“ಮಂಜಿನ ಹನಿಗಳಿಗೆ ಜನ್ಮನೀಡಿದವರು ಯಾರು?”
ಹತ್ತೊಂಬತ್ತನೆಯ ಶತಮಾನದ ಒಬ್ಬ ಪತ್ರಕರ್ತನು, ಮಂಜಿನ ಹನಿಗಳನ್ನು “ಗಾಳಿಯಿಂದ ನಿರ್ಮಿಸಲ್ಪಟ್ಟ ಭೂಮಿಯ ದ್ರವರೂಪದ ರತ್ನಾಭರಣ”ಗಳೆಂದು ವರ್ಣಿಸಿದನು. ಗತಕಾಲದ ಪೂರ್ವಜನಾದ ಯೋಬನನ್ನು ನಮ್ಮ ಸೃಷ್ಟಿಕರ್ತನು ಕೇಳಿದ್ದು: “ಮಂಜಿನ ಹನಿಗಳಿಗೆ ಜನ್ಮನೀಡಿದವರು ಯಾರು?” (ಯೋಬ 38:28, NW) ಅಮೂಲ್ಯವಾದ ಮಂಜಿನ ಹನಿಯ ದೈವಿಕ ಮೂಲದ ಕುರಿತು ದೇವರು ಯೋಬನಿಗೆ ಜ್ಞಾಪಕಹುಟ್ಟಿಸುತ್ತಿದ್ದನು.
ರತ್ನದಂತೆ ಹೊಳೆಯುವ ಅದರ ಸೌಂದರ್ಯದ ಜೊತೆಗೆ, ಬೈಬಲಿನಲ್ಲಿ ಮಂಜಿನ ಹನಿಯು ಆಶೀರ್ವಾದ, ಫಲವಂತಿಕೆ, ಪುಷ್ಕಳತೆ, ಮತ್ತು ಜೀವದ ಸಂರಕ್ಷಣೆಯೊಂದಿಗೆ ಸಂಬಂಧಿಸಲ್ಪಟ್ಟಿದೆ. (ಆದಿಕಾಂಡ 27:28; ಧರ್ಮೋಪದೇಶಕಾಂಡ 33:13, 28; ಜೆಕರ್ಯ 8:12) ಇಸ್ರಾಯೇಲಿನ ಬಿಸಿಯಾದ, ಮಳೆರಹಿತ ಕಾಲದಲ್ಲಿ, ‘ಹರ್ಮೋನ್ನ ಮಂಜು’ ಆ ದೇಶದ ಸಸ್ಯವನ್ನು ಉಳಿಸಿತು, ಮತ್ತು ಹೀಗೆ, ಅದರ ಜನರನ್ನು ಸಂರಕ್ಷಿಸಿತು. ಗಿಡಮರಗಳಿಂದ ತುಂಬಿದ ಮತ್ತು ಹಿಮಾವರಿತ ಶಿಖರಗಳುಳ್ಳ ಹರ್ಮೋನ್ ಪರ್ವತವು, ಈಗಲೂ ರಾತ್ರಿಯ ಬಾಷ್ಪವನ್ನು ಉಂಟುಮಾಡುತ್ತದೆ. ಇದು ಸಾಂದ್ರೀಕರಣಕ್ಕೆ ಒಳಗಾಗಿ, ಹೇರಳವಾದ ಮಂಜನ್ನು ಉತ್ಪಾದಿಸುತ್ತದೆ. ಈ ಮಂಜಿನಿಂದ ಉಂಟಾಗುವ ಚೈತನ್ಯವನ್ನು ಕೀರ್ತನೆಗಾರನಾದ ದಾವೀದನು, ಯೆಹೋವನ ಜೊತೆ ಆರಾಧಕರೊಂದಿಗೆ ಏಕತೆಯಲ್ಲಿ ಸಹವಾಸಿಸುವ ಮನೋಹರವಾದ ಅನುಭವಕ್ಕೆ ಹೋಲಿಸಿದನು.—ಕೀರ್ತನೆ 133:3.
ಪ್ರವಾದಿಯಾದ ಮೋಶೆಯು ಇಸ್ರಾಯೇಲಿಗೆ ನೀಡಿದ ಉಪದೇಶಗಳು, ಮಂಜಿನ ಹನಿಗಳಂತೆ ಕೋಮಲವೂ ಚೈತನ್ಯದಾಯಕವೂ ಆಗಿದ್ದವು. ಅವನು ಹೇಳಿದ್ದು: “ನನ್ನ ಬೋಧನೆಯು ಮಂಜಿನಂತೆಯೂ ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ [ಹಿತವಾಗಿರುವದು].” (ಧರ್ಮೋಪದೇಶಕಾಂಡ 32:2) ಇಂದು, ಯೆಹೋವನ ಸಾಕ್ಷಿಗಳು, ದೇವರ ರಾಜ್ಯದ ಕುರಿತಾದ ಜೀವದಾಯಕ ಸುವಾರ್ತೆಯನ್ನು ಭೂಮಿಯ ಕಟ್ಟಕಡೆಯ ವರೆಗೂ ಘೋಷಿಸುತ್ತಿದ್ದಾರೆ. (ಮತ್ತಾಯ 24:14) “ಬಾ . . . ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ,” ಎಂಬ ಆಮಂತ್ರಣವನ್ನು ದೇವರು ನೀಡುತ್ತಿದ್ದಾನೆ. (ಪ್ರಕಟನೆ 22:17) ಜೀವವನ್ನು ಅನಂತವಾಗಿ ಪೋಷಿಸಸಾಧ್ಯವಿರುವ, ದೇವರು ನೀಡುವ ಈ ಆತ್ಮಿಕ ಚೈತನ್ಯವನ್ನು ಸಕಲ ರಾಷ್ಟ್ರಗಳ ಲಕ್ಷಾಂತರ ಜನರು ಸ್ವೀಕರಿಸುತ್ತಿದ್ದಾರೆ.