ಟ ಮಾದರಿಯನ್ನಿಟ್ಟರೂ, ರಾಜನಾದ ಯೋಷೀಯನು ದೇವರ ಸೇವೆಮಾಡಲು ಆರಿಸಿಕೊಂಡನು