ನಂಬಿಕೆಯ ಕೊರತೆಯ ಕುರಿತು ಎಚ್ಚರವಾಗಿರ್ರಿ
“ಸಹೋದರರೇ, ಜೀವಸ್ವರೂಪನಾದ ದೇವರಿಂದ ಸರಿದುಹೋಗುವ ನಂಬಿಕೆಯ ಕೊರತೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಎಂದೂ ವಿಕಸಿಸದಂತೆ ಎಚ್ಚರವಾಗಿರ್ರಿ.”—ಇಬ್ರಿಯ 3:1 2, NW.
1. ಇಬ್ರಿಯ ಕ್ರೈಸ್ತರಿಗೆ ಪೌಲನು ಬರೆದ ಮಾತುಗಳು ಯಾವ ಆಶ್ಚರ್ಯಚಕಿತಗೊಳಿಸುವ ವಾಸ್ತವಿಕತೆಯನ್ನು ನಮ್ಮ ಗಮನಕ್ಕೆ ತರುತ್ತವೆ?
ಎಂಥ ದಿಗಿಲುಹುಟ್ಟಿಸುವ ವಿಚಾರ—ಒಂದು ಸಮಯದಲ್ಲಿ ಯೆಹೋವನೊಂದಿಗೆ ವೈಯಕ್ತಿಕ ಸಂಬಂಧದಲ್ಲಿ ಆನಂದಿಸಿದ ಜನರು “ದುಷ್ಟ ಹೃದಯ”ವನ್ನು ಬೆಳೆಸಿಕೊಳ್ಳುತ್ತಾ, ‘ಜೀವಸ್ವರೂಪನಾದ ದೇವರಿಂದ ಸರಿದುಹೋಗ’ಸಾಧ್ಯವಿತ್ತು! ಇದು ಎಂಥ ಒಂದು ಎಚ್ಚರಿಕೆಯಾಗಿದೆ! ಅಪೋಸ್ತಲ ಪೌಲನ ಈ ಮಾತುಗಳು ಅಪನಂಬಿಗಸ್ತರಿಗಲ್ಲ, ಬದಲಿಗೆ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯ ಆಧಾರದ ಮೇಲೆ ಯೆಹೋವನಿಗೆ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡಿದ್ದ ಜನರಿಗೆ ಸಂಬೋಧಿಸಲ್ಪಟ್ಟವು.
2. ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸಬೇಕಾಗಿದೆ?
2 ಇಂಥ ಒಂದು ಆಶೀರ್ವದಿಸಲ್ಪಟ್ಟ ಆತ್ಮಿಕ ಸ್ಥಿತಿಯಲ್ಲಿರುವ ಒಬ್ಬನು, ಎಂದಾದರೂ “ನಂಬಿಕೆಯ ಕೊರತೆಯುಳ್ಳ ದುಷ್ಟ ಹೃದಯ”ವನ್ನು ಹೇಗೆ ವಿಕಸಿಸಸಾಧ್ಯವಿದೆ? ವಾಸ್ತವದಲ್ಲಿ, ದೇವರ ಪ್ರೀತಿ ಮತ್ತು ಅಪಾತ್ರ ದಯೆಯನ್ನು ರುಚಿನೋಡಿರುವ ಯಾವನೇ ವ್ಯಕ್ತಿಯು, ಉದ್ದೇಶಪೂರ್ವಕವಾಗಿ ದೇವರಿಂದ ‘ಸರಿದುಹೋಗಲು’ ಹೇಗೆ ತಾನೇ ಸಾಧ್ಯ? ಮತ್ತು ಇದು ನಮ್ಮಲ್ಲಿ ಯಾರಿಗಾದರೂ ಸಂಭವಿಸಸಾಧ್ಯವೋ? ಇವು ಗಂಭೀರವಾದ ವಿಚಾರಗಳಾಗಿವೆ, ಮತ್ತು ಈ ಎಚ್ಚರಿಕೆಯ ಹಿನ್ನೆಲೆಯಲ್ಲಿರುವ ಕಾರಣವನ್ನು ನಾವು ಪರಿಶೀಲಿಸುವಂತೆ ಇದು ಅಗತ್ಯಪಡಿಸುತ್ತದೆ.—1 ಕೊರಿಂಥ 10:11.
ಇಂಥ ಬಲವಾದ ಸಲಹೆ ಏಕೆ?
3. ಮೊದಲನೆಯ ಶತಮಾನದ ಕ್ರೈಸ್ತರನ್ನು ಬಾಧಿಸುತ್ತಿದ್ದ ಯೆರೂಸಲೇಮಿನ ಹೊರಗೂ ಒಳಗೂ ಇದ್ದ ಪರಿಸ್ಥಿತಿಗಳನ್ನು ವರ್ಣಿಸಿರಿ.
3 ಪೌಲನು ಸಾ.ಶ. 61ರಲ್ಲಿ ಯೂದಾಯದಲ್ಲಿದ್ದ ಇಬ್ರಿಯ ಕ್ರೈಸ್ತರಿಗೆ ತನ್ನ ಪತ್ರವನ್ನು ಸಂಬೋಧಿಸಿದನೆಂದು ಕಾಣುತ್ತದೆ. ಇದು, “ಗಂಭೀರವಾದ ಪ್ರಾಮಾಣಿಕ ಜನರಿಗೆ, ಯೆರೂಸಲೇಮ್ ನಗರದಲ್ಲಾಗಲಿ, ಇಡೀ ಪ್ರಾಂತದಲ್ಲಿ ಬೇರೆಲ್ಲಿಯೇ ಆಗಲಿ, ಯಾವುದೇ ಶಾಂತಿ ಅಥವಾ ಭದ್ರತೆ ಇರದಿದ್ದ” ಸಮಯವಾಗಿತ್ತೆಂದು ಒಬ್ಬ ಇತಿಹಾಸಗಾರನು ಗಮನಿಸಿದನು. ದಬ್ಬಾಳಿಕೆಯಿಂದ ಕೂಡಿದ ರೋಮನ್ ಮಿಲಿಟರಿಯ ಉಪಸ್ಥಿತಿ, ರೋಮನ್ ವಿರೋಧಿಗಳಾಗಿದ್ದ ಯೆಹೂದಿ ಹಠೋತ್ಸಾಹಿಗಳ ಶೌರ್ಯಡಂಭ ಮತ್ತು ಈ ಅಸ್ತವ್ಯಸ್ತ ಸಮಯಗಳ ಲಾಭ ಪಡೆದ ಕಳ್ಳರ ನಿಯಮರಾಹಿತ್ಯ ಪಾತಕಗಳು ಸೇರಿದ್ದ ಹಿಂಸಾಚಾರದಿಂದ ಕೂಡಿದ ಸಮಯವು ಅದಾಗಿತ್ತು. ಇಂತಹ ತೊಂದರೆಗಳಿಗೆ ಸಿಕ್ಕಿಬೀಳದಂತೆ ಕಠಿನವಾಗಿ ಹೋರಾಡುತ್ತಿದ್ದ ಕ್ರೈಸ್ತರಿಗೆ, ಈ ಎಲ್ಲಾ ವಿಷಯಗಳು ಹೆಚ್ಚು ಕಷ್ಟಕರವನ್ನಾಗಿ ಮಾಡಿತು. (1 ತಿಮೊಥೆಯ 2:1, 2) ವಾಸ್ತವದಲ್ಲಿ, ಅವರ ತಟಸ್ಥ ನಿಲುವಿನಿಂದಾಗಿ ಕೆಲವರು ಅವರನ್ನು ಸಮಾಜದ ಎಡವುಗಲ್ಲುಗಳಾಗಿಯೂ ರಾಜದ್ರೋಹಿಗಳಾಗಿಯೂ ವೀಕ್ಷಿಸುತ್ತಿದ್ದರು. ಕ್ರೈಸ್ತರು ಅನೇಕವೇಳೆ ದುರುಪಚರಿಸಲ್ಪಟ್ಟರು, ಮತ್ತು ಅವರು ವೈಯಕ್ತಿಕ ನಷ್ಟವನ್ನು ಅನುಭವಿಸಿದರು.—ಇಬ್ರಿಯ 10:32-34.
4. ಧಾರ್ಮಿಕ ರೀತಿಯ ಯಾವ ಒತ್ತಡಕ್ಕೆ ಇಬ್ರಿಯ ಕ್ರೈಸ್ತರು ಒಳಗಾಗಿದ್ದರು?
4 ಇಬ್ರಿಯ ಕ್ರೈಸ್ತರು ಧಾರ್ಮಿಕ ಸ್ವರೂಪದ ತೀವ್ರ ಒತ್ತಡಕ್ಕೂ ಒಳಗಾಗಿದ್ದರು. ಯೇಸುವಿನ ನಂಬಿಗಸ್ತ ಶಿಷ್ಯರ ಹುರುಪು ಮತ್ತು ಅದರ ಪರಿಣಾಮದಿಂದ ಉಂಟಾದ ಕ್ರೈಸ್ತ ಸಭೆಯ ತೀವ್ರಗತಿಯ ವ್ಯಾಪನೆ, ಯೆಹೂದ್ಯರಲ್ಲಿ—ವಿಶೇಷವಾಗಿ, ಅವರ ಧಾರ್ಮಿಕ ಮುಖಂಡರಲ್ಲಿ—ಮತ್ಸರ ಮತ್ತು ಕ್ರೋಧವನ್ನು ಕೆರಳಿಸಿತು. ಯೇಸು ಕ್ರಿಸ್ತನ ಹಿಂಬಾಲಕರಿಗೆ ಕಿರುಕುಳ ಮತ್ತು ಹಿಂಸೆಯನ್ನು ಕೊಡಲು ಅವರು ಏನನ್ನೂ ಮಾಡಲು ಸಿದ್ಧರಿದ್ದರು.a (ಅ. ಕೃತ್ಯಗಳು 6:8-14; 21:27-30; 23:12, 13; 24:1-9) ಕೆಲವು ಕ್ರೈಸ್ತರು ನೇರವಾದ ಹಿಂಸೆಯಿಂದ ತಪ್ಪಿಸಿಕೊಂಡರೂ, ಯೆಹೂದ್ಯರು ಅವರನ್ನು ತುಚ್ಛೀಕರಿಸಿ, ಕುಚೋದ್ಯ ಮಾಡಿದರು. ಕ್ರೈಸ್ತಧರ್ಮವನ್ನು ಹೊಸದಾಗಿ ರೂಪುಗೊಂಡ ಧರ್ಮವೆಂದು, ಅದಕ್ಕೆ ಯೆಹೂದ್ಯ ಧರ್ಮಕ್ಕಿದ್ದ ವೈಭವದ ಕೊರತೆಯಿದೆಯೆಂದು, ಅದಕ್ಕೆ ದೇವಾಲಯವಿಲ್ಲ, ಯಾಜಕರಿಲ್ಲ, ಯಾವುದೇ ಹಬ್ಬಗಳಿಲ್ಲ, ವಿಧಿವಿಹಿತ ಯಜ್ಞಗಳಿಲ್ಲ ಎಂದು, ಹೀಗೆ ಅನೇಕ ಕಾರಣಗಳಿಗಾಗಿ ಕೀಳಾಗಿ ಕಾಣಲಾಗುತ್ತಿತ್ತು. ಅವರ ಮುಖಂಡನಾದ ಯೇಸು ಕೂಡ, ನಿಂದೆಗೊಳಗಾದ ಅಪರಾಧಿಯಾಗಿ ಕೊಲ್ಲಲ್ಪಟ್ಟನು. ಕ್ರೈಸ್ತ ಧರ್ಮವನ್ನು ಪಾಲಿಸಲು, ಕ್ರೈಸ್ತರಿಗೆ ನಂಬಿಕೆ, ಧೈರ್ಯ, ಮತ್ತು ಸಹನೆಯು ಬೇಕಾಗಿತ್ತು.
5. ಯೂದಾಯದಲ್ಲಿದ್ದ ಕ್ರೈಸ್ತರಿಗೆ ಆತ್ಮಿಕವಾಗಿ ಎಚ್ಚರವಾಗಿರುವುದು ಏಕೆ ನಿರ್ಣಾಯಕವಾಗಿತ್ತು?
5 ಎಲ್ಲಕ್ಕಿಂತಲೂ ಹೆಚ್ಚಾಗಿ, ಯೂದಾಯದಲ್ಲಿದ್ದ ಇಬ್ರಿಯ ಕ್ರೈಸ್ತರು ಆ ದೇಶದ ಚರಿತ್ರೆಯ ಒಂದು ನಿರ್ಣಾಯಕವಾದ ಸಮಯದಲ್ಲಿ ಜೀವಿಸುತ್ತಿದ್ದರು. ಯೆಹೂದಿ ವ್ಯವಸ್ಥೆಯ ಅಂತ್ಯವನ್ನು ಸೂಚಿಸುವುದೆಂದು ಅವರ ಕರ್ತನಾದ ಯೇಸು ಕ್ರಿಸ್ತನು ಮುಂತಿಳಿಸಿದ ಅನೇಕ ವಿಷಯಗಳು ಈಗಾಗಲೇ ಸಂಭವಿಸಿದ್ದವು. ಅಂತ್ಯವು ಬಹಳ ದೂರದಲ್ಲಿರಲಿಲ್ಲ. ಪಾರಾಗಲು ಕ್ರೈಸ್ತರು ಆತ್ಮಿಕವಾಗಿ ಎಚ್ಚರವಾಗಿದ್ದು, ‘ಬೆಟ್ಟಗಳಿಗೆ ಓಡಿ ಹೋಗಲು’ ಸಿದ್ದರಾಗಿ ಇರಬೇಕಾಗಿತ್ತು. (ಮತ್ತಾಯ 24:6, 15, 16) ಯೇಸು ನಿರ್ದೇಶಿಸಿದಂತೆ, ತಕ್ಷಣ ಕಾರ್ಯಶೀಲರಾಗಲು ಅಗತ್ಯವಿರುವ ನಂಬಿಕೆ ಮತ್ತು ಆತ್ಮಿಕ ತ್ರಾಣವು ಅವರಲ್ಲಿರುವುದೊ? ಸ್ವಲ್ಪ ಸಂದೇಹವಿರುವಂತೆ ಕಂಡಿತು.
6. ಯೂದಾಯದಲ್ಲಿದ್ದ ಕ್ರೈಸ್ತರಿಗೆ ತುರ್ತಾಗಿ ಯಾವುದರ ಅಗತ್ಯವಿತ್ತು?
6 ಇಡೀ ಯೆಹೂದಿ ವಿಷಯಗಳ ವ್ಯವಸ್ಥೆಯು ಕೊನೆಗೊಳ್ಳಲಿದ್ದ ಅಂತಿಮ ದಶಕದ ಆರಂಭದಲ್ಲಿ, ಇಬ್ರಿಯ ಕ್ರೈಸ್ತರು ಸಭೆಯ ಒಳಗೂ ಹೊರಗೂ ತೀವ್ರ ಒತ್ತಡಕ್ಕೆ ಒಳಗಾಗಿದ್ದರೆಂಬುದು ಸ್ಪಷ್ಟ. ಅವರಿಗೆ ಪ್ರೋತ್ಸಾಹದ ಅಗತ್ಯವಿತ್ತು. ಆದರೆ ತಾವು ಆಯ್ಕೆ ಮಾಡಿದ್ದ ಮಾರ್ಗವು ಸರಿಯಾದದ್ದೆಂದು, ಮತ್ತು ತಾವು ಕಷ್ಟವನ್ನು ಅನುಭವಿಸಿ ಸಹನೆಯಿಂದಿದ್ದದು ವ್ಯರ್ಥವಲ್ಲ ಎಂಬುದನ್ನು ಗ್ರಹಿಸುವಂತೆ ಅವರಿಗೆ ಸಹಾಯಮಾಡಲು ಸಲಹೆ ಮತ್ತು ಮಾರ್ಗದರ್ಶನದ ಅಗತ್ಯವಿತ್ತು. ಸಂತೋಷಕರವಾಗಿ, ಪೌಲನು ಆಪತ್ಬಾಂಧವನಾಗಿ ಆ ಸಂದರ್ಭದಲ್ಲಿ ಅವರ ಸಹಾಯಕ್ಕಾಗಿ ಬಂದನು.
7. ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದ ವಿಷಯಗಳಲ್ಲಿ ನಾವೇಕೆ ಆಸಕ್ತರಾಗಿರಬೇಕು?
7 ಪೌಲನು ಇಬ್ರಿಯ ಕ್ರೈಸ್ತರಿಗೆ ಏನನ್ನು ಬರೆದನೋ ಅದು ನಮಗೆ ಬಹಳಷ್ಟು ಆಸಕ್ತಿಯ ವಿಷಯವಾಗಿದೆ. ಏಕೆ? ಏಕೆಂದರೆ ನಾವು ಜೀವಿಸುತ್ತಿರುವ ಸಮಯವು ಅವರ ಸಮಯಕ್ಕೆ ಸದೃಶವಾಗಿದೆ. ಪ್ರತಿದಿನವು ನಾವು ಸೈತಾನನ ಹತೋಟಿಯಲ್ಲಿರುವ ಲೋಕದ ಒತ್ತಡಗಳನ್ನು ಅನುಭವಿಸುತ್ತೇವೆ. (1 ಯೋಹಾನ 5:19) ಕಡೇ ದಿವಸಗಳು ಮತ್ತು “ಯುಗದ ಸಮಾಪ್ತಿಯ” ಕುರಿತ ಯೇಸುವಿನ ಹಾಗೂ ಅಪೊಸ್ತಲರ ಪ್ರವಾದನೆಗಳು ನಮ್ಮ ಸಮಯದಲ್ಲಿ ಕಣ್ಮುಂದೆ ನೆರವೇರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. (ಮತ್ತಾಯ 24:3-14; 2 ತಿಮೊಥೆಯ 3:1-5; 2 ಪೇತ್ರ 3:3, 4; ಪ್ರಕಟಣೆ 6:1-8) ಎಲ್ಲಕ್ಕಿಂತ ಹೆಚ್ಚಾಗಿ, ‘ಬರುವುದಕ್ಕಿರುವ ಇವೆಲ್ಲವುಗಳಿಂದ ತಪ್ಪಿಸಿಕೊಳ್ಳುವದಕ್ಕೆ’ ನಾವು ಆತ್ಮಿಕವಾಗಿ ಎಚ್ಚರವಾಗಿರುವುದು ಅಗತ್ಯವಾಗಿದೆ.—ಲೂಕ 21:36.
ಮೋಶೆಗಿಂತಲೂ ದೊಡ್ಡವನಾಗಿರುವವನು
8. ಇಬ್ರಿಯ 3:1ರಲ್ಲಿ ದಾಖಲಿಸಲ್ಪಟ್ಟಿರುವ ವಿಷಯವನ್ನು ಹೇಳುವ ಮೂಲಕ, ಪೌಲನು ತನ್ನ ಜೊತೆ ಕ್ರೈಸ್ತರು ಏನನ್ನು ಮಾಡುವಂತೆ ಪ್ರೇರೇಪಿಸುತ್ತಿದ್ದನು?
8 ಒಂದು ಪ್ರಮುಖ ವಿಷಯವನ್ನು ಪ್ರಸ್ತಾಪಿಸುತ್ತಾ, ಪೌಲನು ಬರೆದುದು: “ನಾವು ಪ್ರತಿಜ್ಞೆಮಾಡಿ ಒಪ್ಪಿಕೊಂಡಿರುವ ದೇವಪ್ರೇಷಿತನೂ [“ಅಪೊಸ್ತಲನೂ,” NW] ಮಹಾಯಾಜಕನೂ ಆಗಿರುವ ಯೇಸುವನ್ನು ಲಕ್ಷ್ಯವಿಟ್ಟು ಯೋಚಿಸಿರಿ.” (ಇಬ್ರಿಯ 3:1) ‘ಲಕ್ಷವಿಡು’ ಎಂದರೆ “ಸ್ಪಷ್ಟವಾಗಿ ಗ್ರಹಿಸು . . , ಪೂರ್ತಿಯಾಗಿ ಅರ್ಥೈಸಿಕೊಳ್ಳು, ಅತಿನಿಕಟವಾಗಿ ಪರಿಗಣಿಸು.” (ವೈನ್ಸ್ ಎಕ್ಸ್ಪಾಸಿಟರಿ ಡಿಕ್ಷ್ನೆರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್) ಹೀಗೆ ಪೌಲನು ತನ್ನ ಜೊತೆ ನಂಬಿಗಸ್ತರನ್ನು, ಅವರ ನಂಬಿಕೆ ಮತ್ತು ರಕ್ಷಣೆಯಲ್ಲಿ ಯೇಸು ವಹಿಸಿದ ಪಾತ್ರಕ್ಕೆ ನಿಜವಾದ ಗಣ್ಯತೆಯನ್ನು ಬೆಳಸಿಕೊಳ್ಳಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುವಂತೆ ಪ್ರೇರೇಪಿಸುತ್ತಿದ್ದನು. ಹೀಗೆ ಮಾಡುವುದು, ನಂಬಿಕೆಯಲ್ಲಿ ದೃಢವಾಗಿ ನಿಲ್ಲುವ ಅವರ ನಿರ್ಧಾರವನ್ನು ಬಲಪಡಿಸುವುದು. ಹಾಗಾದರೆ, ಯೇಸುವಿನ ಪಾತ್ರವೇನಾಗಿತ್ತು, ಮತ್ತು ನಾವು ಏಕೆ ಅವನ ಮೇಲೆ ‘ಲಕ್ಷವಿಡ’ಬೇಕು?
9. ಪೌಲನು ಯೇಸುವನ್ನು, “ಅಪೊಸ್ತಲ” ಮತ್ತು “ಮಹಾಯಾಜಕ” ಎಂದು ಏಕೆ ನಿರ್ದೇಶಿಸಿದನು?
9 ಪೌಲನು “ಅಪೊಸ್ತಲ” ಮತ್ತು “ಮಹಾಯಾಜಕನು” ಎಂಬ ಪದಗಳನ್ನು ಯೇಸುವಿಗೆ ಅನ್ವಯಿಸಿದನು. “ಅಪೊಸ್ತಲ”ನು ಅಂದರೆ ಕಳುಹಿಸಲ್ಪಟ್ಟವನು ಮತ್ತು ಇಲ್ಲಿ ಮಾನವರೊಂದಿಗೆ ಸಂವಾದಿಸುವ ದೇವರ ಮಾಧ್ಯಮವನ್ನು ಸೂಚಿಸುತ್ತದೆ. ಯಾರ ಮೂಲಕ ಮಾನವರು ದೇವರನ್ನು ಸಮೀಪಿಸಸಾಧ್ಯವೊ ಅವನೇ “ಮಹಾಯಾಜಕನು”. ಈ ಎರಡು ಒದಗಿಸುವಿಕೆಗಳು ಸತ್ಯಾರಾಧನೆಗೆ ಬಹಳ ಅಗತ್ಯವಾಗಿವೆ, ಮತ್ತು ಯೇಸು ಇವೆರಡರ ವ್ಯಕ್ತೀಕರಣವಾಗಿದ್ದಾನೆ. ಈತನೇ ಮಾನವಕುಲಕ್ಕೆ ದೇವರ ಕುರಿತ ಸತ್ಯವನ್ನು ಕಲಿಸಲು ಪರಲೋಕದಿಂದ ಕಳುಹಿಸಲ್ಪಟ್ಟವನು. (ಯೋಹಾನ 1:18; 3:16; 14:6) ಯೆಹೋವನ ಆತ್ಮಿಕ ಆಲಯದ ಏರ್ಪಾಡಿನಲ್ಲಿ, ಯೇಸು ಪಾಪಕ್ಷಮೆಗಾಗಿ ನೇಮಿಸಲ್ಪಟ್ಟ ಪ್ರತಿನಿಧಿರೂಪದ ಮಹಾಯಾಜಕನೂ ಆಗಿದ್ದಾನೆ. (ಇಬ್ರಿಯ 4:14, 15; 1 ಯೋಹಾನ 2:1, 2) ಯೇಸುವಿನ ಮೂಲಕ ಪ್ರಾಪ್ತವಾಗಬಲ್ಲ ಆಶೀರ್ವಾದಗಳನ್ನು ನಾವು ನಿಜವಾಗಿಯೂ ಗಣ್ಯಮಾಡುವಲ್ಲಿ, ನಂಬಿಕೆಯಲ್ಲಿ ದೃಢರಾಗಿ ನಿಲ್ಲಲು ಧೈರ್ಯ ಮತ್ತು ದೃಢನಿರ್ಧಾರ ನಮ್ಮಲ್ಲಿ ಇರುವುದು.
10. (ಎ) ಯೆಹೂದಿ ಧರ್ಮಕ್ಕಿಂತ ಕ್ರೈಸ್ತಧರ್ಮವು ಶ್ರೇಷ್ಠವಾಗಿದೆಯೆಂಬುದನ್ನು ಇಬ್ರಿಯ ಕ್ರೈಸ್ತರು ಗಣ್ಯಮಾಡುವಂತೆ ಪೌಲನು ಹೇಗೆ ಸಹಾಯ ಮಾಡಿದನು? (ಬಿ) ತನ್ನ ಮುಖ್ಯ ವಿಷಯವನ್ನು ಪುಷ್ಟಿಗೊಳಿಸಲಿಕ್ಕಾಗಿ ಪೌಲನು ಯಾವ ಸಾರ್ವತ್ರಿಕ ಸತ್ಯವನ್ನು ಉದಾಹರಿಸಿದನು?
10 ಕ್ರೈಸ್ತ ನಂಬಿಕೆಯ ಮೌಲ್ಯವನ್ನು ಒತ್ತಿಹೇಳಲಿಕ್ಕಾಗಿ, ಪೌಲನು ಯೇಸುವನ್ನು, ಯೆಹೂದ್ಯರು ತಮ್ಮ ಪೂರ್ವಜರಲ್ಲಿ ಯಾರನ್ನು ಅತ್ಯಂತ ಮಹಾನ್ ಪ್ರವಾದಿಯೆಂದು ವೀಕ್ಷಿಸುತ್ತಿದ್ದರೊ ಆ ಮೋಶೆಗೆ ಹೋಲಿಸಿದನು. ಯೇಸು ಮೋಶೆಗಿಂತಲೂ ಶ್ರೇಷ್ಠನೆಂಬ ವಾಸ್ತವಾಂಶವನ್ನು ಇಬ್ರಿಯ ಕ್ರೈಸ್ತರು ಮನಃಪೂರ್ವಕವಾಗಿ ಗ್ರಹಿಸಸಾಧ್ಯವಿರುವಲ್ಲಿ, ಯೆಹೂದಿ ಮತಕ್ಕಿಂತ ಕ್ರೈಸ್ತ ಧರ್ಮವು ಶ್ರೇಷ್ಠವೆಂಬುದುನ್ನು ಸಂಶಯಿಸಲು ಅವರಿಗೆ ಯಾವುದೇ ಕಾರಣವು ಇರುತ್ತಿರಲಿಲ್ಲ. ಮೋಶೆ ದೇವರ “ಮನೆ”—ಇಸ್ರಾಯೇಲ್ ಜನಾಂಗ, ಅಥವಾ ಸಭೆ—ಯನ್ನು ನೋಡಿಕೊಳ್ಳುವ ಜವಾಬ್ದಾರಿಗೆ ಅರ್ಹನಾಗಿ ಎಣಿಸಲ್ಪಟ್ಟನಾದರೂ, ಅವನು ಒಬ್ಬ ನಂಬಿಗಸ್ತ ಅನುಚರ ಅಥವಾ ಸೇವಕ ಮಾತ್ರ ಆಗಿದ್ದನು ಎಂದು ಪೌಲನು ತಿಳಿಸಿದನು. (ಅರಣ್ಯಕಾಂಡ 12:7) ಆದರೆ ಇನ್ನೊಂದು ಕಡೆ, ಯೇಸು ಮಗನಾಗಿದ್ದು ದೇವರ ಮನೆಯಲ್ಲೆಲ್ಲಾ ಯಜಮಾನನಾಗಿದ್ದನು. (1 ಕೊರಿಂಥ 11:3; ಇಬ್ರಿಯ 3:2, 3, 5) ತನ್ನ ಮುಖ್ಯಾಂಶವನ್ನು ಪುಷ್ಟಿಗೊಳಿಸಲು, ಪೌಲನು ಈ ಸಾರ್ವತ್ರಿಕ ಸತ್ಯವನ್ನು ಉದ್ಧರಿಸಿದನು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ದೇವರು ಸಮಸ್ತವನ್ನು ಕಟ್ಟಿದಾತನು, ಅಥವಾ ಸೃಷ್ಟಿಕರ್ತನು ಆಗಿರುವುದರಿಂದ, ಆತನೇ ಎಲ್ಲರಿಗಿಂತ ದೊಡ್ಡವನೆಂಬುದನ್ನು ಯಾವನೂ ವಿರೋಧಿಸನು. ಆದುದರಿಂದ ತರ್ಕಬದ್ಧವಾಗಿಯೇ, ಯೇಸು ದೇವರ ಜೊತೆಕೆಲಸಗಾರನಾಗಿದ್ದುದರಿಂದ, ಅವನು ಎಲ್ಲಾ ಸೃಷ್ಟಿಗಿಂತ—ಮೋಶೆಗಿಂತಲೂ—ಶ್ರೇಷ್ಠನಾಗಿರಲೇಬೇಕು.—ಜ್ಞಾನೋಕ್ತಿ 8:30; ಕೊಲೊಸ್ಸೆ 1:15-17.
11, 12. ಪೌಲನು ಇಬ್ರಿಯ ಕ್ರೈಸ್ತರಿಗೆ ಯಾವುದನ್ನು “ಅಂತ್ಯದ ವರೆಗೂ ದೃಢವಾಗಿ” ಹಿಡಿದುಕೊಳ್ಳುವಂತೆ ಪ್ರಚೋದಿಸಿದನು, ಮತ್ತು ಅವನ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಲ್ಲೆವು?
11 ನಿಜವಾಗಿಯೂ, ಇಬ್ರಿಯ ಕ್ರೈಸ್ತರು ಉನ್ನತವಾದ ಅನುಗ್ರಹಿತ ಸ್ಥಿತಿಯಲ್ಲಿದ್ದರು. ಅವರು ‘ಪರಲೋಕಸ್ವಾಸ್ಥಕ್ಕಾಗಿ ಕರೆಯಲ್ಪಟ್ಟವರು’ ಎಂಬುದನ್ನು ಪೌಲನು ಮರುಜ್ಞಾಪಿಸಿದನು. ಇದು ಯೆಹೂದಿ ವ್ಯವಸ್ಥೆಯು ನೀಡಬಹುದಾದ ಯಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ, ಅಮೂಲ್ಯವಾಗಿ ಕಾಪಾಡಬೇಕಾದ ಒಂದು ಸುಯೋಗವಾಗಿತ್ತು. (ಇಬ್ರಿಯ 3:1) ತಮ್ಮ ಯೆಹೂದಿ ಪರಂಪರೆಗಳಿಗೆ ಸಂಬಂಧಪಟ್ಟ ವಿಷಯಗಳನ್ನು ತ್ಯಜಿಸಿದ್ದಕ್ಕೆ ವಿಷಾದಿಸುವ ಬದಲಿಗೆ, ತಾವು ಹೊಸ ಬಾಧ್ಯತೆಯನ್ನು ಪಡೆಯುವವರ ಸಾಲಿನಲ್ಲಿರುವುದಕ್ಕಾಗಿ ಕೃತಜ್ಞರಾಗಿರುವಂತೆ ಪೌಲನ ಮಾತುಗಳು ಆ ಅಭಿಷಿಕ್ತ ಕ್ರೈಸ್ತರನ್ನು ಪ್ರೋತ್ಸಾಹಿಸಿದ್ದಿರಬೇಕು. (ಫಿಲಿಪ್ಪಿ 3:8) ತಮ್ಮ ಸುಯೋಗವನ್ನು ಅಲ್ಪವಾಗಿ ಎಣಿಸದೆ, ಅದನ್ನು ದೃಢವಾಗಿ ಹಿಡಿದುಕೊಳ್ಳುವಂತೆ ಪ್ರಚೋದಿಸುತ್ತ, ಪೌಲನು ಹೇಳಿದ್ದು: “ಕ್ರಿಸ್ತನಾದರೋ ಮಗನಾಗಿ [ದೇವರ] ಮನೆಯ ಮೇಲೆ ಅಧಿಕಾರಿ [“ನಂಬಿಗಸ್ತನಾಗಿದ್ದನು,” NW]ಯಾಗಿದ್ದಾನೆ; ನಾವು ನಮ್ಮ ಧೈರ್ಯವನ್ನೂ ನಮ್ಮ ನಿರೀಕ್ಷೆಯಿಂದ ಉಂಟಾಗುವ ಉತ್ಸಾಹವನ್ನೂ ಕಡೇ ತನಕ ದೃಢವಾಗಿ ಹಿಡುಕೊಂಡವರಾದರೆ ನಾವೇ ದೇವರ ಮನೆಯವರು.”—ಇಬ್ರಿಯ 3:6.
12 ಹೌದು, ಬೇಗನೆ ಸಂಭವಿಸಲಿಕ್ಕಿದ್ದ ಯೆಹೂದಿ ವಿಷಯ ವ್ಯವಸ್ಥೆಯ ಅಂತ್ಯವನ್ನು ಇಬ್ರಿಯ ಕ್ರೈಸ್ತರು ಪಾರಾಗಬೇಕಿದ್ದರೆ, ಅವರು ತಮ್ಮ ದೇವದತ್ತ ನಿರೀಕ್ಷೆಯನ್ನು “ಅಂತ್ಯದವರೆಗೂ ದೃಢವಾಗಿ” ಹಿಡಿದುಕೊಳ್ಳಬೇಕಾಗಿತ್ತು. ಇಂದು ನಾವು ಈ ವಿಷಯ ವ್ಯವಸ್ಥೆಯ ಅಂತ್ಯವನ್ನು ಪಾರಾಗಬೇಕಾದರೆ, ಇದನ್ನೇ ಮಾಡಬೇಕಾಗಿದೆ. (ಮತ್ತಾಯ 24:13) ಪ್ರಾಪಂಚಿಕ ಚಿಂತೆಗಳು, ಜನರ ನಿರಾಸಕ್ತಿ, ಅಥವಾ ನಮ್ಮ ಸ್ವಂತ ಅಪರಿಪೂರ್ಣ ಪ್ರವೃತ್ತಿಗಳು, ದೇವರ ವಾಗ್ದಾನಗಳಲ್ಲಿ ನಮ್ಮ ನಂಬಿಕೆಯನ್ನು ಕದಲಿಸುವಂತೆ ನಾವು ಬಿಡಬಾರದು. (ಲೂಕ 21:16-19) ನಮ್ಮನ್ನು ಹೇಗೆ ಬಲಪಡಿಸಿಕೊಳ್ಳಸಾಧ್ಯವಿದೆ ಎಂಬುದನ್ನು ನೋಡಲು, ನಾವು ಪೌಲನ ಮುಂದಿನ ಮಾತುಗಳಿಗೆ ಗಮನಕೊಡೋಣ.
“ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ”
13. ಪೌಲನು ಯಾವ ಎಚ್ಚರಿಕೆಯನ್ನು ನೀಡಿದನು, ಮತ್ತು ಕೀರ್ತನೆ 95ನ್ನು ಅವನು ಹೇಗೆ ಅನ್ವಯಿಸಿದನು?
13 ಇಬ್ರಿಯ ಕ್ರೈಸ್ತರ ಅನುಗ್ರಹಿತ ಸ್ಥಾನವನ್ನು ಪರಿಗಣಿಸಿದ ನಂತರ, ಪೌಲನು ಈ ಎಚ್ಚರಿಕೆಯನ್ನು ನೀಡಿದನು: “ಆದುದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ—ನೀವು ಈಹೊತ್ತು ದೇವರ ಶಬ್ದಕ್ಕೆ ಕಿವಿಗೊಟ್ಟರೆ, . . . ಅರಣ್ಯದೊಳಗೆ ದೇವರನ್ನು ಪರೀಕ್ಷಿಸಿದ ದಿನದಲ್ಲಿ ಮಾಡಿದಂತೆ ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ.” (ಇಬ್ರಿಯ 3:7, 8) ಪೌಲನು 95ನೆಯ ಕೀರ್ತನೆಯಿಂದ ಉದ್ಧರಿಸುತ್ತಿದ್ದುದರಿಂದ, “ಪವಿತ್ರಾತ್ಮನು ಹೇಳುವ ಪ್ರಕಾರ” ಎಂದು ಹೇಳಸಾಧ್ಯವಿತ್ತುb. (ಕೀರ್ತನೆ 95:7, 8; ವಿಮೋಚನಕಾಂಡ 17:1-7) ಶಾಸ್ತ್ರಗಳು ಪವಿತ್ರಾತ್ಮನ ಮೂಲಕ ದೇವಪ್ರೇರಿತವಾಗಿವೆ.—2 ತಿಮೊಥೆಯ 3:16.
14. ಯೆಹೋವನು ಇಸ್ರಾಯೇಲ್ಯರಿಗಾಗಿ ಮಾಡಿದ್ದ ವಿಷಯಗಳಿಗೆ ಅವರು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಏಕೆ?
14 ಐಗುಪ್ತದ ದಾಸತ್ವದಿಂದ ಬಿಡುಗಡೆಗೊಳಿಸಲ್ಪಟ್ಟ ಬಳಿಕ, ಯೆಹೋವನೊಂದಿಗೆ ಒಂದು ಒಡಂಬಡಿಕೆಯ ಸಂಬಂಧದಲ್ಲಿ ಸೇರುವ ದೊಡ್ಡ ಗೌರವವು ಇಸ್ರಾಯೇಲ್ಯರಿಗೆ ನೀಡಲ್ಪಟ್ಟಿತು. (ವಿಮೊಚನಕಾಂಡ 19:4, 5; 24:7, 8) ಆದರೂ, ದೇವರು ಅವರಿಗಾಗಿ ಮಾಡಿದ್ದ ವಿಷಯಗಳಿಗಾಗಿ ಗಣ್ಯತೆಯನ್ನು ತೋರಿಸುವ ಬದಲು, ಬಲುಬೇಗನೆ ಅವರು ದಂಗೆಕೋರರಾಗಿ ವರ್ತಿಸಲಾರಂಭಿಸಿದರು. (ಅರಣ್ಯಕಾಂಡ 13:25–14:10) ಅದು ಹೇಗೆ ಸಂಭವಿಸಸಾಧ್ಯವಿತ್ತು? ಪೌಲನು ಕಾರಣವನ್ನು ಸೂಚಿಸಿದನು: ಅವರ ಹೃದಯಗಳು ಕಠಿನಮಾಡಿಕೊಂಡಿದ್ದರಿಂದಲೇ! ಆದರೆ ದೇವರ ವಾಕ್ಯಕ್ಕೆ ಸೂಕ್ಷ್ಮಗ್ರಾಹಿಗಳಾಗಿ ಪ್ರತಿಕ್ರಿಯಿಸುತ್ತಿದ್ದ ಹೃದಯಗಳು ಹೇಗೆ ಕಠಿನವಾಗುತ್ತವೆ? ಹೀಗಾಗದಂತೆ ತಡೆಯಲು ನಾವು ಏನು ಮಾಡಬೇಕು?
15. (ಎ) ಗತ ಹಾಗೂ ಪ್ರಸ್ತುತ ಕಾಲದಲ್ಲಿ ‘ದೇವರ ಶಬ್ದ’ವು ಹೇಗೆ ಕೇಳಿಸಲ್ಪಟ್ಟಿದೆ? (ಬಿ) ‘ದೇವರ ಶಬ್ದ’ದ ಕುರಿತ ಯಾವ ಪ್ರಶ್ನೆಗಳನ್ನು ನಮ್ಮನ್ನು ನಾವೇ ಕೇಳಿಕೊಳ್ಳಬೇಕು?
15 ಪೌಲನು ತನ್ನ ಎಚ್ಚರಿಕೆಯನ್ನು, “ನೀವು ಈಹೊತ್ತು ದೇವರ ಶಬ್ದಕ್ಕೆ ಕಿವಿಗೊಟ್ಟರೆ” ಎಂಬ ಷರತ್ತಿನೊಂದಿಗೆ ಆರಂಭಿಸಿದನು. ದೇವರು ಮೋಶೆ ಮತ್ತು ಇನ್ನಿತರ ಪ್ರವಾದಿಗಳ ಮೂಲಕ ತನ್ನ ಜನರೊಂದಿಗೆ ಮಾತಾಡಿದನು. ಆಮೇಲೆ, ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಅವರೊಂದಿಗೆ ಮಾತಾಡಿದನು. (ಇಬ್ರಿಯ 1:1, 2) ಇಂದು, ನಮ್ಮಲ್ಲಿ ದೇವರ ಸಂಪೂರ್ಣ ಪ್ರೇರಿತ ವಾಕ್ಯವಾದ ಪವಿತ್ರ ಬೈಬಲ್ ಇದೆ. ಇದರೊಂದಿಗೆ ನಮಗೆ, ಆತ್ಮಿಕ ಆಹಾರವನ್ನು “ಹೊತ್ತುಹೊತ್ತಿಗೆ” ನೀಡಲು ಯೇಸುವಿನಿಂದ ನಿಯಮಿಸಲ್ಪಟ್ಟ “ನಂಬಿಗಸ್ತನು ವಿವೇಕಿಯೂ ಆದಂಥ ಆಳು” ವರ್ಗವೂ ಇದೆ. (ಮತ್ತಾಯ 24:45-47) ಹೀಗೆ, ದೇವರು ಇನ್ನೂ ನಮ್ಮೊಂದಿಗೆ ಮಾತಾಡುತ್ತಿದ್ದಾನೆ. ಆದರೆ ನಾವು ಕಿವಿಗೊಡುತ್ತಿದ್ದೇವೊ? ಉದಾಹರಣೆಗಾಗಿ, ನಮ್ಮ ಉಡುಪು ಮತ್ತು ಕೇಶಾಲಂಕಾರ ಇಲ್ಲವೆ ಮನೋರಂಜನೆ ಮತ್ತು ಸಂಗೀತದ ಆಯ್ಕೆಯ ಕುರಿತ ಸಲಹೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುವೆವು? ನಾವು “ಕಿವಿಗೊಡು”ತ್ತೇವೊ, ಅಂದರೆ ಆಲಿಸಿದ್ದನ್ನು ಗಮನಕೊಟ್ಟು ಪಾಲಿಸುತ್ತೇವೊ? ನಾವು ನಮ್ಮ ವರ್ತನೆಗಳಿಗೆ ನೆಪಹೇಳುವ ಮತ್ತು ಸಲಹೆಗೆ ಆಕ್ಷೇಪವನ್ನೆತ್ತುವ ಅಭ್ಯಾಸವುಳ್ಳವರಾಗಿದ್ದರೆ, ನಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳುವ ನವಿರಾದ ಅಪಾಯಕ್ಕೆ ನಾವು ನಮ್ಮನ್ನು ಗುರಿಮಾಡಿಕೊಳ್ಳುತ್ತಿದ್ದೇವೆ.
16. ನಮ್ಮ ಹೃದಯಗಳು ಕಠಿನವಾಗಸಾಧ್ಯವಿರುವ ಒಂದು ವಿಧವು ಯಾವುದು?
16 ನಾವು ಮಾಡಸಾಧ್ಯವಿರುವ ಮತ್ತು ಮಾಡಬೇಕಾದ ವಿಷಯಗಳನ್ನು ಮಾಡಲು ನಿರಾಕರಿಸುವಾಗಲೂ ನಮ್ಮ ಹೃದಯಗಳು ಕಠಿನವಾಗಸಾಧ್ಯವಿದೆ. (ಯಾಕೋಬ 4:17) ಇಸ್ರಾಯೇಲ್ಯರಿಗಾಗಿ ಯೆಹೋವನು ಎಲ್ಲವನ್ನು ಮಾಡಿದರೂ, ಅವರು ನಂಬಿಕೆಯನ್ನು ಬೆಳೆಸಿಕೊಳ್ಳಲಿಲ್ಲ, ಮೋಶೆಯ ವಿರುದ್ಧ ದಂಗೆಯೆದ್ದರು, ಕಾನಾನಿನ ಕುರಿತ ಪ್ರತಿಕೂಲ ವರದಿಯನ್ನು ನಂಬಲು ಆರಿಸಿಕೊಂಡರು, ಮತ್ತು ವಾಗ್ದತ್ತ ದೇಶದೊಳಗೆ ಪ್ರವೇಶಿಸಲು ನಿರಾಕರಿಸಿದರು. (ಅರಣ್ಯಕಾಂಡ 14:1-4) ಇದರಿಂದಾಗಿ ಯೆಹೋವನು ಅವರನ್ನು 40 ವರ್ಷ ಅರಣ್ಯದಲ್ಲಿ ಕಳೆಯುವಂತೆ ಶಿಕ್ಷೆ ವಿಧಿಸಿದನು—ಈ ಸಮಯವು ಅಪನಂಬಿಗಸ್ತ ಸದಸ್ಯರ ಸಂತತಿಯು ಸಾಯುವುದಕ್ಕೆ ಸಾಕಾಗಿತ್ತು. ಅವರೊಂದಿಗೆ ಜಿಗುಪ್ಸೆಗೊಂಡು, ದೇವರು ಹೇಳಿದ್ದು: “ಅವರು ಯಾವಾಗಲೂ ಹೃದಯದಲ್ಲಿ ತಪ್ಪಿಹೋಗುವವರು ಎಂದು ಹೇಳಿದೆನು. ಆದರೆ ಅವರು ನನ್ನ ಮಾರ್ಗವನ್ನು ತಿಳುಕೊಳ್ಳಲಿಲ್ಲ. ಹೀಗಿರಲು ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು ಕೋಪಗೊಂಡು ಪ್ರಮಾಣಮಾಡಿದೆನು.” (ಇಬ್ರಿಯ 3:9-11) ಇದರಲ್ಲಿ ನಮಗೆ ಪಾಠವೇನಾದರೂ ಇದೆಯೇ?
ನಮಗೆ ಒಂದು ಪಾಠ
17. ಯೆಹೋವನ ಮಹಾ ಕೃತ್ಯಗಳನ್ನು ನೋಡಿಯೂ, ಆತನ ಘೋಷಣೆಗಳನ್ನು ಕೇಳಿಯೂ ಇಸ್ರಾಯೇಲ್ಯರು ನಂಬಿಕೆಯ ಕೊರತೆಯುಳ್ಳವರಾಗಿದ್ದದ್ದು ಏಕೆ?
17 ಐಗುಪ್ತದಿಂದ ಹೊರಬಂದ ಇಸ್ರಾಯೇಲರ ಸಂತಾನವು ಯೆಹೋವನ ಮಹಾ ಕೃತ್ಯಗಳನ್ನು ತಮ್ಮ ಸ್ವಂತ ಕಣ್ಣುಗಳಿಂದ ನೋಡಿತ್ತು, ಹಾಗೂ ಘೋಷಣೆಗಳನ್ನು ತಮ್ಮ ಸ್ವಂತ ಕಿವಿಗಳಿಂದ ಕೇಳಿತ್ತು. ಆದರೂ, ದೇವರು ಅವರನ್ನು ವಾಗ್ದಾನ ದೇಶಕ್ಕೆ ಸುರಕ್ಷಿತವಾಗಿ ನಡೆಸಬಲ್ಲನೆಂಬ ವಿಷಯದಲ್ಲಿ ನಂಬಿಕೆಯಿರಲಿಲ್ಲ. ಏಕೆ? “ಅವರು ನನ್ನ ಮಾರ್ಗವನ್ನು ತಿಳುಕೊಳ್ಳಲಿಲ್ಲ” ಎಂದು ಯೆಹೋವನು ಹೇಳಿದನು. ಯೆಹೋವನು ನುಡಿದಿದ್ದ ಹಾಗೂ ಮಾಡಿದ್ದಂತಹ ವಿಷಯಗಳು ಅವರಿಗೆ ತಿಳಿದಿದ್ದರೂ, ಅವರನ್ನು ಪರಾಮರಿಸುವ ಆತನ ಸಾಮರ್ಥ್ಯದಲ್ಲಿ ಅವರು ಭರವಸೆ ಮತ್ತು ವಿಶ್ವಾಸವನ್ನು ಬೆಳೆಸಿಕೊಂಡಿರಲಿಲ್ಲ. ಅವರು ತಮ್ಮ ವಯಕ್ತಿಕ ಆವಶ್ಯಕತೆಗಳು ಮತ್ತು ಅಪೇಕ್ಷೆಗಳಲ್ಲೇ ಎಷ್ಟು ಮಗ್ನರಾಗಿ ಹೋಗಿದ್ದರೆಂದರೆ, ಅವರು ದೇವರ ಮಾರ್ಗಗಳಿಗೆ ಹಾಗೂ ಉದ್ದೇಶಕ್ಕೆ ತೀರ ಕಡಿಮೆ ಗಮನಕೊಟ್ಟರು. ಹೌದು, ಆತನ ವಾಗ್ದಾನದಲ್ಲಿ ಅವರಿಗೆ ನಂಬಿಕೆಯ ಕೊರತೆಯಿತ್ತು.
18. ಪೌಲನಿಗನುಸಾರ, ಯಾವ ನಡವಳಿಕೆಯ ರೀತಿಯು “ನಂಬಿಕೆಯ ಕೊರತೆಯುಳ್ಳ ದುಷ್ಟ ಹೃದಯ”ದಲ್ಲಿ ಫಲಿಸುವುದು?
18 ಇಬ್ರಿಯರಿಗೆ ಬರೆದ ಈ ಮುಂದಿನ ಮಾತುಗಳು ನಮಗೂ ಅಷ್ಟೇ ಬಲವಾಗಿ ಅನ್ವಯಿಸುತ್ತವೆ: “ಸಹೋದರರೇ, ಜೀವಸ್ವರೂಪನಾದ ದೇವರಿಂದ ಸರಿದುಹೋಗುವ ನಂಬಿಕೆಯ ಕೊರತೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಎಂದೂ ವಿಕಸಿಸದಂತೆ ಎಚ್ಚರವಾಗಿರ್ರಿ.” (ಇಬ್ರಿಯ 3:12) ‘ನಂಬಿಕೆಯ ಕೊರತೆಯುಳ್ಳ ದುಷ್ಟ ಹೃದಯವು’ ‘ಜೀವಸ್ವರೂಪನಾದ ದೇವರಿಂದ ಸರಿದುಹೋಗುವ’ ಫಲಿತಾಂಶವೆಂದು ಸೂಚಿಸುತ್ತ, ಪೌಲನು ಮೂಲ ವಿಷಯಕ್ಕೆ ಹೋದನು. ಈ ಪತ್ರದ ಆರಂಭದಲ್ಲಿ, ಆತನು ಅಲಕ್ಷ್ಯದ ಕಾರಣದಿಂದ ‘ತಪ್ಪಿಹೋಗುವ’ ವಿಷಯದ ಕುರಿತು ಮಾತಾಡಿದನು. (ಇಬ್ರಿಯ 2:1) ಆದರೆ, “ಸರಿದುಹೋಗು” ಎಂದು ಭಾಷಾಂತರಿಸಿರುವ ಗ್ರೀಕ್ ಪದದ ಅರ್ಥವು “ಸರಿದುನಿಲ್ಲು” ಎಂದಾಗಿದ್ದು, ಅದು “ಧರ್ಮಭ್ರಷ್ಟ” ಎಂಬ ಪದಕ್ಕೆ ಸಂಬಂಧವುಳ್ಳದ್ದಾಗಿದೆ. ಇದು ಬೇಕುಬೇಕೆಂತಲೇ ಮತ್ತು ಪ್ರಜ್ಞಾಪೂರ್ವಕವಾಗಿ ಪ್ರತಿಭಟಿಸುವುದು, ಹಿಮ್ಮೆಟ್ಟುವುದು, ತಿರಸ್ಕಾರದಿಂದ ಪರಿತ್ಯಜಿಸುವುದನ್ನು ಸೂಚಿಸುತ್ತದೆ.
19. ಸಲಹೆಗಳಿಗೆ ಕಿವಿಗೊಡಲು ತಪ್ಪಿಹೋಗುವುದು, ಯಾವ ಗಂಭೀರ ಪರಿಣಾಮಗಳಿಗೆ ನಡೆಸಸಾಧ್ಯವಿದೆ? ದೃಷ್ಟಾಂತಿಸಿರಿ.
19 ಹಾಗಾದರೆ, ‘ದೇವರ ಶಬ್ದಕ್ಕೆ ಕಿವಿಗೊಡುವುದಕ್ಕೆ’ ತಪ್ಪಿಹೋಗುವ ಅಭ್ಯಾಸ ನಮಗಿರುವುದಾದರೆ, ಯೆಹೋವನಿಂದ ಆತನ ವಾಕ್ಯ ಮತ್ತು ನಂಬಿಗಸ್ತ ಆಳು ವರ್ಗದ ಮೂಲಕ ಬರುವ ಸಲಹೆಯನ್ನು ನಾವು ಅಲಕ್ಷಿಸುವುದಾದರೆ ನಮ್ಮ ಹೃದಯಗಳು ಕಲ್ಲಾಗಿ, ಕಠಿನವಾಗಲು ಹೆಚ್ಚು ಸಮಯ ಹಿಡಿಯದು. ಉದಾಹರಣೆಗಾಗಿ, ಒಂದು ಅವಿವಾಹಿತ ಜೋಡಿಯು ತೀರ ಸಲುಗೆಯ ಆಪ್ತ ಸಂಬಂಧವನ್ನಿಟ್ಟುಕೊಳ್ಳಬಹುದು. ಆದರೆ, ಈ ವಿಷಯವನ್ನು ಅವರು ಅಲಕ್ಷ್ಯಮಾಡುವುದಾದರೆ ಆಗೇನು? ಅವರು ಮಾಡಿದ ತಪ್ಪುಗಳನ್ನು ಪುನಃ ಮಾಡದಂತೆ ಅದು ತಡೆಯಬಲ್ಲದೊ? ಅಥವಾ, ಅವರು ಅದನ್ನೇ ಪುನಃ ಮಾಡಲು ಅದು ಹೆಚ್ಚು ಸುಲಭವಾಗಿರುವುದಿಲ್ಲವೊ? ತದ್ರೀತಿಯಲ್ಲಿ, ನಮ್ಮ ಮನೋರಂಜನೆ ಮತ್ತು ಸಂಗೀತ, ಇತ್ಯಾದಿಗಳ ಆಯ್ಕೆಯಲ್ಲಿ ಆಯ್ದುತೆಗೆಯುವವರಾಗಿರುವಂತೆ ಆಳು ವರ್ಗ ನಮಗೆ ಸಲಹೆ ಕೊಡುವಾಗ, ನಾವು ಆಭಾರಿಗಳಾಗಿ ಅದನ್ನು ಸ್ವೀಕರಿಸಿ, ಅಗತ್ಯಯಿರುವ ಸ್ಥಳಗಳಲ್ಲಿ ಹೊಂದಾಣಿಕೆ ಮಾಡುತ್ತೇವೊ? ಪೌಲನು ನಮ್ಮನ್ನು ‘ಸಭೆಯಾಗಿ ಕೂಡಿಬರುವುದನ್ನು ನಾವು ಬಿಟ್ಟುಬಿಡ’ದಂತೆ ಪ್ರಚೋದಿಸಿದನು. (ಇಬ್ರಿಯ 10:24, 25) ಈ ಸಲಹೆಯ ಎದುರಿನಲ್ಲೂ, ಕೆಲವರು ಕ್ರೈಸ್ತ ಕೂಟಗಳನ್ನು ಸಾಧಾರಣವಾಗಿ ವೀಕ್ಷಿಸುತ್ತಾರೆ. ಅವುಗಳಲ್ಲಿ ಕೆಲವೊಂದನ್ನು ತಪ್ಪುವುದು ಅಥವಾ ನಿರ್ದಿಷ್ಟ ಕೂಟಗಳನ್ನು ಪೂರ್ಣವಾಗಿ ತ್ಯಜಿಸುವುದು ಪರಿಣಾಮವಿಲ್ಲದ್ದು ಎಂದು ಅವರು ಭಾವಿಸಬಹುದು.
20. ಶಾಸ್ತ್ರೀಯ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದು ಏಕೆ ಪ್ರಾಮುಖ್ಯವಾಗಿದೆ?
20 ಶಾಸ್ತ್ರಗಳಲ್ಲಿ ಮತ್ತು ಬೈಬಲ್ ಆಧಾರಿತ ಪ್ರಕಾಶನಗಳಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಲ್ಪಟ್ಟಿರುವ ಯೆಹೋವನ “ಶಬ್ದ”ಕ್ಕೆ (NW) ನಾವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೆ ಇರುವಲ್ಲಿ, ಶೀಘ್ರದಲ್ಲೇ ನಾವು “ಜೀವಸ್ವರೂಪನಾದ ದೇವರಿಂದ ಸರಿದುಹೋಗುವ” ಮಾರ್ಗದಲ್ಲಿ ನಮ್ಮನ್ನು ಕಂಡುಕೊಳ್ಳುವೆವು. ಸಲಹೆಯನ್ನು ನಿಷ್ಕ್ರಿಯವಾಗಿ ಅಲಕ್ಷಿಸುವುದು, ಸುಲಭವಾದ ಕ್ರಿಯಾಶೀಲ ಅಲಕ್ಷ್ಯ, ಟೀಕಿಸುವಿಕೆ ಮತ್ತು ಪ್ರತಿಭಟನೆಯಾಗಿ ಪರಿಣಮಿಸಸಾಧ್ಯವಿದೆ. ಒಂದು ವೇಳೆ ಸರಿಪಡಿಸದಿದ್ದರೆ, “ನಂಬಿಕೆಯ ಕೊರತೆಯುಳ್ಳ ದುಷ್ಟ ಹೃದಯ”ವೇ ಫಲಿತಾಂಶವಾಗಿರುವುದು. ಮತ್ತು ಅಂತಹ ಸ್ಥಿತಿಯಿಂದ ಚೇತರಿಸಿಕೊಳ್ಳುವುದು ಸಾಮಾನ್ಯವಾಗಿ ಬಹಳ ಕಠಿನವಾಗಿದೆ. (ಎಫೆಸ 4:19ನ್ನು ಹೋಲಿಸಿ.) ಯೆರೆಮಿಯನು ಸಮಂಜಸವಾಗಿಯೇ ಬರೆದುದು: “ಹೃದಯವು ಎಲ್ಲಕ್ಕಿಂತ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ಈ ಕಾರಣಕ್ಕಾಗಿ ಪೌಲನು ತನ್ನ ಜೊತೆ ಇಬ್ರಿಯ ವಿಶ್ವಾಸಿಗಳಿಗೆ ಈ ರೀತಿಯಾಗಿ ಪ್ರಚೋದಿಸಿದನು: “ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವು ಒಬ್ಬರನ್ನೊಬ್ಬರು ಎಚ್ಚರಿಸಿರಿ.”—ಇಬ್ರಿಯ 3:13.
21. ನಾವೆಲ್ಲರೂ ಏನು ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದೇವೆ, ಮತ್ತು ಯಾವ ಪ್ರತೀಕ್ಷೆಗಳು ನಮಗಿವೆ?
21 ಯೆಹೋವನು ತನ್ನ ವಾಕ್ಯ ಮತ್ತು ಸಂಸ್ಥೆಯ ಮೂಲಕ, ಇಂದೂ ನಮ್ಮೊಂದಿಗೆ ಮಾತಾಡುತ್ತಿರುವುದಕ್ಕಾಗಿ ನಾವು ಎಷ್ಟೊಂದು ಸಂತೋಷಿಸುತ್ತೇವೆ! ನಾವು “ಮೊದಲಿಂದಿರುವ ಭರವಸವನ್ನು ಅಂತ್ಯದ ವರೆಗೂ ದೃಢವಾಗಿ ಹಿಡುಕೊಳ್ಳುವ”ವರಾಗಿರಲು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು ಸತತವಾಗಿ ನಮಗೆ ಸಹಾಯ ಮಾಡುತ್ತಿರುವುದಕ್ಕಾಗಿ ನಾವು ಆಭಾರಿಗಳಾಗಿದ್ದೇವೆ. (ಇಬ್ರಿಯ 3:14) ದೇವರ ಪ್ರೀತಿ ಮತ್ತು ಮಾರ್ಗದರ್ಶನಕ್ಕೆ ನಾವು ಪ್ರತಿಕ್ರಿಯಿಸಲು ಇದೇ ಸರಿಯಾದ ಸಮಯವಾಗಿದೆ. ಹೀಗೆ ಮಾಡುತ್ತಿರುವಾಗ, ಯೆಹೋವನ ಇನ್ನೊಂದು ಅದ್ಭುತಕರವಾದ ವಾಗ್ದಾನವಾದ—ಆತನ ವಿಶ್ರಾಂತಿಯಲ್ಲಿ ‘ಸೇರುವುದನ್ನು’ ನಾವು ಅನುಭವಿಸಬಹುದು. (ಇಬ್ರಿಯ 4:3, 10) ಇದೇ ವಿಷಯವನ್ನು ಪೌಲನು ಇಬ್ರಿಯ ಕ್ರೈಸ್ತರೊಂದಿಗೆ ಮುಂದೆ ಚರ್ಚಿಸಿದನು, ಮತ್ತು ಇದನ್ನೇ ಮುಂದಿನ ಲೇಖನದಲ್ಲಿ ನಾವು ಪರಿಗಣಿಸಲಿದ್ದೇವೆ.
[ಅಧ್ಯಯನ ಪ್ರಶ್ನೆಗಳು]
a ಜೋಸೀಫಸನು ವರದಿಸುವುದು, ಫೆಸ್ಟಸ್ನ ಮರಣದ ಸ್ವಲ್ಪ ಸಮಯದಲ್ಲೇ, ಸದ್ದುಕಾಯರ ಪಂಗಡದವನಾದ ಅನ್ನನು (ಅನನೀಯನು) ಮಹಾ ಯಾಜಕನಾದನು. ಅವನು ಯೇಸುವಿನ ಮಲಸಹೋದರನಾದ ಯಾಕೋಬ, ಮತ್ತು ಇತರ ಶಿಷ್ಯರನ್ನು ಹಿರಿಸಭೆಗೆ ತಂದು ಕಲ್ಲೆಸೆದು ಕೊಲ್ಲುವಂತೆ ತೀರ್ಪುನೀಡಿದನು.
b ಹೀಬ್ರು ಭಾಷೆಯ “ಮೆರೀಬ” ಮತ್ತು “ಮಸ್ಸಾ” ಎಂಬ ಪದಗಳು “ಜಗಳಮಾಡು” ಮತ್ತು “ಪರೀಕ್ಷಿಸು” ಎಂಬ ಸಂಬಂಧಾರ್ಥಕವನ್ನು ಸೂಚಿಸುತ್ತವೆ. ಇದನ್ನು ಭಾಷಾಂತರಿಸುವ ಗ್ರೀಕ್ ಸೆಪ್ಟೂಅಜಿಂಟ್ನಿಂದ ಪೌಲನು ಉದ್ಧರಿಸಿರಬಹದು ಎಂಬುದು ಸ್ಪಷ್ಟ. ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್)ದ 2ನೆಯ ಸಂಪುಟ, ಪುಟ 350 ಮತ್ತು 379ನ್ನು ನೋಡಿ.
ನೀವು ವಿವರಿಸಬಲ್ಲಿರೋ?
◻ ಇಬ್ರಿಯ ಕ್ರೈಸ್ತರಿಗೆ ಪೌಲನು ಅಷ್ಟು ಬಲವಾದ ಸಲಹೆಯನ್ನು ಬರೆಯಲು ಕಾರಣವೇನು?
◻ ಯೆಹೂದಿ ಧರ್ಮದ ಕೆಳಗಿದ್ದ ಜೀವನಕ್ಕಿಂತ ಉತ್ತಮವಾದ ಜೀವನವಿದೆ ಎಂಬುದನ್ನು ಗಣ್ಯಮಾಡುವಂತೆ ಪೌಲನು ಇಬ್ರಿಯ ಕ್ರೈಸ್ತರಿಗೆ ಹೇಗೆ ಸಹಾಯ ಮಾಡಿದನು?
◻ ಒಬ್ಬನ ಹೃದಯವು ಹೇಗೆ ಕಠಿನವಾಗುತ್ತದೆ?
◻ ನಾವು “ನಂಬಿಕೆಯ ಕೊರತೆಯುಳ್ಳ ದುಷ್ಟ ಹೃದಯ”ವನ್ನು ಬೆಳೆಸಿಕೊಳ್ಳುವುದರಿಂದ ದೂರವಿರಲು ಏನು ಮಾಡಬೇಕು?
[ಪುಟ 10 ರಲ್ಲಿರುವ ಚಿತ್ರ]
ಮಹಾ ಮೋಶೆಯಾದ ಯೇಸುವಿನಲ್ಲಿ ನೀವು ನಂಬಿಕೆಯನ್ನು ಇಡುತ್ತಿದ್ದಿರೋ?