ಕುಚೋದ್ಯಗಾರರ ವಿಷಯದಲ್ಲಿ ಎಚ್ಚರಿಕೆ!
ಇಂದು, ಭವಿಷ್ಯನುಡಿಗಳು ಹೇರಳವಾಗಿವೆ ಮತ್ತು ಭವಿಷ್ಯಶಾಸ್ತ್ರ ವ್ಯವಹಾರವು ತುಂಬ ಏಳಿಗೆಹೊಂದುತ್ತಿದೆ. ಲಂಡನಿನ ದ ಡೈಲಿ ಟೆಲಿಗ್ರಾಫ್ ಗಮನಿಸುವುದೇನೆಂದರೆ, “2000 ಇಸವಿಯು ಹೆಚ್ಚು ನಿಕಟವಾದಂತೆ, ಅಸಾಮಾನ್ಯವಾದರೂ ಸಂಪೂರ್ಣವಾಗಿ ಅನಿರೀಕ್ಷಿತವಾಗಿರದ ಒಂದು ವಿಷಯವು ಸಂಭವಿಸುತ್ತಿದೆ. ಲೋಕದಾದ್ಯಂತವಿರುವ ಸಾವಿರಾರು ಜನರು ಭವಿಷ್ಯತ್ತಿನ ಕುರಿತಾಗಿ ವಿಲಕ್ಷಣ ಭಾವವನ್ನು ಮತ್ತು ಅನೇಕವೇಳೆ ಭಯಂಕರವಾದ ದರ್ಶನಗಳನ್ನು ಅನುಭವಿಸುತ್ತಿದ್ದಾರೆ.” ಅನೇಕ ಪ್ರೇಕ್ಷಕರಿಗೆ, ಭವಿಷ್ಯತ್ತಿನಲ್ಲಿರುವ ಈ ತೀವ್ರವಾದ ಆಸಕ್ತಿಯು, ಸಿದ್ಧಿಗೊಳ್ಳದ, ಈ ಹಿಂದೆ ನಿರೀಕ್ಷಿಸಲ್ಪಟ್ಟ ಬದಲಾವಣೆಗಳ ಕೇವಲ ಒಂದು ಪುನರಾವೃತ್ತಿಯಾಗಿದೆ.
ಹತ್ತೊಂಬತ್ತನೆಯ ಶತಮಾನದಲ್ಲಿ ಕುದುರೆ ಗಾಡಿಗಳ ಸಂಚಾರವು ಹೆಚ್ಚಿದಂತೆ, ಕಾಲಕ್ರಮೇಣವಾಗಿ ಐರೋಪ್ಯ ನಗರಗಳು ಕುದುರೆ ಲದ್ದಿಯಿಂದ ಸಂಪೂರ್ಣವಾಗಿ ತುಂಬಿಹೋಗುವವೆಂದು ಒಬ್ಬ ಮನುಷ್ಯನು ಭವಿಷ್ಯನುಡಿದನು. ಅವನ ಭವಿಷ್ಯನುಡಿಯು ಸುಳ್ಳಾಗಿ ಪರಿಣಮಿಸಿತು ಎಂಬುದು ನಿಶ್ಚಯ. ಆದುದರಿಂದಲೇ, ಆಗಿಂದಾಗ್ಗೆ ಭವಿಷ್ಯನುಡಿಗಳು ಸುಳ್ಳಾಗುವ ವಿಧವನ್ನು ಒತ್ತಿಹೇಳುತ್ತಾ, ಲಂಡನಿನ ದ ಟೈಮ್ಸ್ ಹೇಳಿದ್ದು: “ಭವಿಷ್ಯತ್ತು ಕೇವಲ ಕುದುರೆ ಲದ್ದಿಯ ಒಂದು ರಾಶಿಯಾಗಿದೆ.”
ಅಪಾಯವನ್ನು ಮುಂದಾಗಿಯೇ ಅವಲೋಕಿಸುವವರನ್ನು ಇತರರು ಕುಚೋದ್ಯಮಾಡುತ್ತಾರೆ. ಉದಾಹರಣೆಗಾಗಿ, ಯು.ಎಸ್. ವಿಶ್ವವಿದ್ಯಾನಿಲಯದ ವ್ಯಾಪಾರ ಕ್ಷೇತ್ರದ ಪ್ರೊಫೆಸರನೊಬ್ಬನು, ಪರಿಸರಸಂಬಂಧವಾದ ಅವನತಿಯ ವಿಷಯದಲ್ಲಿ ಎಚ್ಚರಿಕೆ ನೀಡುವವರೊಂದಿಗೆ ಈ ಪ್ರವೃತ್ತಿಯು ಇನ್ನೂ ಕೆಡುತ್ತದೋ ಇಲ್ಲವೋ ಎಂಬುದಕ್ಕೆ ಪಂಥಾಹ್ವಾನವನ್ನು ಒಡ್ಡಿದನು. ನ್ಯೂ ಸೈಂಟಿಸ್ಟ್ ಪತ್ರಿಕೆಯಲ್ಲಿ ವರದಿಸಲ್ಪಟ್ಟಂತೆ, ಆ ಪ್ರೊಫೆಸರನು ವಾದಿಸುವುದೇನೆಂದರೆ, “ನಮ್ಮ ಜೀವಿತದ ಗುಣಮಟ್ಟವು ಉತ್ತಮಗೊಳ್ಳುತ್ತಿದೆ ಮತ್ತು ಖಂಡಿತವಾಗಿಯೂ ಅನಿಶ್ಚಿತ ಕಾಲದ ವರೆಗೂ ಉತ್ತಮಗೊಳ್ಳುತ್ತಾ ಮುಂದುವರಿಯುವುದು.”
ವಾದಗಳು ಹಾಗೂ ಪ್ರತಿವಾದಗಳ ಗೊಂದಲದ ನಡುವೆ, ಮೂಲಭೂತವಾಗಿ ಎಲ್ಲವೂ ಬದಲಾಗದೆ ಉಳಿಯುವುದು ಎಂದು ಅನೇಕರು ನಂಬುತ್ತಾರೆ. ಮಾನವ ವ್ಯವಹಾರಗಳಲ್ಲಿ ದೈವಿಕ ಹಸ್ತಕ್ಷೇಪದ ವಿಚಾರದ ಕುರಿತು ಕುಚೋದ್ಯಮಾಡುತ್ತಾ, ಅವರು ಸಾ.ಶ. ಪ್ರಥಮ ಶತಮಾನದಲ್ಲಿನ ಕುಚೋದ್ಯಗಾರರಂತಹದ್ದೇ ಮನೋಭಾವವನ್ನು ತೋರಿಸುತ್ತಾರೆ.
ಎಲ್ಲವೂ ಇದ್ದ ಹಾಗೆಯೇ ಇದೆಯೋ?
ಸುಮಾರು ಸಾ.ಶ. 64ರಲ್ಲಿ ಬರೆಯಲ್ಪಟ್ಟ, ಕ್ರೈಸ್ತ ಅಪೊಸ್ತಲ ಪೇತ್ರನ ಎರಡನೆಯ ಪ್ರೇರಿತ ಪತ್ರವು ಎಚ್ಚರಿಸಿದ್ದು: “ಕಡೇ ದಿವಸಗಳಲ್ಲಿ ತಮ್ಮ ಸ್ವಂತ ಅಭಿಲಾಷೆಗಳಿಗನುಸಾರವಾಗಿ ಮುಂದುವರಿಯುವ, ತಮ್ಮ ಕುಚೋದ್ಯದೊಂದಿಗೆ ಬರುವ ಕುಚೋದ್ಯಗಾರರಿರುವರು.”—2 ಪೇತ್ರ 3:3, NW.
ಕುಚೋದ್ಯಗಾರರು ತಮ್ಮ ಕುಚೋದ್ಯಕ್ಕೆ ಗುರಿಯಾದ ಸಂಗತಿಯನ್ನು ಹಾಸ್ಯಾಸ್ಪದವಾದದ್ದಾಗಿ ತೋರುವಂತೆ ಮಾಡಲು ಪ್ರಯತ್ನಿಸುತ್ತಾರೆ. ಕುಚೋದ್ಯಕ್ಕೆ ಬಲಿಯಾಗುವ ವ್ಯಕ್ತಿಯು, ಒಂದು ಸ್ವಾರ್ಥಪರ ಬಲೆಯೊಳಗೆ ಬೀಳುತ್ತಿರಬಹುದು. ಏಕೆಂದರೆ ಅನೇಕವೇಳೆ ಕುಚೋದ್ಯಗಾರರು, ತಮಗೆ ಕಿವಿಗೊಡುವವರು ತಮ್ಮದೇ ದೃಷ್ಟಿಕೋನವನ್ನು ಅಂಗೀಕರಿಸುವಂತೆ ಬಯಸುತ್ತಾರೆ. ಯಾರ ಕುರಿತಾಗಿ ಪೇತ್ರನು ಎಚ್ಚರಿಸಿದನೋ ಅಂತಹ ಕುಚೋದ್ಯಗಾರರಲ್ಲಿ ಕೆಲವರು ಈ ರೀತಿ—“ತಮ್ಮ ಸ್ವಂತ ಅಭಿಲಾಷೆಗಳಿಗನುಸಾರ ಮುಂದುವರಿಯುವರು”—ಇದ್ದಿರಬಹುದು. ತನ್ನ ವಾಚಕರಿಗೆ ಎಚ್ಚರಿಕೆ ನೀಡುವುದರಲ್ಲಿ, ಅಪೊಸ್ತಲನು ಅರ್ಥವತ್ತಾದ ಅಭಿವ್ಯಕ್ತಿಯ ರೂಪವನ್ನು ಉಪಯೋಗಿಸಿದನು. “ತಮ್ಮ ಕುಚೋದ್ಯದೊಂದಿಗೆ ಬರುವ ಕುಚೋದ್ಯಗಾರರ” ಆಗಮನದ ಕುರಿತು ಅವನು ಎಚ್ಚರಿಕೆ ನೀಡಿದನು.
ಆ ಪ್ರಥಮ ಶತಮಾನದ ಕುಚೋದ್ಯಗಾರರು, “ಅವನ ಈ ವಾಗ್ದತ್ತ ಸಾನ್ನಿಧ್ಯವು ಎಲ್ಲಿದೆ? ನಮ್ಮ ಪಿತೃಗಳು ಮರಣದಲ್ಲಿ ನಿದ್ರಿಸಿದ ದಿನದಿಂದ ಹಿಡಿದು, ಸಕಲವೂ ಸೃಷ್ಟಿಯ ಆದಿಯಲ್ಲಿದ್ದಂತೆಯೇ ನಿಖರವಾಗಿ ಮುಂದುವರಿಯುತ್ತಾ ಇದೆ” ಎಂದು ಹೇಳುತ್ತಾ, ಕ್ರಿಸ್ತನ “ವಾಗ್ದತ್ತ ಸಾನ್ನಿಧ್ಯ”ದ ವಾಸ್ತವಿಕತೆಯನ್ನು ಸಂದೇಹಿಸಿದರು. (2 ಪೇತ್ರ 3:4, NW) ಅವರಿಗೆ ಅದು ಆ ರೀತಿಯಲ್ಲಿ ಕಂಡುಬಂತು. ಆದರೂ, ಯೆರೂಸಲೇಮ್ ಪಟ್ಟಣಕ್ಕಾಗಿರುವ ವಿಪತ್ತನ್ನು ಯೇಸು ಹಿಂದೆ ಇಸವಿ ಸಾ.ಶ. 33ರಲ್ಲಿ ಮುಂತಿಳಿಸಿದ್ದನು. “ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು” ಎಂದು ಅವನು ಪ್ರಕಟಿಸಿದನು. ಆ ಎಚ್ಚರಿಕೆಯ ಕುರಿತು ಕುಚೋದ್ಯಮಾಡಿದವರು ಎಷ್ಟು ಅಪಾರ್ಥಮಾಡಿಕೊಂಡಿದ್ದರು! ಸಾ.ಶ. 70ರಲ್ಲಿ, ರೋಮನ್ ಸೇನೆಗಳು ಯೆರೂಸಲೇಮಿಗೆ ಮುತ್ತಿಗೆ ಹಾಕಿದವು ಮತ್ತು ಆ ಪಟ್ಟಣವನ್ನು ನಾಶಮಾಡಿಬಿಟ್ಟವು. ಇದರಿಂದಾಗಿ ಅದರ ನಿವಾಸಿಗಳಿಗೆ ತುಂಬ ಜೀವನಷ್ಟವಾಯಿತು. ಆ ಪಟ್ಟಣದ ಬಹುತೇಕ ನಿವಾಸಿಗಳು, ಈ ವಿಪತ್ತಿಗಾಗಿ ಏಕೆ ಸಿದ್ಧರಾಗಿರಲಿಲ್ಲ? ಏಕೆಂದರೆ ತನ್ನ ಮಗನಾದ ಯೇಸುವಿನ ಮೂಲಕ ದೇವರು ತಮ್ಮನ್ನು ಪರೀಕ್ಷಿಸಿದ್ದನೆಂಬುದನ್ನು ಅವರು ವಿವೇಚಿಸಿ ತಿಳಿದುಕೊಂಡಿರಲಿಲ್ಲ.—ಲೂಕ 19:43, 44.
ಸರ್ವಶಕ್ತನಾದ ದೇವರಿಂದ ಒಂದು ಭವಿಷ್ಯತ್ತಿನ ಹಸ್ತಕ್ಷೇಪವನ್ನು ಅಪೊಸ್ತಲ ಪೇತ್ರನು ಸೂಚಿಸುತ್ತಾನೆ. “ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ” ಎಂದು ಪೇತ್ರನು ಎಚ್ಚರಿಸುತ್ತಾನೆ. (2 ಪೇತ್ರ 3:10) ಆ ಸಮಯದಲ್ಲಿ ದೇವರು, ಇಡೀ ಭೂಮಂಡಲದಿಂದ ದೈವಭಕ್ತಿಯಿಲ್ಲದ ಜನರನ್ನು ತೆಗೆದುಹಾಕುವನು ಮತ್ತು ನೀತಿವಂತರೆಂದು ನಿರ್ಣಯಿಸಲ್ಪಟ್ಟವರನ್ನು ಮಾತ್ರ ಉಳಿಸುವನು. ಈ ಪತ್ರಿಕೆಯು ಅನೇಕಾವರ್ತಿ ವಿವರಿಸಿರುವಂತೆಯೇ, ಕ್ರಿಸ್ತ ಯೇಸುವಿನ “ಸಾನ್ನಿಧ್ಯ”ವು 1914ರಲ್ಲಿ ಆರಂಭವಾಯಿತು. ಆದರೆ ದುಷ್ಟತನವನ್ನು ತೆಗೆದುಹಾಕಲಿಕ್ಕಾಗಿ ಅವನು ದೇವರ ವಧಕಾರನೋಪಾದಿ ಕ್ರಿಯೆ ಕೈಕೊಳ್ಳುವ ಸಮಯವು ಇನ್ನೂ ಭವಿಷ್ಯತ್ತಿನ ಸಂಗತಿಯಾಗಿದೆ. ಆದಕಾರಣ, ಕುಚೋದ್ಯಗಾರರ ವಿಷಯದಲ್ಲಿ ಎಚ್ಚರಿಕೆಯಿಂದಿರಲಿಕ್ಕಾಗಿ ಕೊಡಲ್ಪಟ್ಟಿರುವ ಅಪೊಸ್ತಲನ ಎಚ್ಚರಿಕೆಯು ಇಂದು ಹೆಚ್ಚು ತುರ್ತಿನಿಂದ ಅನ್ವಯವಾಗುತ್ತದೆ.
ಮಾನವ ವ್ಯವಹಾರಗಳಲ್ಲಿ ದೈವಿಕ ಹಸ್ತಕ್ಷೇಪಕ್ಕಾಗಿ ನೀವು ಈಗಾಗಲೇ ದೀರ್ಘ ಸಮಯದಿಂದ ಕಾದಿರಬಹುದು. ನೀವು ಕುಚೋದ್ಯಗಾರರಿಗೆ ಬಲಿಪಶುವಾಗಿ ಪರಿಣಮಿಸದೆ, ತಾಳ್ಮೆಯಿಂದ ಕಾಯುತ್ತಾ ಮುಂದುವರಿಯಲು ನಿಮಗೆ ಯಾವುದು ಸಹಾಯ ಮಾಡುವುದು? ದಯವಿಟ್ಟು ಮುಂದೆ ಓದಿ.
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ . . . ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು.” ಅದು ಕುಚೋದ್ಯಮಾಡುವಂತಹ ಒಂದು ಎಚ್ಚರಿಕೆಯಾಗಿರಲಿಲ್ಲ. ರೋಮನ್ ಸೇನೆಗಳು ಯೆರೂಸಲೇಮನ್ನು ನಾಶಮಾಡಿ, ಬಹುವ್ಯಾಪಕವಾದ ಜೀವನಷ್ಟವನ್ನು ಉಂಟುಮಾಡಿದವು.