ಕಲ್ಲೆದೆಯವರು ಪ್ರತಿಕ್ರಿಯೆ ತೋರಿಸುವಾಗ
ಇಸವಿ 1989ರಲ್ಲಿ ಪೋಲೆಂಡ್ನಲ್ಲಿರುವ ಯೆಹೋವನ ಸಾಕ್ಷಿಗಳಿಗೆ, ಒಂದು ಧಾರ್ಮಿಕ ಸಂಸ್ಥೆಯೋಪಾದಿ ಶಾಸನಬದ್ಧ ಮನ್ನಣೆಯನ್ನು ಕೊಡಲಾಯಿತು. ತಮ್ಮ ಕ್ರೈಸ್ತ ತಾಟಸ್ಥ್ಯಕ್ಕಾಗಿ ಸೆರೆಗೆ ಹಾಕಲ್ಪಟ್ಟ ಸಾಕ್ಷಿಗಳನ್ನು ಕ್ರಮೇಣವಾಗಿ ಬಿಡುಗಡೆಗೊಳಿಸಲಾಯಿತು. ಆದರೆ ಇವರಿಂದ ಬೈಬಲಿನ ಕುರಿತಾಗಿ ಹೆಚ್ಚನ್ನು ಕಲಿಯಲು ಬಯಸುತ್ತಿದ್ದ ಅನೇಕ ಸೆರೆವಾಸಿಗಳು, ಸೆರೆಮನೆಯಲ್ಲೇ ಹಿಂದುಳಿದರು. ಅಂತಹ ಒಂದು ಸೆರೆಮನೆಯಲ್ಲಿ, ಒಂದು ಸಮಯದಲ್ಲಿ ಕಲ್ಲೆದೆಯಿದ್ದವರು ದೇವರ ವಾಕ್ಯದ ಶಕ್ತಿಗೆ ಪ್ರತಿಕ್ರಿಯಿಸುವಂತೆ ಯೆಹೋವನ ಸಾಕ್ಷಿಗಳು ಸಹಾಯಮಾಡಲು ಪ್ರಯತ್ನಿಸಿದ ರೀತಿಯ ಕುರಿತಾಗಿ ಇಲ್ಲಿ ಒಂದು ವೃತ್ತಾಂತವಿದೆ.
ನೈರುತ್ಯ ಪೋಲೆಂಡ್ನಲ್ಲಿ 12,000 ಮಂದಿ ನಿವಾಸಿಗಳಿರುವ ಒಂದು ಪಟ್ಟಣವಾದ ವೊವುಫ್ನಲ್ಲಿ, ಪೋಲೆಂಡಿನ ಅತ್ಯಂತ ದುಷ್ಟ ಪಾತಕಿಗಳು ಇರುವ 200 ವರ್ಷಗಳಷ್ಟು ಹಳೆಯ ಕಾಲದ ಕಾರಾಗೃಹವಿದೆ. ಯೆಹೋವನ ಸಾಕ್ಷಿಗಳಿಗೆ ತಮ್ಮ ಕೆಲಸಕ್ಕಾಗಿ ಅಧಿಕೃತ ಮನ್ನಣೆ ಸಿಕ್ಕಿದಂದಿನಿಂದ, ಅಲ್ಲಿರುವ ಸೆರೆವಾಸಿಗಳಿಗೆ ರಾಜ್ಯ ಸುವಾರ್ತೆಯನ್ನು ತಲಪಿಸಲು ಅವರು ಪ್ರಯತ್ನಿಸಿದ್ದಾರೆ. ಅವರು ಇದನ್ನು ತುಂಬ ಹುರುಪಿನಿಂದ ಮಾಡುತ್ತಾರೆ.
ಪೋಲೆಂಡ್ನಲ್ಲಿರುವ ಎಲ್ಲ ಸೆರೆಮನೆ ಆಡಳಿತಗಾರರಿಗೆ ಫೆಬ್ರವರಿ 1990ರಲ್ಲಿ ನ್ಯಾಯಾಂಗ ಖಾತೆಯಿಂದ ಕಳುಹಿಸಲ್ಪಟ್ಟ ಒಂದು ಪತ್ರವು ದಾರಿಯನ್ನು ಸುಗಮಗೊಳಿಸಿತು. ವಾಚ್ಟವರ್ ಸೊಸೈಟಿಯ ಪ್ರಕಾಶನಗಳನ್ನು ಪಡೆಯಲು ಅಥವಾ ಯೆಹೋವನ ಸಾಕ್ಷಿಗಳನ್ನು ಭೇಟಿಯಾಗಲು ಬಯಸುವ ಯಾವ ಸೆರೆವಾಸಿಗೂ ಅವರು “ತೊಂದರೆಗಳನ್ನು ಉಂಟುಮಾಡಬಾರದೆಂದು” ಆ ಪತ್ರದಲ್ಲಿ ಹೇಳಲಾಯಿತು. ವೊವುಫ್ ಸೆರೆಮನೆಯಲ್ಲಿ ಅನೇಕ ವರ್ಷಗಳ ವರೆಗೆ ಇದ್ದ ಸಾಕ್ಷಿಗಳಿಗೆ, ಅಲ್ಲಿದ್ದ ನಿರ್ದಯಿ ಕೈದಿಗಳ ಒಳ್ಳೆಯ ಪರಿಚಯವಿತ್ತು. ಆದರೆ, ಇತರ ಸೆರೆವಾಸಿಗಳ ಕಲ್ಲೆದೆಗಳನ್ನು ಬೈಬಲ್ ಸತ್ಯವು ಮೃದುಗೊಳಿಸುವಂತೆ, ಅವರು ಮಾಡುವ ಪ್ರಯತ್ನಗಳನ್ನು ಆಶೀರ್ವದಿಸಲು ಅವರು ಯೆಹೋವನ ಮೇಲೆ ಆತುಕೊಂಡರು.
ಕೆಲಸವನ್ನು ಆರಂಭಿಸುವುದು
“ಆ ಕಾರ್ಯಕ್ರಮವನ್ನು ಆರಂಭಿಸುವುದು ಕಷ್ಟಕರವಾಗಿತ್ತು,” ಎಂದು ಸುಮಾರು 40 ಕಿಲೊಮೀಟರ್ ದೂರದಲ್ಲಿರುವ ವ್ರೊಟ್ಸ್ಲಾಫ್ ನಗರದ ಸಹೋದರ ಚೆಸ್ವಾಫ್ ಹೇಳುತ್ತಾರೆ. ಇವರಿಗೆ, ವೊವುಫ್ನಲ್ಲಿರುವ ಸೆರೆಮನೆಯನ್ನು ಭೇಟಿಮಾಡಲು ಅನುಮತಿಯನ್ನು ನೀಡಲಾಗಿದೆ. “ನಮ್ಮ ‘ಧಾರ್ಮಿಕ ಸೇವೆ’ಯು ಸೆರೆವಾಸಿಗಳಿಗಾಗಿ ಉಪಯುಕ್ತವಾಗಿದೆಯೆಂದು ಸೆರೆಮನೆಯ ಅಧಿಕಾರಿಗಳಿಗೆ ಮನವರಿಕೆಯಾಗಲು, ಅನೇಕ ದೀರ್ಘ ಚರ್ಚೆಗಳನ್ನು ನಡಿಸಬೇಕಾಯಿತು.”
ವಿಷಯಗಳನ್ನು ಜಟಿಲಗೊಳಿಸುತ್ತಾ, “ಕೈದಿಗಳು ಆ ಧಾರ್ಮಿಕ ಸೇವೆಯನ್ನು ಭೌತಿಕ ಲಾಭಕ್ಕಾಗಿ ಕೇವಲ ಒಂದು ನೆವವಾಗಿ ಉಪಯೋಗಿಸುತ್ತಿದ್ದರೆಂದು, ಒಬ್ಬ ಉಚ್ಚಸ್ಥಾನದ ಅಧಿಕಾರಿಯು ಪಟ್ಟುಹಿಡಿದು ಹೇಳಿದರು” ಎಂದು ಚೆಸ್ವಾಫ್ರವರ ಸಂಗಾತಿ ಪಾವೆವ್ ಜ್ಞಾಪಿಸಿಕೊಳ್ಳುತ್ತಾರೆ. ಆದರೆ, ಒಂದು ಕಾಲದಲ್ಲಿ ತುಂಬ ಅಪಾಯಕಾರಿ ಪಾತಕಿಗಳಾದ ಮೂವರು ವ್ಯಕ್ತಿಗಳು, 1991ರಲ್ಲಿ ದೀಕ್ಷಾಸ್ನಾನಪಡೆದುಕೊಂಡಾಗ, ಸೆರೆಮನೆ ಅಧಿಕಾರಿಗಳು ತಮ್ಮ ಮನೋಭಾವವನ್ನು ಬದಲಾಯಿಸಿದರು ಮತ್ತು ಹೆಚ್ಚು ಸಹಕಾರವು ಸಿಕ್ಕಿತು.
“ಕೈದಿಗಳು, ಭೇಟಿಯಾಗಲು ಬರುತ್ತಿದ್ದ ಅವರ ಕುಟುಂಬಗಳು, ಮತ್ತು ಕಾರಾಗೃಹದ ಸಿಬ್ಬಂದಿಗೆ ಸಾಕ್ಷಿಕೊಡುವ ಮೂಲಕ ನಾವು ಆರಂಭಿಸಿದೆವು” ಎಂದು ಚೆಸ್ವಾಫ್ ವಿವರಿಸುತ್ತಾರೆ. “ಅನಂತರ, ತುಂಬ ಅಸಾಮಾನ್ಯವಾದ ವಿನಾಯಿತಿಯನ್ನು ಕೊಡುತ್ತಾ, ಸೆರೆಮನೆಯ ಕೋಣೆಗಳಲ್ಲಿ ಸುವಾರ್ತೆಯನ್ನು ಸಾರಲು ಅನುಮತಿಸಲಾಯಿತು. ಕೊನೆಗೆ, ನಾವು ಆರಂಭದಲ್ಲಿ ಆಸಕ್ತ ವ್ಯಕ್ತಿಗಳನ್ನು ಕಂಡುಕೊಂಡಾಗ, ಬೈಬಲ್ ಅಭ್ಯಾಸಗಳನ್ನು ಮತ್ತು ಕ್ರೈಸ್ತ ಕೂಟಗಳನ್ನು ನಡಿಸಲಿಕ್ಕಾಗಿ ನಮಗೆ ಒಂದು ಚಿಕ್ಕ ಸಭಾಗೃಹವನ್ನು ಉಪಯೋಗಿಸಲು ಅನುಮತಿಸಲಾಯಿತು.” ಹೌದು, ಸೆರೆವಾಸಿಗಳ ಕಲ್ಲೆದೆಗಳನ್ನು ತಲಪಲು ಯೆಹೋವನು ಮಾರ್ಗವನ್ನು ತೆರೆದನು.
ಪರಿಣಾಮಕಾರಿ ಶೈಕ್ಷಣಿಕ ಕಾರ್ಯಕ್ರಮ
ಆ ಚಿಕ್ಕ ಸಭಾಗೃಹವು ಸ್ವಲ್ಪ ಸಮಯದಲ್ಲೇ ಸಾಕಾಗದೆ ಹೋಯಿತು. ದೀಕ್ಷಾಸ್ನಾನಿತ ಸೆರೆವಾಸಿಗಳು ಮತ್ತು ಹೊರಗಿನಿಂದ ಬರುತ್ತಿದ್ದ ಸಹೋದರರು ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿದುದರಿಂದ, 50ರಷ್ಟು ಕೈದಿಗಳು ಕೂಟಗಳಿಗೆ ಹಾಜರಾಗಲಾರಂಭಿಸಿದರು. “ಮೂರಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ, ನಾವು ಎಲ್ಲ ಕೂಟಗಳನ್ನು ಅಲ್ಲಿ ನಡಿಸಿದೆವು, ಮತ್ತು ಸೆರೆವಾಸಿಗಳು ಕ್ರಮವಾಗಿ ಸಾಪ್ತಾಹಿಕ ಕೂಟಗಳಿಗೆ ಹಾಜರಾಗಲಾರಂಭಿಸಿದರು,” ಎಂದು ಒಬ್ಬ ಸ್ಥಳಿಕ ಹಿರಿಯನು ವಿವರಿಸುತ್ತಾನೆ. ಆದುದರಿಂದ, ಮೇ 1995ರಲ್ಲಿ, ಅವರಿಗೆ ಹೆಚ್ಚು ದೊಡ್ಡದಾದ ಸಭಾಗೃಹವನ್ನು ಉಪಯೋಗಿಸಲು ಕೊಡಲಾಯಿತು.
ಸೆರೆಮನೆಯಲ್ಲಿರುವ ಕೂಟಗಳಿಗೆ ಯಾರು ಬರಬಹುದೆಂಬುದನ್ನು ಜವಾಬ್ದಾರಿಯುಳ್ಳ ಸಹೋದರರು ಹೇಗೆ ನಿರ್ಧರಿಸುತ್ತಾರೆ? “ಸತ್ಯದಲ್ಲಿ ಪ್ರಾಮಾಣಿಕ ಆಸಕ್ತಿಯನ್ನು ತೋರಿಸುವ ಸೆರೆವಾಸಿಗಳ ಒಂದು ಪಟ್ಟಿ ನಮ್ಮ ಬಳಿ ಇದೆ” ಎಂದು ಸಹೋದರ ಚೆಸ್ವಾಫ್ ಮತ್ತು ಜೆಷ್ವಾಫ್ ವಿವರಿಸುತ್ತಾರೆ. “ಒಬ್ಬ ಕೈದಿಯು ಪ್ರಗತಿಯನ್ನು ಮಾಡದಿದ್ದರೆ ಅಥವಾ ಸಕಾರಣವಿಲ್ಲದೆ ಕೂಟಗಳನ್ನು ತಪ್ಪಿಸುತ್ತಾ ಇಂತಹ ಏರ್ಪಾಡುಗಳಿಗಾಗಿ ಗಣ್ಯತೆಯನ್ನು ತೋರಿಸದಿದ್ದರೆ, ನಾವು ಅವನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿ, ಸೆರೆಮನೆಯ ಮುಖ್ಯ ಆಡಳಿತಗಾರನಿಗೆ ತಿಳಿಸುತ್ತೇವೆ.”
ಸಹೋದರರು ಬೈಬಲ್ ಅಭ್ಯಾಸಗಳ ಸಮಯದಲ್ಲಿ, ಸೆರೆವಾಸಿಗಳಿಗೆ ಕೂಟಗಳಿಗಾಗಿ ಚೆನ್ನಾಗಿ ತಯಾರಿಸುವ ಮತ್ತು ನಮ್ಮ ಸಾಹಿತ್ಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ವಿಧವನ್ನು ಸಹ ಕಲಿಸುತ್ತಾರೆ. ಹೀಗೆ ಸೆರೆವಾಸಿಗಳು ಕೂಟಗಳಿಗೆ ಬರುವಾಗ, ಅವರು ಚೆನ್ನಾಗಿ ತಯಾರಿಮಾಡಿದವರು ಆಗಿರುತ್ತಾರೆ, ಮತ್ತು ಹಿಂಜರಿಯದೆ ಭಾಗವಹಿಸುತ್ತಾರೆ. ಅವರು ಭಕ್ತಿವೃದ್ಧಿಮಾಡುವ ಉತ್ತರಗಳನ್ನು ಕೊಡುತ್ತಾ, ತಮ್ಮ ಬೈಬಲ್ಗಳನ್ನು ಕುಶಲಪೂರ್ವಕವಾಗಿ ಉಪಯೋಗಿಸುತ್ತಾರೆ ಮತ್ತು ಸಲಹೆಯನ್ನು ಅನ್ವಯಿಸಿಕೊಳ್ಳುತ್ತಾರೆ. ಅನೇಕವೇಳೆ ಅವರು ತಮ್ಮ ಉತ್ತರಗಳಲ್ಲಿ, ‘ನಾನು ಇದನ್ನು ಅಥವಾ ಅದನ್ನು ಮಾಡಬೇಕೆಂದು ತೋರುತ್ತದೆ’ ಎಂಬಂತಹ ಹೇಳಿಕೆಗಳನ್ನು ಕೂಡಿಸುತ್ತಾರೆ.
“ಒಟ್ಟಿನಲ್ಲಿ 20 ಬೈಬಲ್ ಅಭ್ಯಾಸಗಳನ್ನು ವೊವುಫ್ ಸೆರೆಮನೆಯಲ್ಲಿ ನಡೆಸಲಾಗುತ್ತಿದೆ. ಅವುಗಳಲ್ಲಿ ಎಂಟು ಅಭ್ಯಾಸಗಳನ್ನು ಸೆರೆಮನೆಯ ಮೂವರು ಪ್ರಚಾರಕರು ನಡೆಸುತ್ತಿದ್ದಾರೆ,” ಎಂದು ಸಭೆಯ ಸೆಕ್ರಿಟರಿಯು ಹೇಳುತ್ತಾರೆ. ಸೆರೆಮನೆಯ ಕೋಣೆಗಳಲ್ಲಿ ಮತ್ತು ಸೆರೆಮನೆಯ ಕಾಂಪೌಂಡಿನಲ್ಲಿ ನಡೆದಾಡುತ್ತಿರುವಾಗ ಸಾರುವುದರಿಂದ ಅವರಿಗೆ ಉತ್ತಮ ಫಲಿತಾಂಶಗಳು ಸಿಕ್ಕಿವೆ. ಉದಾಹರಣೆಗಾಗಿ, 1993ರ ಸೆಪ್ಟೆಂಬರ್ ತಿಂಗಳಿನಿಂದ 1994ರ ಜೂನ್ ತಿಂಗಳಿನ ವರೆಗೆ, ಅವರು 235 ಪುಸ್ತಕಗಳು, ಬಹುಮಟ್ಟಿಗೆ 300 ಬ್ರೋಷರುಗಳು ಮತ್ತು 1,700 ಪತ್ರಿಕೆಗಳನ್ನು ವಿತರಿಸಿದ್ದಾರೆ. ಇತ್ತೀಚೆಗೆ ಎರಡು ಸೆರೆಮನೆ ಅಧಿಕಾರಿಗಳು ಬೈಬಲ್ ಅಭ್ಯಾಸಗಳಿಗಾಗಿ ವಿನಂತಿಸಿದರು.
ವಿಶೇಷ ಸಮ್ಮೇಳನಗಳು ಆನಂದವನ್ನು ತರುತ್ತವೆ
ಸಮಯಾನಂತರ, ಆ ಸೆರೆಮನೆಯಲ್ಲಿನ ಶೈಕ್ಷಣಿಕ ಕಾರ್ಯಕ್ರಮಕ್ಕೆ ಇನ್ನೊಂದು ಅಂಶವನ್ನು ಸೇರಿಸಲಾಯಿತು. ಅದು, ವಿಶೇಷ ಸಮ್ಮೇಳನಗಳು ಆಗಿದ್ದವು. ಸಂಚರಣಾ ಮೇಲ್ವಿಚಾರಕರು ಮತ್ತು ಇತರ ಅರ್ಹ ಸಹೋದರರು, ಸೆರೆಮನೆಯ ವ್ಯಾಯಾಮ ಶಾಲೆಯಲ್ಲಿ, ಸರ್ಕಿಟ್ ಸಮ್ಮೇಳನ ಮತ್ತು ಒಂದು ದಿನದ ವಿಶೇಷ ಸಮ್ಮೇಳನ ಕಾರ್ಯಕ್ರಮಗಳ ಪ್ರಮುಖ ಭಾಗಗಳನ್ನು ಸಾದರಪಡಿಸುತ್ತಿದ್ದರು. ಪ್ರಥಮ ವಿಶೇಷ ಸಮ್ಮೇಳನವನ್ನು 1993ರ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಯಿತು. ಐವತ್ತು ಸೆರೆವಾಸಿಗಳು ಹಾಜರಿದ್ದರು, ಮತ್ತು “ವ್ರೊಟ್ಸ್ಲಾಫ್ದಿಂದ ಸ್ತ್ರೀಯರು ಮತ್ತು ಮಕ್ಕಳನ್ನು ಒಳಗೂಡಿಸಿ, ಇಡೀ ಕುಟುಂಬಗಳು ಬಂದಿದ್ದವು” ಎಂದು ಸ್ವೊವೊ ಪಾಲ್ಸ್ಕೀ ವಾರ್ತಾಪತ್ರಿಕೆಯು ವರದಿಸಿತು. ಒಟ್ಟು ಹಾಜರಿಯು 139 ಇತ್ತು. ಸಮ್ಮೇಳನ ಕಾರ್ಯಕ್ರಮದಲ್ಲಿ ವಿರಾಮ ಅವಧಿಯು, ಸಹೋದರಿಯರು ತಯಾರಿಸಿದಂತಹ ಊಟವನ್ನು ತಿನ್ನಲಿಕ್ಕಾಗಿ ಅವಕಾಶವನ್ನು ಕೊಟ್ಟಿತು ಹಾಗೂ ಉತ್ತಮ ಕ್ರೈಸ್ತ ಸಹವಾಸಕ್ಕಾಗಿಯೂ ಸಮಯವನ್ನು ಒದಗಿಸಿತು.
ಅಂದಿನಿಂದ ಇತರ ಏಳು ವಿಶೇಷ ಸಮ್ಮೇಳನಗಳು ನಡೆದಿವೆ, ಮತ್ತು ಅದರ ಪ್ರಯೋಜನಗಳು ಸೆರೆಮನೆಯೊಳಗಿದ್ದವರಿಗೆ ಮಾತ್ರವಲ್ಲ, ಹೊರಗಿರುವವರಿಗೂ ಸಿಕ್ಕಿವೆ. ಒಬ್ಬ ಸಾಕ್ಷಿಯು, ಹಿಂದೆ ವೊವುಫ್ ಸೆರೆಮನೆಯಲ್ಲಿದ್ದ, ಆದರೆ ಈಗ ಪಟ್ಟಣದಲ್ಲಿ ವಾಸಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಸಂದರ್ಶಿಸಿದಾಗ, ಅವನು ಆರಂಭದಲ್ಲಿ ನಕಾರಾತ್ಮಕ ಮನೋಭಾವದವನಾಗಿದ್ದನು. ಆದರೆ ಇಂಥಿಂಥ ಸೆರೆವಾಸಿಯೊಬ್ಬನು ಒಬ್ಬ ಸಾಕ್ಷಿಯಾಗಿದ್ದಾನೆಂದು ಅವನಿಗೆ ತಿಳಿಸಲ್ಪಟ್ಟಾಗ, ಅವನು ಅದನ್ನು ನಂಬಲಾರದೆ ತಟ್ಟನೇ ಕೇಳಿದ್ದು: “ಆ ಕೊಲೆಪಾತಕ ಈಗ ಒಬ್ಬ ಸಾಕ್ಷಿಯಾಗಿದ್ದಾನೊ?” ಫಲಿತಾಂಶವಾಗಿ, ಅವನು ಒಂದು ಬೈಬಲ್ ಅಭ್ಯಾಸವನ್ನು ಸ್ವೀಕರಿಸಿದನು.
ಅದ್ಭುತಕರ ಪರಿವರ್ತನೆಯು ಆಗುತ್ತಿದೆ
ಈ ವ್ಯಾಪಕವಾದ ಶೈಕ್ಷಣಿಕ ಕಾರ್ಯಕ್ರಮವು ಸೆರೆವಾಸಿಗಳ ಕಲ್ಲೆದೆಗಳನ್ನು ನಿಜವಾಗಿಯೂ ಮೃದುವಾಗಿಸಿದೆಯೊ? ಅವರು ತಮ್ಮ ಕಥೆಗಳನ್ನು ಹೇಳಲಿ.
“ನನ್ನ ಹೆತ್ತವರು ಯಾರೆಂದು ನನಗೆ ಗೊತ್ತಿಲ್ಲ, ಯಾಕಂದರೆ ನಾನು ಚಿಕ್ಕವನಿದ್ದಾಗಲೇ ನನ್ನನ್ನು ತೊರೆಯಲಾಯಿತು ಮತ್ತು ಪ್ರೀತಿಸಲ್ಪಡದೇ ಇರುವ ಅನಿಸಿಕೆ ನನಗೆ ತುಂಬ ಆಗುತ್ತದೆ” ಎಂದು ಸ್ವಭಾವತಃ ಚಿಂತನಾಶೀಲ ವ್ಯಕ್ತಿಯಾಗಿರುವ ಜೆಷ್ವಾಫ್ ಒಪ್ಪಿಕೊಳ್ಳುತ್ತಾನೆ. “ನಾನು ಯುವಕನಾಗಿದ್ದಾಗಲೇ ಪಾತಕದಲ್ಲಿ ಒಳಗೂಡುತ್ತಾ, ಕೊನೆಯಲ್ಲಿ ಒಂದು ಕೊಲೆಯನ್ನು ಮಾಡಿದೆ. ಅದರಿಂದ ನನಗಾದ ಅಪರಾಧಿ ಭಾವನೆಯು, ಆತ್ಮಹತ್ಯೆಯ ಕುರಿತು ಯೋಚಿಸುವಂತೆ ನನ್ನನ್ನು ಪ್ರಚೋದಿಸಿತು. ನಾನು ನಿಜ ನಿರೀಕ್ಷೆಗಾಗಿ ಹುಡುಕುತ್ತಾ ಇದ್ದೆ. ಅನಂತರ 1987ರಲ್ಲಿ, ನನಗೆ ಒಂದು ಕಾವಲಿನಬುರುಜು ಪತ್ರಿಕೆಯು ಸಿಕ್ಕಿತು. ಅದನ್ನು ಓದಿ, ನಾನು ಪುನರುತ್ಥಾನ ಮತ್ತು ನಿತ್ಯಜೀವದ ನಿರೀಕ್ಷೆಯ ಕುರಿತು ಕಲಿತುಕೊಂಡೆ. ಇನ್ನೂ ನಿರೀಕ್ಷೆಯಿದೆ ಎಂಬುದನ್ನು ಅರಿತುಕೊಳ್ಳುತ್ತಾ, ನಾನು ಆತ್ಮಹತ್ಯೆಯ ಯೋಚನೆಯನ್ನು ಬಿಟ್ಟು, ಬೈಬಲನ್ನು ಅಭ್ಯಾಸಿಸಲಾರಂಭಿಸಿದೆ. ಪ್ರೀತಿಯ ಅರ್ಥವೇನೆಂಬುದನ್ನು ನಾನು ಈಗ ಯೆಹೋವನಿಂದ ಮತ್ತು ಸಹೋದರರಿಂದ ಕಲಿತುಕೊಂಡಿದ್ದೇನೆ.” 1993ರಿಂದ ಈ ಮಾಜಿ ಕೊಲೆಪಾತಕನು, ಒಬ್ಬ ಶುಶ್ರೂಷಾ ಸೇವಕನೂ ಆಕ್ಸಿಲಿಯರಿ ಪಯನೀಯರನೂ ಆಗಿದ್ದಾನೆ, ಮತ್ತು ಕಳೆದ ವರ್ಷ ಅವನೊಬ್ಬ ಕ್ರಮದ ಪಯನೀಯರನಾದನು.
ಇನ್ನೊಂದು ಕಡೆ, ಟೊಮಾಷ್, ಒಂದು ಬೈಬಲ್ ಅಭ್ಯಾಸವನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸಿದನು. ಅವನು ಒಪ್ಪಿಕೊಳ್ಳುವುದು: “ಆದರೆ ಅದು ಒಂದು ಪ್ರಾಮಾಣಿಕ ಹೆಜ್ಜೆಯಾಗಿರಲಿಲ್ಲ. ಯೆಹೋವನ ಸಾಕ್ಷಿಗಳ ನಂಬಿಕೆಗಳನ್ನು ಇತರರಿಗೆ ವಿವರಿಸುವಾಗ, ನನಗೆ ಎಲ್ಲ ಗೊತ್ತಿದೆಯೆಂದು ತೋರ್ಪಡಿಸಿಕೊಳ್ಳಲಿಕ್ಕಾಗಿ ಮಾತ್ರ ನಾನು ಅಭ್ಯಾಸಿಸುತ್ತಿದ್ದೆ. ಆದರೆ ನಾನು ಬೈಬಲ್ ಸತ್ಯವನ್ನು ನನ್ನ ಜೀವಿತದಲ್ಲಿ ಅನ್ವಯಿಸಿಕೊಳ್ಳುತ್ತಿರಲಿಲ್ಲ. ಒಂದು ದಿನ ನಾನು ನಿರ್ಣಯ ಮಾಡಿ, ಒಂದು ಕ್ರೈಸ್ತ ಕೂಟಕ್ಕೆ ಹೋದೆ. ದೀಕ್ಷಾಸ್ನಾನಿತ ಸೆರೆವಾಸಿಗಳು ನನ್ನನ್ನು ಹೃದಯೋಲ್ಲಾಸದಿಂದ ಸ್ವಾಗತಿಸಿದರು. ನನ್ನ ಜ್ಞಾನವನ್ನು ತೋರ್ಪಡಿಸಿಕೊಳ್ಳಲು ಪ್ರಯತ್ನಿಸುವ ಬದಲಿಗೆ, ನಾನು ನನ್ನ ಕಲ್ಲೆದೆಯನ್ನು ಮೃದುಗೊಳಿಸಿ, ನನ್ನ ಮನಸ್ಸನ್ನು ಪರಿವರ್ತಿಸಿಕೊಳ್ಳಬೇಕೆಂಬುದನ್ನು ನಾನು ಗ್ರಹಿಸಿಕೊಂಡೆ.” ಟೊಮಾಷ್ ಹೊಸ ಕ್ರೈಸ್ತ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಆರಂಭಿಸಿದನು. (ಎಫೆಸ 4:22-24) ಇಂದು, ಅವನೊಬ್ಬ ಸಮರ್ಪಿತ, ದೀಕ್ಷಾಸ್ನಾನಿತ ಸಾಕ್ಷಿಯಾಗಿದ್ದು, ಸೆರೆಮನೆಯ ಕೋಣೆಗಳಲ್ಲಿ ಸಾರುವುದರಲ್ಲಿ ಆನಂದಿಸುತ್ತಾನೆ.
ಹಿಂದಿನ ಸ್ನೇಹಿತರಿಂದ ಒತ್ತಡಗಳು
ಸೆರೆಮನೆಯಲ್ಲಿ ಬೈಬಲ್ ಸತ್ಯವನ್ನು ಕಲಿತವರು, ತಮ್ಮೊಂದಿಗಿದ್ದ ಹಿಂದಿನ ಸ್ನೇಹಿತರು ಮತ್ತು ಸೆರೆಮನೆ ಅಧಿಕಾರಿಗಳಿಂದ ತುಂಬ ಒತ್ತಡಕ್ಕೆ ಒಳಗಾದರು. ಅವರಲ್ಲೊಬ್ಬನು ಜ್ಞಾಪಿಸಿಕೊಳ್ಳುವುದು: “ಸತತವಾಗಿ ನನ್ನ ಕುಚೋದ್ಯ ಮತ್ತು ಅಪಹಾಸ್ಯವನ್ನು ಮಾಡಲಾಯಿತು. ಆದರೆ ಸಹೋದರರ ಉತ್ತೇಜನದಾಯಕ ಮಾತುಗಳನ್ನು ನಾನು ಮನಸ್ಸಿನಲ್ಲಿಟ್ಟುಕೊಂಡೆ. ‘ಯೆಹೋವನಿಗೆ ಪ್ರಾರ್ಥಿಸುತ್ತಾ ಇರು, ನಿನ್ನ ಬೈಬಲನ್ನು ಓದು ಮತ್ತು ಆಗ ನಿನಗೆ ಮನಶ್ಶಾಂತಿ ದೊರೆಯುವುದು’ ಎಂದು ಅವರು ನನಗೆ ಹೇಳಿದರು. ಇದು ನಿಜವಾಗಿಯೂ ಸಹಾಯಮಾಡಿತು.”
“ನನ್ನ ಜೊತೆ ಸೆರೆವಾಸಿಗಳು, ನನ್ನ ಕುರಿತು ಕಟುವಾದ ಹೇಳಿಕೆಗಳನ್ನು ನುಡಿಯಲು ಹಿಂಜರಿಯಲಿಲ್ಲ” ಎಂದು ದೃಢಕಾಯ ದೇಹದ, ದೀಕ್ಷಾಸ್ನಾನಿತ ಸಹೋದರರಾದ ರಿಶಾರ್ಡ್ ಹೇಳುತ್ತಾರೆ. “ನೀನು ಆ ನಿನ್ನ ಕೂಟಗಳಿಗೆ ಹೋಗಬಹುದು, ಆದರೆ ತೀರ ಒಳ್ಳೆಯವನೆಂದು ತೋರಿಸುವ ನಾಟಕವಾಡಬೇಡ, ತಿಳಿಯಿತಾ?” ಎಂದು ಅವರು ನನ್ನನ್ನು ಎಚ್ಚರಿಸುತ್ತಿದ್ದರು. ಬೈಬಲ್ ಮೂಲತತ್ವಗಳನ್ನು ಆಚರಣೆಗೆ ತಂದು, ನನ್ನ ಜೀವಿತದಲ್ಲಿ ಬದಲಾವಣೆಗಳನ್ನು ಮಾಡಿದಾಗ, ನಾನು ತುಂಬ ಕಷ್ಟಪಟ್ಟೆ. ಅವರು ನನ್ನ ಹಾಸಿಗೆಯನ್ನು ಮೇಲೆ ಕೆಳಗೆ ಮಾಡಿದರು, ನನ್ನ ಬೈಬಲ್ ಸಾಹಿತ್ಯವನ್ನು ಚೆಲ್ಲಾಪಿಲ್ಲಿ ಮಾಡಿದರು, ಮತ್ತು ಸೆರೆಮನೆ ಕೋಣೆಯಲ್ಲಿ ನನ್ನ ಸ್ಥಳವನ್ನು ಅಸ್ತವ್ಯಸ್ಥಗೊಳಿಸಿದರು. ನನ್ನನ್ನು ನಿಯಂತ್ರಿಸಿಕೊಳ್ಳಲಿಕ್ಕಾಗಿ ಬಲವನ್ನು ಕೊಡುವಂತೆ ನಾನು ಯೆಹೋವನಿಗೆ ಪ್ರಾರ್ಥಿಸಿದೆ ಮತ್ತು ನನ್ನಷ್ಟಕ್ಕೇ ಸುಮ್ಮನೆ ಎಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿಡಲು ಆರಂಭಿಸಿದೆ. ಸ್ವಲ್ಪ ಸಮಯದ ನಂತರ ಅಂತಹ ಆಕ್ರಮಣಗಳು ನಿಂತವು.”
ಇತರ ದೀಕ್ಷಾಸ್ನಾನಿತ ಸೆರೆವಾಸಿಗಳು ತಿಳಿಸುವುದು: “ಯೆಹೋವನನ್ನು ಸೇವಿಸಲು ನಾವು ಒಂದು ದೃಢವಾದ ನಿರ್ಣಯವನ್ನು ಮಾಡಿದ್ದೇವೆಂದು ಜೊತೆ ಸೆರೆವಾಸಿಗಳು ನೋಡಿದಾಗ, ಒತ್ತಡವು ಇನ್ನೊಂದು ರೂಪದಲ್ಲಿ ಬರುತ್ತದೆ. ‘ನಿನಗೆ ಕುಡಿಯಲಿಕ್ಕಿಲ್ಲ, ಬೀಡಿ ಸೇದಲಿಕ್ಕಿಲ್ಲ, ಸುಳ್ಳು ಹೇಳಲಿಕ್ಕಿಲ್ಲ, ನೆನಪಿದೆಯಲ್ಲಾ’ ಎಂದು ಹೇಳುವ ಸಂಭವನೀಯತೆ ಹೆಚ್ಚು. ಆ ವಿಧದ ಒತ್ತಡವು, ಒಬ್ಬನು ಆತ್ಮಸಂಯಮವನ್ನು ಪ್ರದರ್ಶಿಸಲು, ಬೇಗನೆ ಯಾವುದೇ ದುಶ್ಚಟಗಳು ಅಥವಾ ವ್ಯಸನಗಳನ್ನು ತೊಲಗಿಸಲು ಸಹಾಯಮಾಡುತ್ತದೆ. ಒಬ್ಬನು ಆತ್ಮದ ಫಲವನ್ನು ವಿಕಸಿಸಿಕೊಳ್ಳಲು ಸಹ ಅದು ಸಹಾಯಮಾಡುತ್ತದೆ.”—ಗಲಾತ್ಯ 5:22, 23.
ದೇವರ ಸಮರ್ಪಿತ ಸೇವಕರಾಗುವುದು
ಸೆರೆಮನೆಯ ಅಧಿಕಾರಿಗಳ ಅನುಮತಿಯೊಂದಿಗೆ, 1991ರ ವಸಂತಕಾಲದಲ್ಲಿ ಮೊತ್ತಮೊದಲ ದೀಕ್ಷಾಸ್ನಾನವು, ವ್ಯಾಯಾಮ ಶಾಲೆಯಲ್ಲಿ ನಡೆಯಿತು. ಜೆಷ್ವಾಫ್ ಆ ಆನಂದಿತ ಅಭ್ಯರ್ಥಿಯಾಗಿದ್ದನು. ಹನ್ನೆರಡು ಸೆರೆವಾಸಿಗಳು ಹಾಜರಿದ್ದರು, ಮತ್ತು ಹೊರಗಿನಿಂದ 21 ಸಹೋದರ ಸಹೋದರಿಯರು ಆ ಸಂದರ್ಭಕ್ಕಾಗಿ ಕೂಡಿಬಂದರು. ಆ ಕೂಟವು ಸೆರೆವಾಸಿಗಳಿಗೆ ಬಹಳ ಉತ್ತೇಜನ ಕೊಟ್ಟಿತು. ಅವರಲ್ಲಿ ಅನೇಕರು, ಎಷ್ಟು ಗಮನಾರ್ಹವಾದ ಪ್ರಗತಿಯನ್ನು ಮಾಡಿದರೆಂದರೆ, ಅದೇ ವರ್ಷ ತದನಂತರ ಇನ್ನಿಬ್ಬರು ಕೈದಿಗಳು ದೀಕ್ಷಾಸ್ನಾನಿತರಾದರು. ಎರಡು ವರ್ಷಗಳ ಬಳಿಕ 1993ರಲ್ಲಿ, ಎರಡು ಬಾರಿ ದೀಕ್ಷಾಸ್ನಾನಗಳನ್ನು ನಡೆಸಲಾಯಿತು. ಮತ್ತು ಇನ್ನೂ ಏಳು ಕೈದಿಗಳು ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸಿದರು!
ಡಿಸೆಂಬರ್ ತಿಂಗಳಿನಲ್ಲಿ ನಡೆದಂತಹ ದೀಕ್ಷಾಸ್ನಾನದ ಕುರಿತು ವರದಿಸುತ್ತಾ, ಸ್ಥಳಿಕ ವಾರ್ತಾಪತ್ರಿಕೆಯಾದ ಯೆಕಾರ್ಡ್ ವ್ರೊಟ್ಸಾವ್ಯಾ ತಿಳಿಸಿದ್ದು: “ಜನರು ವ್ಯಾಯಾಮ ಶಾಲೆಗೆ ಸಮೂಹವಾಗಿ ಬರುತ್ತಿದ್ದು, ಎಲ್ಲರನ್ನೂ ಅಭಿವಂದಿಸುತ್ತಾ, ಅವರ ಕೈಕುಲುಕುತ್ತಾ ಇರುತ್ತಾರೆ. ಅಲ್ಲಿ ಯಾರೂ ಅಪರಿಚಿತರಾಗಿರುವುದಿಲ್ಲ. ತಮ್ಮ ಯೋಚನೆಯಲ್ಲಿ, ತಮ್ಮ ಜೀವನ ರೀತಿಯಲ್ಲಿ ಮತ್ತು ತಮ್ಮ ದೇವರಾದ ಯೆಹೋವನ ಸೇವೆಯನ್ನು ಮಾಡುವುದರಲ್ಲಿ ಐಕ್ಯರಾಗಿದ್ದು, ಅವರು ಒಂದು ದೊಡ್ಡ ಕುಟುಂಬದಂತಿರುತ್ತಾರೆ.” ಆ ‘ಒಂದು ದೊಡ್ಡ ಕುಟುಂಬ’ದಲ್ಲಿ, 50 ಕೈದಿಗಳನ್ನು ಸೇರಿಸಿ ಈಗ 135 ವ್ಯಕ್ತಿಗಳಿದ್ದಾರೆ. ಅವರಲ್ಲಿ ಕೆಲವರನ್ನು ಭೇಟಿಯಾಗೋಣ.
ಜೂನ್ ತಿಂಗಳಲ್ಲಿ ದೀಕ್ಷಾಸ್ನಾನಹೊಂದಿದ ಯೆರ್ಸೀ ಹೇಳುವುದು: “ಕೆಲವು ವರ್ಷಗಳ ಹಿಂದೆ ನನಗೆ ಬೈಬಲ್ ಸತ್ಯವು ಸ್ವಲ್ಪ ತಿಳಿದಿತ್ತಾದರೂ, ನನ್ನಲ್ಲಿ ನಿಜವಾಗಿ ಇದ್ದದ್ದು ಕಲ್ಲೆದೆಯೇ. ಮೋಸಗಾರಿಕೆ, ನನ್ನ ಪ್ರಥಮ ಹೆಂಡತಿಯೊಂದಿಗೆ ವಿವಾಹವಿಚ್ಛೇದ, ಕ್ರಿಸ್ಟೀನಾಳೊಂದಿಗೆ ಅನೈತಿಕ ಸಂಬಂಧ, ವಿವಾಹಬಾಹಿರ ಮಗು, ಮತ್ತು ಪದೇಪದೇ ಸೆರೆಮನೆಗೆ ಹಿಂದಿರುಗುವುದು—ಇದೇ ನನ್ನ ಜೀವನವಾಗಿತ್ತು.” ಸೆರೆಮನೆಯಲ್ಲಿದ್ದಾಗ ಇತರ ನಿರ್ದಯಿ ಪಾತಕಿಗಳು, ಸಾಕ್ಷಿಗಳಾದ ರೀತಿಯನ್ನು ನೋಡಿ, ಅವನು ತನ್ನನ್ನೇ ಕೇಳಿಕೊಂಡದ್ದು: ‘ನಾನು ಕೂಡ ಒಬ್ಬ ಒಳ್ಳೆಯ ವ್ಯಕ್ತಿಯಾಗಲಾರೆನೊ?’ ಅವನು ಒಂದು ಬೈಬಲ್ ಅಭ್ಯಾಸವನ್ನು ವಿನಂತಿಸಿಕೊಂಡು, ಕೂಟಗಳಿಗೆ ಬರಲಾರಂಭಿಸಿದನು. ಕ್ರಿಸ್ಟೀನಾ ಮೂರು ವರ್ಷಗಳ ಮುಂಚೆಯೇ ಯೆಹೋವನ ಸಾಕ್ಷಿಯಾಗಿದ್ದಳೆಂಬುದನ್ನು ಅವನು ಸಾರ್ವಜನಿಕ ನ್ಯಾಯಾಧಿಕಾರಿಯಿಂದ ತಿಳಿದಾಗಲೇ, ಅವನಲ್ಲಿ ನಿಜ ಬದಲಾವಣೆಯಾಯಿತು. “ನನಗೆ ತುಂಬ ಆಶ್ಚರ್ಯ!” ಎಂದು ಯೆರ್ಸೀ ಹೇಳುತ್ತಾನೆ. “‘ನನ್ನ ಕುರಿತೇನು? ನಾನೇನು ಮಾಡುತ್ತಿದ್ದೇನೆ?’ ಎಂದು ನಾನು ಯೋಚಿಸಿದೆ. ಯೆಹೋವನಿಂದ ಮೆಚ್ಚಿಕೆಯನ್ನು ಪಡೆಯಲಿಕ್ಕಾಗಿ ನಾನು ನನ್ನ ಜೀವನವನ್ನು ಸರಿಪಡಿಸಬೇಕೆಂಬುದನ್ನು ನಾನು ಗ್ರಹಿಸಿಕೊಂಡೆ.” ಫಲಿತಾಂಶವಾಗಿ, ಸೆರೆಮನೆಯಲ್ಲಿ—ಕ್ರಿಸ್ಟಿನಾ ಮತ್ತು ಅವರ 11 ವರ್ಷ ಪ್ರಾಯದ ಮಾರ್ಸೆನಾಳೊಂದಿಗೆ—ಒಂದು ಹರ್ಷಭರಿತ ಪುನರ್ಮಿಲನವಾಯಿತು. ಸ್ವಲ್ಪ ಸಮಯದ ನಂತರ, ಅವರು ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸಿದರು. ಇನ್ನೂ ಸೆರೆಮನೆಯಲ್ಲಿದ್ದು, ಏರುಪೇರುಗಳನ್ನು ಅನುಭವಿಸುತ್ತಿದ್ದರೂ, ಯೆರ್ಸೀ ಇತ್ತೀಚೆಗೆ ಸನ್ನೆ ಭಾಷೆಯನ್ನು ಕಲಿತುಕೊಂಡನು. ಈಗ ಅವನು ಕಿವುಡರಾಗಿರುವ ಸೆರೆವಾಸಿಗಳಿಗೆ ಸಹಾಯಮಾಡಲು ಶಕ್ತನಾಗಿದ್ದಾನೆ.
ಮಿರೊಸ್ವಾಫ್, ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಅಪರಾಧಿ ಚಟುವಟಿಕೆಗಳಲ್ಲಿ ಒಳಗೂಡಿದ್ದನು. ತನ್ನ ಸ್ನೇಹಿತರು ಮಾಡುತ್ತಿದ್ದ ಕೆಲಸಗಳನ್ನು ಅವನು ತುಂಬ ಮೆಚ್ಚುತ್ತಿದ್ದನು ಮತ್ತು ಬೇಗನೆ ಅವನು ಕೂಡ ಹಾಗೆಯೇ ಮಾಡಲಾರಂಭಿಸಿದನು. ಅವನು ಸುಲಿಗೆಮಾಡಿದ ಇಲ್ಲವೆ ಥಳಿಸಿದ ಜನರೋ ಅನೇಕ. ಅನಂತರ ಅವನನ್ನು ಸೆರೆಮನೆಗೆ ಕಳುಹಿಸಲಾಯಿತು. ಮಿರೊಸ್ವಾಫ್ ಒಪ್ಪಿಕೊಂಡದ್ದು: “ನಾನು ಸೆರೆಮನೆಯಲ್ಲಿದ್ದಾಗ ಸಹಾಯಕ್ಕಾಗಿ ಪಾದ್ರಿಯ ಬಳಿ ಹೋದೆ, ಆದರೆ ನನಗೆ ತುಂಬ ನಿರಾಶೆಯಾಯಿತು. ಆದುದರಿಂದ ನಾನು ವಿಷ ಕುಡಿದು ಸಾಯಲು ನಿರ್ಣಯಿಸಿದೆ.” ಅವನು ಸಾಯಲು ನಿರ್ಣಯಿಸಿದ ದಿನದಂದೇ, ಅವನನ್ನು ಇನ್ನೊಂದು ಕೋಣೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವನು, ಜೀವಿತದ ಉದ್ದೇಶದ ಕುರಿತಾಗಿ ತಿಳಿಸಿದ ದ ವಾಚ್ಟವರ್ ಪತ್ರಿಕೆಯು ಅವನಿಗೆ ಸಿಕ್ಕಿತು. ಅವನು ಕೂಡಿಸುತ್ತಾ ಹೇಳುವುದು: “ಅದರಲ್ಲಿದ್ದ ಸರಳ ಮತ್ತು ಸ್ಪಷ್ಟವಾದ ಮಾಹಿತಿಯು, ನನಗೆ ಬೇಕಾಗಿದ್ದ ವಿಷಯವೇ ಆಗಿತ್ತು. . . . ಈಗ ನಾನು ಜೀವಿಸಲು ಬಯಸಿದೆ! ಆದುದರಿಂದ ನಾನು ಯೆಹೋವನಿಗೆ ಪ್ರಾರ್ಥಿಸಿ, ಒಂದು ಬೈಬಲ್ ಅಭ್ಯಾಸಕ್ಕಾಗಿ ಸಾಕ್ಷಿಗಳನ್ನು ವಿನಂತಿಸಿಕೊಂಡೆ.” ಅವನು ತನ್ನ ಬೈಬಲ್ ಅಭ್ಯಾಸದಲ್ಲಿ ತೀವ್ರ ಪ್ರಗತಿಯನ್ನು ಮಾಡಿ, 1991ರಲ್ಲಿ ದೀಕ್ಷಾಸ್ನಾನವನ್ನು ಪಡೆದನು. ಈಗ ಅವನು ಸೆರೆಮನೆಯಲ್ಲಿ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಸಾರುವ ಸುಯೋಗವನ್ನು ಪಡೆದಿದ್ದು, ಒಬ್ಬ ಆಕ್ಸಿಲಿಯರಿ ಪಯನೀಯರನೋಪಾದಿ ಸೇವೆಸಲ್ಲಿಸುತ್ತಿದ್ದಾನೆ.
ಒಟ್ಟಿನಲ್ಲಿ ಇಷ್ಟರ ವರೆಗೆ 15 ಮಂದಿ ಸೆರೆವಾಸಿಗಳು ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಾರೆ. ಅವರ ಸೆರೆವಾಸದ ಶಿಕ್ಷೆಯ ಸಮಯವನ್ನು ಕೂಡಿಸಿದರೆ, ಅದು ಬಹುಮಟ್ಟಿಗೆ 260 ವರ್ಷಗಳಾಗುತ್ತದೆ. ಕೆಲವರು ತಮ್ಮ ಸೆರೆಮನೆ ಶಿಕ್ಷೆಯನ್ನು ಮುಗಿಸುವ ಮುಂಚೆಯೇ ಬಿಡುಗಡೆಗೊಳಿಸಲ್ಪಟ್ಟರು. ಒಬ್ಬ ಸೆರೆವಾಸಿಯ 25 ವರ್ಷಗಳ ಶಿಕ್ಷೆಯಲ್ಲಿ, 10 ವರ್ಷಗಳನ್ನು ಕಡಿಮೆಮಾಡಲಾಯಿತು. ಮತ್ತು ಸೆರೆಮನೆಯಲ್ಲಿದ್ದಾಗ ಆಸಕ್ತಿಯನ್ನು ತೋರಿಸಿದವರಲ್ಲಿ ಅನೇಕರು ಬಿಡುಗಡೆಗೊಂಡ ನಂತರ ದೀಕ್ಷಾಸ್ನಾನಿತ ಸಾಕ್ಷಿಗಳಾದರು. ಇದಕ್ಕೆ ಕೂಡಿಸಿ, ಇನ್ನೂ ನಾಲ್ಕು ಮಂದಿ ಸೆರೆವಾಸಿಗಳು, ಸೆರೆಮನೆಯಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.
ಸೆರೆಮನೆ ಅಧಿಕಾರಿಗಳಿಂದ ಅಂಗೀಕಾರ
ಸೆರೆಮನೆಯ ಒಂದು ವರದಿಯು ತಿಳಿಸುವುದು: “ಕೈದಿಗಳ ಮನೋಭಾವದಲ್ಲಿನ ಬದಲಾವಣೆಯು ವಿಶೇಷವಾಗಿ ಗಮನಾರ್ಹವಾಗಿದೆ. . . . ಅನೇಕರು ಧೂಮಪಾನವನ್ನು ನಿಲ್ಲಿಸಿ ಬಿಡುತ್ತಾರೆ, ಮತ್ತು ತಮ್ಮ ಕೋಣೆಗಳನ್ನು ಶುಚಿಯಾಗಿಡುತ್ತಾರೆ. ನಡತೆಯಲ್ಲಿನ ಅಂತಹ ಬದಲಾವಣೆಗಳು ಅನೇಕ ಕೈದಿಗಳಲ್ಲಿ ಕಂಡುಬರುತ್ತದೆ.”
“ಮತಾಂತರಿಗಳು ಶಿಸ್ತಿನವರು ಆಗಿದ್ದಾರೆ; ಅವರಿಂದ ಸೆರೆಮನೆಯ ಕಾವಲುಗಾರರಿಗೆ ಯಾವುದೇ ಸಮಸ್ಯೆಗಳಿಲ್ಲ” ಎಂದು ವೊವುಫ್ ಕಾರಾಗೃಹದಲ್ಲಿನ ಸಿಬ್ಬಂದಿಯು ಅಂಗೀಕರಿಸುತ್ತಾರೆಂಬುದನ್ನು ಸೇಶೀ ವಾರ್ಶಾವಿ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ತಮ್ಮ ಶಿಕ್ಷಾವಧಿಯು ಮುಗಿಯುವ ಮುಂಚೆ ಬಿಡುಗಡೆಮಾಡಲ್ಪಟ್ಟವರು, ಯೆಹೋವನ ಸಾಕ್ಷಿಗಳ ನಡುವೆ ಉತ್ತಮವಾಗಿ ಸ್ವೀಕರಿಸಲ್ಪಡುತ್ತಾರೆ ಮತ್ತು ಪುನಃ ಪಾತಕದ ಜೀವನಕ್ಕೆ ಹಿಂದಿರುಗುವುದಿಲ್ಲ.
ಸೆರೆಮನೆ ಆಡಳಿತಗಾರನ ಅಭಿಪ್ರಾಯವೇನು? “ಈ ಕಾರಾಗೃಹದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವು ಅತ್ಯಂತ ಅಪೇಕ್ಷಣೀಯವಾದದ್ದು ಮತ್ತು ಸಹಾಯಕಾರಿಯಾದದ್ದು ಆಗಿದೆ” ಎಂದು ಅವನು ಹೇಳುತ್ತಾನೆ. ಆ ಆಡಳಿತಗಾರನು ಅಂಗೀಕರಿಸುವುದೇನೆಂದರೆ, “[ಸಾಕ್ಷಿಗಳೊಂದಿಗೆ] ಅವರ ಬೈಬಲ್ ಅಭ್ಯಾಸ ನಡೆಯುತ್ತಿರುವಾಗ, ಕೈದಿಗಳ ಗುಣಗಳು ಮತ್ತು ಮಟ್ಟಗಳು ಬದಲಾಗುತ್ತಾ, ಅವರ ಜೀವಿತಗಳಿಗೆ ಒಂದು ಹೊಸ ಮಾರ್ಗದರ್ಶಕ ಶಕ್ತಿಯನ್ನು ಕೊಡುತ್ತವೆ. ಅವರ ನಡತೆಯು ತುಂಬ ಜಾಣ್ಮೆಯುಳ್ಳದ್ದು ಮತ್ತು ಸೌಮ್ಯವಾದದ್ದಾಗಿದೆ. ಅವರು ಹೆಚ್ಚುಕಡಿಮೆ ಸಮಸ್ಯೆಗಳನ್ನೇ ಉಂಟುಮಾಡದೆ, ಶ್ರದ್ಧಾಪೂರ್ವಕವಾಗಿ ಕೆಲಸಮಾಡುವವರಾಗಿದ್ದಾರೆ.” ಅಧಿಕಾರಿಗಳಿಂದ ಅಂತಹ ಪ್ರಸನ್ನಕರವಾದ ಹೇಳಿಕೆಗಳು, ವೊವುಫ್ ಸೆರೆಮನೆಯಲ್ಲಿರುವ ಸೆರೆವಾಸಿಗಳೊಂದಿಗೆ ಕೆಲಸಮಾಡುತ್ತಿರುವ ಸಾಕ್ಷಿಗಳನ್ನು ಸಂತೋಷಗೊಳಿಸುತ್ತವೆ.
ಭೇಟಿನೀಡುತ್ತಿರುವ ಸಾಕ್ಷಿಗಳು, ಯೇಸುವಿನ ಈ ಮಾತುಗಳನ್ನು ಪೂರ್ಣವಾಗಿ ಗಣ್ಯಮಾಡುತ್ತಾರೆ: “ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ; ನನ್ನ ಕುರಿಗಳು ನನ್ನನ್ನು ತಿಳಿದವೆ; . . . ಅವು ನನ್ನ ಸ್ವರಕ್ಕೆ ಕಿವಿಗೊಡುವವು. ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.” (ಯೋಹಾನ 10:14, 16) ಸೆರೆಮನೆಯ ತಡೆಗಟ್ಟುಗಳು ಸಹ, ಉತ್ತಮ ಕುರುಬನಾದ ಯೇಸು ಕ್ರಿಸ್ತನು ಕುರಿಸದೃಶ ವ್ಯಕ್ತಿಗಳನ್ನು ಒಟ್ಟುಗೂಡಿಸುವುದರಿಂದ ತಡೆಯಸಾಧ್ಯವಿಲ್ಲ. ವೊವುಫ್ನಲ್ಲಿರುವ ಸಾಕ್ಷಿಗಳು, ಈ ಆನಂದಭರಿತ ಸೇವೆಯಲ್ಲಿ ಪಾಲ್ಗೊಳ್ಳುವ ಸುಯೋಗವನ್ನು ಪಡೆದುಕೊಂಡದ್ದಕ್ಕಾಗಿ ಆಭಾರಿಗಳಾಗಿದ್ದಾರೆ. ಅಂತ್ಯವು ಬರುವ ಮುಂಚೆ, ಇನ್ನೂ ಹೆಚ್ಚಿನ ಕಲ್ಲೆದೆಯವರು ರಾಜ್ಯದ ಸುವಾರ್ತೆಗೆ ಪ್ರತಿಕ್ರಿಯಿಸುವಂತೆ ಸಹಾಯಮಾಡುವುದರಲ್ಲಿ, ಅವರು ಯೆಹೋವನ ಆಶೀರ್ವಾದವನ್ನು ಎದುರುನೋಡುತ್ತಾರೆ.—ಮತ್ತಾಯ 24:14.
[ಪುಟ 27 ರಲ್ಲಿರುವ ಚೌಕ]
“ಬಾಲಿಶ ನಡವಳಿಕೆಯುಳ್ಳ ವಯಸ್ಕರ ಸಮಸ್ಯೆ”
“ಸ್ವಲ್ಪ ಸಮಯ ಸೆರೆಮನೆಯಲ್ಲಿದ್ದ ನಂತರ, ಒಬ್ಬ ಸೆರೆವಾಸಿಯು, ಸ್ವಾತಂತ್ರ್ಯದಿಂದ ಅಥವಾ ತನ್ನಷ್ಟಕ್ಕೆ ತಾನೇ ಜೀವಿಸುವುದು ಏನನ್ನು ಅರ್ಥೈಸುತ್ತದೆಂಬುದರ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ,” ಎಂದು ವೊವುಫ್ ಕಾರಾಗೃಹದಲ್ಲಿ ಕೆಲಸಮಾಡುತ್ತಿರುವ ಸಾಕ್ಷಿಗಳು ಗಮನಿಸುತ್ತಾರೆ. “ನಮಗೆ ‘ಬಾಲಿಶ ನಡವಳಿಕೆಯುಳ್ಳ ವಯಸ್ಕರ’ ಸಮಸ್ಯೆ ಇದೆ. ಸೆರೆಮನೆಯಿಂದ ಬಿಡುಗಡೆಯಾಗುವ ವ್ಯಕ್ತಿಗೆ, ತನ್ನನ್ನೇ ನೋಡಿಕೊಳ್ಳುವುದು ಹೇಗೆಂಬುದು ಗೊತ್ತಿರುವುದಿಲ್ಲ. ಆದುದರಿಂದ, ಸಭೆಯು ಅವನಿಗೆ ಕೇವಲ ಬೈಬಲ್ ಸತ್ಯವನ್ನು ಕಲಿಸುವುದಕ್ಕಿಂತ ಹೆಚ್ಚನ್ನು ಮಾಡಬೇಕು. ಸಮಾಜದ ಭಾಗವಾಗಲು ನಾವು ಅವನನ್ನು ತಯಾರಿಸಬೇಕು, ಅವನು ಎದುರಿಸಬಹುದಾದ ಹೊಸ ಅಪಾಯಗಳು ಮತ್ತು ಪ್ರಲೋಭನೆಗಳ ಕುರಿತು ಅವನನ್ನು ಎಚ್ಚರಿಸಬೇಕು. ಅತಿ ಹೆಚ್ಚು ರಕ್ಷಣೆಯನ್ನು ಕೊಡದಿರಲು ಜಾಗರೂಕರಾಗಿರಬೇಕಾದರೂ, ಜೀವನದಲ್ಲಿ ಒಂದು ಹೊಸ ಆರಂಭವನ್ನು ಮಾಡಲು ನಾವು ಅವನಿಗೆ ಸಹಾಯಮಾಡಬೇಕು.”