ಅವರು ಹಿಂಸಾಚಾರಕ್ಕೆ ಇಳಿಯುವ ಕಾರಣ
ಅಮೆರಿಕದ ಕಾಲರಾಡೋ ಡೆನ್ವರ್ನಲ್ಲಿ, ಸುಮಾರು 7 ತಿಂಗಳಿನ ಶಿಶುವಿನ ಜನನವಾಯಿತು. ಆ ಗಂಡುಮಗು ಬದುಕುಳಿಯಿತು, ಮತ್ತು ಆಸ್ಪತ್ರೆಯಲ್ಲಿ ಮೂರು ತಿಂಗಳುಗಳ ಬಳಿಕ ಆ ಮಗುವನ್ನು ಮನೆಗೆ ಕರೆದುಕೊಂಡುಹೋಗುವಂತೆ ಹೆತ್ತವರಿಗೆ ಒಪ್ಪಿಸಲಾಯಿತು. ಮೂರು ವಾರಗಳ ಬಳಿಕ, ಆ ಮಗು ಪುನಃ ಆಸ್ಪತ್ರೆಯಲ್ಲಿತ್ತು. ಯಾಕೆ? ಆ ಮಗುವಿನ ತಂದೆಯು ಅವನನ್ನು ಮೇಲೆತ್ತಿ ಜೋರಾಗಿ ಕುಲುಕಿದ್ದರಿಂದ, ಅವನ ಮಿದುಳಿಗೆ ತೀವ್ರ ಪ್ರಮಾಣದ ಹಾನಿಯಾಗಿತ್ತು. ಆ ತಂದೆಯು ಹೀಗೇಕೆ ಮಾಡಿದನೆಂದರೆ, ಅವನಿಗೆ ಮಗು ಸತತವಾಗಿ ಅಳುತ್ತಾ ಇದ್ದದ್ದು ಕಿರಿಕಿರಿಯನ್ನು ಉಂಟುಮಾಡಿತು. ಆ ಮಗು ಕುರುಡನೂ, ಅಂಗವಿಕಲನೂ ಆದನು. ಆಧುನಿಕ ಔಷಧವು, ಆ ಮಗುವಿನ ಜನನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಅವನನ್ನು ಪಾರುಮಾಡಿತ್ತಾದರೂ, ಅವನ ತಂದೆಯ ಹಿಂಸಾತ್ಮಕ ಕ್ರಿಯೆಯಿಂದ ರಕ್ಷಿಸಲು ಶಕ್ತವಾಗಿರಲಿಲ್ಲ.
ಭೂಮಿಯಲ್ಲಿಯೇ ಅತ್ಯಂತ ಹಿಂಸಾತ್ಮಕ ಸ್ಥಳಗಳಲ್ಲಿ ಒಂದಾಗಿರುವ ಮನೆಯಲ್ಲಿ, ಅಸಂಖ್ಯಾತ ಮಕ್ಕಳನ್ನು ಕ್ರೂರವಾಗಿ ಉಪಚರಿಸಲಾಗುತ್ತದೆ, ಸತತವಾಗಿ ಹೊಡೆಯಲಾಗುತ್ತದೆ, ಅಥವಾ ಕೊಲ್ಲಲಾಗುತ್ತದೆ! ಅಮೆರಿಕವೊಂದರಲ್ಲೇ, ಪ್ರತಿ ವರ್ಷ 5,000ದಷ್ಟು ಹೆಚ್ಚು ಮಕ್ಕಳು ತಮ್ಮ ಹೆತ್ತವರ ಕೈಯಿಂದಲೇ ಸಾಯುತ್ತಾರೆಂದು ಕೆಲವರು ಅಂದಾಜುಮಾಡುತ್ತಾರೆ! ಇದಕ್ಕೆ ಮಕ್ಕಳು ಮಾತ್ರವೇ ಬಲಿಪಶುಗಳಾಗಿರುವುದಿಲ್ಲ. ಲೋಕ ಆರೋಗ್ಯ (ಇಂಗ್ಲಿಷ್) ಪತ್ರಿಕೆಗನುಸಾರ, ಅಮೆರಿಕದಲ್ಲಿನ “ತಾಯಿಯಾಗಬಲ್ಲ ವಯಸ್ಸಿನ ಸ್ತ್ರೀಯರಿಗೆ ಆಗುವ ಹಾನಿಗೆ, ಮುಖ್ಯ ಕಾರಣವು ಪತ್ನಿಯರೊಂದಿಗೆ ತೀರ ಕೆಟ್ಟ ರೀತಿಯಲ್ಲಿ ವ್ಯವಹರಿಸುವುದೇ ಆಗಿದೆ.” ಇತರ ದೇಶಗಳ ಕುರಿತಾಗಿ ಏನು? “[ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ] ಸಮೀಕ್ಷೆ ನಡೆಸಲ್ಪಟ್ಟ ಮೂರನೆಯ ಒಂದಂಶದಿಂದ ಹಿಡಿದು ಅರ್ಧದಷ್ಟು ಸ್ತ್ರೀಯರು, ತಮ್ಮ ಗಂಡಂದಿರು ತಮ್ಮನ್ನು ಹೊಡೆಯುತ್ತಾರೆಂದು ವರದಿಸುತ್ತಾರೆ.” ಹೌದು, ಹಿಂಸಾಚಾರವು ಹಾನಿಯನ್ನುಂಟು ಮಾಡುತ್ತಿದೆ, ವಿಶೇಷವಾಗಿ ಮನೆಯಲ್ಲಿ.
ಅನೇಕ ಗಂಡಹೆಂಡತಿಯರು, ತಮ್ಮ ಭಿನ್ನಾಭಿಪ್ರಾಯಗಳನ್ನು ಹಿಂಸಾಚಾರದ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತಾರೆ. ಕೆಲವು ದೇಶಗಳಲ್ಲಿ, ಹೆತ್ತವರು ಮತ್ತು ಶಿಕ್ಷಕರು, ಮಕ್ಕಳ ಮೇಲೆ ಹಿಂಸಾಚಾರವನ್ನು ಪ್ರಯೋಗಿಸುವ ಮೂಲಕ, ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ. ಶಾಲೆಯಲ್ಲಿನ ಪುಂಡ ಮಕ್ಕಳು, ಬರಿಯ ತಮಾಷೆಗಾಗಿ, ತಮಗಿಂತ ದುರ್ಬಲರಾದವರನ್ನು ಪೀಡಿಸಿ, ಅವರ ಮೇಲೆ ಬಲಪ್ರಯೋಗ ಮಾಡುತ್ತಾರೆ. ಮನುಷ್ಯರು ಏಕೆ ಇಷ್ಟೊಂದು ಹಿಂಸಾತ್ಮಕರಾಗುತ್ತಾರೆ?
ಜನರು ಹಿಂಸಾತ್ಮಕರಾಗುವ ಕಾರಣ
ಮನುಷ್ಯರು ಸ್ವಭಾವತಃ ಹಿಂಸಾತ್ಮಕರೆಂದು ಕೆಲವರು ಪ್ರತಿಪಾದಿಸುತ್ತಾರೆ. ಅಮೆರಿಕದಲ್ಲಿ ಎಲ್ಲೆಲ್ಲೂ ಹಬ್ಬಿರುವ ಹಿಂಸಾತ್ಮಕ ಪಾತಕವು ಇಳಿಮುಖಗೊಂಡಿರುವುದಾದರೂ, ಯುವ ಜನರ ನಡುವೆ ಅದು ಹೆಚ್ಚಾಗಿದೆ. ಮತ್ತು ಹಿಂಸಾಚಾರದಲ್ಲಿ ಆಸಕ್ತಿಯೂ ಹೆಚ್ಚಿದೆ. ಮೂರು ಪ್ರಧಾನ ಟೆಲಿವಿಷನ್ ನೆಟ್ವರ್ಕ್ಗಳು, ಅಪರಾಧಗಳಿಂದ ತುಂಬಿರುವ ಧಾರಾವಾಹಿಗಳನ್ನು ಇಮ್ಮಡಿಗೊಳಿಸಿದವು ಮತ್ತು ಕೊಲೆಗಳ ಕುರಿತಾದ ವರದಿಗಳನ್ನು ಮುಮ್ಮಡಿಗೊಳಿಸಿದವು. ಹೌದು, ಅಪರಾಧದಿಂದ ಲಾಭಯುಕ್ತವಾದ ವ್ಯಾಪಾರವು ಆಗುತ್ತದೆ. “ನಾವು ಹಿಂಸಾಚಾರವನ್ನು ನೋಡಿ ಸುಮ್ಮನಿರುತ್ತೇವೆ ಮಾತ್ರವಲ್ಲ, ಅದು ದೊಡ್ಡ ವಿಷಯವೋ ಎಂಬಂತೆ ನಮ್ಮ ವಾರ್ತಾಪತ್ರಿಕೆಗಳ ಮುಖಪುಟಗಳಲ್ಲಿ ಹಾಕುತ್ತೇವೆ. ನಮ್ಮ ಮಕ್ಕಳನ್ನು ಮನೋರಂಜಿಸಲಿಕ್ಕಾಗಿ ನಮ್ಮ ಹೆಚ್ಚಿನ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ನಾವು ಅಪರಾಧವನ್ನು ತೋರಿಸುತ್ತೇವೆ. ನಾವದನ್ನು ಮನ್ನಿಸುತ್ತೇವೆ ಮಾತ್ರವಲ್ಲ, ನಾವದನ್ನು ಇಷ್ಟಪಡುತ್ತೇವೆ!” ಎಂದು ಮನೋವೈದ್ಯ ಕಾರ್ಲ್ ಮೆನಿಂಗರ್ ಹೇಳಿದರು.
ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ಸೂಚಿಸುವುದೇನೆಂದರೆ, ಮಾನವನ ಆಕ್ರಮಣಪ್ರವೃತ್ತಿಗೆ, ಮಿದುಳಿನ ರಚನೆ ಮತ್ತು ಪರಿಸರದೊಂದಿಗೆ ಬಹಳಷ್ಟು ಸಂಬಂಧವಿದೆ. “ಕೆಟ್ಟ ಪರಿಸರಗಳಲ್ಲಿರುವ ಹೆಚ್ಚೆಚ್ಚು ಮಕ್ಕಳು, ನಿಶ್ಚಯವಾಗಿಯೂ ಹಿಂಸಾಚಾರದ ಪಿಡುಗನ್ನು ಉಂಟುಮಾಡುತ್ತಿದ್ದಾರೆಂಬ ತೀರ್ಮಾನಕ್ಕೆ ನಾವೆಲ್ಲರೂ ಬರಲಾರಂಭಿಸಿದ್ದೇವೆ,” ಎಂದು ಬಾಲಕರ ಸಂಶೋಧನೆಗಾಗಿರುವ ಇಲಿನೊಯಿ ಇನ್ಸ್ಟಿಟ್ಯೂಟ್ ವಿಶ್ವವಿದ್ಯಾನಿಲಯದ ಡಾ. ಮಾರ್ಕಸ್ ಜೆ. ಕ್ರೂಸಿ ಹೇಳುತ್ತಾರೆ. “ಪರಿಸರೀಯ ಘಟನೆಗಳು, ಜನರನ್ನು ಹೆಚ್ಚು ಆವೇಗಪರರನ್ನಾಗಿ ಮಾಡುವ ಮಿದುಳಿನಲ್ಲಿನ ಅಣುಗಳ ಬದಲಾವಣೆಗಳನ್ನು ನಿಜವಾಗಿಯೂ ಉಂಟುಮಾಡುತ್ತವೆ.” ಮಿದುಳಿನ ಒಳಗೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಕುಟುಂಬ ರಚನೆಯ ಕುಸಿತ, ಏಕ ಹೆತ್ತವರ ಸಂಖ್ಯೆಯಲ್ಲಿನ ವೃದ್ಧಿ, ಬೆಂಬಿಡದ ಬಡತನ, ಮತ್ತು ದೀರ್ಘಕಾಲದ ಅಮಲೌಷಧ ದುರುಪಯೋಗವು ಮಿದುಳಿನ ಸಂಯೋಜನೆಯನ್ನು ಆಕ್ರಮಣಪ್ರವೃತ್ತಿಯ ನಡವಳಿಕೆಯ ಕಡೆಗೆ ಓಲುವಂತೆ ಮಾಡಸಾಧ್ಯವಿದೆ—ಈ ಪರಿಣಾಮವನ್ನು ಒಂದು ಸಮಯದಲ್ಲಿ ಅಸಾಧ್ಯವೆಂದು ಎಣಿಸಲಾಗಿತ್ತು.”
ಮಿದುಳಿನಲ್ಲಿ ಆಗುವ ಬದಲಾವಣೆಗಳಲ್ಲಿ, ಸಿರೊಟೋನಿನ್ ಮಟ್ಟದ ಕಡಿಮೆಯಾಗುವಿಕೆ ಒಂದು, ಎಂದು ಹೇಳಲಾಗುತ್ತದೆ. ಸಿರೊಟೋನಿನ್, ಆಕ್ರಮಣಪ್ರವೃತ್ತಿಯನ್ನು ದೂರವಿಡುವುದೆಂದು ನೆನಸಲಾಗುವ ಮಿದುಳಿನ ಒಂದು ರಾಸಾಯನಿಕವಾಗಿದೆ. ಮದ್ಯಸಾರವು, ಮಿದುಳಿನಲ್ಲಿನ ಸಿರೊಟೋನಿನ್ನ ಮಟ್ಟವನ್ನು ಕಡಿಮೆಗೊಳಿಸಸಾಧ್ಯವೆಂದು ಸಂಶೋಧನೆಗಳು ಪ್ರಕಟಪಡಿಸುತ್ತವೆ. ಇದು, ದೀರ್ಘ ಸಮಯದಿಂದ ತಿಳಿದಿದ್ದ, ಹಿಂಸಾಚಾರ ಮತ್ತು ಮದ್ಯದ ದುರುಪಯೋಗದ ನಡುವೆಯಿರುವ ಸಂಬಂಧಕ್ಕೆ ವೈಜ್ಞಾನಿಕ ಆಧಾರವನ್ನು ಕೊಡುತ್ತದೆ.
ಇಂದು ಹಿಂಸಾಚಾರದಲ್ಲಿ ಆಗುತ್ತಿರುವ ವೃದ್ಧಿಯಲ್ಲಿ ಇನ್ನೊಂದು ಅಂಶವು ಸಹ ಒಳಗೂಡಿದೆ. ಒಂದು ಭರವಸಾರ್ಹ ಪ್ರವಾದನಾ ಪುಸ್ತಕವಾಗಿರುವ ಬೈಬಲು ಎಚ್ಚರಿಸುವುದು: “ನೆನಪಿಡು, ಕಡೇ ದಿವಸಗಳಲ್ಲಿ ಕಷ್ಟಕರ ಸಮಯಗಳಿರುವವು. ಜನರು ಸ್ವಾರ್ಥಿಗಳು, ಲೋಭಿಗಳು, ಬಡಾಯಿಕೊಚ್ಚುವವರು, ಮತ್ತು ಅಹಂಕಾರಿಗಳಾಗಿರುವರು; . . . ಅವರು ದಯೆಯಿಲ್ಲದವರು, ಕರುಣೆಯಿಲ್ಲದವರು, ಮಿಥ್ಯಾಪವಾದಿಗಳು, ಹಿಂಸಾಭಾವದವರು, ಮತ್ತು ಕ್ರೂರಿಗಳಾಗಿರುವರು; ಅವರು ಒಳ್ಳೇದನ್ನು ದ್ವೇಷಿಸುವರು; ಅವರು ವಂಚಕರು, ಹುಚ್ಚುಧೈರ್ಯದವರು, ಮತ್ತು ಗರ್ವದಿಂದ ಉಬ್ಬಿಕೊಂಡವರು ಆಗಿರುವರು . . . ಇಂಥ ಜನರಿಂದ ದೂರವಿರಿ.” (2 ತಿಮೊಥೆಯ 3:1-5, ಟುಡೇಸ್ ಇಂಗ್ಲಿಷ್ ವರ್ಷನ್) ಹೌದು, ನಾವು ಇಂದು ನೋಡುತ್ತಿರುವ ಹಿಂಸಾಚಾರವು, “ಕಡೇ ದಿವಸಗಳ” ಕುರಿತಾದ ಬೈಬಲ್ ಪ್ರವಾದನೆಯ ನೆರವೇರಿಕೆಯಾಗಿದೆ.
ಇನ್ನೊಂದು ಸಂಗತಿಯು, ಈ ಸಮಯವನ್ನು ಅತಿ ಹಿಂಸಾತ್ಮಕ ಸಮಯವನ್ನಾಗಿ ಮಾಡುತ್ತದೆ. “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ” ಎಂದು ಬೈಬಲು ಹೇಳುತ್ತದೆ. (ಪ್ರಕಟನೆ 12:12) ಪಿಶಾಚನು ಮತ್ತು ಅವನ ದೆವ್ವ ಪಡೆಗಳು, ಸ್ವರ್ಗದಿಂದ ಹೊರ ದೊಬ್ಬಲ್ಪಟ್ಟಿವೆ ಮತ್ತು ಅವು ಈಗ ಮಾನವಕುಲಕ್ಕೆ ಕೇಡನ್ನು ಉಂಟುಮಾಡುವುದರ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿವೆ. “ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿ”ಯೋಪಾದಿ, ಪಿಶಾಚನು “ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮ”ವನ್ನು ನಿಯಂತ್ರಿಸುತ್ತಿದ್ದಾನೆ. ಇದು ಭೂಮಿಯನ್ನು ಹೆಚ್ಚೆಚ್ಚು ಹಿಂಸಾತ್ಮಕ ಸ್ಥಳವನ್ನಾಗಿ ಮಾಡುತ್ತಿದೆ.—ಎಫೆಸ 2:2.
ಹಾಗಾದರೆ ಇಂದಿನ ಲೋಕದ ಹಿಂಸಾತ್ಮಕ “ವಾಯು”ವನ್ನು ನಾವು ಹೇಗೆ ಎದುರಿಸಬಲ್ಲೆವು? ಮತ್ತು ಹಿಂಸಾಚಾರವಿಲ್ಲದೆ ನಾವು ಮನಸ್ತಾಪಗಳನ್ನು ಹೇಗೆ ಬಗೆಹರಿಸಬಲ್ಲೆವು?
[ಪುಟ 3 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಭೂಮಿಯಲ್ಲಿಯೇ ಅತ್ಯಂತ ಹಿಂಸಾತ್ಮಕ ಸ್ಥಳಗಳಲ್ಲಿ ಒಂದಾಗಿರುವ ಮನೆಯಲ್ಲಿ, ಅಸಂಖ್ಯಾತ ಮಕ್ಕಳನ್ನು ಕ್ರೂರವಾಗಿ ಉಪಚರಿಸಲಾಗುತ್ತದೆ, ಸತತವಾಗಿ ಹೊಡೆಯಲಾಗುತ್ತದೆ, ಅಥವಾ ಕೊಲ್ಲಲಾಗುತ್ತದೆ