ಯೆರೂಸಲೇಮ್—“ಆ ದೊಡ್ಡ ಅರಸನ ಪಟ್ಟಣ”
“ಯೆರೂಸಲೇಮಿನ ಮೇಲೆ ಆಣೆ ಇಡಬೇಡ; ಅದು ಆ ದೊಡ್ಡ ಅರಸನ ಪಟ್ಟಣವಾಗಿದೆ.”—ಮತ್ತಾಯ 5:34, 35.
1, 2. ಯೆರೂಸಲೇಮಿನ ಸಂಬಂಧದಲ್ಲಿ ಯಾವ ವಿಷಯವು ಕೆಲವರನ್ನು ದಿಗ್ಭ್ರಮೆಗೊಳಿಸಬಹುದು?
ಯೆರೂಸಲೇಮ್—ವಿಭಿನ್ನ ಧರ್ಮಗಳ ಜನರಲ್ಲಿ ಸ್ವತಃ ಆ ಹೆಸರೇ ಬಲವಾದ ಅನಿಸಿಕೆಗಳನ್ನು ಮೂಡಿಸುತ್ತದೆ. ವಾಸ್ತವವಾಗಿ, ಆ ಪ್ರಾಚೀನ ಪಟ್ಟಣವು ಸುದ್ದಿಸಮಾಚಾರಗಳಲ್ಲಿ ಅನೇಕ ಬಾರಿ ಉಲ್ಲೇಖಿಸಲ್ಪಡುವುದರಿಂದ, ನಮ್ಮಲ್ಲಿ ಯಾರೂ ಅದನ್ನು ಅಲಕ್ಷಿಸಸಾಧ್ಯವಿಲ್ಲ. ಆದರೆ ದುಃಖಕರವಾದ ಸಂಗತಿಯೇನೆಂದರೆ, ಯೆರೂಸಲೇಮ್ ಪಟ್ಟಣವು ಎಂದೂ ಶಾಂತಿಯ ಸ್ಥಳವಾಗಿಲ್ಲ ಎಂಬುದನ್ನು ಅನೇಕ ವರದಿಗಳು ಪ್ರಕಟಪಡಿಸುತ್ತವೆ.
2 ಇದು ಕೆಲವು ಬೈಬಲ್ ವಾಚಕರನ್ನು ದಿಗ್ಭ್ರಮೆಗೊಳಿಸಬಹುದು. ಗತಕಾಲದಲ್ಲಿ, ಯೆರೂಸಲೇಮಿನ ಸಂಕ್ಷಿಪ್ತನಾಮವು ಸಾಲೇಮ್ ಆಗಿದ್ದು, ಅದರ ಅರ್ಥ “ಶಾಂತಿ” ಎಂದಾಗಿತ್ತು. (ಆದಿಕಾಂಡ 14:18; ಕೀರ್ತನೆ 76:2; ಇಬ್ರಿಯ 7:1, 2) ಆದುದರಿಂದ, “ಇಂತಹ ಹೆಸರುಳ್ಳ ಈ ಪಟ್ಟಣದಲ್ಲಿ ಇತ್ತೀಚೆಗೆ ಶಾಂತಿಯ ಕೊರತೆ ಇರುವುದು ಏಕೆ?” ಎಂದು ನೀವು ವಿಸ್ಮಯಪಡಬಹುದು.
3. ಯೆರೂಸಲೇಮಿನ ಕುರಿತಾದ ವಿಶ್ವಾಸಾರ್ಹವಾದ ಮಾಹಿತಿಯನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
3 ಈ ಪ್ರಶ್ನೆಯನ್ನು ಉತ್ತರಿಸಲು, ನೀವು ಇತಿಹಾಸದ ಪುಟಗಳನ್ನು ತೆರೆದು, ಗತಕಾಲದ ಯೆರೂಸಲೇಮಿನ ಕುರಿತು ತಿಳಿದುಕೊಳ್ಳಬೇಕು. ಆದರೆ, ‘ಪ್ರಾಚೀನ ಇತಿಹಾಸದ ಕುರಿತು ಅಧ್ಯಯನ ಮಾಡಲು ನಮಗೆ ಸಮಯವಿಲ್ಲ’ ಎಂದು ಕೆಲವರು ನೆನಸಬಹುದು. ಹಾಗಿದ್ದರೂ, ಯೆರೂಸಲೇಮಿನ ಪ್ರಾಚೀನ ಇತಿಹಾಸದ ಕುರಿತಾದ ನಿಷ್ಕೃಷ್ಟ ಜ್ಞಾನವು, ನಮಗೆಲ್ಲರಿಗೂ ಮಹತ್ವದ ವಿಷಯವಾಗಿದೆ. ಬೈಬಲು ಇದಕ್ಕೆ ಕಾರಣವನ್ನು ಈ ಮಾತುಗಳಲ್ಲಿ ಸೂಚಿಸಿ ಹೇಳುತ್ತದೆ: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ಯೆರೂಸಲೇಮಿನ ಕುರಿತಾದ ಬೈಬಲ್ ಜ್ಞಾನವು, ನಮಗೆ ಸಾಂತ್ವನವನ್ನು ಮತ್ತು ಶಾಂತಿಯ ನಿರೀಕ್ಷೆಯನ್ನು—ಆ ಪಟ್ಟಣಕ್ಕೆ ಮಾತ್ರವಲ್ಲ, ಭೂವ್ಯಾಪಕವಾಗಿಯೂ—ಕೊಡಬಲ್ಲದು.
“ಯೆಹೋವನ ಸಿಂಹಾಸನ”ದ ಸ್ಥಳ
4, 5. ದೇವರ ಉದ್ದೇಶದ ನೆರವೇರಿಕೆಯಲ್ಲಿ, ಯೆರೂಸಲೇಮ್ ಪಟ್ಟಣವು ಒಂದು ಪ್ರಧಾನ ಪಾತ್ರವನ್ನು ವಹಿಸುವಂತೆ ಸಹಾಯ ಮಾಡುವುದರಲ್ಲಿ ದಾವೀದನು ಹೇಗೆ ಒಳಗೊಂಡಿದ್ದನು?
4 ಸಾ.ಶ.ಪೂ. 11ನೆಯ ಶತಮಾನದಲ್ಲಿ ಯೆರೂಸಲೇಮ್ ಪಟ್ಟಣವು, ಭದ್ರವೂ ಶಾಂತಿಭರಿತವೂ ಆದ ಒಂದು ಜನಾಂಗದ ರಾಜಧಾನಿಯಾಗಿ ಪ್ರಸಿದ್ಧವಾಯಿತು. ಯೆಹೋವ ದೇವರು ಆ ಪ್ರಾಚೀನ ಜನಾಂಗವಾದ ಇಸ್ರಾಯೇಲಿನ ಮೇಲೆ, ಯುವ ಪುರುಷನಾದ ದಾವೀದನನ್ನು ರಾಜನನ್ನಾಗಿ ಅಭಿಷೇಕಿಸಿದನು. ಯೆರೂಸಲೇಮ್ ಪಟ್ಟಣವು ಆಡಳಿತದ ಕೇಂದ್ರಸ್ಥಾನವಾಯಿತು. ಮತ್ತು ದಾವೀದನು ಹಾಗೂ ಅವನ ಸಂತತಿಯವರು, “ಯೆಹೋವನ ರಾಜ್ಯಸಿಂಹಾಸನ”ವನ್ನು ಇಲ್ಲವೆ “ಯೆಹೋವನ ಸಿಂಹಾಸನ”ವನ್ನು ತಮ್ಮದಾಗಿಸಿಕೊಂಡರು.—1 ಪೂರ್ವಕಾಲವೃತ್ತಾಂತ 28:5; 29:23.
5 ದೇವಭಯವುಳ್ಳ ದಾವೀದನು, ಒಬ್ಬ ಇಸ್ರಾಯೇಲ್ಯನೂ ಯೆಹೂದ ಕುಲದವನೂ ಆಗಿದ್ದು, ಮೂರ್ತಿಪೂಜಕರಾಗಿದ್ದ ಯೆಬೂಸಿಯರಿಂದ ಯೆರೂಸಲೇಮನ್ನು ವಶಪಡಿಸಿಕೊಂಡಿದ್ದನು. ಆಗ ಚೀಯೋನ್ ಎಂಬ ಪರ್ವತವು ಮಾತ್ರ ಆ ಪಟ್ಟಣದಲ್ಲಿತ್ತು, ತರುವಾಯ ಚೀಯೋನ್ ಎಂಬ ಹೆಸರೇ ಯೆರೂಸಲೇಮ್ ಎಂಬ ಹೆಸರಿಗೆ ಸಮನಾರ್ಥಕವಾಯಿತು. ಸಕಾಲದಲ್ಲಿ, ದಾವೀದನು ಇಸ್ರಾಯೇಲಿನೊಂದಿಗೆ ದೇವರಿಗಿದ್ದ ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ಸ್ಥಳಾಂತರಿಸಿ, ಅದನ್ನು ಒಂದು ಗುಡಾರದಲ್ಲಿ ಇರಿಸಿದನು. ಅನೇಕ ವರ್ಷಗಳ ಮುಂಚೆ, ಆ ಪವಿತ್ರ ಮಂಜೂಷದ ಮೇಲಿನ ಮೇಘದಿಂದ ದೇವರು ತನ್ನ ಪ್ರವಾದಿಯಾದ ಮೋಶೆಯೊಂದಿಗೆ ಮಾತಾಡಿದ್ದನು. (ವಿಮೋಚನಕಾಂಡ 25:1, 21, 22; ಯಾಜಕಕಾಂಡ 16:2; 1 ಪೂರ್ವಕಾಲವೃತ್ತಾಂತ 15:1-3) ಆ ಮಂಜೂಷವು ದೇವರ ಸಾನ್ನಿಧ್ಯವನ್ನು ಸಂಕೇತಿಸಿತು, ಏಕೆಂದರೆ ಇಸ್ರಾಯೇಲಿನ ನಿಜ ಅರಸನು ಯೆಹೋವನಾಗಿದ್ದನು. ಆದುದರಿಂದ, ಯೆಹೋವ ದೇವರು ಎರಡು ವಿಧಗಳಲ್ಲಿ ಯೆರೂಸಲೇಮ್ ಪಟ್ಟಣದಿಂದ ಆಳ್ವಿಕೆ ನಡೆಸಿದನೆಂದು ಹೇಳಸಾಧ್ಯವಿತ್ತು.
6. ದಾವೀದನ ಮತ್ತು ಯೆರೂಸಲೇಮಿನ ಸಂಬಂಧದಲ್ಲಿ ಯೆಹೋವನು ಯಾವ ವಾಗ್ದಾನವನ್ನು ಮಾಡಿದನು?
6 ಚೀಯೋನ್ ಇಲ್ಲವೆ ಯೆರೂಸಲೇಮಿನಿಂದ ಪ್ರತಿನಿಧಿಸಲ್ಪಟ್ಟ ದಾವೀದನ ರಾಜಮನೆತನವು, ಕೊನೆಗೊಳ್ಳಲಾರದೆಂದು ಯೆಹೋವನು ಅವನಿಗೆ ವಾಗ್ದಾನಮಾಡಿದನು. ಇದರರ್ಥ, ದಾವೀದನ ವಂಶಜನೊಬ್ಬನು ದೇವರ ಅಭಿಷಿಕ್ತನೋಪಾದಿ, ಅಂದರೆ, ಮೆಸ್ಸೀಯ ಇಲ್ಲವೆ ಕ್ರಿಸ್ತನೋಪಾದಿ ಸದಾಕಾಲ ಆಳುವ ಅಧಿಕಾರವನ್ನು ಪಡೆದುಕೊಳ್ಳುವನು.a (ಕೀರ್ತನೆ 132:11-14; ಲೂಕ 1:31-33) “ಯೆಹೋವನ ಸಿಂಹಾಸನ”ಕ್ಕೆ ಶಾಶ್ವತ ಬಾಧ್ಯಸ್ಥನಾಗಿರುವ ಇವನು, ಯೆರೂಸಲೇಮನ್ನು ಮಾತ್ರವಲ್ಲ, ಎಲ್ಲ ಜನಾಂಗಗಳನ್ನೂ ಆಳುವನೆಂದು ಬೈಬಲು ಪ್ರಕಟಪಡಿಸುತ್ತದೆ.—ಕೀರ್ತನೆ 2:6-8; ದಾನಿಯೇಲ 7:13, 14.
7. ರಾಜ ದಾವೀದನು ಸತ್ಯಾರಾಧನೆಯನ್ನು ಹೇಗೆ ಪ್ರವರ್ಧಿಸಿದನು?
7 ದೇವರ ಅಭಿಷಿಕ್ತನಾದ ರಾಜ ದಾವೀದನನ್ನು ಪದಚ್ಯುತಿಗೊಳಿಸಲು ಮಾಡಲ್ಪಟ್ಟ ಪ್ರಯತ್ನಗಳು ನಿರರ್ಥಕವಾದವು. ಬದಲಿಗೆ, ವೈರಿ ಜನಾಂಗಗಳು ಸೋಲನ್ನಪ್ಪಿದ ಕಾರಣ, ವಾಗ್ದತ್ತ ದೇಶದ ಮೇರೆಗಳು ದೇವರು ಗೊತ್ತುಪಡಿಸಿದ ದೂರದ ವರೆಗೆ ವಿಸ್ತರಿಸಿದವು. ಈ ಸನ್ನಿವೇಶವನ್ನು ದಾವೀದನು, ಸತ್ಯಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಉಪಯೋಗಿಸಿಕೊಂಡನು. ಮತ್ತು ದಾವೀದನ ಕೀರ್ತನೆಗಳಲ್ಲಿ ಹೆಚ್ಚಿನವು, ಯೆಹೋವನನ್ನು ಚೀಯೋನಿನ ನಿಜ ಅರಸನಾಗಿ ಕೊಂಡಾಡುತ್ತವೆ.—2 ಸಮುವೇಲ 8:1-15; ಕೀರ್ತನೆ 9:1, 11; 24:1, 3, 7-10; 65:1, 2; 68:1, 24, 29; 110:1, 2; 122:1-4.
8, 9. ಯೆರೂಸಲೇಮಿನಲ್ಲಿ ಸತ್ಯಾರಾಧನೆಯು ಅರಸ ಸೊಲೊಮೋನನ ಆಳ್ವಿಕೆಯಲ್ಲಿ ಹೇಗೆ ವಿಸ್ತರಿಸಿತು?
8 ದಾವೀದನ ಮಗನಾದ ಸೊಲೊಮೋನನ ಆಳ್ವಿಕೆಯಲ್ಲಿ, ಯೆಹೋವನ ಆರಾಧನೆಯು ಎಲ್ಲೆಡೆಯೂ ವಿಸ್ತರಿಸಿತು. ಮೋರಿಯ ಬೆಟ್ಟವನ್ನು (ಆಧುನಿಕ ದಿನದ, ಡೂಮ್ ಆಫ್ ದ ರಾಕ್ ಎಂಬ ಮಸೀದಿಯ ಕ್ಷೇತ್ರ) ಸೇರಿಸಲಿಕ್ಕಾಗಿ, ಸೊಲೊಮೋನನು ಯೆರೂಸಲೇಮನ್ನು ಉತ್ತರ ದಿಕ್ಕಿನ ಕಡೆಗೆ ವಿಸ್ತರಿಸಿದನು. ಈ ಬೆಟ್ಟದ ಮೇಲೆ ಅವನು ಯೆಹೋವನ ಸ್ತುತಿಗಾಗಿ ಒಂದು ಮಹೋನ್ನತವಾದ ದೇವಾಲಯವನ್ನು ಕಟ್ಟುವ ಸುಯೋಗವನ್ನು ಪಡೆದನು. ಆ ದೇವಾಲಯದ ಅತಿ ಪವಿತ್ರಸ್ಥಾನದಲ್ಲಿ ಅವನು ಒಡಂಬಡಿಕೆಯ ಮಂಜೂಷವನ್ನು ಇರಿಸಿದನು.—1 ಅರಸುಗಳು 6:1-38.
9 ಯೆರೂಸಲೇಮಿನಲ್ಲಿ ಕೇಂದ್ರೀಕೃತವಾಗಿದ್ದ ಯೆಹೋವನ ಆರಾಧನೆಗೆ ಇಸ್ರಾಯೇಲ್ ಜನಾಂಗವು, ತನ್ನ ಹೃತ್ಪೂರ್ವಕ ಬೆಂಬಲವನ್ನು ನೀಡಿದಾಗ ಶಾಂತಿಯನ್ನು ಅನುಭವಿಸಿತು. ಈ ಸನ್ನಿವೇಶವನ್ನು ಸುಂದರವಾಗಿ ವರ್ಣಿಸುತ್ತಾ, ಶಾಸ್ತ್ರವಚನಗಳು ಹೇಳುವುದು: “ಇಸ್ರಾಯೇಲ್ಯೆಹೂದ್ಯರು ಸಮುದ್ರತೀರದ ಉಸುಬಿನಷ್ಟು ಅಸಂಖ್ಯರಾಗಿದ್ದರು; ಅವರು ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು. . . . [ಸೊಲೊಮೋನನು] ಸುತ್ತಣ ರಾಜರೊಡನೆ ಸಮಾಧಾನದಿಂದಿದ್ದನು. . . . ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.”—1 ಅರಸುಗಳು 4:20, 24, 25.
10, 11. ಸೊಲೊಮೋನನ ಆಳ್ವಿಕೆಯಲ್ಲಿ ಯೆರೂಸಲೇಮಿನ ಪರಿಸ್ಥಿತಿಯ ಕುರಿತು ಬೈಬಲು ಹೇಳುವುದನ್ನು ಪ್ರಾಕ್ತನಶಾಸ್ತ್ರವು ಹೇಗೆ ದೃಢೀಕರಿಸುತ್ತದೆ?
10 ಸೊಲೊಮೋನನ ಯಶಸ್ವಿಕರ ಆಳ್ವಿಕೆಯ ವೃತ್ತಾಂತವನ್ನು ಪ್ರಾಕ್ತನಶಾಸ್ತ್ರದ ಸಂಶೋಧನೆಗಳು ಒಪ್ಪಿಕೊಳ್ಳುತ್ತವೆ. ಇಸ್ರಾಯೇಲ್ ಜನಾಂಗದ ಪ್ರಾಕ್ತನಶಾಸ್ತ್ರ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, ಪ್ರೊಫೆಸರ್ ಯೋಹಾನಾನ್ ಆಹಾರೋನಿ ಹೇಳುವುದು: “ಎಲ್ಲೆಡೆಯಿಂದಲೂ ರಾಜಗೃಹದೊಳಕ್ಕೆ ಹರಿದುಬಂದ ನಿಧಿಯು, ಮತ್ತು ಏಳಿಗೆ ಹೊಂದುತ್ತಿರುವ ವ್ಯಾಪಾರವು . . . ಭೌತಿಕ ವಸ್ತುಗಳ ಪ್ರತಿಯೊಂದು ಅಂಶದಲ್ಲಿ, ತೀವ್ರವಾದ ಹಾಗೂ ಎದ್ದುಕಾಣುವ ಸುಧಾರಣೆಯನ್ನು ತಂದಿತು. . . . ಭೌತಿಕ ವಸ್ತುಗಳ ವೀಕ್ಷಣೆಯಲ್ಲಾದ ಬದಲಾವಣೆಯು . . . ದುಬಾರಿ ವಸ್ತುಗಳಲ್ಲಿ ಮಾತ್ರವಲ್ಲ, ವಿಶೇಷವಾಗಿ ಕುಂಬಾರಿಕೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿತು. . . . ಮಣ್ಣಿನ ಪಾತ್ರೆಗಳು ಮತ್ತು ಅವುಗಳನ್ನು ಸುಡುವ ಗುಣಮಟ್ಟವು ಮಹತ್ತರವಾಗಿ ಸುಧಾರಿಸಿತು.”
11 ತದ್ರೀತಿಯಲ್ಲಿ ಜೆರಿ ಎಮ್. ಲಾಂಡೇ ಬರೆದುದು: “ಸೊಲೊಮೋನನ ಆಳ್ವಿಕೆಯಲ್ಲಿ, ಇಸ್ರಾಯೇಲಿನ ಭೌತಿಕ ಸಂಸ್ಕೃತಿಯು, ಹಿಂದಿನ ಇನ್ನೂರು ವರ್ಷಗಳಲ್ಲಿ ಮಾಡದಿದ್ದಷ್ಟು ಪ್ರಗತಿಯನ್ನು ಮೂರು ದಶಕಗಳಲ್ಲಿ ಮಾಡಿತು. ಸೊಲೊಮೋನನ ಸಮಯದಲ್ಲಿನ ಸ್ಮಾರಕ ಕಟ್ಟಡಗಳ ಅವಶೇಷಗಳು, ಬೃಹತ್ಗಾತ್ರದ ಗೋಡೆಗಳುಳ್ಳ ದೊಡ್ಡ ಪಟ್ಟಣಗಳು, ಮತ್ತು ಶ್ರೀಮಂತರ ವಾಸಕ್ಕಾಗಿ ಕಟ್ಟಲ್ಪಟ್ಟ ಮನೆಗಳಲ್ಲಿ, ಕುಂಬಾರನ ಕಾರ್ಯಕೌಶಲ್ಯದ ಸಾಮರ್ಥ್ಯದಲ್ಲಿ ಮತ್ತು ಅವನ ಉತ್ಪಾದನಾ ರೀತಿಯಲ್ಲಿ ಮಹತ್ತರವಾದ ಸುಧಾರಣೆಯನ್ನು ನಾವು ಕಾಣುತ್ತೇವೆ. ಹಸ್ತಕೃತಿಗಳ ಅವಶೇಷಗಳು, ಬಹುದೂರದ ಸ್ಥಳಗಳಲ್ಲಿ ಮಾಡಲ್ಪಟ್ಟ ಸರಕುಗಳನ್ನು ಪ್ರತಿನಿಧಿಸುತ್ತವೆ. ಇವು ಸಕ್ರಿಯವಾದ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಾಕ್ಷ್ಯಗಳಾಗಿವೆ.”—ದಾವೀದನ ಮನೆ (ಇಂಗ್ಲಿಷ್).
ಶಾಂತಿಯಿಂದ ಧ್ವಂಸದ ಕಡೆಗೆ
12, 13. ಯಾವ ವಿಧದಲ್ಲಿ ಸತ್ಯಾರಾಧನೆಯು ಯೆರೂಸಲೇಮಿನಲ್ಲಿ ಪ್ರವರ್ಧಿಸಲ್ಪಡದೇ ಹೋಯಿತು?
12 ಎಲ್ಲಿ ಯೆಹೋವನ ಪವಿತ್ರ ಆಲಯವು ಸ್ಥಾಪಿಸಲ್ಪಟ್ಟಿತ್ತೋ ಆ ಯೆರೂಸಲೇಮ್ ಪಟ್ಟಣದ ಶಾಂತಿ ಮತ್ತು ಸಮೃದ್ಧಿಯು, ಪ್ರಾರ್ಥನೆಯಲ್ಲಿ ಸೇರಿಸಲ್ಪಡಬಹುದಾದ ಒಂದು ಸೂಕ್ತ ವಿಷಯವಾಗಿತ್ತು. ದಾವೀದನು ಬರೆದುದು: “ಯೆರೂಸಲೇಮಿನ ಶುಭಕ್ಕೋಸ್ಕರ ಪ್ರಾರ್ಥಿಸಿರಿ. ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ. ನಿನ್ನ ಪೌಳಿಗೋಡೆಗಳೊಳಗೆ ಶುಭವುಂಟಾಗಲಿ; ನಿನ್ನ ಅರಮನೆಗಳಲ್ಲಿ ಸೌಭಾಗ್ಯವಿರಲಿ. ನನ್ನ ಬಂಧುಮಿತ್ರರ ನಿಮಿತ್ತವಾಗಿ ನಿನಗೆ ಶುಭವಾಗಲೆಂದು ಹೇಳುತ್ತೇನೆ.” (ಕೀರ್ತನೆ 122:6-8) ಆ ಶಾಂತಿಭರಿತ ಪಟ್ಟಣದಲ್ಲಿ ಮಹೋನ್ನತವಾದ ಆಲಯವನ್ನು ಕಟ್ಟುವ ಸುಯೋಗವು ಸೊಲೊಮೋನನಿಗೆ ಇತ್ತಾದರೂ, ಅವನು ಕ್ರಮೇಣ ಅನೇಕ ವಿಧರ್ಮಿ ಸ್ತ್ರೀಯರನ್ನು ಮದುವೆಯಾದನು. ಅವನು ವೃದ್ಧಾಪ್ಯದಲ್ಲಿ ಆ ದಿನದ ಸುಳ್ಳು ದೇವರುಗಳ ಆರಾಧನೆಯನ್ನು ಪ್ರವರ್ಧಿಸುವಂತೆ, ಅವನ ಹೆಂಡತಿಯರು ಅವನನ್ನು ತಪ್ಪುದಾರಿಗೆ ಕೊಂಡ್ಯೊಯ್ದರು. ಈ ಧರ್ಮಭ್ರಷ್ಟತೆಯು ಇಡೀ ಜನಾಂಗವನ್ನು ಭ್ರಷ್ಟಗೊಳಿಸಿ, ಆ ರಾಷ್ಟ್ರ ಹಾಗೂ ಅದರ ನಿವಾಸಿಗಳಿಂದ ನಿಜವಾದ ಶಾಂತಿಯನ್ನು ಕಸಿದುಕೊಂಡಿತು.—1 ಅರಸುಗಳು 11:1-8; 14:21-24.
13 ಸೊಲೊಮೋನನ ಮಗನಾದ ರೆಹಬ್ಬಾಮನ ಆಳ್ವಿಕೆಯ ಆರಂಭದಲ್ಲಿ, ಹತ್ತು ಕುಲಗಳು ದಂಗೆಯೆದ್ದು, ಇಸ್ರಾಯೇಲ್ನ ಉತ್ತರ ರಾಜ್ಯವನ್ನು ರಚಿಸಿದವು. ಅವರ ಮೂರ್ತಿಪೂಜೆಯ ಕಾರಣ, ಆ ರಾಜ್ಯವನ್ನು ಅಶ್ಶೂರ್ಯರು ಗೆದ್ದುಕೊಳ್ಳುವಂತೆ ದೇವರು ಅನುಮತಿಸಿದನು. (1 ಅರಸುಗಳು 12:16-30) ದಕ್ಷಿಣಭಾಗದಲ್ಲಿದ್ದ ಯೆಹೂದದ ಎರಡು ಕುಲಗಳುಳ್ಳ ರಾಜ್ಯದ ಕೇಂದ್ರಸ್ಥಾನವು ಯೆರೂಸಲೇಮ್ ಪಟ್ಟಣವೇ ಆಗಿತ್ತು. ಆದರೆ ಸಕಾಲದಲ್ಲಿ ಅವರೂ ಶುದ್ಧಾರಾಧನೆಯಿಂದ ವಿಮುಖರಾದರು. ಆದಕಾರಣ, ಸಾ.ಶ.ಪೂ. 607ರಲ್ಲಿ ಬಬಿಲೋನ್ಯರು ಆ ಪಟ್ಟಣವನ್ನು ನಾಶಮಾಡುವಂತೆ ದೇವರು ಅನುಮತಿಸಿದನು. 70 ವರ್ಷಗಳ ಕಾಲ, ಯೆಹೂದಿ ದೇಶಭ್ರಷ್ಟರು ಬಬಿಲೋನ್ಯದಲ್ಲಿ ಸೆರೆವಾಸಿಗಳೋಪಾದಿ ಕಷ್ಟಾನುಭವಿಸಿದರು. ತರುವಾಯ, ದೇವರ ದಯೆಯಿಂದ ಅವರು ಯೆರೂಸಲೇಮಿಗೆ ಹಿಂದಿರುಗಿ, ಸತ್ಯಾರಾಧನೆಯನ್ನು ಪುನಃಸ್ಥಾಪಿಸುವಂತೆ ಅನುಮತಿಸಲ್ಪಟ್ಟರು.—2 ಪೂರ್ವಕಾಲವೃತ್ತಾಂತ 36:15-21.
14, 15. ಬಬಿಲೋನ್ಯ ಸಂಬಂಧಿತ ದೇಶಭ್ರಷ್ಟತೆಯ ತರುವಾಯ, ಯೆರೂಸಲೇಮ್ ತನ್ನ ಪ್ರಧಾನ ಪಾತ್ರವನ್ನು ಮತ್ತೊಮ್ಮೆ ಹೇಗೆ ಪಡೆದುಕೊಂಡಿತು, ಆದರೆ ಯಾವ ಬದಲಾವಣೆಯೊಂದಿಗೆ?
14 ಎಪ್ಪತ್ತು ವರ್ಷಗಳ ಹಾಳುಗೆಡಹುವಿಕೆಯ ಬಳಿಕ, ಪಾಳುಬಿದ್ದ ಕಟ್ಟಡಗಳು ಕಳೆಗಳಿಂದ ತುಂಬಿಹೋಗಿದ್ದಿರಬೇಕು. ಯೆರೂಸಲೇಮಿನ ಗೋಡೆಗಳು ಬಿದ್ದುಹೋಗಿದ್ದವು. ಒಂದು ಕಾಲದಲ್ಲಿ ಹೆಬ್ಬಾಗಿಲುಗಳು ಮತ್ತು ಗೋಪುರಗಳು ಇದ್ದ ಜಾಗದಲ್ಲಿ ದೊಡ್ಡ ದೊಡ್ಡ ಸಂದುಗಳಿದ್ದವು. ಆದರೂ, ಹಿಂದಿರುಗುತ್ತಿದ್ದ ಯೆಹೂದ್ಯರು ಎದೆಗುಂದಲಿಲ್ಲ. ಈ ಮೊದಲು ದೇವಾಲಯವು ಇದ್ದ ಸ್ಥಳದಲ್ಲಿ ಅವರೊಂದು ವೇದಿಕೆಯನ್ನು ಕಟ್ಟಿ, ಯೆಹೋವನಿಗೆ ಪ್ರತಿದಿನವೂ ಯಜ್ಞಗಳನ್ನು ಅರ್ಪಿಸತೊಡಗಿದರು.
15 ಇದೊಂದು ಒಳ್ಳೆಯ ಆರಂಭವಾಗಿತ್ತಾದರೂ, ಪುನಃಸ್ಥಾಪಿತ ಯೆರೂಸಲೇಮು ಇನ್ನೆಂದಿಗೂ ಒಂದು ರಾಜ್ಯದ ರಾಜಧಾನಿಯಾಗಿರದು, ಮತ್ತು ಅದರ ಸಿಂಹಾಸನದ ಮೇಲೆ ರಾಜ ದಾವೀದನ ವಂಶಜನೂ ಇರಲಾರನು. ಬದಲಿಗೆ, ಬಬಿಲೋನನ್ನು ಜಯಿಸಿದ ಪಾರಸೀಯರಿಂದ ನೇಮಿಸಲ್ಪಟ್ಟ ರಾಜ್ಯಪಾಲಕನಿಂದ ಯೆಹೂದ್ಯರು ಆಳಲ್ಪಟ್ಟು, ಆ ಪಾರಸೀಯರಿಗೇ ತೆರಿಗೆಗಳನ್ನು ಸಲ್ಲಿಸಬೇಕಿತ್ತು. (ನೆಹೆಮೀಯ 9:34-37) ಯೆರೂಸಲೇಮ್ ‘ತುಳಿದಾಡಲ್ಪಟ್ಟ’ ಸ್ಥಿತಿಯಲ್ಲಿದ್ದರೂ, ಇಡೀ ಲೋಕದಲ್ಲೇ ಯೆಹೋವ ದೇವರಿಂದ ವಿಶೇಷವಾಗಿ ಅನುಗ್ರಹಿಸಲ್ಪಟ್ಟ ಏಕೈಕ ಪಟ್ಟಣವಾಗಿತ್ತು. (ಲೂಕ 21:24) ಶುದ್ಧಾರಾಧನೆಯ ಕೇಂದ್ರಸ್ಥಾನದೋಪಾದಿ, ರಾಜ ದಾವೀದನ ವಂಶಜನ ಮುಖಾಂತರ ಇಡೀ ಭೂಮಿಯ ಮೇಲೆ ತನ್ನ ಪರಮಾಧಿಕಾರವನ್ನು ಚಲಾಯಿಸುವ ದೇವರ ಹಕ್ಕನ್ನೂ ಅದು ಪ್ರತಿನಿಧಿಸಿತು.
ಸುಳ್ಳು ಧಾರ್ಮಿಕ ನೆರೆಯವರಿಂದ ವಿರೋಧಿಸಲ್ಪಟ್ಟದ್ದು
16. ಬಬಿಲೋನ್ಯದಿಂದ ಹಿಂದಿರುಗಿದ್ದ ಯೆಹೂದ್ಯರು, ಯೆರೂಸಲೇಮಿನ ಪುನಸ್ಸ್ಥಾಪನಾ ಕೆಲಸವನ್ನು ನಿಲ್ಲಿಸಿದ್ದೇಕೆ?
16 ಯೆರೂಸಲೇಮಿನಿಂದ ಗಡಿಪಾರು ಮಾಡಲ್ಪಟ್ಟಿದ್ದ ಯೆಹೂದ್ಯರು ಹಿಂದಿರುಗಿ, ಹೊಸ ದೇವಾಲಯಕ್ಕೆ ಅಸ್ತಿವಾರವನ್ನು ಬೇಗನೆ ಹಾಕಿದರು. ಆದರೆ ನೆರೆಹೊರೆಯಲ್ಲಿದ್ದ ಸುಳ್ಳು ಧರ್ಮದ ಅನುಯಾಯಿಗಳು, ಪಾರಸೀಯ ಅರಸನಾದ ಅರ್ತಷಸ್ತನಿಗೆ ಒಂದು ನಿಂದಾತ್ಮಕ ಪತ್ರವನ್ನು ಕಳುಹಿಸಿ, ಯೆಹೂದ್ಯರು ದಂಗೆಯೇಳುವರೆಂದು ಪ್ರತಿಪಾದಿಸಿದರು. ಇದರ ಪರಿಣಾಮವಾಗಿ, ಅರ್ತಷಸ್ತನು ಯೆರೂಸಲೇಮಿನಲ್ಲಿ ನಡೆಯುತ್ತಿದ್ದ ನಿರ್ಮಾಣಕಾರ್ಯದ ಮೇಲೆ ನಿಷೇಧ ತಂದನು. ಆ ಸಮಯದಲ್ಲಿ ನೀವು ಆ ಪಟ್ಟಣದಲ್ಲಿ ವಾಸಿಸುತ್ತಿದ್ದಲ್ಲಿ, ಯೆರೂಸಲೇಮಿನ ಭವಿಷ್ಯತ್ತು ಏನಾಗಿರಬಹುದೆಂದು ನೀವು ಕುತೂಹಲಪಟ್ಟಿದ್ದಿರಬಹುದು. ನಿರೀಕ್ಷಿಸಲ್ಪಟ್ಟಂತೆಯೇ, ಯೆಹೂದ್ಯರು ದೇವಾಲಯದ ನಿರ್ಮಾಣಕಾರ್ಯವನ್ನು ನಿಲ್ಲಿಸಿ, ತಮ್ಮ ಸ್ವಂತ ಭೌತಿಕ ಬೆನ್ನಟ್ಟುವಿಕೆಗಳಲ್ಲಿ ತಲ್ಲೀನರಾದರು.—ಎಜ್ರ 4:11-24; ಹಗ್ಗಾಯ 1:2-6.
17, 18. ಯೆರೂಸಲೇಮ್ ಪುನರ್ನಿರ್ಮಾಣಗೊಂಡಿತು ಎಂಬುದನ್ನು ಖಚಿತಪಡಿಸಲಿಕ್ಕಾಗಿ ಯೆಹೋವನು ಯಾವ ಮಾಧ್ಯಮವನ್ನು ಉಪಯೋಗಿಸಿದನು?
17 ಅವರು ಹಿಂದಿರುಗಿ 17 ವರ್ಷಗಳು ಗತಿಸಿದ ನಂತರ, ತನ್ನ ಜನರ ಆಲೋಚನಾಕ್ರಮವನ್ನು ಸರಿಪಡಿಸಲು, ದೇವರು ಹಗ್ಗಾಯ ಮತ್ತು ಜೆಕರ್ಯರೆಂಬ ಪ್ರವಾದಿಗಳನ್ನು ನೇಮಿಸಿದನು. ಪಶ್ಚಾತ್ತಾಪಪಡುವಂತೆ ಪ್ರಚೋದಿಸಲ್ಪಟ್ಟ ಯೆಹೂದ್ಯರು, ದೇವಾಲಯವನ್ನು ಪುನಃ ಕಟ್ಟಲಾರಂಭಿಸಿದರು. ಈ ಮಧ್ಯೆ, ದಾರ್ಯಾವೆಷನು ಪಾರಸೀಯ ರಾಜನಾಗಿದ್ದನು. ಯೆರೂಸಲೇಮಿನ ದೇವಾಲಯವು ಪುನರ್ನಿರ್ಮಿಸಲ್ಪಡಬೇಕು ಎಂಬ ರಾಜ ಕೋರೆಷನ ಆಜ್ಞೆಯನ್ನು ಅವನು ದೃಢಪಡಿಸಿದನು. ದಾರ್ಯಾವೆಷನು ಯೆಹೂದ್ಯರ ನೆರೆಯವರಿಗೆ ಒಂದು ಪತ್ರವನ್ನು ಬರೆದು ಕಳುಹಿಸಿದನು. ಅದರಲ್ಲಿ, ‘ಅವರ ಗೊಡವೆಗೆ ಹೋಗ’ದಿರುವಂತೆ ಎಚ್ಚರಿಸುತ್ತಾ, ನಿರ್ಮಾಣಕಾರ್ಯವು ಪೂರ್ಣಗೊಳ್ಳುವಂತಾಗಲು ರಾಜನ ಬೊಕ್ಕಸದಿಂದ ಹಣಕಾಸನ್ನು ಒದಗಿಸಬೇಕೆಂದು ಬರೆದು ತಿಳಿಸಿದನು.—ಎಜ್ರ 6:1-13.
18 ಯೆಹೂದ್ಯರು ತಾವು ಹಿಂದಿರುಗಿದ 22ನೆಯ ವರ್ಷದಲ್ಲಿ ದೇವಾಲಯದ ನಿರ್ಮಾಣಕಾರ್ಯವನ್ನು ಮುಗಿಸಿದರು. ಈ ಪ್ರಮುಖ ಘಟನೆಯು, ಬಹಳ ಹರ್ಷದಿಂದ ಆಚರಿಸಲ್ಪಡಬೇಕಾದ ಸಂಗತಿಯೆಂದು ನೀವು ಗ್ರಹಿಸಸಾಧ್ಯವಿದೆ. ಆದರೂ, ಯೆರೂಸಲೇಮ್ ಮತ್ತು ಅದರ ಗೋಡೆಗಳ ಹೆಚ್ಚಿನ ಭಾಗವು ಇನ್ನೂ ಪಾಳುಬಿದ್ದಿದ್ದವು. ಆ ಪಟ್ಟಣಕ್ಕೆ ಬೇಕಾದ ಗಮನವು, “ದೇಶಾಧಿಪತಿಯಾದ ನೆಹೆಮೀಯ, ಯಾಜಕನೂ, ಧರ್ಮೋಪದೇಶಕನೂ ಆದ ಎಜ್ರ ಇವರ ಕಾಲದಲ್ಲಿ” ಕೊಡಲ್ಪಟ್ಟಿತು. (ನೆಹೆಮೀಯ 12:24, 25) ಸ್ಪಷ್ಟವಾಗಿಯೇ, ಸಾ.ಶ.ಪೂ. ಐದನೆಯ ಶತಮಾನದ ಅಂತ್ಯದೊಳಗೆ, ಯೆರೂಸಲೇಮ್ ಆ ಪ್ರಾಚೀನ ಲೋಕದ ಒಂದು ಪ್ರಧಾನ ಪಟ್ಟಣದೋಪಾದಿ ಸಂಪೂರ್ಣವಾಗಿ ಪುನರ್ನಿರ್ಮಿಸಲ್ಪಟ್ಟಿತ್ತು.
ಮೆಸ್ಸೀಯನು ಕಾಣಿಸಿಕೊಂಡನು!
19. ಮೆಸ್ಸೀಯನು ಯೆರೂಸಲೇಮಿನ ಅಪೂರ್ವವಾದ ಸ್ಥಾನವನ್ನು ಹೇಗೆ ಅಂಗೀಕರಿಸಿದನು?
19 ಆ ಸಮಯದಂದಿನಿಂದ ನಾವು ಒಂದಿಷ್ಟು ಶತಮಾನಗಳು ಮುಂದೆ ಹೋಗಿ, ಒಂದು ಅತ್ಯಂತ ಪ್ರಮುಖ ಘಟನೆಗೆ, ಅಂದರೆ, ಯೇಸು ಕ್ರಿಸ್ತನ ಜನನಕ್ಕೆ ಬರೋಣ. ಯೆಹೋವ ದೇವರ ದೂತನು, ಕನ್ಯೆಯಾಗಿದ್ದ ಯೇಸುವಿನ ತಾಯಿಗೆ ಹೇಳಿದ್ದು: “ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. . . . ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:32, 33) ವರ್ಷಗಳಾನಂತರ, ಯೇಸು ತನ್ನ ಪ್ರಸಿದ್ಧ ಪರ್ವತ ಪ್ರಸಂಗವನ್ನು ನೀಡಿದನು. ಅದರಲ್ಲಿ, ಅವನು ಅನೇಕ ವಿಷಯಗಳ ಕುರಿತು ಉತ್ತೇಜನ ಹಾಗೂ ಸಲಹೆಯನ್ನು ನೀಡಿದನು. ದೃಷ್ಟಾಂತಕ್ಕೆ, ದೇವರಿಗೆ ತಾವು ಮಾಡುವಂತಹ ಹರಕೆಗಳನ್ನು ನೆರವೇರಿಸುವಂತೆ ಅವನು ತನ್ನ ಕೇಳುಗರಿಗೆ ಉತ್ತೇಜನ ನೀಡಿದನು. ಆದರೆ ಕ್ಷುಲ್ಲಕ ಪ್ರತಿಜ್ಞೆಗಳನ್ನು ಮಾಡದಿರುವಂತೆ ಅವನು ಎಚ್ಚರಿಸಿದನು. ಯೇಸು ಹೇಳಿದ್ದು: “ಮತ್ತು—ನೀನು ಸುಳ್ಳಾಣೆಯಿಡಬಾರದು; ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಆಣೆಯನ್ನೇ ಇಡಬೇಡ. ಆಕಾಶದ ಮೇಲೆ ಆಣೆ ಇಡಬೇಡ; ಅದು ದೇವರ ಸಿಂಹಾಸನವು. ಭೂಮಿಯ ಮೇಲೆ ಆಣೆ ಇಡಬೇಡ; ಅದು ಆತನ ಪಾದಪೀಠವು. ಯೆರೂಸಲೇಮಿನ ಮೇಲೆ ಆಣೆ ಇಡಬೇಡ; ಅದು ಆ ದೊಡ್ಡ ಅರಸನ ಪಟ್ಟಣವಾಗಿದೆ.” (ಮತ್ತಾಯ 5:33-35) ಅನೇಕ ಶತಮಾನಗಳ ವರೆಗೆ ಯೆರೂಸಲೇಮ್ ಈ ಮೊದಲು ಅನುಭವಿಸಿದ್ದ ಅಪೂರ್ವವಾದ ಸ್ಥಾನವನ್ನು, ಯೇಸು ಅಂಗೀಕರಿಸಿದನೆಂಬುದು ಗಮನಾರ್ಹವಾದದ್ದು. ಹೌದು, ಅದು “ಆ ದೊಡ್ಡ ಅರಸ”ನಾದ ಯೆಹೋವ ದೇವರ “ಪಟ್ಟಣ”ವಾಗಿತ್ತು.
20, 21. ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಅನೇಕರ ಮನೋಭಾವದಲ್ಲಿ ಯಾವ ದೊಡ್ಡ ಬದಲಾವಣೆಯು ಸಂಭವಿಸಿತು?
20 ತನ್ನ ಭೂಜೀವಿತದ ಕೊನೆಯಲ್ಲಿ, ಯೇಸು ಯೆರೂಸಲೇಮಿನ ನಿವಾಸಿಗಳ ಎದುರಿಗೆ ಅವರ ನೇಮಿತ ರಾಜನೋಪಾದಿ ಬಂದನು. ಆ ರೋಮಾಂಚಕರ ಘಟನೆಗೆ ಪ್ರತಿಕ್ರಿಯಿಸುತ್ತಾ, ಅನೇಕರು ಆನಂದದಿಂದ ಕೂಗಿಕೊಂಡದ್ದು: “ಜಯ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ನಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆ, ಅದಕ್ಕೆ ಆಶೀರ್ವಾದ.”—ಮಾರ್ಕ 11:1-10; ಯೋಹಾನ 12:12-15.
21 ಆದರೆ, ಒಂದೇ ವಾರದೊಳಗೆ ಜನಸಮೂಹಗಳು ಯೇಸುವಿನ ವಿರುದ್ಧ ತಿರುಗಿಬೀಳುವಂತೆ, ಯೆರೂಸಲೇಮಿನ ಧಾರ್ಮಿಕ ಮುಖಂಡರು ಕಾರ್ಯನಡೆಸಿದರು. ಯೆರೂಸಲೇಮ್ ಪಟ್ಟಣವೂ ಇಡೀ ಜನಾಂಗವೂ ದೇವರ ಮುಂದೆ ತಮಗಿದ್ದ ಅನುಗ್ರಹದ ಸ್ಥಾನವನ್ನು ಕಳೆದುಕೊಳ್ಳುವುದೆಂದು ಅವನು ಎಚ್ಚರಿಸಿದನು. (ಮತ್ತಾಯ 21:23, 33-45; 22:1-7) ದೃಷ್ಟಾಂತಕ್ಕೆ, ಯೇಸು ಪ್ರಕಟಿಸಿದ್ದು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾಯ 23:37, 38) ಸಾ.ಶ. 33ರ ಪಂಚಾಶತ್ತಮದಂದು, ಯೇಸುವಿನ ವಿರೋಧಿಗಳು ಅನ್ಯಾಯವಾಗಿ ಅವನನ್ನು ಯೆರೂಸಲೇಮಿನ ಹೊರಗೆ ವಧಿಸಿಬಿಟ್ಟರು. ಆದರೂ, ಯೆಹೋವನು ತನ್ನ ಅಭಿಷಿಕ್ತನನ್ನು ಪುನರುತ್ಥಾನಗೊಳಿಸಿ, ಸ್ವರ್ಗೀಯ ಚೀಯೋನಿನಲ್ಲಿ ವಾಸಿಸುವಂತೆ ಅಮರ ಆತ್ಮ ಜೀವಿತದೊಂದಿಗೆ ಮಹಿಮೆಪಡಿಸಿದನು. ಈ ಸಾಧನೆಯಿಂದ ನಾವೆಲ್ಲರೂ ಪ್ರಯೋಜನ ಪಡೆಯಸಾಧ್ಯವಿದೆ.—ಅ. ಕೃತ್ಯಗಳು 2:32-36.
22. ಯೇಸುವಿನ ಮರಣಾನಂತರ, ಯೆರೂಸಲೇಮಿನ ಅನೇಕ ಉದ್ಧರಣಗಳು ಏನನ್ನು ಸೂಚಿಸಿದವು?
22 ಆ ಸಮಯದಂದಿನಿಂದ, ಚೀಯೋನ್ ಇಲ್ಲವೆ ಯೆರೂಸಲೇಮಿನ ವಿಷಯದಲ್ಲಿ ನೆರವೇರದೆ ಇರುವ ಹೆಚ್ಚಿನ ಪ್ರವಾದನೆಗಳು, ಸ್ವರ್ಗೀಯ ಆಡಳಿತಾ ವಿಷಯಗಳಿಗೆ ಇಲ್ಲವೆ ಯೇಸುವಿನ ಅಭಿಷಿಕ್ತ ಹಿಂಬಾಲಕರಿಗೆ ಅನ್ವಯಿಸುವ ಪ್ರವಾದನೆಗಳೆಂದು ತಿಳಿದುಕೊಳ್ಳಲ್ಪಡಸಾಧ್ಯವಿದೆ. (ಕೀರ್ತನೆ 2:6-8; 110:1-4; ಯೆಶಾಯ 2:2-4; 65:17, 18; ಜೆಕರ್ಯ 12:3; 14:12, 16, 17) ಯೇಸುವಿನ ಮರಣದ ನಂತರ ಬರೆಯಲ್ಪಟ್ಟ “ಯೆರೂಸಲೇಮ್” ಇಲ್ಲವೆ “ಚೀಯೋನ್” ಎಂಬ ಹಲವಾರು ಉದ್ಧರಣಗಳಿಗೆ ಸಾಂಕೇತಿಕ ಅರ್ಥವಿದ್ದು, ಅವು ಅಕ್ಷರಾರ್ಥ ಪಟ್ಟಣ ಇಲ್ಲವೆ ಸ್ಥಾನವನ್ನು ಸೂಚಿಸುವುದಿಲ್ಲ. (ಗಲಾತ್ಯ 4:26; ಇಬ್ರಿಯ 12:22; 1 ಪೇತ್ರ 2:6; ಪ್ರಕಟನೆ 3:12; 14:1; 21:2, 10) ಯೆರೂಸಲೇಮ್ ಇನ್ನುಮುಂದೆ “ಆ ದೊಡ್ಡ ಅರಸನ ಪಟ್ಟಣ”ವಾಗಿಲ್ಲ ಎಂಬ ಕೊನೆಯ ಪುರಾವೆಯು ಸಾ.ಶ. 70ರಲ್ಲಿ ಬಂದಿತು. ಆಗ, ದಾನಿಯೇಲ ಮತ್ತು ಯೇಸು ಕ್ರಿಸ್ತನಿಂದ ಪ್ರವಾದಿಸಲ್ಪಟ್ಟಂತೆ, ರೋಮನ್ ಸೇನೆಗಳು ಅದನ್ನು ಧ್ವಂಸಮಾಡಿದವು. (ದಾನಿಯೇಲ 9:26; ಲೂಕ 19:41-44) ಭೌಮಿಕ ಯೆರೂಸಲೇಮ್ ಈ ಮೊದಲು ಅನುಭವಿಸಿದ್ದ ಯೆಹೋವ ದೇವರ ವಿಶೇಷ ಅನುಗ್ರಹವನ್ನು ಪುನಃ ಪಡೆಯುವುದೆಂದು, ಬೈಬಲ್ ಬರಹಗಾರರಾಗಲಿ ಯೇಸುವಾಗಲಿ ಮುಂತಿಳಿಸಲಿಲ್ಲ.—ಗಲಾತ್ಯ 4:25; ಇಬ್ರಿಯ 13:14.
ಬಾಳುವ ಶಾಂತಿಯ ಮುನ್ಸೂಚನೆಗಳು
23. ನಾವು ಯೆರೂಸಲೇಮಿನ ವಿಷಯದಲ್ಲಿ ಇನ್ನೂ ಆಸಕ್ತರಾಗಿರಬೇಕು ಏಕೆ?
23 ಭೌಮಿಕ ಯೆರೂಸಲೇಮಿನ ಆರಂಭದ ಇತಿಹಾಸವನ್ನು ಪುನರ್ವಿಮರ್ಶಿಸಿದ ಬಳಿಕ, ರಾಜ ಸೊಲೊಮೋನನ ಶಾಂತಿಭರಿತ ಆಳ್ವಿಕೆಯಲ್ಲಿ ಆ ಪಟ್ಟಣವು, “ಯಥೇಚ್ಛವಾದ ಶಾಂತಿಯ ಇರುವಿಕೆ [ಇಲ್ಲವೆ, ಅಸ್ತಿವಾರ]” ಎಂಬ ಅದರ ಹೆಸರಿನ ಅರ್ಥಕ್ಕೆ ತಕ್ಕಂತೆ ಇತ್ತು ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೂ ಅದು, ಪ್ರಮೋದವನವಾಗಿ ರೂಪಾಂತರಗೊಳ್ಳಲಿರುವ ಭೂಮಿಯ ಮೇಲೆ, ದೇವರನ್ನು ಪ್ರೀತಿಸುವ ಜನರು ಬೇಗನೆ ಅನುಭವಿಸಲಿರುವ ಶಾಂತಿ ಮತ್ತು ಸಮೃದ್ಧಿಯ ಒಂದು ಮುನ್ಸೂಚನೆಯಾಗಿದೆ.—ಲೂಕ 23:43.
24. ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ ನೆಲೆಸಿದ್ದ ಪರಿಸ್ಥಿತಿಗಳಿಂದ ನಾವು ಏನನ್ನು ಕಲಿತುಕೊಳ್ಳಸಾಧ್ಯವಿದೆ?
24 ರಾಜ ಸೊಲೊಮೋನನ ಆಳ್ವಿಕೆಯಲ್ಲಿದ್ದ ಪರಿಸ್ಥಿತಿಗಳನ್ನು 72ನೆಯ ಕೀರ್ತನೆಯು ತೋರಿಸುತ್ತದೆ. ಆದರೆ ಆ ಸುಂದರ ಗೀತೆಯು, ಮೆಸ್ಸೀಯನಾದ ಯೇಸು ಕ್ರಿಸ್ತನ ಸ್ವರ್ಗೀಯ ಆಳ್ವಿಕೆಯ ಕೆಳಗೆ, ಮಾನವಕುಲವು ಅನುಭವಿಸಲಿಕ್ಕಿರುವ ಆಶೀರ್ವಾದಗಳನ್ನು ಪ್ರವಾದನಾತ್ಮಕವಾಗಿ ತಿಳಿಸುತ್ತದೆ. ಅವನ ಕುರಿತು ಕೀರ್ತನೆಗಾರನು ಹಾಡಿದ್ದು: “ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣಸೌಭಾಗ್ಯವಿರಲಿ. . . . ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು. . . . ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ.”—ಕೀರ್ತನೆ 72:7, 8, 12-14, 16.
25. ನಾವು ಯೆರೂಸಲೇಮಿನ ಕುರಿತು ಹೆಚ್ಚಿನ ವಿಷಯವನ್ನು ಕಲಿತುಕೊಳ್ಳಲು ಏಕೆ ಬಯಸಬೇಕು?
25 ಯೆರೂಸಲೇಮಿನಲ್ಲಿ ಮತ್ತು ಭೂಮಿಯ ಎಲ್ಲೆಡೆಯೂ ಇರುವ, ದೇವರನ್ನು ಪ್ರೀತಿಸುವ ಜನರಿಗೆ, ಆ ಮಾತುಗಳು ಎಂತಹ ಸಾಂತ್ವನ ಹಾಗೂ ನಿರೀಕ್ಷೆಯನ್ನು ಒದಗಿಸುತ್ತವೆ! ದೇವರ ಮೆಸ್ಸೀಯ ಸಂಬಂಧಿತ ರಾಜ್ಯದಲ್ಲಿ ಭೂವ್ಯಾಪಕವಾಗಿರುವ ಶಾಂತಿಯನ್ನು ಅನುಭವಿಸುವವರಲ್ಲಿ ನೀವೂ ಒಬ್ಬರಾಗಿರಸಾಧ್ಯವಿದೆ. ಯೆರೂಸಲೇಮಿನ ಪೂರ್ವ ಇತಿಹಾಸದ ಜ್ಞಾನವು, ಮಾನವಕುಲಕ್ಕಾಗಿರುವ ದೇವರ ಉದ್ದೇಶವನ್ನು ತಿಳಿದುಕೊಳ್ಳಲು ನಮಗೆ ಸಹಾಯ ಮಾಡಬಲ್ಲದು. ಯೆಹೂದ್ಯರು ಬಬಿಲೋನ್ಯದ ಸೆರೆವಾಸದಿಂದ ಹಿಂದಿರುಗಿದ ಬಳಿಕ, ಏಳನೆಯ ಹಾಗೂ ಎಂಟನೆಯ ಶತಮಾನದಲ್ಲಿ ಸಂಭವಿಸಿದ ಘಟನೆಗಳ ಮೇಲೆ ಮುಂದಿನ ಲೇಖನಗಳು ಕೇಂದ್ರೀಕರಿಸುವವು. ಮಹಾ ಅರಸನಾದ ಯೆಹೋವ ದೇವರಿಗೆ ಸ್ವೀಕಾರಯೋಗ್ಯ ಆರಾಧನೆಯನ್ನು ಸಲ್ಲಿಸಲು ಬಯಸುವವರಿಗೆಲ್ಲ ಇದು ಸಾಂತ್ವನವನ್ನು ನೀಡುತ್ತದೆ.
[ಅಧ್ಯಯನ ಪ್ರಶ್ನೆಗಳು]
a “ಮೆಸ್ಸೀಯ” (ಹೀಬ್ರೂ ಭಾಷೆಯಿಂದ ಅನುವಾದಿಸಲ್ಪಟ್ಟ ಪದ) ಮತ್ತು “ಕ್ರಿಸ್ತ” (ಗ್ರೀಕ್ ಭಾಷೆಯಿಂದ ಅನುವಾದಿಸಲ್ಪಟ್ಟ ಪದ) ಎಂಬ ಬಿರುದುಗಳ ಅರ್ಥವು “ಅಭಿಷಿಕ್ತನು” ಎಂದಾಗಿದೆ.
ನಿಮಗೆ ನೆನಪಿದೆಯೆ?
◻ ಯೆರೂಸಲೇಮ್ ಯೆಹೋವನ ಸಿಂಹಾಸನದ ಸ್ಥಾನವಾದದ್ದು ಹೇಗೆ?
◻ ಸತ್ಯಾರಾಧನೆಯನ್ನು ಪ್ರವರ್ಧಿಸುವುದರಲ್ಲಿ ಯಾವ ಪ್ರಮುಖ ಪಾತ್ರವನ್ನು ಸೊಲೊಮೋನನು ವಹಿಸಿದನು?
◻ ಯೆರೂಸಲೇಮ್ ಪಟ್ಟಣವು ಯೆಹೋವನ ಆರಾಧನೆಯ ಕೇಂದ್ರಸ್ಥಾನವಾಗಿ ಮುಂದುವರಿಯಲಿಲ್ಲವೆಂದು ನಮಗೆ ಹೇಗೆ ಗೊತ್ತು?
◻ ಯೆರೂಸಲೇಮಿನ ಕುರಿತು ಹೆಚ್ಚನ್ನು ಕಲಿಯುವ ಆಸಕ್ತಿ ನಮಗೆ ಏಕೆ ಇದೆ?
[ಪುಟ 10 ರಲ್ಲಿರುವ ಚಿತ್ರ]
ದಾವೀದನ ಪಟ್ಟಣವು ದಕ್ಷಿಣ ಏಣಿನ ಮೇಲಿತ್ತು, ಆದರೆ ಸೊಲೊಮೋನನು ಪಟ್ಟಣವನ್ನು ಉತ್ತರ ದಿಕ್ಕಿನ ಕಡೆಗೆ ವಿಸ್ತರಿಸಿ, ದೇವಾಲಯವನ್ನು ಕಟ್ಟಿದನು
[ಕೃಪೆ]
Pictorial Archive (Near Eastern History) Est.
[ಪುಟ 9 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.