ನಗರದ ಎತ್ತರವಾದ ಕಟ್ಟಡಗಳಿಂದ—ಹಿಡಿದು ಟಂಡ್ರ ಅರಣ್ಯದ ವರೆಗೆ ಜನರ ಬಳಿಗೆ ಹೋಗಿರಿ
ಮಳೆಯಾಗಲಿ, ಹಿಮವಾಗಲಿ, ಆಲಿಕಲ್ಲಾಗಲಿ, ತೋಳಗಳಾಗಲಿ, ಪರ್ವತ ಸಿಂಹಗಳಾಗಲಿ, ಪ್ರತಿಕೂಲ ಪ್ರದೇಶವಾಗಲಿ ಅವರ ನಿರ್ಧಾರಾತ್ಮಕ ಮನೋಭಾವದ ಮೇಲೆ ತಣ್ಣೀರೆರಚಲು ಸಾಧ್ಯವಿರಲಿಲ್ಲ. ಪಶ್ಚಿಮ ಕರಾವಳಿಗೆ ತುರ್ತು ಟಪಾಲನ್ನು ಒಯ್ಯಲಿಕ್ಕಾಗಿ ಅವರು ಅಚ್ಚರಿಗೊಳಿಸುವ ವೇಗದೊಂದಿಗೆ, ಬಯಲು ಹುಲ್ಲುಗಾಡುಗಳನ್ನು, ಭೋರ್ಗರೆಯುವ ನದಿಗಳನ್ನು ಮತ್ತು ಆಳವಾದ ಕಣಿವೆಗಳನ್ನು ದಾಟುತ್ತಾ, 3,000 ಕಿಲೊಮೀಟರುಗಳ ದೂರದ ವರೆಗೆ ದೌಡಾಯಿಸಿದರು. ಅವರು ಯಾರಾಗಿದ್ದರು?
ಅವರು ಪೋನಿ ಎಕ್ಸ್ಪ್ರೆಸ್ನ ಎದೆಗಾರಿಕೆಯುಳ್ಳ ಯುವ ಸವಾರರಾಗಿದ್ದರು.a ಈ ಯುವ ಪುರುಷರಲ್ಲಿ ಅಂತಹ ದೃಢನಿರ್ಧಾರವನ್ನು ಕೆರಳಿಸಿದಂತಹ ಸಂಗತಿಯು ಯಾವುದಾಗಿತ್ತು? ಟಪಾಲನ್ನು ರವಾನಿಸುವಂತಹ, ಪಂಥಾಹ್ವಾನ, ಸಾಹಸ ಮತ್ತು ತೃಪ್ತಿಯೇ ಆಗಿದ್ದಿರಬಹುದು. ಆಸಕ್ತಿಕರವಾಗಿ, ಪ್ರತಿಯೊಬ್ಬ ಸವಾರನು, ಪ್ರಮುಖವಾದ ಟಪಾಲಿನೊಂದಿಗೆ ತನ್ನ ಚೀಲದಲ್ಲಿ ಒಂದು ಬೈಬಲನ್ನು ಒಯ್ಯುತ್ತಿದ್ದನು.
ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯದ ನಂತರ, ಹೆಚ್ಚು ಮಹತ್ತಾದ ದೃಢನಿರ್ಧಾರ, ಉತ್ಸಾಹ ಮತ್ತು ಭಕ್ತಿಯ ಆತ್ಮವು, ಕೆನಡದಲ್ಲೆಲ್ಲ ಇರುವ 1,13,000 ಸಮರ್ಪಿತ ರಾಜ್ಯ ಘೋಷಕರಿಂದ ತೋರಿಸಲ್ಪಟ್ಟಿದೆ. ಅವರನ್ನು ಯಾವುದು ಪ್ರಚೋದಿಸಿದೆ? ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಪ್ರೀತಿಯು, ಮುದ್ರಿತ ಪುಟ ಮತ್ತು ಬಾಯಿಮಾತಿನಿಂದ ರಾಜ್ಯ ಸತ್ಯವನ್ನು ರವಾನಿಸಲಿಕ್ಕಾಗಿ ಅವರನ್ನು ಪ್ರೇರಿಸುತ್ತದೆ. ಈ ಜೀವದಾಯಕ ಸತ್ಯವು, ಪೋನಿ ಎಕ್ಸ್ಪ್ರೆಸ್ನಿಂದ ರವಾನಿಸಲ್ಪಟ್ಟ ಬೇರೆ ಯಾವುದೇ ಟಪಾಲಿಗಿಂತ ಹೆಚ್ಚು ತುರ್ತಿನದ್ದಾಗಿದೆ. ಹೌದು, ಅದು ಪವಿತ್ರ ಬೈಬಲಿನ ಅಮೂಲ್ಯ ರಾಜ್ಯ ಸಂದೇಶವಾಗಿದೆ. ಇದೇ ಗ್ರಂಥವು ಪೋನಿ ಎಕ್ಸ್ಪ್ರೆಸ್ ಸವಾರರ ಚೀಲಗಳಲ್ಲಿ ಇರುತ್ತಿತ್ತು.—ಜ್ಞಾನೋಕ್ತಿ 2:21, 22; ಯೆಶಾಯ 2:2-4; 61:2; ಮತ್ತಾಯ 22:37-39; 24:14.
ಯೆಹೋವನಿಗಾಗಿ ಮತ್ತು ಜನರಿಗಾಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಟ್ಟದ್ದು
ಯೆಹೋವನ ಸಾಕ್ಷಿಗಳು ಜನರೊಂದಿಗೆ ರಾಜ್ಯದ ಕುರಿತಾಗಿ ಮಾತಾಡಲು ಇಷ್ಟಪಡುತ್ತಾರೆ. ಅವರದನ್ನು, ನಗರದ ಬಹುಮಹಡಿಗಳುಳ್ಳ ಕಟ್ಟಡಗಳಲ್ಲಿ, ದೂರದ ಟಂಡ್ರ ಸಮುದಾಯಗಳಲ್ಲಿ, ವಿಮಾನ ನಿಲ್ದಾಣದ ಟರ್ಮಿನಲ್ಗಳಲ್ಲಿ, ಬೀದಿಗಳಲ್ಲಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಟೆಲಿಫೋನ್ನಲ್ಲಿಯೂ ಮಾಡುತ್ತಿರುವುದನ್ನು ನೀವು ಕಂಡುಕೊಳ್ಳುವಿರಿ. ಅಂತಹ ವಿಭಿನ್ನ ಸ್ಥಳಗಳಲ್ಲಿ ಏಕೆ?
ಆರ್ಥಿಕ ಮತ್ತು ಜನಸಂಖ್ಯಾ ಪರಿಸ್ಥಿತಿಗಳಿಂದಾಗಿ ಹೇರಲ್ಪಟ್ಟಿರುವ ಬದಲಾಗುತ್ತಿರುವ ಜೀವನ ಶೈಲಿಗಳು, ಜನರನ್ನು ಮನೆಯಲ್ಲಿ ಕಂಡುಕೊಳ್ಳಲಿಕ್ಕಾಗಿ ಒಂದು ದುಸ್ಸಾಧ್ಯ ಪಂಥಾಹ್ವಾನವನ್ನು ಒಡ್ಡುತ್ತವೆ. ಅನೇಕ ವಿದ್ಯಮಾನಗಳಲ್ಲಿ, ಕುಟುಂಬದ ಮೂಲಭೂತ ಭೌತಿಕ ಆವಶ್ಯಕತೆಗಳ ಕಾಳಜಿವಹಿಸಲು ಗಂಡಹೆಂಡತಿ ಇಬ್ಬರೂ—ಅನೇಕ ವೇಳೆ ಆತ್ಮಿಕ ಅಗತ್ಯಗಳನ್ನು ಅಲಕ್ಷಿಸುತ್ತಾ—ಕೆಲಸಮಾಡುತ್ತಾರೆ. ಇಂತಹ ಒತ್ತಡಗಳ ನಡುವೆ, ಅವರಿಗೆ ತೀವ್ರವಾಗಿ ಹೃದಯೋಲ್ಲಾಸವನ್ನು ಉಂಟುಮಾಡುವ ನಿರೀಕ್ಷೆಯ ಸಂದೇಶದ ಅಗತ್ಯವಿದೆ. ಯೆಹೋವನ ಸಾಕ್ಷಿಗಳು ಸಂತೋಷದಿಂದ ಪ್ರತಿಕ್ರಿಯಿಸುತ್ತಾರೆ. ವಿವೇಚನಾಶಕ್ತಿ ಮತ್ತು ದಯೆಯನ್ನು ಉಪಯೋಗಿಸುತ್ತಾ, ಅವರು ಎಲ್ಲ ರೀತಿಯ ಜನರಿಗೆ ಸುವಾರ್ತೆಯನ್ನು ಒಂದು ಆಕರ್ಷಕ, ಆಲೋಚನಾ ಪ್ರೇರಕ ವಿಧದಲ್ಲಿ ತರಲು ಅವಕಾಶಗಳನ್ನು ಮಾಡಿಕೊಳ್ಳುತ್ತಾರೆ.—1 ತಿಮೊಥೆಯ 2:3, 4.
ಬೇರೆ ಭಾಷೆಗಳಲ್ಲಿ: ಯೇಸು ತನ್ನ ಹಿಂಬಾಲಕರಿಗೆ ‘ಹೋಗಿ, ಶಿಷ್ಯರನ್ನಾಗಿ ಮಾಡಿರಿ’ ಎಂದು ಆಜ್ಞಾಪಿಸಿದಾಗ, ಅವನು ಎಲ್ಲ ಭಾಷೆಗಳ ಜನರಿಗೆ ನಿರೀಕ್ಷೆಯ ಸಂದೇಶವನ್ನು ಕೊಂಡೊಯ್ಯುವುದರಲ್ಲಿ ಆರಂಭದ ಹೆಜ್ಜೆ ಮತ್ತು ದೃಢನಿರ್ಧಾರವನ್ನು ಅನುಮತಿಸಿದನು. (ಮತ್ತಾಯ 28:19) ಅನೇಕ ದೇಶಗಳಲ್ಲಿರುವಂತೆ, ಕೆನಡ ದೇಶವು ಬಹುರಾಷ್ಟ್ರೀಯ ಸಮಾಜವಾಗಿ ಪರಿಣಮಿಸಿದೆ, ಮತ್ತು ಅನೇಕ ರಾಜ್ಯ ಘೋಷಕರು ಹೊಸ ಭಾಷೆಗಳನ್ನು ಕಲಿತುಕೊಳ್ಳುವ ಮೂಲಕ ಅದಕ್ಕೆ ಹೊಂದಿಕೊಂಡಿದ್ದಾರೆ.
ಉದಾಹರಣೆಗಾಗಿ, ಆಲ್ಬರ್ಟಾದ ಎಡ್ಮಂಟನ್ನಲ್ಲಿ ಪೂರ್ಣ ಸಮಯದ ಶುಶ್ರೂಷಕರಾಗಿರುವ ಒಬ್ಬ ದಂಪತಿಗಳು, ತಮ್ಮ ನಗರದಲ್ಲಿ ಮ್ಯಾಂಡರಿನ್ ಚೈನೀಸ್ ಭಾಷೆಯನ್ನಾಡುವ ಜನರನ್ನು ತಲಪುವ ಅಗತ್ಯವನ್ನು ಮನಗಂಡರು. ಆದರೆ ಪ್ರಥಮವಾಗಿ ಆ ದಂಪತಿಗಳಿಗೆ ಆ ಭಾಷೆಯನ್ನು ಕಲಿಯುವ ಅಗತ್ಯವಿತ್ತು. ಆದುದರಿಂದ ಅವರು ಮ್ಯಾಂಡರಿನ್ ಭಾಷೆಯನ್ನಾಡುವ ವಿಶ್ವವಿದ್ಯಾನಿಲಯದ ಒಬ್ಬ ವಿದ್ಯಾರ್ಥಿಯನ್ನು ಸಂಪರ್ಕಿಸಿದರು. ಅವನು ಅವರಿಗೆ ಆ ಭಾಷೆಯನ್ನು ಕಲಿಸಲು ಮತ್ತು ಅದೇ ಸಮಯದಲ್ಲಿ ಅವರಿಂದ ಬೈಬಲ್ ಸತ್ಯಗಳನ್ನು ಕಲಿತುಕೊಳ್ಳಲು ಒಪ್ಪಿಕೊಂಡನು. ಎಂತಹ ಒಂದು ಆದರ್ಶ ಸನ್ನಿವೇಶ! 24 ತಿಂಗಳುಗಳೊಳಗೆ ಈ ಇಬ್ಬರು ಸಮರ್ಪಿತ ರಾಜ್ಯ ಘೋಷಕರು ಮ್ಯಾಂಡರಿನ್ ಭಾಷೆಯಲ್ಲಿ ಕಲಿಸಲು ಅರ್ಹರಾದರು. ಅದೇ ಸಮಯದಲ್ಲಿ, ಅವರ ಶಿಕ್ಷಕ/ವಿದ್ಯಾರ್ಥಿಯು, ಕ್ರೈಸ್ತ ದೀಕ್ಷಾಸ್ನಾನಕ್ಕೆ ಅರ್ಹನಾದನು.
ರಾಜ್ಯ ಘೋಷಕರು ಪ್ರೀತಿಯಿಂದ ಪ್ರಚೋದಿಸಲ್ಪಟ್ಟು, ಪೋಲಿಷ್, ರಷ್ಯನ್, ಮತ್ತು ವಿಯೆಟ್ನಾಮೀಸ್ನಂತಹ ಭಾಷೆಗಳನ್ನು ಕಲಿತಂತೆ, ಇತರ ನಗರಗಳಲ್ಲಿಯೂ ಇದೇ ರೀತಿಯ ಅನುಭವಗಳ ಅನುಭವವಾಗುತ್ತಿದೆ.
ರಸ್ತೆಯಲ್ಲಿ: ಒಂಟಿಗರಾಗಿ ಸವಾರಿ ಮಾಡಿದ ಕಳೆದ ಶತಮಾನದ ಪೋನಿ ಎಕ್ಸ್ಪ್ರೆಸ್ ಸವಾರರಂತೆ, ಬ್ರಿಟಿಷ್ ಕೊಲಂಬಿಯದ ಒಳಪ್ರದೇಶದಲ್ಲಿ ಕೆಲವು ರಾಜ್ಯ ಘೋಷಕರು, ಒಂಟಿ ಸವಾರರಾಗಿದ್ದಾರೆ. ಅವರ ಅಧಿಕಾಂಶ ಸಮಯವು, ಮರಗಾಡು ಪ್ರದೇಶದಿಂದ ಸಾಮಿಲ್ಗಳ ವರೆಗೆ, ಮರತುಂಬಿರುವ ಶಕ್ತಿಶಾಲಿಯಾದ ಟ್ರಕ್ಕುಗಳನ್ನು ಚಲಾಯಿಸುವ ತಮ್ಮ ಐಹಿಕ ಕೆಲಸದಲ್ಲಿ ಕಳೆಯಲ್ಪಡುತ್ತದೆ. ಇದು, ವಾಹನ ಸಂಚಾರ ಮತ್ತು ರಸ್ತೆಯಲ್ಲಿನ ಅಪಾಯಗಳ ಕುರಿತಾಗಿ ಸಂವಾದಮಾಡುತ್ತಾ, ಬೇರೆ ಟ್ರಕ್ ಚಾಲಕರೊಂದಿಗೆ ಸಿಬಿ (ಸಿಟಿಸನ್ ಬ್ಯಾಂಡ್) ರೇಡಿಯೊ ಮೂಲಕ ಸತತವಾದ ಸಂಪರ್ಕವನ್ನು ಇಡುವುದನ್ನು ಅವಶ್ಯಪಡಿಸುತ್ತದೆ.
ಸೃಜನಾತ್ಮಕ ರೀತಿಯಲ್ಲಿ, ಈ ರಾಜ್ಯ ಘೋಷಕರು ತಮ್ಮ ಸಿಬಿ ರೇಡಿಯೋಗಳನ್ನು ಅಪೂರ್ವವಾದ ರೀತಿಯಲ್ಲಿ ಉಪಯೋಗಿಸುತ್ತಾರೆ. ಅವರು ಪ್ರಚಲಿತ ಘಟನೆಗಳ ಕುರಿತಾಗಿ ಮಾತಾಡುವ ಮೂಲಕ ಸಿಬಿ ರೇಡಿಯೋದಲ್ಲಿ ಚರ್ಚೆಗಳನ್ನು ಆರಂಭಿಸುತ್ತಾರೆ. ಅನಂತರ ಅವರು ಚಾತುರ್ಯದಿಂದ ಬೈಬಲಿಗೆ ಸೂಚಿಸುತ್ತಾರೆ. ಒಂದು ಸಂದರ್ಭದಲ್ಲಿ ಒಬ್ಬ ಜೊತೆ ಟ್ರಕ್ ಚಾಲಕನು, ಸತ್ತವರಿಗಾಗಿರುವ ನಿರೀಕ್ಷೆಯ ಕುರಿತಾಗಿ ಬೈಬಲ್ ಏನನ್ನು ಹೇಳುತ್ತದೊ ಅದಕ್ಕೆ ಪ್ರತಿಕ್ರಿಯೆ ತೋರಿಸಿದನು. (ಯೋಹಾನ 5:28, 29; ಅ. ಕೃತ್ಯಗಳು 24:15) ಹೆದ್ದಾರಿಯಲ್ಲಿನ ಅಪಘಾತವೊಂದರಲ್ಲಾದ ಒಬ್ಬ ಜೊತೆ ಚಾಲಕನ ಮರಣವು, ಅವನನ್ನು ಗಾಢವಾಗಿ ಕ್ಷೋಭೆಗೊಳಿಸಿತ್ತು. ಅವನು ಕೃತಜ್ಞತಾಭಾವದಿಂದ ಒಂದು ಬೈಬಲ್ ಅಭ್ಯಾಸವನ್ನು ಸ್ವೀಕರಿಸಿದನು ಮತ್ತು ಈಗ ತನ್ನ ಜೊತೆಕೆಲಸಗಾರರು ಮತ್ತು ಸ್ನೇಹಿತರಿಗೆ ಸುವಾರ್ತೆಯನ್ನು ಘೋಷಿಸುತ್ತಿರುವುದನ್ನು ಕೇಳಿಸಿಕೊಳ್ಳಸಾಧ್ಯವಿದೆ. ಮುಂದೆ, ತನ್ನ ಮೃತ ಸ್ನೇಹಿತನ ವಿಧವೆಯೊಂದಿಗೆ ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಾಗ ಅವನಿಗೆ ಆನಂದವಾಯಿತು. ಈ ಅಸಾಮಾನ್ಯವಾದ ವಿಧದಲ್ಲಿ ಸತ್ಯದ ಜೀವದಾಯಕ ಸಂದೇಶವನ್ನು ಪ್ರಸ್ತುತಪಡಿಸಲು ಆರಂಭದ ಹೆಜ್ಜೆಯನ್ನು ತೆಗೆದುಕೊಂಡದ್ದಕ್ಕಾಗಿ ಎಂತಹ ಒಂದು ಬಹುಮಾನ!
ವಿಮಾನಗಳ ಮೂಲಕ: ಸತ್ಯದ ಅಮೂಲ್ಯ ಸಂದೇಶವನ್ನು ತಲಪಿಸುವ ವಿಷಯದಲ್ಲಿ ಹುರುಪಿನ ರಾಜ್ಯ ಘೋಷಕರು, ಜನರು ಎಲ್ಲಿ ಇದ್ದಾರೊ ಅಲ್ಲಿಗೆ ಹೋಗುತ್ತಾರೆ. ಅವರು ಚಿಕ್ಕ ವಿಮಾನಗಳ ಮೂಲಕ ‘ಹಳ್ಳಿಗೆ ಸೇರುತ್ತಾರೆ.’ (ಮತ್ತಾಯ 10:11, 12) ಸ್ವಲ್ಪ ಸಮಯದ ಹಿಂದೆ, ಸುವಾರ್ತೆಯನ್ನು ಸಾರುವ ಹುರುಪಿನಿಂದ ಪ್ರಚೋದಿಸಲ್ಪಟ್ಟು ಮತ್ತು ತಮ್ಮ ಸ್ವಂತ ಖರ್ಚಿನಲ್ಲಿ, ಎರಡು ವಿಮಾನ ಗುಂಪುಗಳು, ಟಂಡ್ರ ಅರಣ್ಯದ ವಿಸ್ತಾರವಾದ ಕ್ಷೇತ್ರದಲ್ಲಿ ಚದರಿರುವ ಜನರ ಬಳಿಗೆ ಹೋದವು. ಉತ್ತರ ಧ್ರುವ ವೃತ್ತಕ್ಕೆ 250 ಕಿಲೊಮೀಟರುಗಳ ಅಂತರವಿರುವಷ್ಟು ದೂರದ ವರೆಗೆ ಹೋಗುತ್ತಾ, ಪ್ರತಿಯೊಂದು ವಿಮಾನ ಗುಂಪು ಸುಮಾರು 3,000 ಕಿಲೊಮೀಟರುಗಳಷ್ಟು ಪ್ರಯಾಣಿಸಿತು ಮತ್ತು 14 ವಿಭಿನ್ನ ಸಮುದಾಯಗಳಲ್ಲಿ ಕೆಳಗಿಳಿಯಿತು. ಈ ದಣಿಯದ ಘೋಷಕರು, ತುಂಬ ದೂರದಲ್ಲಿರುವ ಜನರನ್ನು ತಲಪಲಿಕ್ಕಾಗಿ ಇಡೀ ಏಳು ದಿನಗಳ ವರೆಗೆ ಮುಂದುವರಿದರು.
ಇದೆಲ್ಲವು ಸಾರ್ಥಕವಾಗಿತ್ತೊ? ಈ ಸಮುದಾಯಗಳ ಮೇಲೆ ಬೈಬಲ್ ಸಂದೇಶವು ಬೀರಿದಂತಹ ಸಕಾರಾತ್ಮಕ ಪ್ರಭಾವದ ಕುರಿತಾಗಿ ಯೋಚಿಸಿರಿ. ಭೇಟಿಮಾಡುತ್ತಿದ್ದ ಶುಶ್ರೂಷಕರು, ಸಮೀಪ ಭವಿಷ್ಯತ್ತಿನಲ್ಲಿ ಪ್ರಮೋದವನ ಭೂಮಿಗಾಗಿರುವ ಯೆಹೋವನ ಉದ್ದೇಶವನ್ನು ತಿಳಿಸಿದಂತೆ, ಒಂದು ಅತ್ಯಾವಶ್ಯಕ ಆತ್ಮಿಕ ಅಗತ್ಯವನ್ನು ಪೂರೈಸಲು ಸಹಾಯಮಾಡಿದರು. (ಮತ್ತಾಯ 5:3) ಸಂದೇಶವಾಹಕರು ಹಿಂದಿರುಗಿ ಬಂದ ತುಂಬ ಸಮಯದ ಬಳಿಕವೂ, ಆ ಸಮುದಾಯಗಳಲ್ಲಿದ್ದ ಪ್ರಮಾಣಿಕ ಹೃದಯದ ಜನರು, ತಮ್ಮ ಹಸ್ತಗಳಲ್ಲಿ ಇರಿಸಲ್ಪಟ್ಟಿದ್ದ 542 ಬೈಬಲುಗಳು ಮತ್ತು ಬೈಬಲ್ ಅಭ್ಯಾಸ ಸಹಾಯಕಗಳು ಹಾಗೂ 3,000 ಪತ್ರಿಕೆಗಳನ್ನು ಓದಲು ಶಕ್ತರಾಗಿದ್ದರು.—ಅ. ಕೃತ್ಯಗಳು 12:24ನ್ನು ಹೋಲಿಸಿ.
ಟೆಲಿಫೋನ್ ಮೂಲಕ: ಸಾವಿರಾರು ನಗರ ವಾಸಿಗಳು, ಉಚ್ಚ ತಂತ್ರಜ್ಞಾನದ ಭದ್ರತೆಯುಳ್ಳ ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ಜೀವಿಸುತ್ತಾರೆ. ಹಾಗಿದ್ದರೂ, ಸಮರ್ಪಿತ ರಾಜ್ಯ ಘೋಷಕರು ಹುರುಪು ಮತ್ತು ವಿವೇಚನಾಶಕ್ತಿಯೊಂದಿಗೆ ಮುಂದುವರಿಯುತ್ತಾರೆ. ಈ ಜನರು ವಾಸಿಸುವ ಸ್ಥಳಕ್ಕೆ ಅವರು ಹೇಗೆ ಹೋಗಲು ಶಕ್ತರಾಗುತ್ತಾರೆ? ಮುಖಾಮುಖಿ ಸಂಪರ್ಕವು ಇಷ್ಟಕರವಾಗಿದ್ದರೂ, ಅನೇಕವೇಳೆ ಅಪಾರ್ಟ್ಮೆಂಟ್ ಲಾಬಿಯ (ಪ್ರವೇಶಾಂಗಣದ) ಇಂಟರ್ಕಾಮ್ ಅನ್ನು ಯಶಸ್ವಿಕರವಾಗಿ ಉಪಯೋಗಿಸಲಾಗುತ್ತದೆ. ಇದು ಅಸಾಧ್ಯವಾದಾಗ, ಅವರು ಟೆಲಿಫೋನ್ ಡೈರೆಕ್ಟರಿಯನ್ನು ಉಪಯೋಗಿಸಿ ಜನರಿಗೆ ಫೋನ್ ಮಾಡುತ್ತಾರೆ.
ಒಂದು ಬೆಳಿಗ್ಗೆ, ಒಬ್ಬ ವೃದ್ಧ ಸ್ತ್ರೀ ತನ್ನ ಟೆಲಿಫೋನ್ ಕರೆಯನ್ನು ಉತ್ತರಿಸಿದರು. ಒಂದು ಸಂಕ್ಷಿಪ್ತವಾದ, ವಿನಯಭರಿತ ಅಭಿವಂದನೆಯ ನಂತರ, ರಾತ್ರಿ ಸಮಯದಲ್ಲಿ ಜನರು ಬೀದಿಗಳಲ್ಲಿ ಸುರಕ್ಷಿತರಾಗಿ ನಡೆಯಸಾಧ್ಯವಿರುವ ಒಂದು ಸಮಯವು ಬರುವುದೆಂದು ನಿಮಗನಿಸುತ್ತದೋ ಎಂದು ಅವರಿಗೆ ಕೇಳಲಾಯಿತು. ಭವಿಷ್ಯತ್ತಿನಲ್ಲಿ ಶಾಂತಿಯು ಪುಷ್ಕಳವಾಗಿರುವುದೆಂದು ಅವರಿಗೆ ಆಶ್ವಾಸನೆ ನೀಡಲು ಶಾಸ್ತ್ರವಚನಗಳನ್ನು ಓದಿಹೇಳಲಾಯಿತು. (ಕೀರ್ತನೆ 37:10, 11; ದಾನಿಯೇಲ 2:44; ಮತ್ತಾಯ 6:9, 10) ನಾವು ದೇವರ ವಾಗ್ದಾನಗಳನ್ನು ಏಕೆ ನಂಬಬಲ್ಲೆವು ಎಂಬುದನ್ನು ಚರ್ಚಿಸಲಿಕ್ಕಾಗಿ ಮುಂದಿನ ವಾರ ಅದೇ ಸಮಯದಲ್ಲಿ ಒಂದು ಟೆಲಿಫೋನ್ ಸಂಭಾಷಣೆಗಾಗಿ ಅವರು ಒಪ್ಪಿಕೊಂಡರು. ಒಂದು ಬೈಬಲ್ ಅಭ್ಯಾಸ ಸಹಾಯಕದಿಂದ ಪ್ಯಾರಗ್ರಾಫ್ಗಳನ್ನು ಓದಿ, ಸೂಕ್ತವಾದ ಪ್ರಶ್ನೆಗಳನ್ನು ಕೇಳುತ್ತಾ, ಟೆಲಿಫೋನ್ ಮೂಲಕ ಒಂದು ತಿಂಗಳಿನ ವರೆಗೆ ಬೈಬಲನ್ನು ಅಭ್ಯಾಸಿಸಿದ ಅನಂತರ, ಪ್ರತಿ ವಾರ ಇಷ್ಟೊಂದು ವಿಭಿನ್ನ ಪ್ರಸಂಗಗಳನ್ನು ತಿಳಿಸಿದ್ದಕ್ಕಾಗಿ ಆ ರಾಜ್ಯ ಘೋಷಕನು ಆ ಸ್ತ್ರೀಯಿಂದ ಪ್ರಶಂಸೆಯನ್ನು ಗಿಟ್ಟಿಸಿಕೊಂಡನು. ಆ ಅಭ್ಯಾಸ ಪುಸ್ತಕವನ್ನು ವರ್ಣಿಸಿ, ಅವರಿಗೆ ಒಂದು ವೈಯಕ್ತಿಕ ಪ್ರತಿಯನ್ನು ನೀಡಲು ಅದು ಸಮಯವಾಗಿತ್ತು. ಆಗ, ಅವರಿಬ್ಬರೂ ವೈಯಕ್ತಿಕವಾಗಿ ಭೇಟಿಯಾಗಲು ಏರ್ಪಾಡುಗಳನ್ನು ಮಾಡಲಾಯಿತು. ಖಂಡಿತವಾಗಿಯೂ ಯೆಹೋವನ ಸಾಕ್ಷಿಗಳು ಜನರಿಗಾಗಿರುವ ತಮ್ಮ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ, ಮತ್ತು ಯೆಹೋವನು ಈ ಕ್ರೈಸ್ತ ಸುವಾರ್ತಿಕರೊಂದಿಗೆ ಇದ್ದಾನೆಂಬುದನ್ನು ಗ್ರಹಿಸುತ್ತಾ, ಜನರು ಪ್ರತಿಕ್ರಿಯಿಸುತ್ತಿದ್ದಾರೆ.—1 ಕೊರಿಂಥ 14:25ನ್ನು ಹೋಲಿಸಿ.
ಮುದ್ರಿತ ಪುಟದ ಮೂಲಕ: ಎಲ್ಲಿ ಹೆಚ್ಚಿನ ಜನರು ಫ್ರೆಂಚ್ ಭಾಷೆಯನ್ನಾಡುತ್ತಾರೊ ಆ ಕ್ವಿಬೆಕ್ ಪ್ರಾಂತದಲ್ಲಿನ ರಾಜ್ಯ ಘೋಷಕರು ಸಹ, ಎಲ್ಲಿ ಜನರು ಇದ್ದಾರೊ ಅಲ್ಲಿಗೆ ಹೋಗುತ್ತಿದ್ದಾರೆ. ಒಬ್ಬ ಸಂಚರಣ ಶುಶ್ರೂಷಕನು ಗಮನಿಸಿದ್ದು: “ಚರ್ಚಿನ ಕಠಿನವಾದ ವಿರೋಧದಿಂದಾಗಿ ಪ್ರಗತಿಯನ್ನು ಮಾಡಲು ಸಾಧ್ಯವಿಲ್ಲವೆಂದು ಸಹೋದರರಿಗೆ ಅನೇಕ ವರ್ಷಗಳಿಂದ ಅನಿಸುತ್ತಿತ್ತು. ಆದರೆ ಸಹೋದರರ ದಣಿಯದ ಕೆಲಸ ಮತ್ತು ಪುನರಾವೃತ್ತಿತ ಸಂದರ್ಶನಗಳಿಂದಾಗಿ, ಕಾರ್ಯತಃ ಅಜ್ಞಾತ ಪುಸ್ತಕವೂ, ಕೇವಲ ಅಲ್ಪಸಂಖ್ಯಾತರಿಂದ ಓದಲ್ಪಟ್ಟಿರುವ ಪುಸ್ತಕವೂ ಆಗಿದ್ದ ಬೈಬಲ್, ಈಗ ಹೆಚ್ಚಿನ ಮನೆಗಳಲ್ಲಿದೆ.”
ವೈದ್ಯಕೀಯ ಸಮುದಾಯವನ್ನು ಸೇರಿಸಿ, ಕ್ವಿಬೆಕ್ ಸಮಾಜದ ಎಲ್ಲ ಮಟ್ಟಗಳಿಂದಲೂ ಹೊಸ ಸೌವಾರ್ತಿಕರು ಬಂದಂತೆ, ರೋಮಾಂಚಕರ ಫಲಿತಾಂಶಗಳನ್ನು ಅನುಭವಿಸಲಾಗುತ್ತದೆ. ಇದು ಒಬ್ಬ ವೈದ್ಯನ ವಿಷಯದಲ್ಲಿ ಸತ್ಯವಾಗಿದೆ. ಸ್ವತಃ ಒಬ್ಬ ರಾಜ್ಯ ಘೋಷಕಿಯಾಗಿರುವ ಅವನ ಹೆಂಡತಿಯು, ಪದೇ ಪದೇ ಅವನೊಂದಿಗೆ ಬೈಬಲ್ ನಿರೀಕ್ಷೆಯ ಕುರಿತಾಗಿ ಚರ್ಚಿಸುತ್ತಿದ್ದಳು. ಒಬ್ಬ ಚುರುಕಾದ ಸಭಾ ಹಿರಿಯನು, ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೋಷರ್ ಅಭ್ಯಾಸಿಸಲ್ಪಡುತ್ತಿದ್ದ ಸಮಯದಲ್ಲಿ, ಸಭಾ ಕೂಟಕ್ಕೆ ಬರುವಂತೆ ಆ ವೈದ್ಯನನ್ನು ಆಮಂತ್ರಿಸಲು ಆರಂಭದ ಹೆಜ್ಜೆಯನ್ನು ತೆಗೆದುಕೊಂಡನು. ಅವನು ಬಂದು, ಭಾಗವಹಿಸಿದನು ಸಹ. ಚರ್ಚೆಗಳ ಗುಣಮಟ್ಟ ಮತ್ತು ಆತ್ಮಿಕ ಗಹನತೆಯಿಂದ ಪ್ರಭಾವಿಸಲ್ಪಟ್ಟು, ಅವನು ತನ್ನ ಸ್ವಂತ ವೈಯಕ್ತಿಕ ಬೈಬಲ್ ಅಭ್ಯಾಸವನ್ನು ಸ್ವೀಕರಿಸಿದನು. ಈಗ ಅವನು ಕೂಡ ಒಬ್ಬ ರಾಜ್ಯ ಘೋಷಕನಾಗಿದ್ದಾನೆ.
ಜನರನ್ನು ಬೈಬಲಿನ ಕಡೆಗೆ ಆಕರ್ಷಿಸುವುದರಲ್ಲಿ, ಪತ್ರಿಕೆಗಳ ಪರಿಣಾಮಕಾರಿ ಉಪಯೋಗವು ಒಂದು ಪ್ರಮುಖ ಪಾತ್ರವನ್ನು ವಹಿಸಿದೆ. ಯಾರಾದರೊಬ್ಬರನ್ನು ಸತ್ಯದ ಕಡೆಗೆ ಸೆಳೆಯಲು ಯಾವ ಲೇಖನವು ಉತ್ಪ್ರೇರಕವಾಗಿರುವುದೆಂಬುದು ಯಾರಿಗೂ ತಿಳಿದಿಲ್ಲ. ಒಬ್ಬ ರಾಜ್ಯ ಘೋಷಕಿಯು, ರಾಜ್ಯ ಸಂದೇಶದಲ್ಲಿ ಅನಾಸಕ್ತಳಾಗಿದ್ದರೂ, ಕೀಟ ಜಗತ್ತಿನಲ್ಲಿ ಆಸಕ್ತಳಾಗಿದ್ದ ಒಬ್ಬ ನೆರೆಯವಳಿಗೆ ಎಚ್ಚರ! ಪತ್ರಿಕೆಯ ಒಂದು ಸಂಚಿಕೆಯನ್ನು ನೀಡಿದಳು. “ನಿದ್ರೆರೋಗ—ಮೃತ್ಯುವಿನ ಚುಂಬನ” ಎಂಬ 1992, ನವೆಂಬರ್ 22ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಸಂಚಿಕೆಯಲ್ಲಿನ ಛಾಯಾಚಿತ್ರವು, ಅವಳ ಆಸಕ್ತಿಯನ್ನು ಕೆರಳಿಸಿತು. ಅವಳು ಓದಿದ ವಿಷಯದಿಂದ ಪ್ರಭಾವಿತಳಾಗಿ, ಹೆಚ್ಚಿನ ಪತ್ರಿಕೆಗಳಿಗಾಗಿ ಕೇಳಿಕೊಂಡಳು. ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು, ಮತ್ತು ಆರು ತಿಂಗಳುಗಳೊಳಗೆ, ಅವಳು ಇತರರಿಗೆ ಸಾಕ್ಷಿಕೊಡುತ್ತಿದ್ದಳು.
ಸಾರ್ವಜನಿಕ ಸ್ಥಳಗಳಲ್ಲಿ: ಕೆನಡ ದೇಶದ ಕಾನೂನು, ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ, ವಾಕ್ ಸ್ವಾತಂತ್ರ್ಯವನ್ನು ಅನುಮತಿಸುತ್ತದೆ. ಹಾಲಿಫ್ಯಾಕ್ಸ್ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ, ರಾಜ್ಯ ಘೋಷಕರು ವಿಮಾನ ಯಾನಗಳ ನಡುವೆ, ಪ್ರಯಾಣಿಕರನ್ನು ವಿವೇಚನೆಯಿಂದ ಸಮೀಪಿಸಿ, ಅವರನ್ನು ಸಂಭಾಷಣೆಯಲ್ಲಿ ಒಳಗೂಡಿಸುತ್ತಾರೆ. ಸಂಭಾಷಣೆಯನ್ನು ಬೈಬಲಿನ ಕಡೆಗೆ ನಡಿಸಲು ಸಮಯೋಚಿತ ಮಾರ್ಗದರ್ಶಕ ಪ್ರಶ್ನೆಗಳನ್ನು ಉಪಯೋಗಿಸಲಾಗುತ್ತದೆ. ಅವರು ಒಂದು ಪಾಕೆಟ್ ಸೈಸ್ ಬೈಬಲ್ ಮತ್ತು ಸಾಹಿತ್ಯವನ್ನು ಒಯ್ಯುವುದರಿಂದ, ಅವರು ಆತ್ಮಿಕ ಅಗತ್ಯಗಳಿಗೆ ಪ್ರತಿಕ್ರಿಯೆಯನ್ನು ತೋರಿಸಬಲ್ಲರು. ಈ ವಿಧದಲ್ಲಿ ರಾಜ್ಯ ಸಂದೇಶವನ್ನು ಕೇಳಿ, ದೂರದ ಸ್ಥಳಗಳಲ್ಲಿ ಚಿಗುರಲಿಕ್ಕಾಗಿ ಸತ್ಯದ ಬೀಜಗಳನ್ನು ಒಯ್ದಿರುವವರ ನಡುವೆ, ವಿದೇಶಗಳಿಂದ ಬಂದ ಶಸ್ತ್ರಚಿಕಿತ್ಸಕರು, ವಿಜ್ಞಾನಿಗಳು, ವಕೀಲರು, ವಿಮಾನ ಚಾಲಕರು, ವೈದಿಕರು, ಪೊಲೀಸರು, ಟ್ಯಾಕ್ಸಿ ಚಾಲಕರು, ಇಂಜಿನಿಯರರು, ಶಿಕ್ಷಕರು, ಮಿಲಿಟರಿ ಸಿಬಂದಿ, ಮತ್ತು ರಾಜಕಾರಣಿಗಳು ಇದ್ದಾರೆ.—ಕೊಲೊಸ್ಸೆ 1:6.
ಒಂದು ಮುಂಜಾನೆ, ವಿಮಾನ ನಿಲ್ದಾಣದಲ್ಲಿ, ಒಬ್ಬ ಮನುಷ್ಯನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಸ್ವೀಕರಿಸಿದನು. ಅನಂತರ, ಅವನು ಒಂದು ಶಾಂತವಾದ, ಮೆಲ್ಲನೆಯ ಸ್ವರದಲ್ಲಿ ಹೇಳಿದ್ದು: “ಅಯ್ಯೋ, ಯೆಹೋವನ ಸಾಕ್ಷಿಗಳೊ!” ಅಂತಹ ಪ್ರತಿಕ್ರಿಯೆಯೇಕೆ? ಆ ಮನುಷ್ಯನು ಒಬ್ಬ ಧರ್ಮನಿಷ್ಠ ಮುಸಲ್ಮಾನನಾಗಿದ್ದು, ವಿಮಾನ ನಿಲ್ದಾಣದಲ್ಲಿದ್ದ ಒಂದು ಆರಾಧನಾಸ್ಥಳದಲ್ಲಿ ಈಗಷ್ಟೇ ಪ್ರಾರ್ಥಿಸಿ ಬಂದಿದ್ದನು. ತನಗೆ ವಿವೇಕ, ಒಳನೋಟ, ಮತ್ತು ಸತ್ಯವನ್ನು ತೋರಿಸುವಂತೆ ಅವನು ದೇವರೊಂದಿಗೆ ಬೇಡಿದ್ದನು. ಅವನ ಪ್ರಾರ್ಥನೆಗೆ, ಯೆಹೋವನ ಸಾಕ್ಷಿಗಳು ತತ್ಕ್ಷಣದ ಉತ್ತರವಾಗಿದ್ದರೆಂಬ ವಿಚಾರವೇ ಅವನನ್ನು ಅಚ್ಚರಿಗೊಳಿಸಿತು.
ಖಂಡಿತವಾಗಿಯೂ, ಕೆನಡದಲ್ಲಿರುವ ಧೀರ ರಾಜ್ಯ ಘೋಷಕರು, ರಾಜ್ಯದ ಅಮೂಲ್ಯ ಸಂದೇಶವನ್ನು ಸಾದರಪಡಿಸುವುದರಲ್ಲಿ ಯಾವುದೇ ವಿಷಯವು ತಮ್ಮನ್ನು ತಡೆಯುವಂತೆ ಬಿಡುವುದಿಲ್ಲ. ವಿದೇಶಿ ಭಾಷೆಗಳು, ಏರುಪೇರಾದ ಮಣ್ಣಿನ ರಸ್ತೆಗಳು, ದೂರದಲ್ಲಿರುವ ಸಮುದಾಯಗಳು, ಇಲ್ಲವೇ ಭಾರಿ ಭದ್ರತೆಯುಳ್ಳ ನಗರದ ಅಪಾರ್ಟ್ಮೆಂಟ್ ಕಟ್ಟಡಗಳು ತಮ್ಮನ್ನು ನಿಗ್ರಹಿಸುವಂತೆ ಅವರು ಅನುಮತಿಸುವುದಿಲ್ಲ. ಪ್ರಾಮಾಣಿಕ ಹೃದಯದ ಸತ್ಯಾನ್ವೇಷಕರಿಗೆ ದೇವರ ಜೀವದಾಯಕ ಸಂದೇಶವನ್ನು ರವಾನಿಸಲು ಅವರು ದೃಢನಿಶ್ಚಯವುಳ್ಳವರಾಗಿದ್ದಾರೆ. ತಮ್ಮ ಜೊತೆ ಕೆಲಸಗಾರರ ಲೋಕವ್ಯಾಪಕವಾದ ಸಹೋದರತ್ವದೊಂದಿಗೆ, ‘ಹೊರಟುಹೋಗಿ, ಶಿಷ್ಯರನ್ನಾಗಿ ಮಾಡಿರಿ’ ಎಂಬ ಯೇಸುವಿನ ಆಜ್ಞೆಗೆ ಅವರು ನಿಸ್ವಾರ್ಥದಿಂದ ವಿಧೇಯರಾಗುತ್ತಾರೆ.—ಮತ್ತಾಯ 28:19.
[ಪಾದಟಿಪ್ಪಣಿ]
a ಪೋನಿ ಎಕ್ಸ್ಪ್ರೆಸ್, 1860ರಿಂದ 1861ರ ವರೆಗಿನ 18 ತಿಂಗಳುಗಳ ಸಂಕ್ಷಿಪ್ತವಾದ ಅವಧಿಯಲ್ಲಿ, ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದ ಟಪಾಲು ವ್ಯವಸ್ಥೆಯಾಗಿತ್ತು.
[ಪುಟ 27 ರಲ್ಲಿರುವ ಚೌಕ]
ಯಶಸ್ವಿ ರಾಜ್ಯ ಘೋಷಕರು ಟೆಲಿಫೋನನ್ನು ಉಪಯೋಗಿಸುತ್ತಾರೆ
ಕೆಲವರು ಹೀಗೆ ಹೇಳಿದ್ದಾರೆ: “ಹಲೋ. ನನ್ನ ಹೆಸರು [ಹೆಸರನ್ನು ಹೇಳಿರಿ]. ಶಾಂತಿಯು ಹೇಗೆ ಸಾಧಿಸಲ್ಪಡಸಾಧ್ಯವಿದೆ ಎಂಬುದರ ಕುರಿತಾಗಿ ನಾನು ನಿಮ್ಮ ಕಟ್ಟಡದಲ್ಲಿರುವ ಜನರೊಂದಿಗೆ ಸಂಕ್ಷಿಪ್ತವಾಗಿ ಮಾತಾಡುತ್ತಿದ್ದೇನೆ. ಎಂದಾದರೂ ಲೋಕವ್ಯಾಪಕವಾಗಿ ಶಾಂತಿಯು ಇರುವುದೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಚಿಂತೆಮಾಡಬೇಡಿ, ನಾನು ಒಂದು ಸಮೀಕ್ಷೆಯನ್ನು ನಡಿಸುತ್ತಿಲ್ಲ ಅಥವಾ ಏನನ್ನೂ ಮಾರಾಟಮಾಡುತ್ತಿಲ್ಲ. ಅದಕ್ಕೆ ಬದಲಾಗಿ, ದೇವರು ವಾಸ್ತವದಲ್ಲಿ ಶಾಂತಿಯನ್ನು ತರಬಲ್ಲನೆಂಬ ವಿಚಾರವನ್ನು ನಾನು ಪವಿತ್ರ ಶಾಸ್ತ್ರಗಳಿಂದ ಹಂಚಿಕೊಳ್ಳುತ್ತಿದ್ದೇನೆ.” ಅನಂತರ ಸಂಭಾಷಣೆಯು ಒಂದು ಸಂಕ್ಷಿಪ್ತ ಶಾಸ್ತ್ರೀಯ ಚರ್ಚೆಯೊಂದಿಗೆ ಮುಂದುವರಿಯಬಹುದು.
ಇತರರು ಹೀಗೆ ಹೇಳಿದ್ದಾರೆ: “ನಮಸ್ಕಾರ. ನನ್ನ ಹೆಸರು [ಹೆಸರನ್ನು ಹೇಳಿರಿ]. ನಾನು ನಿಮ್ಮ ಕ್ಷೇತ್ರದಲ್ಲಿರುವ ಒಬ್ಬ ಸ್ವಯಂ ಸೇವಕನಾಗಿದ್ದೇನೆ. ನಿಮ್ಮ ಕಟ್ಟಡದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಏರುತ್ತಿರುವ ಹಿಂಸಾಚಾರ ಮತ್ತು ಪಾತಕದ ನೋಟದಲ್ಲಿ ಅನೇಕರು ವೈಯಕ್ತಿಕ ಸುರಕ್ಷೆಯ ಕುರಿತು ಚಿಂತಿತರಾಗಿದ್ದಾರೆ. ಇದು ನಿಮಗೆ ಚಿಂತೆಯನ್ನು ಉಂಟುಮಾಡುವ ವಿಷಯವಾಗಿದೆಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಡೀ ಲೋಕದಲ್ಲಿರುವವರಿಗೆ ಸುರಕ್ಷೆಯ ಅನಿಸಿಕೆಯಾಗುವ ಒಂದು ಸಮಯ ಎಂದಾದರೂ ಇರುವುದೆಂದು ನಿಮಗನಿಸುತ್ತದೊ?” ಉತ್ತರಕ್ಕಾಗಿ ಅನುಮತಿಸಿರಿ, ಮತ್ತು ಒಂದು ಶಾಸ್ತ್ರೀಯ ಸಂದೇಶದೊಂದಿಗೆ ಸಂಭಾಷಣೆಯನ್ನು ಮುಂದುವರಿಸಿರಿ.