ನೀವು ನಿಮ್ಮ ಮಕ್ಕಳನ್ನು ಹೇಗೆ ಸಂರಕ್ಷಿಸಬಲ್ಲಿರಿ?
ಕೆಲವು ವರ್ಷಗಳ ವರೆಗೆ ಹತ್ತಿರದಲ್ಲೇ ಇದ್ದ ಶಾಲೆಯಲ್ಲಿ ವ್ಯಾಸಂಗ ಮಾಡಿಮುಗಿಸಿದ ಬಳಿಕ, ಬ್ರೆಸಿಲ್ನ ಸಾವ್ ಪೌಲೊದ ಸುಮಾರು 3,000 ಇತರ ಯುವ ಜನರೊಂದಿಗೆ ವರ್ನರ್a ಪ್ರೌಢ ವ್ಯಾಸಂಗವನ್ನು ಆರಂಭಿಸಿದನು. ಜೊತೆ ವಿದ್ಯಾರ್ಥಿಗಳು ಅಮಲೌಷಧಗಳನ್ನು ಮಾರುತ್ತಿರುವುದನ್ನೂ ಉಪಯೋಗಿಸುತ್ತಿರುವುದನ್ನೂ ಅವನು ಪ್ರಪ್ರಥಮ ಬಾರಿಗೆ ಗಮನಿಸಿದನು. ಚಿಕ್ಕ ಮೈಕಟ್ಟಿನವನಾದ ಕಾರಣ, ಬೇಗನೆ ಅವನು ಹಿರಿಯ ವಿದ್ಯಾರ್ಥಿಗಳಿಂದ, ಅವಮಾನಕರವಾದ ಹಾಗೂ ಅಪಾಯಕರವಾದ ರ್ಯಾಗಿಂಗ್ಗೆ ಬಲಿಯಾದನು.
ವರ್ನರ್ನ ತಂಗಿಯಾದ ಈವಳಿಗೆ ಸಹ ಸಮಸ್ಯೆಗಳಿದ್ದವು. ಅತ್ಯುತ್ತಮವಾದ ಅಂಕಗಳನ್ನು ಪಡೆಯಲು ಬಯಸುತ್ತಾ, ಅವಳು ಎಷ್ಟು ತೀವ್ರಾಭಿಲಾಷೆಯಿಂದ ಅಭ್ಯಾಸಮಾಡಿದಳೆಂದರೆ, ಅವಳು ವಿಪರೀತ ದಣಿವು ಮತ್ತು ಮಾನಸಿಕ ಗೊಂದಲವನ್ನು ಅನುಭವಿಸಿದಳು. ಇತರ ತರುಣತರುಣಿಯರಂತೆ, ವರ್ನರ್ ಮತ್ತು ಈವ ಅವರಿಗೆ, ಶಾರೀರಿಕ ಹಾಗೂ ಭಾವನಾತ್ಮಕ ಸಂರಕ್ಷಣೆಯ ಅಗತ್ಯವಿತ್ತು. ನಿಮ್ಮ ಮಕ್ಕಳಿಗೆ ಯಾವ ರೀತಿಯ ಸಹಾಯದ ಅಗತ್ಯವಿದೆ? ವಯಸ್ಕ ಜೀವಿತಕ್ಕಾಗಿ ನೀವು ಅವರನ್ನು ಹೇಗೆ ಸಿದ್ಧಗೊಳಿಸಬಲ್ಲಿರಿ? ನಿಜವಾಗಿಯೂ, ನಿಮ್ಮ ಮಕ್ಕಳಿಗಾಗಿ ನೀವು ಯಾವ ಭವಿಷ್ಯತ್ತನ್ನು ಅಪೇಕ್ಷಿಸುತ್ತೀರಿ?
ಅವರಿಗೆ ಬರಿಯ ಪೋಷಣೆಗಿಂತಲೂ ಹೆಚ್ಚಿನದ್ದರ ಅಗತ್ಯವಿದೆ
ಇಂದು ತಮ್ಮ ಮಕ್ಕಳನ್ನು ಸಂರಕ್ಷಿಸುವುದರಲ್ಲಿ ಹೆತ್ತವರು ಎದುರಿಸುವ ಪಂಥಾಹ್ವಾನದ ಕುರಿತು ತುಸು ಯೋಚಿಸಿರಿ. ಕುಟುಂಬ ಜೀವನದ ಗುಣಮಟ್ಟದಲ್ಲಿನ ಅವನತಿ ಮತ್ತು ಬಡತನದಲ್ಲಿನ ಹೆಚ್ಚಳದಿಂದಾಗಿ, ಅನೇಕ ದೇಶಗಳಲ್ಲಿ ಬೀದಿಗಳಲ್ಲಿ ವಾಸಿಸುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದೆ. ಶೋಷಣೆಯಿಂದ ಎಳೆಯರನ್ನು ಸಂರಕ್ಷಿಸಲು ಸೋತದ್ದರ ಫಲಿತಾಂಶವು, ಬಾಲಕಾರ್ಮಿಕ ಪದ್ಧತಿಯಾಗಿದೆ. ಅಮಲೌಷಧದ ದುರುಪಯೋಗವು ಸಹ ಅನೇಕ ಯುವ ಜನರನ್ನು ನಾಶಮಾಡುತ್ತದೆ. ಉದಾಹರಣೆಗಾಗಿ, ಬ್ರೆಸಿಲಿನ ಒಬ್ಬ ಹದಿವಯಸ್ಕನು ಅಮಲೌಷಧ ವ್ಯಸನಿಯಾಗಿ ಪರಿಣಮಿಸಿದಾಗ, ಅವನ ಮನೆಯಲ್ಲಿ ಶಾಂತಿಯು ಇಲ್ಲವಾಯಿತು. ಅವನ ಹೆತ್ತವರು ಭಾವನಾತ್ಮಕ ಒತ್ತಡವನ್ನು ಅನುಭವಿಸಿದ್ದಲ್ಲದೆ, ಅವನ ಪುನರ್ಚೇತನಕ್ಕಾಗಿ ಹಣಸಹಾಯವನ್ನು ಮಾಡಲು ಅವರು ಕಷ್ಟಪಡಬೇಕಾಯಿತು. ಇದಲ್ಲದೆ ಹಣಪಾವತಿಯ ತಗಾದೆಮಾಡುತ್ತಾ, ನಿರ್ದಯಿಗಳಾದ ಅಮಲು ದ್ರವ್ಯಗಳ ವ್ಯಾಪಾರಿಗಳು ಅವರ ಮನೆಬಾಗಿಲಿಗೆ ಬಂದರು.
ಜೀವನದ ಒತ್ತಡಗಳು ಇದ್ದರೂ, ಅನೇಕ ಹೆತ್ತವರು ತಮ್ಮ ಮಕ್ಕಳಿಗೆ ಕೇವಲ ಆಹಾರ, ಬಟ್ಟೆ, ಹಾಗೂ ವಸತಿಯನ್ನು ಮಾತ್ರವಲ್ಲ, ಹಿಂಸಾಚಾರ, ಅಮಲೌಷಧದ ದುರುಪಯೋಗ, ಹಾಗೂ ಇನ್ನಿತರ ಸಮಸ್ಯೆಗಳಿಂದಲೂ ಸಂರಕ್ಷಣೆಯನ್ನು ಒದಗಿಸುವುದರ ಹೋರಾಟವನ್ನು ನಡೆಸುತ್ತಾ ಇದ್ದಾರೆ. ಇದು ಒಂದು ಉದಾತ್ತ ಪ್ರಯತ್ನವಾಗಿದೆ. ಆದರೆ ಇಷ್ಟು ಮಾತ್ರ ಸಾಕೊ? ಭಾವನಾತ್ಮಕ ಹಾಗೂ ಆತ್ಮಿಕ ಹಾನಿಯಿಂದ ಸಂರಕ್ಷಿಸುವುದರ ಕುರಿತಾಗಿ ಏನು? ತಂದೆತ್ತಾಯನದ ಜವಾಬ್ದಾರಿಯನ್ನು ಯಶಸ್ವಿಕರವಾಗಿ ನಿರ್ವಹಿಸುವುದರಲ್ಲಿ, ತಮ್ಮ ಮಕ್ಕಳ ಸ್ನೇಹಿತರು ಹಾಗೂ ಮನೋರಂಜನೆಯ ಆಯ್ಕೆಯ ಕುರಿತಾದ ಪಂಥಾಹ್ವಾನಗಳನ್ನು ನಿಭಾಯಿಸುವುದು ಒಳಗೂಡಿದೆ ಎಂದು ಅನೇಕರು ತಿಳಿದುಕೊಳ್ಳುತ್ತಾರೆ. ಆದರೂ, ಹೆತ್ತವರು ಮಿತಿಮೀರಿ ಸಂರಕ್ಷಿಸುವುದು ಅಥವಾ ಅವರನ್ನು ಸ್ವೇಚ್ಛೆಯಾಗಿ ಬಿಡುವುದರ ವಿಷಯದಲ್ಲಿ ಹೇಗೆ ಜಾಗ್ರತೆಯಿಂದಿರಸಾಧ್ಯವಿದೆ? ಮುಂದಿನ ಲೇಖನದಲ್ಲಿ ಕಂಡುಬರುವ ಉತ್ತರಗಳನ್ನು ಪರಿಗಣಿಸುವ ಆಮಂತ್ರಣ ನಿಮಗಿದೆ.
[ಪಾದಟಿಪ್ಪಣಿ]
a ಈ ಲೇಖನದಲ್ಲಿ ಬದಲಿ ಹೆಸರುಗಳು ಉಪಯೋಗಿಸಲ್ಪಟ್ಟಿವೆ.