ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 6/15 ಪು. 9-11
  • ಬಹಳ ವಿಶೇಷವಾದ ಒಂದು ಮದುವೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಹಳ ವಿಶೇಷವಾದ ಒಂದು ಮದುವೆ
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಘಟನೆಗಾಗಿ ಸಿದ್ಧತೆಯನ್ನು ಮಾಡುವುದು
  • ಒಂದು ಆನಂದಭರಿತ ಸಂದರ್ಭ
  • ಪ್ರಯಾಣದ ಕಷ್ಟಗಳು
ಕಾವಲಿನಬುರುಜು—1998
w98 6/15 ಪು. 9-11

ಬಹಳ ವಿಶೇಷವಾದ ಒಂದು ಮದುವೆ

ಮೊಸಾಂಬೀಕ್‌ನ ಉತ್ತರದಲ್ಲಿ, ಮನೋಹರವಾದ ಪರ್ವತಗಳಿಂದ—ಕೆಲವೊಂದು ಶಿಲಾಮಯವಾದವುಗಳು, ಬೇರೆಯವು ಸೊಂಪಾಗಿ ಬೆಳೆದ ಸಸ್ಯಗಳಿಂದ ಆವರಿಸಲ್ಪಟ್ಟವುಗಳು—ಸುತ್ತುವರಿದಿರುವ ಒಂದು ಹುಲುಸಾದ ಕಣಿವೆಯು ನೆಲೆಸಿರುತ್ತದೆ. ಫಿಂಗೋ ಎಂಬ ಹಳ್ಳಿಯು ಇರುವುದು ಇಲ್ಲಿಯೇ. ಮೋಡಗಳಿಲ್ಲದ ಚಳಿಗಾಲದ ರಾತ್ರಿಗಳಂದು, ಆಕಾಶವು ನಕ್ಷತ್ರಗಳಿಂದ ಹೊಳೆಯುತ್ತದೆ, ಮತ್ತು ಚಂದ್ರನು ಎಷ್ಟು ಪ್ರಕಾಶಮಾನವಾಗಿರುತ್ತಾನೆಂದರೆ, ಹಳ್ಳಿಗರ ಹುಲ್ಲಿನ ಚಾವಣಿಗಳಿರುವ ಮನೆಗಳನ್ನು ಅದು ಬೆಳಗಿಸುತ್ತದೆ. ಈ ತೇಜಸ್ವಿ ಹಿನ್ನೆಲೆಯಲ್ಲೇ ಒಂದು ಅಪೂರ್ವವಾದ ಮದುವೆಯು ನಡೆಯಿತು.

ಈ ವಿಶೇಷ ಸಂದರ್ಭಕ್ಕೆ ಹಾಜರಾಗಲಿಕ್ಕಾಗಿ, ನೂರಾರು ಜನರು ಅನೇಕ ತಾಸುಗಳು, ಅನೇಕ ದಿನಗಳ ವರೆಗೂ ನಡೆದುಕೊಂಡು ಬಂದರು. ಕೆಲವರು, ಕತ್ತೆಕಿರುಬಗಳು, ಸಿಂಹಗಳು ಮತ್ತು ಆನೆಗಳಿರುವ ಆಶ್ರಯವಿಲ್ಲದ ಮತ್ತು ಅಪಾಯಕರವಾದ ಪ್ರದೇಶಗಳನ್ನು ದಾಟಿದರು. ವೈಯಕ್ತಿಕ ಗಂಟುಮೂಟೆಯಲ್ಲದೆ, ಅನೇಕ ಸಂದರ್ಶಕರು ತಮ್ಮೊಂದಿಗೆ ಕೋಳಿಗಳನ್ನು, ಆಡುಗಳನ್ನು ಮತ್ತು ತರಕಾರಿಗಳನ್ನು ತಂದರು. ಹಳ್ಳಿಯನ್ನು ತಲಪಿದಾಗ, ಸಾಮಾನ್ಯವಾಗಿ ಕ್ರೈಸ್ತ ಅಧಿವೇಶನಗಳಿಗಾಗಿ ಉಪಯೋಗಿಸಲ್ಪಡುತ್ತಿದ್ದ ಬಯಲು ಕ್ಷೇತ್ರಕ್ಕೆ ಅವರು ಹೋದರು. ಪ್ರಯಾಣದಿಂದಾಗಿ ದಣಿದಿದ್ದರೂ, ಅವರು ಸಂತೋಷದಿಂದಿದ್ದರು, ಮತ್ತು ಅವರ ನಗುಮುಖಗಳು ಮುಂದೆ ನಡೆಯಲಿದ್ದ ಸಂಗತಿಗಳ ಆತುರದ ನಿರೀಕ್ಷಣೆಯನ್ನು ಪ್ರತಿಬಿಂಬಿಸಿದವು.

ವಿವಾಹವಾಗುವವರು ಯಾರು? ಬಹಳ ಮಂದಿ ಇದ್ದರು! ಹೌದು, ಹಲವಾರು ದಂಪತಿಗಳು. ಇವರು, ವಾರ್ತಾಪತ್ರಿಕೆಯಲ್ಲಿ ಪ್ರಮುಖ ಸುದ್ದಿಯಾಗಿ ಪರಿಣಮಿಸಿದ ಸಾಮೂಹಿಕ ಮದುವೆಯ ಭಾಗವಾಗಿರಲಿಲ್ಲ. ವ್ಯತಿರಿಕ್ತವಾಗಿ, ಅವರು ಪ್ರಾಮಾಣಿಕ ಮತ್ತು ಒಳ್ಳೆಯ ಪ್ರಚೋದನೆಯುಳ್ಳ ದಂಪತಿಗಳಾಗಿದ್ದರು. ಇವರು ರೆಜಿಸ್ಟರ್‌ ಆಫೀಸ್‌ಗಳಿಂದ ದೂರದಲ್ಲಿದ್ದ ಪ್ರದೇಶಗಳಲ್ಲಿ ಜೀವಿಸುತ್ತಿದ್ದದ್ದರಿಂದ, ತಮ್ಮ ವಿವಾಹಗಳನ್ನು ರೆಜಿಸ್ಟರ್‌ ಮಾಡಲು ಅಶಕ್ತರಾಗಿದ್ದರು. ಅವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿದಾಗ, ಈ ದಂಪತಿಗಳಿಗೆ ವಿವಾಹದ ಕುರಿತಾದ ದೈವಿಕ ಮಟ್ಟಗಳ ಅರಿವಾಯಿತು. ವಿವಾಹದ ಆರಂಭಕರ್ತನಾದ ತಮ್ಮ ಸೃಷ್ಟಿಕರ್ತನನ್ನು ಮೆಚ್ಚಿಸಲಿಕ್ಕಾಗಿ, ದೇಶದ ನಿಯಮಗಳಿಗನುಸಾರ ತಾವು ವಿವಾಹವಾಗುವ ಅಗತ್ಯದ ಕುರಿತು ಅವರು ಕಲಿತುಕೊಂಡರು. ಯೋಸೇಫ ಮತ್ತು ಮರಿಯರು ಕೂಡ, ಯೇಸುವಿನ ಜನನದ ಸ್ವಲ್ಪ ಸಮಯಕ್ಕೆ ಮುಂಚೆ ನೋಂದಣಿಮಾಡಿಕೊಳ್ಳುವ ಆವಶ್ಯಕತೆಗಳಿಗೆ ಅನುಸಾರವಾಗಿ ನಡೆದುಕೊಂಡರು.—ಲೂಕ 2:1-5.

ಘಟನೆಗಾಗಿ ಸಿದ್ಧತೆಯನ್ನು ಮಾಡುವುದು

ಮೊಸಾಂಬೀಕ್‌ನಲ್ಲಿದ್ದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ ಸಹಾಯಮಾಡಲು ನಿರ್ಣಯಿಸಿತು. ಪ್ರಥಮವಾಗಿ, ನಿಯಮವು ಅವಶ್ಯಪಡಿಸಿದಂತಹ ಕಾರ್ಯವಿಧಾನಗಳನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ದೇಶದ ರಾಜಧಾನಿಯಾದ ಮಾಪುಟೋವಿನಲ್ಲಿದ್ದ ನ್ಯಾಯ ಮತ್ತು ಗೃಹಖಾತೆಗಳನ್ನು ಸಂಪರ್ಕಿಸಲಾಯಿತು. ತರುವಾಯ, ಟೆಟೇ ಪ್ರಾಂತದ ರಾಜಧಾನಿ ನಗರದಲ್ಲಿದ್ದ ಮಿಷನೆರಿಗಳು, ಹೆಚ್ಚಿನ ಏರ್ಪಾಡುಗಳನ್ನು ಮಾಡಲಿಕ್ಕಾಗಿ ಸ್ಥಳಿಕ ಅಧಿಕಾರಿಗಳನ್ನು ಸಂಪರ್ಕಿಸಿದರು. ಮಿಷನೆರಿಗಳು, ಹಾಗೂ ಪ್ರಮಾಣಪತ್ರಗಳನ್ನು ಕೊಡುವ ಕಛೇರಿ ಹಾಗೂ ಪ್ರಜಾ ಗುರುತು ಇಲಾಖೆಯ ಅಧಿಕಾರಿಗಳು, ಫಿಂಗೋ ಹಳ್ಳಿಗೆ ಪ್ರಯಾಣಿಸುವಂತೆ ಒಂದು ತಾರೀಖನ್ನು ಗೊತ್ತುಪಡಿಸಲಾಯಿತು. ಅಷ್ಟರೊಳಗೆ ಬ್ರಾಂಚ್‌ ಆಫೀಸು, ಇದರಲ್ಲಿ ಒಳಗೂಡಿದ್ದ ಎಲ್ಲ ಸಭೆಗಳಿಗೆ ನಿರ್ದೇಶನವನ್ನು ಒದಗಿಸಿದಂತಹ ಒಂದು ವಿವರಣಾ ಪತ್ರವನ್ನು ಕಳುಹಿಸಿತು. ಸಾಕ್ಷಿಗಳು ಹಾಗೂ ಸ್ಥಳಿಕ ಅಧಿಕಾರಿಗಳು ಇಬ್ಬರೂ, ಆ ಅಪೂರ್ವ ಘಟನೆಗಾಗಿ ಕಾತುರದಿಂದ ಎದುರುನೋಡಿದರು.

ಮೇ 18, 1997ರ ಆದಿತ್ಯವಾರದಂದು, ಸರಕಾರಿ ಅಧಿಕಾರಿಗಳೊಂದಿಗೆ ಮೂವರು ಮಿಷನೆರಿಗಳು ಫಿಂಗೋ ಹಳ್ಳಿಗೆ ಆಗಮಿಸಿದರು. ಸ್ಥಳಿಕ ಅಧಿಕಾರಿಗಳು, ಆಡಳಿತ ಕಟ್ಟಡದ ಪಕ್ಕದಲ್ಲಿಯೇ ಈ ಅಧಿಕಾರಿಗಳಿಗೆ ಸುಖದಾಯಕವಾದ ವಸತಿಸೌಕರ್ಯಗಳನ್ನು ನಿರ್ಮಿಸಿದರು. ಆದರೆ, ಸಂದರ್ಶಿಸುತ್ತಿದ್ದ ಈ ಅಧಿಕಾರಿಗಳು, ಯೆಹೋವನ ಸಾಕ್ಷಿಗಳ ಅತಿಥಿಸತ್ಕಾರದಿಂದ ಎಷ್ಟು ಪ್ರಭಾವಿತರಾದರೆಂದರೆ, ಇದ್ದಕ್ಕಿದ್ದಂತೆ ಅನುಗೊಳಿಸಲ್ಪಟ್ಟಿದ್ದ ಗುಡಿಸಲಿನಲ್ಲೇ ಮಿಷನೆರಿಗಳೊಂದಿಗೆ ತಂಗಲು ಅವರು ಇಷ್ಟಪಟ್ಟರು. ಅಡುಗೆಭಟ್ಟರಲ್ಲಿ ಒಬ್ಬರು, ಸ್ಥಳಿಕ ಸಭೆಯಲ್ಲಿನ ಒಬ್ಬ ಹಿರಿಯರಾಗಿದ್ದಾರೆ ಮತ್ತು ಮದುವೆಯ ಸಿದ್ಧತೆಯಲ್ಲಿ ತೀರ ಕೀಳುಮಟ್ಟದ ಕೆಲಸಗಳನ್ನು ಮಾಡುತ್ತಿದ್ದ ಸ್ವಯಂಸೇವಕರಲ್ಲಿ ಒಬ್ಬರು ಸಂಚರಣ ಮೇಲ್ವಿಚಾರಕರಾಗಿದ್ದಾರೆ ಎಂಬುದನ್ನು ತಿಳಿದುಕೊಂಡು ಅವರು ಆಶ್ಚರ್ಯಪಟ್ಟರು. ಗುಣುಗುಟ್ಟದೆ ಒಂದು ಸರಳವಾದ ಗುಡಿಸಲಿನಲ್ಲಿ ಉಳಿದುಕೊಂಡು, ಒಂದು ಚಿಕ್ಕ ಡಬ್ಬಿಯನ್ನು ಉಪಯೋಗಿಸುತ್ತಾ ಸ್ನಾನಮಾಡಿದ ಮಿಷನೆರಿಗಳ ಒಳ್ಳೆಯ ಹಾಸ್ಯಪ್ರಜ್ಞೆಯನ್ನೂ ಅವರು ಗಮನಿಸಿದರು. ಇಷ್ಟು ಭಿನ್ನವಾದ ಹಿನ್ನೆಲೆಗಳಿಂದ ಬಂದ ಜನರ ನಡುವೆ ಇಷ್ಟೊಂದು ಬಲವಾದ ಬಂಧವನ್ನು ಅವರು ಹಿಂದೆಂದೂ ನೋಡಿರಲಿಲ್ಲ. ಆದರೆ, ಅತಿ ಹೆಚ್ಚಾಗಿ ಅವರ ಮನತಾಕಿದ ಸಂಗತಿಯೇನೆಂದರೆ, ದೇಶದ ನಿಯಮ ಮತ್ತು ದೇವರ ಏರ್ಪಾಡಿಗೆ ಹೊಂದಿಕೆಯಲ್ಲಿ ಬರಲಿಕ್ಕಾಗಿ ದೊಡ್ಡ ತ್ಯಾಗಗಳನ್ನು ಮಾಡುವುದರಲ್ಲಿ ತೋರಿಸಲ್ಪಟ್ಟ ನಂಬಿಕೆಯೇ.

ಒಂದು ಆನಂದಭರಿತ ಸಂದರ್ಭ

ದಂಪತಿಗಳು ಆಗಮಿಸಿದಂತೆ, ಅವರು ವಿವಾಹದ ಈ ಪ್ರಥಮ ಹಂತಕ್ಕಾಗಿ ತತ್‌ಕ್ಷಣವೇ ತಯಾರಿ ನಡೆಸಿದರು: ಜನನ ಪತ್ರವನ್ನು ಪಡೆದುಕೊಳ್ಳುವುದು. ತಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲಿಕ್ಕಾಗಿ ಎಲ್ಲರೂ ತಾಳ್ಮೆಯಿಂದ ಪೌರ ನೋಂದಣಿ ತಂಡದ ಮುಂದೆ ಸಾಲಾಗಿ ನಿಂತು ಕಾದರು. ಅನಂತರ ಅವರು ತಮ್ಮ ಫೋಟೋವನ್ನು ತೆಗೆಸಿಕೊಳ್ಳಲಿಕ್ಕಾಗಿ ಇನ್ನೊಂದು ಸಾಲಿಗೆ ಮುಂದುವರಿದರು. ತದನಂತರ ಅವರು ತಮ್ಮ ಗುರುತು ಚೀಟಿಗಳನ್ನು ಪಡೆದುಕೊಳ್ಳಲಿಕ್ಕಾಗಿ ಪ್ರಜಾ ಗುರುತು ಇಲಾಖೆಯ ತಂಡದ ಬಳಿಗೆ ಹೋದರು. ಮುಂದೆ ಅವರು, ತುಂಬ ಅಪೇಕ್ಷಿಸಲ್ಪಟ್ಟಿದ್ದ ವಿವಾಹದ ಪ್ರಮಾಣಪತ್ರದ ತಯಾರಿಗಾಗಿ ಪುನಃ ಪೌರ ನೋಂದಣಿ ತಂಡಕ್ಕೆ ಹಿಂದಿರುಗಿ ಹೋದರು. ಇದನ್ನನುಸರಿಸಿ, ಮೈಕ್‌ನಲ್ಲಿ ತಮ್ಮ ಹೆಸರುಗಳು ಕರೆಯಲ್ಪಡುವ ತನಕ ಅವರು ತಾಳ್ಮೆಯಿಂದ ಕಾದುನಿಂತರು. ವಿವಾಹದ ಪ್ರಮಾಣಪತ್ರಗಳ ವಿತರಣೆಯು ಒಂದು ಭಾವನಾತ್ಮಕ ದೃಶ್ಯವಾಗಿತ್ತು. ಪ್ರತಿಯೊಬ್ಬ ದಂಪತಿಗಳು ತಮ್ಮ ವಿವಾಹದ ಪ್ರಮಾಣಪತ್ರವನ್ನು ಒಂದು ಅಮೂಲ್ಯವಾದ ಪಾರಿತೋಷಕದಂತೆ ಮೇಲೆತ್ತಿ ಹಿಡಿದಾಗ ಅಪಾರವಾದ ಆನಂದವಿತ್ತು.

ಇದೆಲ್ಲವೂ ಸುಡುಬಿಸಿಲಿನಲ್ಲಿ ನಡೆಯಿತು. ಆದರೂ ಆ ಸಂದರ್ಭದ ಆನಂದವು, ಬಿಸಿಲು ಮತ್ತು ಧೂಳಿನಿಂದಾಗಿ ಭಂಗವಾಗಲಿಲ್ಲ.

ಪುರುಷರು ಅಚ್ಚುಕಟ್ಟಾಗಿ ಉಡುಪನ್ನು ಧರಿಸಿದ್ದು, ಅನೇಕರು ಸೂಟುಗಳನ್ನು ಮತ್ತು ಟೈಗಳನ್ನು ಹಾಕಿದ್ದರು. ಸ್ತ್ರೀಯರು ಸಾಂಪ್ರದಾಯಿಕ ರೀತಿಯಲ್ಲಿ, ತಮ್ಮ ಸೊಂಟಗಳ ಸುತ್ತ ಕ್ಯಾಪುಲಾನಾ ಎಂದು ಕರೆಯಲ್ಪಡುವ ಒಂದು ಉದ್ದವಾದ, ವಿವಿದ ವರ್ಣಗಳ ಬಟ್ಟೆಯನ್ನು ಒಳಗೊಂಡಿದ್ದ ಉಡುಪನ್ನು ಧರಿಸಿದ್ದರು. ಕೆಲವರು ಅದೇ ರೀತಿಯ ಬಟ್ಟೆಯಲ್ಲಿ ಸುತ್ತುವರಿಯಲ್ಪಟ್ಟಿದ್ದ ಕೂಸುಗಳನ್ನು ಹೊತ್ತುಕೊಂಡಿದ್ದರು.

ಕಾರ್ಯಕಲಾಪಗಳು ಸುಗಮವಾಗಿ ಸಾಗಿದವು, ಆದರೆ ತೀರ ಹೆಚ್ಚು ದಂಪತಿಗಳಿದ್ದುದರಿಂದ, ಒಂದೇ ದಿನದಲ್ಲಿ ಕಾನೂನು ಕ್ರಮಗಳನ್ನು ಮಾಡಿಮುಗಿಸಲು ಕಷ್ಟವಾಯಿತು. ಕತ್ತಲು ಕವಿದಾಗ, ಸರಕಾರಿ ಅಧಿಕಾರಿಗಳು, ದಯಾಭಾವದಿಂದ ದಂಪತಿಗಳಿಗೆ ತಮ್ಮ ಸೇವೆಗಳನ್ನು ಸಲ್ಲಿಸುವುದನ್ನು ಮುಂದುವರಿಸಲು ನಿರ್ಣಯಿಸಿದರು. “ನಮ್ಮ ಸಹೋದರರು” ಅಲ್ಲಿರಲಿಕ್ಕಾಗಿ ದೊಡ್ಡ ತ್ಯಾಗವನ್ನು ಮಾಡಿರುವುದರಿಂದ, ಅವರು ನಮಗಾಗಿ ಕಾಯುತ್ತಾ ಇರುವಂತೆ ನಾವು ಬಿಟ್ಟುಹೋಗಲು ಸಾಧ್ಯವಿಲ್ಲವೆಂದು ಅವರು ಹೇಳಿದರು. ಸಹಕಾರ ಮತ್ತು ಆತ್ಮತ್ಯಾಗದ ಈ ಮನೋಭಾವವನ್ನು ಎಂದೂ ಮರೆಯಲಾಗದು.

ರಾತ್ರಿಯಾದಂತೆ, ವಿಪರೀತ ಚಳಿಯು ಆರಂಭವಾಯಿತು. ಕೆಲವರು ಮಾತ್ರ ಗುಡಿಸಲುಗಳಲ್ಲಿ ತಂಗಿದರು, ಹೆಚ್ಚಿನ ದಂಪತಿಗಳು ಹೊರಗಿದ್ದು, ಬೆಂಕಿಯ ಸುತ್ತಲೂ ಗುಂಪುಗೂಡಿದ್ದರು. ಇದು, ಆ ಸಂದರ್ಭದ ಸಂತೋಷವನ್ನು ಕುಗ್ಗಿಸಲಿಲ್ಲ. ಬೆಂಕಿಯ ಚಟಚಟ ಸದ್ದಿಗಿಂತಲೂ, ನಗೆ ಮತ್ತು ನಾಲ್ಕು ಭಾಗದ ಸ್ವರಮೇಳದಲ್ಲಿ ಹಾಡಲ್ಪಟ್ಟ ಹಾಡುಗಳ ಶಬ್ದವು ದೊಡ್ಡದಾಗಿತ್ತು. ಹೊಸದಾಗಿ ಪಡೆದುಕೊಂಡಿದ್ದ ದಸ್ತಾವೇಜುಗಳನ್ನು ತಮ್ಮ ಕೈಗಳಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾ, ಅನೇಕರು ತಮ್ಮ ಪ್ರಯಾಣದ ಕುರಿತಾದ ಕಥೆಗಳನ್ನು ಹಂಚಿಕೊಂಡರು.

ತಮ್ಮ ವಿವಾಹಗಳನ್ನು ರೆಜಿಸ್ಟರ್‌ ಮಾಡುವುದಕ್ಕಾಗಿ ಆದ ಖರ್ಚನ್ನು ಕೊಡಲಿಕ್ಕಾಗಿ, ಬೆಳಗಾಗುತ್ತಲೇ ಕೆಲವರು ತಮ್ಮ ಕೋಳಿಗಳನ್ನು, ಆಡುಗಳನ್ನು ಮತ್ತು ತರಕಾರಿಗಳನ್ನು ಮಾರಲು ಹಳ್ಳಿಯ ಮಧ್ಯಭಾಗಕ್ಕೆ ಧೈರ್ಯದಿಂದ ಹೋದರು. ಈ ಪ್ರಾಣಿಗಳ ನಿಜವಾದ ಬೆಲೆಗಿಂತ ತುಂಬ ಕಡಿಮೆಯಾದ ಬೆಲೆಯಲ್ಲಿ ಅವುಗಳನ್ನು ಮಾರುತ್ತಾ, ಅನೇಕರು ನಿಜವಾಗಿಯೂ ಈ ಪ್ರಾಣಿಗಳ “ಬಲಿದಾನಗಳನ್ನು” ಮಾಡಿದರು. ಬಡ ಜನರಿಗೆ, ಒಂದು ಆಡು ಅಮೂಲ್ಯವಾದ ಮತ್ತು ದುಬಾರಿಯಾದ ವಸ್ತು ಆಗಿದೆ; ಆದರೂ ವಿವಾಹವಾಗಿ, ತಮ್ಮ ಸೃಷ್ಟಿಕರ್ತನನ್ನು ಮೆಚ್ಚಿಸಲಿಕ್ಕಾಗಿ ಅವರು ಈ ತ್ಯಾಗವನ್ನು ಮಾಡಲು ಸಿದ್ಧರಿದ್ದರು.

ಪ್ರಯಾಣದ ಕಷ್ಟಗಳು

ದಂಪತಿಗಳಲ್ಲಿ ಕೆಲವು ಮಂದಿ, ಅಲ್ಲಿ ಕೂಡಿಬರಲಿಕ್ಕಾಗಿ ತುಂಬ ದೂರದಿಂದ ನಡೆದುಬಂದಿದ್ದರು. ಇದು ಶಾಂಬೊಕೊ ಮತ್ತು ಅವನ ಹೆಂಡತಿಯಾದ ನಾಕುಲಿರಾಳ ವಿಷಯದಲ್ಲಿ ಸತ್ಯವಾಗಿತ್ತು. ಬೆಂಕಿಯ ಹತ್ತಿರ ಕುಳಿತುಕೊಂಡು ತಮ್ಮ ಪಾದಗಳನ್ನು ಬೆಚ್ಚಗೆಮಾಡಿಕೊಳ್ಳುತ್ತಿದ್ದ ಸಮಯದಲ್ಲಿ, ಆ ಘಟನೆಯ ಎರಡನೆಯ ರಾತ್ರಿಯಂದು ಅವರು ತಮ್ಮ ಕಥೆಯನ್ನು ಹೇಳಿದರು. 77 ವರ್ಷ ಪ್ರಾಯದವರಾಗಿದ್ದು, ಒಂದು ಕಣ್ಣು ಕುರುಡಾಗಿದ್ದು, ಇನ್ನೊಂದರಲ್ಲಿ ದೃಷ್ಟಿಯು ಕಡಿಮೆಯಾಗಿತ್ತಾದರೂ, ಶಾಂಬೊಕೊ ತಮ್ಮ 52 ವರ್ಷದಷ್ಟು ಹಳೆಯ ಬಂಧನವನ್ನು ಕಾನೂನುಬದ್ಧಗೊಳಿಸಲು ದೃಢನಿರ್ಧಾರವುಳ್ಳವರು ಆಗಿದುದರಿಂದ, ತಮ್ಮ ಸಭೆಯ ಉಳಿದವರೊಂದಿಗೆ ಮೂರು ದಿನಗಳ ವರೆಗೆ ಬರಿಗಾಲಿನಲ್ಲಿ ನಡೆದುಬಂದರು.

72 ವರ್ಷ ಪ್ರಾಯದ ಆ್ಯನ್‌ಸೆಲ್ಮು ಕೆಂಬೊ, ನೇರಿಯವರೊಂದಿಗೆ ಈಗಾಗಲೇ 50 ವರ್ಷಗಳಷ್ಟು ಕಾಲ ಜೊತೆಯಾಗಿ ಜೀವಿಸಿದ್ದರು. ಆ ಪ್ರಯಾಣದ ಕೆಲವೇ ದಿನಗಳ ಮುಂಚೆ, ಅವರು ತಮ್ಮ ತೋಟದಲ್ಲಿ ಸಾಗುವಳಿಮಾಡುತ್ತಿದ್ದಾಗ, ಒಂದು ದೊಡ್ಡ ಮುಳ್ಳು ಅವರ ಕಾಲನ್ನು ಗಂಭೀರವಾಗಿ ಚುಚ್ಚಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ತುರ್ತಾಗಿ ಕೊಂಡೊಯ್ಯಲಾಯಿತು. ಹಾಗಿದ್ದರೂ, ಫಿಂಗೋ ಹಳ್ಳಿಯ ವರೆಗೆ ನೋವಿನಿಂದ ಕುಂಟುತ್ತಾ, ಕಾಲ್ನಡಿಗೆಯಲ್ಲಿ ಪ್ರಯಾಣವನ್ನು ಮಾಡಲು ನಿರ್ಣಯಿಸಿದರು. ಅಲ್ಲಿಗೆ ತಲಪಲು ಅವರಿಗೆ ಮೂರು ದಿನಗಳು ಹಿಡಿದವು. ವಿವಾಹದ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದಾಗ, ಆ್ಯನ್‌ಸೆಲ್ಮುವಿಗೆ ತಮ್ಮ ಆನಂದವನ್ನು ತಡೆದುಕೊಳ್ಳಲಾಗಲಿಲ್ಲ.

ಇನ್ನೊಬ್ಬ ಗಮನಾರ್ಹವಾದ ನವವಿವಾಹಿತನು, ಮಾಜಿ ಬಹುಪತ್ನೀಕ ಇವಾನ್ಸ್‌ ಸಿನೊಯಾ ಆಗಿದ್ದನು. ಅವನು ಆರಂಭದಲ್ಲಿ ದೇವರ ವಾಕ್ಯದ ಸತ್ಯವನ್ನು ಕಲಿತುಕೊಂಡಾಗ, ತನ್ನ ಮೊದಲ ಪತ್ನಿಯೊಂದಿಗೆ ತನ್ನ ಬಂಧವನ್ನು ಕಾನೂನುಬದ್ಧಗೊಳಿಸಲು ನಿರ್ಣಯಿಸಿದನು. ಆದರೆ ಅವಳು ಇದನ್ನು ನಿರಾಕರಿಸಿ, ಪರಪುರುಷನ ಹಿಂದೆ ಹೋದಳು. ಅವನ ಎರಡನೆಯ ಹೆಂಡತಿಯು—ಅವಳೂ ಬೈಬಲನ್ನು ಅಭ್ಯಾಸಿಸುತ್ತಿದ್ದಾಳೆ—ಅವನೊಂದಿಗೆ ವಿವಾಹವಾಗಲು ಒಪ್ಪಿದಳು. ಅವರಿಬ್ಬರೂ, ಸಿಂಹಗಳು ಮತ್ತು ಇತರ ಕಾಡು ಪ್ರಾಣಿಗಳಿರುವ ಒಂದು ಅಪಾಯಕಾರಿ ಪ್ರದೇಶದ ಮೂಲಕ ನಡೆದುಬಂದರು. ಮೂರು ದಿನಗಳ ಪ್ರಯಾಣದ ನಂತರ, ಅವರು ಕೂಡ ಕಾನೂನುಬದ್ಧವಾಗಿ ವಿವಾಹವಾಗುವುದರಲ್ಲಿ ಯಶಸ್ವಿಯಾದರು.

ಮಿಷನೆರಿಗಳು ಮತ್ತು ಅಧಿಕಾರಿಗಳು ಆಗಮಿಸಿದ ಐದು ದಿನಗಳ ಬಳಿಕ, ಶುಕ್ರವಾರದಂದು ಕೆಲಸವು ಪೂರೈಸಲ್ಪಟ್ಟಿತು. ಫಲಿತಾಂಶವಾಗಿ, 468 ಗುರುತು ಚೀಟಿಗಳು ಮತ್ತು 374 ಜನನ ಪ್ರಮಾಣಪತ್ರಗಳು ಕೊಡಲ್ಪಟ್ಟವು. 233 ವಿವಾಹ ಪ್ರಮಾಣಪತ್ರಗಳನ್ನು ಕೊಡಲಾಯಿತು! ವಾತಾವರಣವು ಸುಖಭಾವದ್ದಾಗಿತ್ತು. ಬಳಲಿಕೆಯ ಎದುರಿನಲ್ಲೂ, ಪ್ರಯತ್ನವು ಸಾರ್ಥಕವಾಗಿತ್ತೆಂದು ಎಲ್ಲರೂ ಒಪ್ಪಿಕೊಂಡರು. ನಿಸ್ಸಂದೇಹವಾಗಿ, ಆ ಸಂದರ್ಭವು ಒಳಗೂಡಿದ್ದವರೆಲ್ಲರ ಹೃದಮನಗಳಲ್ಲಿ ಅಚ್ಚಳಿಯದೆ ಉಳಿಯುವುದು. ಅದು ನಿಜವಾಗಿಯೂ ಬಹಳ ವಿಶೇಷವಾದ ಒಂದು ಮದುವೆಯಾಗಿತ್ತು!

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ