ನಂಬಿಕೆ ಮತ್ತು ನಿಮ್ಮ ಭವಿಷ್ಯತ್ತು
“ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ . . . ಆಗಿದೆ.”—ಇಬ್ರಿಯ 11:1.
1. ಹೆಚ್ಚಿನ ಜನರು ಯಾವ ವಿಧದ ಭವಿಷ್ಯತ್ತನ್ನು ಬಯಸುತ್ತಾರೆ?
ನಿಮಗೆ ಭವಿಷ್ಯತ್ತಿನಲ್ಲಿ ಆಸಕ್ತಿಯಿದೆಯೆ? ಅನೇಕರಿಗೆ ಆಸಕ್ತಿಯಿದೆ. ಅವರು ಸಮಾಧಾನದ, ಭಯರಹಿತವಾದ, ಸಂತೃಪ್ತಿಕರವಾದ ಜೀವನ ಪರಿಸ್ಥಿತಿಗಳು, ಉತ್ಪನ್ನದಾಯಕ ಮತ್ತು ಆನಂದದಾಯಕ ಕೆಲಸ, ಒಳ್ಳೆಯ ಆರೋಗ್ಯ ಹಾಗೂ ದೀರ್ಘವಾದ ಆಯುಸ್ಸಿನ ಒಂದು ಭವಿಷ್ಯತ್ತನ್ನು ನಿರೀಕ್ಷಿಸುತ್ತಾರೆ. ಇತಿಹಾಸದಲ್ಲಿನ ಪ್ರತಿಯೊಂದು ಸಂತತಿಯು ಇವೆಲ್ಲವನ್ನೂ ಬಯಸಿದೆಯೆಂಬುದು ನಿಸ್ಸಂದೇಹ. ಮತ್ತು ಇಂದು, ತೊಂದರೆಗಳಿಂದ ತುಂಬಿರುವ ಈ ಲೋಕದಲ್ಲಿ, ಅಂತಹ ಪರಿಸ್ಥಿತಿಗಳು ಹಿಂದೆಂದಿಗಿಂತಲೂ ಹೆಚ್ಚು ಅಪೇಕ್ಷಣೀಯವಾಗಿವೆ.
2. ಭವಿಷ್ಯತ್ತಿನ ಕುರಿತಾಗಿ ಒಂದು ದೃಷ್ಟಿಕೋನವು ಒಬ್ಬ ರಾಜನೀತಿಜ್ಞನಿಂದ ಹೇಗೆ ವ್ಯಕ್ತಪಡಿಸಲ್ಪಟ್ಟಿತು?
2 ಮಾನವಕುಲವು 21ನೆಯ ಶತಮಾನದ ಕಡೆಗೆ ಮುನ್ನಡೆಯುತ್ತಿರುವಾಗ, ಭವಿಷ್ಯತ್ತು ಹೇಗಿರುವುದೆಂಬುದನ್ನು ನಿರ್ಧರಿಸಲು ಯಾವುದೇ ಮಾರ್ಗವಿದೆಯೆ? 200 ವರ್ಷಗಳ ಹಿಂದೆ, ಅಮೆರಿಕದ ರಾಜನೀತಿಜ್ಞರಾದ ಪ್ಯಾಟ್ರಿಕ್ ಹೆನ್ರಿ ಅವರಿಂದ ಒಂದು ಮಾರ್ಗವು ವ್ಯಕ್ತಪಡಿಸಲ್ಪಟ್ಟಿತು. ಅವರಂದದ್ದು: “ಭವಿಷ್ಯತ್ತಿನ ಕುರಿತು ಕಾಲಜ್ಞಾನ ಹೇಳುವ ಒಂದೇ ಒಂದು ಮಾರ್ಗವು, ಗತಕಾಲದ ಘಟನೆಗಳನ್ನು ಪುನರ್ವಿಮರ್ಶಿಸುವುದಾಗಿದೆ.” ಈ ನೋಟಕ್ಕನುಸಾರ, ಮಾನವ ಕುಟುಂಬದ ಭವಿಷ್ಯತ್ತನ್ನು, ಗತಕಾಲದಲ್ಲಿ ಮನುಷ್ಯನು ಏನು ಮಾಡಿದ್ದನೊ ಅದರಿಂದಾಗಿ ಒಂದು ಗಣನೀಯ ಮಟ್ಟದ ವರೆಗೆ ತಿಳಿದುಕೊಳ್ಳಲು ಸಾಧ್ಯವಿದೆ. ಅನೇಕರು ಆ ಅಭಿಪ್ರಾಯವನ್ನು ಸಮ್ಮತಿಸುತ್ತಾರೆ.
ಗತಕಾಲವು ಹೇಗಿತ್ತು?
3. ಭವಿಷ್ಯತ್ತಿಗಾಗಿರುವ ಪ್ರತೀಕ್ಷೆಗಳ ವಿಷಯದಲ್ಲಿ ಇತಿಹಾಸದ ದಾಖಲೆಯು ಏನನ್ನು ಸೂಚಿಸುತ್ತದೆ?
3 ಭವಿಷ್ಯತ್ತು ಗತಕಾಲದ ಪುನರಾವರ್ತನೆಯಾಗಿರುವಲ್ಲಿ, ನೀವದನ್ನು ಪ್ರೋತ್ಸಾಹನೀಯವಾದದ್ದಾಗಿ ಕಂಡುಕೊಳ್ಳುತ್ತೀರೊ? ಅನೇಕ ಯುಗಗಳಿಂದಲೂ ಹಿಂದಣ ಸಂತತಿಗಳಿಗೆ ಭವಿಷ್ಯತ್ತು ಹೆಚ್ಚು ಉತ್ತಮವಾಗುತ್ತಾ ಹೋಯಿತೊ? ನಿಜವಾಗಿಯೂ ಇಲ್ಲ. ಸಾವಿರಾರು ವರ್ಷಗಳಿಂದ ಜನರಿಗೆ ನಿರೀಕ್ಷೆಗಳಿದ್ದವಾದರೂ, ಮತ್ತು ಕೆಲವು ಸ್ಥಳಗಳಲ್ಲಿ ಭೌತಿಕ ಪ್ರಗತಿಯಿತ್ತಾದರೂ, ಇತಿಹಾಸವು ದಬ್ಬಾಳಿಕೆ, ಪಾತಕ, ಹಿಂಸಾಚಾರ, ಯುದ್ಧ ಮತ್ತು ಬಡತನದಿಂದ ತುಂಬಿದೆ. ಈ ಲೋಕವು ಒಂದರ ಮೇಲೆ ಒಂದಾಗಿ ಬಂದಿರುವ ವಿಪತ್ತುಗಳನ್ನು ಅನುಭವಿಸಿದೆ. ಈ ವಿಪತ್ತುಗಳು ಮುಖ್ಯವಾಗಿ ಅಸಂತೃಪ್ತಿಕರ ಮಾನವ ಆಳ್ವಿಕೆಯಿಂದ ತರಲ್ಪಟ್ಟಿವೆ. ಬೈಬಲು ನಿಷ್ಕೃಷ್ಟವಾಗಿ ತಿಳಿಸುವುದು: “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿ”ದ್ದಾನೆ.—ಪ್ರಸಂಗಿ 8:9.
4, 5. (ಎ) ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಜನರು ಆಶಾಭರಿತರಾಗಿದ್ದದ್ದೇಕೆ? (ಬಿ) ಭವಿಷ್ಯತ್ತಿಗಾಗಿರುವ ಅವರ ನಿರೀಕ್ಷೆಗಳಿಗೇನಾಯಿತು?
4 ವಾಸ್ತವಾಂಶವೇನೆಂದರೆ, ಮಾನವಕುಲದ ವಿಪತ್ಕಾರಕ ಇತಿಹಾಸವು ತಾನೇ ಪುನರಾವರ್ತನೆಗೊಳ್ಳುತ್ತಾ ಇರುತ್ತದೆ—ಆದರೆ ಇನ್ನೂ ಹೆಚ್ಚು ವ್ಯಾಪಕವಾಗಿ, ಹಾಗೂ ಹೆಚ್ಚು ಹಾನಿಕರವಾದ ಪ್ರಮಾಣದಲ್ಲಿ. ಈ 20ನೆಯ ಶತಮಾನವು ಅದಕ್ಕೆ ರುಜುವಾತಾಗಿದೆ. ಮಾನವಕುಲವು ಗತಕಾಲದ ತಪ್ಪುಗಳಿಂದ ಪಾಠ ಕಲಿತುಕೊಂಡು, ಅವುಗಳನ್ನು ತಪ್ಪಿಸಿದೆಯೊ? ಈ ಶತಮಾನದ ಆರಂಭದಲ್ಲಿ, ತುಲನಾತ್ಮಕವಾಗಿ ಶಾಂತಿಯ ದೀರ್ಘ ಅವಧಿಯಿದ್ದುದರಿಂದ ಮತ್ತು ಉದ್ಯಮ, ವಿಜ್ಞಾನ ಹಾಗೂ ಶಿಕ್ಷಣದಲ್ಲಿನ ಅಭಿವೃದ್ಧಿಗಳಿಂದಾಗಿ ಅನೇಕರು ಒಂದು ಉತ್ತಮ ಭವಿಷ್ಯತ್ತಿನಲ್ಲಿ ನಂಬಿಕೆಯಿಟ್ಟರು. 1900ಗಳ ಆರಂಭದಲ್ಲಿ, “ಜನರು ತೀರ ಸುಸಂಸ್ಕೃತರು” ಆಗಿದ್ದುದರಿಂದ ಇನ್ನು ಮುಂದೆ ಯುದ್ಧಗಳು ನಡೆಯಲು ಸಾಧ್ಯವಿಲ್ಲವೆಂದು ನಂಬಲಾಗುತ್ತಿತ್ತೆಂದು, ವಿಶ್ವವಿದ್ಯಾನಿಲಯದ ಪ್ರೊಫೆಸರನೊಬ್ಬನು ಹೇಳಿದನು. ಹಿಂದೆ ಆ ಸಮಯದಲ್ಲಿ ಜನರಿಗಿದ್ದ ದೃಷ್ಟಿಕೋನದ ಕುರಿತಾಗಿ ಮಾಜಿ ಬ್ರಿಟಿಷ್ ಪ್ರಧಾನಮಂತ್ರಿಯೊಬ್ಬರು ಹೇಳಿದ್ದು: “ಎಲ್ಲವೂ ಹೆಚ್ಚೆಚ್ಚು ಉತ್ತಮವಾಗುವುದು. ನಾನು ಹುಟ್ಟಿದ್ದು ಇಂತಹ ಒಂದು ಲೋಕದಲ್ಲಿ.” ಆದರೆ ತದನಂತರ ಅವರು ಹೇಳಿದ್ದು: “ಹಠಾತ್ತಾಗಿ, ಅನಿರೀಕ್ಷಿತವಾಗಿ, 1914ರಲ್ಲಿನ ಒಂದು ಬೆಳಗ್ಗೆ ಇಡೀ ವಿಷಯವು ಅಂತ್ಯಗೊಂಡಿತು.”
5 ಹೆಚ್ಚು ಉತ್ತಮವಾದ ಭವಿಷ್ಯತ್ತಿನಲ್ಲಿರುವ ನಂಬಿಕೆಯು ಆ ಸಮಯದಲ್ಲಿ ಪ್ರಚಲಿತವಾಗಿತ್ತಾದರೂ, ಹೊಸ ಶತಮಾನವು ಇನ್ನೇನು ಆರಂಭವಾಗಿದೆಯೆನ್ನುವಷ್ಟರಲ್ಲಿ, ಲೋಕವು ಅತ್ಯಂತ ಕೆಟ್ಟದಾದ ಮನುಷ್ಯ ನಿರ್ಮಿತ ಮಹಾ ದುರಂತವಾದ Iನೆಯ ಲೋಕ ಯುದ್ಧದಲ್ಲಿ ಮುಳುಗಿಹೋಯಿತು. ಅದರ ಸ್ವರೂಪದ ಒಂದು ಉದಾಹರಣೆಯಾಗಿ, 1916ರಲ್ಲಿ ಫ್ರಾನ್ಸ್ನಲ್ಲಿರುವ ಸಾಮ್ ನದಿಯ ಬಳಿ ಬ್ರಿಟಿಷ್ ಪಡೆಗಳು ಜರ್ಮನ್ ಯೋಧಪಂಕ್ತಿಗಳ ಮೇಲೆ ದಾಳಿಮಾಡಿದ ಒಂದು ಕದನದಲ್ಲಿ ಏನು ಸಂಭವಿಸಿತೊ ಅದನ್ನು ಪರಿಗಣಿಸಿರಿ. ಕೆಲವೇ ತಾಸುಗಳಲ್ಲಿ, ಬ್ರಿಟಿಷರು 20,000 ಮಂದಿಯ ನಷ್ಟವನ್ನು ಅನುಭವಿಸಿದರು ಮತ್ತು ಜರ್ಮನ್ ಪಕ್ಷದಲ್ಲಿ ಅನೇಕರು ಕೊಲ್ಲಲ್ಪಟ್ಟರು. ನಾಲ್ಕು ವರ್ಷಗಳ ಹತ್ಯೆಯು, ಸುಮಾರು ಒಂದು ಕೋಟಿ ಸೈನಿಕರ ಮತ್ತು ಅನೇಕ ಅಯೋಧರ ಜೀವಗಳನ್ನು ಬಲಿತೆಗೆದುಕೊಂಡಿತು. ಫ್ರಾನ್ಸ್ನ ಜನಸಂಖ್ಯೆಯು ಸ್ವಲ್ಪ ಸಮಯಕ್ಕೆ ಇಳಿಮುಖವಾಯಿತು, ಏಕೆಂದರೆ ಅಷ್ಟೊಂದು ಪುರುಷರು ಸತ್ತಿದ್ದರು. ಆರ್ಥಿಕ ವ್ಯವಸ್ಥೆಗಳು ಹಾಳುಗೆಡವಲ್ಪಟ್ಟವು, ಇದರಿಂದಾಗಿ 1930ಗಳ ಲೋಕವ್ಯಾಪಕವಾದ ಮಹಾ ಆರ್ಥಿಕ ಕುಸಿತವು ಉಂಟಾಯಿತು. Iನೆಯ ಲೋಕ ಯುದ್ಧವು ಆರಂಭವಾದ ದಿನವೇ, ಲೋಕಕ್ಕೆ ಹುಚ್ಚು ಹಿಡಿದಿದ್ದ ದಿನವಾಗಿತ್ತು ಎಂದು ಕೆಲವರು ಹೇಳಿರುವುದು ಆಶ್ಚರ್ಯಕರ ಸಂಗತಿಯೇನಲ್ಲ!
6. ಒಂದನೆಯ ಲೋಕ ಯುದ್ಧದ ನಂತರ ಜೀವನವು ಉತ್ತಮಗೊಂಡಿತೊ?
6 ಆ ಸಂತತಿಯಿಂದ ನಿರೀಕ್ಷಿಸಲ್ಪಟ್ಟ ಭವಿಷ್ಯತ್ತು ಇದೇ ಆಗಿತ್ತೊ? ಇಲ್ಲ, ಖಂಡಿತವಾಗಿಯೂ ಇದಾಗಿರಲಿಲ್ಲ. ಅವರ ನಿರೀಕ್ಷೆಗಳು ನುಚ್ಚುನೂರಾದವು. ಆ ಯುದ್ಧವು ಹೆಚ್ಚು ಉತ್ತಮವಾದ ಯಾವುದೇ ಪರಿಸ್ಥಿತಿಗಳಿಗೆ ನಡಿಸಲಿಲ್ಲ. Iನೆಯ ಲೋಕ ಯುದ್ಧದ ನಂತರ ಕೇವಲ 21 ವರ್ಷಗಳ ಬಳಿಕ, ಅಥವಾ 1939ರಲ್ಲಿ, ಇನ್ನೂ ಹೆಚ್ಚು ವಿಪತ್ಕಾರಕ ಮಾನವ ನಿರ್ಮಿತ ಮಹಾದುರಂತವಾದ IIನೆಯ ಲೋಕ ಯುದ್ಧವು ಆರಂಭವಾಯಿತು. ಅದು ಸುಮಾರು ಐದು ಕೋಟಿ ಸ್ತ್ರೀಯರು, ಪುರುಷರು, ಮತ್ತು ಮಕ್ಕಳ ಜೀವಗಳನ್ನು ಬಲಿತೆಗೆದುಕೊಂಡಿತು. ಸಾಮೂಹಿಕ ಬಾಂಬ್ ದಾಳಿಗಳು ನಗರಗಳನ್ನು ಧೂಳೀಪಟಮಾಡಿದವು. Iನೇ ಲೋಕ ಯುದ್ಧದಲ್ಲಿ ಕೆಲವೇ ತಾಸುಗಳ ಒಂದು ಕದನದಲ್ಲಿ ಸುಮಾರು ಸಾವಿರಾರು ಸೈನಿಕರು ಕೊಲ್ಲಲ್ಪಟ್ಟರೂ, IIನೆಯ ಲೋಕ ಯುದ್ಧದಲ್ಲಿ, ಕೇವಲ ಎರಡು ಅಣು ಬಾಂಬ್ಗಳು, ಕೆಲವೇ ಸೆಕೆಂಡುಗಳಲ್ಲಿ 1,00,000ಕ್ಕಿಂತಲೂ ಹೆಚ್ಚು ಜನರನ್ನು ಕೊಂದುಹಾಕಿದವು. ನಾಸಿ ಕೂಟ ಶಿಬಿರಗಳಲ್ಲಿ ಲಕ್ಷಾಂತರ ಜನರ ವ್ಯವಸ್ಥಿತವಾದ ಕೊಲೆಯನ್ನು ಅನೇಕರು ಇದಕ್ಕಿಂತಲೂ ಹೆಚ್ಚು ಕೆಟ್ಟದ್ದೆಂದು ಪರಿಗಣಿಸುತ್ತಾರೆ.
7. ಈ ಇಡೀ ಶತಮಾನದ ನೈಜಸ್ಥಿತಿಯೇನಾಗಿದೆ?
7 ರಾಷ್ಟ್ರಗಳ ನಡುವೆ ನಡೆದ ಯುದ್ಧಗಳು, ಆಂತರಿಕ ಕಲಹಗಳು ಮತ್ತು ತಮ್ಮ ಸ್ವಂತ ನಾಗರಿಕರ ಮೇಲೆ ಸರಕಾರಗಳು ತಂದೊಡ್ಡಿರುವ ಮರಣಗಳನ್ನು ನಾವು ಸೇರಿಸುವುದಾದರೆ, ಈ ಶತಮಾನದಲ್ಲಿ ಕೊಲ್ಲಲ್ಪಟ್ಟವರ ಸಂಖ್ಯೆಯು ಸುಮಾರು 20 ಕೋಟಿಗಳಿಗೇರುವುದೆಂದು ಅನೇಕ ಮೂಲಗಳು ಹೇಳುತ್ತವೆ. ಆ ಸಂಖ್ಯೆಯು 36 ಕೋಟಿ ಎಂದೂ ಒಂದು ಮೂಲವು ಹೇಳುತ್ತದೆ. ಅದರ ಭೀಕರತೆಯನ್ನು ಊಹಿಸಿಕೊಳ್ಳಿರಿ—ವೇದನೆ, ಕಣ್ಣೀರು, ಸಂಕಟ, ನಶಿಸಿಹೋದ ಜೀವಗಳು! ಇದಕ್ಕೆ ಕೂಡಿಸಿ, ಸರಾಸರಿಯಾಗಿ, ಸುಮಾರು 40,000 ಜನರು—ಹೆಚ್ಚಾಗಿ ಮಕ್ಕಳು—ಬಡತನ ಸಂಬಂಧಿತ ಕಾರಣಗಳಿಂದ ಪ್ರತಿ ದಿನ ಸಾಯುತ್ತಾರೆ. ಆ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಶಿಶುಗಳು, ಪ್ರತಿ ದಿನ ಗರ್ಭಪಾತಗಳಿಂದಾಗಿ ಕೊಲ್ಲಲ್ಪಡುತ್ತವೆ. ಅಲ್ಲದೆ, ಸುಮಾರು 100 ಕೋಟಿ ಜನರು ಒಂದು ಸಾಮಾನ್ಯ ದಿನದ ಕೆಲಸವನ್ನು ಮಾಡಲಿಕ್ಕಾಗಿ ಅಗತ್ಯವಿರುವ ಆಹಾರವನ್ನು ಪಡೆದುಕೊಳ್ಳಲು ಸಾಧ್ಯವಾಗದಷ್ಟು ತೀರ ಬಡವರಾಗಿದ್ದಾರೆ. ಈ ಎಲ್ಲ ಪರಿಸ್ಥಿತಿಗಳು, ಬೈಬಲ್ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಂತೆ, ನಾವು ಈ ದುಷ್ಟ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳ”ಲ್ಲಿ ಜೀವಿಸುತ್ತಿದ್ದೇವೆಂಬುದರ ರುಜುವಾತಾಗಿವೆ.—2 ತಿಮೊಥೆಯ 3:1-5, 13; ಮತ್ತಾಯ 24:3-12; ಲೂಕ 21:10, 11; ಪ್ರಕಟನೆ 6:3-8.
ಯಾವುದೇ ಮಾನವ ಪರಿಹಾರಗಳಿಲ್ಲ
8. ಲೋಕದ ಸಮಸ್ಯೆಗಳನ್ನು ಮಾನವ ಮುಖಂಡರು ಏಕೆ ಬಗೆಹರಿಸಲಾರರು?
8 ಈ 20ನೆಯ ಶತಮಾನವು ತನ್ನ ಅಂತ್ಯವನ್ನು ಸಮೀಪಿಸುತ್ತಿರುವಾಗ, ನಾವು ಅದರ ಅನುಭವವನ್ನು, ಗತ ಶತಮಾನಗಳ ಅನುಭವಕ್ಕೆ ಕೂಡಿಸಸಾಧ್ಯವಿದೆ. ಮತ್ತು ಆ ಇತಿಹಾಸವು ಏನನ್ನು ಹೇಳುತ್ತದೆ? ಮಾನವ ಮುಖಂಡರು ಲೋಕದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಅವರು ಅವುಗಳನ್ನು ಈಗಲೂ ಬಗೆಹರಿಸುತ್ತಿಲ್ಲ, ಮತ್ತು ಭವಿಷ್ಯತ್ತಿನಲ್ಲಿಯೂ ಬಗೆಹರಿಸುವುದಿಲ್ಲ ಎಂದು ಅದು ನಮಗೆ ಹೇಳುತ್ತದೆ. ಅವರು ಎಷ್ಟೇ ಸದುದ್ದೇಶವುಳ್ಳವರಾಗಿರಲಿ, ನಾವು ಬಯಸುವಂತಹ ರೀತಿಯ ಭವಿಷ್ಯತ್ತನ್ನು ಒದಗಿಸುವುದು ಅವರ ಸಾಮರ್ಥ್ಯಕ್ಕೆ ನಿಲುಕದ್ದಾಗಿದೆ. ಮತ್ತು ಅಧಿಕಾರದಲ್ಲಿರುವ ಕೆಲವರು ಅಷ್ಟು ಸದುದ್ದೇಶವುಳ್ಳವರಾಗಿರುವುದಿಲ್ಲ; ಅವರು ಇತರರ ಒಳಿತಿಗಾಗಿ ಅಲ್ಲ, ಬದಲಾಗಿ ತಮ್ಮ ಸ್ವಂತ ಸ್ವಾರ್ಥಪರ ಹಾಗೂ ಭೌತಿಕ ಉದ್ದೇಶಗಳಿಗಾಗಿ ಅಧಿಕಾರ ಮತ್ತು ಸ್ಥಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.
9. ಮಾನವ ಸಮಸ್ಯೆಗಳಿಗೆ ವಿಜ್ಞಾನದ ಬಳಿ ಪರಿಹಾರಗಳಿವೆಯೆಂಬ ವಿಷಯವನ್ನು ಸಂದೇಹಿಸಲು ಕಾರಣವಿದೆ ಏಕೆ?
9 ವಿಜ್ಞಾನವು ಪರಿಹಾರಗಳನ್ನು ಒದಗಿಸಸಾಧ್ಯವೊ? ನಾವು ಗತಕಾಲವನ್ನು ಪರಿಗಣಿಸುವಲ್ಲಿ, ಇಲ್ಲವೆಂದು ಹೇಳಬಹುದು. ಸರಕಾರಿ ವಿಜ್ಞಾನಿಗಳು, ತೀರ ವಿನಾಶಕರವಾಗಿರುವ ರಾಸಾಯನಿಕ, ಜೈವಿಕ, ಹಾಗೂ ಇತರ ರೀತಿಗಳ ಶಸ್ತ್ರಾಸ್ತ್ರಗಳನ್ನು ತಯಾರಿಸುವುದರಲ್ಲಿ ಬಹಳಷ್ಟು ಮೊತ್ತಗಳ ಹಣ, ಸಮಯ ಮತ್ತು ಪ್ರಯತ್ನವನ್ನು ವ್ಯಯಿಸಿದ್ದಾರೆ. ಅತಿ ಬಡ ರಾಷ್ಟ್ರಗಳನ್ನು ಕೂಡಿಸಿ, ರಾಷ್ಟ್ರಗಳು ಪ್ರತಿ ವರ್ಷ ಯುದ್ಧಾಸ್ತ್ರಗಳಿಗಾಗಿ 70,000 ಕೋಟಿಗಿಂತಲೂ ಹೆಚ್ಚು ಡಾಲರುಗಳನ್ನು ಖರ್ಚುಮಾಡುತ್ತವೆ! ಅಲ್ಲದೆ, ಗಾಳಿ, ಭೂಮಿ, ನೀರು ಮತ್ತು ಆಹಾರದ ಮಾಲಿನ್ಯಕ್ಕೆ ನೆರವನ್ನು ನೀಡಿರುವ ರಾಸಾಯನಿಕ ವಸ್ತುಗಳಿಗಾಗಿ, ಆಂಶಿಕವಾಗಿ ‘ವೈಜ್ಞಾನಿಕ ಪ್ರಗತಿ’ಯೇ ಕಾರಣವಾಗಿದೆ.
10. ಶಿಕ್ಷಣವು ಕೂಡ ಒಂದು ಉತ್ತಮ ಭವಿಷ್ಯತ್ತನ್ನು ಖಚಿತಪಡಿಸಲಾರದೇಕೆ?
10 ಅತ್ಯುಚ್ಚ ನೈತಿಕ ಮಟ್ಟಗಳು, ಇತರರಿಗಾಗಿ ಪರಿಗಣನೆ, ಮತ್ತು ನೆರೆಯವರ ಪ್ರೀತಿಯನ್ನು ಕಲಿಸುವ ಮೂಲಕ ಲೋಕದ ಶೈಕ್ಷಣಿಕ ಸಂಸ್ಥೆಗಳು ಹೆಚ್ಚು ಉತ್ತಮ ಭವಿಷ್ಯತ್ತನ್ನು ಕಟ್ಟಲು ಸಹಾಯಮಾಡುವವೆಂದು ನಾವು ನಿರೀಕ್ಷಿಸಬಲ್ಲೆವೊ? ಇಲ್ಲ. ಇದಕ್ಕೆ ಬದಲಾಗಿ ಅವು ಜೀವನೋಪಾಯಗಳ ಮೇಲೆ, ಹಣವನ್ನು ಸಂಪಾದಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ. ಅವು ಒಂದು ಸಹಕಾರದ ಮನೋಭಾವವನ್ನಲ್ಲ, ಸ್ಪರ್ಧಾತ್ಮಕ ಮನೋಭಾವವನ್ನು ಹುಟ್ಟಿಸುತ್ತವೆ; ಶಾಲೆಗಳೂ ನೈತಿಕತೆಯನ್ನು ಕಲಿಸುವುದಿಲ್ಲ. ಬದಲಾಗಿ, ಅವುಗಳಲ್ಲಿ ಅನೇಕ ಶಾಲೆಗಳು ಲೈಂಗಿಕ ಸ್ವಾತಂತ್ರ್ಯವನ್ನು ಅನುಮೋದಿಸುತ್ತವೆ. ಇದು ಹದಿಪ್ರಾಯದ ಗರ್ಭಾವಸ್ಥೆಗಳು ಮತ್ತು ರತಿರವಾನಿತ ರೋಗಗಳು ಹೆಚ್ಚು ವೃದ್ಧಿಯಾಗುವಂತೆ ಮಾಡಿದೆ.
11. ವ್ಯಾಪಾರ ಉದ್ಯಮಗಳ ದಾಖಲೆಯು, ಭವಿಷ್ಯತ್ತಿನ ಕುರಿತು ಸಂದೇಹವನ್ನು ಬೀರುತ್ತದೇಕೆ?
11 ಲೋಕದ ದೊಡ್ಡ ವ್ಯಾಪಾರ ಉದ್ಯಮಗಳು, ಕೇವಲ ಲಾಭಕ್ಕಲ್ಲ, ಬದಲಾಗಿ ನಿಜವಾದ ಪ್ರಯೋಜನಕ್ಕಾಗಿರುವ ಉತ್ಪನ್ನಗಳನ್ನು ಮಾಡುವ ಮೂಲಕ, ನಮ್ಮ ಭೂಗ್ರಹದ ಕಾಳಜಿವಹಿಸಿ, ಇತರರಿಗಾಗಿ ಪ್ರೀತಿಯನ್ನು ತೋರಿಸುವಂತೆ ಇದ್ದಕ್ಕಿದ್ದ ಹಾಗೆ ಪ್ರಚೋದಿಸಲ್ಪಡುವವೊ? ಅದು ಅಸಂಭವ. ಜನರ ಮನಸ್ಸುಗಳನ್ನು, ವಿಶೇಷವಾಗಿ ಎಳೆಯರ ಮನಸ್ಸುಗಳನ್ನು ಭ್ರಷ್ಟಗೊಳಿಸಲು ಸಹಾಯಮಾಡುವ, ಹಿಂಸಾಚಾರ ಹಾಗೂ ಅನೈತಿಕತೆಯಿಂದ ತುಂಬಿರುವ ಟೆಲಿವಿಷನ್ ಕಾರ್ಯಕ್ರಮಗಳನ್ನು ನಿರ್ಮಿಸುವುದನ್ನು ಅವರು ನಿಲ್ಲಿಸುವರೊ? ಇತ್ತೀಚಿನ ಗತಕಾಲವು ನಿಶ್ಚಯವಾಗಿಯೂ ಪ್ರೋತ್ಸಾಹನೀಯವಾಗಿಲ್ಲ, ಯಾಕಂದರೆ ಟಿವಿಯು ಅತ್ಯಧಿಕವಾಗಿ ಅನೈತಿಕತೆ ಮತ್ತು ಹಿಂಸಾಚಾರದ ಕೂಪವಾಗಿ ಪರಿಣಮಿಸಿದೆ.
12. ರೋಗ ಮತ್ತು ಮರಣದ ವಿಷಯದಲ್ಲಿ ಮಾನವನ ಸ್ಥಿತಿಯೇನಾಗಿದೆ?
12 ಇನ್ನೂ ಹೆಚ್ಚಾಗಿ, ವೈದ್ಯರು ಎಷ್ಟೇ ಪ್ರಾಮಾಣಿಕರಾಗಿರುವುದಾದರೂ, ಅವರು ಅನಾರೋಗ್ಯ ಮತ್ತು ಮರಣವನ್ನು ಜಯಿಸಲು ಸಮರ್ಥರಾಗಿಲ್ಲ. ದೃಷ್ಟಾಂತಕ್ಕಾಗಿ, Iನೆಯ ಲೋಕ ಯುದ್ಧದ ಅಂತ್ಯದಷ್ಟಕ್ಕೆ, ಅವರು ಸ್ಪ್ಯಾನಿಷ್ ಇನ್ಫ್ಲುಎನ್ಸಾ ರೋಗವನ್ನು ನಿಗ್ರಹಿಸಲು ಅಶಕ್ತರಾಗಿದ್ದರು. ಲೋಕವ್ಯಾಪಕವಾಗಿ ಅದು ಸುಮಾರು 2 ಕೋಟಿ ಜೀವಗಳನ್ನು ಬಲಿತೆಗೆದುಕೊಂಡಿತು. ಇಂದು, ಹೃದ್ರೋಗ, ಕ್ಯಾನ್ಸರ್, ಮತ್ತು ಇನ್ನಿತರ ಮಾರಕ ರೋಗಗಳು ವ್ಯಾಪಕವಾಗಿವೆ. ವೈದ್ಯಕೀಯ ಲೋಕವು ಏಡ್ಸ್ನ ಆಧುನಿಕ ರೋಗವನ್ನೂ ನಿಗ್ರಹಿಸಿಲ್ಲ. ವ್ಯತಿರಿಕ್ತವಾಗಿ, 1997ರ ನವೆಂಬರ್ನಲ್ಲಿ ಬಹಿರಂಗಪಡಿಸಲಾದ ಒಂದು ಯು.ಎನ್. ವರದಿಯು ತೀರ್ಮಾನಿಸಿದ್ದೇನೆಂದರೆ, ಏಡ್ಸ್ ರೋಗಾಣು ಹರಡುತ್ತಿರುವ ಪ್ರಮಾಣವು ಹಿಂದಿನ ಅಂದಾಜುಗಳಿಗಿಂತ ಇಮ್ಮಡಿಯಾಗಿದೆ. ಈಗಾಗಲೇ ಲಕ್ಷಾಂತರ ಜನರು ಅದರಿಂದಾಗಿ ಸತ್ತಿದ್ದಾರೆ. ಇತ್ತೀಚಿನ ವರ್ಷವೊಂದರಲ್ಲಿ, ಇನ್ನೊಂದು ಮೂವತ್ತು ಲಕ್ಷ ಮಂದಿ ಸೋಂಕಿತರಾದರು.
ಯೆಹೋವನ ಸಾಕ್ಷಿಗಳು ಭವಿಷ್ಯತ್ತನ್ನು ವೀಕ್ಷಿಸುವ ವಿಧ
13, 14. (ಎ) ಯೆಹೋವನ ಸಾಕ್ಷಿಗಳು ಭವಿಷ್ಯತ್ತನ್ನು ಹೇಗೆ ವೀಕ್ಷಿಸುತ್ತಾರೆ? (ಬಿ) ಮಾನವರು ಒಂದು ಉತ್ತಮ ಭವಿಷ್ಯತ್ತನ್ನು ತರಲಾರರೇಕೆ?
13 ಹಾಗಿದ್ದರೂ, ಮಾನವಕುಲಕ್ಕೆ ಒಂದು ಉಜ್ವಲವಾದ, ಅತಿ ಉತ್ತಮವಾದ ಭವಿಷ್ಯತ್ತಿದೆಯೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಆದರೆ ಆ ಉತ್ತಮ ಭವಿಷ್ಯತ್ತು ಮಾನವ ಪ್ರಯತ್ನಗಳಿಂದ ಬರುತ್ತದೆಂದು ಅವರು ನಿರೀಕ್ಷಿಸುವುದಿಲ್ಲ. ಬದಲಿಗೆ, ಅವರು ಸೃಷ್ಟಿಕರ್ತನಾದ ಯೆಹೋವ ದೇವರ ಕಡೆಗೆ ನೋಡುತ್ತಾರೆ. ಭವಿಷ್ಯತ್ತು ಹೇಗಿರುವುದೆಂದು ಆತನಿಗೆ ತಿಳಿದಿದೆ, ಮತ್ತು ಅದೆಷ್ಟು ಅದ್ಭುತಕರವಾಗಿರುವುದು! ಮಾನವರು ಅಂತಹ ಒಂದು ಭವಿಷ್ಯತ್ತನ್ನು ತರಲಾರರೆಂಬುದೂ ಆತನಿಗೆ ತಿಳಿದಿದೆ. ದೇವರು ಅವರನ್ನು ಸೃಷ್ಟಿಸಿರುವುದರಿಂದ, ಇನ್ನಾರಿಗಿಂತಲೂ ಆತನಿಗೇ ಅವರ ಪರಿಮಿತಿಗಳು ಹೆಚ್ಚು ಉತ್ತಮವಾಗಿ ತಿಳಿದಿವೆ. ದೈವಿಕ ಮಾರ್ಗದರ್ಶನವಿಲ್ಲದೆ ಯಶಸ್ವಿಕರವಾಗಿ ಆಳುವ ಸಾಮರ್ಥ್ಯದೊಂದಿಗೆ ತಾನು ಮಾನವರನ್ನು ಸೃಷ್ಟಿಸಲಿಲ್ಲವೆಂದು ತನ್ನ ವಾಕ್ಯದಲ್ಲಿ ಆತನು ನಮಗೆ ಸ್ಪಷ್ಟವಾಗಿ ಹೇಳುತ್ತಾನೆ. ತನ್ನಿಂದ ಸ್ವತಂತ್ರವಾಗಿರುವ ಮಾನವ ಆಳ್ವಿಕೆಗೆ ದೇವರ ದೀರ್ಘಕಾಲದ ಅನುಮತಿಯು, ಆ ಅಸಾಮರ್ಥ್ಯವನ್ನು ನಿಸ್ಸಂದೇಹವಾಗಿ ಪ್ರದರ್ಶಿಸಿದೆ. ಒಬ್ಬ ಲೇಖಕನು ಅಂಗೀಕರಿಸಿದ್ದು: “ಮನುಷ್ಯನ ಮನಸ್ಸು ಪರಮಾಧಿಕಾರದ ಎಲ್ಲ ಸಂಭವನೀಯ ಸಂಯೋಜನೆಗಳನ್ನು ಪ್ರಯತ್ನಿಸಿದೆ, ಆದರೆ ಅವು ವ್ಯರ್ಥವಾಗಿವೆ.”
14 ಯೆರೆಮೀಯ 10:23ರಲ್ಲಿ, ನಾವು ಪ್ರೇರಿತ ಪ್ರವಾದಿಯ ಮಾತುಗಳನ್ನು ಓದುತ್ತೇವೆ: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” ಮತ್ತೂ, ಕೀರ್ತನೆ 146:3 ತಿಳಿಸುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ. ಅವನು ಸಹಾಯಮಾಡಶಕ್ತನಲ್ಲ.” ವಾಸ್ತವದಲ್ಲಿ, ರೋಮಾಪುರ 5:12 ತೋರಿಸುವಂತೆ ನಾವು ಅಪರಿಪೂರ್ಣರಾಗಿ ಜನಿಸಿರುವುದರಿಂದ, ನಾವು ನಮ್ಮ ಮೇಲೆಯೇ ಭರವಸೆಯಿಡದಂತೆ ದೇವರ ವಾಕ್ಯವು ನಮಗೆ ಎಚ್ಚರಿಕೆಯನ್ನು ನೀಡುತ್ತದೆ. ಯೆರೆಮೀಯ 17:9 ಹೇಳುವುದು: “ಹೃದಯವು ಎಲ್ಲಕ್ಕಿಂತಲೂ ವಂಚಕ.” ಆದುದರಿಂದ ಜ್ಞಾನೋಕ್ತಿ 28:26 ಪ್ರಕಟಿಸುವುದು: “ತನ್ನಲ್ಲೇ ಭರವಸವಿಡುವವನು ಮೂಢನು; ಜ್ಞಾನ [“ವಿವೇಕ,” NW]ದಿಂದ ನಡೆಯುವವನು ಉದ್ಧಾರವನ್ನು ಪಡೆಯುವನು.”
15. ನಮ್ಮನ್ನು ಮಾರ್ಗದರ್ಶಿಸಲಿಕ್ಕಾಗಿ ಬೇಕಾಗಿರುವ ವಿವೇಕವನ್ನು ನಾವೆಲ್ಲಿ ಕಂಡುಕೊಳ್ಳಸಾಧ್ಯವಿದೆ?
15 ಈ ವಿವೇಕವನ್ನು ನಾವೆಲ್ಲಿ ಕಂಡುಕೊಳ್ಳಸಾಧ್ಯವಿದೆ? “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು. ಪರಿಶುದ್ಧನ ತಿಳುವಳಿಕೆಯೇ ವಿವೇಕವು.” (ಜ್ಞಾನೋಕ್ತಿ 9:10) ಈ ಭಯಂಕರ ಸಮಯಗಳಲ್ಲಿ ನಮ್ಮನ್ನು ಮಾರ್ಗದರ್ಶಿಸಬಲ್ಲ ವಿವೇಕವು ಕೇವಲ ಯೆಹೋವನ ಬಳಿಯಿದೆ. ಮತ್ತು ಆತನು ನಮ್ಮ ಮಾರ್ಗದರ್ಶನಕ್ಕಾಗಿ ಪ್ರೇರಿಸಿರುವ ಪವಿತ್ರ ಶಾಸ್ತ್ರಗಳ ಮೂಲಕ ತನ್ನ ವಿವೇಕವನ್ನು ನಮಗೆ ಲಭ್ಯಗೊಳಿಸಿದ್ದಾನೆ.—ಜ್ಞಾನೋಕ್ತಿ 2:1-9; 3:1-6; 2 ತಿಮೊಥೆಯ 3:16, 17.
ಮಾನವ ಆಳ್ವಿಕೆಯ ಭವಿಷ್ಯತ್ತು
16. ಭವಿಷ್ಯತ್ತನ್ನು ಯಾರು ನಿರ್ಧರಿಸಿದ್ದಾರೆ?
16 ಹಾಗಾದರೆ, ಭವಿಷ್ಯತ್ತಿನ ಕುರಿತಾಗಿ ದೇವರ ವಾಕ್ಯವು ನಮಗೆ ಏನು ಹೇಳುತ್ತದೆ? ಮಾನವರು ಗತಕಾಲದಲ್ಲಿ ಏನನ್ನು ಮಾಡಿದ್ದಾರೊ ಅದನ್ನು ಭವಿಷ್ಯತ್ತು ತೀರ ಖಂಡಿತವಾಗಿ ಪ್ರತಿಫಲಿಸುವುದಿಲ್ಲವೆಂದು ಅದು ನಮಗೆ ಹೇಳುತ್ತದೆ. ಹಾಗಾದರೆ, ಪ್ಯಾಟ್ರಿಕ್ ಹೆನ್ರಿಯವರ ದೃಷ್ಟಿಕೋನವು ತಪ್ಪಾಗಿತ್ತು. ಈ ಭೂಮಿ ಮತ್ತು ಅದರಲ್ಲಿರುವ ಜನರ ಭವಿಷ್ಯತ್ತು, ಮಾನವರಿಂದಲ್ಲ, ಬದಲಾಗಿ ಯೆಹೋವ ದೇವರಿಂದ ನಿರ್ಧರಿಸಲ್ಪಡುವುದು. ಈ ಭೂಮಿಯ ಮೇಲೆ, ಈ ಲೋಕದ ಯಾವುದೇ ಮನುಷ್ಯರ ಅಥವಾ ರಾಷ್ಟ್ರಗಳ ಚಿತ್ತವಲ್ಲ, ಬದಲಾಗಿ ಆತನ ಚಿತ್ತವು ನೆರವೇರುವುದು. “ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ. ಯೆಹೋವನ ಸಂಕಲ್ಪವೇ ಈಡೇರುವದು.”—ಜ್ಞಾನೋಕ್ತಿ 19:21.
17, 18. ನಮ್ಮ ಸಮಯಕ್ಕಾಗಿ ದೇವರ ಚಿತ್ತವೇನಾಗಿದೆ?
17 ನಮ್ಮ ಸಮಯಕ್ಕಾಗಿ ದೇವರ ಚಿತ್ತವೇನಾಗಿದೆ? ಆತನು ಈ ಹಿಂಸಾತ್ಮಕ, ಅನೈತಿಕ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರಲು ಉದ್ದೇಶಿಸಿದ್ದಾನೆ. ಮನುಷ್ಯರ ಶತಮಾನಗಳುದ್ದದ ಕೆಟ್ಟ ಆಳಿಕೆಯು, ಬೇಗನೆ ದೇವರು ರಚಿಸಿರುವ ಆಳ್ವಿಕೆಯಿಂದ ಸ್ಥಾನಪಲ್ಲಟಗೊಳಿಸಲ್ಪಡುವುದು. ದಾನಿಯೇಲ 2:44ರಲ್ಲಿ ಕಂಡುಬರುವ ಪ್ರವಾದನೆಯು ತಿಳಿಸುವುದು: “[ಇಂದು ಅಸ್ತಿತ್ವದಲ್ಲಿರುವ] ಆ ರಾಜರ ಕಾಲದಲ್ಲಿ ಪರಲೋಕದೇವರು [ಸ್ವರ್ಗದಲ್ಲಿ] ಒಂದು ರಾಜ್ಯವನ್ನು ಸ್ಥಾಪಿಸುವನು. ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಆ ರಾಜ್ಯವು, ಪಿಶಾಚನಾದ ಸೈತಾನನ ದುಷ್ಟ ಪ್ರಭಾವವನ್ನೂ ತೆಗೆದುಹಾಕುವುದು. ಇದನ್ನು ಮನುಷ್ಯರು ಎಂದೂ ಮಾಡಸಾಧ್ಯವಿಲ್ಲ. ಈ ಲೋಕದ ಮೇಲಿನ ಅವನ ಆಳ್ವಿಕೆಯು ಸದಾಕಾಲಕ್ಕೂ ಅಂತ್ಯಗೊಳ್ಳುವುದು.—ರೋಮಾಪುರ 16:20; 2 ಕೊರಿಂಥ 4:4; 1 ಯೋಹಾನ 5:19.
18 ಆ ಸ್ವರ್ಗೀಯ ಸರಕಾರವು, ಮಾನವ ಆಳ್ವಿಕೆಯ ಎಲ್ಲ ರೂಪಗಳನ್ನು ಅಸ್ತಿತ್ವದಿಂದ ತೆಗೆದುಹಾಕುವುದು. ಈ ಭೂಮಿಯ ನಿರ್ವಹಣೆಯು ಜನರಿಗೆ ಬಿಡಲ್ಪಡುವುದಿಲ್ಲ. ಸ್ವರ್ಗದಲ್ಲಿ, ದೇವರ ರಾಜ್ಯದಲ್ಲಿ ಒಳಗೂಡುವವರು, ಮಾನವಕುಲದ ಒಳಿತಿಗಾಗಿ ಭೂಮಿಯ ಎಲ್ಲ ವ್ಯವಹಾರಗಳನ್ನು ನಿಯಂತ್ರಿಸುವರು. (ಪ್ರಕಟನೆ 5:10; 20:4-6) ಭೂಮಿಯ ಮೇಲೆ, ನಂಬಿಗಸ್ತ ಮಾನವರು ದೇವರ ರಾಜ್ಯದ ನಿರ್ದೇಶನಗಳೊಂದಿಗೆ ಸಹಕರಿಸುವರು. ಯೇಸು ಹೀಗೆ ಹೇಳಿದಾಗ, ಅವನು ಇದೇ ಆಳ್ವಿಕೆಗಾಗಿ ನಾವು ಪ್ರಾರ್ಥಿಸುವಂತೆ ನಮಗೆ ಕಲಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:10.
19, 20. (ಎ) ರಾಜ್ಯದೇರ್ಪಾಡನ್ನು ಬೈಬಲ್ ಹೇಗೆ ವರ್ಣಿಸುತ್ತದೆ? (ಬಿ) ಅದರ ಆಳ್ವಿಕೆಯು ಮಾನವಕುಲಕ್ಕಾಗಿ ಏನು ಮಾಡುವುದು?
19 ಯೆಹೋವನ ಸಾಕ್ಷಿಗಳು ದೇವರ ರಾಜ್ಯದಲ್ಲಿ ತಮ್ಮ ನಂಬಿಕೆಯನ್ನಿಡುತ್ತಾರೆ. ಇದು, ಅಪೊಸ್ತಲ ಪೇತ್ರನು ಯಾವುದರ ಕುರಿತಾಗಿ ಹೀಗೆ ಬರೆದನೊ ಆ “ನೂತನಾಕಾಶಮಂಡಲ”ವಾಗಿದೆ: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) “ನೂತನಭೂಮಂಡಲ”ವು, ನೂತನಾಕಾಶಮಂಡಲವಾಗಿರುವ ದೇವರ ರಾಜ್ಯದಿಂದ ಆಳಲ್ಪಡುವ ಹೊಸ ಮಾನವ ಸಮಾಜವಾಗಿದೆ. ಅಪೊಸ್ತಲ ಯೋಹಾನನಿಗೆ ಒಂದು ದರ್ಶನದಲ್ಲಿ ದೇವರು ಪ್ರಕಟಪಡಿಸಿದಂತಹ ಏರ್ಪಾಡು ಇದಾಗಿದೆ. ಅವನು ಬರೆದುದು: “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು; . . . [ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:1, 4.
20 ನೂತನಭೂಮಂಡಲವು, ನೀತಿಯ ಲೋಕವಾಗಿರುವುದೆಂಬುದನ್ನು ಗಮನಿಸಿರಿ. ಎಲ್ಲ ಅನೀತಿಯ ಘಟಕಾಂಶಗಳು, ದೇವರ ಒಂದು ಕ್ರಿಯೆಯಿಂದ—ಅರ್ಮಗೆದೋನ್ ಯುದ್ಧದಿಂದ ತೆಗೆದುಹಾಕಲ್ಪಡುವವು. (ಪ್ರಕಟನೆ 16:14, 16) ಜ್ಞಾನೋಕ್ತಿ 2:21, 22ರಲ್ಲಿರುವ ಪ್ರವಾದನೆಯು, ಅದನ್ನು ಈ ರೀತಿಯಲ್ಲಿ ತಿಳಿಸುತ್ತದೆ: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” ಮತ್ತು ಕೀರ್ತನೆ 37:9 ವಾಗ್ದಾನಿಸುವುದು: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.” ಅಂತಹ ಒಂದು ಹೊಸ ಲೋಕದಲ್ಲಿ ನೀವು ಜೀವಿಸಲು ಬಯಸುವುದಿಲ್ಲವೊ?
ದೇವರ ವಾಗ್ದಾನಗಳಲ್ಲಿ ನಂಬಿಕೆಯಿಡಿರಿ
21. ಯೆಹೋವನ ವಾಗ್ದಾನಗಳಲ್ಲಿ ನಾವು ಏಕೆ ನಂಬಿಕೆಯನ್ನಿಡಸಾಧ್ಯವಿದೆ?
21 ನಾವು ಯೆಹೋವನ ವಾಗ್ದಾನಗಳಲ್ಲಿ ನಂಬಿಕೆಯಿಡಸಾಧ್ಯವೊ? ತನ್ನ ಪ್ರವಾದಿಯ ಮೂಲಕ ಯೆಹೋವನು ಹೇಳುವ ಮಾತನ್ನು ಆಲಿಸಿರಿ: “ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಅಲ್ಲ; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ. ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು.” 11ನೆಯ ವಚನದ ಕೊನೆಯ ಭಾಗವು ಹೇಳುವುದು: “ನಾನು ನುಡಿದಿದ್ದೇನೆ, ಈಡೇರಿಸುವೆನು. ಆಲೋಚಿಸಿದ್ದೇನೆ, ಸಾಧಿಸುವೆನು.” (ಯೆಶಾಯ 46:9-11) ಹೌದು, ಆ ವಾಗ್ದಾನಗಳು ಈಗಾಗಲೇ ನೆರವೇರಿವೆಯೊ ಎಂಬಂತೆ ನಾವು ಅಷ್ಟು ನಿಶ್ಚಿತವಾಗಿ ಯೆಹೋವನಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ನಂಬಿಕೆಯಿಡಸಾಧ್ಯವಿದೆ. ಬೈಬಲ್ ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತದೆ: “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.”—ಇಬ್ರಿಯ 11:1.
22. ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸುವನೆಂದು ನಾವು ಏಕೆ ಭರವಸೆಯಿಂದಿರಸಾಧ್ಯವಿದೆ?
22 ದೀನ ಜನರು ಅಂತಹ ನಂಬಿಕೆಯನ್ನು ತೋರಿಸುತ್ತಾರೆ. ಏಕೆಂದರೆ ಆತನು ತನ್ನ ವಾಗ್ದಾನಗಳನ್ನು ನೆರವೇರಿಸುವನೆಂಬುದು ಅವರಿಗೆ ತಿಳಿದಿದೆ. ಉದಾಹರಣೆಗಾಗಿ, ಕೀರ್ತನೆ 37:29ರಲ್ಲಿ ನಾವು ಓದುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” ನಾವಿದನ್ನು ನಂಬಸಾಧ್ಯವಿದೆಯೋ? ಹೌದು, ಏಕೆಂದರೆ ಇಬ್ರಿಯ 6:19 ಹೇಳುವುದು: “ದೇವರು ಸುಳ್ಳಾಡಲಾರನು.” ದೇವರು ಭೂಮಿಯನ್ನು ದೀನ ಜನರಿಗೆ ಕೊಡಲು ಶಕ್ತನಾಗುವಂತೆ, ಭೂಮಿಯು ಆತನ ವಶದಲ್ಲಿದೆಯೊ? ಪ್ರಕಟನೆ 4:11 ಪ್ರಕಟಿಸುವುದು: “ಸಮಸ್ತವನ್ನು ಸೃಷ್ಟಿದಾತನು ನೀನೇ; ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ಹೀಗೆ, ಕೀರ್ತನೆ 24:1 ಹೇಳುವುದು: “ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು.” ನಿಜವಾಗಿಯೂ ಯೆಹೋವನು ಭೂಮಿಯನ್ನು ಸೃಷ್ಟಿಸಿದನು, ಅದರ ಒಡೆಯನಾಗಿದ್ದಾನೆ, ಮತ್ತು ತನ್ನಲ್ಲಿ ನಂಬಿಕೆಯಿಡುವವರಿಗೆ ಅದನ್ನು ಕೊಡುತ್ತಾನೆ. ಈ ವಿಷಯದಲ್ಲಿ ನಮ್ಮ ಭರವಸೆಯನ್ನು ಕಟ್ಟಲಿಕ್ಕಾಗಿ, ಗತಸಮಯಗಳಲ್ಲಿ ತನ್ನ ಜನರಿಗೆ ಮಾಡಿದಂತಹ ವಾಗ್ದಾನಗಳನ್ನು ಯೆಹೋವನು ನೆರವೇರಿಸಿದಂತಹ ವಿಧ ಮತ್ತು ಆತನು ಭವಿಷ್ಯತ್ತಿನಲ್ಲಿ ಅದನ್ನು ಮಾಡುವನೆಂದು ನಾವು ಸಂಪೂರ್ಣವಾಗಿ ಭರವಸೆಯಿಡಸಾಧ್ಯವಿರುವ ಕಾರಣವನ್ನು ಮುಂದಿನ ಲೇಖನವು ತೋರಿಸುವುದು.
ಪುನರ್ವಿಮರ್ಶೆಗಾಗಿ ಅಂಶಗಳು
◻ ಇತಿಹಾಸದಾದ್ಯಂತ ಜನರಿಗಿದ್ದ ನಿರೀಕ್ಷೆಗಳಿಗೇನಾಯಿತು?
◻ ಒಂದು ಉತ್ತಮ ಭವಿಷ್ಯತ್ತಿಗಾಗಿ ನಾವು ಮನುಷ್ಯರ ಕಡೆಗೆ ನೋಡಬಾರದೇಕೆ?
◻ ಭವಿಷ್ಯತ್ತಿನ ಕುರಿತು ದೇವರ ಚಿತ್ತವೇನಾಗಿದೆ?
◻ ದೇವರು ತನ್ನ ವಾಗ್ದಾನಗಳನ್ನು ನೆರವೇರಿಸುವನೆಂದು ನಾವು ಏಕೆ ಭರವಸೆಯಿಂದಿದ್ದೇವೆ?
[ಪುಟ 10 ರಲ್ಲಿರುವ ಚಿತ್ರ]
ಬೈಬಲು ನಿಷ್ಕೃಷ್ಟವಾಗಿ ತಿಳಿಸುವುದು: “ಮನುಷ್ಯನು . . . ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” —ಯೆರೆಮೀಯ 10:23
[ಕೃಪೆ]
ಬಾಂಬ್: U.S. National Archives photo; ಹಸಿದು ಕಂಗಾಲಾಗಿರುವ ಮಕ್ಕಳು: WHO/OXFAM; ನಿರಾಶ್ರಿತರು: UN PHOTO 186763/J. Isaac; ಮುಸ್ಸೊಲಿನಿ ಮತ್ತು ಹಿಟ್ಲರ್: U.S. National Archives photo