ಫ್ರಾನ್ಸ್ನಲ್ಲಿ ನಡೆದ ಒಂದು ಅವಿಸ್ಮರಣೀಯ ಘಟನೆ
“ಯೆಹೋವನ ನಗರ ಬೇಡ!” ಎಂದು ಪಟ್ಟಣದಾದ್ಯಂತ ಪ್ರದರ್ಶಿಸಲ್ಪಟ್ಟ ಪೋಸ್ಟರ್ಗಳು ಘೋಷಿಸಿದವು. “ಯೆಹೋವ ಪ್ರಾಜೆಕ್ಟ್ನ ವಿರುದ್ಧ ನಾವೆಲ್ಲರೂ ಐಕ್ಯರಾಗೋಣ” ಎಂದು ಒಂದು ವಿರೋಧಿ ಗುಂಪು ಉತ್ತೇಜಿಸಿತು. ಅಕ್ಷರಶಃ ನೂರಾರು ಲೇಖನಗಳು, ಸಾರ್ವಜನಿಕರಿಗೆ ಈ ವಿವಾದಾಂಶದ ಕುರಿತಾಗಿ ಅರಿವನ್ನು ಕೊಟ್ಟವು. ಅರ್ಜಿಗಳಿಗೆ ಸಹಿಹಾಕಲಾಯಿತು, ಮತ್ತು ಆ ಪ್ರಾಜೆಕ್ಟ್ನ ಕುರಿತಾಗಿ ತಿಳಿಸುವ ಐದು ಲಕ್ಷಕ್ಕಿಂತಲೂ ಹೆಚ್ಚು ಕಿರುಹೊತ್ತಗೆಗಳು ಸ್ಥಳಿಕ ಅಂಚೆಡಬ್ಬಗಳಲ್ಲಿ ತುಂಬಿದವು. ಫ್ರಾನ್ಸ್ನ ವಾಯುವ್ಯ ದಿಕ್ಕಿನಲ್ಲಿರುವ, ಪ್ರಶಾಂತವಾಗಿರುವ ಲೂವಿವ ಪಟ್ಟಣವನ್ನು ಅಶಾಂತಗೊಳಿಸಿದ ಈ ಪ್ರಾಜೆಕ್ಟ್ ಯಾವುದಾಗಿತ್ತು? ಯೆಹೋವನ ಸಾಕ್ಷಿಗಳ ಒಂದು ಹೊಸ ಬ್ರಾಂಚ್ ಆಫೀಸ್ ಮತ್ತು ನಿವಾಸ ಕಟ್ಟಡಗಳ ಯೋಜಿತ ನಿರ್ಮಾಣ ಕೆಲಸವೇ.
ಯೆಹೋವನು ಅದನ್ನು ಬೆಳೆಯುವಂತೆ ಮಾಡುತ್ತಾನೆ
ಫ್ರಾನ್ಸ್ನಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯು, 19ನೆಯ ಶತಮಾನದ ಅಂತ್ಯದಷ್ಟು ಹಿಂದೆ ಆರಂಭಿಸಿತು. ಬೈಬಲ್ ಸಾಹಿತ್ಯಕ್ಕಾಗಿದ್ದ ಪ್ರಥಮ ಡಿಪೊ, ದಕ್ಷಿಣ ಫ್ರಾನ್ಸ್ನ ಬೋವೆನ್ನಲ್ಲಿ ತೆರೆಯಲ್ಪಟ್ಟಿತು. ಮತ್ತು 1919ರಲ್ಲಿ ಪ್ಯಾರಿಸ್ನಲ್ಲಿ ಒಂದು ಚಿಕ್ಕ ಕಛೇರಿಯು ಕಾರ್ಯನಡಿಸುತ್ತಿತ್ತು. ಆ ನಗರದಲ್ಲಿ ಒಂದು ಬ್ರಾಂಚ್ ಆಫೀಸು 1930ರಲ್ಲಿ ತೆರೆಯಲ್ಪಟ್ಟಿತು, ಮತ್ತು ಮುಂದಿನ ವರ್ಷವೇ ಆಫೀಸಿನ ಸಿಬ್ಬಂದಿಯು ಪ್ಯಾರಿಸ್ನ ಉತ್ತರ ದಿಕ್ಕಿನಲ್ಲಿರುವ ಆಂಗಾನ್ಲೇಬ್ಯಾನ್ನಲ್ಲಿ ಒಂದು ಬೆತೆಲ್ ಮನೆಯಲ್ಲಿ ವಾಸಿಸಲಾರಂಭಿಸಿತು. IIನೆಯ ಲೋಕ ಯುದ್ಧದ ನಂತರ, ಬೆತೆಲ್ ಕುಟುಂಬವು ಪುನಃ ಪ್ಯಾರಿಸ್ಗೆ ಹಿಂದಿರುಗಿತು, ಮತ್ತು 1959ರಲ್ಲಿ, ಬ್ರಾಂಚನ್ನು ರಾಜಧಾನಿಯ ಪಶ್ಚಿಮ ಹೊರವಲಯದಲ್ಲಿ, ಬೂಲೊನ್ ಬೀಯಾಂಕುರ್ನಲ್ಲಿ ಐದು ಮಾಳಿಗೆಯ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಯಿತು.
ರಾಜ್ಯ ಸಾರುವಿಕೆಯ ಕೆಲಸದ ವಿಸ್ತರಣೆಯಿಂದಾಗಿ, 1973ರಲ್ಲಿ ಮುದ್ರಣಾಲಯ ಮತ್ತು ಶಿಪ್ಪಿಂಗ್ ಸೌಕರ್ಯಗಳನ್ನು ಪ್ಯಾರಿಸ್ನ ಪಶ್ಚಿಮ ದಿಕ್ಕಿನಲ್ಲಿ 100 ಕಿಲೊಮೀಟರ್ ದೂರದಲ್ಲಿದ್ದ ಲೂವಿವಗೆ ಸ್ಥಳಾಂತರಿಸಲಾಯಿತು. ಆದರೆ ಆಫೀಸುಗಳು ಬೂಲೊನ್ ಬೀಯಾಂಕುರ್ನಲ್ಲಿಯೇ ಉಳಿದವು. ಆದರೆ ಫ್ರಾನ್ಸ್ನಲ್ಲಿದ್ದ ಪ್ರಚಾರಕರ ಸಂಖ್ಯೆಯಲ್ಲಿನ ವೃದ್ಧಿಯಿಂದಾಗಿ, 1978 ಮತ್ತು 1985ರಲ್ಲಿ ಲೂವಿವದಲ್ಲಿನ ಸೌಕರ್ಯಗಳು ವಿಸ್ತರಿಸಲ್ಪಟ್ಟರೂ, ಅದು ಸಾಕಾಗದೆ ಹೋಯಿತು. ಆದುದರಿಂದ ಇನ್ನೂ ಹೆಚ್ಚು ವಿಸ್ತರಣೆ ಮಾಡಿ, ಇಡೀ ಬೆತೆಲ್ ಕುಟುಂಬವನ್ನು ಒಂದೇ ಸ್ಥಳದಲ್ಲಿ ಜೊತೆಗೂಡಿಸುವ ನಿರ್ಣಯವನ್ನು ಮಾಡಲಾಯಿತು. ಆರಂಭದಲ್ಲಿ ತಿಳಿಸಲ್ಪಟ್ಟಂತೆ, ಈ ಪ್ರಾಜೆಕ್ಟ್ ಎಲ್ಲರಿಗೆ ಇಷ್ಟವಾಗಿರಲಿಲ್ಲ. ಅಂತಹ ವಿರೋಧದ ಎದುರಿನಲ್ಲೂ, ಮುದ್ರಣಾಲಯದ ಸ್ಥಳದಿಂದ ಕೇವಲ ಒಂದೂವರೆ ಕಿಲೊಮೀಟರ್ ದೂರದಲ್ಲಿ ಒಂದು ಸೈಟನ್ನು ಕೊಳ್ಳಲಾಯಿತು. ಆರು ವರ್ಷಗಳ ಕಠಿನ ಕೆಲಸವು ಆರಂಭವಾಯಿತು, ಮತ್ತು ಕೊನೆಯಲ್ಲಿ 23 ವರ್ಷಗಳ ಪ್ರತ್ಯೇಕವಾಸದ ಅನಂತರ, ಇಡೀ ಬೆತೆಲ್ ಕುಟುಂಬವು ಆಗಸ್ಟ್ 1996ರಲ್ಲಿ ಲೂವಿವದಲ್ಲಿ ಒಂದುಗೂಡಿಸಲ್ಪಟ್ಟಿತು.
ಆದುದರಿಂದ, ಆಡಳಿತ ಮಂಡಳಿಯ ಸದಸ್ಯರಾದ ಸಹೋದರ ಲಾಯ್ಡ್ ಬ್ಯಾರಿ ಅವರಿಂದ ನೀಡಲ್ಪಟ್ಟ ಸಮರ್ಪಣೆಯ ಭಾಷಣಕ್ಕೆ ಕಿವಿಗೊಡಲಿಕ್ಕಾಗಿ, ಫ್ರಾನ್ಸ್ನ ಬೆತೆಲ್ ಕುಟುಂಬದ 300 ಸದಸ್ಯರು, ಮತ್ತು ಇತರ 42 ಬ್ರಾಂಚ್ಗಳಿಂದ ಬಂದ 329 ಪ್ರತಿನಿಧಿಗಳನ್ನು ಒಳಗೂಡಿಸಿ, 1,187 ಮಂದಿಯ ಒಂದು ಸಂತೋಷಭರಿತ ಸಮೂಹವು, 1997, ನವೆಂಬರ್ 15ರ ಶನಿವಾರದಂದು ತುಂಬ ಆನಂದದಿಂದ ಕೂಡಿಬಂತು. ಆದರೆ ಈ ಸಮರ್ಪಣೆಯು, ಫ್ರಾನ್ಸ್ನಾದ್ಯಂತ ಯೆಹೋವನ ಸಾಕ್ಷಿಗಳ ವಿರುದ್ಧ ಹಗೆತನ ಮತ್ತು ದೀರ್ಘ ಸಮಯದಿಂದ ನಡೆದಿರುವ ಮಿಥ್ಯಾಪವಾದಿ ವಾರ್ತಾ ಚಳುವಳಿಯ ಎದುರಿನಲ್ಲಿ ನಡೆಯುತ್ತಿದ್ದ ವಾಸ್ತವಾಂಶದಿಂದಾಗಿ, ಎಲ್ಲ ಫ್ರೆಂಚ್ ಸಾಕ್ಷಿಗಳು ಈ ವಿಜಯವನ್ನು ಆಚರಿಸುವುದರಲ್ಲಿ ಪಾಲ್ಗೊಳ್ಳಲು ಶಕ್ತರಾಗಬೇಕು ಎಂದು ಭಾವಿಸಲಾಯಿತು. ಆದಕಾರಣ, ನವೆಂಬರ್ 16ರ ಆದಿತ್ಯವಾರದಂದು, ಪ್ಯಾರಿಸ್ನ ಉತ್ತರ ದಿಕ್ಕಿನಲ್ಲಿರುವ ವೀಲ್ಪ್ಯಾಂಟ್ ವಸ್ತುಪ್ರದರ್ಶನ ಕೇಂದ್ರದಲ್ಲಿ, “ಕ್ರಿಸ್ತನ ಪ್ರೀತಿಯಲ್ಲಿ ಉಳಿಯಿರಿ” ಎಂಬ ಶೀರ್ಷಿಕೆಯುಳ್ಳ ವಿಶೇಷ ಕೂಟವನ್ನು ಏರ್ಪಡಿಸಲಾಯಿತು. ಬೆಲ್ಜಿಯಮ್ ಮತ್ತು ಸ್ವಿಟ್ಸರ್ಲೆಂಡ್ನಲ್ಲಿರುವ ಫ್ರೆಂಚ್ ಭಾಷೆಯನ್ನಾಡುವ ಸಾಕ್ಷಿಗಳೊಂದಿಗೆ, ಫ್ರಾನ್ಸ್ನಲ್ಲಿರುವ ಎಲ್ಲ ಯೆಹೋವನ ಸಾಕ್ಷಿಗಳನ್ನು ಹಾಗೂ ಬ್ರಿಟನ್, ಜರ್ಮನಿ, ಲಕ್ಸಮ್ಬರ್ಗ್ ಮತ್ತು ನೆದರ್ಲೆಂಡ್ಸ್ನಲ್ಲಿರುವ ಸಭೆಗಳನ್ನು ಆಮಂತ್ರಿಸಲಾಯಿತು.
ಒಂದು ಮಹತ್ವಪೂರ್ಣ ಕೂಟ
ಕೂಟಕ್ಕಾಗಿ ತಯಾರಿಗಳು ಆರು ತಿಂಗಳುಗಳ ಮುಂಚೆಯೇ ಆರಂಭಗೊಂಡವು. ಆಗ, ಸಮರ್ಪಣೆಗೆ ಕೇವಲ ಎರಡು ವಾರಗಳಿದ್ದಾಗ, ಫ್ರೆಂಚ್ ಟ್ರಕ್ ಚಾಲಕರು ಸ್ಟ್ರೈಕ್ ಮಾಡಿದರು. ಇದು ಪ್ರಧಾನ ರಸ್ತೆಗಳನ್ನು ಮತ್ತು ಇಂಧನ ಸರಬರಾಯಿಗಳನ್ನು ತಡೆಗಟ್ಟಿತು. ಕುರ್ಚಿಗಳು ಮತ್ತು ಇತರ ಸಲಕರಣೆಗಳು ಸರಿಯಾದ ಸಮಯಕ್ಕೆ ತಲಪುವವೊ? ರಸ್ತೆತಡೆಗಳು, ಸಹೋದರರನ್ನು ತಡೆಗಟ್ಟುವವೊ? ಒಂದೇ ವಾರದೊಳಗೆ ಸ್ಟ್ರೈಕ್ ಮುಗಿದು, ರಸ್ತೆಗಳು ಪುನಃ ವಾಹನ ಸಂಚಾರವನ್ನು ಆರಂಭಿಸಿದಾಗ, ಎಲ್ಲರ ಮನಸ್ಸು ಹಗುರವಾಯಿತು. ಸಮರ್ಪಣೆಯ ವಾರಾಂತ್ಯದ ಮುಂಚಿನ ಶುಕ್ರವಾರ ಸಾಯಂಕಾಲದಂದು, 38 ಟ್ರಕ್ಕುಗಳು, ಆ ಸಂದರ್ಭಕ್ಕಾಗಿ ಬಾಡಿಗೆಗೆ ತೆಗೆದುಕೊಳ್ಳಲ್ಪಟ್ಟಿದ್ದ ಎರಡು ವಿಶಾಲ ಹಾಲ್ಗಳಿಗೆ 84,000 ಕುರ್ಚಿಗಳನ್ನು ಸಾಗಿಸಿದವು. 800ಕ್ಕಿಂತಲೂ ಹೆಚ್ಚು ಸಹೋದರ ಸಹೋದರಿಯರು ರಾತ್ರಿಯೆಲ್ಲಾ ಕೆಲಸ ಮಾಡಿ, ಶನಿವಾರ ಬೆಳಗ್ಗೆ ಒಂಬತ್ತೂವರೆ ತನಕ, ಆಸನಗಳು, ವೇದಿಕೆ, ಧ್ವನಿ ವ್ಯವಸ್ಥೆ, ಮತ್ತು ಒಂಬತ್ತು ದೈತ್ಯಾಕಾರದ ವಿಡಿಯೊ ಪರದೆಗಳನ್ನು ಅಳವಡಿಸಲು ಶ್ರಮಿಸಿದರು.
ಆದಿತ್ಯವಾರ ಬೆಳಗ್ಗೆ 6:00 ಗಂಟೆಗೆ, ಬಾಗಿಲುಗಳನ್ನು ತೆರೆಯಲಾಯಿತು ಮತ್ತು ಜನಸಮೂಹಗಳು ಪ್ರವಾಹದಂತೆ ಒಳಬರಲಾರಂಭಿಸಿದವು. ವಿಶೇಷವಾಗಿ ಯೋಜಿಸಲ್ಪಟ್ಟ ಒಟ್ಟು 17 ಟ್ರೈನುಗಳು, 13,000ಕ್ಕಿಂತಲೂ ಹೆಚ್ಚು ಸಾಕ್ಷಿಗಳನ್ನು ರಾಜಧಾನಿಗೆ ತಂದವು. ಪ್ರಯಾಣಿಕರನ್ನು ಅಭಿವಂದಿಸಲು ಮತ್ತು ಅವರನ್ನು ಗಂಪುಗಳಾಗಿ ಅಧಿವೇಶನ ನಿವೇಶನಕ್ಕೆ ಕರೆದುಕೊಂಡು ಹೋಗಲಿಕ್ಕಾಗಿ, ಇನ್ನೂರಕ್ಕಿಂತಲೂ ಹೆಚ್ಚು ಸ್ಥಳಿಕ ಸಹೋದರ ಸಹೋದರಿಯರು ರೈಲ್ವೇ ನಿಲ್ದಾಣಗಳಲ್ಲಿದ್ದರು. ಈ ಪ್ರೀತಿಪರ ಏರ್ಪಾಡು, ಅವರಿಗೆ “ಸುರಕ್ಷೆ ಮತ್ತು ಕ್ಷೇಮದ ಅನಿಸಿಕೆಯನ್ನು” ಕೊಟ್ಟಿತೆಂದು ಒಬ್ಬ ಸಹೋದರಿಯು ಹೇಳಿದಳು.
ಇತರರು ವಿಮಾನದ ಮೂಲಕ ಅಥವಾ ಕಾರಿನ ಮೂಲಕ ಬಂದರು. ಆದರೆ ಅಧಿಕಾಂಶ ಮಂದಿ, 953 ಬಸ್ಸುಗಳಲ್ಲಿ ಬಂದರು. ಪ್ಯಾರಿಸ್ ಕ್ಷೇತ್ರದಲ್ಲಿ ಸಾಕ್ಷಿಗಳು, ವಸ್ತುಪ್ರದರ್ಶನ ಕೇಂದ್ರಕ್ಕೆ ಪ್ರಯಾಣಿಸಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸಿದರು. ಅನೇಕರು ಇಡೀ ರಾತ್ರಿ ಪ್ರಯಾಣಿಸುತ್ತಿದ್ದರು ಅಥವಾ ಬೆಳಿಗ್ಗೆ ತುಂಬ ಬೇಗನೆ ತಮ್ಮ ಮನೆಗಳಿಂದ ಹೊರಟಿದ್ದರು. ಆದರೆ ಈ ಕೂಟಕ್ಕೆ ಹಾಜರಾಗುವ ಅವರ ಸಂಭ್ರಮವು ಗಮನಾರ್ಹವಾಗಿತ್ತು. ಅನೇಕ ವರ್ಷಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಕಂಡಿರದ ಸ್ನೇಹಿತರ ಪುನರ್ಮಿಲನಗಳನ್ನು, ಹರ್ಷಭರಿತ ಅಭಿವಂದನೆಗಳು ಮತ್ತು ಹೃದಯೋಲ್ಲಾಸದ ಅಲಿಂಗನಗಳು ಗುರುತಿಸಿದವು. ವರ್ಣರಂಜಿತ ರಾಷ್ಟ್ರೀಯ ಉಡುಗೆಗಳು, ಆ ಉಲ್ಲಾಸಕರ ಸಮೂಹಕ್ಕೆ ಒಂದು ಅಂತಾರಾಷ್ಟ್ರೀಯ ಸೊಬಗನ್ನು ಕೊಟ್ಟವು. ನಿಸ್ಸಂದೇಹವಾಗಿ, ಅಸಾಧಾರಣವಾದ ಯಾವುದೋ ಸಂಗತಿಯು ನಡೆಯಲಿತ್ತು.
ಕಾರ್ಯಕ್ರಮವು ಬೆಳಗ್ಗೆ 10:00 ಗಂಟೆಗೆ ಆರಂಭವಾದಾಗ, ಯಾವುದೇ ಆಸನಗಳು ಉಳಿದಿರಲಿಲ್ಲವಾದರೂ, ಪ್ರತಿ ನಿಮಿಷಕ್ಕೆ ನೂರಾರು ಜನರು ಆಗಮಿಸುತ್ತಾ ಇದ್ದರು. ಒಬ್ಬನು ಎಲ್ಲಿ ನೋಡಿದರೂ, ಹಸನ್ಮುಖಗಳ ಗುಂಪುಗಳನ್ನು ನೋಡಸಾಧ್ಯವಿತ್ತು. ಸಾವಿರಾರು ಜನರು ನಿಂತುಕೊಂಡಿದ್ದರು ಇಲ್ಲವೇ ಕಾಂಕ್ರೀಟ್ ನೆಲದ ಮೇಲೆ ಕುಳಿತುಕೊಂಡಿದ್ದರು. ಸಮ್ಮೇಳನದ ಶೀರ್ಷಿಕೆಯ ಮನೋವೃತ್ತಿಯನ್ನು ಪ್ರದರ್ಶಿಸುತ್ತಾ, ಅನೇಕ ಯುವ ವ್ಯಕ್ತಿಗಳು, ವೃದ್ಧ ವ್ಯಕ್ತಿಗಳು ಕುಳಿತುಕೊಳ್ಳಲು ಸಾಧ್ಯವಾಗುವಂತೆ ಪ್ರೀತಿಯಿಂದ ನಿಂತೇ ಇದ್ದರು. “ನಮಗೆ ಪರಿಚಯವಿಲ್ಲದಿದ್ದರೂ, ನಮಗೆ ಅತಿ ಪ್ರಿಯರಾಗಿದ್ದ ಸಹೋದರ ಸಹೋದರಿಯರಿಗಾಗಿ ನಮ್ಮ ಆಸನಗಳನ್ನು ಕೊಡಲಿಕ್ಕಾಗಿ ನಾವೆಷ್ಟು ಸಂತೋಷಿತರಾಗಿದ್ದೆವು!” ಎಂದು ಒಬ್ಬ ದಂಪತಿಗಳು ಬರೆದರು. ಅನೇಕರು ಒಂದು ಉತ್ತಮ ಆತ್ಮತ್ಯಾಗಿ ಮನೋಭಾವವನ್ನು ಪ್ರದರ್ಶಿಸಿದರು: “ಇಡೀ ಶುಕ್ರವಾರ ರಾತ್ರಿ ನಾವು ಇರಿಸಲು ಸಹಾಯಮಾಡಿದ್ದ ಕುರ್ಚಿಗಳ ಪಕ್ಕದಲ್ಲೇ ನಾವು ಇಡೀ ದಿನ ನಿಂತಿದ್ದೆವು. ಆದರೆ ಕೇವಲ ಉಪಸ್ಥಿತರಾಗಿರುವುದು, ನಾವು ಯೆಹೋವನಿಗಾಗಿ ಕೃತಜ್ಞತಾಭರಿತರಾಗಿರುವಂತೆ ಮಾಡಿತು.”
ದಣಿವು ಅಥವಾ ಆಯಾಸವಿದ್ದರೂ, ಪ್ರತಿನಿಧಿಗಳು, ಇತರ ದೇಶಗಳ ವರದಿಗಳಿಗೆ ಮತ್ತು ಲಾಯ್ಡ್ ಬ್ಯಾರಿ ಹಾಗೂ ಡ್ಯಾನಿಯಲ್ ಸಿಡ್ಲಿಕ್—ಇವರೂ ಆಡಳಿತ ಮಂಡಳಿಯ ಸದಸ್ಯರು—ಅವರ ಭಾಷಣಗಳಿಗೆ ಏಕಾಗ್ರತೆಯ ಗಮನದಿಂದ ಕಿವಿಗೊಟ್ಟರು. ಸಹೋದರ ಬ್ಯಾರಿ, “ಯೆಹೋವನು ಬಹು ಬಲವನ್ನು ದಯಪಾಲಿಸುತ್ತಾನೆ” ಎಂಬ ವಿಷಯವನ್ನು ವಿಕಸಿಸಿದರು ಮತ್ತು ವಿಭಿನ್ನ ಸಂಕಷ್ಟಗಳ ಎದುರಿನಲ್ಲೂ ಯೆಹೋವನು ತನ್ನ ಜನರಿಗೆ ವೃದ್ಧಿಕೊಟ್ಟು ಆಶೀರ್ವದಿಸಿರುವ ವಿಧವನ್ನು ಕಣ್ಣಿಗೆ ಕಟ್ಟುವಂಥ ವಿಧದಲ್ಲಿ ಎತ್ತಿತೋರಿಸಿದರು. ಸಹೋದರ ಸಿಡ್ಲಿಕ್ರ ಭಾಷಣದ ಶೀರ್ಷಿಕೆಯು, “ಯಾರಿಗೆ ಯೆಹೋವನು ದೇವರೋ ಅವರು ಸಂತೋಷಿತರು!” ಎಂಬುದಾಗಿತ್ತು. ಎರಡೂ ಭಾಷಣಗಳು, ಯೆಹೋವನ ಸಾಕ್ಷಿಗಳು ಪ್ರಸ್ತುತ ಎದುರಿಸುತ್ತಿರುವ ವಿರೋಧದ ನೋಟದಲ್ಲಿ ನಿರ್ದಿಷ್ಟವಾಗಿ ಸಮಯೋಚಿತವಾಗಿದ್ದವು. ನಿಜ ಸಂತೋಷವು, ಬಾಹ್ಯ ಅಂಶಗಳ ಮೇಲಲ್ಲ, ಬದಲಾಗಿ ಯೆಹೋವನೊಂದಿಗಿನ ನಮ್ಮ ಸಂಬಂಧದ ಮೇಲೆ ಮತ್ತು ಜೀವನದ ಕಡೆಗಿನ ನಮ್ಮ ಮನೋಭಾವದ ಮೇಲೆ ಅವಲಂಬಿಸಿರುತ್ತದೆ. “ನೀವು ಸಂತೋಷಿತರಾಗಿದ್ದೀರೊ?” ಎಂದು ಅವರು ಸಭಿಕರಿಗೆ ಹಾಕಿದ ಪ್ರಶ್ನೆಯು, ಅಬ್ಬರದ ಚಪ್ಪಾಳೆ ತಟ್ಟುವಿಕೆಯಿಂದ ಉತ್ತರಿಸಲ್ಪಟ್ಟಿತು.
“ತನ್ನ ಆನಂದವನ್ನು ಕಳೆದುಕೊಂಡಿದ್ದ” ಒಬ್ಬ ಸಹೋದರಿಯು ತದನಂತರ ಬರೆದುದು: “ಸಂತೋಷವು ನನ್ನ ನಿಲುಕಿನೊಳಗಿದೆಯೆಂದು ನನಗೆ ಒಮ್ಮೆಲೆ ಅರಿವಿಗೆ ಬಂತು. ನಾನು ನನ್ನ ಪ್ರಯತ್ನಗಳನ್ನು ತಪ್ಪಾದ ದಿಕ್ಕಿನಲ್ಲಿ ಉಪಯೋಗಿಸುತ್ತಿದ್ದೆ, ಮತ್ತು ಈ ಭಾಷಣದ ಮೂಲಕ, ನಾನು ಹೇಗೆ ಬದಲಾಗಬೇಕೆಂಬುದನ್ನು ಯೆಹೋವನು ನನಗೆ ತೋರಿಸಿದನು.” ಇನ್ನೊಬ್ಬ ಸಹೋದರನು ಘೋಷಿಸಿದ್ದು: “ಯೆಹೋವನ ಹೃದಯವನ್ನು ಹರ್ಷಗೊಳಿಸಲು ನಾನೀಗ ಹೋರಾಡಲು ಬಯಸುತ್ತೇನೆ. ನನ್ನ ಆಂತರ್ಯದಲ್ಲಿ ಅನುಭವಿಸಲು ಆರಂಭಿಸಿರುವ ಆನಂದವನ್ನು ಯಾವುದೂ ತಡೆಯದಿರುವಂತೆ ನಾನು ಬಯಸುತ್ತೇನೆ.”
ಕೂಟವು ಸಮಾಪ್ತಿಗೊಂಡಂತೆ, ಅಧ್ಯಕ್ಷರು ಹಾಜರಿಯನ್ನು ಅತ್ಯುತ್ಸಾಹದಿಂದ ಘೋಷಿಸಿದರು: 95,888—ಇದು ಫ್ರಾನ್ಸ್ನಲ್ಲಿರುವ ಯೆಹೋವನ ಸಾಕ್ಷಿಗಳ ಅತಿ ದೊಡ್ಡ ಕೂಟವಾಗಿತ್ತು!
ಅನೇಕರು ಆನಂದಾಶ್ರುಗಳೊಂದಿಗೆ ಹಾಡಿದ ಕೊನೆಯ ಗೀತೆ ಮತ್ತು ಕೊನೆಯ ಪ್ರಾರ್ಥನೆಯ ನಂತರ, ಸಹೋದರರು ಮಿಶ್ರ ಭಾವನೆಗಳೊಂದಿಗೆ ಮನೆಗೆ ತಮ್ಮ ಪ್ರಯಾಣವನ್ನು ಆರಂಭಿಸಿದರು. ಕೂಟದಲ್ಲಿದ್ದ ಹೃದಯೋಲ್ಲಾಸದ, ಸ್ನೇಹಪರ ವಾತಾವರಣವು ಗಮನಿಸಲ್ಪಡದೆ ಹೋಗಲಿಲ್ಲ. ಬಸ್ ಚಾಲಕರು, ಪ್ರತಿನಿಧಿಗಳ ಮನೋಭಾವದ ಕುರಿತು ಅನೇಕ ಸಕಾರಾತ್ಮಕ ಹೇಳಿಕೆಗಳನ್ನು ನುಡಿದರು. ಎಲ್ಲ 953 ಬಸ್ಗಳು, ವಸ್ತುಪ್ರದರ್ಶನ ಕೇಂದ್ರವನ್ನು ಒಂದು ಸ್ವಲ್ಪವೂ ಟ್ರ್ಯಾಫಿಕ್ ಜ್ಯಾಮ್ ಇಲ್ಲದೆ ಬಿಟ್ಟುಹೋಗುವಂತೆ ಸಾಧ್ಯಮಾಡಿದ ವ್ಯವಸ್ಥೆಯಿಂದಲೂ ಅವರು ತುಂಬ ಪ್ರಭಾವಿತರಾದರು! ರೈಲ್ವೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕಾರ್ಮಿಕರು, ಪ್ರತಿನಿಧಿಗಳ ನಡತೆಯನ್ನು ಸಹ ತುಂಬ ಗಣ್ಯಮಾಡಿದರು. ಅನೇಕ ಉತ್ತಮ ಚರ್ಚೆಗಳು ಆರಂಭಗೊಂಡವು ಮತ್ತು ಒಂದು ಒಳ್ಳೆಯ ಸಾಕ್ಷಿಯು ಕೊಡಲ್ಪಟ್ಟಿತು.
“ಮರುಭೂಮಿಯಲ್ಲಿ ಓಯಸಿಸ್”
ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಪ್ರೇರಿಸಿದ್ದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. . . . ಒಬ್ಬರನ್ನೊಬ್ಬರು ಎಚ್ಚರಿಸೋಣ. . . . ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ಈ ವಿಶೇಷ ಕೂಟವು, ಎಲ್ಲರಿಗೂ ತುಂಬ ಉತ್ತೇಜನದ ಮೂಲವಾಗಿತ್ತು, ಒಬ್ಬ ಸಹೋದರಿಯು ಅದನ್ನು ವರ್ಣಿಸಿದಂತೆ “ಮರುಭೂಮಿಯಲ್ಲಿ ಓಯಸಿಸ್” ಆಗಿತ್ತೆಂಬುದು ನಿಶ್ಚಯ! “ನಾವು ಚೇತನಗೊಳಿಸಲ್ಪಟ್ಟು, ಪ್ರೋತ್ಸಾಹಿಸಲ್ಪಟ್ಟು, ಹುರಿದುಂಬಿಸಲ್ಪಟ್ಟು ಮತ್ತು ಯೆಹೋವನ ಸೇವೆಯಲ್ಲಿ ಎಂದಿಗಿಂತಲೂ ಹೆಚ್ಚು ದೃಢನಿರ್ಧಾರವುಳ್ಳವರಾಗಿ ಹಿಂದಿರುಗಿದೆವು” ಎಂದು, ಟೊಗೋ ಬ್ರಾಂಚ್ನಿಂದ ಬಂದಿದ್ದ ಸಹೋದರರು ಬರೆದರು. “ಮನಗುಂದಿದವರು ಮನೆಗೆ ಹೋಗುವಾಗ ಸಂತೋಷಿತರಾಗಿದ್ದರು,” ಎಂದು ಒಬ್ಬ ಸರ್ಕಿಟ್ ಮೇಲ್ವಿಚಾರಕರು ಹೇಳಿದರು. “ಸಹೋದರರು ಹುರಿದುಂಬಿಸಲ್ಪಟ್ಟರು ಮತ್ತು ಬಲಗೊಳಿಸಲ್ಪಟ್ಟರು” ಎಂದು ಇನ್ನೊಬ್ಬರು ಹೇಳಿದರು. “ನಾವು ಯೆಹೋವನ ಸಂಸ್ಥೆಯೊಂದಿಗೆ ಇಷ್ಟು ಆಪ್ತರಾಗಿರುವ ಅನಿಸಿಕೆ ನಮಗೆ ಹಿಂದೆಂದೂ ಆಗಿರಲಿಲ್ಲ,” ಎಂದು ಬರೆಯುವಂತೆ ಒಬ್ಬ ದಂಪತಿಗಳು ಪ್ರಚೋದಿಸಲ್ಪಟ್ಟರು.
“ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡುವೆನು,” ಎಂದು ಕೀರ್ತನೆಗಾರನು ಘೋಷಿಸಿದನು. (ಕೀರ್ತನೆ 26:12) ಅಂತಹ ಕ್ರೈಸ್ತ ಕೂಟಗಳು, ಅಡಚಣೆಗಳ ಎದುರಿನಲ್ಲಿ ಒಂದು ದೃಢವಾದ ಆತ್ಮಿಕ ಆಧಾರವನ್ನು ಪುನಃ ಗಳಿಸಲು ಎಲ್ಲರನ್ನೂ ಶಕ್ತಗೊಳಿಸುತ್ತವೆ. “ಸಂಕಷ್ಟಗಳು ಏನೇ ಆಗಿರಲಿ, ಈ ಅಸಾಮಾನ್ಯವಾದ ಕ್ಷಣಗಳು ನಮ್ಮ ಹೃದಯಗಳಲ್ಲಿ ಆಳವಾಗಿ ಕೆತ್ತಲ್ಪಟ್ಟಿವೆ ಮತ್ತು ನಮಗೆ ಸಾಂತ್ವನ ನೀಡಲು ಯಾವಾಗಲೂ ಅಲ್ಲಿ ಇರುವವು.” ತದ್ರೀತಿಯಲ್ಲಿ ಒಬ್ಬ ಸಂಚರಣ ಮೇಲ್ವಿಚಾರಕರು ಬರೆದುದು: “ಕಷ್ಟಕರ ಸಮಯಗಳು ಬರುವಾಗ, ಪ್ರಮೋದವನದ ಈ ಮುನ್ರುಚಿಯ ಸ್ಮರಣೆಯು, ಅವುಗಳನ್ನು ನಿಭಾಯಿಸುವಂತೆ ನಮಗೆ ಸಹಾಯಮಾಡುವುದು.”
“ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ” ಎಂದು ಕೀರ್ತನೆ 96:7 ಉತ್ತೇಜಿಸುತ್ತದೆ. ನಿಸ್ಸಂದೇಹವಾಗಿ, ಫ್ರಾನ್ಸ್ನಲ್ಲಿ ಹೊಸ ಬ್ರಾಂಚ್ ಸೌಕರ್ಯಗಳ ಸಮರ್ಪಣೆಯು ಯೆಹೋವನಿಗೆ ಜನಜನಿತವಾದ ವಿಜಯವಾಗಿರುವುದು. ಇಂಥ ಪಟ್ಟುಹಿಡಿದ ಮತ್ತು ವ್ಯಾಪಕವಾದ ವಿರೋಧದ ಎದುರಿನಲ್ಲೂ, ಈ ಪ್ರಾಜೆಕ್ಟ್ನ ಯಶಸ್ವಿಯನ್ನು ಕೇವಲ ಆತನು ಮಾಡಸಾಧ್ಯವಿತ್ತು. ಫ್ರಾನ್ಸ್ನಲ್ಲಿರುವ ಯೆಹೋವನ ಸಾಕ್ಷಿಗಳು ‘ಕ್ರಿಸ್ತನ ಪ್ರೀತಿಯಲ್ಲಿ ನೆಲೆಗೊಂಡಿರಲು’ ಮತ್ತು ‘ತಮ್ಮ ಬೆಳಕನ್ನು ಪ್ರಕಾಶಿಸುವಂತೆ’ ಮಾಡಲು, ಎಂದಿಗಿಂತಲೂ ಹೆಚ್ಚು ದೃಢನಿಶ್ಚಿತರಾಗಿದ್ದಾರೆ. (ಯೋಹಾನ 15:9; ಮತ್ತಾಯ 5:16) ಸಮರ್ಪಣೆಯ ಕಾರ್ಯಕ್ರಮಕ್ಕೆ ಹಾಜರಾದವರೆಲ್ಲರೂ ಕೀರ್ತನೆಗಾರನ ಭಾವನೆಯಲ್ಲಿ ನಿಸ್ಸಂಕೋಚವಾಗಿ ಪಾಲ್ಗೊಂಡರು: “ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ.”—ಕೀರ್ತನೆ 118:23.
[ಪುಟ 26 ರಲ್ಲಿರುವ ಚಿತ್ರ]
ಲಾಯ್ಡ್ ಬ್ಯಾರಿ
[ಪುಟ 26 ರಲ್ಲಿರುವ ಚಿತ್ರ]
ಡ್ಯಾನಿಯಲ್ ಸಿಡ್ಲಿಕ್
[ಪುಟ 26 ರಲ್ಲಿರುವ ಚಿತ್ರ]
ವೀಲ್ಪ್ಯಾಂಟ್ ವಸ್ತುಪ್ರದರ್ಶನ ಕೇಂದ್ರದಲ್ಲಿದ್ದ ವಿಶೇಷ ಕಾರ್ಯಕ್ರಮಕ್ಕೆ 95,888 ಮಂದಿ ಹಾಜರಿದ್ದರು
[ಪುಟ 28 ರಲ್ಲಿರುವ ಚಿತ್ರ]
ಹಾಜರಿದ್ದವರಲ್ಲಿ ಸಾವಿರಾರು ಮಂದಿ, ಕಿವಿಗೊಡಲಿಕ್ಕಾಗಿ ನಿಂತುಕೊಂಡಿದ್ದರು ಅಥವಾ ನೆಲದ ಮೇಲೆ ಕುಳಿತುಕೊಂಡಿದ್ದರು