“ಗೌರವವನ್ನು ಖಂಡಿತವಾಗಿಯೂ ಗಿಟ್ಟಿಸಿಕೊಳ್ಳುವಂತಹ” ಒಂದು ಕಾರ್ಯ
ಅಪೊಸ್ತಲ ಪೇತ್ರನು ತನ್ನ ಜೊತೆ ಕ್ರೈಸ್ತರಿಗೆ ಹೀಗೆ ಬುದ್ಧಿಹೇಳಿದನು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” (1 ಪೇತ್ರ 2:12) ಅನೇಕ ವರ್ಷಗಳಿಂದಲೂ ಇಟಲಿಯಲ್ಲಿರುವ ಯೆಹೋವನ ಸಾಕ್ಷಿಗಳು ಇಂತಹ ಯೋಗ್ಯ ನಡವಳಿಕೆಯನ್ನು ಬಹಿರಂಗವಾಗಿ ಪ್ರದರ್ಶಿಸಿದ್ದಾರೆ. “ಮಾಳಿಗೆಗಳ ಮೇಲೆ ನಿಂತು ಸಾರಿರಿ” ಎಂಬ ಯೇಸುವಿನ ಉಪದೇಶಕ್ಕನುಸಾರ, ಅವರು ತಮ್ಮ ಎಲ್ಲಾ ಕ್ರೈಸ್ತ ಚಟುವಟಿಕೆಯನ್ನು ಮುಕ್ತವಾಗಿ, ಎಲ್ಲರ ಮುಂದೆ ಬಹಿರಂಗವಾಗಿ ಮಾಡುತ್ತಾರೆ. (ಮತ್ತಾಯ 10:27; ಯೋಹಾನ 18:20) ಆದುದರಿಂದ, ಇಟಲಿ ದೇಶದ ಒಬ್ಬ ವಕೀಲನು ಮತ್ತು ಒಬ್ಬ ಪಾದ್ರಿಯು, ಯೆಹೋವನ ಸಾಕ್ಷಿಗಳ ಕುರಿತು “ಒಂದು ಸುಳ್ಳುಧಾರ್ಮಿಕ . . . ಪಂಥ”ವೆಂಬ ಆಪಾದನೆಗಳನ್ನು ಪ್ರಕಟಿಸಿದಾಗ ಮತ್ತು “ಜನರನ್ನು ಮರುಳುಗೊಳಿಸುವ ರಹಸ್ಯ ಗುಂಪು”ಗಳೊಂದಿಗೆ ಅವರನ್ನು ಸೇರಿಸಿದಾಗ, ಈ ಹೆಸರು ಕೆಡಿಸುವಂತಹ ಹೇಳಿಕೆಗಳ ಕಾರಣ, ಸಾಕ್ಷಿಗಳು ಅವರ ವಿರುದ್ಧ ಕಾನೂನುಬದ್ಧವಾದ ಕ್ರಮಕೈಗೊಳ್ಳಲು ನಿರ್ಧರಿಸಿದರು.
ಮೊದಲನೆಯ ಮೊಕದ್ದಮೆಯಲ್ಲಿ ನ್ಯಾಯಾಲಯವು, ವಕೀಲನು ಮತ್ತು ಪಾದ್ರಿಯು ಯಾವ ನಿಯಮವನ್ನೂ ಉಲ್ಲಂಘಿಸಿಲ್ಲವೆಂದು ತೀರ್ಮಾನಿಸಿತು. ಆದರೆ, 1997, ಜುಲೈ 17ರಂದು, ವೆನಿಸ್ ಕೋರ್ಟ್ ಆಫ್ ಅಪೀಲ್ಸ್, ಇಬ್ಬರೂ ಪ್ರತಿವಾದಿಗಳನ್ನು ತಪ್ಪಿತಸ್ಥರೆಂದು ನಿರ್ಣಯಿಸುತ್ತಾ, ಮೊದಲನೆಯ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತು. ಕೋರ್ಟ್ ಆಫ್ ಅಪೀಲ್ಸ್ ಹೇಳಿದ್ದು: “ವಿಚಾರಣೆಗೆ ಗುರಿಯಾಗಿರುವ ಈ ಎರಡೂ ಪ್ರಕಟಿತ ಲೇಖನಗಳಲ್ಲಿ, ‘ಯೆಹೋವನ ಸಾಕ್ಷಿಗಳ’ ಧರ್ಮದ ಅನುಯಾಯಿಗಳ ಸತ್ಕೀರ್ತಿಯನ್ನು ಖಂಡಿತವಾಗಿಯೂ ಕೆಡಿಸುವಂತಹ ಸಾಮರ್ಥ್ಯವುಳ್ಳ ಅಭಿವ್ಯಕ್ತಿಗಳು ಹಾಗೂ ವಾಕ್ಸರಣಿಗಳು ಇವೆ. ಈ ಲೇಖನಗಳ ಉದ್ದೇಶವು, ಸಾಕ್ಷಿಗಳನ್ನು ಸಾರ್ವಜನಿಕ ತಿರಸ್ಕಾರಕ್ಕೆ ಗುರಿಮಾಡುವುದೇ ಆಗಿದೆ ಎಂಬುದು ತೀರ ಸ್ಪಷ್ಟ.” ಆ ಲೇಖನಗಳು “ವರದಿಸುವ ಮತ್ತು ಟೀಕಿಸುವ ಹಕ್ಕಿನ ನ್ಯಾಯಬದ್ಧ ನಿರ್ವಹಣೆಯನ್ನು ಸೂಚಿಸುವುದಿಲ್ಲವೆಂದು” ನ್ಯಾಯಾಲಯವು ಹೇಳಿತು. ಹೆಸರು ಕೆಡಿಸಿದ ಆ ಇಬ್ಬರ ಮೇಲೂ ನ್ಯಾಯಾಲಯವು ದಂಡವನ್ನು ಹೊರಿಸಿತು ಮತ್ತು ಎರಡೂ ಮೊಕದ್ದಮೆಗಳಿಗಾಗಿ ಸಾಕ್ಷಿಗಳ ಎಲ್ಲ ಕಾನೂನುಸಂಬಂಧಿತ ವೆಚ್ಚಗಳನ್ನು ಸೇರಿಸಿ, ನ್ಯಾಯಾಲಯದ ಖರ್ಚುಗಳನ್ನೂ ತೆರುವಂತೆ ಅವರಿಗೆ ಆಜ್ಞೆವಿಧಿಸಿತು.
ತನ್ನ ಲಿಖಿತ ತೀರ್ಪಿನಲ್ಲಿ, ವೆನಿಸ್ ಕೋರ್ಟ್ ಆಫ್ ಅಪೀಲ್ಸ್ ಹೇಳಿಕೆ ನೀಡಿದ್ದು: “[ಇಟ್ಯಾಲಿಯನ್] ಸಂವಿಧಾನದಿಂದ ಖಾತರಿಕೊಡಲ್ಪಟ್ಟ ಎಲ್ಲ ಹಕ್ಕುಗಳನ್ನು ಸಮಾನವಾಗಿ ಜಾರಿಗೆ ತರುವ ಮತ್ತು ಸಂರಕ್ಷಿಸುವ ಮೂಲಕ, ಅಸಹನೆಯ ಎಲ್ಲ ಪ್ರಕಾರಗಳನ್ನು ಮತ್ತು ಧಾರ್ಮಿಕ ಮತಾಂಧತೆಯನ್ನು ತಡೆಯಸಾಧ್ಯವಿದೆ.” ಯೆಹೋವನ ಸಾಕ್ಷಿಗಳ ಚಟುವಟಿಕೆ ರಹಸ್ಯವಾಗಿಯೂ ಇಲ್ಲ ಸುಳ್ಳುಧರ್ಮಕ್ಕೆ ಸೇರಿದ್ದೂ ಅಲ್ಲವೆಂಬುದನ್ನು ಆ ನಿರ್ಣಯವು ಅಂಗೀಕರಿಸಿತು. “ಸಾಕ್ಷಿಗಳನ್ನು ರಹಸ್ಯ ಗುಂಪುಗಳಲ್ಲೊಂದು ಎಂದು ಸೇರಿಸುವುದು, ಐತಿಹಾಸಿಕ ಸತ್ಯದ ಪ್ರಮಾಣಕ್ಕೂ ಗೌರವವನ್ನು ಸಲ್ಲಿಸುವುದಿಲ್ಲ. ಏಕೆಂದರೆ ಆಪಾದಿತ ಧರ್ಮವು ಹಲವಾರು ನಗರಗಳಲ್ಲಿ ಅಸ್ತಿತ್ವದಲ್ಲಿದ್ದು, ಅದರ ಸದಸ್ಯರಿಂದ ಕೈಗೊಳ್ಳಲ್ಪಡುವ ವ್ಯಾಪಕವಾದ ಪ್ರಚಾರದ ಚಟುವಟಿಕೆಯು—ವಿಶೇಷವಾಗಿ ರವಿವಾರ ಮತ್ತು ಇತರ ರಜಾದಿನಗಳಂದು—ಚಿರಪರಿಚಿತವಾಗಿದೆ. ಮತ್ತು ಸಾರಲ್ಪಡುವ ತತ್ವದ ಕುರಿತು ಒಬ್ಬನು ಏನೇ ನೆನಸಿಕೊಳ್ಳಲಿ, ಮಾಡಲ್ಪಡುವ ಪ್ರಯತ್ನಕ್ಕಾಗಿ ಅದು ಗೌರವವನ್ನು ಖಂಡಿತವಾಗಿಯೂ ಗಿಟ್ಟಿಸಿಕೊಳ್ಳುತ್ತದೆ ಎಂಬುದನ್ನು ಕೋರ್ಟು ಗಮನಿಸಿತು.” ಹೀಗೆ, ಇಟಲಿಯಲ್ಲಿರುವ ಯೆಹೋವನ ಸಾಕ್ಷಿಗಳ ಹುರುಪಿನ ಪ್ರಚಾರಕಾರ್ಯದ ದಾಖಲೆಯು ಮತ್ತು ಅವರ ಆದರ್ಶಪ್ರಾಯ ನಡವಳಿಕೆಯು, ಅವರ ವಿರುದ್ಧವಿರುವ ಪೂರ್ವಾಗ್ರಹವನ್ನು ತೊಡೆದುಹಾಕಲು ಸಹಾಯಮಾಡಿದೆ.—ಮತ್ತಾಯ 5:14-16; 1 ಪೇತ್ರ 2:15.